ಜೀವನದಲ್ಲೊಂದು ವಕ್ರ ರೇಖೆಯ ಸೊಬಗು...

ವಿದ್ಯಾರ್ಥಿ ದಿನಗಳಲ್ಲಿ ನಮ್ಮ ನೋಟ್ ಪುಸ್ತಕಗಳನ್ನು ಗಮನಿಸಿದರೆ ಅಲ್ಲಿ neatness ಎಂದರೆ ಚಿತ್ತಿಲ್ಲದೆ ನೇರವಾಗಿ ಪೋಣಿಸಲಾದ ಅಕ್ಷರಗಳು..ಪ್ರತಿ ಉತ್ತರದ ನಂತರ ಪೆನ್ಸಿಲ್ಲು, ಅಡಿಕೋಲಿನಿಂದ ಹಾಕಿದ ನೇರ ಗೆರೆಗಳು..ಗೆರೆಗಳೇನಾದರೂ
ಅಂಕು ಡೊಂಕಾದವೋ, ಮೇಷ್ಟ್ರ ಕೈಯಲ್ಲಿನ ಮರದ ದಪ್ಪ ಸ್ಕೇಲು ನಮ್ಮ ಕೈಗಂಟಿಗೆ ಪಾಠ ಕಲಿಸುತಿತ್ತು..ಅವತ್ತಿಂದಲೇ ಸಮಾಜ ಇದನ್ನೇ ಕಲಿಸತೊಡಗಿತು ಅನ್ಸುತ್ತೆ.
ಜೀವನವನ್ನು ವೃತದಂತೆ ಆಚರಿಸುವ ಮಂದಿಯದ್ದು ಬಹುಶಃ ಬದಲಾಗದ ಮನಸ್ಸು...ಇದನ್ನೇ ಓದು, ಇದೇ ಕೆಲಸಕ್ಕೆ ಹೋಗು, ಇದೇ ಹುಡುಗನನ್ನು ಮದುವೆಯಾಗು,
ನಿನ್ನ ನೋವನ್ನು ಹೊರಗೆಡವಬೇಡ,
ತವರ ಮರ್ಯಾದೆ ಉಳಿಸು , ಇದನ್ನೇ ನಿನ್ನ ಮಕ್ಕಳಿಗೆ ಕಲಿಸು, ಕೊನೆಗೆ ವಯಸ್ಸಾದಾಗ ಹಾಗೇ ಸುಮ್ಮನೆ ಸತ್ತು ಹೋಗು...!!
ಸರಳ ರೇಖೆಯಂತೆ ಜೀವನ ಸವೆಸಿ, ಇಂಕು ಮುಗಿದಾಗ ನಿಂತು ಹೋಗುವ ಮಂದಿ ಇವರು..ಆಂತರ್ಯದಲ್ಲಿ ಏನೇನು ಕನಸುಗಳಿದ್ದವೋ?!ಕೊನೇ ಪಕ್ಷ , ಸರಳ ರೇಖೆಯನ್ನು
ಬಿಟ್ಟು ಒಂದು ಕ್ಷಣ , ಒಂದು ವಕ್ರವಾದ ಕಾರ್ಟೂನನ್ನು ಬರೆಯುವಂತೆ..!
" ತ್ರೀ ಈಡಿಯೆಟ್ಸ್" ಸಿನಿಮಾದಲ್ಲಿ ಮಾಧವನ್ ನಿರ್ವಹಿಸಿದ ಪಾತ್ರ ನೆನಪಿಗೆ ಬರುತ್ತಿದೆ. ಫೊಟೋಗ್ರಫಿ ಎಂದರೆ ಜೀವ ಬಿಡುತ್ತಿದ್ದ ಅವನು, ತನ್ನ ತಂದೆಯ ಮಾತನ್ನು
ನಡೆಸಿಕೊಡಲು, ಇಂಜಿನಿಯರಿಂಗ್
ಆರಿಸಿಕೊಳ್ಳುತ್ತಾನೆ.ಕಾಲೇಜಿನಲ್ಲಿ ಅವನು ಪಡುವ ಪಾಡು, ಜೀವನ್ಮರಣದ ಯುದ್ಧದಂತಿರುವ ಪರೀಕ್ಷೆ, ಪಾಸಾಗಲು ಹೆಣಗುವ ರೀತಿ, ತನ್ನ ಕನಸುಗಳನ್ನು ಮೂಟೆ ಕಟ್ಟಿ,
ಅಟ್ಟದ ಮೇಲೆ ಎಸೆದಾಗ, ಅವನು ಪಡುವ ನೋವು, ಕಳೆದುಕಳ್ಳುವ ಉತ್ಸಾಹ, ಮರೆಯಾಗುವ ನಗು...ಇವೆಲ್ಲಾ ಕತೆ ಅನಿಸುವುದಿಲ್ಲ.ನಮ್ಮ ಬದುಕಿನಲ್ಲೇ ನಡೆಯುವ
ನೈಜ ಘಟನೆಗಳು ಅನಿಸತೊಡಗುತ್ತದೆ.
"ನಗುವ ತುಂಬಲು ಬದುಕ ಹಂಚಲು ಇರುವುದೊಂದೇ ಜೀವನ" ಯಾವತ್ತೋ ಬರೆದ ಈ ಸಾಲು ನನಗೆ ತುಂಬಾ ಪ್ರಿಯವಾದದ್ದು.ಇತರರಿಂದ ಮೆಚ್ಚಿಸಿಕೊಳ್ಳಬೇಕೆನ್ನುವ
ಒಂದೇ ಒಂದು ಬಯಕೆಯಿಂದ, ನಮ್ಮ ಕನಸುಗಳಿಗೆ
ಗೋರಿ ಕಟ್ಟುವುದು ಬೇಕಾಗಿಲ್ಲ.
"ಶೋಷಣೆ ಮಾಡುವುದಿಲ್ಲ...ಶೋಷಣೆಗೆ ಒಳಗಾಗುವುದಿಲ್ಲ " ಎಂಬ ಸಿದ್ದಾಂತ ಮಾಡಿಕೊಂಡರೆ ಸಾಕು. ನಮ್ಮ ಸೃಜನಶೀಲತೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಚ್ಚಿಡುವುದು ಕೂಡಾ,
ಒಂದುತರಹದ ಶೋಷಣೆಯೇ..
ನಾವು ನಮ್ಮ ಮೇಲೆ ನಡೆಸುತ್ತಿರುವ ಶೋಷಣೆ..!!
ಇತರರಿಗೆ ನಮ್ಮ ಯೋಚನೆ, ಗುರಿ, ಕನಸುಗಳು ವಕ್ರರೇಖೆಗಳಂತೆ ಕಾಣಿಸಿದರೆ ಕಾಣಲಿ ಬಿಡಿ.ಮಳೆಯಲ್ಲಿ ನೆನೆಯುತ್ತಾ ಸುಖಿಸುವುದು, ಮಕ್ಕಳ ಜೊತೆಗೆ ಸಮಯ
ಕಳೆಯುತ್ತಾ ಮಗುವಾಗುವುದು, ಅರ್ಥವಾಗದ್ದನ್ನು ಆಗಲೇ ಕೇಳಿ ತಿಳಿದುಕೊಳ್ಳುವುದು,
ಊರ ಹೊರಗಿನ ಪುಟ್ಟ ಗೂಡಂಗಡಿಯಲ್ಲಿ ಚಹಾ ಹೀರುವುದು,ಸಾಕು ಪ್ರಾಣಿಯ ಜೊತೆ ಸಂಭ್ರಮಿಸುವುದು, ಯಾವುದನ್ನೇ ಆದರೂ ಚೆನ್ನಾಗಿ ಪರಾಮರ್ಶಿಸದೆ
ಒಪ್ಪಿಕೊಳ್ಳದಿರುವುದು, ಉನ್ನತ
ಮೌಲ್ಯಗಳನಿಟ್ಟುಕೊಂಡು ಬದುಕುವುದು,ವೃದ್ಧರ ಜೊತೆ ವಿಚಾರ ಹಂಚಿಕೊಳ್ಳುವುದು, ಸಾಮಾಜಿಕ ಚಳುವಳಿಗಳಲ್ಲಿ ಭಾಗಿಯಾಗುವುದು, ಸತ್ಸಂಗಗಳಲ್ಲಿ
ಮನಸ್ಸನ್ನು ಹಗುರಾಗಿಸಿಕೊಳ್ಳುವುದು,
ಯೋಗ, ಧ್ಯಾನ, ರೀಖಿ, ಪ್ರಾಣಿಕ್ ಹೀಲಿಂಗ್, ಆಕ್ಯುಪಂಕ್ಚರ್....ಹೊಸ ಹೊಸ ಅರಿವಿನ ಮಾರ್ಗಗಳಿಗೆ ಮನಸ್ಸನ್ನು ತೆರೆದುಕೊಳ್ಳುವುದು, ಪೈಂಟಿಂಗ್ ಮಾಡುವುದು,
ಕತೆ,ಕವನ,
ವ್ಯಂಗ್ಯ ಚಿತ್ರಗಳನ್ನು ಗೀಚುವುದು, ಸಸ್ಯ ಪ್ರಪಂಚದಲ್ಲಿ ತೇಲಾಡುವುದು.....................................ಇವೆಲ್ಲಾ ಅನೇಕರಿಗೆ ಹುಚ್ಚು ಅನಿಸಬಹುದು.ಇವನೊಬ್ಬ
ವಕ್ರ ರೇಖೆಯೆಂದು
ಗೇಲಿ ಮಾಡೀ ನಗಬಹುದು.ಅವರ ಜೊತೆ ನಾವೂ ನಕ್ಕುಬಿಟ್ಟರಾಯಿತು..!ಅಕ್ವೇರಿಯಂ ಒಳಗೆ ಬದುಕುತ್ತಿರುವ ಜನರಿಗೆ, ನೀಲ ಶರಧಿಯ ಸಂತೋಷವೆಂದೂ
ಅರ್ಥವಾಗುವುದಿಲ್ಲ......
ನಮ್ಮ ಕಾರ್ಯಗಳು ಸಮಾಜಕ್ಕೆ ಹಾನಿಯುಂಟು ಮಾಡದಿದ್ದರೆ, ನಮ್ಮ ಸಂತೋಷವನ್ನು ದ್ವಿಗುಣ ಮಾಡುವಂತಿದ್ದರೆ,ನಾವ್ಯಾಕೆ ಹೊಸ ತರ ಬದುಕುವುದಕ್ಕೆ
ಪ್ರಯತ್ನಿಸಬಾರದು?
ಮುಂಜಾನೆಯ ಸೂರ್ಯ, ಬಿರಿಯುವ ನೈದಿಲೆ, ಬೆಟ್ಟ ಗುಡ್ಡಗಳು,ಕಲ್ಲು ಬಂಡೆ, ಹಾರುವ ಪಕ್ಷಿಗಳು, ಹಚ್ಚಹಸುರಿನ ವ್ರಕ್ಷಗಳು ವಕ್ರವಾಗಿದ್ದರೇನೇ ಚಂದ ಅಲ್ಲವೇ?
ಸರಳ ರೇಖೆಗಳ ಹಾಗೆ,
ಚೌಕ ಆಯತಗಳ ಹಾಗಿದ್ದರೆ ಸೌಂದರ್ಯ ಎಲ್ಲಿರುತಿತ್ತು?
ಬದುಕು ನಿಂತ ನೀರಾಗಬಾರದು.....ಹರಿಯುತ್ತಿರುವ ಜೀವನದಿಯಾಗಬೇಕು......ಪ್ರತಿದಿನವೂ ಹೊಚ್ಚ ಹೊಸತಾಗಿ ಬದುಕಲು ಕಲಿತರೆ ಚಿಂತೆಗೆ
ಹೆಚ್ಚು ಅವಕಾಶವಿಲ್ಲ ಎಂಬುದು
ನನ್ನ ಭಾವನೆ....ಏನಂತೀರಾ ಸ್ನೇಹಿತರೇ???