ಕಾರ್ಪೋರೇಟ್ ಪುಣ್ಯಕಥೆ !!!

ಕಾರ್ಪೋರೇಟ್ ಪುಣ್ಯಕಥೆ !!!

 

"ತಾತಾ, ಬನ್ನಿ ಕಥೆ ಹೇಳಿ ... ಇಲ್ದೆ ಇದ್ರೆ ನನಗೆ ನಿದ್ದೆ ಬರೋಲ್ಲ"

 

"Rahul, taatha is still having his dinner ನೀ ಹೋಗಿ ಸ್ಲೀಪ್ ಮಾಡು, ಡಿಲೇ ಮಾಡಬೇಡ ...

 

"that's okay Dad .. I will wait"

 

ತಾತನ ಊಟ ಆಯ್ತು ... ಮೊಮ್ಮಗನ ರೂಮಿಗೆ ನೆಡೆದು, ಅವನನ್ನು ಮಲಗಿ, ಪಕ್ಕದಲ್ಲಿ ಕೂತು ಕಥೆ ಹೇಳಲು ಶುರು ಮಾಡಿದರು "ಮಹಿಷಾಸುರ ಅಂತ ಒಬ್ಬ ರಾಕ್ಷಸ ಇದ್ದ ..." .. ಅರ್ಧ ಘಂಟೆ ಆಯ್ತು ... ಮೊಮ್ಮಗ ನಿದ್ದೆ ... ತಾತ ಹೊರಗೆ ಬಂದರು ...

 

"ಚೆನ್ನಾಗಿ ಕಥೆ ಕೇಳೋ ಅಭ್ಯಾಸ ಮಾಡಿಬಿಟ್ಟಿದ್ದೀರ ... ಕಥೆ ಇಲ್ದೇ ಅವನು ನಿದ್ದೆ ಮಾಡೋದೇ ಇಲ್ಲ .. ಲೇಟ್ ಆದ್ರೆ ಬೆಳಿಗ್ಗೆ ಏಳೋದು ಲೇಟ್ ಆಗುತ್ತೆ ... ಆಟೋದವನು ಮನೆ ಮುಂದೆ ಸುಮ್ನೆ ತರಳೆ ಮಾಡ್ತಾನೆ ... ಇವನಿಗೂ ಅರ್ಥವಾಗೋಲ್ಲ ... ನಿಮಗೂ ಅರ್ಥವಾಗೋಲ್ಲ"

 

"ಈಗ ಏನಾಯ್ತೂ ಅಂತ ಅಷ್ಟು ಒದ್ದಾಡ್ತೀಯ ? ನಿನೂ ಕಥೆ ಕೇಳಿ ಬೆಳೆದಿದ್ದು ಮರೆತು ಹೋಯ್ತಾ? ಈಗಲೇ ರಾಹುಲ್’ನ ಅಷ್ಟು ಬಿಜಿ ಇಟ್ಟಿರ್ತೀರ. ಇನ್ನು ಅವನು ಪುರಾಣ ಪುಣ್ಯಕಥೆಗಳ ಪುಸ್ತಕ ಹಿಡಿದುಕೊಳ್ಳೋಕ್ಕೆ ಬಿಡ್ತೀರಾ? ಇನ್ನು ಆ ಸ್ಕೂಲ್ ಪುಸ್ತಕ ... ಬಡ್ಕೋಬೇಕು ... ಪಾಠಗಳನ್ನು ಓದಿಸಬೇಕಾದರೆ ಕಥೆ ಹೇಳೋಣ ಅಂದ್ರೆ, ಆ ರಾಹುಲ್ ಗಾಂಧಿ ಬಗ್ಗೆ ಪಾಠ ಇಟ್ಟಿದ್ದಾರೆ. ಅವನನ್ನ ಯಾವ ಪುರಾಣ ಪುರುಷನಿಗೆ ಹೋಲಿಸಿ ಕಥೆ ಹೇಳಲಿ ಹೇಳು ? ನಾನೂ ಮಗೂಗೆ ಕಥೆ ಹೇಳ್ದೇ ಹೋದ್ರೆ, ಮುಂದಿನ ಎರಡು ಪೀಳಿಗೆ ಕಳೆದರೆ ಪುರಾಣ ಕಥೆಗಳೇ ನಶಿಸಿ ಹೋಗುತ್ತೆ ... ಇನ್ನು ಪಾಪ ಮಗೂ ಹೆಸರು ... ಎಷ್ಟೋ ಹೆಸರುಗಳನ್ನು ಸೂಚಿಸಿದೆ .. ಎಲ್ಲಾ ಬಿಟ್ಟು ರಾಹುಲ್ ಅಂತ ಬೇರೆ ಇಟ್ಟಿದ್ದೀಯಾ "

