ಮನೆಯ ಮುಂದಿನ ತುಳಸಿಯ ಪೂಜೆ ಮಾಡುವವರ್ಯಾರು!

ಮನೆಯ ಮುಂದಿನ ತುಳಸಿಯ ಪೂಜೆ ಮಾಡುವವರ್ಯಾರು!

[ಓದುವ ಮುನ್ನ: ನಾನಿಲ್ಲಿ ಹೇಳ ಹೊರಟಿದ್ದು ಬೆಂಗಳೂರಿನಂತ ನಗರ ಪ್ರದೇಶಗಳಲ್ಲಿರುವ, ಮನೆ ಮನ ಬದಲಾಯಿಸಿದಂತೆ ಬದಲಾಯಿಸುವ ಅಪಾರ್ಟಮೆಂಟ್ ತುಳಸಿಯ ಬಗ್ಗೆ ಅಲ್ಲ. ಶುದ್ಧ ಸಾಂಪ್ರಾದಾಯಿಕ ಹಿಂದೂ ಕುಟುಂಬಗಳ ಮನೆಯ ಮುಂದಿನ ತುಳಸಿಯ ಬಗ್ಗೆ.]

 

ಅದೊಂದು ಅಂಕೋಲಾ ತಾಲೋಖಿನ ಪುಟ್ಟ ಹಳ್ಳಿ. ಆ ಹಳ್ಳಿಯ ಹ್ರದಯ ಭಾಗದಲ್ಲೊಂದು ಮಧ್ಯಮ ಗಾತ್ರದ ಹಳೆಯ ಹಂಚಿನ ಮನೆ. ಮನೆಯ ಜಗುಲಿಯ ಎದುರಿಗೆ ಒಂದು ಚಿಕ್ಕ ತುಳಸಿಯ ಮನೆ. ಮಧ್ಯಮ ವರ್ಗದ ಸಾಂಪ್ರಾದಾಯಿಕ ಹಿಂದೂ ಕುಟುಂಬವಾದ್ದರಿಂದ, ತುಳಸಿಗೆ ದಿನಾ ಎರಡು ಬಾರಿ, ಮನೆಯ ಯಜಮಾನನೋ, ಯಜಮಾನ ಇಲ್ಲದ ಪಕ್ಷದಲ್ಲಿ ಯಜಮಾನನ ಮಕ್ಕಳೋ ಪೂಜೆ ಮಾಡಬೇಕು. ನಿಷಿದ್ದ ದಿನಗಳಲ್ಲಿ ಅಥವಾ ಮನೆಯಲ್ಲಿ ಯಾರು ಇರದ ದಿನಗಳಲ್ಲಿ, ಪಕ್ಕದ ಮನೆಯ ಚಿಕ್ಕ ಹುಡುಗರೋ ಅಥವಾ ಊರ ಪೂಜಾರಿಯ ಮಕ್ಕಳೋ ಪೂಜೆ ಮಾಡುವುದು ವಾಡಿಕೆ. ಅದು ಅಪರೂಪಕ್ಕೊಮ್ಮೆ ಯಾವಾಗಲೋ ನಡೆಯುತಿತ್ತು. ಆದರೆ ಇಂದು ಆ ಮನೆಯ ಪರಿಸ್ಠಿತಿಯೇ ಬೇರೆ. ಮನೆಯ ಯಜಮಾನ ದಿವಂಗತನಾಗಿ ಆಗಲೇ ಮೂರು-ನಾಲ್ಕು ವರ್ಷಗಳೇ ಕಳೆದಿದೆ. ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬ ಆಗಲೇ ದೂರದ ಊರಿನಲ್ಲಿ ಕೆಲಸ ಮಾಡುತ್ತಿದ್ದು ವರ್ಷಕ್ಕೆ ಮೂರು ನಾಲ್ಕು ಬಾರಿ ಮನೆಗೆ ಬಂದು ಎರಡು ಮೂರು ದಿನ ಇದ್ದು ಹೋಗುತ್ತಿದ್ದ. ಕಿರೀಯ ಮಗ ಊರಿನ ಸಮೀಪದಲ್ಲಿ ಇದ್ದುದರಿಂದ ದಿನಾ ಬೆಳಿಗ್ಗೆ ತುಳಸಿಯ ಪೂಜೆ ಮಾಡಿ ಕೆಲಸಕ್ಕೆ ಹೋಗುತಿದ್ದ. ಈಗ ಆತನಿಗು ದೂರದ ಊರಿಗೆ ವರ್ಗವಾಗಿತ್ತು. ನಾಳೆ ಹೊರಡಬೇಕು, ಆದರೆ ನಾಳೆಯಿಂದ ಮನೆಯ ಮುಂದಿರುವ ತುಳಸಿಯ ಪೂಜೆ ಮಾಡುವವರ್ಯರು ಎನ್ನುವುದೇ ಪ್ರ್ಶಶ್ನೆ. ತಾತ್ಕಾಲಿಕವಾಗಿ ಪೂಜೆ ಮಾಡುವುದಕ್ಕೆ ಊರ ಪೂಜಾರಿಯ ಮಗ ಒಪ್ಪಿದ. ಆತನು ಸದ್ಯ ಕಾಲೇಜಿನಲ್ಲಿ ಓದುತಿದ್ದಾನೆ. ನಾಳೆ ಆತನು ಮುಂದಿನ ಉನ್ನತ ಶಿಕ್ಷಣಕ್ಕಾಗಿಯೋ ಅಥವಾ ನೌಕರಿಗಾಗಿಯೋ ಹೊರಗಡೆ ಹೋಗಬಹುದು. ಎಲ್ಲಿಯವರೆಗೆ ಆತ ಊರಿನಲ್ಲಿ ಇರುತ್ತಾನೋ ಅಲ್ಲಿಯವರೆಗೆ ತುಳಸಿಯ ಪೂಜೆ ಮಾಡಲು ಒಪ್ಪಿದ. ಅಂತೂ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದಂತಾಗಿ, ಉಳಿದ ಕಡೆಯ ಮಗನು ಮನೆಗೆ ಬೀಗ ಹಾಕಿ ತಾಯಿಯೊಂದಿಗೆ ಹೊರಟ.

 

ಮನೆಯ ಮುಂದಿನ ತುಳಸಿಗೆ ಪೂಜೆ ಮಾಡುವರ್ಯಾರು ಎನ್ನುವುದು ಇಂದು ಆ ಮನೆಯ ಸಮಸ್ಯೆ, ನಾಳೆ ಆ ಊರಿನ ಇನ್ನೊಂದು ಮನೆಯ ಸಮಸ್ಯೆ. ಮುಂದೊಂದು ದಿನ ಆ ಸಂಪೂರ್ಣ ಹಳ್ಳಿಯ ಸಮಸ್ಯೆಯೂ ಕೂಡ. ಹಳ್ಳಿಯ ಯುವಕರೆಲ್ಲ ಪಟ್ಟಣಕ್ಕೆ ಗೂಳೆ ಹೊರಟರೆ ಮನೆಯ ಮುಂದಿನ ತುಳಸಿಯ ಪೂಜೆ ಮಾಡುವವರಾದರು ಯಾರು?

 

ಹಿಂದೆ ನಮ್ಮ ಹಳ್ಳಿಗಳಲ್ಲಿ ಒಂದು ಸಂಪ್ರಾದಾಯವಿತ್ತು, ಮನೆಯ ಹಿರಿಯ ಮಗ ದೊಡ್ಡವನಾದ ಮೇಲೆ ಆತನ ಓದು ಬಿಡಿಸಿ ಮನೆಯಲ್ಲೇ ಇಟ್ಟು ಕೊಳ್ಳುತ್ತಿದ್ದರು. ಕಾರಣ ಮಗ ಮನೆಯಲ್ಲೇ ಇದ್ದು, ಮನೆಯ ಕೆಲಸಗಳ ಜೊತೆಯಲ್ಲಿ ತಂದೆ ತಾಯಿಯರ ಯೋಗಕ್ಷೇಮವನ್ನು ನೋಡಿ ಕೊಳ್ಳಲಿ ಅನ್ನುವುದು ಬಹುಷಃ ಅವರ ಉದ್ದೆಶವಾಗಿದ್ದಿರಲು ಬಹುದು. ಆದರೆ ಇಂದು ಹಾಗಲ್ಲ, ಮನೆಯಲ್ಲಿ ಒಬ್ಬನಿರಲಿ, ಇಬ್ಬರಿರಲಿ ಎಲ್ಲರೂ ಕೆಲಸ ಮಾಡಲು ಹೊರಗೆ ಹೋಗುವವರೆ. ಊರಲ್ಲಿ ಇರಲು ಯಾರು ಇಷ್ಟ ಪಡುತ್ತಿಲ್ಲ. ತಂದೆ ತಾಯಿಯರು ಅಷ್ಟೇ, ಮಕ್ಕಳು ತಮ್ಮ ಹಾಗೆ ದುಡಿದು ಜೀವನ ಸಾಗಿಸುವುದು ಬೇಡ. ದೂರ ಎಲ್ಲಾದರು ಸರಿ ಹೋಗಿ ಆರಾಮವಾಗಿ ಜೀವನ ಸಾಗಿಸಲಿ ಎನ್ನುವುದು. ಅದರಲ್ಲೂ ರೈತರ ಗೋಳು ಕೇಳುವವರಿಲ್ಲ. ರೈತರಿಗೆ ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ಬೀಜ ಗೊಬ್ಬರಗಳ ಬೆಲೆ ಗಗನಕ್ಕೇರುತ್ತಿದೆ. ತಾವು ದುಡಿದುದ್ದು ತಮ್ಮ ಹೊಟ್ಟೆಗೆ ಸಾಲುತ್ತಿಲ್ಲ, ಇಂತಹ ಪರಿಸ್ಠಿತಿಯಲ್ಲಿ ತಮ್ಮ ಮಕ್ಕಳು ತಾವು ಅನುಸರಿಸಿದ ಉದ್ಯೋಗವನ್ನೇ ಮಾಡುವುದು ಬೇಡ ಅನ್ನುವುದು  ಹಲವಾರು ತಂದೆ ತಾಯಿಯರ ಆಶಯ. 

 

ಇಂದಿನ ನಗರೀಕರಣದಿಂದಾಗಿ, ಕಲಿತ ಹಳ್ಳಿಯ ಯುವಕರೆಲ್ಲ ನಗರಕ್ಕೆ ವಲಸೆ ಹೋಗಿ ಅಲ್ಲಿಯೇ ವಾಸ್ತವ್ಯ ಹುಡುತಿದ್ದಾರೆ. ಊರು ಎನ್ನುವುದು ಅಪ್ಪ-ಅಮ್ಮ ಇರುವವರೆಗೆ ಮಾತ್ರ ಎನ್ನುವ ಹಾಗಾಗಿದೆ. ನಗರೀಕರಣದಿಂದಾಗಿ ಹಳ್ಳಿಯಲ್ಲಿರುವ ಮೆನೆಗಳು ಖಾಲಿಯಾಗಿ ಬೀಗ ಬಿಳುತ್ತಿವೆ. ಐದಂಕಿ-ಆರಂಕಿ ಸಂಬಳದ ರುಚಿಗೆ ನಾವು ಹಳ್ಳಿಯನ್ನೇ ಮರೆಯುತ್ತಿದ್ದೇವೆ ಅನ್ನಿಸುತ್ತಿದೆ. ಎಷ್ಟೋ ಹೊಲ ಗದ್ದೆಗಳು, ತೋಟಗಳು ನೋಡುವವರಿಲ್ಲದೇ ಪಾಳು ಬಿಳುತ್ತಲಿವೆ. ಬತ್ತ ಬೆಳೆಯುವ ಗದ್ದೆಗಳು ಪಾಳು ಬಿದ್ದರೆ, ನಮಗೆ ಕೂಳು ಎಲ್ಲಿಂದ ಬರಬೇಕು? ಹಾಗಾಗಿಯೇ ಅಲ್ಲವೇ ದಿನದಿಂದ ದಿನಕ್ಕೆ ಆಹಾರ ಸಾಮಾಗ್ರಿಗಳ ಬೆಲೆ ಗಗನಕ್ಕೇರುತ್ತಿರುವುದು.

 

ಇನ್ನೂ ಸರ್ಕಾರಿ ಯೋಜನೆಗಳಾಗಲಿ, ಸಣ್ಣ ಕೈಗಾರಿಕೆಗಳಾಗಲಿ ಎಲ್ಲವೂ ನಗರ ಪ್ರದೇಶಗಳಿಗೆ ಸಿಮೀತವಾಗಿ ಬಿಟ್ಟಿವೆ. ಹೈನುಗಾರಿಕೆ, ತೋಟಗಾರಿಕೆ ಎನ್ನುವುದು ತುಖ್ದು ಭೂಮಿಯುಳ್ಳ ಬಡ ರೈತರಿಗೆ ಕೈಗೆಟುಕದ ಹುಳಿ ದ್ರಾಕ್ಷಿಯೇ ಸರಿ. ಈ ಕಾರಣಗಳಿಂದಾಗಿ ರೈತರು ತಮ್ಮ ಮಕ್ಕಳನ್ನು ದುಡಿಯಲು ಹೊರಗೆ ಕಳಿಸುತ್ತಿದ್ದಾರೆ. ಹೀಗೆ ಮುಂದುವರೆದರೆ ಹಳ್ಳಿಯ ಮನೆಗಳು ಸಂಪೂರ್ಣ ಕಾಲಿಯಾಗುವುದರಲ್ಲಿ ಎರಡು ಮಾತಿಲ್ಲ. ಈಗ ಸದ್ಯಕ್ಕೆ ತುಳಸಿಯ ಪೂಜೆ ಮಾಡಲು ಪಕ್ಕದ ಮನೆಯ ಹುಡುಗನೋ ಇಲ್ಲಾ ಪೂಜಾರಿಯ ಮಗನೋ ಸಿಗಬಹುದು. ಆದರೆ ಮುಂದೆ? ಆ ಮಕ್ಕಳು ಕಲಿತು ಕೆಲಸ ಮಾಡಲು ದೂರದ ಊರಿಗೆ ಹೊರಟರೆ, ಮನೆಯ ಮುಂದಿನ ತುಳಸಿಯ ಪೂಜೆ ಮಾಡುವವರ್ಯಾರು? 

 

-- ಮಂಜು ಹಿಚ್ಕಡ್

 

Comments

Submitted by VeerendraC Tue, 08/20/2013 - 15:23

"ರೈತರಿಗೆ ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ಬೀಜ ಗೊಬ್ಬರಗಳ ಬೆಲೆ ಗಗನಕ್ಕೇರುತ್ತಿದೆ. ತಾವು ದುಡಿದುದ್ದು ತಮ್ಮ ಹೊಟ್ಟೆಗೆ ಸಾಲುತ್ತಿಲ್ಲ, ಇಂತಹ ಪರಿಸ್ಠಿತಿಯಲ್ಲಿ ತಮ್ಮ ಮಕ್ಕಳು ತಾವು ಅನುಸರಿಸಿದ ಉದ್ಯೋಗವನ್ನೇ ಮಾಡುವುದು ಬೇಡ ಅನ್ನುವುದು ಹಲವಾರು ತಂದೆ ತಾಯಿಯರ ಆಶಯ. " ನೀವು ಹೇಳಿದ‌ ಹಾಗೆ ಇದಕ್ಕೆ ಕಾರಣವು ಸರಿಯಾಗಿದೆ, ಭಾರತದಲ್ಲಿ ಸುಮಾರು ಒಂದು ಶತಮಾನದಿಂದ‌ ಅಧಿಕ‌ ಜನರು (ಅಂದರೆ ಸುಮಾರು 60‍ ‍‍‍ 70 %) ವ್ಯವಸಾಯ‌ (ಮಳೆ ಆದಾರಿತ‌) ಹಾಗು ಅದರ‌ ಸಂಬಂಧಪಟ್ಟ‌ ಕೆಲಸದಲ್ಲಿ ತೊಡಗಿಕೊಂಡಿದಾರೆ. ಆದರೆ ಅದಕ್ಕೆ ತಕ್ಕ‌ ಪ್ರತಿಫಲ‌ ಸಿಗುತ್ತಿಲ್ಲಾ.. ಅವರು ದುಡಿದ‌ ಹಣವು ಹೊಟ್ಟೆಗಾದರೆ .. ಮೈಗಿಲ್ಲ‌ ಎಂಬುವಂತೆ ಇದೆ. ಹಾಗಾಗಿ ಕೆಲಸ‌ ಹುಡುಕಿಕೊಂಡು ನಗರಕ್ಕೆ ವಲಸೆ ಬರುತ್ತಿದ್ದಾರೆ. ಒಂದು ರಾಷ್ಟ್ರವು ಮುಂದುವರಿಯುವುದಕ್ಕೆ ಕೇವಲ ವ್ಯವಸಾಯದಿಂದ‌ ಸಾಧ್ಯವಾಗುವುದಿಲ್ಲ‌ .. ಸರಿ ಸಮನಾಗಿ ಉದ್ಯೋಗಿಕರಣವಾಗಬೇಕು. ಇದು ಸ್ವತಹ‌ ಸರ್ ಎಂ ವಿಶ್ವೇಶ್ವರಯ್ಯರವರು ಹೇಳಿದ್ದರು.
Submitted by makara Tue, 08/20/2013 - 21:32

ವಿಚಾರಯುಕ್ತ ಬರಹ. ಹಳ್ಳಿಗಳಲ್ಲಿಯೂ ಎಲ್ಲಾ ವಿಧವಾದ ಸೌಲಭ್ಯಗಳು ಸಿಗುವಂತಾದರೆ ಜನ ಪಟ್ಟಣದ ಆಕರ್ಷಣೆಯಿಂದ ದೂರವುಳಿದಾರು. ಹಳ್ಳಿಗಳಲ್ಲಿ ವಿದ್ಯುತ್ತಿನ ತೊಂದರೆ, ವಿದ್ಯಾಭ್ಯಾಸದ ತೊಂದರೆ, ಆಸ್ಪತ್ರೆಯ ತೊಂದರೆ ಹೀಗೆ ಸಮಸ್ಯೆಗಳು ಹತ್ತು ನೂರು. ನಗರ ಕೇಂದ್ರಿತ ಅಭಿವೃದ್ಧಿಯನ್ನು ವಿಕೇಂದ್ರಿಕರಣಗೊಳಿಸಿ ಹಳ್ಳಿಗಳನ್ನು ಮತ್ತು ಚಿಕ್ಕ ಪಟ್ಟಣಗಳತ್ತ ಅಭಿವೃದ್ಧಿಯ ದಿಕ್ಕು ಸಾಗಿದರೆ; ಎಲ್ಲಾ ಮನೆಗಳಲ್ಲಿಯೂ ತುಳಸೀ ಪೂಜೆ ಮಾಡುವವರು ಉಳಿಯುತ್ತಾರೆ ಮತ್ತು ಗುಳೇ ಹೋಗುವುದು ನಿಲ್ಲುತ್ತದೆ. ವೈಚಾರಿಕ ಬರಹಕ್ಕೆ ಧನ್ಯವಾದಗಳು ಮಂಜು ಅವರೆ.