ಅಮರ ‘ಪೂರ್ಣ ಚಂದಿರ’

ಅಮರ ‘ಪೂರ್ಣ ಚಂದಿರ’

    ನಮಸ್ಕಾರ ಸ್ನೇಹಿತರೆ,

    ನಾಳೆ (ಸೆಪ್ಟೆಂಬರ್-8)  ಕನ್ನಡ ಸಾಹಿತ್ಯ ಲೋಕದ ಅಪೂರ್ವ ಪ್ರತಿಭೆ ಶೀ ಪೂರ್ಣಚಂದ್ರ ತೇಜಸ್ವಿಯವರ ಎಪ್ಪತೈದನೆ ಜನ್ಮದಿನ. ತೇಜಸ್ವಿಯವರು ಭೌತಿಕವಾಗಿ ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಸಾಹಿತ್ಯವನ್ನೋದಿದಾಗ ಸಿಗುವ ಆತ್ಮ ಸಂತೋಷದಲ್ಲಿ ಅವರು ಎಂದೆಂದಿಗೂ ನಮ್ಮೊಂದಿಗಿರುತ್ತಾರೆ. ತೇಜಸ್ವಿ ಕನ್ನಡ ಸಾಹಿತ್ಯ ಬಲ್ಲ ಎಲ್ಲರಿಗೂ ಚಿರಪರಿಚಿತ ಹೆಸರು. ನವ್ಯ ಹಾಗೂ ಬಂಡಾಯ ಕಾಲಘಟ್ಟದಲ್ಲಿ ಅತ್ಯಂತ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡ ತೇಜಸ್ವಿಯರದೇ ವಿಭಿನ್ನ ಸಾಹಿತ್ಯ ಮಾರ್ಗವೆನ್ನಬೇಕು. ತೇಜಸ್ವಿ ಕೇವಲ ಒಬ್ಬ ಲೇಖಕರಷ್ಟೇ ಆಗಿರದೆ ಅವರೊಬ್ಬ ವಿಜ್ಞಾನಿ, ಸಂಶೋಧಕ. ವಿಜ್ಞಾನ ಜಗತ್ತಿನ ಜ್ಞಾನ ಕನ್ನಡದ ಯುವ ಪೀಳಿಗೆಗೆ ಸುಲಭವಾಗಿ ದಕ್ಕಲಿ ಎಂಬ ಮಹದಾಸೆಯಿಂದ ಬರೆದ ಏಕೈಕ ಸಾಹಿತಿಯೆಂದರೆ ತಪ್ಪಾಗಲಾರದು. ಸ್ವತಂತ್ರ ಪ್ರವೃತ್ತಿಯ ಬರಹಗಾರರಾಗಿದ್ದ ತೇಜಸ್ವಿಯವರ ಸಾಹಿತ್ಯದ ಪಾತ್ರಗಳಲ್ಲಿ ಯಾವುದೇ ಪಾತ್ರ ಮುಖ್ಯ ಪಾತ್ರವೆಂದಾಗಲೀ, ಗುರುತಿಸಬರುವುದಿಲ್ಲ ಹಾಸ್ಯದ ಮೂಲಕ ದುಃಖವನ್ನು ಅನುಸಂಧಾನ ಮಾಡುವ ವಿಶಿಷ್ಟ ಶೈಲಿಯನ್ನು ತೇಜಸ್ವಿಯವರ ಸಾಹಿತ್ಯದಲ್ಲಿ ನಾವು ಕಾಣುತ್ತೇವೆ.