 

"ಅಪ್ಪಾ, ಈಗಿನ ಕಾಲಕ್ಕೆ ಹೆಸರು ಮಾಡರ್ನ್ ಆಗಿ ಇರಬೇಕು ... ನಾಳೆ ವಿದೇಶಕ್ಕೆ ಹೋದರೆ ಅವರಿಗೂ ಹೆಸರು ಸಲೀಸಾಗಿ ಇರಬೇಕು ... ನಿಮ್ಮ ಹೆಸರಿನ ಹಾಗೆ ವೆಂಕಟರಮಣರಾವ್ ಅಂತಾನೇ ಇಡೋಕ್ಕೆ ಆಗುತ್ತಾ? ಅಷ್ಟಕ್ಕೂ ರಾಹುಲ್ ದ್ರಾವಿಡ್’ನ ಹೆಸರಿಂದ ರಾಹುಲ್ ತೊಗೊಂಡೆ .. ರಾಹುಲ್ ಗಾಂಧಿ ಹೆಸರಿನಿಂದ ಏನಲ್ಲ "

 

"ಹೆಸರೇನೋ ಇಟ್ಟೆ ... ಬ್ಯಾಟ್ ಕೈಗೆ ತೊಗೊಳ್ಳೋಕ್ಕೆ ಬಿಡೋಲ್ಲ ? ಅದೇನು ಮಾಡರ್ನ್ ಹೆಸರೋ ನನಗೆ ಅರ್ಥವಾಗೋಲ್ಲ ... ಅಮೇರಿಕದವರೇ ತೊಗೋ ... ಆ ಜೇಮ್ಸ್ ಮ್ಯಾಡಿಸನ್ ಹೆಸರಲ್ಲೂ ಜೇಮ್ಸ್ ಇತ್ತು ... ಈಗಿನವರ ಹೆಸರಲ್ಲೂ ಜೇಮ್ಸ್ ಇರುತ್ತೆ ... ಅವರೇನೂ ಮಾಡರ್ನ್ ಅಂತ ಅನ್ನೋದು ನಾ ಕೇಳಿಲ್ಲ ..."

 

ಅವನ ಹೆಂಡತಿ ಮಾವನಿಗೆ ಸಪೋರ್ಟ್ ಮಾಡುತ್ತ ಉವಾಚ "raju, why are you arguing so much? ಮಾವ ಕಥೆ ಹೇಳಿದ್ದೇ ತಪ್ಪಾ?"

 

"ಶಾಲು, ನಾ ಹೇಳ್ತಿರೋದು ಅಪ್ಪ ಹೇಳೋ ಈ meaningless stories ಇಂದ ಏನು ಪ್ರಯೋಜನ?"

 

ಹಿರಿಯರಿಗೆ ರೇಗಿತು "ಯಾವುದು ಅರ್ಥವಿಲ್ಲದ್ದು ಹೇಳು?"

 

"ದುರ್ಗೆ ಜನಸಿದಳು ... ಆಮೇಲೆ ಅವಳನ್ನು ಇನ್ನೂ ಜಾಸ್ತಿ ಪವರ್ ಬೇಕು ಅಂತ ಎಲ್ಲ ದೇವತೆಗಳು ಅವರವರ ಪವರ್ ಕೊಟ್ರೂ ... ದುರ್ಗೆಗೆ ಸಿಕ್ಕಾಪಟ್ಟೆ ಶಕ್ತಿ ಬಂತು ... ಆಮೇಲೆ ಯುದ್ದಕ್ಕೆ ಹೊರಟಳು ... ಏನಿದೆಲ್ಲ? ನೀವು ಅವನಿಗೆ ಏನೇನೋ ಕಥೆ ಹೇಳಿ ಅವನ ತಲೆ ತುಂಬಿಸೋದು ಇಷ್ಟ ಆಗಲ್ಲ ... "

 

"ಹ್ ಮ್ ಮ್ ಮ್ ... ಆ ಕಾಲಕ್ಕೆ ವೇದೋಪನಿಷದ್’ಗಳು ಸಾಮಾನ್ಯ ಜನಕ್ಕೆ ಅರ್ಥವಾಗುವುದಿಲ್ಲ ಅಂತ ಸರಳ ರೀತಿಯಲ್ಲಿ ತಿಳಿಸಲು ಪುರಾಣ ಪುಣ್ಯಕಥೆಗಳು ಹುಟ್ಟಿತು. ಈಗಿನವರಿಗೆ ಈ ಕಥೆಗಳು ಅರ್ಥವಾಗಲಾರದು ಅಂತ ನಿನಗೆ ನಿನ್ನ ಭಾಷೆಯಲ್ಲೇ ಹೇಳ್ತೀನಿ ಕೇಳು ... ಒಂದು ಕಂಪನಿ ಹುಟ್ಟಿ ಇನ್ನಿತರ ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಂಡೋ ಅಥವಾ acquire ಮಾಡಿಕೊಂಡೋ ಹಿರಿದಾಗುತ್ತೆ. ಹುಟ್ಟಿದಾಗ ಇಲ್ಲದ ಶಕ್ತಿ ನಾಲ್ಕಾರು ಕಂಪನಿಗಳನ್ನು merger ಮಾಡಿಕೊಳ್ಳುವುದರ ಮೂಲಕ ಹೆಚ್ಚು ಶಕ್ತಿಯುತವಾಗುತ್ತೆ. ಹಾಗೆ ಶಕ್ತಿಯುತಗೊಂಡ ಕಂಪನಿ ತನ್ನ competitor’ಗೆ ಪೈಪೋಟಿ ನಿಲ್ತಾನೆ. ಹೌದು ತಾನೇ? ಅದೇ ನೆಡೆದಿದ್ದು ದುರ್ಗೆ ವಿಷಯದಲ್ಲೂ ..."

 

"ಆಯ್ತು ಅದೇನೋ ಸರಿ ... ನೀವು ರಾಹುಲ್’ಗೆ ಮಹಾಭಾರತದ ಕಥೆ ತಲೆಗೆ ತುಂಬಿದ್ದೀರಿ ... ಭೀಷ್ಮಾಚಾರ್ಯರ ಇಚ್ಚಾಮರಣದ ವಿಷಯ. can you believe that?"

 

