೧೧೨. ಲಲಿತಾ ಸಹಸ್ರನಾಮ ೪೨೪ರಿಂದ ೪೨೮ನೇ ನಾಮಗಳ ವಿವರಣೆ

೧೧೨. ಲಲಿತಾ ಸಹಸ್ರನಾಮ ೪೨೪ರಿಂದ ೪೨೮ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೪೨೪-೪೨೮

Tattvāsanā तत्त्वासना (424)

೪೨೪. ತತ್ತ್ವಾಸನಾ

        ತತ್ವಗಳು ಇಪ್ಪತ್ನಾಲ್ಕು ಅಥವಾ ಮೂವತ್ತಾರು ಇವೆ. ದೇವಿಯು ಈ ತತ್ವಗಳ ಮೇಲೆ ಆಸೀನಳಾಗಿದ್ದಾಳೆ ಅಥವಾ ಈ ತತ್ವಗಳು ಆಕೆಯ ಸಿಂಹಾಸನವಾಗಿವೆ. ತತ್ವಗಳು ಆಂತರಿಕವಾಗಿ ಮತ್ತು ಬಾಹ್ಯವಾಗಿಯೂ ಕಾರ್ಯನಿರ್ವಹಿಸುತ್ತವೆ. ಮನಸ್ಸು, ಬುದ್ಧಿ, ಚಿತ್ ಮತ್ತು ಅಹಂಕಾರಗಳು ಒಟ್ಟಾಗಿ ಅಂತಃಕರಣವೆಂದು ಕರೆಯಲ್ಪಟ್ಟು ಅವು ಆಂತರಿಕವಾಗಿ ಕಾರ್ಯನಿರ್ವಹಿಸುತ್ತವೆ. ಇಂದ್ರಿಯಗಳು ಬಾಹ್ಯವಾಗಿ ಕೆಲಸ ಮಾಡುತ್ತವೆ. ಇಂದ್ರಿಯಗಳು ಪಂಚ ಮಹಾಭೂತಗಳ ವಿಸ್ತರಿತ ಭಾಗಗಳಾಗಿವೆ.

         ಪಂಚ ಮಹಾಭೂತಗಳು ಯಾವುವೆಂದರೆ, ಆಕಾಶ, ವಾಯು, ಅಗ್ನಿ, ನೀರು ಮತ್ತು ಭೂಮಿಗಳಾಗಿವೆ. ಐದು ಕರ್ಮೇಂದ್ರಿಯಗಳೆಂದರೆ ಬಾಯಿ, ಕಾಲುಗಳು, ಕೈಗಳು, ವಿಸರ್ಜನಾಂಗ ಮತ್ತು ಜನನೇಂದ್ರಿಯ. ಐದು ಜ್ಞಾನೇಂದ್ರಿಯಗಳೆಂದರೆ ಕಿವಿಗಳು, ಕಣ್ಣುಗಳು, ಮೂಗು, ನಾಲಿಗೆ ಮತ್ತು ಚರ್ಮ. ಐದು ತನ್ಮಾತ್ರಗಳು ಯಾವುವೆಂದರೆ ಶಬ್ದ, ರುಚಿ, ವಾಸನೆ, ನೋಟ ಮತ್ತು ಸ್ಪರ್ಶ. ಇವೆಲ್ಲವೂ ಸೇರಿ ಇಪ್ಪತ್ತಾದರೆ ಅಂತಃಕರಣದೊಂದಿಗೆ ಸೇರಿ ಅವು ಇಪ್ಪತ್ನಾಲ್ಕು ಆಗುತ್ತವೆ. ಐದು ಶಿವ ತತ್ವಗಳು ಮತ್ತು ಏಳು ಶಕ್ತಿ ತತ್ವಗಳು ಸೇರಿ ಒಟ್ಟು ತತ್ವಗಳು ಮೂವತ್ತಾರು ಆಗುತ್ತವೆ. ೧) ಪ್ರಕಾಶ, ೨) ವಿಮರ್ಶ, ೩) ಸಾದಾಖ್ಯ, ೪) ಐಶ್ವರ್ಯ, ೫) ಶುದ್ಧ ವಿದ್ಯಾ, ೬) ಕಾಲ, ೭) ವಿದ್ಯಾ, ೮) ರಾಗ, ೯) ಕಲಾ, ೧೦) ನಿಯತಿ, ೧೧) ಪುರುಷ ಮತ್ತು ೧೨)ಪ್ರಕೃತಿ.

          ದೇವಿಯು ಈ ಎಲ್ಲಾ ತತ್ವಗಳಿಗ ಅತೀತಳಾಗಿದ್ದಾಳೆಂದು ಹೇಳಬಹುದು. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ೯೦೬ ಮತ್ತು ೯೦೭ನೇ ನಾಮಗಳ ಚರ್ಚೆಗಳಲ್ಲಿ ನೋಡಬಹುದು.

Tat तत् (425)

೪೨೫. ತತ್

           ಬ್ರಹ್ಮವು ಮೂರು ಗುಣಗಳನ್ನು ಉಳ್ಳದ್ದು ಎಂದು ಉಲ್ಲೇಖಿಸಲಾಗಿದೆ. ಅವೆಂದರೆ ಓಂ, ತತ್ ಮತ್ತು ಸತ್. ತತ್ ಎಂದರೆ ಅದು. ದೇವಿಯು ‘ಅದು’ ಆಗಿದ್ದಾಳೆ ಮತ್ತಿಲ್ಲಿ ‘ಅದು’ ಎಂದರೆ ಪರಬ್ರಹ್ಮವಾಗಿದೆ. ವಿಷ್ಣು ಸಹಸ್ರನಾಮದ ೭೩೧ನೇ ನಾಮವೂ ಸಹ ತತ್ ಆಗಿದೆ.

          ಭಗವದ್ಗೀತೆಯು (೧೭.೨೫) ಹೇಳುತ್ತದೆ, "ಮುಕ್ತಿಯನ್ನು ಬಯಸುವವರು ತದನಂತರ ಆ ತತ್ ಅನ್ನು ಕೇಂದ್ರವಾಗಿಸಿಕೊಂಡು ಯಾವುದೇ ವಿಧವಾದ ಫಲಗಳನ್ನಪೇಕ್ಷಿಸದೆ ಹಲವು ವಿಧವಾದ ಯಜ್ಞ-ಯಾಗಾದಿಗಳನ್ನು ಮತ್ತು ಕಠಿಣ ತಪಸ್ಸುಗಳನ್ನಾಚರಿಸುತ್ತಾರೆ". ಅತ್ಯುನ್ನತವಾದ ದೈವ ಪ್ರಜ್ಞೆಯನ್ನು ತತ್ ಎಂದು ಕರೆಯಲಾಗುತ್ತದೆ. ದೇವಿಯು ಅತ್ಯುನ್ನತವಾದ ಪ್ರಜ್ಞೆಯ ರೂಪದಲ್ಲಿರುತ್ತಾಳೆಂದು ಹೇಳಲಾಗಿದೆ. ಪ್ರಜ್ಞೆಯ ಪರಿಶುದ್ಧ ರೂಪವೇ ಬ್ರಹ್ಮವಾಗಿದೆ.

Tvam त्वम् (426)

೪೨೬. ತ್ವಮ್

         ತ್ವಮ್ ಎಂದರೆ ಅದು ದೇವಿಯನ್ನು ಸೂಚಿಸುತ್ತದೆ.  ಇಲ್ಲಿ ತ್ವಮ್ ಎಂದರೆ ಪರಬ್ರಹ್ಮವಾಗಿದ್ದು ಅದನ್ನು ವಿಶದವಾಗಿ ಕೇನ ಉಪನಿಷತ್ತಿನಲ್ಲಿ  (೧.೪) ವಿವರಿಸಲಾಗಿದೆ, ಅದು ಹೇಳುತ್ತದೆ, " ಆ ಬ್ರಹ್ಮವು ಎಲ್ಲಾ ಗೊತ್ತಿರುವ ಮತ್ತು ಪರಿಚಿತ ವಸ್ತುಗಳಿಗಿಂತ ಭಿನ್ನವಾಗಿದೆ. ಅದು ಗೊತ್ತಿಲ್ಲದ ವಸ್ತುಗಳಿಗೆ ಸಹ ಅತೀತವಾಗಿದೆ". ಆತ್ಮಸಾಕ್ಷಾತ್ಕಾರವೆಂದರೆ ‘ಅದು’ (ತ್ವಮ್) ಮತ್ತು ‘ನಾನು’ (ಅಹಂ) ಇವುಗಳ ಐಕ್ಯತೆಯಲ್ಲದೆ ಮತ್ತೇನೂ ಅಲ್ಲ. ಈ ಸತ್ಯಾಂಶವು ಒಂದು ದಿನ ತ್ವರಿತವಾದ ಮಿಂಚಿನ ಎಳೆಯಂತೆ ಸ್ಪುರಿಸುತ್ತದೆ.

          ಒಂದು ಪ್ರಸಿದ್ಧವಾದ ಹೇಳಿಕೆ ಇದೆ, "ತತ್ ತ್ವಮ್ ಅಸಿ". ಇಲ್ಲಿ ತತ್ ಅಂದರೆ ಅದು (ಬ್ರಹ್ಮ), ತ್ವಮ್ ಎಂದರೆ ನೀನು ಮತ್ತು ಅಸಿ ಎಂದರೆ ಆಗಿದೆ ಆದ್ದರಿಂದ "ಅದು ನೀನೇ ಆಗಿದ್ದೀಯ" ಎನ್ನುವುದು ಇದರ ಒಟ್ಟಾರ್ಥ. ಅದು ಎಂದರೆ ಬ್ರಹ್ಮ. ನೀನು ಆ ಬ್ರಹ್ಮವಾಗಿದ್ದೀಯ ಎನ್ನುವ ಮಹಾ ವಾಕ್ಯವೇ ಇದಾಗಿದೆ.

Ayī अयी (427)

೪೨೭. ಅಯೀ

           ಅಯೀ ಎಂದರೆ ತಾಯಿ ಅಥವಾ ಸಹೋದರಿಯನ್ನು ಸಂಭೋದಿಸುವ ಒಂದು ವಿಧವಾಗಿದೆ. ದೇವಿಯು ಜಗನ್ಮಾತೆಯಾಗಿರುವುದರಿಂದ ಆಕೆಯನ್ನು ಅಯೀ ಎಂದು ಸಂಭೋದಿಸಲಾಗುತ್ತದೆ. ಯಾರನ್ನಾದರೂ ಅಯೀ ಎಂದು ಸಂಭೋದಿಸಿದರೆ ಅದು ಗೌರವಕ್ಕಿಂತ ಹೆಚ್ಚಾಗಿ ಮಮತೆಯನ್ನು ಸೂಚಿಸುತ್ತದೆ. ಅದು ಶುಭಪ್ರದತೆಯನ್ನು ಸಹ ಸೂಚಿಸುತ್ತದೆ.

         ೪೨೫, ೪೨೬ ಮತ್ತು ೪೨೭ನೇ ನಾಮಗಳು ಒಟ್ಟಾಗಿ ಈ ಸಹಸ್ರನಾಮದ ೯೦೭ನೇ ನಾಮವಾದ ‘ತತ್ತ್ವಮಯೀ’ ಆಗಿದೆ ಎನ್ನುವುದನ್ನು ನಾವು ಅವಶ್ಯವಾಗಿ ಗಮನಿಸಬೇಕು. ಇದುವೇ ಈ ಸಹಸ್ರನಾಮದ ಸೊಬಗಾಗಿದೆ. ಈ ಸಹಸ್ರನಾಮವು ಮುಂದುವರೆದಂತೆಲ್ಲಾ ನಾಮಗಳ ವ್ಯಾಖ್ಯಾನವೂ ಸಹ ಸ್ಥೂಲದಿಂದ ಸೂಕ್ಷ್ಮದೆಡೆಗೆ ಸಾಗುತ್ತದೆ; ಆಧ್ಯಾತ್ಮಿಕ ಉನ್ನತಿಯ ದ್ಯೋತಕವಾಗಿ.

Pañca- kośāntara -sthitā पञ्च- कोशान्तर-स्थिता (428)

೪೨೮. ಪಂಚ- ಕೋಶಾಂತರ-ಸ್ಥಿತಾ

          ದೇವಿಯು ಐದು ಪೊರೆಗಳೊಳಗೆ ನಿವಸಿಸುತ್ತಾಳೆ. ಈ ಪೊರೆಗಳು ಪಿಂಡ ಶರೀರವೆಂದು ಕರೆಯಲ್ಪಡುವ ಮನುಷ್ಯ ಜೀವಿಯನ್ನು ಆವರಿಸುತ್ತವೆ. ಆತ್ಮವು ಮೂರು ವಿಧವಾದ ಒಂದರ ಮೇಲೊಂದು ಹೊದಿಸಲ್ಪಟ್ಟಿರುವ ವಸ್ತ್ರಗಳೊಳಗೆ ಅಡಗಿಸಿಡಲ್ಪಟ್ಟಿದೆ. ಅವುಗಳು, ಕಾರಣ ಶರೀರ, ಸೂಕ್ಷ್ಮ ಶರೀರ ಮತ್ತು  ಸ್ಥೂಲ ಶರೀರಗಳಾಗಿವೆ. ಕಾರಣ ಶರೀರವು ಅತ್ಯಂತ ಒಳಗಿನ ಹೊದಿಕೆಯಾದರೆ ಸ್ಥೂಲ ಶರೀರವು ಅತ್ಯಂತ ಹೊರಗಿನ ಹೊದಿಕೆಯಾಗಿದೆ. ಸ್ಥೂಲ ಶರೀರವು ನಾಶವಾಗುವಂತಹದ್ದು, ಸೂಕ್ಷ್ಮ ಶರೀರವು ಅದಕ್ಕಿಂತ ಹೆಚ್ಚಿನ ಕಾಲ ಇರುತ್ತದೆ ಮತ್ತು ಕಾರಣ ಶರೀರವು ಆತ್ಮವು ಅಂತಿಮ ಮುಕ್ತಿಯನ್ನು ಹೊಂದುವವರೆಗೆ ಶಾಶ್ವತವಾಗಿರುತ್ತದೆ. ಆತ್ಮವು ತನ್ನ ಕರ್ಮದ ಲೆಕ್ಕಾಚಾರದೊಂದಿಗೆ ಕಾರಣ ಶರೀರದೊಳಗೆ ಅಡಕವಾಗಿರಿಸಲ್ಪಟ್ಟಿರುತ್ತದೆ. ವೇದಾಂತ ತತ್ವದ ಪ್ರಕಾರ ಕೋಶಗಳೆಂದು ಕರೆಯಲ್ಪಡುವ ಒಂದರಮೇಲೊಂದು ಹೊದಿಸಲ್ಪಟ್ಟಿರುವ ಐದು ಹೊದಿಕೆಗಳಿವೆ. ಅತ್ಯಂತ ಒಳಗೆ ಇರುವುದು ಆನಂದಮಯ ಕೋಶ (ಸಂತೋಷ ಅಥವಾ ಶಾಂತಮಯ ಕೋಶ) ಇದು ಕಾರಣ ಶರೀರಕ್ಕೆ ಸಮಾನವಾದದ್ದು. ಮುಂದಿನ ಮೂರು ಕೋಶಗಳೆಂದರೆ, ವಿಜ್ಞಾನಮಯ ಕೋಶ (ಬುದ್ಧಿ ಮತ್ತು ಜ್ಞಾನದ ಕೋಶ), ಮನೋಮಯ ಕೋಶ (ಮನಸ್ಸಿನ ಕೋಶ), ಪ್ರಾಣಮಯ ಕೋಶ (ಪ್ರಾಣ, ಅಪಾನ ಮೊದಲಾದ ಪ್ರಾಣವಾಯುಗಳಿಗೆ ಸಂಭಂದಿಸಿದ್ದು). ಈ ಮೂರು ಕೋಶಗಳು ಸೂಕ್ಷ್ಮ ಶರೀರಕ್ಕೆ ಸಮಾನವಾಗಿವೆ. ಐದನೆಯ ಮತ್ತು ಕಡೆಯದಾದ ಕೋಶವು ಅನ್ನಮಯ ಕೋಶವಾಗಿದೆ; ಇದು ಆಹಾರಕ್ಕೆ ಸಂಭಂದಿಸಿದ ಕೋಶವಾಗಿದ್ದು ಇದು ಸ್ಥೂಲ ಶರೀರಕ್ಕೆ ಸಮಾನವಾಗಿದೆ. ಈ ಎಲ್ಲಾ ಕವಚಗಳ ರಚನೆಯು ಮನುಷ್ಯ ಜೀವಿಯ ಆತ್ಮ ಅಥವಾ ಪುರುಷನನ್ನು ಅಂತರಾಳದಲ್ಲಿ ಮರೆಮಾಡುತ್ತದೆ; ಮತ್ತು ಈ ಕವಚದ ರಚನೆಯು ತಾನೇ ಸೂಕ್ಷ್ಮ ಪ್ರಪಂಚವೆಂದು ತಪ್ಪಾಗಿ ಬಿಂಬಿಸುವುದಲ್ಲದೆ ಮಾಯಾ ಪ್ರಪಂಚವನ್ನೇ ಸ್ಥೂಲ ಪ್ರಪಂಚವೆನ್ನುವ ಭ್ರಮೆಯನ್ನುಂಟು ಮಾಡುತ್ತದೆ.

         ಈ ಮೇಲಿನ ವಿಶ್ಲೇಷಣೆಯಲ್ಲದೆ ಇದಕ್ಕೆ ಇನ್ನೊಂದು ವಿವರಣೆಯೂ ಇದೆ. ನವಾವರಣ ಪೂಜೆಯಲ್ಲಿ ಒಂಭತ್ತನೆಯ ಆವರಣದ ನಂತರ ಒಂದು ಪಂಚಪಂಚಿಕಾ ಪೂಜೆ ಎನ್ನುವ ಆಚರಣೆ ಇದೆ. ಆ ಆಚರಣೆಯಲ್ಲಿ ‘ಶ್ರೀ ಚಕ್ರ’ದ ಕೇಂದ್ರವಾದ ಬಿಂದುವಿನಲ್ಲಿ ಐದು ದೇವಿಯರನ್ನು ಒಂದಾದ ಮೇಲೆ ಒಂದರಂತೆ ಪೂಜಿಸಲಾಗುತ್ತದೆ. ಇದರ ವಿವರಣೆಗಳು ಇಲ್ಲಿ ಅನಾವಶ್ಯಕ ಏಕೆಂದರೆ ಈ ನಾಮದ ವಿಶ್ಲೇಷಣೆಯನ್ನು ದೇಹದ ಐದು ಕವಚಗಳಿಗೆ ಸಂಭಂದಿಸಿದಂತೆ ಮಾಡಬೇಕು. ಈ ಐದು ಹೊದಿಕೆಗಳು ಸಮಾಧಿ ಸ್ಥಿತಿಯನ್ನು ಹೊಂದಬೇಕಾದರೆ ಎದುರಾಗುವ ಐದು ಹಂತಗಳನ್ನು ಸಹ ಸೂಚಿಸಬಹುದು. ಒಬ್ಬನು ನಿರ್ವಿಕಲ್ಪ ಸಮಾಧಿಯ ಸ್ಥಿತಿಯನ್ನು ಹೊಂದಬೇಕಾದರೆ ಅವನು ಸಮಾಧಿ ಸ್ಥಿತಿಯ ಈ ಐದು ಹಂತಗಳನ್ನು ದಾಟಲೇಬೇಕು.

******

        ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 424 - 428 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
No votes yet

Comments

Submitted by nageshamysore Thu, 09/05/2013 - 20:26

ಶ್ರೀಧರರೆ,  ೧೧೨. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯಸಾರ ಅವಗಾಹನೆ, ಪರಿಷ್ಕರಣೆಗೆ ಸಿದ್ದ.

ಲಲಿತಾ ಸಹಸ್ರನಾಮ ೪೨೪-೪೨೮
__________________________________
೪೨೪. ತತ್ವಾಸನ
ಜ್ಞಾನದಾಧಾರಸ್ತಂಭ ತತ್ವಗಳ ಸಂಶಯಾತೀತ ಬುನಾದಿ
ಮೂವತ್ತಾರು ತತ್ವಸಿಂಹಾಸನದೊಡತಿ ಲಲಿತಾ ಸಮೃದ್ಧಿ
ಅಂತಃಕರಣದ ಆಂತರಿಕ ಜ್ಞಾನ, ಇಂದ್ರಿಯ ಬಾಹ್ಯಜ್ಞಾನ
ಸಮಷ್ಟಿ ಜ್ಞಾನ ಪ್ರವೀಣೆ, ತತ್ವಾಸನಾ ಕಾರ್ಯ ನಿರ್ವಹಣ!

ಪಂಚಭೂತ, ಕರ್ಮೇಂದ್ರಿಯ, ಜ್ಞಾನೇಂದ್ರಿಯ, ತನ್ಮಾತ್ರ, ಜತೆ ಅಂತಃಕರಣ
ಇಪ್ಪಾತ್ನಾಲ್ಕು ತತ್ವ ಸಿಂಹಾಸನ ಆಧಾರಸ್ತಂಭ, ಶಿವ-ಶಕ್ತಿ ತತ್ವ ದ್ವಾದಶ ಗಣ
ಶಿವಶಕ್ತಿ ತತ್ವ ತಳಹದಿ, ತತ್ವಾತೀತೆ ಹೊತ್ತ ಇಪ್ಪತ್ನಾಲ್ಕು ತತ್ವ ಸಿಂಹಾಸನದಿ
ಆಸೀನೆ ಬ್ರಹ್ಮಾಂಡವಾಳುತ ಲಲಿತೆ, ಜ್ಞಾನದೀಕ್ಷೆಯಿತ್ತು ತತ್ವಾಸನಾ ರೂಪದಿ!

ಆಕಾಶ ವಾಯು ಅಗ್ನಿ ಜಲ ಭೂಮಿ ಪಂಚಮಹಾಭೂತ, ಕರ್ಮೇಂದ್ರಿಯಗಳೈದು
ಕೈಕಾಲ್ಬಾಯಿ ಜನನಾ-ವಿಸರ್ಜನಾಂಗ;ಜ್ಞಾನೇಂದ್ರಿಯಗಳೈದು - ತನ್ಮಾತ್ರ ಐದು
ಕಣ್ಕಿವಿಮೂಗುನಾಲಿಗೆಚರ್ಮ - ಶಬ್ದ ರುಚಿ ವಾಸನೆ ನೋಟ ಸ್ಪರ್ಶ, ದ್ವಾದಶದೆ ಶಿವವೈದು ತತ್ವ, ಏಳಾಗಿ ಶಕ್ತಿ
ಪ್ರಕಾಶ ವಿಮರ್ಶ ಸಾದಾಖ್ಯ ಐಶ್ವರ್ಯ ಶುದ್ಧವಿದ್ಯಾ ಜತೆ ಕಾಲ ವಿದ್ಯಾ ರಾಗ ಕಲಾ ನಿಯತಿ ಪುರುಷ ಪ್ರಕೃತಿ!

೪೨೫. ತತ್
'ತತ್' ಅತ್ಯುನ್ನತ ದೈವ ಪ್ರಜ್ಞೆ, 'ಅದು' ಪರಬ್ರಹ್ಮ ಲಲಿತಾ ರೂಪ
ಅತ್ಯುನ್ನತ ಪ್ರಜ್ಞೆಯ ಪರಿಶುದ್ಧ ರೂಪದಲಿಹ ದೇವಿ ಬ್ರಹ್ಮ ಸ್ವರೂಪ
ಬ್ರಹ್ಮದ ತ್ರಿಗುಣ 'ಓಂ ತತ್ ಸತ್', ನಿರಪೇಕ್ಷದೆ ಯಜ್ಞ ಯಾಗಾದಿ
ಕಠಿನ ತಪಕೆಲ್ಲ 'ತತ್' ಕೇಂದ್ರ, ಮುಕ್ತಿಯ ಬಯಸೆ ಭಕ್ತಿಯ ಭರದಿ!

೪೨೬. ತ್ವಮ್
ಪರಿಚಿತ ವಸ್ತುವಿಗೂ ಭಿನ್ನ, ಅಪರಿಚಿತಕು ಅತೀತವಿ ಬ್ರಹ್ಮಂ
ದೇವಿ 'ತ್ವಮ್' ಪರಬ್ರಹ್ಮ 'ಅದು', ಜತೆಗಿರೆ 'ನಾನು' ಅಹಂ
ಬ್ರಹ್ಮದೈಕ್ಯತೆ ಅಹಮಿನ ಜತೆ, ಆತ್ಮಸಾಕ್ಷಾತ್ಕಾರ ಗೋಚರ
'ತತ್ ತ್ವಮ್ ಅಸಿ' - 'ನೀನೆ ಆಗಿಹ ಬ್ರಹ್ಮ' ಜ್ಞಾನ ಸಾಕಾರ!

೪೨೭. ಅಯೀ
'ತತ್ ತ್ವಮ್ ಅಯೀ' ಸಂಗಮ ತತ್ವಮಯೀ, ಸ್ತೂಲದಿಂಸೂಕ್ಷ್ಮ ಸೊಬಗು
ನೀನೆ ಅದಾಗುವ ಹಾದಿಗೆ ಮಮತಾಮಯಿ ತಾಯಿಯ 'ಅಯೀ' ಸೆರಗು
ಜಗನ್ಮಾತೆ ಲಲಿತೆಯೆ ಅಯೀ, ಶುಭಪ್ರದಾಯಿನಿ ಜ್ಞಾನದಾಯಿನಿ ಹಣತೆ
ಗೌರವ ಮೀರಿದ ಮಾತೆ ಪ್ರೀತಿ, ಆಧ್ಯಾತ್ಮಿಕ ಉನ್ನತಿಗೆ ನಡೆಸೊ ಶ್ರೀಲಲಿತೆ!

೪೨೮. ಪಂಚ-ಕೋಶಾಂತರ-ಸ್ಥಿತಾ
ಆತ್ಮ ಹೊದ್ದ ದಿರುಸೆ ಶರೀರ, ಕಾರಣ-ಸ್ಥೂಲ-ಸೂಕ್ಷ್ಮಾಕಾರದೆ ಸುತ್ತಿ
ಕರ್ಮಜಾತಕವ್ಹೊತ್ತಾತ್ಮ ಕಾರಣ ಶರೀರದೆ, ಶಾಶ್ವತ ಅಂತಿಮಮುಕ್ತಿ
ನಶ್ವರ ಹೊರ ಸ್ಥೂಲ ಶರೀರ, ಕಾರಣ ಸ್ಥೂಲ ನಡುವೆ ಸೂಕ್ಷ್ಮ ಶರೀರ
ಜತನದಿ ಕಟ್ಟಿಡುತಾ ಬ್ರಹ್ಮರೂಪಿ ಆತ್ಮವ, ಸುತ್ತಿಡುವ ಪದರ ಪದರ!

ಪಂಚಕೋಶದ ಹೊದಿಕೆಯಾವರಿಸಿದ, ಪಿಂಡ ಶರೀರ ಜೀವಿ ಮನುಜ
ಕಾರಣ ಶರೀರದಂತೆ ಆನಂದಮಯ ಕೋಶ, ನಡುವೆ ಮೂರು ತೇಜ
ವಿಜ್ಞಾನ-ಮನೊ-ಪ್ರಾಣಮಯ ಕೋಶ ಸೂಕ್ಷ್ಮ ಶರೀರ, ಕಡೆಗೈದಾಗುತ
ಅನ್ನಮಯ ಸ್ಥೂಲ, ಒಳ ನೆಲೆಸಿ ಮಾಯಾ ಪಂಚ ಕೋಶಾಂತರ ಸ್ಥಿತಾ!

ಪಂಚಪಂಚಿಕಾಚರಣೆ, ಶೀ ಚಕ್ರ ಬಿಂದುವಿನಲಿ ಐದು ದೇವಿಯರು
ನವಾವರಣದಾಚೆ ಒಬ್ಬರಾದನಂತರ ಒಬ್ಬರು ಪೂಜಿಸಲ್ಪಡುವರು
ಅವರಂತೆಯೆ ಕವಚಗಳೈದು ಸಾಂಕೇತಿಕತೆ ಸಮಾಧಿ ಸ್ಥಿತಿ ಹಂತ
ನಿರ್ವಿಕಲ್ಪ ಸ್ಥಿತಿ ಮುಟ್ಟಲು ದಾಟಲೆಬೇಕಾದ ಪೂಜಾಸಂಕಲ್ಪಸಂತ!
 

ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು