ಡಾಲರ ರೂಪಾಯಿ ಲೆಕ್ಕಾಚಾರ

Submitted by nageshamysore on Fri, 08/30/2013 - 02:28

ರೂಪಾಯಿಯ ಪಾತಾಳ ಗರಡಿ ಪಯಣದಲ್ಲಿ ಮಗನ ಚಾಲೂಕಿನ ಲೆಕ್ಕಾಚಾರಕ್ಕೆ ಪ್ರತಿಯಾಗಿ ಬರೆದ ಕವನ. ವಿದೇಶದಲ್ಲಿ ಕೆಲಸ ಮಾಡುತ್ತಿರುವವರ ಮನದಲ್ಲಿ ಈಗ ಮೂಡುವ ಎರಡು ಪ್ರಮುಖ ಭಾವಗಳು : ಒಂದು ರೂಪಾಯಿಯ ಸ್ಥಿತಿಗೆ ಖೇದ, ಎರಡು ಸಾಧ್ಯವಾದಷ್ಟು ಹಣ ಊರಿಗೆ ಕಳಿಸುವ ಆಮೋದ. ನನಗೆ ಅದೆರಡರ ಜತೆಗೆ ಮೂರನೆಯ ಭೀತಿಯೂ ಸೇರಿಕೊಂಡಿದೆ - ಕೆಲವು ವರ್ಷಗಳ ಹಿಂದೆ ಇಂಡೋನೇಶಿಯಾದಲ್ಲಿ ಆಗಿದ್ದ ರೀತಿ, ಅದೆ ದಾರಿಯಲೇನಾದರೂ ನಾವೂ ಜಾರುತ್ತಿದ್ದೇವೆಯೆ ಎಂದು. ಇದೆಲ್ಲವನ್ನು ತುಸು ಹಾಸ್ಯ ರಸಾಯನದಲ್ಲಿ ಬೆರೆಸಿದ ಲಘು ಲಹರಿ ಇಲ್ಲಿದೆ.

ಡಾಲರ ರೂಪಾಯಿ ಲೆಕ್ಕಾಚಾರ 
__________________________

ಸಿಂಗಪೂರ ಡಾಲರಿಗೆ ಐವತ್ತು
ನೂರರಾಚೆಗೆ ಪೌಂಡು 
ಯೂರೋನೂ ಸೌಂಡು
ಯೂ ಎಸ್ ಡಾಲರು ಔಟ್ ಸ್ಟಾಂಡು..
ಅಪ್ಪಾ ಯಾಕಪ್ಪ ಅಲವತ್ತು?
ದುಡ್ಡು ಕಳಿಸೋದೆ ಸಕತ್ತು!

ಮಗನೆ, ಬೆಂಕಿ ಹೊತ್ತಿದ ಮನೆ
ಗಳವನಿರಿಯಬಾರದು 
ಬೆಲೆಯಿಳಿಯುತಿಹ ವೇದನೆ
ಕಣ್ನಿದ್ರೆ ಬಾರದು-ನಾವಾಗಬಾರದು
ಮತ್ತೊಂದಿಂಡೋನೇಶಿಯದಂತೆ
ರಸಾತಳ ಪಾತಾಳ ತಲುಪಿತ್ತೆ....

ಕಳಿಸಿದ ದುಡ್ಡೇನಾಗದು ತೀರಾ
ಹೆಚ್ಚೊ ಸಾಮಾಗ್ರಿ ಬೆಲೆ ಪೂರ
ನಾನೂರರ ಸಾಮಾನಿಗೆ ಮಗನೆ
ಐನೂರಾಗಲೆಷ್ಟೊತ್ತು ಸರಸರನೆ
ಕಾಣುವುದಷ್ಟೆ ಹೆಚ್ಚು ಕಣ್ಣಿಗೆ
ಕೊಳ್ಳುವ ಶಕ್ತಿ ಕೆಳ ಕೆಳಗೆ..:-(

ನೀ ಕೇಳುವ ತಾತ ಅಜ್ಜಿ ಮಾಮ
ಬರಬೇಕೆಂದರೆ ಇಲ್ಲಿಗೆ ಕರ್ಮ
ಹೆಚ್ಚಾಗದಿದ್ದರೂ ಸಂಬಳ
ಟಿಕೆಟ್ಟುಗಳು ಕಕ್ಕಿಸಿ ಮೌಲ್ಯ
ದುಬಾರಿಯಾಗಿ ಪಯಣ ಮಗನೆ
ಬರುವವರೂ ಬರಲಾಗದ ಬೇನೆ!

ನಾವೆ ಹೋದರು ಕಂದ ಸುಖವಿಲ್ಲ
ಗಳಿಸಿದ್ದು ತೆತ್ತದ್ದು ಡಾಲರಲೆ ಎಲ್ಲ
ಕೈಗ್ಹೆಚ್ಚು ವಿನಿಮಯದಂತೆ ಕಂಡರೂ
ಬೆಲೆ ಹೆಚ್ಚುವರಿಗೆಲ್ಲಾ ಮರೆಯಾಗುವರು
ಸೈಟು ಮನೆ ಫ್ಲಾಟುಗಳೂ ತುಟ್ಟಿ
ಹೆಚ್ಚಿದ್ದೆಲ್ಲ ಕಟ್ಟಬೇಕೂ ಗಟ್ಟಿ!

ಮಗ ತಲೆ ಕೆರೆದುಕೊಂಡ
ಅರ್ಥವಾಯಿತು ಅಂದ..
ಊರಲೇನಾದರೂ ಸಾಲವಿತ್ತೆ ಎಂದ;
ಏನಪ್ಪ ವಿಷಯ? ಕೇಳಿದೆ ಕಕ್ಕುಲತೆಯಿಂದ
ಸಾಲ ತೀರಿಸಲು ಸುಸಮಯವಿದು
ಕಳಿಸಿಬಿಡೀಗಲೆ ಇಲ್ಲಿಂದ!

ಧನ್ಯವಾದಗಳೊಂದಿಗೆ,

- ನಾಗೇಶ ಮೈಸೂರು