೧೦೩. ಲಲಿತಾ ಸಹಸ್ರನಾಮ ೩೮೩ರಿಂದ ೩೯೦ನೇ ನಾಮಗಳ ವಿವರಣೆ

೧೦೩. ಲಲಿತಾ ಸಹಸ್ರನಾಮ ೩೮೩ರಿಂದ ೩೯೦ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೩೮೩-೩೯೦

Sadyaḥ-prasāidinī सद्यः-प्रसादिनी (383)

೩೮೩. ಸದ್ಯಃ-ಪ್ರಸಾದಿನೀ

             ದೇವಿಯನ್ನು ಯಾರು ಅಂತರಂಗದಲ್ಲಿ ಬೇಡುತ್ತಾರೆಯೋ ಅವರ ಮೇಲೆ ದೇವಿಯು ತನ್ನ ಕೃಪೆಯನ್ನು ತಕ್ಷಣವೇ ಹರಿಸುತ್ತಾಳೆ. ಇದನ್ನು ಹಿಂದಿನ ಎರಡು ನಾಮಗಳಲ್ಲಿ ಚರ್ಚಿಸಲಾಗಿದೆ. ಆ ವಿಧವಾದ ಅಂತರಂಗದ ಪೂಜೆಗಳಿಂದ ಆಕೆಯ ಕೃಪೆಯು ಎಣೆಯಿಲ್ಲದ್ದಾಗುತ್ತದೆ.

Viśva-sākṣinī विश्व-साक्षिनी (384)

೩೮೪. ವಿಶ್ವ-ಸಾಕ್ಷಿಣೀ

             ದೇವಿಯು ವಿಶ್ವಕ್ಕೇ ಸಾಕ್ಷಿ ಭೂತಳಾಗಿದ್ದಾಳೆ. ಇದು ಪರಬ್ರಹ್ಮದ ಸ್ವರೂಪವಾದ ನಿರ್ಗುಣ ಬ್ರಹ್ಮದ ಅದ್ವಿತೀಯ ಲಕ್ಷಣವಾಗಿದೆ. ಕೇವಲ ಪರಬ್ರಹ್ಮವೊಂದೇ ಈ ಜಗತ್ತಿನ ಸಮಸ್ತ ಕಾರ್ಯಗಳಿಗೆ ಸಾಕ್ಷಿಯಾಗಬಲ್ಲದು; ಪ್ರಪಂಚದಲ್ಲಿನ ಯಾವುದೇ ವಿಧವಾದ ಚಟುವಟಿಕೆಗಳಲ್ಲಿ ಭಾಗವಹಿಸದೆ.

Sākṣivarjitā साक्षिवर्जिता (385)

೩೮೫. ಸಾಕ್ಷಿವರ್ಜಿತಾ

             ದೇವಿಯು ಸಾಕ್ಷಿ ಇಲ್ಲದವಳಾಗಿದ್ದಾಳೆ. ಪರಬ್ರಹ್ಮದ ಇರುವಿಕೆಯ ಸ್ವರೂಪವನ್ನು ಯಾರಿಂದಲೂ ನೋಡಲಾಗುವುದಿಲ್ಲ, ಏಕೆಂದರೆ ಪರಬ್ರಹ್ಮದ ಈ ವಿಧವಾದ ರೂಪಕ್ಕೆ ಯಾವುದೇ ವಿಧವಾದ ಬಲ್ಲ ಮೂಲಗಳಿಲ್ಲ. ಪರಿಶುದ್ಧ ಬ್ರಹ್ಮದ ಮತ್ತೊಂದು ಲಕ್ಷಣವನ್ನು ಇಲ್ಲಿ ಹೇಳಲಾಗಿದೆ.

Ṣaḍaṅaga- devatāyuktā षडङग- देवतायुक्ता (386)

೩೮೬. ಷಡಂಗ- ದೇವತಾಯುಕ್ತಾ 

            ಷಟ್ (ಆರು) + ಅಂಗ (ಭಾಗಗಳು) ಅಂದರೆ ಆರು ಭಾಗಗಳು. ಪ್ರತಿಯೊಂದು ಮಂತ್ರಕ್ಕೂ ಆರು ಭಾಗಗಳಿರುತ್ತವೆ ಮತ್ತು ಪ್ರತಿಯೊಂದು ಭಾಗವೂ ಒಂದೊಂದು ದೇವತೆಯ ಆಧೀನದಲ್ಲಿರುತ್ತದೆ ಹಾಗು ಆ ದೇವತೆಗಳನ್ನು ಸ್ಥಾಪಿತವಾಗಿರುವ ದೇವರ ಅಂಗ-ದೇವತೆಗಳೆಂದು ಕರೆಯುತ್ತಾರೆ. ಈ ಆರು ಭಾಗಗಳೆಂದರೆ ಹೃದಯ, ಶಿರ, ಕೇಶ, ತೋಳುಗಳು, ಕಣ್ಣುಗಳು ಮತ್ತು ಆಯುಧಗಳು.  ಮಂತ್ರವನ್ನು ಉಚ್ಛರಿಸುವ ಮೊದಲು ಹಾಗೂ ನಂತರ ಈ ಅಂಗದೇವತೆಗಳು ಸೂಚಿಸುವ ಭಾಗಗಳನ್ನು ನಮ್ಮ ದೇಹದಲ್ಲಿ ಬೆರಳುಗಳಿಂದ ಮುಟ್ಟಿಕೊಳ್ಳುವುದರ ಮೂಲಕ ಪೂಜಿಸಲಾಗುತ್ತದೆ. ಇದು ಬಾಹ್ಯ ಪೂಜೆಯ ಮಟ್ಟಿಗೆ ಸರಿ. ಶಿವನಿಗೆ ಆರು ವಿಧವಾದ ಗುಣಗಳಿವೆ ಮತ್ತು ಅವು ಯಾವುವೆಂದರೆ ಸರ್ವಜ್ಞತ್ವ, ಪರಿಪೂರ್ಣತ್ವ, ಅತ್ಯುನ್ನತವಾದ ಚೈತನ್ಯ ಅಥವಾ ಪರಮೋನ್ನತವಾದ ಪ್ರಜ್ಞೆ, ಸ್ವಾತಂತ್ರ್ಯ, ಎಂದಿಗೂ ಕ್ಷೀಣಿಸದ (ನಿರಂತರವಾಗಿರುವ) ಶಕ್ತಿ ಮತ್ತು ಅನಂತತೆ. ಇವು ನಿರ್ಗುಣ ಬ್ರಹ್ಮದ ಅಥವಾ ಬ್ರಹ್ಮನ ಪ್ರಕಾಶ ರೂಪದ ಲಕ್ಷಣಗಳಾಗಿವೆ. ಈ ನಾಮವು ದೇವಿಯು ಆರು ಅಂಗ ದೇವತೆಗಳಿಂದ ಆವರಿಸಲ್ಪಟ್ಟಿದ್ದಾಳೆ ಎಂದು ಹೇಳುತ್ತದೆ.

           ದೇವಿಯನ್ನು ಪ್ರಕಾಶ ಸ್ವರೂಪವಾದ ನಿರ್ಗುಣ ಬ್ರಹ್ಮವಾಗಿಯೂ ಮತ್ತು ಸಾಕಾರ ಸ್ವರೂಪದ ಗುಣ-ಲಕ್ಷಣಗಳುಳ್ಳ ವಿಮರ್ಶ ರೂಪದಲ್ಲಿಯೂ ಎರಡು ವಿಧವಾಗಿ ವರ್ಣಿಸಲಾಗುತ್ತದೆ ಎನ್ನುವುದನ್ನು ನೆನಪಿಡಬೇಕು.

ṣāḍguṇya-paripūritā षाड्गुण्य-परिपूरिता (387)

೩೮೭. ಷಾಢ್ಗುಣ್ಯ-ಪರಿಪೂರಿತಾ

           ದೇವಿಯು ಪವಿತ್ರವೆಂದು ಪರಿಗಣಿಸಲಾಗಿರುವ ಆರು ಗುಣಗಳಿಂದ ಶೋಭಿತಳಾಗಿದ್ದಾಳೆ. ಅವುಗಳೆಂದರೆ, ಸಮೃದ್ಧಿ, ಧಾರ್ಮಿಕತೆ, ಕೀರ್ತಿ, ಪ್ರಾಪಂಚಿಕ ಸಂಪತ್ತು (ಐಹಿಕ ಸಿರಿ ಸಂಪದಗಳು), ವಿವೇಕ ಮತ್ತು ವೈರಾಗ್ಯ/ ನಿರ್ಲಿಪ್ತತೆ. ನಿರ್ಲಿಪ್ತತೆ ಏಕೆಂದರೆ ಆಕೆಯ ಆಯ್ದ ಕೆಲವರಿಗೆ ಕರ್ಮ ನಿಯಮವನ್ನು ಮೀರಿ ವಿಶೇಷವಾದ ಸೌಲಭ್ಯಗಳನ್ನು ಕೊಡುವುದಿಲ್ಲ. ಆಕೆಯು ಪಕ್ಷಪಾತವನ್ನು ಉತ್ತೇಜಿಸುವವಳಲ್ಲ.