    ಕನ್ನಡದ ಅಗ್ರ ಕವಿಗಳಾದ ಕುವೆಂಪು ರವರ ಪುತ್ರರಾಗಿದ್ದ ಪೂರ್ಣಚಂದ್ರ ತೇಜಸ್ವಿಯವರು ತಂದೆಯವರಿಂದ ಸಾಹಿತ್ಯ ಲೋಕದ ಒಳ ಹೊರಗನ್ನು ಅರಿತುಕೊಂಡರೂ ಸಹ ತಂದೆಯನ್ನು ಅನುಸರಿಸದೆ ತಾವು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಬರೆದು ತಮ್ಮದೇ ಓದುಗ ವರ್ಗವನ್ನು ಕಟ್ಟಿಕೊಂಡವರು. ಕುವೆಂಪುರವರಂತೆಯೇ ತೇಜಸ್ವಿಯವರ ಸಾಹಿತ್ಯದಲ್ಲಿಯೂ ಕಾಡು, ಹಳ್ಳಿಯ ಜೀವನವೇ ಪ್ರಮುಖವಾದರೂ ಕುವೆಂಪು ಕಾದಂಬರಿಗಳಲ್ಲಿ ಕಾಣುವ ನಿಸರ್ಗ ನಿಬಿಡತೆ, ಗಾಂಭೀರ್ಯವನ್ನು ತೇಜಸ್ವಿಯವರಲ್ಲಿ ಕಾಣುವುದಿಲ್ಲ, ಬದಲಾಗಿ ಇಂದಿನ ವರ್ತಮಾನಕ್ಕೆ ಹೊಂದುವಂತಹಾ ಸಹಜವಾದ ಹಾಗೂ ಸರಳವಾದ ಸಾಹಿತ್ಯ ಸೃಷ್ಟಿ ಇವರದು. ಅದಕ್ಕಾಗಿಯೇ ತೇಜಸ್ವಿಯವರ ಸಾಹಿತ್ಯ ಜನರಿಗೆ ಹೆಚ್ಚು ಸಮೀಪವಾಗಿದೆ ಎನ್ನಬೇಕು. (ಎಂದ ಮಾತ್ರಕ್ಕೆ ಕುವೆಂಪು ಜನರನ್ನು ತಲುಪಿಲ್ಲವೆಂದಲ್ಲ!) ತೇಜಸ್ವಿಯವರು ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿ ತಮ್ಮ ಸೃಜನಶೀಲ ಪ್ರತಿಭೆಯಿಂದ ಗುರುತಿಸಲ್ಪಟ್ಟವರು. ನೋಡಲು ಉಡಾಫೆಯ ವ್ಯಕ್ತಿಯಂತೆ ಕಾಣುತ್ತಿದ್ದರೂ ತಮ್ಮ ಗಂಭೀರ ಚಿಂತನೆಗಳಿಂದ ಕನ್ನಡಿಗರನ್ನು ಚಿಂತನೆಗೆ ಹಚ್ಚಿದವರು. ಸಮಾಜವಾದಿ ಹೋರಾಟ, ರೈತ ಸಂಘಟನೆ, ಕೃಷಿ-ಬೇಸಾಯ, ಪ್ರಗತಿಪರ ಚಿಂತನೆ, ವೈಜ್ಞಾನಿಕ ವಿಶ್ಲೇಷಣೆಗಳನ್ನು ಸರಳ ಕನ್ನಡದಲ್ಲಿ ಬರೆಯುವುದರೊಂದಿಗೆ ಕನ್ನಡ ಓದುಗ ವಲಯವನ್ನು ವಿಸ್ತರಿಸಿದವರು ತೇಜಸ್ವಿ.