"ಸ್ವಲ್ಪ ಮನಸ್ಸು ವಿಶಾಲ ಮಾಡಿ ಅರ್ಥ ಮಾಡಿಕೊಂಡರೆ ಯಾವುದೂ ಅರ್ಥಹೀನ ಅಲ್ಲ. ಮನುಷ್ಯ ತನ್ನ ಕೆಲಸ ಕಾರ್ಯ ಮಾಡಿಕೊಂಡು ಜೀವನ ಹೋರಾಟ ನೆಡೆಸುತ್ತಿದ್ದರೆ ಅವನಿಗೆ ಬೆಲೆ, ಅವನ ಸುತ್ತ ಜನ, .. ಹೀಗೆ ... ಒಮ್ಮೆ ಅವನು ನನ್ನ ಕೈಲಿ ಆಗೋಲ್ಲ ಅಂತ ಸುಮ್ಮನಾದರೆ ಅವನ ಜೀವನ ಮುಳ್ಳಿನ ಹಾಸಿಗೆ ಇದ್ದ ಹಾಗೆ ... ಕೂರೋಕ್ಕಾಗಲ್ಲ, ನಿಲ್ಲೋಕ್ಕಾಗಲ್ಲ, ಮಲಗೋಕ್ಕಾಗಲ್ಲ. ನೀರು ಬೇಕಾದರೂ ಇನ್ನೊಬ್ಬರ ಆಶ್ರಯಬೇಕು. ಮೊದ ಮೊದಲು ಅಮೃತದ ನೀರೇ ತಂದುಕೊಟ್ಟರೂ ಮುಂದೆ ಅವರವರ ಕೆಲಸದಲ್ಲಿ ಬಿಜಿ ಆದಾಗ ಮನುಷ್ಯ ಒಂಟಿ ! ಇಚ್ಚಾಮರಣ ಅಂದರೆ voluntary retirement ಅಂತ ಬೇಕಾದರೂ ಅರ್ಥಮಾಡಿಕೊಳ್ಳಬಹುದು ... ಜೀವನ ಹೋರಾಟದಲ್ಲಿ ಶಕ್ತಿಹೀನ ಅಂದರೆ ಬದುಕಿದ್ದೂ ವ್ಯರ್ಥ ಅಂತ .."

 

"ಅದು ಹೋಗಲಿ ... ದ್ರೋಣಾಚಾರ್ಯರ ಕಥೆ ತೆಗೆದುಕೊಳ್ಳೋಣ ... ರಣರಂಗದಲ್ಲಿ ಸುಮ್ನೆ ಜಪ ಮಾಡುತ್ತ ಕೂತರು ... ದೃಷ್ಟದ್ಯುಮ್ನ ಬಂದ, ತಲೆ ತೆಗೆದ. ಅಂಥಾ ದೊಡ್ಡ ಗುರುಗಳು, ಅತಿರಥರೋ, ಮಹಾರಥರೋ ಆಗಿದ್ದವರು, ಹೀಗೆ ಸಲೀಸಾಗಿ ಪ್ರಾಣ ಕಳೆದುಕೊಳ್ಳೋದು ಅಂದ್ರೆ ಸರಿ ಅನ್ನಿಸೋಲ್ಲ"

 

"ಅದು ಮಗನನ್ನು ಕಳೆದುಕೊಂಡ ದು:ಖ ... ಇನ್ನೇನಿದೆ ಜೀವನದಲ್ಲಿ ಅನ್ನೋ ವೈರಾಗ್ಯ ... ಹೋಗಲಿ ಬಿಡು .. ನಿನ್ನ ಭಾಷೆಯಲ್ಲೇ ಹೇಳ್ತೀನಿ ಕೇಳು ... ಒಂದು ಕಂಪನಿಯಲ್ಲಿ ಒಬ್ಬ ಎಷ್ಟೇ experience ಆಗಿದ್ದರೂ, ನಾನು ಇನ್ನು ಮುಂದೆ ಸುಮ್ನೆ ಕೂತಿರ್ತೀನಿ, ಕೆಲಸ ಮಾಡೋಲ್ಲ ಅಂದ್ರೆ ಏನು ಮಾಡ್ತಾರೆ? ತಲೆ ತೆಗೀತಾರೆ ... ಅಂದರೆ you are fired ಅಂತಾರೆ. ಹೌದೋ ಅಲ್ವೋ? ದ್ರೋಣರ ಕಥೆಯಲ್ಲಿ ನಮಗೆ ಕಾಣೋದೂ ಅದೇ. ರಣರಂಗದಲ್ಲಿ ಯುದ್ದ ಮಾಡುವುದು ಬಿಟ್ಟು ಶಸ್ತ್ರಾಸ್ತ್ರ ತೊರೆದು ಸುಮ್ನೆ ಕೂತರೆ ತಲೆ ಕಳೆದುಕೊಳ್ಳಬೇಕಾಗುತ್ತದೆ ಅಂತ ಸಿಂಪಲ್ಲಾಗಿ ಹೇಳಬಹುದು. ಶಸ್ತ್ರಾಸ್ತ್ರ ತೊರೆಯುವುದರ ಬಗ್ಗೆ ಇನ್ನೂ ಒಂದು ವಿಚಾರ ಹೇಳ್ತೀನಿ ಕೇಳು. ಒಂದು ಕಂಪನಿ ಶುರು ಮಾಡ್ತೀನಿ ಅಂತ ಹೊರಟು, ಆ ಬಿಸಿನೆಸ್’ನಲ್ಲಿ ಪೈಪೋಟಿಗೆ ನಿಂತವರೆಲ್ಲ ತನ್ನವರೇ ಎಂದು ಅರಿತು ಇದು ಅಧರ್ಮ ಎಂದು ಅಂದುಕೊಂಡವ ಏನು ಬಿಸಿನೆಸ್ ಮಾಡಿಯಾನು? ಇಂಥಾ ಹುಚ್ಚುತನಕ್ಕೆ ಕಡಿವಾಣ ಹಾಕಲು ಬೇಕಿರುವವ ಒಬ್ಬ Mentor. ಆತ/ಆಕೆ ಅವನಿಗೆ ವ್ಯವಹಾರ ಜೀವನದ ರಹಸ್ಯ ತಿಳಿಸಿಕೊಡುತ್ತಾರೆ. ಗೀತೋಪದೇಶದಲ್ಲಿ ನೆಡೆದಿದ್ದು ಇದೇ.

 

"ಸ್ವಲ್ಪ ಸ್ವಲ್ಪ ಅರ್ಥವಾಗ್ತಿದೆ ... ನೀವು ಯುದ್ದ ಅಂದ ಕೂಡಲೇ ಅಭಿಮನ್ಯು ಕಾಡುತ್ತಾನೆ ... ಪಾಪ, ಎಲ್ಲರೂ ಸುತ್ತುಗಟ್ಟಿ ಕೊಂದರಲ್ಲ, ಅದರ ಬಗ್ಗೆ ಏನು ಹೇಳ್ತೀರಿ"

 

"ಹ್ ಮ್ ಮ್, ನಾವು ಕೆಲವೊಮ್ಮೆ ಚಿಕ್ಕವರಾಗಿ ಚಿಕ್ಕವರ ರೀತಿಯಲ್ಲೇ ಇರಬೇಕಾಗುತ್ತದೆ. ಗಾಡ್-ಫಾದರ್ ಸಹಾಯವಿಲ್ಲದೆ ದೊಡ್ಡವರನ್ನು ಎದುರಿಸುತ್ತೇನೆ ಅಂದರೆ ಹೀಗೆ ಆಗೋದು ... ಅಭಿಮನ್ಯು ವಿಚಾರದಲ್ಲಿ ತೆಗೆದುಕೊಂಡರೆ ಅವನು ದೊಡ್ಡವರನ್ನು ಎದುರಿಸಿದ ಸಂದರ್ಭದಲ್ಲಿ ಪಾಪ God’ಉ ಇಲ್ಲ Father’ಉ ಇಲ್ಲ ... ಎಷ್ಟೋ ವರ್ಷಗಳಿಂದ ಫೀಲ್ಡ್’ನಲ್ಲಿರೋ ಅವರುಗಳ ಮುಂದೆ ಚಿಕ್ಕ ಹುಡುಗನೊಬ್ಬ ತಮ್ಮ ಮೇಲೆ ಏರಿ ಬಂದರೆ ಸುಮ್ಮನೆ ಬಿಟ್ಟಾರೆಯೇ? ಹೊಸಕಿ ಹಾಕಿಬಿಡುತ್ತಾರೆ."

 

"ಅದು ನಿಜ ಅಪ್ಪ ... ನೀವು ನಹುಷ’ನ ಕಥೆ ಹೇಳ್ತಿದ್ರಲ್ಲ ... ಇಂದ್ರಪದವಿ ಪಡೆದ ಕೊನೆಗೆ ಹಾವಾಗಿ ಕೆಳಗೆ ಬಿದ್ದ ... ಇಂದ್ರಪದವಿಯನ್ನೇ ಪಡೆದವನಿಗೆ ಸಪ್ತರ್ಷಿಗಳಲ್ಲಿ ಒಬ್ಬರಾದ ಅಗಸ್ತ್ಯರನ್ನು ಕಾಲಲ್ಲಿ ಒದ್ದಿದ್ದರ ಬಗ್ಗೆ ಏನಂತೀರಾ? "

 

"ಈ ಕಥೆಯಲ್ಲಿ ಹಲವಾರು ವಿಷಯಗಳು ಅಡಗಿದೆ ... ಮೇಲ್ನೋಟಕ್ಕೇ ಕಾಣುವ ಪ್ರಮುಖ ವಿಷಯ ಎಂದರೆ ಅಂಥ ದೊಡ್ಡ ಪದವಿ ಹೊಂದಿದ್ದೂ ಹೆಣ್ಣಿನ ಆಸೆಗೆ ಬಿದ್ದು ಹಾಳಾದ ... ರಾವಣ, ಕೀಚಕ ಎಲ್ಲರದೂ ಅದೇ ಕಥೆ. ಐ.ಟಿ. ಕಂಪನಿಗಳ ಕೆಲವು ಹಿರಿಯರ ಕಥೆ ನಿನಗೇ ಗೊತ್ತಿರಬೇಕು. ಕಾರ್ಪೋರೇಟ್ ವಿಚಾರದಲ್ಲಿ ಈ ಕಥೆಯನ್ನು ನೋಡಿದ್ದಾಗ, ಒಬ್ಬ ತನ್ನೆಲ್ಲ ಶ್ರೇಷ್ಟತೆಯಿಂದ ಮೇಲೆ ಬಂದು ಕೊನೆಗೆ ಚಿಕ್ಕವನು ಎಂದು ಒಬ್ಬ ಪ್ರಮುಖನನ್ನೇ ಕಾಲಿನಿಂದ ದೂಡುವುದು ಥರವಲ್ಲ ... ಯಾರು ಯಾವಾಗ ಮುಖ್ಯರಾಗುತ್ತಾರೆ, ಯಾರಿಂದ ಯಾವಾಗ ಆಪತ್ತು ಬರಬಹುದು ಎಂದು ಯಾರೂ ಕನಸಿನಲ್ಲಿ ಕಂಡಿರೋಲ್ಲ ... ಒಂದು ಸತ್ಯಘಟನೆ ಹೇಳ್ತೀನಿ ಕೇಳು. ನಮ್ಮಲ್ಲಿ ಒಬ್ಬ ಇದ್ದ. ಬಹಳ ಬುದ್ದಿವಂತ ಜೊತೆಗೆ ಒಳ್ಳೆ ಕೆಲಸಗಾರ. ಬಹಳ ಬೇಗ ಮೇಲೆ ಬಂದ. ವಿದೇಶಕ್ಕೆ ಹೋಗುವ ಉತ್ತಮ ಅವಕಾಶ ಕೂಡ ದೊರೆಯಿತು. ವೀಸಾ ಕೆಲಸ ಕೂಡ ಆಯ್ತು. ಅಷ್ಟು ಹೊತ್ತಿಗೆ ಯಶಸ್ಸು ಅನ್ನೋದು ಅವನ ತಲೆಗೆ ಏರಿತ್ತು. ಬೆಳಿಗ್ಗೆ ಆಫೀಸಿಗೆ ಬಂದು ಕೆಲವು ಪೇಪರ್ಸ್ ತೆಗೆದುಕೊಳ್ಳುವುದರ ಜೊತೆ ಕೆಲವು ಸೀನಿಯರ್ ಮೇನೇಜರ್’ಗಳ ಜೊತೆ ಅರ್ಜಂಟ್ ಮೀಟಿಂಗ್ ಕೂಡ ನೇಡೆಸಿದ. ಮೀಟಿಂಗ್ ಮಧ್ಯೆ ಕಾಫಿ ತಂದಿಟ್ಟವನ ಮೇಲೆ ಅವಶ್ಯಕತೆ ಇಲ್ಲದ ದರ್ಪ ತೋರಿಸಿ ತನ್ನ ಪಾಸ್ಪೋರ್ಟ್ ನೀಡಿ ಜೆರಾಕ್ಸ್ ಮಾಡಿಕೊಂಡು ಬರಲು ಹೇಳಿ, ಪಾಸ್ಪೋರ್ಟ್ ಟೇಬಲ್ ಮೇಲೆ ಎಸೆದ. ಎಲ್ಲರ ಮುಂದೆ ತನ್ನನ್ನು ಕೇವಲವಾಗಿ ಕಂಡ ಅವನಿಗೆ ತಕ್ಕ ಶಾಸ್ತಿ ಮಾಡಲು ನಿರ್ಧರಿಸಿದ ಆ ಕಾಫಿಬಾಯ್, ಪಾಸ್ಪೋರ್ಟ್ ತೆಗೆದುಕೊಳ್ಳುವ ಭರದಲ್ಲಿ ಬೇಕೆಂದೇ ಕಾಫಿ ಕಪ್ಪಿಗೆ ತಾಕಿಸಿ, ಪಾಸ್ಪೋರ್ಟ್ ಮೇಲೆ ಕಾಫಿ ಬೀಳಿಸಿ ಅದನ್ನು ಹಾಳು ಮಾಡಿದ. "

 

"ಅಬ್ಬಬ್ಬ, ಪುರಾಣದಲ್ಲಿ ಹೇಳಿರುವುದು ಸುಳ್ಳಲ್ಲ. ಅಂತಹ ಘಟನೆಗಳನ್ನು ನಾವು ನಿತ್ಯ ನೋಡುತ್ತಲೇ ಇರುತ್ತೇವೆ ಅಲ್ವೇ? ಇನ್ನೊಂದು ವಿಷಯ ... ಅದು ಧೃತರಾಷ್ಟ್ರ ಮಹಾರಾಜನ ವಿಷಯ ... ಅಂಥಾ ಹಸ್ತಿನಾಪುರ ಸಾಮ್ರಾಜ್ಯ ಒಬ್ಬ ಕಣ್ಣಿಲ್ಲದವನ ಕೈಗೆ ನೀಡಿದ್ದು. ಆತ ಅಂಗಹೀನ ಅಂತ ನಾನು ಲೇವಡಿ ಮಾಡುತ್ತಿಲ್ಲ. ಆದರೆ ದಿನ ನಿತ್ಯ ತನ್ನ ಕೆಲಸ ಮಾಡಲೇ ಇನ್ನೊಬ್ಬರ ಆಶ್ರಯ ಪಡೆಯಬೇಕಾದ ಒಬ್ಬ ರಾಜ್ಯ ಹೇಗೆ ಆಳಬಹುದು? ಜನ ಸುಮ್ಮನಿದ್ದರಲ್ಲ, ಅದೇ ದೊಡ್ಡದು"

 

"ಹ ಹ ಹ ನಿಜವೇ ... ಸಿಂಹಾಸನದ ಮೇಲೆ ಕೂತ ಮಾತ್ರಕ್ಕೆ ಅವನು ರಾಜ್ಯ ಆಳಬೇಕಿಲ್ಲ. ತನಗೆ ಬೇಕಾದ ಹಾಗೆ ಅವನನ್ನು ಆಡಿಸಲು ಒಬ್ಬ ಶಕುನಿ ಸಾಲದೇ? ಇದಕ್ಕೆ ಒಂದು ಉತ್ತಮ ಉದಾಹರಣೆ ನೀಡುತ್ತೀನಿ ... ಬಾಯಿದ್ದೂ ಬಾಯಿ ಬಿಡದ ಮಹಾರಾಜನೊಬ್ಬ ಸಿಂಹಾಸನದ ಮೇಲೆ ಕೂತು ಭಾರತದಂತಹ ದೊಡ್ಡ ದೇಶ ಆಳುತ್ತಿರಲು, ಹೆಣ್ಣಿನ ರೂಪದಲ್ಲಿ ಶಕುನಿಯಂತಹ ಒಬ್ಬಾಕೆ ಅವನನ್ನು ಆಡಿಸುತ್ತಿರಲು, ಏನೂ ಮಾಡಲು ಆಗದೆ ಇರುವ ನಮ್ಮಂತಹ ಭಾರತೀಯ ಪ್ರಜೆಯ ನೈಜ ಉದಾಹರಣೆ ಇರಲು ಕಾರ್ಪೋರೇಟ್ ಉದಾಹರಣೆ ಯಾಕೆ ಬೇಕು? ನಡಿ, ನೀನು ಮಲಗು, ನನಗೂ ನಿದ್ದೆ ಬರ್ತಿದೆ."

 

 

 

Comments

Submitted by bhalle Wed, 08/28/2013 - 18:59

ಪೆಜತ್ತಾಯರು ಹೇಳುತ್ತಾರೆ :- Fantastic ಕಾರ್ಪೋರೇಟ್ ಕಥೆ! ಅದಕ್ಕೇ ನಾವು ಪ್ರಾಯ ಸಂದಂತೆ ಪುರಾಣಗಳತ್ತ ವಾಲುತ್ತೇವೆ ಪ್ರೀತಿಯಿಂದ ಪೆಜತ್ತಾಯ
Submitted by makara Fri, 08/30/2013 - 10:15

ಮಹಾಭಾರತದ ಬಗ್ಗೆ ಹೇಳುವಾಗ ಸರ್ವ ವ್ಯಾಸೋಚ್ಛಿಷ್ಠಃ ಎಂದು ಹೇಳುವುದನ್ನು ಕೇಳಿದ್ದೇನೆ. ಜಗತ್ತಿನಲ್ಲಿರುವ ವಿಷಯಗಳನ್ನೆಲ್ಲಾ ತನ್ನ ನಾಲಿಗೆಯಿಂದ ವ್ಯಾಸ ಹೇಳಿದ್ದಾನೆ ಎಂದು. ಮಹಾಭಾರತವನ್ನು ಕಾರ್ಪೋರೇಟ್ ಕಥೆಯಾಗಿ ಬಿಂಬಿಸುತ್ತಿರುವುದು ಅದನ್ನು ನಿರೂಪಿಸುತ್ತದೆ. ಹಾಗಾಗಿ ಮಹಾಭಾರತದಲ್ಲಿ ಹೇಳದೇ ಇರುವುದು ಎಲ್ಲಿಯೂ ಇಲ್ಲ ಮತ್ತು ಅಲ್ಲಿ ಹೇಳಿರುವುದು ಸೂರ್ಯ ಚಂದ್ರರಿರುವವರೆಗೂ ಪ್ರಸ್ತುತ. ಅದನ್ನು ಕಾಲಕ್ಕನುಗುಣವಾಗಿ ವ್ಯಾಖ್ಯಾನಿಸುತ್ತಾ ಹೋಗಬಹುದು. ಆದ್ದರಿಂದ ಅದು ನಿಜವಾದ ಅರ್ಥದಲ್ಲಿ ಮಹಾನ್ ಕಾವ್ಯ.
Submitted by bhalle Fri, 08/30/2013 - 17:08

In reply to by makara

ಸತ್ಯವಾದ ಮಾತು ಶ್ರೀಧರರೇ ... ಮಹಾಭಾರತದಲ್ಲಿ ಬಿಂಬಿಸದ ಪಾತ್ರಗಳಲಿಲ್ಲ, ನವರಸ ಹೇರಳವಾಗಿದೆ. ಯಾವುದೇ ಭಾಷೆಯ ಟಿ.ವಿ ಧಾರಾವಾಹಿಗೂ ಮಹಾಭಾರತವೇ ವಸ್ತು ನೀಡಿದೆ ಕೂಡ :-)