Nitya-klinnā नित्य-क्लिन्ना (388)

೩೮೮. ನಿತ್ಯ-ಕ್ಲಿನ್ನಾ

             ಆಕೆಯ ನಿತ್ಯವಾದ ಕರುಣಾಪೂರಿತ ಸ್ವಭಾವವನ್ನು ಇಲ್ಲಿ ಹೇಳಲಾಗಿದೆ. ಇದು ೩೨೬ನೇ ನಾಮವಾದ ಕರುಣಾ-ರಸ-ಸಾಗರಾ ಇದರ ಮುಂದುವರಿಕೆಯಾಗಿದೆ. ನಿತ್ಯ-ಕ್ಲಿನ್ನಾ ಎನ್ನುವುದು ಶುಕ್ಲ ಪಕ್ಷದ ತೃತೀಯ (ತದಿಗೆಯ) ದಿನವನ್ನು ಪ್ರತಿನಿಧಿಸುವ ’ತಿಥಿ ನಿತ್ಯ’ ದೇವತೆಯೊಬ್ಬಳ ಹೆಸರು.

Nirupamā निरुपमा (389)

೩೮೯. ನಿರುಪಮಾ

             ದೇವಿಯು ಹೋಲಿಕೆಯಿಲ್ಲದವಳು ಅಥವಾ ಉಪಮೆಯಿಲ್ಲದವಳು. ಬ್ರಹ್ಮವು ಅನಂತವಾಗಿದ್ದು ಅದನ್ನು ಪರಿಮಿತವಾಗಿರುವ ಮನುಜನು ವಿವರಿಸಲಾರ. ಶ್ವೇತಾಶ್ವತರ ಉಪನಿಷತ್ತು (೪. ೧೯) ಹೇಳುತ್ತದೆ, "ಅವನನ್ನು ವಿವರಿಸಲು ಯಾವುದೇ ಮಾರ್ಗವಿಲ್ಲ. ಬಹಳವೆಂದರೆ ನೀವು ಅವನ ಬಗ್ಗೆ ಏನು ಹೇಳಬಹುದೆಂದರೆ ಅವನು ಅವನಾಗಿಯೇ ಇದ್ದಾನೆ".

            ಆದಿ ಶಂಕರರು ಹೇಳುತ್ತಾರೆ, "ಅವನಂತೆ ಯಾವುದೇ ವಸ್ತುವಿಲ್ಲ ಮತ್ತು ಅವನ ಹೋಲಿಕೆಗೆ ನಿಲುಕುವುದು ಯಾವುದೂ ಇಲ್ಲ. ಅವನು ಅದ್ವಿತೀಯನು. ಅವನು ಅನಂತನು. ಅವನನ್ನು ವಿವರಿಸಬಹುದಾದ ಏಕೈಕ ಮಾರ್ಗವೆಂದರೆ ಅವನ ಅದ್ವಿತೀಯತೆಯನ್ನು ಉಲ್ಲೇಖಿಸಬಹುದು, ಮತ್ತು ವಾಸ್ತವವಾಗಿ ಏನೂ ಹೇಳಿದಂತಾಗುವುದಿಲ್ಲ.

          ಈ ತತ್ವದ ಕುರಿತಾದ ಒಂದು ಕಥೆಯಿದೆ. ಇಬ್ಬರು ಸಹೋದರರನ್ನು ಅವರ ತಂದೆಯು ಆಧ್ಯಾತ್ಮಿಕ ಮಾರ್ಗವನ್ನು ಕೈಗೊಳ್ಳಲು ಒಬ್ಬ ಗುರುವಿನ ಬಳಿಗೆ ಕಳುಹಿಸಿದನು. ಅವರು ಹಿಂತಿರುಗಿದ ಮೇಲೆ ಅವರ ತಂದೆಯು ಅವರಿಬ್ಬರನ್ನೂ ದೇವರನ್ನು ವರ್ಣಿಸಲು ಹೇಳಿದನಂತೆ. ಹಿರಿಯ ಸಹೋದರನು ದೇವರ ಕುರಿತಾಗಿ ದೀರ್ಘ ಭಾಷಣವನ್ನೇ ಮಾಡಿದನಂತೆ. ಚಿಕ್ಕವನನ್ನು ಕೇಳಿದಾಗ ಅವನು ಸುಮ್ಮನೆ ಇದ್ದನಂತತೆ. ಆವಾಗ ಅವರ ತಂದೆಯು ಹೇಳಿದನಂತೆ, "ನೀನು ಏನನ್ನೂ ಹೇಳುತ್ತಿಲ್ಲ ಏಕೆಂದರೆ ನೀನು ದೇವರನ್ನು ಕುರಿತು ತಪ್ಪಿಲ್ಲದೇ ಮಾತನಾಡುವುದಕ್ಕೆ ಸಾಧ್ಯವಾಗದು ಎನ್ನುವುದನ್ನು ಅರಿತಿದ್ದೀಯ". ಇದುವೇ ದೇವರ ಹಿಂದಿರುವ ತತ್ವವಾಗಿದೆ. ಬ್ರಹ್ಮವನ್ನು ಪರಿಪೂರ್ಣವಾಗಿ ವರ್ಣಿಸಲು ಯಾರಿಂದಲೂ ಸಾಧ್ಯವಿಲ್ಲ. ಬಹಳವೆಂದರೆ ಒಬ್ಬರು ಅವನನ್ನು ಕುರಿತು ಅವನು ಹೀಗೆ (ಸಕಾರಾತ್ಮಕವಾಗಿ) ಮತ್ತು ಅವನು ಹಾಗಲ್ಲ (ನಕಾರಾತ್ಮಕವಾಗಿ) ಎಂದು ಚರ್ಚಿಸಬಹುದಷ್ಟೇ.

Nirvāṇa-sukha-dāyinī निर्वाण-सुख-दायिनी (390)

೩೯೦. ನಿರ್ವಾಣ-ಸುಖ-ದಾಯಿನೀ

             ನಿರ್ (ಬಿಡುಗಡೆಗೊಂಡ) + ವಾಣ (ದೇಹವೆಂದು ಅರ್ಥವಿರುವ ಬಾಣ ಶಬ್ದದಿಂದ ನಿಷ್ಪತ್ತಿಗೊಳಿಸಲ್ಪಟ್ಟದ್ದು) = ನಿರ್ವಾಣ. ಯಾವಾಗ ಮನಸ್ಸು ದೇಹದಿಂದ ಮುಕ್ತವಾಗುತ್ತದೆಯೋ ಆಗ ಅದು ನಮ್ಮನ್ನು ಪರಮಾನಂದೆಡೆಗೆ ಕೊಂಡೊಯ್ಯುತ್ತದೆ. ಯಾವಾಗ ಒಬ್ಬನು ಉನ್ನತ ಸ್ತರದ ಪ್ರಜ್ಞೆಯನ್ನು ಹೊಂದುತ್ತಾನೆಯೋ, ಆಗ ಭೌತಿಕ ಕಾಯದ ನೆನಪು ಇರುವುದಿಲ್ಲ. ಯಾವಾಗ ದೇಹದ ಬಾಧೆಗಳನ್ನು ನಾಶಗೊಳಿಸಲಾಗುತ್ತದೆಯೋ; ಆಗ ಹೊಂದಲ್ಪಡುವುದೇ ನಿತ್ಯಾನಂದ. ಯಾರು ದೇವಿಯನ್ನು ನಾಮ ೩೮೧ ಮತ್ತು ೩೮೨ರಲ್ಲಿ ಹೇಳಿರುವಂತೆ ಪೂಜಿಸುತ್ತಾರೋ ಅವರಿಗೆ ದೇವಿಯು ನಿತ್ಯಾನಂದವನ್ನು ಕರುಣಿಸುತ್ತಾಳೆ.