    ತೇಜಸ್ವಿ ಅವರ ಎಲ್ಲ ಕೃತಿಗಳೂ ಒಂದಿಲ್ಲೊಂದು ಉತ್ಪಾತಗಳ ಅಸಂತುಲಿತ ನಡೆಯಿಂದ ಸಂಭವಿಸುವ ಸಮಸ್ಯೆಗಳ ಚಿತ್ರಣದಿಂದಲೇ ಪ್ರಾರಂಭವಾಗುತ್ತವೆ. ‘ನಿಗೂಢ ಮನುಷ್ಯರು’, ‘ಕರ್ವಾಲೋ’, ‘ಜುಗಾರಿ ಕ್ರಾಸ್’, ‘ಚಿದಂಬರರಹಸ್ಯ’ದಂಥ ಕಾದಂಬರಿಗಳು ಹಾಗೂ ‘ಪರಿಸರದ ಕತೆಗಳ’ ಮೂಲಕ ಕನ್ನಡ ಕಥಾ ಸಾಹಿತ್ಯಕ್ಕೆ ಹೊಸ ಆಯಾಮವನ್ನು ದೊರಕಿಸಿಕೊಟ್ಟವರು ತೇಜಸ್ವಿ. ಈ ಎಲ್ಲಾ ಕೃತಿಗಳಲ್ಲಿ ಹಳ್ಳಿಯ ಬದುಕು ಮತ್ತು ಪರಿಸರ ಪ್ರಧಾನವಾಗಿರುವುದನ್ನು ಕಾಣುತ್ತೇವೆ. ತೇಜಸ್ವಿಯವರಿಗೆ ತಮ್ಮ ಹಳ್ಳಿಯ ಪರಿಸರ ಎಷ್ಟೊಂದು ಪ್ರಿಯವಾಗಿತ್ತೆಂದರೆ ಅವರೇ ತಮ್ಮ “ಪರಿಸರದ ಕಥೆ” ಪುಸ್ತಕದಲ್ಲಿ ಹೀಗೆ ಹೇಳಿಕೊಂಡಿದ್ದಾರೆ- ‘‘ಪ್ರಕೃತಿ ಮತ್ತು ಪರಿಸರದ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಇರುವ ಕುತೂಹಲಕ್ಕೆ ಮುಖ್ಯ ಕಾರಣ ನಮ್ಮ ತಂದೆಯವರೇ. ನಮಗೆ ಕುತೂಹಲ ಹುಟ್ಟಿಸಬೇಕೆಂಬ ಉದ್ದೇಶವೇನೂ ಅವರಿಗೆ ಇದ್ದಂತೆ ಕಾಣಲಿಲ್ಲ.ಅದರಲ್ಲಿ ಅವರಿಗೆ ಇದ್ದ ಆಸಕ್ತಿಯ ಪರಿಣಾಮವಾಗಿಯೇ ನಮಗೂ ಆಸಕ್ತಿ ಉಂಟಾ ಯ್ತು. ನನಗಂತೂ ಈ ಆಸಕ್ತಿ ಎಷ್ಟಾಯಿತೆಂದರೆ ಓದು ಬರಹ, ವಿದ್ಯಾಭ್ಯಾಸಗಳಲ್ಲಿ ಆಸಕ್ತಿ ಕಡಿಮೆಯಾಯ್ತು. ತಂದೆಯವರ ತಾರುಣ್ಯದ ಕಾಡಿನ ಮತ್ತು ಬೇಟೆಯ ರೋಮಾಂಚಕ ಅನುಭವಗಳನ್ನು ಕೇಳಿ ಪ್ರಭಾವಿತನಾದ ನಾನು ನಮ್ಮ ತಂದೆ ಏಕಾದರೂ ಮೈಸೂರಿಗೆ ಪಾಠಹೇಳಲು ಮಲೆನಾಡನ್ನು ತೊರೆದು ಬಂದರೋ ಎಂದು ವ್ಯಥೆ ಪಡುತ್ತಿದ್ದೆ.’’

    ಹಲವಾರು ಆಂಗ್ಲ ಕವಿಗಳ ಕೃತಿಗಳನ್ನು ಕನ್ನಡಕ್ಕೆ ತಂದ ತೇಜಸ್ವಿಯವರ ಪ್ರತಿಯೊಂದು ಕೃತಿಗಳಲ್ಲಿಯೂ ವಿಭಿನ್ನತೆ, ವೈವಿದ್ಯತೆಗಳನ್ನು ಕಾಣುತ್ತೇವೆ. ಕೀಟಗಳು, ಪ್ರಾಣಿಗಳು, ನದಿ-ಕೊಳ್ಳಗಳು, ಕಾಡುಗಳು, ಬೇಟೆಯಬಗ್ಗೆ ಹಲವಾರು ಕೃತಿಗಳನ್ನು ನೀಡಿರುವ ತೇಜಸ್ವಿ ತಮ್ಮ ‘ಕರ್ವಾಲೋ’ ಕೃತಿಯಲ್ಲಿ, ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ತುವಂತಹಾ ಸನ್ನಿವೇಶಗಳನ್ನು ಚಿತ್ರಿಸಿದ್ದಾರೆ. ಜತೆಗೆ ಇಲ್ಲಿ ಪ್ರಕೃತಿಯ ವಿಸ್ಮಯವನ್ನು ವೈಜ್ಞಾನಿಕ ಸಾಧನಗಳ ಮೂಲಕ ಅರ್ಥೈಸುತ್ತಾ ಆಧ್ಯಾತ್ಮಿಕತೆಯ ಕಡೆಗೆ ಕೊಂಡೊಯ್ಯುವುದನ್ನು ಕಾಣಬಹುದು `ಮಹಾಯುಧ್ಧ’, `ಹಾರುವ ತಟ್ಟೆಗಳು’, `ಮಹಾನದಿ ನೈಲ್’ ನಂತಹಾ ಹಲವು ವೈಜ್ಞಾನಿಕ ಹಿನ್ನೆಲೆಯ ಕೃತಿಗಳನ್ನು ಕನ್ನಡಕ್ಕೆ ಕೊಟ್ಟ ತೇಜಸ್ವಿಯವರ “ಅಲೆಮಾರಿಯ ಅಂಡಮಾನ್” ಕನ್ನ್ಡಡ ಪ್ರವಾಸ ಕಥನ ಸಾಹಿತ್ಯಗಳಲ್ಲಿ ಬಹು ವಿಶಿಷ್ಟವಾಗಿ ನಿಲ್ಲಬಹುದಾದ ಕೃತಿ. ಇನ್ನು ತೇಜಸ್ವಿಯವರ ಇನ್ನೊಂದು ಪ್ರಮುಖ ಕೃತಿ “ಚಿದಂಬರ ರಹಸ್ಯ” ದಲ್ಲಿ ಪರಿಸರ ವಿನಾಶವು ಹಳ್ಳಿಯ ಜೀವನವನ್ನು ಹೇಗೆ ಬಲಿತೆಗೆದುಕೊಳ್ಳುತ್ತದೆ ಎನ್ನುವುದನ್ನು ಅತ್ಯಂತ ಮಾರ್ಮಿಕವಾಗಿ ಚಿತ್ರಿಸಿರುವುದನ್ನು ಕಾಣುತ್ತೇವೆ. “ಅಬಚೂರಿನ ಪೋಸ್ಟಾಫೀಸು” ಕೃತಿಯ ಮೂಲಕ ಬಂಡಾಯ ಸಾಹಿತ್ಯ ಸೃಷ್ಟಿಗೆ ತೊಡಗಿದ ತೇಜಸ್ವಿಯವರು “ತಬರನ ಕಥೆ” ಯಲ್ಲಿ ಇಂದಿನ ರಾಜಕೀಯವನ್ನು ಬಹು ಮಾರ್ಮಿಕವಾಗಿ ಚಿತ್ರಿಸಿರುವುದನ್ನು ಕಾಣುತ್ತೇವೆ. ಈ ಎರಡು ಕಥೆಗಳು ತೇಜಸ್ವಿಯವರ ಅತ್ಯಂತ ಪ್ರಸಿದ್ದ ಕಥೆಗಳಾಗಿದ್ದುದಲ್ಲದೆ ಚಲನಚಿತ್ರಗಳಾಗಿ ರಾಷ್ಟ್ರ ಪ್ರಶಸ್ತಿಗಳಿಗೆ ಭಾಜನವಾಯಿತೆನ್ನುವುದು ಗಮನಾರ್ಹ. ಹೀಗೆ ತೇಜಸ್ವಿಯವರ ಪ್ರಥಮ ಕೃತಿಯಿಂದ ಹಿಡಿದು ಅವರ ಮರಣ್ ಕಾಲಕ್ಕಿಂತ ಸ್ವಲ್ಪ ಮೊದಲು ಪ್ರಕಟವಾದ “ಮಾಯಾಲೋಕ-೧” ಕೃತಿಯವರೆಗೂ ಪ್ರತಿಯೊಂದು ಕೃತಿಗಳಲ್ಲಿಯೂ ಅದರದೇ ಆದ ವೈಶಿಷ್ಟ್ಯವನ್ನು ನಾವು ಕಾಣುತ್ತೇವೆ.

    ಹೀಗೆ ಒಟ್ಟಾರೆ, ಪೂರ್ಣಚಂದ್ರ ತೇಜಸ್ವಿ ಕನ್ನಡಕ್ಕಷ್ಟೇ ಅಲ್ಲ ವಿಶ್ವ ಸಾಹಿತ್ಯ ವಲಯದಲ್ಲೇ ಒಂದು ಮಹತ್ವದ ಹೆಸರು ಮಾಡಿದವರು ಅವರ ಸಾಹಿತ್ಯದಲ್ಲಿನ ವಾಸ್ತವಿಕತೆ, ಗಟ್ಟಿತನಗಳಿಂದ ಗುರುತಿಸಿಕೊಂಡಿರುವ ತೇಜಸ್ವಿಯವರು ಕನ್ನಡಿಗರ ಹೃದಯದಲ್ಲಿ ಎಂದೆಂದಿಗೂ ಅಜರಾಮರರಾಗಿರುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರ ಹುಟ್ಟಿದ ಹಬ್ಬದ ಈ ಸಂದರ್ಭದಲ್ಲಿ ಅವರು ಕನ್ನಡಕ್ಕೆ ನೀಡಿದ ಸಾಹಿತ್ಯ ಕೊಡುಗೆಯನ್ನು ನೆನೆಯುತ್ತಾ, ಇಂತಹಾ ಅದ್ಭುತ ಪ್ರತಿಭೆಗಳು ಕನ್ನಡದಲ್ಲಿ ಇನ್ನಷ್ಟು ಹುಟ್ಟಿಬರಲಿ ಎಂದು ಹಾರೈಸೋಣ.

    ನಮಸ್ಕಾರ.