೧೦೦. ಲಲಿತಾ ಸಹಸ್ರನಾಮ ೩೭೨ರಿಂದ ೩೭೫ನೇ ನಾಮಗಳ ವಿವರಣೆ

೧೦೦. ಲಲಿತಾ ಸಹಸ್ರನಾಮ ೩೭೨ರಿಂದ ೩೭೫ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೩೭೨-೩೭೫

Bhakta-mānasa-haṁsikā भक्त-मानस-हंसिका (372)

೩೭೨. ಭಕ್ತ-ಮಾನಸ-ಹಂಸಿಕಾ

         ಈ ನಾಮದೊಂದಿಗೆ ಒಂದು ಸಣ್ಣ ಕಥೆಯು ಹೆಣೆದುಕೊಂಡಿದೆ. ಸೃಷ್ಟಿಕರ್ತನಾದ ಬ್ರಹ್ಮದೇವರು ಕೈಲಾಸ ಪರ್ವತದ ಮೇಲೆ ಮಾನಸ ಸರೋವರ ಎನ್ನುವ ಕೊಳವನ್ನು ಸೃಷ್ಟಿಸಿದ. ಆ ಕೊಳದಲ್ಲಿನ ನೀರು ಅತ್ಯಂತ ಪರಿಶುದ್ಧವಾದದ್ದೆಂದು ಪ್ರಸಿದ್ಧಿಯಾಗಿದೆ. ಆ ಕೊಳವು ಇಂದಿಗೂ ಇದೆ. ಹಂಸಗಳು ಯಾವಾಗಲೂ ಶುದ್ಧತೆಯನ್ನು ಬಯಸುತ್ತವೆಯಾದ್ದರಿಂದ ಅವುಗಳು ಈ ಕೊಳದ ಸುತ್ತಲೂ ಗುಂಪುಗೂಡುತ್ತವೆ. ಕೊಳವನ್ನು (ಸರೋವರವನ್ನು) ಮನಸ್ಸಿಗೆ (ಅದು ಯಾವಾಗಲೂ ಪರಿಶುದ್ದವಾಗಿರ ಬೇಕು) ಹೋಲಿಸಲಾಗಿದೆ ಮತ್ತು ಹಂಸಗಳನ್ನು (ಸಾಮಾನ್ಯವಾಗಿ ಒಂದು ಜೋಡಿ) ಇವುಗಳನ್ನು ಜೀವಾತ್ಮ (ವ್ಯಕ್ತಿಗತ ಆತ್ಮ) ಮತ್ತು ಪರಮಾತ್ಮ (ಪರಬ್ರಹ್ಮ) ಇವನ್ನು ಲಲಿತಾಂಬಿಕೆಯೊಂದಿಗೆ ಹೋಲಿಸಲಾಗುತ್ತದೆ. ಈ ಕಥೆಯು ಹೇಳುವುದೇನೆಂದರೆ ಪರಬ್ರಹ್ಮಕ್ಕೆ ಶುದ್ಧವಾದ ಮನಸ್ಸೆಂದರೆ ಉತ್ಕಟವಾದ ಬಯಕೆ ಹಾಗಾಗಿ ಅದು ಯಾವಾಗಲೂ ಅಲ್ಲಿಯೇ ನೆಲೆಸಿದ್ದು, ಅದು ಸಾಧಕನಿಗೆ ಅಲ್ಲಿಂದಲೇ ಮಾರ್ಗದರ್ಶನ ನೀಡುತ್ತದೆ. 

          ಸೌಂದರ್ಯ ಲಹರಿಯ ೩೮ನೇ ಸ್ತೋತ್ರವು ಈ ನಾಮದ ಕುರಿತಾಗಿ ಇನ್ನಷ್ಟು ಬೆಳಕು ಚೆಲ್ಲುತ್ತದೆ. ಹಿಂದೂ ಧರ್ಮದಲ್ಲಿ ಅತ್ಯಂತ ಹೆಚ್ಚು ವಿಕಾಸಗೊಂಡ ಆತ್ಮಗಳನ್ನು ’ಪರಮಹಂಸ’ ಎನ್ನುತ್ತಾರೆ (ತನ್ನ ಎಲ್ಲಾ ಇಂದ್ರಿಯಗಳನ್ನು ನಿರಂತರ ಧ್ಯಾನದಿಂದ ನಿಯಂತ್ರಣದಲ್ಲಿಟ್ಟುಕೊಂಡ ಆಧ್ಯಾತ್ಮಿಕ ಸಾಧಕ) - ಇದು ಹಂಸಗಳ ಗುಣವನ್ನು ಪ್ರತಿನಿಧಿಸುತ್ತದೆ, ಏಕೆಂದರೆ ಹಂಸಗಳಿಗೆ ವಿಶೇಷ ಗುಣಗಳಿರುತ್ತವೆ. ನೀರು ಮತ್ತು ಹಾಲನ್ನು ಮಿಶ್ರಣ ಮಾಡಿ ಕೊಟ್ಟಾಗ ಹಂಸಗಳು ಕೇವಲ ಹಾಲನ್ನಷ್ಟೇ ಕುಡಿದು ನೀರನ್ನು ಅದರಲ್ಲಿಯೇ ಉಳಿಸುತ್ತವೆ. ಇದರ ಸಾರಾಂಶವೇನೆಂದರೆ ಒಬ್ಬನು ಕೇವಲ ಒಳ್ಳೆಯ ವಿಷಯಗಳನ್ನು ಸ್ವೀಕರಿಸಿ, ಕೆಟ್ಟ ವಿಷಯಗಳನ್ನು ಬದಿಗಿರಿಸಬೇಕು; ಈ ಪ್ರಪಂಚವು ಇವೆರಡರ ಮಿಶ್ರಣವಾಗಿದ್ದರೂ ಸಹ. ಹಂಸಗಳ ಕುರಿತಾಗಿ ಮಾತನಾಡಿದಾಗಲೆಲ್ಲಾ ಅವುಗಳನ್ನು ಜೋಡಿಯಾಗಿಯೇ ಉಲ್ಲೇಖಿಸಲಾಗುತ್ತದೆ; ಅವುಗಳಲ್ಲಿ ಒಂದು ಶ್ರವಣೇಂದ್ರಿಯದ ಕುರಿತಾಗಿ ಹೇಳಿದರೆ ಮತ್ತೊಂದು ದೃಶ್ಯೇಂದ್ರಿಯದ ಕುರಿತಾಗಿ ಹೇಳುತ್ತದೆ. ಎಲ್ಲಾ ಇಂದ್ರಿಯಗಳಲ್ಲಿ ಕಣ್ಣು ಮತ್ತು ಕಿವಿಗಳೆರಡೂ ಮೌಲ್ಯಗಳು ನಶಿಸುವಂತಹ (ಕೆಳ ಜಾರುವಂತಹ) ಗಂಭೀರವಾದ ಪರಿಣಾಮಗಳನ್ನುಂಟು ಮಾಡಬಲ್ಲವು. ಹಂಸಗಳಂತೆ ಒಬ್ಬರು ಜೀವನದಲ್ಲಿ ಒಳ್ಳೆಯ ಅಂಶಗಳನ್ನಷ್ಟೇ ಸ್ವೀಕರಿಸಬೇಕು. ಆದ್ದರಿಂದ ದೇವಿಯನ್ನು ಹಂಸವೆಂದು ಕರೆಯಲಾಗಿದೆ. (೮೧೬ನೇ ನಾಮವು ಮುನಿ ಮಾನಸ ಹಂಸಿಕಾ)

Kāmeśvara-prāna-nāḍī कामेश्वर-प्रान-नाडी (373)

೩೭೩. ಕಾಮೇಶ್ವರ-ಪ್ರಾಣ-ನಾಡೀ

           ದೇವಿಯು ಶಿವನ ಪರಮ ಸ್ವರೂಪವಾದ ಕಾಮೇಶ್ವರನ ಪ್ರಾಣ ಶಕ್ತಿಯಾಗಿದ್ದಾಳೆ. ಈ ನಾಮವನ್ನು ವೇದಗಳಿಂದ ತೆಗೆದುಕೊಳ್ಳಲಾಗಿದೆ. ಶ್ರೀ ರುದ್ರಮ್ ಹೇಳುತ್ತದೆ (ಯಜುರ್ವೇದ ೪.೫.೧೦), "ಓಹ್ಞ್, ರುದ್ರಾ! ಯಾವುದು ಪರಮ ಪವಿತ್ರವಾದ "ಶಕ್ತಿ"ಯ ಸ್ವರೂಪದೊಂದಿಗೆ ಪವಿತ್ರವಾಗಿದೆಯೋ ಮತ್ತು ನಿರಂತರ ಒಳಿತುಂಟು ಮಾಡುವುದಾಗಿಯೋ ಆ ನಿನ್ನ ಪವಿತ್ರವಾದ ರೂಪವನ್ನು ನಾವು ಆವಾಹಿಸುತ್ತೇವೆ".

           ಸೌಂದರ್ಯ ಲಹರಿಯೂ (ಸ್ತೋತ್ರ ೨೮) ಸಹ ಶಿವನನ್ನು ಸುಸ್ಥಿರವಾಗಿಸುವಲ್ಲಿ ಶಕ್ತಿಯ ಮಹತ್ವವನ್ನು ಕುರಿತಾಗಿ ಹೇಳುತ್ತದೆ. ಶಿವನು ಸಮುದ್ರ ಮಥನ ಸಮಯದಲ್ಲಿ ಅತ್ಯಂತ ಭಯಂಕರವಾದ ಕಾಲಕೂಟ ವಿಷವನ್ನು ನುಂಗಿದ. ದೇವಿಯ ಕಿವಿಯ ಆಭರಣಗಳ ಮಹಾತ್ಮ್ಯೆಯಿಂದ ಶಿವನು ಆ ಕಾಲಕೂಟ ವಿಷದ ಪರಿಣಾಮಗಳಿಂದ ಪಾರಾದ. ಇಲ್ಲಿ ನಾವು ತಿಳಿಯ ಬೇಕಾದದ್ದೇನೆಂದರೆ, ನಿತ್ಯ ನಿರಂತರನಾದ ಶಿವನು ಶಕ್ತಿಯ ಸಹಾಯವಿಲ್ಲದೆ ಕ್ರಿಯಾಶೀಲನಾಗಿರಲಾರ ಮತ್ತು ಆಕೆಯ ಮಾಯೆಯಿಂದಾಗಿ ಇಂದಿನ ಬ್ರಹ್ಮಾಂಡವು ಅಸ್ತಿತ್ವದಲ್ಲಿದೆ. ಆದ್ದರಿಂದ ದೇವಿಯನ್ನು ಶಿವನ ಪ್ರಾಣ ಶಕ್ತಿಯೆಂದು ಕರೆಯಲಾಗಿದೆ.

Kṛtajñā कृतज्ञा (374)

೩೭೪. ಕೃತಜ್ಞಾ

         ದೇವಿಯು ಈ ಬ್ರಹ್ಮಾಂಡದ ಸಮಸ್ತ ಆಗು ಹೋಗುಗಳ ಕುರಿತಾದ ವಿಷಯದ ಅರಿವುಳ್ಳವಳಾಗಿದ್ದಾಳೆ (ಕೃತ+ಜ್ಞಾ=ಕೃತಜ್ಞಾ ಅಂದರೆ ಮಾಡಿದ ಎಲ್ಲಾ ಕಾರ್ಯಗಳ ಅರಿವು). ಸಾಮಾನ್ಯ ಜನರು, ‘ಯಾರೂ ಇದನ್ನು ಕೇಳಲಾರರು ಅಥವಾ ನೋಡಲಾರರು’ ಎಂದುಕೊಳ್ಳುವ (ಹಿಂದೆ ಚರ್ಚಿಸಲಾದ ಎರಡು ಹಂಸಗಳ ಕುರಿತಾಗಿ ಜ್ಞಾಪಿಸಿಕೊಳ್ಳಿ) ರಹಸ್ಯವಾದದ್ದು ಅಥವಾ ವ್ಯಕ್ತಿಗತವಾದದ್ದೆಲ್ಲವನ್ನು ಅಧಿಗಮಿಸುವ ಶಕ್ತಿಯನ್ನು ಆಕೆಯು ಹೊಂದಿದ್ದಾಳೆ.

        ನಮ್ಮ ಸಮಸ್ತ ಕಾರ್ಯಗಳಿಗೂ ಒಂಭತ್ತು ಸಾಕ್ಷಿಗಳಿದ್ದಾರೆ. ಅವೆಂದರೆ, ಸೂರ್ಯ, ಚಂದ್ರ, ಮರಣ ದೇವತೆಯಾದ ಯಮ, ಕಾಲ (ಸಮಯ) ಮತ್ತು ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ನಿರುತ್ ಮತ್ತು ಭೂಮಿ. ಈ ಎಲ್ಲಾ ಒಂಭತ್ತು ವಸ್ತುಗಳು ಶಕ್ತಿಯ ನಿಯಂತ್ರಣದಲ್ಲಿವೆಯಾದ್ದರಿಂದ ಆಕೆಯು ಸಮಸ್ತ ಬ್ರಹ್ಮಾಂಡದ ಕಾರ್ಯಕಲಾಪಗಳಿಗೆ ಸಾಕ್ಷಿಯಾಗಿದ್ದಾಳೆ. ಈ ನಾಮವನ್ನು "ದೇವಿಯು ಜ್ಞಾನವನ್ನು ಕೊಡುವವಳಾಗಿದ್ದಾಳೆ" ಎಂದೂ ಸಹ ವ್ಯಾಖ್ಯಾನಿಸಬಹುದು. ಇದನ್ನೇ ಇನ್ನೊಂದು ವಿಧದಲ್ಲಿ ಹೇಳುವುದಾದರೆ, ಯಾವಾಗ ಒಬ್ಬನು ಯಾವುದೇ ಫಲಾಪೇಕ್ಷೆಯಿಲ್ಲದೆ ಕರ್ಮಗಳನ್ನು ಮಾಡುತ್ತಾನೆಯೋ, ಅವನ ನಿಃಸ್ವಾರ್ಥ ಗುಣದಿಂದ ದೇವಿಯು ಪ್ರಸನ್ನಳಾಗಿ ಅವನಿಗೆ ಪರಮೋನ್ನತ ಜ್ಞಾನವನ್ನು (ಬ್ರಹ್ಮಜ್ಞಾನವನ್ನು) ಕರುಣಿಸುತ್ತಾಳೆ. ವಿಷ್ಣು ಸಹಸ್ರನಾಮದ ೮೨ನೇ ನಾಮವು ಕೃತಜ್ಞಃ ಆಗಿದೆ.

           ಛಾಂದೋಗ್ಯ ಉಪನಿಷತ್ತು (೪.೩.೮) ಹೇಳುತ್ತದೆ, “ಪ್ರಾಣ, ಮಾತು, ಕಣ್ಣುಗಳು, ಕಿವಿಗಳು ಮತ್ತು ಮನಸ್ಸು - ಈ ಐದು ನಮ್ಮ ಭೌತಿಕ ಆತ್ಮವನ್ನು (ಆಧ್ಯಾತ್ಮಿಕ) ಪ್ರತಿನಿಧಿಸಿದರೆ, ನಮ್ಮನ್ನು ಸುತ್ತುವರಿದಿರುವ ಆಕಾಶ, ಅಗ್ನಿ, ಸೂರ್ಯ, ಚಂದ್ರ ಮತ್ತು ನೀರು ಪ್ರಕೃತಿಯನ್ನು ಪ್ರತಿನಿಧಿಸುತ್ತವೆ (ಆಧಿದೈವಿಕ). ಈ ಹತ್ತೂ ವಸ್ತುಗಳು ಕೃತಾ ಎಂದು ಕರೆಯಲ್ಪಡುವ ಪಗಡೆಯ ದಾಳಗಳಾಗಿವೆ. ಈ ಆಧ್ಯಾತ್ಮಿಕ ಮತ್ತು ಆಧಿದೈವಿಕ ಎರಡೂ ಒಟ್ಟಾಗಿ ಈ ಪ್ರಪಂಚವನ್ನು ಪ್ರತಿನಿಧಿಸುವುದರಿಂದ ಅವನ್ನು ವಿರಾಟ್ ಎಂದು ಕರೆಯಲಾಗಿದೆ (ವಿರಾಟ್ ಎಂದರೆ ಸಮಸ್ತ ಬ್ರಹ್ಮಾಂಡದ ಸ್ಥೂಲ ಕಾಯಗಳ ಕಟ್ಟೆಂದು ಭಾವಿಸಲ್ಪಡುವ ವಸ್ತುವಿನೊಳಗೆ ಇರುವವನೆಂದು ಹೇಳಲಾಗುವ ಪರಮ ಮೇಧಾವಿ). ಜೀವಿಗಳನ್ನು ಆದಿಭೌತಿಕ ಎಂದೂ ಕರೆಯಲಾಗುತ್ತದೆ.

         ಛಾಂದೋಗ್ಯ ಉಪನಿಷತ್ತಿನ (೪.೧.೪) ಮಾತುಗಳಲ್ಲಿ ಹೇಳಬೇಕೆಂದರೆ ಕೃತಜ್ಞಾ ಎನ್ನುವುದು ಯಾವ ವ್ಯಕ್ತಿಯು ಇತರರು ಮಾಡಿದ ಎಲ್ಲಾ ಒಳ್ಳೆಯ ಕೃತ್ಯಗಳನ್ನು ತನ್ನೊಳಗೆ ಇಟ್ಟುಕೊಂಡಿರುತ್ತಾನೆಯೋ ಅವನು. ಅವನು ಈ ಪ್ರಪಂಚದ ಸಮಸ್ತ ಒಳ್ಳೆಯ ವಸ್ತುಗಳ ಒಟ್ಟು ಮೊತ್ತವಾಗಿದ್ದಾನೆ.

Kāma-pūjitā काम-पूजिता (375)

೩೭೫. ಕಾಮ-ಪೂಜಿತಾ

           ದೇವಿಯು ಪ್ರೇಮದ ಅಧಿದೇವತೆಯಾದ ಮನ್ಮಥನಿಂದ ಪೂಜಿಸಲ್ಪಡುತ್ತಾಳೆ. ಇದಕ್ಕೂ ಮುಂಚೆ ಹನ್ನೆರಡು ದೇವ-ದೇವಿಯರು, ಋಷಿ-ಮುನಿಗಳಿಂದ ದೇವಿಯು ಪರಮೋನ್ನತ ಪಂಚದಶೀ ಮಂತ್ರದ ಮೂಲಕ ಪೂಜಿಸಲ್ಪಡುತ್ತಾಳೆನ್ನುವುದನ್ನು ನೋಡಿದ್ದೇವೆ ಆ ಹನ್ನೆರಡರಲ್ಲಿ ಮನ್ಮಥನೂ ಒಬ್ಬನು (೨೩೯ನೇ ನಾಮದ ಚರ್ಚೆಯನ್ನು ನೋಡಿ). ಮನ್ಮಥನನ್ನು ಕಾಮನೆಂದೂ ಕರೆಯುತ್ತಾರೆ ಮತ್ತು ಮನ್ಮಥನ ಪೂಜೆಯಿಂದಾಗಿ ದೇವಿಯು ಕಾಮ-ಪೂಜಿತಾ ಆಗಿದ್ದಾಳೆ. ೫೮೬ನೇ ನಾಮವು ಕಾಮ-ಸೇವಿತಾ ಎನ್ನುವುದನ್ನು ಗಮನಿಸಿ.

           ಈ ನಾಮಕ್ಕೆ ಮತ್ತೊಂದು ವಿಧವಾದ ವ್ಯಾಖ್ಯಾನವೂ ಇದೆ. ಶಕ್ತಿ ಆರಾಧನೆಯಲ್ಲಿ ಪುಣ್ಯ ಸ್ಥಳಗಳೆಂದು ೫೧ ಪವಿತ್ರ ಕ್ಷೇತ್ರಗಳ (ಶಕ್ತಿ ಪೀಠಗಳ) ಕುರಿತಾದ ಉಲ್ಲೇಖವಿದೆ. ಆದರೆ ಅದು ಆಂತರಿಕವಾಗಿರುವ ನಾಲ್ಕು ಸ್ಥಳಗಳ ಕುರಿತಾದ ಉಲ್ಲೇಖವಾಗಿದೆ, ಅವೆಂದರೆ, ಕಾಮಗಿರಿ ಪೀಠ (ಈ ನಾಮ), ಪೂರ್ಣಗಿರಿ ಪೀಠ (ಮುಂದಿನ ನಾಮ), ಜಾಲಂಧರ ಪೀಠ (ನಾಮ ೩೭೮) ಮತ್ತು ಓಢಾಣ್ಯ ಪೀಠ (ನಾಮ ೩೭೯) ಇವು ಕ್ರಮವಾಗಿ ಮೂಲಾಧಾರ, ಮಣಿಪೂರಕ, ಅನಾಹತ ಮತ್ತು ವಿಶುದ್ಧ ಚಕ್ರಗಳನ್ನು ಪ್ರತಿನಿಧಿಸುತ್ತವೆ. ಶಬ್ದವು ಮೂಲಾಧಾರದಲ್ಲಿ ರೂಪಗೊಂಡು ಮಾರ್ಪಾಟುಗಳನ್ನು ಹೊಂದಿ ವಿಶುದ್ಧ ಚಕ್ರದ ಮೂಲಕ ಮಾತಾಗಿ ಹೊರಹೊಮ್ಮುತ್ತದೆ. ಮೇಲೆ ಹೆಸರಿಸಿರುವ ನಾಲ್ಕು ಪೀಠಗಳು ಕ್ರಮವಾಗಿ ಪರಾ, ಪಶ್ಯಂತೀ, ಮಧ್ಯಮಾ ಮತ್ತು ವೈಖರೀ ಇವುಗಳನ್ನು ಪ್ರತಿನಿಧಿಸುತ್ತವೆ. ಇದರ ಕುರಿತು ೩೬೬ರಿಂದ ೩೭೧ನೇ ನಾಮಗಳ ಚರ್ಚೆಗಳಲ್ಲಿ ಈ ಮೊದಲೇ ವಿವರಿಸಲಾಗಿದೆ.

******

        ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 372-375 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

 

Rating
Average: 5 (1 vote)

Comments

Submitted by nageshamysore Fri, 08/23/2013 - 20:11

ಶ್ರೀಧರರೆ, ೧೦೦. ಲಲಿತಾ ಸಹಸ್ರನಾಮ ೩೭೨ರಿಂದ ೩೭೫ನೇ ನಾಮಗಳ ವಿವರಣೆಯ ಸಾರ ಪರಿಷ್ಕರಣೆಗೆ.

ಲಲಿತಾ ಸಹಸ್ರನಾಮ ೩೭೨-೩೭೫
________________________________________

೩೭೨. ಭಕ್ತ-ಮಾನಸ-ಹಂಸಿಕಾ
ಮನ ಮಾನಸ ಸರೋವರದಿ ಜೋಡಿ ಹಂಸ ಜೀವಾತ್ಮ-ಪರಮಾತ್ಮ
ಶುದ್ದಮನ ಬಯಸುವುತ್ಕಟತೆ ಭಕ್ತಮಾನಸಹಂಸಿಕಾಕೃಪೆ ಸುಗಮ
ಹಂಸಕ್ಷೀರತರ ಒಳಿತು-ಕೆಡಕು, ಶ್ರಾವ್ಯ-ದೃಶ್ಯ ಸ್ವೀಕಾರಾರ್ಹನ್ಯಾಯ   
ಧ್ಯಾನದಾಧ್ಯಾತ್ಮಿಕಸಾಧಕತೆ ಪರಮಹಂಸ, ನಿಯಂತ್ರಿಸಿ ಇಂದ್ರೀಯ!

೩೭೩. ಕಾಮೇಶ್ವರ-ಪ್ರಾಣ-ನಾಡೀ 
ಸಮುದ್ರಮಥನದೆ ಕಾಲಕೂಟ ವಿಷ, ಶಕ್ತಿಯ ಕರ್ಣಾಭರಣದಿಂ ರಕ್ಷ
ನಿತ್ಯನಿರಂತರ ಶಿವನ ಪ್ರಾಣಶಕ್ತಿ ದೇವಿ, ಮಾಯೆಗೆ ಬ್ರಹ್ಮಾಂಡದಸ್ಥಿತ್ವ
ಪರಮ ಪವಿತ್ರ ಶಕ್ತಿ ಒಳಿತಾಗಿಸುವ ರೂಪ, ಪರಬ್ರಹ್ಮ ಸ್ವರೂಪ ಸ್ತುತ
ಕಾಮೇಶ್ವರ ಶಿವನ ಪರಮಸ್ವರೂಪ, ಕಾಮೇಶ್ವರ ಪ್ರಾಣನಾಡೀ ಲಲಿತ!

೩೭೪. ಕೃತಜ್ಞಾ
ಬ್ರಹ್ಮಾಂಡದಾಗುಹೋಗು, ಮಾಡಿದೆಲ್ಲಾ ಕಾರ್ಯದರಿವಿಹ ಕೃತಜ್ಞಾ
ಕಂಡೂ ಕಾಣದ್ದೆಲ್ಲವ ಅಧಿಗಮಿಸುವ ಹಂಸ-ಕ್ಷೀರ ನ್ಯಾಯದ ಪ್ರಜ್ಞಾ
ಪರರಿಂದಾದೊಳಿತೆಲ್ಲ ತನ್ನೊಳಗಿಟ್ಟ, ಸಮಷ್ಟಿಯೆಲ್ಲ ಒಳಿತಿನ ಮೊತ್ತ
ಆಧ್ಯಾತ್ಮಿಕ ಆಧಿದೈವಿಕ ಪ್ರತಿನಿಧಿಸೊ ವಿರಾಟ್ ಒಟ್ಟು ಜಗ ಸಮರ್ಥ!

ಸಮಸ್ತ ಕಾರ್ಯಕೆ ನವ ಸಾಕ್ಷಿ ಸೂರ್ಯ ಚಂದ್ರ ಯಮ ಕಾಲ ನಾಲ್ವರು
ಆಕಾಶ ವಾಯು ಅಗ್ನಿ ನಿರುತ್ ಭೂಮಿ, ಪಂಚಭೂತ ಸೇರೊಂಭತ್ತಾದರು
ಸಮಸ್ತ ಬ್ರಹ್ಮಾಂಡ ಕಾರ್ಯಕಲಾಪಕೆ ಸಾಕ್ಷಿ ಲಲಿತ, ನವ ದೂತ ಜಾಲ
ಕರ್ಮ ಸಿದ್ದಾಂತಿ, ನಿಸ್ವಾರ್ಥಿ ಭಕ್ತಗೆ ಪರಮೋನ್ನತ ಬ್ರಹ್ಮ ಜ್ಞಾನ ಸಾಫಲ್ಯ!
       
ಪ್ರಾಣ ಮಾತು ಕಣ್ಣು ಕಿವಿ ಮನಸ್ಸು ಪ್ರತಿನಿಧಿಸಿ ಭೌತಿಕ ಆತ್ಮ ಆಧ್ಯಾತ್ಮಿಕ
ಪ್ರಕೃತಿ ಪ್ರತಿನಿಧಿತ ಆಕಾಶ ಅಗ್ನಿ ಸೂರ್ಯ ಚಂದ್ರ ಜಲವಾಗಿ ಆಧಿದೈವಿಕ
ಕೃತಾ ಬಿರುದಾಂಕಿತ ದಶ ದಾಳಗಳಾಗಿ, ವಿರಾಟ್ ಪರಮ ಮೇಧಾವಿತನ
ಜೀವಿಗಳಾಗುತ ಆಧಿಭೌತಿಕ, ಬ್ರಹ್ಮಾಂಡಸ್ಥೂಲಕಾಯದಕಟ್ಟು ವಿರಾಟತನ!

೩೭೫. ಕಾಮ-ಪೂಜಿತಾ 
ಆರಾಧನಾ ಚತುರ್ಶಕ್ತಿಪೀಠ ಕಾಮಗಿರಿ-ಪೂರ್ಣಗಿರಿ-ಜಾಲಂದರ-ಓಡ್ಯಾಣ
ಮೂಲಾಧಾರ-ಪರಾ,ಮಣಿಪೂರಕ-ಪಶ್ಯಂತೀ, ಅನಾಹತ-ಮಧ್ಯಮಾ ಗಣ
ವಿಶುದ್ಧಚಕ್ರ-ವೈಖರೀ ಪ್ರತಿನಿಧಿಸುತ ಶಕ್ತಿಯಾಂತರಿಕಾರಾಧನೆಯ ಹಂತ
ದೇವಗಣಋಷಿಮುನಿಸಮೇತ,ಪಂಚದಶೀಮಂತ್ರ ಕಾಮ-ಪೂಜಿತಾ ಲಲಿತ!

 
ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು
 

ನಾಗೇಶರೆ,
ಈ ಕಂತಿನ ಕೆಲವೊಂದು ಪರಿಷ್ಕರಣೆಗಳನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ.
೩೭೨. ಭಕ್ತ-ಮಾನಸ-ಹಂಸಿಕಾ
ಮನ ಮಾನಸ ಸರೋವರದಿ ಜೋಡಿ ಹಂಸ ಜೀವಾತ್ಮ-ಪರಮಾತ್ಮ
ಶುದ್ದಮನ ಬಯಸುವುತ್ಕಟತೆ ಭಕ್ತಮಾನಸಹಂಸಿಕಾಕೃಪೆ ಸುಗಮ
ಹಂಸಕ್ಷೀರತರ ಒಳಿತು-ಕೆಡಕು, ಶ್ರಾವ್ಯ-ದೃಶ್ಯ ಸ್ವೀಕಾರಾರ್ಹನ್ಯಾಯ
ಧ್ಯಾನದಾಧ್ಯಾತ್ಮಿಕಸಾಧಕತೆ ಪರಮಹಂಸ, ನಿಯಂತ್ರಿಸಿ ಇಂದ್ರೀಯ!
ಹಂಸಕ್ಷೀರತರ ಒಳಿತು-ಕೆಡಕು ಪದ ಪ್ರಯೋಗ ಸಮಂಜಸವಲ್ಲ. ಏಕೆಂದರೆ ಹಂಸಕ್ಷೀರ ನ್ಯಾಯವೆಂದರೆ ಹಂಸಗಳಿಗೆ ಹಾಲಿನಿಂದ ನೀರನ್ನು ಪ್ರತ್ಯೇಕಿಸಿ ಹಾಲನ್ನಷ್ಟೇ ಸ್ವೀಕರಿಸುತ್ತವಂತೆ. ಅದೇ ರೀತಿ ಪರಮಹಂಸರು ಪ್ರಪಂಚದಲ್ಲಿರುವ ಒಳ್ಳೆಯದಷ್ಟನ್ನೇ (ಹಾಲನ್ನಷ್ಟೇ) ಸ್ವೀಕರಿಸಿ ಪ್ರಯೋಜನಕ್ಕೆ ಬಾರದ ನೀರನ್ನು (ಪ್ರಾಪಂಚಿಕತೆಯನ್ನು) ಇಲ್ಲೇ ಬಿಡುತ್ತಾರೆ. ಆದ್ದರಿಂದ ಹಂಸ ಕ್ಷೀರ ಎನ್ನುವ ಕಡೆ ಒಳಿತು ಕೆಡಕು ಸರಿಹೋಗದು. ಈ ಹಿನ್ನಲೆಯಲ್ಲಿ ಮೂರನೇ ಸಾಲನ್ನು ಸ್ವಲ್ಪ ಬದಲಾಯಿಸಿ. ಅಥವಾ ಮೂರು ಮತ್ತು ನಾಲ್ಕನೇ ಸಾಲುಗಳನ್ನು ಸೇರಿಸಿ ಹೊಸದಾಗಿ ಪದ್ಯ ಹೆಣೆಯುವಿರೇನೋ?
ಇಂದ್ರೀಯ=ಇಂದ್ರಿಯ.
೩೭೩. ಕಾಮೇಶ್ವರ-ಪ್ರಾಣ-ನಾಡೀ
ಈ ಪಂಕ್ತಿಯಲ್ಲಿ ಎಲ್ಲಾ ವಿಷಯಗಳನ್ನೂ ಸರಿಯಾಗಿ ಹೇಳಿದ್ದರೂ ಸಹ ಸ್ವಲ್ಪ ಗೋಜಲೆನಿಸುತ್ತಿದೆ. ಆದ್ದರಿಂದ ಸ್ವಲ್ಪ ಪರಿಷ್ಕರಿಸಿ. ಕಾಲಕೂಟ ವಿಷವನ್ನು ಸೇವಿಸಿದರೂ ಸಹ ಶಿವನು ಮರಣ ಹೊಂದದೇ ಇರುವುದು ದೇವಿಯ ಮುತ್ತೈದೆತನವನ್ನು (ಸೌಭಾಗ್ಯವನ್ನು) ಸಂಕೇತಿಸುವ ಆಕೆಯ ಕರ್ಣಾಭರಣಗಳಿಂದ. (ನನಗೆ ತಿಳಿದ ಹಾಗೆ ಮಾಂಗಲ್ಯ, ಕಿವಿಯೋಲೆ, ಕಾಲುಂಗುರ, ಮೂಗುತಿ, ಕೈಬಳೆ ಇವು ಐದು ಮುತ್ತುಗಳು ಇವನ್ನು ಹೊಂದಿರುವಾಕೆ ಮುತ್ತೈದೆ). ಈ ಹಿನ್ನಲೆಯಲ್ಲಿ ಸ್ವಲ್ಪ ಬದಲಾವಣೆ ಅವಶ್ಯವೆನಿಸುತ್ತದೆ.
೩೭೪. ಕೃತಜ್ಞಾ
ಈ ಪಂಕ್ತಿಯ ಎಲ್ಲಾ ಪದ್ಯಗಳು ಚೆನ್ನಾಗಿವೆ ಮತ್ತು ಸಾರವನ್ನು ಸಮರ್ಥವಾಗಿ ಹಿಡಿದಿಟ್ಟಿವೆ. ಆದರೂ ಸಹ ಕಡೆಯ ಪಂಕ್ತಿಯಲ್ಲಿನ ಕಡೆಯ ಎರಡು ಸಾಲುಗಳನ್ನು ಸ್ವಲ್ಪ ಬದಲಾಯಿಸಿದರೆ ಹೆಚ್ಚು ಅರ್ಥಗರ್ಭಿತವಾಗುತ್ತವೆ ಎಂದು ಕೊಳ್ಳುತ್ತೇನೆ. ಅಲ್ಲಿ ಪ್ರಾಸಕ್ಕೆ ಏನೂ ತೊಂದರೆ ಆಗಿಲ್ಲ ಆದರೆ ಪದಲಾಲಿತ್ಯ ಅಷ್ಟು ಸಮಂಜಸವೆನಿಸುತ್ತಿಲ್ಲ.
೩೭೫. ಕಾಮ-ಪೂಜಿತಾ
ಇದು ಈ ಕಂತಿನ ಹೈಲೈಟ್.

ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರ್‌ಜಿ, ಹಂಸಕ್ಷೀರ ನ್ಯಾಯದ ಒಂದು ಕತೆ(ಜಮಾನದ ಕತೆಯೊಡೆಯರಾದ ನಿಮಗೆ ಗೊತ್ತಿರಬಹುದು) ಇಲ್ಲಿದೆ- http://www.osho.com/... ಕೊಂಡಿ ಕನೆಕ್ಟ್ ಆಗದಿದ್ದರೆ ಕ್ಷಮಿಸಿ.

ಗಣೇಶ್‌ಜಿ ಕೊಂಡಿಗಳೂ ಸಹ ನಿಮ್ಮಂತೆ ನಿಗೂಢವಾಗಿ ವರ್ತಿಸುತ್ತಿವೆ; ಅವೂ ಸಹ ಪ್ರಕಟವಾಗುತ್ತಿಲ್ಲ :((

:) joy swan milk ಎಂದು ಗೂಗ್‌ಲ್ ಸರ್ಚ್ ಕೊಡಿ, osho online libraryಯಲ್ಲಿ ಆ ಕತೆ ಓಪನ್ ಆಗುವುದು.

ಶ್ರೀಧರರೆ, ಇದನ್ನು ನಾಳೆ ಕೈಗೆತ್ತಿಕೊಳ್ಳುತ್ತೇನೆ - ನಿದ್ದೆಗಣ್ಣಲ್ಲಿ ಮತ್ತಷ್ಟು ತಪ್ಪಾಗುವುದು ಬೇಡ - ಶುಭ ರಾತ್ರಿ :-) 

ಧನ್ಯವಾದಗಳೊಂದಿಗೆ
-ನಾಗೇಶ ಮೈಸೂರು
 

ಶ್ರೀಧರರೆ, ತಿದ್ದುಪಡಿಯ ಯತ್ನ, ಸರಿ ಕಾಣುವುದೆ ನೋಡಿ ....
     
೩೭೨. ಭಕ್ತ-ಮಾನಸ-ಹಂಸಿಕಾ
ಮನ ಮಾನಸ ಸರೋವರದಿ ಜೋಡಿ ಹಂಸ ಜೀವಾತ್ಮ-ಪರಮಾತ್ಮ
ಶುದ್ದಮನ ಬಯಸುವುತ್ಕಟತೆ ಭಕ್ತಮಾನಸಹಂಸಿಕಾಕೃಪೆ ಸುಗಮ
ಹಂಸ ಸ್ವೀಕಾರದಂತೆ ಬರಿಕ್ಷೀರ, ಶ್ರಾವ್ಯ-ದೃಶ್ಯ ಸ್ವೀಕಾರಾರ್ಹನ್ಯಾಯ 
ಪರಮ ಹಂಸ ಹೆಕ್ಕಿ ಒಳಿತ, ಪ್ರಾಪಂಚಿಕತೆ ದೂರ ಮೆಟ್ಟಿ ಇಂದ್ರಿಯ!

೩೭೩. ಕಾಮೇಶ್ವರ-ಪ್ರಾಣ-ನಾಡೀ
ಕಾಲಕೂಟ ಮಣಿಸಿದ ಮುತ್ತೈದೆತನ, ಶಕ್ತಿಯ ಕರ್ಣಾಭರಣ ಮಹತ್ವ
ನಿತ್ಯನಿರಂತರ ಶಿವನ ಪ್ರಾಣಶಕ್ತಿ, ದೇವಿ ಮಾಯೆಗೆ ಬ್ರಹ್ಮಾಂಡದಸ್ಥಿತ್ವ
ಪರಮ ಪವಿತ್ರ ಶಕ್ತಿ ಸನ್ಮಂಗಳ ರೂಪ, ಪರಬ್ರಹ್ಮ ಸ್ವರೂಪ ಆವಾಹಿತ
ಕಾಮೇಶ್ವರ ಶಿವನ ಪರಮಸ್ವರೂಪ, ಕಾಮೇಶ್ವರ ಪ್ರಾಣನಾಡೀ ಲಲಿತ!

೩೭೪. ಕೃತಜ್ಞಾ
3)
ಪ್ರಾಣ ಮಾತು ಕಣ್ಣು ಕಿವಿ ಮನಸ್ಸು ಪ್ರತಿನಿಧಿಸಿ ಭೌತಿಕ ಆತ್ಮ ಆಧ್ಯಾತ್ಮಿಕ
ಪ್ರಕೃತಿ ಪ್ರತಿನಿಧಿತ ಆಕಾಶ ಅಗ್ನಿ ಸೂರ್ಯ ಚಂದ್ರ ಜಲವಾಗಿ ಆಧಿದೈವಿಕ
ಆಧ್ಯಾತ್ಮಿಕ ಆಧಿಭೌತಿಕ ಸಮಷ್ಟಿ ಪ್ರಪಂಚ ಪ್ರತಿನಿಧಿಸಿ ವಿರಾಟ್ ಮೇಧಾವಿ
ವಸ್ತುವಿನೊಳಗಿಹ ಬ್ರಹ್ಮಾಂಡ ಸ್ಥೂಲಕಾಯದ ಕಟ್ಟು, ಆದಿಭೌತಿಕವಿ ಜೀವಿ!

ನಾಗೇಶರೆ,
ಈಗ ಎಲ್ಲಾ ಕವನಗಳು ಹೆಚ್ಚು ಅರ್ಥ ಹೊಮ್ಮಿಸುತ್ತಿವೆ. ಒಂದರೆಡು ಸಣ್ಣ ಅಚ್ಚುತಪ್ಪಿನ ದೋಷಗಳನ್ನು ಸರಿಪಡಿಸಿದರೆ ಸಾಕು.
೩೭೨. ಭಕ್ತ-ಮಾನಸ-ಹಂಸಿಕಾ
:
:
ಹಂಸ ಸ್ವೀಕಾರದಂತೆ ಬರಿಕ್ಷೀರ, ಶ್ರಾವ್ಯ-ದೃಶ್ಯ ಸ್ವೀಕಾರಾರ್ಹನ್ಯಾಯ
ಬರಿಕ್ಷೀರ=ಬರಿ ಕ್ಷೀರ
ಪರಮ ಹಂಸ ಹೆಕ್ಕಿ ಒಳಿತ, ಪ್ರಾಪಂಚಿಕತೆ ದೂರ ಮೆಟ್ಟಿ ಇಂದ್ರಿಯ!
ಪರಮ ಹಂಸ=ಪರಮಹಂಸ

೩೭೪. ಕೃತಜ್ಞಾ
3)
:
:
ವಸ್ತುವಿನೊಳಗಿಹ ಬ್ರಹ್ಮಾಂಡ ಸ್ಥೂಲಕಾಯದ ಕಟ್ಟು, ಆದಿಭೌತಿಕವಿ ಜೀವಿ
ಆದಿಭೌತಿಕವಿ ಜೀವಿ=ಆದಿಭೌತಿಕವೀ ಜೀವಿ/ಆದಿಭೌತಿಕ ಜೀವಿ.
ಇವನ್ನು ಸರಿಪಡಿಸಿ; ಈ ಕಂತನ್ನು ಅಂತಿಮಗೊಳಿಸಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Fri, 08/23/2013 - 20:15

ಶ್ರೀಧರರೆ, ಅಂದಹಾಗೆ ನೂರನೆ ಕಂತಿನ ಮತ್ತೊಂದು ಮೈಲಿಗಲ್ಲು ತಲುಪಿದ್ದಕ್ಕೆ (375ನೆ ನಾಮಾವಳಿಯನ್ನು ಮುಟ್ಟಿದ್ದಕ್ಕು ಸೇರಿದಂತೆ), ಶುಭಾಶಯಗಳು! :-)

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು

ನಾಗೇಶರೆ,
ನಿಮ್ಮಂತಹ ಸದಭಿರುಚಿಯ ಸಂಪದದ ಓದುಗರಿರುವಾಗ ೧೦೦ಕಂತುಗಳನ್ನು ಪೂರೈಸುವುದು ದೊಡ್ಡ ವಿಷಯವೇನೂ ಅಲ್ಲ. ನಿಮ್ಮಂತಹ ಓದುಗರ ಮೂಲಕ ದೇವಿಯೇ ಎಲ್ಲದಕ್ಕೂ ಪ್ರೇರಣೆಯಾಗಿದ್ದಾಳೆ. ನಿಮ್ಮ ಸದಾಶಯಕ್ಕೆ ಧನ್ಯವಾದಗಳು.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