           ಈ ಹಂತವನ್ನು ಕೃಷ್ಣನು ಭಗವದ್ಗೀತೆಯಲ್ಲಿ (ಆಧ್ಯಾಯ ೫.೨೪ ಮತ್ತು ೨೫) ವಿವರಿಸಿದ್ದಾನೆ; “ಯಾರು ಆತ್ಮನಲ್ಲಿಯೇ ಸುಖವುಳ್ಳವನೋ, ಆತ್ಮನಲ್ಲಿಯೇ ಆರಾಮವುಳ್ಳವನೋ, ಹಾಗೆಯೇ ಆತ್ಮನಲ್ಲಿಯೇ ಪ್ರಕಾಶವುಳ್ಳವನೋ, ಆ ಯೋಗಿಯು ಬ್ರಹ್ಮಸ್ವರೂಪವನ್ನು ಹೊಂದಿ ಮುಕ್ತಿಯನ್ನು ಪಡೆಯುತ್ತಾನೆ. ಕಲ್ಮಷವಿಲ್ಲದವರೂ, ದ್ವಂದ್ವರಹಿತರೂ ಜಿತೇಂದ್ರಿಯರೂ ಸರ್ವಭೂತಹಿತದಲ್ಲಿ ನಿರತರೂ ಆದ ಋಷಿಗಳು ಮುಕ್ತಿಯನ್ನು ಪಡೆಯುತ್ತಾರೆ”.

******

          ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 383-390 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Wed, 08/28/2013 - 03:18

ಶ್ರೀಧರರೆ, ೧೦೩. ಲಲಿತಾ ಸಹಸ್ರನಾಮ ೩೮೩ರಿಂದ ೩೯೦ನೇ ನಾಮಗಳ ವಿವರಣೆಯ ಸಾರ ಸಂಗ್ರಹಪರಿಷ್ಕರಣೆಗೆ ಸಿದ್ದ.

ಲಲಿತಾ ಸಹಸ್ರನಾಮ ೩೮೩-೩೯೦
__________________________________

೩೮೩. ಸದ್ಯಃ-ಪ್ರಸಾದಿನೀ 
ಬಾಹ್ಯಾಚರಣೆಗು ಕರುಣೆ, ಆಂತರ್ಯಾಚರಣೆಗು ಮನ್ನಣೆ
ಬೇಡಿದವರೆಲ್ಲರ ಬಯಕೆ ತೀರಿಸುವ, ಮಾತೃತ್ವ ಪ್ರೇರಣೆ
ಪೂಜಿಸಲಂತರಂಗದಲವಳನು, ಎಣೆಯಿಲ್ಲದ ಕೃಪೆ ಕ್ಷಿಪ್ರ
ದಯಪಾಲಿಸುವ ಸದ್ಯಃಪ್ರಸಾದಿನೀ, ಸಹಸಾಧಕ ಪಾತ್ರ!

೩೮೪. ವಿಶ್ವಸಾಕ್ಷಿಣೀ 
ಇದ್ದೂ ಇರದ ಅಸ್ಥಿತ್ವ ಬಗೆ, ಅದ್ವಿತೀಯ ಪರಬ್ರಹ್ಮದ ಸೊಬಗೆ
ನಿರ್ಗುಣ ಪರಬ್ರಹ್ಮದ ಲಕ್ಷಣ, ಚಟುವಟಿಕೆಗೆಲ್ಲಾ ಅತೀತವಾಗೆ
ಜಗ ಸಮಸ್ತ ಕಾರ್ಯ ಕಾರಣ, ಸಾಕ್ಷೀ ಭೂತಳಾಗುವ ಲಲಿತೆ
ವಿಶ್ವಕೇ ಸಾಕ್ಷಿಯಾಗಿ ವಿಶ್ವಸಾಕ್ಷಿಣೀ, ಜಗವೆಲ್ಲಾ ನಿಭಾಯಿಸುತೆ!

೩೮೫. ಸಾಕ್ಷಿವರ್ಜಿತಾ 
ಸಕಲ ವಿಶ್ವ ಸಾಕ್ಷಿಭೂತಳಾದವಳಿಗೆ, ಸಾಕ್ಷಿಯಾಗುವವರಾರು?
ಪರಬ್ರಹ್ಮದೊಳಗಿನ ಅಣುವಾಗಿ, ಸ್ವರೂಪವನು ಕಾಣುವರಾರು
ಸಾಕ್ಷಿಮೂಲಗಳಿರದ ಪರಿಶುದ್ಧ ರೂಪ, ಸಾಕ್ಷಿವರ್ಜಿತಾ ಲಲಿತ
ಶುದ್ಧ ಪರಬ್ರಹ್ಮದ ಲಕ್ಷಣ ಸ್ವರೂಪ, ಅನಾವರಣ ಸಾಕ್ಷಿರಹಿತ!

೩೮೬. ಷಡಂಗ-ದೇವತಾಯುಕ್ತಾ
ಷಡ್ಸಗುಣನಿರ್ಗುಣ ಸಂಯುಕ್ತ ಲಲಿತೆ, ಷಡಂಗ ದೇವತಾಯುಕ್ತಾ
ಷಡಂಗ ಮಂತ್ರಾಧೀನ, ಬಾಹ್ಯ ಪೂಜಿತಾಂಗ ದೇವತೆ ಸಂಯುಕ್ತ
ಹೃದಯ ಶಿರ ಕೇಶ ತೋಳು ಕಣ್ಣು ಆಯುಧ ಸ್ಪರ್ಷಿತವೆ ಸಗುಣ
ಸರ್ವಜ್ಞ ಪರಿಪೂರ್ಣ ಪರಮ-ಚೈತನ್ಯ ಸ್ವಾತಂತ್ರ್ಯ ಅಕ್ಷೀಣ-ಶಕ್ತಿ ಅನಂತತೆ ನಿರ್ಗುಣ!

೩೮೭. ಷಾಢ್ಗುಣ್ಯ- ಪರಿಪೂರಿತಾ
ಪವಿತ್ರ ಗುಣಗಳು ಆರಂತೆ, ದೇವಿ ಲಲಿತಾ ಶೋಭಿಸುವಂತೆ
ಸಮೃದ್ಧಿ ಧಾರ್ಮಿಕತೆ ಕೀರ್ತಿ ಪ್ರಾಪಂಚಿಕ-ಸಂಪದ ವಿವೇಕತೆ
ಕೊಡುತ ಭಕ್ತರಿಗೆಲ್ಲ, ಕರ್ಮನಿಯಮಾನುಸಾರ ನಿಷ್ಪಕ್ಷಪಾತ
ನಿರ್ಲಿಪ್ತತೆ ವೈರಾಗ್ಯಗುಣ, ಸೂಕ್ತ ಸೌಲಭ್ಯಕಷ್ಟೆ ಲಭ್ಯವಿಡುತ!

೩೮೮. ನಿತ್ಯ-ಕ್ಲಿನ್ನಾ
ಸಾಗರ ಸರೋವರದಲಿಹ ನಿತ್ಯ ಜಲದಂತೆ ಲಲಿತಾ ಮನ
ನಿರಂತರದಲಿ ಕರುಣೆಯನ್ಹರಿಸುವ ದೇವಿ ಘನ ನಿತ್ಯ ಕ್ಲಿನ್ನಾ
ಖಿನ್ನತೆ ದೀನತೆ ತೊಳಲಾಟಕೆ, ತಿಥಿ ನಿತ್ಯ ದೇವತೆಯ ಜತೆ
ಭಕ್ತ ಕುಲ ಕೋಟಿಗೆ ಕರುಣಾ ಮಜ್ಜನ, ಶೋಕ ವಿನಾಶಿಸುತೆ!

೩೮೯. ನಿರುಪಮಾ 
ಉಪಮೆಯಿಲ್ಲದ ಉಪಮೆ, ಅನಂತ ಬ್ರಹ್ಮದ ವಿವರಣೆ ಭ್ರಮೆ
ಪರಿಮಿತ ಮನುಜ ದಿಗ್ಭ್ರಮೆ, ಅವನವನೆ ಅನ್ನುವ ಸಮರ್ಪಣೆ
ಅದ್ವಿತೀಯತೆಯಷ್ಟೆ ಉಲ್ಲೇಖ, ಯಾರೂ ಅವನಲ್ಲದ ಅನೂಹ್ಯ
ವರ್ಣಿಸಿಯೂವರ್ಣನಾತೀತ ಬೆಳಕು, ಆತ್ಮದಂತರ್ಗತ ರಹಸ್ಯ!

೩೯೦. ನಿರ್ವಾಣ-ಸುಖ-ದಾಯಿನೀ 
ಮನ ದೇಹದಿಂದ ವಿಮುಕ್ತ, ನಮ್ಮನೊಯ್ಯುತ ಪರಮಾನಂದದತ್ತ
ಉನ್ನತ ಪ್ರಜ್ಞೆ ಸಾಧಿಸಿದಾತ, ಭೌತಿಕ ಶರೀರ ಪರಿವೆಯಿರದೆ ಮುಕ್ತ
ದೇಹ ಭಾದೆ ನಾಶಕೆ ನಿತ್ಯಾನಂದ, ದೇವಿಯನುಗ್ರಹದಿಂದೊಂದುತ್ತ
ಆತ್ಮ ಯೋಗಿಗೆ ಮುಕ್ತಿ ನೀಡುವಾ , ನಿರ್ವಾಣಸುಖದಾಯಿನಿ ಚಿತ್ತ!

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು