೯೮. ಲಲಿತಾ ಸಹಸ್ರನಾಮ ೩೬೬ನೇ ನಾಮದ ವಿವರಣೆ

೯೮. ಲಲಿತಾ ಸಹಸ್ರನಾಮ ೩೬೬ನೇ ನಾಮದ ವಿವರಣೆ

ಲಲಿತಾ ಸಹಸ್ರನಾಮ ೩೬೬

Parā परा (366)

೩೬೬. ಪರಾ

            ಮುಂದಿನ ಕೆಲವು ನಾಮಗಳಲ್ಲಿ ದೇವಿಯ ಶಬ್ದ ಬ್ರಹ್ಮದ ರೂಪವನ್ನು ಕುರಿತಾಗಿ ಚರ್ಚಿಸಲಾಗುವುದು. ಬ್ರಹ್ಮ ಎನ್ನುವುದರ ಶಬ್ದಶಃ ಅರ್ಥವು ಬೆಳೆಯುವುದು, ಅಭಿವೃದ್ಧಿ ಹೊಂದುವುದು, ಉಬ್ಬುವುದು, ಆಕುಚನ ಹೊಂದುವುದು, ಉದ್ಭವಿಸುವುದು, ಮುಂತಾದವುಗಳಾಗಿವೆ. ಈ ನಾಮವು ದೇವಿಯ ಅಥವಾ ಬ್ರಹ್ಮದ ಆವಿರ್ಭಾವ ಹೊಂದದ (ವ್ಯಕ್ತವಾಗದ) ರೂಪದ ಕುರಿತು ಹೇಳುತ್ತದೆ.  

           ಈ ನಾಮ ಮತ್ತು ಮುಂದಿನ ಕೆಲವು ನಾಮಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಶಬ್ದದ ಮೂಲ ಮತ್ತು ವಿಕಾಸ ಇವುಗಳನ್ನು ಅವಶ್ಯವಾಗಿ ತಿಳಿದುಕೊಳ್ಳಬೇಕು.

         ಪರಮ ಸತ್ಯದ ಅಥವಾ ಪರಿಪೂರ್ಣತೆಯ ಕುರಿತಾಗಿ ಚರ್ಚಿಸುವಾಗ ಪರಬ್ರಹ್ಮದ ಪ್ರಕಾಶ ಮತ್ತು ವಿಮರ್ಶ ರೂಪಗಳನ್ನು ಕುರಿತಾಗಿ ಪದೇ ಪದೇ ಪ್ರಸ್ತಾವಿಸಲಾಗುತ್ತಿದೆ. ಸಾಮಾನ್ಯವಾಗಿ ಪ್ರಕಾಶ ರೂಪವು ಶಿವನನ್ನು ಪ್ರತಿನಿಧಿಸಿದರೆ, ವಿಮರ್ಶ ರೂಪವು ಶಕ್ತಿಯನ್ನು ಪ್ರತಿನಿಧಿಸುತ್ತದೆ ಎಂದು ತಿಳಿಯತಕ್ಕದ್ದು. ಶಿವ ಅಥವಾ ಪರಮೇಶ್ವರನು (ಪರಮ ಎಂದರೆ ಅತ್ಯುನ್ನತವಾದದ್ದು) ಪರಿಶುದ್ಧನು ಮತ್ತು ಕಳಂಕ ರಹಿತನೂ ಆಗಿ ಸ್ವಯಂಪ್ರಕಾಶವುಳ್ಳವನು ಮತ್ತು ಶಕ್ತಿ ಅಥವಾ ವಿಮರ್ಶವು ಈ ಪರಿಶುದ್ಧ ಪ್ರಕಾಶದ ಪ್ರಕಟ ರೂಪವಾಗಿದೆ (ಸಾಕ್ಷಾತ್ಕಾರವಾಗಿದೆ). ಪ್ರಕಾಶ ಮತ್ತು ವಿಮರ್ಶವನ್ನು ಪ್ರತ್ಯೇಕಿಸಲಾಗದು. ಸಂಸ್ಕೃತದ ಹೇಳಿಕೆಯೊಂದರ ಪ್ರಕಾರ ಒಂದು ಶಬ್ದ ಮತ್ತದರ ಅರ್ಥವನ್ನು ಬೇರ್ಪಡಿಸಲಾಗದು; ಅದೇ ವಿಧವಾಗಿ ಪಾರ್ವತಿ ಅಥವಾ ಶಕ್ತಿ ಮತ್ತು ಪರಮೇಶ್ವರ ಅಥವಾ ಶಿವ ಇವುರುಗಳನ್ನು ಪ್ರತ್ಯೇಕಗೊಳಿಸಲಾಗದು. ಯಾವಾಗ ಒಂದು ಕೋರೈಸುವ ಬೆಳಕಿರುತ್ತದೆಯೋ ಅದನ್ನು ಅರಿಯಲು ಒಬ್ಬನು ಅದರ ಬಗೆಗೆ ತಿಳುವಳಿಕೆಯನ್ನು ಹೊಂದಿರಬೇಕು. ಉದಾಹರಣೆಗೆ, ಒಂದು ಮೇಣದ ಬತ್ತಿಯು ಉರಿಯುತ್ತಿದೆ ಎಂದಿಟ್ಟುಕೊಳ್ಳಿ, ಬೆಳಕಿನೊಂದಗೂಡಿದ ಆ ಮೇಣದ ಬತ್ತಿಯನ್ನು ನೋಡಿದಾಗ, ಒಬ್ಬನು ಆ ಮೋಂಬತ್ತಿಯು ಬೆಳಕನ್ನು ನೀಡುತ್ತಿದೆ ಎಂದು ಹೇಳಬಹುದು. ಒಬ್ಬನು ಮೋಂಬತ್ತಿಯ ಬೆಳಕನ್ನು ನೋಡಬೇಕೆಂದುಕೊಂಡರೆ ಅವನು ಒಂದು ಹೊತ್ತಿಸಿದ ಮೋಂಬತ್ತಿಯನ್ನು ಹೊಂದಬೇಕು. ಬೆಳಕು ಮತ್ತು ಅದರ ಕಾಣಿಸುವಿಕೆಯು ಬೇರೆ ಬೇರೆಯಾದರೂ ಸಹ ಅವುಗಳು ಪರಸ್ಪರ ಅವಲಂಬಿಗಳು. ಕಾಣುಸುವಿಕೆಯು ಬೆಳಕಿನ ವ್ಯಕ್ತವಾಗುವಿಕೆಯಾದರೆ, ಬೆಳಕಿನ ಮೂಲವಿಲ್ಲದೇ ಅದನ್ನು ನೋಡುವುದು ಸಾಧ್ಯವಾಗುವುದಿಲ್ಲ. ಇದೇ ವಿಧವಾಗಿ ಬೆಳಕು ಪ್ರತಿಫಲನ ಹೊಂದಿ ಕಾಣುವಂತಿಲ್ಲದಿದ್ದರೆ ಆ ಬೆಳಕಿನಿಂದ ಪ್ರಯೋಜನವಿಲ್ಲ. ಬೆಳಕು ಮತ್ತು ಅದರ ವ್ಯಕ್ತವಾಗುವಿಕೆ ಎರಡನ್ನೂ ಒಟ್ಟಾಗಿ ಬೆಳಕೆಂದು ಕರೆಯುತ್ತೇವೆ. ಇದನ್ನೇ ಪ್ರಕಾಶ ವಿಮರ್ಶ ಮಾಯಾ ಅಥವಾ ಪರಿಪೂರ್ಣತೆ ಎಂದು ಕರೆಯಲಾಗುತ್ತದೆ. ಶಬ್ದವು ಈ ಪರಿಪೂರ್ಣ ರೂಪದಿಂದ ಹೊರಹೊಮ್ಮುತ್ತದೆ.

         ಪರಿಪೂರ್ಣ ರೂಪವನ್ನು ‘ಪರಾವಾಕ್’ ರೂಪವೆಂದೂ ಕರೆಯಲಾಗುತ್ತದೆ. ಈ ‘ಪರಾವಾಕ್’ ರೂಪವು ಆರಂಭಿಕ ಹಂತವಾಗಿದೆ. ಈ ಹಂತದಲ್ಲಿ ಶಬ್ದವನ್ನು ಮೊಳಕೆಯೊಡೆಯದೇ ಇರುವ ಬೀಜವೆಂದು ಕರೆಯಬಹುದು. ಯಾವಾಗ ಈ ಬೀಜವು ಮೊಳಕೆಯೊಡೆಯಲು ಪ್ರಾರಂಭಿಸುತ್ತದೆಯೋ ಆಗ ಈ ಹಂತವನ್ನು ‘ಪಶ್ಯಂತೀ’ (ನಾಮ ೩೬೮) ಎಂದು ಕರೆಯುತ್ತಾರೆ. ಈ ಹಂತದಲ್ಲಿ ಬೀಜಕ್ಕೆ ಬೆಳೆಯಬೇಕೆಂಬ ಆಸೆಯು ಇರುತ್ತದೆ. ಕಾಂಡವು ಒಡಮೂಡಿದಾಗ ಬೀಜವು ತನ್ನ ಬೆಳವಣಿಗೆಯ ಪಯಣವನ್ನು ಪ್ರಾರಂಭಿಸುತ್ತದೆ. ಮುಂದಿನ ದಿನಗಳಲ್ಲಿ ಒಂದು ವೃಕ್ಷವಾಗುತ್ತದೆಂದು ತಿಳಿದಿದ್ದರೂ ಸಹ ಆ ವೃಕ್ಷವು ಯಾವ ರೀತಿಯಾಗಿರುತ್ತದೆ ಎನ್ನುವುದು ಗೊತ್ತಿರುವುದಿಲ್ಲ; ಅದು ದೊಡ್ಡದೋ ಅಥವಾ ಚಿಕ್ಕದೋ, ಫಲಗಳನ್ನು ಕೊಡುತ್ತದೆಯೋ ಅಥವಾ ಬರಡಾಗುತ್ತದೆಯೋ ಮೊದಲಾದವು. ಆ ಸಸಿಯು ಒಂದು ಹಂತಕ್ಕೆ ಬೆಳೆದಾಗ ಅದರ ಎಲೆಗಳನ್ನು ನೋಡಬಹುದು; ಆಗ ಅದು ಯಾವ ವಿಧವಾದ ವೃಕ್ಷವೆನ್ನುವುದನ್ನು ಒಬ್ಬರು ತಿಳಿಯಬಹುದು. ಈ ಹಂತವನ್ನು ‘ಮಧ್ಯಮಾ’ (ನಾಮ ೩೭೦) ಎಂದು ಕರೆಯಲಾಗುತ್ತದೆ. ಈ ಸಸಿಯು ಮುಂದೆ ಬೆಳೆದು ವೃಕ್ಷವಾಗುತ್ತದೆ ಆಗ ಒಬ್ಬರು ಅದರ ಹೂವು ಮತ್ತು ಹಣ್ಣುಗಳನ್ನು ನೋಡಬಹುದು. ಆಗ ಅವರು ಈ ಬೀಜದ ಸಂಪೂರ್ಣ ಸ್ವಭಾವವನ್ನು ಗುರಿತಿಸಬಹುದು. ಆ ಹಂತದಲ್ಲಿ ವೃಕ್ಷದ ಸಂಪೂರ್ಣ ಸ್ವರೂಪವು ತಿಳಿಯುತ್ತದೆ. ಆ ಹಂತವನ್ನು ‘ವೈಖರೀ’ ಎಂದು ಕರೆಯಲಾಗುತ್ತದೆ. ಈ ಮೂರು ರೂಪಗಳೂ ಸಹ ಪರಿಪೂರ್ಣ ರೂಪದಿಂದ ಹೊರಹೊಮ್ಮಿದವುಗಳಾಗಿವೆ, ಈ ಉದಾಹರಣೆಯಲ್ಲಿ ಅದು ಬೀಜವಾಗಿದೆ.

         ಪರಿಪೂರ್ಣ ರೂಪವನ್ನು ‘ಪರಾವಾಕ್’ ಎಂದು ಕರೆಯಲಾಗುತ್ತದೆ. ಪರಾ ಎಂದರೆ ಅತ್ಯುನ್ನತವಾದದ್ದು ಅಥವಾ ಪರಮೋಚ್ಛವಾದದ್ದು ಮತ್ತು ವಾಕ್ ಎಂದರೆ ‘ಶಬ್ದ’. ಪರಾವಾಕ್ ಎಂದರೆ ಶಬ್ದದ ಪರಮೋಚ್ಛ ರೂಪ. ಈ ಪರಾ ರೂಪದಿಂದ ಅಥವಾ ಬೀಜ ರೂಪದಿಂದ ಶಬ್ದವು ಮೊಳಕೆಯೊಡೆಯುತ್ತದೆ, ಬೆಳವಣಿಗೆ ಹೊಂದುತ್ತದೆ ಮತ್ತು ಶಬ್ದಗಳನ್ನು ಕೊಡುತ್ತದೆ. ಒಂದು ಸಂಪೂರ್ಣ ಅರ್ಥಭರಿತ ಶಬ್ದವು ಇದರ ಫಲವಾಗಿದೆ.

          ಮಾನವರಲ್ಲಿ ಈ ಪರಾವಾಕ್ ಎನ್ನುವುದು ಕುಂಡಲಿನೀ (ನಾಮ ೧೧೦) ಶಕ್ತಿಯ ರೂಪದಲ್ಲಿ ಮೂಲಾಧಾರ ಚಕ್ರದಲ್ಲಿರುತ್ತದೆಂದು ಹೇಳಲಾಗುತ್ತದೆ. ಈ ಮೂಲಾಧಾರ ಚಕ್ರದಿಂದ ಶಬ್ದದ ಬೀಜವು ತನ್ನ ಆರೋಹಣವನ್ನು ಆರಂಭಿಸಿ ಅದು ಮಣಿಪೂರಕ ಅಥವಾ ನಾಭಿ ಚಕ್ರದಲ್ಲಿ ಪಶ್ಯಂತೀ ರೂಪವನ್ನು ಹೊಂದಿ, ಅನಾಹತ ಚಕ್ರ ಅಥವಾ ಹೃದಯ ಚಕ್ರದಲ್ಲಿ ಮಧ್ಯಮಾ ರೂಪವನ್ನು ಹೊಂದಿ ಅದು ವಿಶುದ್ಧಿ ಅಥವಾ ಕಂಠದ ಚಕ್ರದಲ್ಲಿ ವೈಖರೀ ಆಗಿ ರೂಪಗೊಂಡು ಅಲ್ಲಿ ಪರಿಷ್ಕೃತಗೊಳ್ಳುತ್ತದೆ. ಈ ಕಂಠ ಚಕ್ರದಲ್ಲಿ ಶಬ್ದಗಳ ಭೌತಿಕ ರೂಪವು ಹೊರೆಗೆಡವಲ್ಪಡುತ್ತದೆ. ಕುಂಡಲಿನೀ ಶಕ್ತಿಯ ಸ್ಪಂದನವು (ಅಲುಗಾಡುವಿಕೆಯು) ಶಬ್ದದ ಬೀಜವಾಗಿದೆ. ಯಾವಾಗ ಮಾತನಾಡಬೇಕೆಂಬ ಆಸೆಯು ಉತ್ಪನ್ನವಾಗುತ್ತದೆಯೋ ಆಗ ಅದು ಶಬ್ದ ಬ್ರಹ್ಮದ ರೂಪದಲ್ಲಿ ಮೂಲಾಧಾರದಲ್ಲಿ ಆವಿರ್ಭವಿಸಿ ಭೌತಿಕ ರೂಪವನ್ನು ಪಡೆಯಲು ಮೇಲಕ್ಕೆ ಚಲಿಸುತ್ತದೆ ಮತ್ತು ವಿಶುದ್ಧ ಅಥವಾ ಕಂಠ ಚಕ್ರದಲ್ಲಿ ವೈಖರೀ ರೂಪವನ್ನು ತೆಳೆಯುತ್ತದೆ. ಶಬ್ದ ಬ್ರಹ್ಮವೆಂದರೆ ಶಬ್ದದ (ಪದಗಳ) ರೂಪದಲ್ಲಿರುವ ಪರಬ್ರಹ್ಮವಾಗಿದೆ. ವಿಶ್ವವು ಪರಬ್ರಹ್ಮದಿಂದ ಆವಿರ್ಭಾವ ಹೊಂದುವಂತೆ ಶಬ್ದಗಳು ಸಹ ಶಬ್ದ ಬ್ರಹ್ಮದಿಂದ ಉತ್ಪನ್ನವಾಗುತ್ತವೆ. ವಾಸ್ತವವಾಗಿ ಈ ಎರಡು ಬ್ರಹ್ಮಗಳು ಭಿನ್ನವಲ್ಲ.

        ಇದನ್ನು ಸರಿಯಾಗಿ ತಿಳಿದುಕೊಳ್ಳಲು ನಾವು ಸೃಷ್ಟಿ ಕ್ರಿಯೆಗೆ ಹಿಂದಿರುಗಬೇಕು. ಸಾಂಖ್ಯ ಸಿದ್ಧಾಂತದ ಶಬ್ದಗಳಲ್ಲಿ, ಸೃಷ್ಟಿಯು ೨೫ ತತ್ವಗಳನ್ನು ಒಳಗೊಂಡಿದೆ (ಸಾಮಾನ್ಯವಾಗಿ ೨೪ ತತ್ವಗಳನ್ನು ಪರಿಗಣಿಸುವುದಕ್ಕೆ ಪ್ರತಿಯಾಗಿ). ಇಲ್ಲಿ ಈಶ್ವರ ತತ್ವವನ್ನು ಅಧಿಕವಾಗಿ ಸೇರಿಸಲಾಗಿದೆ. ಈ ೨೫ ತತ್ವಗಳೆಂದರೆ, ೧) ಪುರುಷ (ವ್ಯಕ್ತಿಗತ ಆತ್ಮ) ೨) ಪ್ರಕೃತಿ ೩) ಬುದ್ಧಿ ೪. ಅಹಂಕಾರ ೫-೯. ಜ್ಞಾನೇಂದ್ರಿಯಗಳು (ಗ್ರಹಣೇಂದ್ರಿಯಗಳಾದ ಕಿವಿ, ಮೂಗು ಮೊದಲಾದವು), ೧೦-೧೪. ಕರ್ಮೇಂದ್ರಿಯಗಳು (ಕೈ, ಕಾಲು, ಮೊದಲಾದವು), ೧೫-೧೯. ತನ್ಮಾತ್ರಗಳು (ರೂಪ, ರಸ, ಗಂಧ ಮೊದಲಾದ ಸೂಕ್ಷ್ಮ ಧಾತುಗಳು), ೨೦-೨೪ ಮಹಾಭೂತಗಳು (ಪಂಚಭೂತಗಳಾದ ಆಕಾಶ, ವಾಯು ಮೊದಲಾದವು) ಮತ್ತು ಅಂತಿಮವಾಗಿ ೨೫ನೇ ತತ್ವವಾದ ಈಶ್ವರ ತತ್ವ. ಇಲ್ಲಿ ಈಶ್ವರನೆಂದರೆ ಪರಬ್ರಹ್ಮವಾಗಿದೆ ಮತ್ತು ಪುರುಷ ಎಂದರೆ ಹಲವಾರು ಆಕಾರ ಮತ್ತು ರೂಪಗಳನ್ನು ತೆಳೆಯುವ ವ್ಯಕ್ತಿಗತ ಆತ್ಮಗಳಾಗಿವೆ. ಪರಬ್ರಹ್ಮದ ತತ್ವವು ಈ ಎಲ್ಲಾ ೨೪ ತತ್ವಗಳಿಗೆ ಅತೀತವಾಗಿದೆ. ಪುರುಷ ಮತ್ತು ಪ್ರಕೃತಿ ಎರಡೂ ಮೂಲ ತತ್ವಗಳಾದರೂ ಸಹ ಅವರೆಡರಲ್ಲಿ ಹಲವು ಬೇಧಗಳಿವೆ. ಪುರುಷನು ವ್ಯಕ್ತಿಗತ ಆತ್ಮ ಅಥವಾ ಜೀವಾತ್ಮ ಎಂದು ಕರೆಯಲ್ಪಟ್ಟು ಅವನಿಗೆ ಪ್ರಜ್ಞೆಯುಳ್ಳ/ಚೈತನ್ಯವುಳ್ಳ ಧನಾತ್ಮಕ ತತ್ವ ಗುಣವಿದೆ. ಪ್ರಕೃತಿಯು ಜಡ ವಸ್ತುವಾಗಿದ್ದು ಅದು ಋಣಾತ್ಮಕ ಗುಣವನ್ನು ಹೊಂದಿದೆ.

        ಯಾವಾಗ ಪುರುಷನು ಪ್ರಕೃತಿಯೊಂದಿಗಿನ ಪ್ರತಿಕ್ರಿಯೆಯ ಮೂಲಕ ಅದರೊಂದಿಗೆ ಒಂದಾಗುತ್ತಾನೆಯೋ (ವಿರುದ್ಧಾತ್ಮಕ ಶಕ್ತಿಗಳು ಒಂದರಿಂದ ಮತ್ತೊಂದು ಆಕರ್ಷಿಸಲ್ಪಡುತ್ತವೆ), ಆಗ ಪ್ರಕೃತಿಯು ೨೧ ತತ್ವಗಳಾಗಿ ವಿಕಾಸ ಹೊಂದುತ್ತದೆ ಮತ್ತು ಅದು ಪುರುಷ ಅಥವಾ ಜೀವಾತ್ಮನನ್ನು ಸೂಕ್ಷ್ಮ ವಸ್ತುವಿಗೆ ತದನಂತರ ಸ್ಥೂಲ ವಸ್ತುವಿನೊಂದಿಗೆ ಕಟ್ಟಿ ಹಾಕುತ್ತದೆ. ಸ್ಥೂಲ ವಸ್ತುವು ಮನುಷ್ಯನ ಭೌತಿಕ ಸ್ವರೂಪವಾದರೆ, ಸೂಕ್ಷ್ಮ ವಸ್ತುವು ಅಂತಃಕರಣವಾಗಿದೆ (ಮನಸ್ಸು, ಬುದ್ದಿ, ಚಿತ್ತ ಮತ್ತು ಅಹಂಕಾರಗಳನ್ನೊಳಗೊಂಡದ್ದು). ಈ ಒಂದುಗೂಡುವಿಕೆಯ ಮೊದಲಿನ ರೂಪವು ಅವ್ಯಕ್ತಾ (ನಾಮ ೩೯೮) ಅಥವಾ ಆವಿರ್ಭಾವ ಹೊಂದದೇ ಇರುವುದು ಎಂದು ಕರೆಯಲಾಗಿದೆ. ಅವ್ಯಕ್ತದ ಹಂತದಲ್ಲಿ, ವಿಕಸನದ ಬದಲಾವಣೆಗಳು ಉಂಟಾಗುವ ಮುಂಚೆ, ಮಾಯೆಯು ಆತ್ಮದ ಕರ್ಮಕ್ಕನುಗುಣವಾದ ಸಾಂದ್ರತೆಯುಳ್ಳ ತನ್ನ ಮುಸುಕನ್ನು ಅದರ ಮೇಲೆ ಹರಡುತ್ತಾಳೆ. ಈ ವಿಧವಾಗಿ ಸೃಷ್ಟಿಯನ್ನು ಕುರಿತು ಶ್ರುತಿಗಳಲ್ಲಿ ಹೇಳಲ್ಪಟ್ಟಿದೆ.

         ಆವಿರ್ಭಾವ ಹೊಂದದ ರೂಪ ಅಥವಾ ಅವ್ಯಕ್ತ ರೂಪವನ್ನು ‘ಕಾರಣ ಬಿಂದು’ ಎಂದು ಕರೆಯಲಾಗಿದೆ; ಏಕೆಂದರೆ ಇದು ಅಣುವಿಗಿಂತಲೂ ಚಿಕ್ಕದಾಗಿರುತ್ತದೆ. ಬಿಂದು ಎಂದರೆ ಚುಕ್ಕೆ ಮತ್ತು ಕಾರಣ ಬಿಂದುವೆಂದರೆ ಕಾರಣಕ್ಕೆ ಮೂಲವಾದದ್ದು. ಯಾವಾಗ ಕಾರಣ ಬಿಂದುವು ಪರಿಪಕ್ವವಾಗಿ ವಿಕಾಸ ಹೊಂದಲು ಆಸನ್ನವಾಗುವುದೋ ಆಗ ಅದು ಸ್ಪಂದನೆ ಮತ್ತು ತರಂಗಗಳನ್ನುಂಟು ಮಾಡಿ ಆವಿರ್ಭಾವ ಹೊಂದುವುದಕ್ಕೆ ಸಿದ್ಧವಾಗಿ ಮತ್ತೊಂದು ಚುಕ್ಕೆಯನ್ನು ಉಂಟು ಮಾಡುತ್ತದೆ ಅದನ್ನು ‘ಕಾರ್ಯ ಬಿಂದು’ ಎಂದು ಕರೆಯಲಾಗುತ್ತದೆ; ಮತ್ತಲ್ಲಿ ಕಾರಣವು ಕಾರ್ಯವಾಗಿ ಹೊರಹೊಮ್ಮುತ್ತದೆ. ಈ ಕಾರ್ಯಬಿಂದುವಿನಿಂದ ಮತ್ತೊಂದು ಬಿಂದುವು ಉಂಟಾಗುತ್ತದೆ ಅದೇ ‘ನಾದ ಬಿಂದು’ ಅಥವಾ ‘ಶಬ್ದ ಬಿಂದು’. ಸಾಕಷ್ಟು ಪರಿಷ್ಕರಿಸಲ್ಪಟ್ಟ ನಂತರ ಶಬ್ದವು ನಾದ ಬಿಂದುವಿನ ಮೂಲಕ ಹೊರಹೊಮ್ಮುತ್ತದೆ. ಕಾರಣ ಬಿಂದುವು ಮೂಲಾಧಾರ ಚಕ್ರದಲ್ಲಿ ನೆಲಸಿ ಅದು ಅವರೋಣಹಗೊಂಡು ಕೇಳಬಹುದಾದ ಶಬ್ದವಾಗಿ ಹೊರಹೊಮ್ಮುವ ಮೊದಲು ಈ ವಿಧವಾದ ಬದಲಾವಣೆಗೆ ಒಳಪಡುತ್ತದೆ.  

        ’ಪರಾ’ವು ಮೂರು ಹಂತಗಳನ್ನು ಒಳಗೊಂಡಿದೆ.  ಮೂಲ ಪರಾ ಸ್ವರೂಪವು ಪರಮೋನ್ನತವಾದದ್ದೆಂದು ಪರಿಗಣಿಸಲ್ಪಟ್ಟು ಅದು ಸಂಪೂರ್ಣ ಶಕ್ತಿಯನ್ನೊಳಗೊಂಡಿರುತ್ತದೆ. ವಿಕಾಸ ಹೊಂದುವುದಕ್ಕಾಗಿ, ಅದು ನಿಧಾನವಾಗಿ ತನ್ನ ಪರಮೋನ್ನತ ಸ್ಥಾನವನ್ನು ಕಳಚಿಕೊಳ್ಳುತ್ತಾ ತನ್ನ ಶಕ್ತಿಯ ಸ್ಥಾಯಿಯನ್ನೂ ಕಡಿಮೆಗೊಳಿಸಿಕೊಳ್ಳುತ್ತಾ ಪರಾ-ಅಪರಾ ಆಗಿ ಮಾರ್ಪಾಡುಹೊಂದುತ್ತದೆ ಮತ್ತು ಈ ಹಂತದಲ್ಲಿ ’ಪರಾ’ವು ಉನ್ನತ ಸ್ಥಾಯಿಯ ಕನಿಷ್ಠ ಮಟ್ಟದಲ್ಲಿ ಇರತ್ತದೆ. ಇದು ವಿಕಾಸದ ನಿಖರವಾದ ಹಂತದಲ್ಲಿ ತನ್ನ ಶಕ್ತಿಯನ್ನು ಮತ್ತಷ್ಟು ಕಳೆದುಕೊಳ್ಳುತ್ತದೆ ಹಾಗು ಅದು ಅಪರಾ ಆಗಿ ಮಾರ್ಪಾಡುಗೊಳ್ಳುತ್ತದೆ ಮತ್ತು ಈ ಹಂತದಲ್ಲಿ ಅದು ತನ್ನ ಉನ್ನತ ಸ್ಥಾಯಿಯನ್ನು ಕಳೆದುಕೊಂಡು ವಿಕಾಸ ಹೊಂದುತ್ತದೆ. ಈ ಮೂರು ಹಂತಗಳನ್ನು ಶಿವ, ಶಕ್ತಿ ಮತ್ತು ನರ (ಮನುಷ್ಯ) ಎಂದು ಕರೆಯಲಾಗುತ್ತದೆ. ಈ ವಿಧವಾಗಿಯೂ ಆಕೆಯು ’ಪರಾ’ ಎಂದು ಕರೆಯಲ್ಪಡುತ್ತಾಳೆ. ಮುಂದಿನ ನಾಮಗಳು ಪರಾ ಅಥವಾ ಪರಮಸ್ವರೂಪದಿಂದ ಶಬ್ದದ ವ್ಯುತ್ಪತ್ತಿಯು ಹೇಗೆ ಆಗುತ್ತದೆಂದು ವಿವರಿಸುವುದರಿಂದ, ಸಂದರ್ಭಕ್ಕನುಗುಣವಾಗಿ ಈ ನಾಮವನ್ನು ಶಬ್ದ ಬ್ರಹ್ಮದ ದೃಷ್ಟಿಯಿಂದಲೇ ನೋಡಬೇಕು.

            ಋಗ್ವೇದವೂ ಸಹ (೧.೧೬೪.೪೫) ಮಾರ್ಪಾಡುಗಳ ಕುರಿತಾಗಿ ಚರ್ಚಿಸುತ್ತದೆ ಮತ್ತು ಅದು ಹೀಗೆ ಹೇಳುತ್ತದೆ,

                        चत्वारि वाक् परिमिता पदानि तानि विदुर्ब्राह्मणा ये मनीषिणः |

                        गुहा त्रिणि निहिता नेङ्गयन्ति तुरियं वाचो मनुष्या वदन्ति | |

                        ಚತ್ವಾರಿ ವಾಕ್ ಪರಿಮಿತಾ ಪದಾನಿ ತಾನಿ ವಿದುರ್ಬ್ರಾಹ್ಮಣಾ ಯೇ ಮನೀಷಿಣಃ |

                        ಗುಹಾ ತ್ರೀಣಿ ನಿಹಿತಾ ನೇಙ್ಗಯನ್ತಿ ತುರಿಯಂ ವಾಚೋ ಮನುಷ್ಯಾ ವದಂತಿ | |

         ಮಾತಿನ ನಾಲ್ಕು ನಿಖರವಾದ ಹಂತಗಳಿವೆ; ಯಾರು ವಿದ್ವತ್ತುಳ್ಳವರೋ ಮತ್ತು ಜ್ಞಾನಿಗಳೋ ಅವರಿಗೆ ಅವು ತಿಳಿದಿವೆ; ಮೂರು ರಹಸ್ಯವಾಗಿ ಇರಿಸಲ್ಪಟ್ಟಿವೆ, ಅವು ಯಾವುದೇ ಅರ್ಥವನ್ನು ಕೊಡುವುದಿಲ್ಲ; ಮಾನವರು ನಾಲ್ಕನೇ ಹಂತದ ಮಾತನ್ನು ಆಡುತ್ತಾರೆ. ನಾಲ್ಕು ವಿಧವಾದ ಮಾತುಗಳ್ಯಾವುವೆಂದರೆ - ॐ (ಓಂ), ಭೂಃ, ಭುವಃ, ಮತ್ತು ಸುವಃ, ಇವುಗಳನ್ನು ಅನುಕ್ರಮವಾಗಿ ಪರಾ, ಪಶ್ಯಂತೀ, ಮಧ್ಯಮಾ ಮತ್ತು ವೈಖರೀ ಎಂದು ಕರೆಯಲಾಗುತ್ತದೆ. ಪರಾ ಅತೀ ಒಳಗಿನಿಂದ ಹೊರಹೊಮ್ಮಿದರೆ; ಪಶ್ಯಂತೀ ಎನ್ನುವುದು ಹೃದಯಕ್ಕೆ ಸಂಭಂದಿಸಿದ್ದರೆ, ಮಧ್ಯಮಾ ಎನ್ನುವುದು ಬುದ್ಧಿಗೆ ಸಂಭಂದಿಸಿದೆ ಮತ್ತು ವೈಖರೀ ಎನ್ನುವುದು ಧ್ವನಿಯ ಮೂಲಕ ಮಾತಿನ ಅಂಗಗಳ ಮೂಲಕ ವ್ಯಕ್ತವಾಗುತ್ತದೆ.

           ಈ ನಾಮವು ದೇವಿಯ ಪರಾ ಸ್ವರೂಪವನ್ನು ಉಲ್ಲೇಖಿಸುತ್ತದೆ.

*******

      ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 366 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Wed, 08/21/2013 - 18:43

ಶ್ರೀಧರರೆ, ಶಬ್ದದ ವಿವರ ಕುರಿತು ಬೇರೆಯದನ್ನೆ ಹೊಸೆಯುತ್ತೇನೆ. ಈಗ ಬರಿಯ ಪರಾ ಮಾತ್ರ ಹಾಕಿದ್ದೇನೆ.

೩೬೬. ಪರಾ
ದೇವಿ ಲಲಿತೆ ಶಬ್ದಬ್ರಹ್ಮದ ರೂಪ, ಅರ್ಥಗರ್ಭಿತ ಅವ್ಯಕ್ತ ಬ್ರಹ್ಮ ಸ್ವರೂಪ
ಮಾತಿನ ನಿಖರ ಹಂತ ಓಂ ಭೂಃ ಭುವಃ ರಹಸ್ಯತಮ, ಸುವಃ ಮಾನುಷ
ಅಂತರಂಗದಿಂ ಓಂ -ಪರಾ, ಹೃದಯದಿ ಭೂಃ -ಪಶ್ಯಂತಿ, ಬುದ್ಧಿಯಲಿ ಭುವಃ -ಮಧ್ಯಮಾ;
ಅಂಗಧ್ವನಿಯ ಸುವಃ -ವೈಖರೀ ಮನುಜಗೆ ಸುಗಮ, ಜ್ಞಾನಿಗಳರಿತ ಪರಾ ಲಲಿತಾ ಬ್ರಹ್ಮ!
             
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು
 

Submitted by nageshamysore Thu, 08/22/2013 - 18:39

In reply to by nageshamysore

ಶ್ರೀಧರರೆ, 'ಶಬ್ದದ ಮೂಲ ಮತ್ತು ವಿಕಾಸ' ಕ್ಕೆ ಹೊಸೆಯಲು ಯತ್ನಿಸಿದ ಕಾವ್ಯ ರೂಪ.

ಶಬ್ದದ ಮೂಲ ಮತ್ತು ವಿಕಾಸ
_____________________________________

ಪರಮ-ಸತ್ಯ ಪರಬ್ರಹ್ಮ, ಪ್ರಕಾಶ ವಿಮರ್ಶ ರೂಪದಲಿ ಪ್ರಸ್ತುತ
ಕಳಂಕರಹಿತ ಸ್ವಯಂಪ್ರಕಾಶ ಶಿವ, ಶಕ್ತಿ ವಿಮರ್ಶರೂಪೆಪ್ರಕಟಿತ
ಶಬ್ದದ ಅರ್ಥ, ಮೂಲಬೆಳಕಂತೆ ವ್ಯಕ್ತ, ಅಂತೆ ಶಿವಶಕ್ತಿ ಸಂಯುಕ್ತ
ರೂಪ ಪ್ರಕಾಶ-ವಿಮರ್ಶ-ಮಾಯ, ಪರಿಪೂರ್ಣಕೆ ಶಬ್ದ ಹೊಮ್ಮುತ!

ಪರಿಪೂರ್ಣ ಶಬ್ದರೂಪ 'ಪರವಾಕ್' ಆರಂಭಿಕ ಮೊಳೆಯದ ಬೀಜ
ಮೊಳಕೆಯೊಡೆಯುತ ಬೆಳೆಯುವಾಸೆ 'ಪಶ್ಯಂತೀ' ಕಾಂಡಾ ಸಹಜ
ಚಿಗುರೆಲೆ ಮೊಳೆತಾ ಸಸಿ 'ಮಧ್ಯಮಾ', ಹೂ ಹಣ್ಣ 'ವೈಖರೀ' ವೃಕ್ಷ
ಪರಿಪೂರ್ಣ ಬೀಜದಿಂದ ಹೊಮ್ಮಿದ ಪರಿಪಕ್ವ ಸಂಪೂರ್ಣತೆ ಸ್ವರೂಪ!

ಅತ್ಯುನ್ನತ 'ಪರಾ' ವಾಕ್ 'ಶಬ್ದ', 'ಪರಾವಾಕ್' ಶಬ್ದದ ಪರಮೋಚ್ಛ ರೂಪ
ಮೊಳೆತ ಬೀಜವಾಗರ್ಥಭರಿತ, ಶಬ್ದ ಫಲಿತ ಕುಂಡಲಿನೀ ಉಪಸ್ಥಿತ ರೂಪ 
ಶಬ್ದ ಬೀಜಾರೋಹಣ ಮೂಲಾಧಾರದಿ, ನಾಭಿಚಕ್ರದಲಾಗಿ ಪಶ್ಯಂತೀ ರೂಪ
ಹೃದಯ ಚಕ್ರದಿ ಮಧ್ಯಮಾ, ವಿಶುದ್ಧಿಚಕ್ರ ವೈಖರೀ ಮಾತಿನ ಭೌತಿಕರೂಪ!

ಪದ ರೂಪದ ಪರಬ್ರಹ್ಮವೆ ಶಬ್ದ ಬ್ರಹ್ಮ, ವಿಶ್ವದುಗಮವಾದಂತೆ ಶಬ್ದೋತ್ಪನ್ನ
ಸಾಂಖ್ಯ ಸಿದ್ದಾಂತದ ಸೃಷ್ಟಿಯಲಿರುವಂತೆ, ಇಪ್ಪತ್ತೈದನೆ ಈಶ್ವರತತ್ವ ಕಥನ
ವ್ಯಕ್ತಿಗತಾತ್ಮ ಪುರುಷ, ಪ್ರಕೃತಿ, ಬುದ್ದಿ,ಅಹಂಕಾರ,ತನ್ಮಾತ್ರ, ಜ್ಞಾನೇಂದ್ರಿಯ
ಕರ್ಮೇಂದ್ರಿಯ,ಮಹಾಭೂತಾದಿ ಇಪ್ಪತ್ನಾಲ್ಕು ತತ್ವಕತೀತ ಈಶ್ವರತ್ವ ಶ್ರೇಯ!

ಈಶ್ವರವೆನೆ ಪರಬ್ರಹ್ಮ, ಪುರುಷ ಬಹು ರೂಪಾಕಾರ ತಳೆವ ವ್ಯಕ್ತಿಗತಾತ್ಮ
ಜೀವಾತ್ಮನ ಪ್ರಜ್ಞೆ ಚೈತನ್ಯ ಧನಾತ್ಮಕ ತತ್ವ, ಜಡ ಪ್ರಕೃತಿ ಗುಣ ಋಣಾತ್ಮ
ಅವ್ಯಕ್ತ ರೂಪಿಗೆ ಕರ್ಮಾನುಸಾರ ಮಾಯೆ, ಜೀವಾತ್ಮಕೆ ಪ್ರಕೃತಿ ಬೆರೆತ ವಿಕಸನ
ಇಪ್ಪತ್ತೊಂದು ತತ್ವವಾಗಿ ಪ್ರಕೃತಿ, ಕಟ್ಟವನ ಭೌತಿಕಕೆ ಸ್ಥೂಲ ಸೂಕ್ಷ್ಮಕಂತಃಕರಣ!

ಆವಿರ್ಭವಿಸದ ಅವ್ಯಕ್ತ ಸೂಕ್ಷ್ಮಾಣು, ಕಾರಣಕೆ ಮೂಲ ಕಾರಣ-ಬಿಂದು
ಪರಿಪಕ್ವತೆ ವಿಕಸನದೆ ಸ್ಪಂದನ,ತರಂಗವಾಗಿ ಹೊಮ್ಮಿ ಕಾರ್ಯ-ಬಿಂದು
ಮೂಲಾಧಾರಚಕ್ರದಿಂದವರೋಹಣ, ಶಬ್ದ ಕಾರಣದಿಂ ಕಾರ್ಯವಾಗುತ
ಕಾರ್ಯಬಿಂದುವಾಗಿ ನಾದಬಿಂದು, ಹೊರಹೊಮ್ಮಿಸಿ ಶಬ್ದ ಪರಿಷ್ಕರಿಸುತ!

ಪರಮೋನ್ನತ ಪರಾ ಮೂಲಸ್ವರೂಪ, ಶಕ್ತಿಮೂಲ ವಿಕಾಸದ ಮೂರುಹಂತ
ಹಂತಂತ ಶಕ್ತಿಸ್ಥಾಯಿ ಕಡಿತ, 'ಪರಾ' ಸ್ಥಾಯಿ-ಕನಿಷ್ಠ 'ಅಪರಾ' ಪರಿವರ್ತಿತ
ಶಕ್ತಿನಷ್ಟ ವಿಕಸನವಾಗರಳುತ, ಶಿವ-ಶಕ್ತಿ-ನರ ಹಂತಗಳಾಗಿ ಉದಯಿಸುತ
ಪರಮಸ್ವರೂಪ ನಾದೋತ್ಪತ್ತಿ ಗಣಿತ, ಪರಾ ಶಬ್ದಬ್ರಹ್ಮ ಲಲಿತೆಯಾಗಿ ಸ್ಮಿತ!

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
 

Submitted by makara Sun, 08/25/2013 - 19:05

In reply to by nageshamysore

ನಾಗೇಶರೆ,
ನೀವು ಕ್ಲಷ್ಟವಾದ ವಿಷಯಗಳನ್ನು ಬಹಳ ಸರಳವಾಗಿ ಕವಿತೆಯ ರೂಪದಲ್ಲಿ ಪೋಣಿಸಬಲ್ಲಿರಿ ಎಂದು ಮತ್ತೊಮ್ಮೆ ಸಾಬೀತು ಪಡಿಸಿದೆ ಈ ನಿಮ್ಮ ಸುಂದರ ಕವನ. ಇಡೀ ಪದ್ಯದಲ್ಲಿ ಎರಡೇ ಎರಡು ಪದಗಳು ಬಹುಶಃ ತಪ್ಪು ಗ್ರಹಿಕೆ ಅಥವಾ ಬೆರಳಚ್ಚಿನ ದೋಷದಿಂದ ಉಂಟಾಗಿರಬೇಕೆಂದುಕೊಳ್ಳುತ್ತೇನೆ. ಅದು ಆರನೇ ಪಂಕ್ತಿಯ ಮೂರನೇ ಸಾಲಿನಲ್ಲಿ
ಆ ಸಾಲು ಹೀಗಿದೆ: ಮೂಲಾಧಾರಚಕ್ರದಿಂದವರೋಹಣ, ಶಬ್ದ ಕಾರಣದಿಂ ಕಾರ್ಯವಾಗುತ
ಮೂಲಾಧಾರದಿಂದವರೋಹಣ=ಮೂಲಾಧಾರದಿಂದಾರೋಹಣ ಆಗಬೇಕು. ಏಕೆಂದರೆ ಅವರೋಹಣ ಎಂದರೆ ಇಳಿಯುವಿಕೆಯಾಗುತ್ತದೆ.
ಏಳನೆಯ ಪಂಕ್ತಿಯ ಮೂರನೇ ಸಾಲು ಅದು ಹೀಗಿದೆ:
ಹಂತಂತ ಶಕ್ತಿಸ್ಥಾಯಿ ಕಡಿತ, 'ಪರಾ' ಸ್ಥಾಯಿ-ಕನಿಷ್ಠ 'ಅಪರಾ' ಪರಿವರ್ತಿತ
ಪರಾ' ಸ್ಥಾಯಿ-ಕನಿಷ್ಠ =ಪರಾಸ್ಥಾಯಿ ಗರಿಷ್ಠ ಆಗಬೇಕು ಏಕೆಂದರೆ ಪರಾ ಹಂತದಲ್ಲಿ ಶಕ್ತಿಯ ಸಂಪೂರ್ಣ ಬಲವಿರುತ್ತದೆ. ಅದು ಕ್ರಮೇಣ ಕಡಿಮೆಗೊಳ್ಳುತ್ತಾ ವೈಖರೀಯಲ್ಲಿ ಕನಿಷ್ಠ ಸ್ಥಾಯಿಯನ್ನು ಸೇರುತ್ತದೆ.
ಒಟ್ಟಾರೆಯಾಗಿ ಒಂದು ಅದ್ಭುತ ರಸದೌತಣ ನೀಡಿತು ನಿಮ್ಮ ಈ ಕವನ.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

(ಇದಕ್ಕೂ ಮುಂಚೆ ನಾನೊಂದು ಪ್ರತಿಕ್ರಿಯೆಯನ್ನು ಸೇರಿಸಿದ್ದೆ ಆದರೆ ಅದು ಹೇಗೆ ಮಾಯವಾಯಿತೋ ತಿಳಿಯದು. ಇರಲಿ ಬಿಡಿ, ಸ್ವಲ್ಪ ಕಾಲಾವಕಾಶವನ್ನು ತೆಗೆದುಕೊಂಡು ಪರಿಪಕ್ವವಾದ ಕವಿತೆಯನ್ನು ಕೊಡಿ ಎಂದು ಭಿನ್ನವಿಸಿದ್ದೆ ನಿಮ್ಮ ಮೊದಲನೇ ಪ್ರತಿಕ್ರಿಯೆಗೆ ಉತ್ತರವಾಗಿ).

Submitted by nageshamysore Sun, 08/25/2013 - 20:52

In reply to by makara

ಶ್ರೀಧರರೆ, ತಿದ್ದುಪಡಿಸಿದ ರೂಪದೊಂದಿಗೆ ಅಂತಿಮ ಕೊಂಡಿಯನ್ನು ಬಿಡುಗಡೆ ಮಾಡಿದ್ದೇನೆ.
{ಆರೋಹಣ - ಗ್ರಹಿಕೆ ಸರಿಯಿದ್ದರೂ, ಬೆರಳಚ್ಚಲಿ ತಪ್ಪಾಗಿ ಹೋಗಿತ್ತು. ಕನಿಷ್ಠ - ಪದವನ್ನು 'ಅಪರಾ' ಗೆ ಹೊಂದಿಸಿ ಬಳಸಿದ್ದೆ. ಆದರೆ ಅದು 'ಪರಾ ಸ್ಥಾಯಿ-' ಗೆ ಜೋಡಣೆಯಾಗಿ ತಪ್ಪರ್ಥ ಕೊಡುತ್ತಿತ್ತು :-)}

ಆವಿರ್ಭವಿಸದ ಅವ್ಯಕ್ತ ಸೂಕ್ಷ್ಮಾಣು, ಕಾರಣಕೆ ಮೂಲ ಕಾರಣ-ಬಿಂದು
ಪರಿಪಕ್ವತೆ ವಿಕಸನದೆ ಸ್ಪಂದನ,ತರಂಗವಾಗಿ ಹೊಮ್ಮಿ ಕಾರ್ಯ-ಬಿಂದು
ಮೂಲಾಧಾರಚಕ್ರದಿಂದಾರೋಹಣ, ಶಬ್ದ ಕಾರಣದಿಂ ಕಾರ್ಯವಾಗುತ
ಕಾರ್ಯಬಿಂದುವಾಗಿ ನಾದಬಿಂದು, ಹೊರಹೊಮ್ಮಿಸಿ ಶಬ್ದ ಪರಿಷ್ಕರಿಸುತ!

ಪರಮೋನ್ನತ ಪರಾ ಮೂಲಸ್ವರೂಪ, ಶಕ್ತಿಮೂಲ ವಿಕಾಸದ ಮೂರುಹಂತ
ಹಂತಂತ ಶಕ್ತಿಸ್ಥಾಯಿ ಕಡಿತ, 'ಪರಾ' ಸ್ಥಾಯಿ-ಗರಿಷ್ಠ 'ಅಪರಾ' ಪರಿವರ್ತಿತ
ಶಕ್ತಿನಷ್ಟ ವಿಕಸನವಾಗರಳುತ, ಶಿವ-ಶಕ್ತಿ-ನರ ಹಂತಗಳಾಗಿ ಉದಯಿಸುತ
ಪರಮಸ್ವರೂಪ ನಾದೋತ್ಪತ್ತಿ ಗಣಿತ, ಪರಾ ಶಬ್ದಬ್ರಹ್ಮ ಲಲಿತೆಯಾಗಿ ಸ್ಮಿತ!
 
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು