Invictus ಮತ್ತು ನೆಲ್ಸನ್ ಮಂಡೇಲಾ

Invictus ಮತ್ತು ನೆಲ್ಸನ್ ಮಂಡೇಲಾ

ಎರಡು ವರ್ಷಗಳ ಹಿಂದಿನ ಮಾತು. ನಾನಾಗ Executive MBA ಓದುತ್ತಿದ್ದೆ. ಒಂದು ದಿನ ಕ್ಲಾಸಿನಲ್ಲಿ, ನನ್ನ ಮಿತ್ರರೊಬ್ಬರು ದಕ್ಷಿಣ ಆಫ್ರಿಕದ ಮಹಾನ್ ನಾಯಕ ನೆಲ್ಸನ್ ಮಂಡೇಲಾರ ಜೀವನದ ಒಂದು ಮುಖ್ಯ ಘಟನೆಯ ಮೇಲೆ ಆಧರಿಸಿದ “Invictus” ಎಂಬ ಆಂಗ್ಲ ಭಾಷೆಯ ಸಿನೆಮಾದ ಬಗ್ಗೆ ಬಹಳ ಶ್ರದ್ಧಾ ಭಕ್ತಿಗಳಿಂದ ಮಾತನಾಡುತ್ತಿದ್ದರು. “ದಕ್ಷಿಣ ಆಫ್ರಿಕಾದ ಗಾಂಧಿ” ಎನಿಸಿದ ಮಹಾನ್ ನೇತಾರ ನೆಲ್ಸನ್ ಮಂಡೇಲಾರ ಅಸಂಖ್ಯಾತ  ಭಕ್ತರಲ್ಲಿ ನಾನೂ ಒಬ್ಬ.  ಆದುದರಿಂದ ಅವರ ಮಾತುಗಳತ್ತ ನನ್ನ ಗಮನ ಸೆಳೆಯಿತು. ಆಸಕ್ತಿಯಿಂದ ಆಲಿಸಿದಾಗ ಆ ಸಿನೆಮಾವು "ನೆಲ್ಸನ್ ಮಂಡೇಲಾರು ರಗ್‌ಬಿ ಪಂದ್ಯಾವಳಿಯೊಂದನ್ನು ಜನಾಂಗೀಯ ಭಾವನೆಗಳಿಂದ ಪರಸ್ಪರ ದ್ವೇಷಿಸುತ್ತಿದ್ದ ಪ್ರಜೆಗಳನ್ನು ಸನ್ಮಾರ್ಗಕ್ಕೆ ಬರುವಂತೆ ಪ್ರೇರೇಪಿಸಿ, ಐಕಮತ್ಯವಿರದ  ದೇಶವನ್ನು ಒಂದಾಗಿಸಲು ಉಪಯೋಗಿಸಿದರು" ಎಂಬುದರ ಮೇಲೆ ಆಧಾರಿತವಾಗಿದೆ ಎಂದು ತಿಳಿದು ಬಂತು.

ಅದಾದ ಮೇಲೆ ಕೆಲವು ವಾರಗಳ ನಂತರ ನನಗೆ ಆ ಸಿನೆಮಾವನ್ನು ನೋಡುವ ಅವಕಾಶ ಸಿಕ್ಕಿತು. ಅಮೇರಿಕದ ಖ್ಯಾತ ನಟ ಮೋರ್ಗಾನ್ ಫ್ರೀಮನ್, ನೆಲ್ಸನ್ ಮಂಡೇಲಾರ ಪಾತ್ರದಲ್ಲಿ ಮತ್ತು ಇನ್ನೊಬ್ಬ ಖ್ಯಾತ ನಟ ಮ್ಯಾಟ್ ಡಮೋನ್, ದಕ್ಷಿಣ ಆಫ್ರಿಕದ ರಗ್‍ಬಿ ತಂಡದ ನಾಯಕರಾಗಿ ಮನಃಪೂರ್ವಕ ಅಭಿನಯ ನೀಡಿದ ಈ ಸಿನೆಮಾ ತುಂಬಾ ಸತ್ವಯುತವಾದ, ಪರಿಣಾಮಕಾರಿ ಸಿನೆಮಾ. ಹಿಂಸೆ, ದ್ವೇಷ ಮತ್ತು ಗಲಭೆಗಳಿಂದ ಕೂಡಿದ ಈ ಜಗತ್ತಿನಲ್ಲಿ ತೀರ ಇತ್ತೀಚೆಗೆ ನೆಲ್ಸನ್ ಮಂಡೇಲಾರಂತಹ ನಾಯಕರು ಜನರನ್ನು ಅವರ ಸಂಕುಚಿತ ಭಾವನೆಗಳಿಂದ ಹೊರ ಸೆಳೆದು, ಅವರನ್ನು ದೇಶಪ್ರೇಮಿಗಳನ್ನಾಗಿ ಮಾರ್ಪಡಿಸಿ ದೇಶವನ್ನು ಒಂದುಗೂಡಿಸಿದ ಅದ್ಭುತ ಘಟನೆ ಕೆಲವೊಮ್ಮೆ ನಂಬಲಸಾಧ್ಯ ಎನಿಸುತ್ತದೆ. ಸಿನೆಮಾದಲ್ಲಿ ರಗ್‍ಬಿ ತಂಡದ ನಾಯಕ, ನೆಲ್ಸನ್ ಮಂಡೇಲಾರನ್ನು ಇರಿಸಿದ್ದ ಜೈಲಿನ ಕೋಣೆಯನ್ನು ನೋಡಲು ಹೋಗುತ್ತಾನೆ. ತುಂಬಾ ಚಿಕ್ಕ ಕೋಣೆಯಲ್ಲಿ, ಯಾತನಾಭರಿತ ಇಪ್ಪತ್ತೇಳು ಸುಧೀರ್ಘ ವರ್ಷಗಳನ್ನು ಕಳೆದ ನೆಲ್ಸನ್ ಮಂಡೇಲಾ, ಅದು ಹೇಗೆ ಆ ಕೋಣೆಯಿಂದ ಹೊರಬಂದು, ತಮ್ಮನ್ನು ಅಲ್ಲಿ ಇರಿಸಿದ ಜನರನ್ನು ಕ್ಷಮಿಸಿದರು ಎಂದು ಬೆರಗುಗೊಳ್ಳುತ್ತಾನೆ. ಮಹಾನ್ ಆತ್ಮವೊಂದರ ಉನ್ನತ ವ್ಯಕ್ತಿತ್ವದ ಪರಿಚಯ ಅಲ್ಲಿ ಉಂಟಾಗುತ್ತದೆ.

ನನಗೆ “Invictus”  ಪದದ ಬಗ್ಗೆ ಹೆಚ್ಚು ತಿಳಿಯಲು ಉತ್ಸುಕತೆ ಉಂಟಾಯಿತು.  “Invictus” ಪದದ ನೇರ ಕನ್ನಡ ಅನುವಾದ “ಅಜೇಯ”.  ಆದರೆ ಸಿನೆಮಾದಲ್ಲಿ ಆಧಾರವಾಗಿ ಉಪಯೋಗಿಸಿದ್ದು “Invictus”  ಎಂಬ ಪದ್ಯ. ಈ ಪದ್ಯವನ್ನು  ಆಂಗ್ಲ ಭಾಷೆಯ ವಿಲಿಯಮ್ ಅರ್ನೆಸ್ಟ್ ಹೆನ್ಲೆ (೧೮೪೯-೧೯೦೩) ಎಂಬ ಕವಿಯೊಬ್ಬ ರಚಿಸಿದ್ದಾನೆ.  ಈ ಕವನದಿಂದ ನೆಲ್ಸನ್ ಮಂಡೇಲಾರು ತುಂಬಾ ಪ್ರಭಾವಿತರಾಗಿದ್ದರಂತೆ. ತಮ್ಮ ರಾಬಿನ್ ದ್ವೀಪದಲ್ಲಿಯ ಇಪ್ಪತ್ತೇಳು ವರ್ಷಗಳ ಸುದೀರ್ಘ ಜೈಲು ವಾಸದಲ್ಲಿ ತಮ್ಮನ್ನು ಮತ್ತು ತಮ್ಮ ಸಹಚರರನ್ನು ಹುರಿದುಂಬಿಸಲು ಈ ಕವನವನ್ನು ಪಠಿಸುತ್ತಿದ್ದರಂತೆ. ಇದೇ ಕವನವನ್ನು ಮುಂದೆ ತಮ್ಮ ದೇಶದ ರಗ್‌ಬಿ ತಂಡವನ್ನು ಉತ್ತೇಜಿಸಿ ದೇಶದ ಏಕತೆಗೆ ದುಡಿಯಲು ಉಪಯೋಗಿಸಿದ ಕಥೆಯನ್ನು  “Invictus” ಸಿನೇಮಾದಲ್ಲಿ ಹೇಳಲಾಗಿದೆ.

ಒಬ್ಬ ಮಹಾನ್ ವ್ಯಕ್ತಿಯೊಬ್ಬನನ್ನು ಇಷ್ಟೊಂದು ಪ್ರಭಾವಿತಗೊಳಿಸಿದ ಆ ಕವನ ಹೇಗಿದೆ ಎಂದು ತಿಳಿಯುವ ಕುತೂಹಲದಿಂದ ಅಂತರ್ಜಾಲದಲ್ಲಿ ಹುಡುಕಿ ನೋಡಿದೆ. ಕವನದ ಕೊನೆಯ ನುಡಿ ಹೀಗಿದೆ:

It matters not how strait the gate,

How charged with punishments the scroll.

I am the master of my fate:

I am the captain of my soul.

(ಸಂಪೂರ್ಣ ಪದ್ಯವನ್ನು ಇಲ್ಲಿ ಓದಬಹುದು: http://www.poemhunte...).

ಹೇಗೆ ಒಂದು ಭಾವೋದ್ದೀಪ್ತ  ಕವನ ಜನಗಳಿಗೆ ಪ್ರೇರಣೆ ನೀಡಿ ಅವರನ್ನು ಸನ್ಮಾರ್ಗದ ಉತ್ತುಂಗಕ್ಕೆ ಕರೆದೊಯ್ಯಬಲ್ಲುದು ಎಂಬುದಕ್ಕೆ ಇದು ಒಂದು ಅತ್ಯುತ್ತಮ ಉದಾಹರಣೆ. ಅಲ್ಲದೇ ಹೇಗೆ ಉನ್ನತ ಮಟ್ಟದ ಸಾಹಿತ್ಯ, ಮಹಾನ್ ವ್ಯಕ್ತಿಯೊಬ್ಬನನ್ನು ತನ್ನ ಇಡೀ ಸಮಾಜವನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯಲು ಪ್ರೇರೇಪಿಸಬಲ್ಲದು ಎಂಬುದರ ಜ್ವಲಂತ ಉದಾಹರಣೆ.

ಇದೇ ರೀತಿಯಾಗಿ, ಬಂಕಿಮಚಂದ್ರರ “ವಂದೇ ಮಾತರಂ”, ಇಡೀ ದೇಶದ ಜನರಲ್ಲಿ ದೇಶಭಕ್ತಿಯ ಕಿಡಿಯನ್ನು ಪ್ರಜ್ವಲಿಸುವಂತೆ ಮಾಡಿ ಇಂಗ್ಲೀಷ್ ಸರಕಾರವನ್ನು ನಡುಗಿಸಿತ್ತಲ್ಲವೇ? ಹಾಗೆಯೇ  ರಸ್ಕಿನ್‍ ಬರೆದ “Un to this last” ಎಂಬ ಪ್ರಬಂಧ, ಮಹಾತ್ಮಾ ಗಾಂಧೀಜಿಯವರನ್ನು ಪ್ರಭಾವಿತಗೊಳಿಸಿ “ಸರ್ವೋದಯ”ದ ಉಗಮಕ್ಕೆ ಕಾರಣವಾಯಿತಲ್ಲವೇ? ನಮ್ಮ ರಾಷ್ಟ್ರ ಕವಿ ಕುವೆಂಪು ತಮ್ಮ ಪಾಂಚಜನ್ಯ ಕವನ ಸಂಕಲನದಲ್ಲಿ ಬರೆದ ಕೆಚ್ಚೆದೆಯ ಕವನ “ನಡೆ ಮುಂದೆ, ನಡೆ ಮುಂದೆ, ನುಗ್ಗಿ ನಡೆ ಮುಂದೆ, ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ”,  ಒಂದು ಇಡೀ ತಲೆಮಾರನ್ನು ಪ್ರೇರೇಪಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಲ್ಲದೇ, ಮುಂದಿನ ತಲೆಮಾರುಗಳಿಗೆ ಸದಾ ಸ್ಪೂರ್ತಿದಾಯಕ ಸೆಲೆಯಾಗಿ ಉಳಿದಿದೆ.

“Invictus” ಎಂಬ ಶಕ್ತಿದಾಯಕ ಕವನದಿಂದ  ಸ್ಪೂರ್ತಿ ಪಡೆದ ಮಂಡೇಲಾ,  ಇಪ್ಪತ್ತೇಳು ವರ್ಷಗಳಷ್ಟು ದೀರ್ಘ ಕಾಲ ಕಾರಾಗ್ರಹದಲ್ಲಿ ಬಳಲಿದರೂ ಸಾಮಾನ್ಯ ರಾಗ ದ್ವೇಷಗಳಿಂದ ಮೇಲೆದ್ದು, ದಯೆ, ಕ್ಷಮೆಗಳಂತಹ ದೈವೀ ಭಾವನೆಗಳಿಂದ ಇಡೀ ಪ್ರಪಂಚವನ್ನು ಸನ್ಮಾರ್ಗಕ್ಕೆ ಕರೆದೊಯ್ಯುವ ಕೆಲಸ ಮಾಡಿದ ಮಹಾನ್ ಚೇತನ. ಇಂತಹ ಮಹಾತ್ಮರು,  ಸದಾ “ಅಜೇಯ (Invictus)”ರಾಗಿಯೇ ಇರುವದರಲ್ಲಿ ಏನಾದರೂ ಸಂಶಯವಿದೆಯೇ?  ಸಧ್ಯದ ದ್ವೇಷಮಯ, ಅನೈಕಮತ್ಯದ ವಾತಾವರಣದಲ್ಲಿ ಬಳಲುತ್ತಿರುವ ನಮ್ಮ ದೇಶವನ್ನು ಸಂಕುಚಿತ ಭಾವನೆಗಳಿಂದ ಮೇಲೆತ್ತಲು, ನೆಲ್ಸನ್ ಮಂಡೇಲಾರಂತಹ ಉನ್ನತ ಚೇತನಗಳ ಅವಶ್ಯಕತೆ ಇದೆ. ಅಂತಹ ವ್ಯಕ್ತಿತ್ವ ನಮ್ಮ ದೇಶದಲ್ಲಿ ಮತ್ತೆ ಮೂಡಿ ಬರುವುದೇ? ಇದು ನಿಜವಾಗಲಿ ಎಂಬುದು ನಮ್ಮ ನಿಮ್ಮೆಲ್ಲರ ಆಶಯ ಅಲ್ಲವೇ?

ಚಿತ್ರ ಕೃಪೆ : http://www.freepik.c...

Comments

Submitted by makara Mon, 08/26/2013 - 19:35

Invictusನ ಹೀರೋ ಸ್ಫೂರ್ತಿ ಪಡೆದಿದ್ದು ನಮ್ಮ ತಾಯ್ನಾಡಿನ ಮಹಾನ್ ಆತ್ಮವೊಂದರಿಂದ; ಈಗ ನಾವು ಅವರತ್ತ ನೋಡುವಂತಾಗಿರುವುದು ನಮ್ಮ ದೇಶದ ದೌರ್ಭಾಗ್ಯವೇ ಸರಿ. ಎಲ್ಲವನ್ನೂ ನಾಯಕರ ಮೇಲೆ ಬಿಟ್ಟು ನಾವು ಸುಮ್ಮನೆ ಕಾಲಹರಣ ಮಾಡುವುದು ಬಿಟ್ಟು ನಮ್ಮ ಕೈಲಾದಷ್ಟು ಒಳಿತನ್ನು ದೇಶಕ್ಕಾಗಿ ಮಾಡಿದರೆ ದೇಶದ ಚಿತ್ರಣ ಎಂದೋ ಬದಲಾಗುತ್ತಿತ್ತು ಎನ್ನುವುದೂ ಅಷ್ಟೇ ದಿಟ :(
Submitted by Vasant Kulkarni Wed, 08/28/2013 - 11:46

In reply to by makara

ವಂದನೆಗಳು ಶ್ರೀಧರ್ ಅವರೆ, ಮಂಡೇಲಾರಂತಹ ಧೀಮಂತ ನಾಯಕರ ಬಾಳು, ನಮಗೆ ನಮ್ಮ ಕೈಲಾದಷ್ಟು ಒಳ್ಳೆಯದನ್ನು ಮಾಡಲು ಸ್ಫೂರ್ತಿ ನೀಡಲಿ ಎಂಬುದು ನನ್ನ ಆಶಯ.
Submitted by nageshamysore Tue, 08/27/2013 - 13:24

ವಸಂತಕುಮಾರ ಕುಲಕರ್ಣಿಗಳೆ, ಸ್ಪೂರ್ತಿದಾಯಕ ಲೇಖನ. ಮೂಲ ಪದ್ಯದ ಪೂರ್ತಿ ರೂಪದ ಹಿನ್ನಲೆ ಕನ್ನಡದಲ್ಲಿಯೆ ಅರಿವಾಗಲೆಂದು ಒಂದು 'ತರಾತುರಿಯ ಭಾವಾನುವಾದ' ಸೇರಿಸುತ್ತಿದ್ದೇನೆ, ನಿಮ್ಮ ಬರಹದ ಹಿನ್ನಲೆಗೆ ಪೂರಕವಾಗಿ :-) _____________________________________________ ವಿಜೇತ.. _____________________________________________ ಮುಸುಕಿದಿರುಳಿನ ಅಗಾಧ ಮುಸುಕಿನಡಿ ಬದುಕು ಘಾತಿಸಿದ ಪ್ರತಿ ಘಟಿತವ್ಹಡೆದ ನರಕ ಕುಳಿ ಶೂನ್ಯ ವಿಧಾತನಾರೊ ಎಡಬಿಡದೆ ಹೊತ್ತಿಗೆ ಕಾದು ಧನ್ಯ ಅಜೇಯವಿಡುತ ಸತತ ಸೋಲೋಪ್ಪದಾತ್ಮದ ಜೀಕು. ಅಸರೆ ತಪ್ಪಿದ ಅಗಣಿತ ಸಂಘಟನೆಗಳದೆಷ್ಟೊ ಕಣ್ಣ ಮಿಟುಕಿಸಲಿಲ್ಲ, ಭೋರೆಂದು ಗೋಳಿಡಲೂ ಇಲ್ಲ; ಕಾಯಿಸದೆ ಬಡಿದರೂ ಕಬ್ಬಿಣ, ಚೀರಿದವಕಾಶ ನೋವಿನ ಕ್ಷಣ ತಲೆಯೆಲ್ಲಾ ನೆತ್ತರಾದರೂ ರಣ, ತಗ್ಗಿಸಿ ನೋಡದೆ ಚರಣ. ಕಂಬನಿ ಆಕ್ರೋಶದೀ ಗಳಿಗೆ ವರ್ತಮಾನ, ಪ್ರಸ್ತುತ ದಾಟಿ ಭವಿತವಿದೆ ಭಯಾನಕ, ನೆರಳಂತೆ ಬಿಡದೆ ಕಾಡಲಿವೆ ಮೀಟಿ ಆದರು ಗತದ ಯಾತನೆ ಭರಿಸಿದ ಬವಣೆಯ ಸುಕೃತ ಕಲ್ಲೆದೆಯನಾಗಿಸಿದೆ ಕಲ್ಲೆದೆ, ತಾಳಲಿದೆ  ದಿಟ್ಟತೆಯಾಗಿ ನಿರ್ಭೀತ. ನೆಪವಾಗದು ದೈತ್ಯರಿಗೆ, ಬಿಕ್ಕಟ್ಟಿನ ಹಾದಿ ಇಕ್ಕಟ್ಟಲವಿತ ಹೆಬ್ಬಾಗಿಲು ಸತತ ಉಳಿಪೆಟ್ಟಿನ ನೋವಿಗೂ ಶಿಲೆ, ಶಿಲ್ಪವಾಗುವ ತರದೀ ಬಾಳು ನಾ ತಾನೆ ಒಡೆಯ ನನ್ನ ಭವಿತದ ವಿಧಾತ ನಾನೆ ನಾವಿಕ, ನನ್ನಜೇಯಾತ್ಮ ದಿಗ್ವಿಜಯ ಸಮರ್ಥ. ಮೂಲ: ವಿಲಿಯಂ ಅರ್ನೆಸ್ಟ್ ಹೆನ್ಲೇ ಭಾವಾನುವಾದ: ನಾಗೇಶ ಮೈಸೂರು _____________________________________________ ಧನ್ಯವಾದಗಳೊಂದಿಗೆ  - ನಾಗೇಶ ಮೈಸೂರು _____________________________________________
Submitted by nageshamysore Tue, 08/27/2013 - 13:28

In reply to by nageshamysore

ವಸಂತ್ ರವರೆ ಯಾಕೊ ಸಾಲುಗಳು ಕಲಸಿಕೊಂಡು ಬಿಟ್ಟ ಕಾರಣ, ಮತ್ತೊಂದು ಯತ್ನ: ----------------- ವಸಂತಕುಮಾರ ಕುಲಕರ್ಣಿಗಳೆ, ಸ್ಪೂರ್ತಿದಾಯಕ ಲೇಖನ. ಮೂಲ ಪದ್ಯದ ಪೂರ್ತಿ ರೂಪದ ಹಿನ್ನಲೆ ಕನ್ನಡದಲ್ಲಿಯೆ ಅರಿವಾಗಲೆಂದು ಒಂದು 'ತರಾತುರಿಯ ಭಾವಾನುವಾದ' ಸೇರಿಸುತ್ತಿದ್ದೇನೆ, ನಿಮ್ಮ ಬರಹದ ಹಿನ್ನಲೆಗೆ ಪೂರಕವಾಗಿ :-)  ವಿಜೇತ.. _____________________________ ಮುಸುಕಿದಿರುಳಿನ ಅಗಾಧ ಮುಸುಕಿನಡಿ ಬದುಕು ಘಾತಿಸಿದ ಪ್ರತಿ ಘಟಿತವ್ಹಡೆದ ನರಕ ಕುಳಿ ಶೂನ್ಯ ವಿಧಾತನಾರೊ ಎಡಬಿಡದೆ ಹೊತ್ತಿಗೆ ಕಾದು ಧನ್ಯ ಅಜೇಯವಿಡುತ ಸತತ ಸೋಲೋಪ್ಪದಾತ್ಮದ ಜೀಕು. ಅಸರೆ ತಪ್ಪಿದ ಅಗಣಿತ ಸಂಘಟನೆಗಳದೆಷ್ಟೊ ಕಣ್ಣ ಮಿಟುಕಿಸಲಿಲ್ಲ, ಭೋರೆಂದು ಗೋಳಿಡಲೂ ಇಲ್ಲ; ಕಾಯಿಸದೆ ಬಡಿದರೂ ಕಬ್ಬಿಣ, ಚೀರಿದವಕಾಶ ನೋವಿನ ಕ್ಷಣ ತಲೆಯೆಲ್ಲಾ ನೆತ್ತರಾದರೂ ರಣ, ತಗ್ಗಿಸಿ ನೋಡದೆ ಚರಣ. ಕಂಬನಿ ಆಕ್ರೋಶದೀ ಗಳಿಗೆ ವರ್ತಮಾನ, ಪ್ರಸ್ತುತ ದಾಟಿ ಭವಿತವಿದೆ ಭಯಾನಕ, ನೆರಳಂತೆ ಬಿಡದೆ ಕಾಡಲಿವೆ ಮೀಟಿ ಆದರು ಗತದ ಯಾತನೆ ಭರಿಸಿದ ಬವಣೆಯ ಸುಕೃತ ಕಲ್ಲೆದೆಯನಾಗಿಸಿದೆ ಕಲ್ಲೆದೆ, ತಾಳಲಿದೆ  ದಿಟ್ಟತೆಯಾಗಿ ನಿರ್ಭೀತ. ನೆಪವಾಗದು ದೈತ್ಯರಿಗೆ, ಬಿಕ್ಕಟ್ಟಿನ ಹಾದಿ ಇಕ್ಕಟ್ಟಲವಿತ ಹೆಬ್ಬಾಗಿಲು ಸತತ ಉಳಿಪೆಟ್ಟಿನ ನೋವಿಗೂ ಶಿಲೆ, ಶಿಲ್ಪವಾಗುವ ತರದೀ ಬಾಳು ನಾ ತಾನೆ ಒಡೆಯ ನನ್ನ ಭವಿತದ ವಿಧಾತ ನಾನೆ ನಾವಿಕ, ನನ್ನಜೇಯಾತ್ಮ ದಿಗ್ವಿಜಯ ಸಮರ್ಥ. ಮೂಲ: ವಿಲಿಯಂ ಅರ್ನೆಸ್ಟ್ ಹೆನ್ಲೇ ಭಾವಾನುವಾದ: ನಾಗೇಶ ಮೈಸೂರು
Submitted by Vasant Kulkarni Wed, 08/28/2013 - 11:38

In reply to by nageshamysore

ತುಂಬಾ ಥ್ಯಾಂಕ್ಸ್ ನಾಗೇಶ್ ಅವರೆ, ನಿಮ್ಮ ಪದ್ಯ ಕೂಡ ಬಹಳ ಚೆನ್ನಾಗಿದೆ. ನೀವು ಬರೆಯುವ ವೇಗದಲ್ಲಿ ನಮಗೆ ಓದಲು ಕೂಡ ಆಗುವುದಿಲ್ಲ!!
Submitted by Vasant Kulkarni Wed, 08/28/2013 - 11:38

ತುಂಬಾ ಥ್ಯಾಂಕ್ಸ್ ನಾಗೇಶ್ ಅವರೆ, ನಿಮ್ಮ ಪದ್ಯ ಕೂಡ ಬಹಳ ಚೆನ್ನಾಗಿದೆ. ನೀವು ಬರೆಯುವ ವೇಗದಲ್ಲಿ ನಮಗೆ ಓದಲು ಕೂಡ ಆಗುವುದಿಲ್ಲ!!
Submitted by venkatb83 Wed, 08/28/2013 - 16:30

In reply to by Vasant Kulkarni

ಈ ಚ್ಹಿತ್ರವನ್ನು ಡೊವ್ನ್ಲೋಡ್ ಮಾಡಿ ನೋಡಿರುವೆ.. ಇದು ಎಲ್ಲರೂ ನೋಡಬಹುದಾದ‌ ಸಿನೆಮ‌ ಅಲ್ಲ.... ! ಮಂಡೇಲಾ ಬಗ್ಗೆ ಆಸಕ್ತಿ ‍,ಕ್ರೀಡಾ ವಿಷಯಗಳಲೀ ಆಸಕ್ತಿ ‍ ಬೇಕು.. \|
Submitted by venkatb83 Wed, 08/28/2013 - 16:30

In reply to by Vasant Kulkarni

ಈ ಚ್ಹಿತ್ರವನ್ನು ಡೊವ್ನ್ಲೋಡ್ ಮಾಡಿ ನೋಡಿರುವೆ.. ಇದು ಎಲ್ಲರೂ ನೋಡಬಹುದಾದ‌ ಸಿನೆಮ‌ ಅಲ್ಲ.... ! ಮಂಡೇಲಾ ಬಗ್ಗೆ ಆಸಕ್ತಿ ‍,ಕ್ರೀಡಾ ವಿಷಯಗಳಲೀ ಆಸಕ್ತಿ ‍ ಬೇಕು.. \|
Submitted by Vasant Kulkarni Fri, 08/30/2013 - 06:53

In reply to by venkatb83

ನಮಸ್ಕಾರ ವೆಂಕಟ್ ಅವರೆ, ನಿಮ್ಮ ಅನಿಸಿಕೆಯ ಪ್ರಕಾರ ಈ ಸಿನೆಮಾ ಎಲ್ಲರಿಗೂ ಹಿಡಿಸದೇ ಇರಬಹುದು. ಆದರೆ ಎಲ್ಲರೂ ನೋಡಬಹುದಾದ ಸಿನೆಮಾ ಮಾತ್ರ ನಿಜ. ಕುಟುಂಬದ ಎಲ್ಲ ಜನ ಒಟ್ಟಿಗೆ ಕುಳಿತು ನೋಡಬಹುದಾದ ಸಿನೆಮಾ. ನೆಲ್ಸನ್ ಮಂಡೇಲಾರ ಜೈಲು ವಾಸದ ನಂತರದ ಜೀವನದ ಬಗ್ಗೆಯ ಈ ಸಿನೇಮಾದಲ್ಲಿ ರಗ್‍ಬಿ ಆಟದ ದೃಶ್ಯಗಳು ಅಲ್ಲಲ್ಲಿ ಕಾಣ ಸಿಗುತ್ತವೆ. ಮುಖ್ಯವಾಗಿ ಈ ಸಿನೆಮಾದ ಮತು ನನ್ನ ಲೇಖನದ ಒಟ್ಟಾರೆ ಆಶಯ ನೆಲ್ಸನ್ ಮಂಡೇಲಾರಂತಹ ಮಹಾನ್ ಪುರುಷರಿಂದ ನಾವೆಲ್ಲ ಒಳ್ಳೆಯ ಪ್ರೇರಣೆ ಪಡೆದು ನಮ್ಮ ಕೈಲಾದಷ್ಟು ಒಳ್ಳೆಯದನ್ನು ಮಾಡಬಹುದು ಎಂಬುದಷ್ಟೇ.