೯೯. ಲಲಿತಾ ಸಹಸ್ರನಾಮ ೩೬೭ರಿಂದ ೩೭೧ನೇ ನಾಮಗಳ ವಿವರಣೆ

೯೯. ಲಲಿತಾ ಸಹಸ್ರನಾಮ ೩೬೭ರಿಂದ ೩೭೧ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೩೬೭-೩೭೧

Pratyak-citī-rūpā प्रत्यक्-चिती-रूपा (367)

೩೬೭. ಪ್ರತ್ಯಕ್-ಚಿತೀ-ರೂಪಾ

           ಪ್ರತ್ಯಕ್ ಎಂದರೆ ಒಳಗಿರುವ ಆತ್ಮನ ಕಡೆ ತಿರುಗಿರುವ ಎಂದರ್ಥ ಮತ್ತು ಚಿತ್ ಎಂದರೆ ಚೈತನ್ಯ ಅಥವಾ ಪ್ರಜ್ಞೆ. ದೇವಿಯು ಅಂತರಾತ್ಮವೆಂದು ಕರೆಯಲ್ಪಡುವ ಒಳಗಿನ ಚೈತನ್ಯದ ಸ್ವರೂಪದಲ್ಲಿದ್ದಾಳೆ. ಪ್ರತ್ಯಕ್ ಎನ್ನುವುದು ಪರಾಕ್ ಶಬ್ದಕ್ಕೆ ವಿರುದ್ಧ ಪದವಾಗಿದೆ. ಪರಾಕ್ ಅಂದರೆ ‘ಇಂದ್ರಿಯಗಳ ಮೂಲಕ ಹೊರಗೆ ತಿರುಗಿರುವ’ ಎಂದರ್ಥ.  ಒಳಗಿರುವ ಚೈತನ್ಯವನ್ನು ಅತ್ಯುನ್ನತ ಪ್ರಜ್ಞೆಯೆಂದು ಪರಿಗಣಿಸಲಾಗಿದೆ. ಪ್ರಾಣ ಶಕ್ತಿಯು ಒಳಗಿನ ಪ್ರಜ್ಞೆಯೊಂದಿಗೆ ಪ್ರತಿಕ್ರಿಯಿಸುತ್ತಾ ಅದು ಉನ್ನತ ಪ್ರಜ್ಞೆಯನ್ನು ಪಡೆಯುವ ದಾರಿಯತ್ತ ಕರೆದೊಯ್ಯುತ್ತದೆ. ಕೆಳಸ್ತರದ ಪ್ರಜ್ಞೆ ಅಥವಾ ಉನ್ನತ ಸ್ತರದ ಪ್ರಜ್ಞೆ ಎರಡೂ ಮನಸ್ಸಿನ ಪರಿಶುದ್ಧತೆಯ ಮೇಲೆ ಅವಲಂಬಿಸಿವೆ. ಮನಸ್ಸಿನ ಪರಿಶುದ್ಧತೆಯು, ಪಂಚೇಂದ್ರಿಯಗಳನ್ನು ಉಪಯೋಗಿಸುವ ಪ್ರಮಾಣದ ಮೇಲೆ ಅವಲಂಬಿಸಿರುತ್ತದೆ. ಒಳಗಡೆಗೆ ನೋಡಿಕೊಳ್ಳುವುದು (ಆತ್ಮಾವಲೋಕನ) ಎಂದರೆ, ಅದು ಜೀವ ಶಕ್ತಿಯು (ಪ್ರಾಣವು) ಪ್ರಜ್ಞೆಯೊಂದಿಗೆ (ಚೈತನ್ಯದೊಂದಿಗೆ) ಪ್ರತಿಕ್ರಿಯಿಸುವುದಾಗಿದೆ. ಈ ಚೈತನ್ಯವನ್ನೇ ಪರಮಾತ್ಮ ಅಥವಾ ವ್ಯಕ್ತವಾಗದ ಪರಬ್ರಹ್ಮ ಸ್ವರೂಪವೆಂದು ಕರೆಯಲಾಗುತ್ತದೆ ಮತ್ತದುವೇ ಬ್ರಹ್ಮದ ನಿಜವಾದ ಸ್ವರೂಪವಾಗಿದೆ. ಯಾವಾಗ ದೇವಿಯನ್ನು ಒಳಗಿರುವ ಚೈತನ್ಯ (ಪ್ರಜ್ಞೆ) ಎಂದು ಸಂಭೋದಿಸಲಾಗುತ್ತದೆಯೋ ಆಗ ಅದು ಪರಬ್ರಹ್ಮದ ಅವ್ಯಕ್ತ ಸ್ವರೂಪವನ್ನು ಕುರಿತು ಹೇಳಿದಂತೆ. ಇದರ ಕುರಿತಾದ ಹೆಚ್ಚಿನ ವಿವರಗಳನ್ನು ನಾಮ ೩೯೭ ಮತ್ತು ೩೯೮ರ ಚರ್ಚೆಗಳಲ್ಲಿ ನೋಡೋಣ.

.         ಇದನ್ನೇ ಕಠೋಪನಿಷತ್ತು (೨.೧.೧) ಬಹಳ ಸುಂದರವಾಗಿ ವರ್ಣಿಸುತ್ತದೆ, ಅದರಲ್ಲಿ ಹೀಗಿದೆ "ಸ್ವಯಂಭುವಾದ (ತನ್ನಷ್ಟಕ್ಕೇ ತಾನೇ ಸೃಷ್ಟಿಗೊಂಡ) ಭಗವಂತನು ಪಂಚೇಂದ್ರಿಯಗಳನ್ನು ಹೊರಹೋಗುವ ಹುಟ್ಟುಗುಣದ ದೋಷದೊಂದಿಗೆ ಅವುಗಳನ್ನು ಸೃಷ್ಟಿಸಿದ್ದಾನೆ. ಆದ್ದರಿಂದ ಜೀವಿಗಳು ಹೊರಗಿನ ವಸ್ತುಗಳನ್ನಷ್ಟೇ ನೋಡುತ್ತವೆಯೇ ಹೊರತು ಅವುಗಳು ಒಳಗಿನ ಆತ್ಮವನ್ನು ನೋಡಲಾರವು. ಅಪರೂಪವಾಗಿ ಅಮರತ್ವವನ್ನು ಬಯಸುವ ಒಬ್ಬ ಬುದ್ಧಿವಂತನು ತನ್ನ ಇಂದ್ರಿಯಗಳನ್ನು ಬಾಹ್ಯ ವಸ್ತುಗಳಿಂದ ಒಳಸೆಳೆದುಕೊಂಡು ಅಂತರಾತ್ಮವನ್ನು ನೋಡಬಲ್ಲವನಾಗಿರುತ್ತಾನೆ”.

Paśyantī पश्यन्ती (368)

೩೬೮. ಪಶ್ಯಂತೀ

           ನಾಮ ೩೬೬ರ ಚರ್ಚೆಯಲ್ಲಿ ಪಶ್ಯಂತೀ ಎನ್ನುವುದು ಶಬ್ದೋತ್ಪತ್ತಿಯ ಎರಡನೇ ಹಂತವೆಂದು ಹೇಳಲಾಗಿದೆ. ಶಿವ ಮತ್ತು ಶಕ್ತಿಯರ ಐಕ್ಯತೆಯು ಶಬ್ದದ ವ್ಯುತ್ಪತ್ತಿಯಲ್ಲಿ ಪ್ರಾರಂಭಿಕ ಹಂತವಾದ ‘ಪರಾ’ ಆಗಿದೆ. ಈ ಪ್ರಾಥಮಿಕ ಹಂತವು ಮುಂದಿನ ಹಂತವಾದ ‘ಪಶ್ಯಂತೀ’ಯೆಡೆಗೆ ಕೊಂಡೊಯ್ಯುತ್ತದೆ. ’ಪಶ್ಯಂತೀ’ಯಲ್ಲಿ ಶಬ್ದ ಸೃಷ್ಟಿಯ ಹಂತದಲ್ಲಿನ ಮೊದಲನೇ ಪ್ರತ್ಯೇಕತೆಯು ಒಡಮೂಡಲು ಪ್ರಾರಂಭವಾಗುತ್ತದೆ. ಈ ಹಂತದಲ್ಲಿ ಶಬ್ದವು ಹೆಚ್ಚು ಗ್ರಹಿಸಲ್ಪಡಬಹುದಾದ ಸ್ಥಾಯಿಯನ್ನು ಹೊಂದುತ್ತದಾದರೂ ಅದು ಪ್ರತ್ಯೇಕಗೊಳ್ಳದೇ ಇರುತ್ತದೆ ಮತ್ತು ಶ್ರವಣಕ್ಕೆ ನಿಲುಕದೇ ಇರುವ ಸ್ಥಿತಿಯು ಮುಂದುವರೆಯುತ್ತದೆ. ಹಿಂದಿನ ನಾಮವು ಒಳಗಿರುವ ಚೈತನ್ಯವನ್ನು ಅರಿಯಬೇಕಾದರೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿತು. ಆದರೆ ಆತ್ಮಾವಲೋಕನ ಮಾಡಿಕೊಂಡಾಗ ಏನಾಗುತ್ತದೆ? ಅದು ಪ್ರತ್ಯೇಕಗೊಳ್ಳುವಿಕೆಯ ಆರಂಭಿಕ ಹಂತಕ್ಕೆ ಕೊಂಡೊಯ್ದು ದ್ರಷ್ಠಾರರ ಸ್ವರೂಪದಲ್ಲಿ ಆತ್ಮವು ಎಲ್ಲವನ್ನೂ ಸ್ವತಃ ತನ್ನದೇ ಎನ್ನುವುದನ್ನು ಅರಿಯಲು ತೊಡಗುತ್ತದೆ.

           ಈ ನಾಮವು ದೇವಿಯು ಮಾತಿನ ಸ್ವರೂಪದಲ್ಲಿದ್ದಾಳೆಂದು ಹೇಳುತ್ತದೆ. ಇದರ ಹಿಂದಿರುವ ತತ್ವವೇನೆಂದರೆ ದೇವಿಯು ಮಾತಿನ ಆರಂಭ ಮತ್ತು ಮುಕ್ತಾಯವಾಗಿದ್ದಾಳೆ. ಮಾತು ಅವಳಲ್ಲಿ ಉದ್ಭವವಾಗಿ ಆಕೆಯಲ್ಲಿಯೇ ಲಯವಾಗುತ್ತದೆಂದು ಹೇಳಲಾಗುತ್ತದೆ.

Paradevatā परदेवता (369)

೩೬೯. ಪರದೇವತಾ

           ದೇವಿಯು ಇತರೇ ದೇವ-ದೇವಿಯರಿಗೆ ತನ್ನ ಶಕ್ತಿಯನ್ನು ಹಸ್ತಾಂತರಿಸುತ್ತಾಳೆ ಎನ್ನುವುದರ ಅರ್ಥ ಆಕೆಯು ದೇವಾನುದೇವತೆಗಳಲ್ಲೆಲ್ಲಾ ಅತ್ಯುನ್ನತವಾದವಳು ಎನ್ನುವುದೇ ಆಗಿದೆ.

Madhyamā मध्यमा (370)

೩೭೦. ಮಧ್ಯಮಾ

         ‘ಪಶ್ಯಂತೀ’ ಹಂತದ ಮುಂದಿನ ಉನ್ನತ ಹಂತವೇ ‘ಮಧ್ಯಮಾ’ ಆಗಿದೆ. ಈ ಹಂತವು ಮಾತಿನ ಉಗಮ ಮತ್ತು ಅಂತ್ಯಗಳ ನಡುವಿನ ಹಂತವಾಗಿದೆ. ಈ ಹಂತದಲ್ಲಿ ದ್ವೈತ್ವವು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಪ್ರಜ್ಞೆಯ ಅವಸ್ಥೆಯು ಮಾನಸಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಹೊಸ ವಿಷಯಗಳನ್ನು ತಿಳಿದುಕೊಂಡು ಅದನ್ನು ತರ್ಕಿಸುವುದರ ಮೂಲಕ ಉಂಟಾದ ಗ್ರಹಿಕೆಯನ್ನು ಆಧರಿಸಿ ವಿಶ್ಲೇಷಣೆ ಮತ್ತು ವಿವೇಚನೆಯ ಸಾಮರ್ಥ್ಯವನ್ನು ಮನಸ್ಸು ಗಳಿಸಿಕೊಳ್ಳುತ್ತದೆ. ಆದರೆ ಪಶ್ಯಂತೀ ಹಂತದಲ್ಲಿ ಮನಸ್ಸು ತಾನು ಗಳಿಸಿಕೊಂಡ ಸಾಮರ್ಥ್ಯವನ್ನು ವ್ಯಕ್ತಪಡಿಸುವ ಸ್ಥಿತಿಯಲ್ಲಿ ಇನ್ನೂ ಇರುವುದಿಲ್ಲ. ಈ ಹಂತದಲ್ಲಿ ಅಂತಕರಣದಲ್ಲಿನ ಒಂದು ವಸ್ತುವಾಗಿರುವ ಬುದ್ಧಿಯು, ಪ್ರಜ್ಞೆಯ ಮೇಲೆ ಪ್ರಭಾವವನ್ನು ಬೀರಲು ಪ್ರಾರಂಭಿಸುತ್ತದೆ ಮತ್ತದು ಅವ್ಯಕ್ತ ರೂಪದ ಹಂತದಲ್ಲಿರುತ್ತದೆ. ಈ ಹಂತದಲ್ಲಿ ಒಬ್ಬನು ತನ್ನಷ್ಟಕ್ಕೆ ತಾನು ಮಾತನಾಡಿಕೊಳ್ಳಬಹುದಾಗಿದೆ. ಈ ಹಂತದಲ್ಲಷ್ಟೇ ಮಂತ್ರಗಳನ್ನು ಉಚ್ಛರಿಸಲಾಗುತ್ತದೆ. ಏಕೆಂದರೆ, ಮಂತ್ರ ಜಪವನ್ನು ಉಚ್ಛರಿಸುವಾಗ ಒಳಗಿನ ಅಂತರಾತ್ಮವೊಂದೇ ಕೇಳಿಸಿಕೊಳ್ಳಬೇಕು ಮತ್ತು ಬೇರೆ ಯಾರೂ ಅದನ್ನು ಕೇಳಿಸಿಕೊಳ್ಳಬಾರದು ಅವನ ಭೌತಿಕ ದೇಹವೂ ಸಹ. ಈ ಹಂತದಲ್ಲಿ ಉಚ್ಛರಿಸುತ್ತಿರುವ ಆತ್ಮ ಮಾತ್ರವೇ ಅದನ್ನು ಕೇಳಿಸಿಕೊಳ್ಳಲು ಸಾಧ್ಯ. ಪಿಸುಗುಟ್ಟುವಿಕೆಯು ಈ ಹಂತದಿಂದ ಪ್ರಾರಂಭವಾಗುತ್ತದೆ.

           ಹಂತ ಹಂತವಾಗಿ ಶಬ್ದ ಸ್ವರೂಪದಲ್ಲಿ ದೇವಿಯ ಆವಿರ್ಭಾವವು ಹೇಗೆ ಆಗುತ್ತದೆ ಎನ್ನುವುದನ್ನು ಈ ನಾಮಗಳಲ್ಲಿ ಚರ್ಚಿಸಲಾಗಿದೆ.

Vaikhari-rūpā वैखरि-रूपा (371)

೩೭೧. ವೈಖರೀ-ರೂಪಾ

          ವೈಖರಿಯು ಶಬ್ದದ ವ್ಯುತ್ಪತ್ತಿಯಲ್ಲಿ ನಾಲ್ಕನೇ ಮತ್ತು ಅಂತಿಮ ಹಂತವಾಗಿದೆ. ಈ ಹಂತದಲ್ಲಿಯೇ ಶಬ್ದವು ಕೇಳಲ್ಪಡುತ್ತದೆ. ಪ್ರಾಣದ ಒಂದು ರೂಪವಾದ ವೈಖರೀ ಎನ್ನುವುದರ ಮೂಲಕ ಶಬ್ದವು ಉತ್ಪನ್ನವಾಗುವುದರಿಂದ ಈ ಹಂತವನ್ನು ವೈಖರೀ ಎಂದು ಕರೆಯಲಾಗುತ್ತದೆ. ಈ ಹಂತವು ಶಬ್ದೋತ್ಪತ್ತಿಯಲ್ಲಿ ‘ಅಪರಾ’ ಅಥವಾ ಅತ್ಯುನ್ನತವಲ್ಲದ್ದು ಎಂದು ಕರೆಯಲ್ಪಟ್ಟಿದೆ. ಈ ಹಂತದಲ್ಲಿ ಶಬ್ದವು ಸಂಪೂರ್ಣ ಬೆಳವಣಿಗೆಯಾಗಿ ಕಾರ್ಯರೂಪಕ್ಕೆ ಬರುವುದಲ್ಲದೆ ಇದು ಮಾಯೆಯ ಅಂಶಗಳಾದ ಸಮಯ ಹಾಗೂ ಸ್ಥಳಗಳೊಂದಿಗೆ ಮಿಳಿತವಾಗಿರುತ್ತದೆ. ವಾಸ್ತವವಾಗಿ ಶಬ್ದ/ಮಾತಿನ ವಿಕಾಸದ ಸಿದ್ಧಾಂತವು ಸಂಪೂರ್ಣವಾಗಿ ಜೀವಶಕ್ತಿಯಾದ ಪ್ರಾಣವನ್ನು ಕಾರ್ಯರೂಪಕ್ಕೆ ತರುವುದರ ಮೇಲೆ ಅವಲಂಬಿತವಾಗಿದೆ. ಮಧ್ಯಮಾದಲ್ಲಿ ಪಿಸುಗುಟ್ಟುವಿಕೆಯ ಹಂತದಲ್ಲಿರುವ ಶಬ್ದವು ಸಂಪೂರ್ಣವಾಗಿ ಮಾತಿನ ಸ್ವರೂಪವಾಗಿ ಮಾರ್ಪಟ್ಟು ವೈಖರೀ ರೂಪದಲ್ಲಿ ಹೊರಹಾಕಲ್ಪಡುತ್ತದೆ. ಇ‌ಚ್ಛೆಯು ಮಾತಿನ ತಳಹದಿಯಾಗಿದ್ದು ಅದು ಅಂತಿಮವಾಗಿ ಚೈತನ್ಯದಲ್ಲಿ ಲೀನವಾಗುತ್ತದೆ ಎಂದು ಹೇಳಲಾಗುತ್ತದೆ. ಇಲ್ಲಿ ಚೈತನ್ಯದ ಮಹತ್ವವನ್ನು ಪುನರುಚ್ಛರಿಸಿರುವುದು ಅದನ್ನು ಒತ್ತು ಕೊಟ್ಟು ಹೇಳಲಿಕ್ಕಾಗಿ. 

******

       ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 367-371 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Fri, 08/23/2013 - 05:54

ಶ್ರೀಧರರೆ, ೯೯. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಸಾರ ಪರಿಷ್ಕರಣೆಗೆ ಸಿದ್ದ. ಆಫೀಸಿಗೆ ತಡವಾಗುತ್ತಿದೆಯಾಗಿ ಸ್ವಪರಿಷ್ಕರಣೆ ಮಾಡಲಾಗಲಿಲ್ಲ. ಹಾಗೆಯೆ ಹಾಕುತ್ತಿದ್ದೇನೆ :-)

ಲಲಿತಾ ಸಹಸ್ರನಾಮ ೩೬೭-೩೭೧
________________________________________

೩೬೭. ಪ್ರತ್ಯಕ್-ಚಿತೀ-ರೂಪಾ
ಇಂದ್ರೀಯದಿಂ ಬಾಹ್ಯಕೆ 'ಪರಾಕ್', ಆತ್ಮಾಂತರ್ಮುಖಿಯೆ 'ಪ್ರತ್ಯಕ್'
ಅಂತರ್ಚೈತನ್ಯದತ್ಯುನ್ನತ ಪ್ರಜ್ಞೆ ಪ್ರಾಣದೊಳ ಪ್ರಜ್ಞೆಗೆ ಮಾರ್ಗದರ್ಶಕ
ಪಂಚೇಂದ್ರಿಯದಿಂ ಮನಪರಿಶುದ್ಧತೆ ಲೆಕ್ಕ, ಪ್ರಜ್ಞಾ ಸ್ತರ ಅವಲಂಬಿತ
ಆತ್ಮಾವಲೋಕನ ಪ್ರಾಣ ಪ್ರತಿಕ್ರಿಯೆ ಪ್ರಜ್ಞೆ, ಪ್ರತ್ಯಕ್ಚಿತೀರೂಪಾಲಲಿತ!

ಚಿತ್ ಚೈತನ್ಯ ಪ್ರಜ್ಞೆಯೆ ಪರಮಾತ್ಮ, ಅವ್ಯಕ್ತ ಪರಬ್ರಹ್ಮ ನಿಜಸ್ವರೂಪ
ಸ್ವಯಂಭು ಸೃಷ್ಟಿ ಪಂಚೇಂದ್ರಿಯ, ಬಾಹ್ಯಾವಲೋಕನ ಸೀಮಿತ ದರ್ಪ
ಶೋಧಿಸಲರಿತ ಪ್ರಜ್ಞಾವಂತ ಅಮರತ್ವ ಬಯಸಿ ಅಂತರ್ದರ್ಶಿಸುವತ್ತ
ತಿರುಗಿಸಿ ನೋಡುವನಂತರಾತ್ಮ, ಇಂದ್ರೀಯಗಳ್ಹುಟ್ಟುದೋಷ ಗೆಲ್ಲುತ!

೩೬೮. ಪಶ್ಯಂತೀ 
ಚೈತನ್ಯವರಿಯೆ ಆತ್ಮಾವಲೋಕನ, ಆರಂಭ ಆತ್ಮದರಿವಿನ ಸ್ವತಃ 
ದೇವಿ ಪಶ್ಯಂತೀ ಶಬ್ದರೂಪಿಣಿ, ಮಾತುದ್ಭವಲಯ ಲಲಿತಾಮಯ
ಶಿವಶಕ್ತಿ ಐಕ್ಯತೆ ಶಬ್ದೋತ್ಪತ್ತಿಯಾರಂಭ ಪರಾ, ವಿಕಸನ ಪಶ್ಯಂತೀ
ಶ್ರವಣಾತೀತ, ಗ್ರಹಣಾಸ್ಥಾಯಿ ಪ್ರತ್ಯೇಕದತ್ತ, ಸಿದ್ದವಾಗೊ ಸರತಿ!

೩೬೯. ಪರದೇವತಾ 
ದೇವಾನುದೇವತೆಗಳಲೆಲ್ಲ ಅತ್ಯುನ್ನತ ಲಲಿತಾಶಕ್ತಿ
ದೇವದೇವಿಯರಿಗಸ್ತಾಂತರಿಸುತ ಪಾಲಿಸೊ ಯುಕ್ತಿ
ಶಬ್ದರೂಪ ಜ್ಞಾನ ಪ್ರಸರಿಸುತ ಪರದೇವತಾ ಲಲಿತ
ಪರಾಪಶ್ಯಂತಿ ಜ್ಞಾನ ಮಧ್ಯಮಾವೈಖರೀ ತಲುಪುತ!

೩೭೦. ಮಧ್ಯಮಾ 
ಪಶ್ಯಂತೀಯಿಂದ ಮಧ್ಯಮಾ, ಹಂತಹಂತ ಶಬ್ದರೂಪಿಣಿ ಆವಿರ್ಭಾವ
ತಾರ್ಕಿಕಗ್ರಹಿಕೆ ವಿಶ್ಲೇಷಣೆ ವಿವೇಚನಾ ಶಕ್ತಿ, ಅವ್ಯಕ್ತಪ್ರಜ್ಞೆ ಸ್ವಪ್ರಭಾವ
ಅತ್ಮದೊಂದಿಗಾತ್ಮ ಶ್ರವಣ ಮಂತ್ರೋಚ್ಛಾರ, ಭೌತಿಕದೇಹಕೂ ದೂರ
ಪಿಸುಗುಟ್ಟುವ ಹಂತ ದೇವಿ ಜತೆ ಸಂವಹನ, ಮಧ್ಯಮಾದಾಟೆ ಸ್ವರ!

೩೭೧. ವೈಖರೀ-ರೂಪಾ 
ಶಬ್ದೋತ್ಪತ್ತಿ ಅಂತಿಮ ಹಂತ, ಪ್ರಾಣದೊಂದು ರೂಪ ವೈಖರೀಯಿಂದುತ್ಪನ್ನ
ಶ್ರಾವ್ಯ ಪದ ಅಪರಾ ಹಂತ, ಪೂರ್ಣ ದ್ವೈತ ಕಾಲ ದೇಶ ಮಾಯಾ ಮಿಲನ
ಶಬ್ದ ವಿಕಸನ ಸಿದ್ದಾಂತ, ಜೀವಶಕ್ತಿ ಕಾರ್ಯರೂಪವಾಗುವ ವೈಖರೀರೂಪಾ
ಇಚ್ಛೆಯ ತಳಹದಿ ಮಾತಾಗಿ, ಅಂತಿಮ ಚೈತನ್ಯ ವಿಲೀನಕೆ ಲಲಿತಾ ಕೃಪಾ!

ಧನ್ಯವಾದಗಳೊಂದಿಗೆ, 
ನಾಗೇಶ ಮೈಸೂರು

ನಾಗೇಶರೆ,
ಈ ಕಂತಿನ ಪದ್ಯಗಳು ಬಹಳ ಚೆನ್ನಾಗಿ ಮೂಡಿ ಬಂದಿವೆ. ಎಲ್ಲಾ ಕವನಗಳು ಮನಸ್ಸಿಗೆ ಮುದನೀಡಿದವು. ನನ್ನ ಆಕ್ಷೇಪಣೆ ಏನಿದ್ದರೂ ಸಹ ಈ ಒಂದು ಪದಕ್ಕೆ ಮಾತ್ರ; ಅದು ಈ ಕವನದ ಸಾಲಿನಲ್ಲಿರುವ ದರ್ಪ. ಇದರ ಬದಲು ಬೇರೆ ಯಾವುದಾದರೂ ಪದ ಬಳಸಲು ಸಾಧ್ಯವೇ ನೋಡಿ.
೩೬೭. ಪ್ರತ್ಯಕ್-ಚಿತೀ-ರೂಪಾ ...೨ನೇ ಪಂಕ್ತಿಯ ೨ನೇ ಸಾಲು.
ಸ್ವಯಂಭು ಸೃಷ್ಟಿ ಪಂಚೇಂದ್ರಿಯ, ಬಾಹ್ಯಾವಲೋಕನ ಸೀಮಿತ ದರ್ಪ
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ಶ್ರೀಧರ್‌ಜಿ, ನಿಮ್ಮ+ ನಾಗೇಶರ ನಾಗಾಲೋಟ..! ೩-೪ ದಿನ ಸಂಪದದಲ್ಲಿರಲಿಲ್ಲ..ಆಗಲೇ ನೀವು ೩೭೦ ದಾಟಿಯಾಯಿತು! ಈ ನಾಗೇಶರ ಕವನದಲ್ಲಿ-"ಸ್ವಯಂಭು ಸೃಷ್ಟಿ ಪಂಚೇಂದ್ರಿಯ, ಬಾಹ್ಯಾವಲೋಕನ ಸೀಮಿತ ದರ್ಪ": ಇಲ್ಲಿ ನಿಮ್ಮ ವಿವರಣೆಯಲ್ಲಿ "ಅಮರತ್ವವನ್ನು ಬಯಸುವ ಒಬ್ಬ ಬುದ್ಧಿವಂತನು ತನ್ನ ಇಂದ್ರಿಯಗಳನ್ನು ಬಾಹ್ಯ ವಸ್ತುಗಳಿಂದ ಒಳಸೆಳೆದುಕೊಂಡು..." ಎಂದು ಬರೆದಿರುವುದರಿಂದ "ಬಾಹ್ಯಾವಲೋಕನಕೆ ಸೀಮಿತ ದಡ್ಡ" ಸರಿಯಾಗುವುದೆ?

ಗಣೇಶ್‌ಜಿ,
ನೀವು ಸೂಚಿಸಿರುವ ಅರ್ಥವೇನೋ ಸರಿಯಾಗಿದೆ; ಆದರೆ ತ್ರಾಸ ಬಂದಿರುವುದು ಆ ಸಾಲಿನ ಪ್ರಾಸಕ್ಕೆ :)
ನಿಮ್ಮಂತಹ ಜಾಣ ವಿದ್ಯಾರ್ಥಿಗಳಿಗೆ ಕಡ್ಡಾಯ ಹಾಜರಿಯಿಂದ ವಿನಾಯಿತಿಯನ್ನು ಬಹು ಹಿಂದೆಯೇ ಕೊಟ್ಟಾಯ್ತಲ್ಲ; ಇನ್ನೇಕೆ ಚಿಂತೆ ಬಿಡಿ :) ನಾವು ನಾಗಾಲೋಟದಿಂದ ಓಡುವವರಾದರೆ ನೀವು ಮನೋವೇಗದಿಂದ ಓಡುವವರಲ್ಲವೇ?

ಶ್ರೀಧರ್‌ಜಿ, ದಡ್ಡನಿಗೆ ಪ್ರಾಸ ಸರಿಯಾಗಲು ಅಂಡಾಂಡ ಸ್ವಾಮಿಗಳ ಪ್ರಕಾರ ಮೊದಲ ಸಾಲನ್ನು " ಚಿತ್ ಚೈತನ್ಯ ಪ್ರಜ್ಞೆಯೆ ಪರಮಾತ್ಮ, ಅವ್ಯಕ್ತ ಪರಬ್ರಹ್ಮ ನಿಜಸ್ವರೂಪ" ಬದಲಾಯಿಸಿ "......ನಿಜಬ್ರಹ್ಮಾಂಡ" ಮಾಡಿದರಾಯಿತು. :)

ಗಣೇಶ್ ಜಿ , ನೀವು ಅಖಾಡಕ್ಕೆ ಬಂದರೆ ಸಾಕು,'ಲೈವ್ ವೈರ್' ಹರಿದಂತೆ ಸಂಭ್ರಮ :-)

ಇಬ್ಬರ ಪಂಡಿತ ಸಂಭಾಷಣೆಯ ನಡುವೆ, ಒಂದು ಪಾಮರನ ಸರಳ ಬದಲಾವಣೆ - ಇದು ಮೂಲ ವಿವರಣೆಗೆ / ಸವರಣೆಗೆ ಒಗ್ಗೀತಾ ನೋಡಿ? ಆಗ ದರ್ಪಕ್ಕೆ ವಿನಯದಿಂದಲೆ 'ಬೈ' ಹೇಳಬಹುದು (ಬರಿ ಸೀಮಿತ ಬಾಹ್ಯಾಲೋಚನೆ ಪ್ರಚೋದಿಸುವ ಇಂದ್ರೀಯಗಳ ದರ್ಪ - ಎನ್ನುವರ್ಥದಲ್ಲಿ ಅದನ್ನು ಬಳಸಿದ್ದೆ)

ಚಿತ್ ಚೈತನ್ಯ ಪ್ರಜ್ಞೆಯೆ ಪರಮಾತ್ಮ, ಅವ್ಯಕ್ತ ಪರಬ್ರಹ್ಮ ನಿಜ ಸ್ವರೂಪ
ಸ್ವಯಂಭು ಸೃಷ್ಟಿ ಪಂಚೇಂದ್ರಿಯ, ಬಾಹ್ಯಸ್ಪಂದನಕಷ್ಟೆ ಸೀಮಿತ ರೂಪ
ಶೋಧಿಸಲರಿತ ಪ್ರಜ್ಞಾವಂತ ಅಮರತ್ವ ಬಯಸಿ ಅಂತರ್ದರ್ಶಿಸುವತ್ತ
ತಿರುಗಿಸಿ ನೋಡುವನಂತರಾತ್ಮ, ಇಂದ್ರೀಯಗಳ್ಹುಟ್ಟುದೋಷ ಗೆಲ್ಲುತ!

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
 

ದರ್ಪಕ್ಕೆ ವಿನಯದಿಂದಲೆ 'ಬೈ' ಹೇಳಬಹುದು :) ಕವಿಗೂ ಸಾಮಾನ್ಯನಿಗೂ ಇರುವ ವ್ಯತ್ಯಾಸ ನೋಡಿ- ನಾನು ಪ್ರಾಸಕ್ಕಾಗಿ "ಬ್ರಹ್ಮಾಂಡ" ಸುತ್ತಿದೆ. ತಾವು ಒಂದು ಅಕ್ಷರ ತೆಗೆದು ಸರಿಪಡಿಸಿದಿರಿ!

ಗಣೇಶ್ ಜಿ, ಈ ದಿನಗಳಲ್ಲಿ ಪ್ರಾಸವೆ ಅಭಾಸವೇನೊ ಅಂದುಕೊಂಡು ಹಿಂಜರಿಯುತಿದ್ದವನಿಗೆ, 'ಪ್ರೋತ್ಸಾಹದ ಬ್ರಹ್ಮಾಂಡ ಶಕ್ತಿಯ' ಟಾನಿಕ್ ಕುಡಿಸಿದ ಗುರುಗಳು ನೀವು. ಅದರ ಫಲ ಎಲ್ಲಿಂದಾದರೂ ಪ್ರಾಸ ಹಿಡಿದು ತರಲು ಶಕ್ತಿ ನೀಡುತ್ತಿದೆ ನೋಡಿ  - ಅದೂ ಸರಳವಾಗಿ :-) (ಪ್ರಾಸೆ ಪ್ರಾಸೋತ್ಪತ್ತಿಃ - ಅನ್ನಬಹುದೆ?)

ಶ್ರೀಧರರೂ ಈ ರೂಪಕ್ಕೆ 'ಜೈ' ಅಂದಿದ್ದಾರೆ -  ಇದನ್ನೆ ಅಂತಿಮಗೊಳಿಸಿ ಬಿಡುಗಡೆ ಮಾಡುತ್ತಿದ್ದೇನೆ.
 
ಧನ್ಯವಾದಗಳೊಂದಿಗೆ 
- ನಾಗೇಶ ಮೈಸೂರು