ಈ ಪ್ರೀತಿ ಸರಿಯೆ? ಈ ರೀತಿ ಸರಿಯೆ?

ಈ ಪ್ರೀತಿ ಸರಿಯೆ? ಈ ರೀತಿ ಸರಿಯೆ?

  ಈ ಪ್ರೀತಿ ಸರಿಯೆ? ಈ ರೀತಿ ಸರಿಯೆ?

 

   ಆಪ್ತ ಸ್ನೇಹಿತೆಯೊಬ್ಬಳು ಎಷ್ಟೋ ದಿನಗಳ ನಂತರ ಫೋನಿಗೆ ಸಿಕ್ಕಾಗ,ತುಂಬಾ ಉತ್ಸಾಹದಿಂದ ಪ್ರತಿಕ್ರಿಯಿಸಿದೆ.ಆದರೆ ಆಕಡೆಯಿಂದ ಬರುತ್ತಿದ್ದ ಜೀವವಿಲ್ಲದ ಧ್ವನಿ,ನನ್ನನ್ನು ಕಂಗೆಡಿಸಿತು.“ನಾಳೆ ಸ್ವಲ್ಪ ನಮ್ ಮನಿಕಡೀಗ್ ಬರ್ತೀಯೇನು? ಪ್ಲೀಸ್ ಇಲ್ಲಾ ಅನ್ ಬ್ಯಾಡವ್ವಾ ಭಾಳ ಮಾತಾಡೂದ್ ಅದ”.ಯಾಕ ಏನಾತು? ಅಂದೆ ಗಾಭರಿಯಿಂದ.“ಅದು ಫೋನ್ ನಾಗ ಮಾತಾಡೋ ವಿಷ್ಯಾ ಅಲ್ಲಾ.ನಾಳೆ ಹ್ಯಾಂಗೂ ಬರ್ತೀಯಲ್ಲಾ ಆಗ ಮಾತಾಡೋಣು”.ಫೋನ್ ಕಟ್ಟಾಗೆ ಬಿಟ್ಟಿತು.ರಾತ್ರಿಯೆಲ್ಲಾ ಗೆಳತಿಯ ಸಂಕಟದ ಧ್ವನಿ ಕಿವಿಯಲ್ಲಿ ಮಾರ್ಮೊಳಗಿ ನಿದ್ದೆಯಿಲ್ಲದೇ ಹೊರಳಾಡಿ,ಮರುದಿನ ಭಾನುವಾರವಾದ್ದರಿಂದ, ಕಚೇರಿಯ ಕೆಲಸದ ಜಂಜಾಟ ಮರೆತು ಅವಳ ಮನೆಯತ್ತ ಧಾವಿಸಿದೆ.

      ಗೇಟಿನತ್ತಲೇ ಕಣ್ಣು ನೆಟ್ಟು ನನ್ನ ಹಾದಿಯನ್ನೇ ನೋಡುತ್ತಿದ್ದ ಗೆಳತಿ ಸವಿತಾ ಕೈ ಹಿಡಿದು ಹೆಚ್ಚು ಕಮ್ಮಿ ಎಳೆದು ಕೊಂಡೇ ಒಳಗೆ ಕರೆದೊಯ್ದಾಗ,ಏನೊ ನಡೆಯಬಾರದ್ದು ನಡೆದಿದೆ ಎಂದು ಮನ ಶಂಕಿಸಿತು.ಯಾಕವ್ವಾ ಹಿಂಗ್ಯಾಕಿದ್ದಿ? ಮನ್ಯಾಗ್ ಯಲ್ಲಾರೂ ಅರಾಂ ಅದಾರಿಲ್ಲೊ? ಆತಂಕದಿಂದ ವಿಚಾರಿಸಿದೆ. ಪ್ಲೀಸ್ ಇಲ್ಲಿ ಬ್ಯಾಡಾ ಆ ರೂಮ್  ಗೆ ನಡಿ ಎಂದವಳನ್ನೇ ಹಿಂಬಾಲಿಸಿ ಕುಸಿದು ಕುಳಿತೆ.ಬಾಗಿಲು ಭಧ್ರ ಪಡಿಸಿದವಳೇ ನನ್ನ ಮಡಿಲಿನಲ್ಲಿ ತಲೆ ಇಟ್ಟು ಬಿಕ್ಕ ತೊಡಗಿದಳು.“ರೂಪಾ ನನ್ ಮಗಳು ನನ್ ಮನೀಗೆ ಕೊಳ್ಳಿ ಇಟ್ ಬಿಟ್ಟಾಳವ್ವಾ.ಆಕಿ ಸಂಬಂಧ ಮಂದೀಮುಂದ ಮಾರಿ ಇಟ್ಗೊಂಡ್ ಅಡ್ಡಾಡೂದ್ ಹ್ಯಾಂಗ ಅನ್ಸಿ ಬಿಟ್ಟದ.ಮೆಲ್ಲ ಮೆಲ್ಲನೆ ತನ್ನ ಗೋಳಿನ ತಥೆ ತೆರೆದಿಟ್ಟಳು. ಸವಿತಾಳದು ತುಂಬಾ ಸಂಪ್ರದಾಯಸ್ಥ ಮನೆತನ.ಅವಳ ಗಂಡ ದೊಡ್ಡ ಪುರೋಹಿತರು.ಆದರೂ ತಮ್ಮ ಮಗಳು ಯಾರಿಗೂ ಕಡಿಮೆ ಎನ್ನಿಸಬಾರದು ಎಂದು ಸಾಲ ಸೋಲ ಮಾಡಿ ದೂರದ ಊರಿನ  ಪ್ರಸಿದ್ಧ ಕಾಲೇಜಿನಲ್ಲಿ ಆಕೆಗೆ ಶಿಕ್ಷಣ ಕೊಡಿಸಿದ್ದರು.ಈ ಸಾರಿ ಅಷ್ಟೇಅವಳು ಎಮ್ ಎಸ್ ಸಿ ಮುಗಿಸಿದ್ದಳು.ಅವಳಮ್ಮನಿಗೆ ಮಗಳು ಇನ್ನಾದರೂ ಸ್ವಲ್ಪ ದಿನ ಮನೆಯಲ್ಲಿ ಇರಲಿ ಎಂದು ಆಸೆ.ಆದರೆ ಅವಳು ಪರೀಕ್ಷೆ ಮುಗಿದು ಒಂದೇ ತಿಂಗಳಿಗೆ ಕೆಲಸಕ್ಕೆಂದು ಮತ್ತೆ ಅದೇ ಊರಿಗೆ ಹೊರಟು ಹೋಗಿದ್ದಳು.ಅದೆಷ್ಟೊ ದಿನಗಳ ನಂತರ,ಅವಳು ಅಲ್ಲಿ ಒಬ್ಬ ಹುಡುಗನ ಪ್ರೀತಿಯಲ್ಲಿ ಸಿಲುಕಿರುವ ವಿಷಯ ಅಪ್ಪ ಅಮ್ಮನ ಕಿವಿಗೆ ಬಿದ್ದಾಗ ಗಾಭರಿಯಾದ ನನ್ನ ಗೆಳತಿ ಅವಳನ್ನು ಕೆಲಸಬಿಡಿಸಿ ಮನೆಗೆ ಕರೆತಂದಳಂತೆ.ಆತ ನೋಡಿದರೆ ಅನ್ಯ ಜಾತಿಯವ.ಇವರ ಸಂಪ್ರದಾಯಸ್ಥ ಮನಸ್ಸಿಗೆ ಖಂಡಿತಾ ಹೊಂದದ ವಿಷಯ ಅದು.ಅಷ್ಟೇ ಅಲ್ಲ ತಮ್ಮ ವೃತ್ತಿಗೇ ಈ ಮದುವೆ ಕಂಟಕವಾಗುವ ಭಯ ಬೇರೆ.ಈಗ ಎರಡು ತಿಂಗಳಿಂದ ಎಲ್ಲ ವಿಧದಿಂದಲೂ ಬುದ್ಧಿಹೇಳಿ ಸಾಕಾಗಿ, ಕಡೆಗೆ ನನ್ನನ್ನು ಕರೆಸಿದ್ದಳು.‘ನೋಡವ್ವಾ ನೀ ಅಂದ್ರ ಆಕೀಗ ಭಾಳ ಪ್ರೀತಿ ಅದಕ್ಕ ಒಮ್ಮೆ ನೀ ಆರ ತಿಳಿಶಿ ಹೇಳು’ ಎಂದು ಬೇಡಿಕೊಂಡಾಗ,ಮರು ಮಾತಿಲ್ಲದೇ ಒಪ್ಪಿಕೊಂಡೆ.ಕಾರಣ ಆ ಹುಡುಗಿ ಮೊದಲಿನಿಂದಲೂ ನನಗೆ ತುಂಬಾ ಆತ್ಮೀಯಳು.ಯಾವುದೇ ವಿಚಾರಕ್ಕೂ ನನ್ನ ಸಲಹೆ ತೆಗೆದುಕೊಳ್ಳದೇ ಹೆಜ್ಜೆ ಇಡುವವಳಲ್ಲ ಹಾಗಾಗಿ ಸುಲಭವಾಗಿ ತಿಳಿಹೇಳಬಹುದೆಂದು ಅಂದುಕೊಂಡೆ.ಆದರೆ ಅವಳ ಜೊತೆ ಮಾತಾಡುತ್ತಿದ್ದಂತೆ ಇವಳು ನಮ್ಮ ಮೊದಲಿನ ಮುಗ್ಧ ವಾಣಿಯಲ್ಲ ಎಂದು ಅನ್ನಿಸತೊಡಗಿತು.ನಾನು ಸುತ್ತಿ ಬಳಸಿಕೇಳಬೇಕೆಂದಿದ್ದ ವಿಷಯವನ್ನು ಅವಳು ನೇರವಾಗಿ ಅಷ್ಟೇ ಕಠೋರವಾಗಿ ಹೇಳತೊಡಗಿದಾಗ ಎದೆಯಲ್ಲಿ ಮುಳ್ಳು ಚುಚ್ಚಿದಂತಾಯಿತು.“ಆಂಟಿ ನೀವು ಏನ್ ಕೇಳಾಕ ಅಂತ ಬಂದೀರಿ ನಂಗ ಗೊತ್ತದ.ನಾನು ಆ ಹುಡ್ಗನ್ನ ಭಾಳ ಪ್ರೀತಿ ಮಾಡ್ತೀನಿ.ಅವನ್ನ ಲಗ್ನಾನೂ ಮಾಡ್ಕೋತೀನಿ.ನಾ ಯಂಥಾ ಚಂದ ನೌಕರಿ ಮಾಡ್ಕೊಂಡು ಅಲ್ಲಿ ಅರಾಂ ಇದ್ದೆ.ನಮ್ಮವ್ವ ಯಲ್ಲದಕ್ಕೂ ಕಲ್ ಹಾಕಿದ್ಲು.ಇಲ್ಲಿ ಯಾರೀಗೊ ನನ್ನ ಕಟ್ಟೋ ಪ್ಲಾನ್ ಮಾಡ್ಯಾರ.ನಾ ಅದ್ಕೆಲ್ಲಾ ಬಗ್ಗಂಗಿಲ್ಲಾ.ನಮ್ಮದು ೪ ವರ್ಷದ ಪ್ರೀತಿ ಅದ ತಿಳಿತಿಲ್ಲೋ’.ಅಬ್ಬಾ! ಜೀವಕ್ಕೆ ಜೀವಕೊಟ್ಟು ಬೆಳೆಸಿದ ಆಪ್ಪ ಅಮ್ಮನಿಗಿಂತ ಹೆಚ್ಚಾದನೆ ಆತ ಎಂದು ನೊಂದುಕೊಂಡೆ.‘ಅಲ್ಲವ್ವಾ ಈ ಪರಿ ಸಾಲ ಮಾಡಿ ನಿಮ್ಮಪ್ಪಾ ಓದಿಸಿ ನಿನ್ನ ಇಷ್ಟ್ ಮ್ಯಾಲ್ ಬರೊ ಹಂಗ ಮಾಡಿದ್ದಕ್ಕ ನೀ ಕೊಡೊ ಬಹುಮಾನಾ ಇದೇ ಏನು? ನೀ ಹೀಂಗ ಮಾಡಿದ್ರ ಈ ಊರಾಗ ನಿಮ್ಮಪ್ಪನ್ನ ಯಾರು ಪೂಜಾಕ್ಕ ಕರೀತಾರ? ಸ್ವಲ್ಪ ಜೋರಾಗೇ ಪ್ರಶ್ನಿಸಿದೆ.ಆಹಾಹಾ ಇವ್ರೇನ್ ಅಂಥಾ ದೊಡ್ಡದು ಮಾಡ್ಯಾರ? ಅದು ಅವರ ಕರ್ತವ್ಯಾ ಅದ.ಒಂದ್ ತಿಳ್ಕೋರಿ ಇವ್ರನ್ನ ಯಾರೂ ಕರಿಯಾಂಗಿಲ್ಲ ಅಂತ ನಾ ನನ್ನ ಪ್ರೀತಿ ಬಿಡಾಕ ಆಗಾಂಗಿಲ್ಲಾ.ನಾ ಇವ್ರ ಸಂಬಂಧ ಸಣ್ಣಾಕಿ ಇದ್ದಗಿಂದಾ ನನ್ನ ಎಂಥೆಂಥಾ ಅಶಾ ಎಲ್ಲಾ ಕೊಂದುಕೊಂಡೀನಿ ಗೊತ್ತೈತೇನ್ರಿ? ಒಂದ್ ಫ್ಯಾಶನ್ ಅರಬಿ ಹಾಕಿಲ್ಲಾ ಎಂಜಾಯ್ ಮಾಡಿಲ್ಲಾ ಏನಿಲ್ಲಾ.ಥೂ ಈ ದರಿದ್ರ ಜಾತೀಲಿ ಹುಟ್ಟಿದ್ದೇ ನನ್ ತಪ್ಪು.ಅವಳ ಮಾತುಗಳು ಭರ್ಚಿಯಂತೇ ಚುಚ್ಚುತ್ತಿದ್ದವು.ಸವಿತಾ ಸಂಕಟ ತಾಳಲಾರದೇ ಬಾಯ್ತೆಗೆದು ಏನೋ ಹೇಳಹೋದಳು.‘ನೀ ಸುಮ್ನಿರು ಮಮ್ಮಿ ಇವತ್ತು ನಾ ಹೀಂಗಾಗೂದಕ್ಕ ನೀನ ಕಾರಣಾ.ದಿವಸಕ್ಕ ಹತ್ ಸಾರಿ ಫೋನ್ ಮಾಡಿ ನನ್ನನ್ನ ವಿಚಾರಿಸುತ್ತಿದ್ದಿ.ಯಾಕ ಅಂತ ನಂಗ ಗೊತ್ತದ.ನೀ ಹೆಜ್ಜಿ ಹೆಜ್ಜೀಗು ನನ್ ಮ್ಯಾಲ ಸಂಶಯ ಮಾಡ್ತಿದ್ದಿ ಹೌದಿಲ್ಲೊ’.ಜೋರಾಗಿ ಕಿರುಚಿದಳು ವಾಣಿ.ಪಾಪ ಮಗಳು ದೂರದೂರಿನಲ್ಲಿದ್ದಾಳೆ.ಹೇಗಿದ್ದಾಳೊ ಏನು ತೊಂದರೆಯೊ ಎಂದು ಕಾಳಜಿಯಿಂದ ವಿಚಾರಿಸುವ ತಾಯಿಯ ಮಮತೆಯನ್ನೂ ಅರ್ಥ ಮಾಡಿಕೊಳ್ಳದಷ್ಟು ಕುರುಡಾಗಿದ್ದಾಳಲ್ಲಾ ಅನ್ನಿಸಿತು.ಯಾಕೋ ಪರಿಸ್ಥಿತಿ ಕೈ ಮೀರುತ್ತಿದೆ ಎನ್ನಿಸಿ, ಬೇರೆ ಉಪಾಯ ಮಾಡಿದೆ.ಮೆಲ್ಲಗೆ ವಾಣಿಯ ಹತ್ತಿರ ಸಾಗಿ ಬೆನ್ನಮೇಲೆ ಕೈಯ್ಯಾಡಿಸಿ ವಿಶ್ವಾಸಕ್ಕೆ ತೆಗೆದುಕೊಂಡೆ.ಸವಿತಾಳಿಗೆ ಕಣ್ ಸನ್ನೆ ಮಾಡಿ ಹೊರಗೆ ಕಳಿಸಿ, ಅವಳ ಜೊತೆ ಮಾತಾಡ ತೊಡಗಿದೆ.ವಾಣಿ ನೀ ಜಾಣೆ ಹೌದಿಲ್ಲೊ ನಾ ಒಂದ್ ಮಾತು ಹೇಳ್ತೀನಿ ಕೇಳ್ತೀಯೇನು? ಅಂದೆ. ಹೇಳ್ರಿ ಆಂಟಿ ಎಂದು ಬಿಗಿಯಾಗೇ ಕೂತಳು. ನೋಡವ್ವಾ ಒಂದ್ ಲೆಕ್ಕಕ್ಕ ನೀ ಮಾಡಿದ್ದು ನಂಗ ಅಂಥಾ ತಪ್ಪು ಅನ್ನಿಸ ವಲ್ದು.ಯಾಕಂದ್ರ ನಿನ್ ವಯಸ್ಸಿನ ಭಾಳ ಮಂದಿ ಈಗೆಲ್ಲಾ ಪ್ರೀತಿಸಿ ಲಗ್ನಾ ಮಾಡ್ಕೋತಾರ.ಆದ್ರ ನಂದ್ ಒಂದ್ ಮಾತದ.ಅದನ್ನ ನಡ್ಸಿ ಕೊಟ್ರ ನಾನ ನಿಂತು ನಿನ್ ಲಗ್ನಾ ಮಾಡ್ತೀನಿ. ಅಂದೆ ಏನು ಎಂಬಂತೆ ನನ್ನ ನೋಡಿದಳು.ಮತ್ತೇನಿಲ್ಲಾ ನಿಂಗಿನ್ನೂ ವಯಸ್ಸು ಸಣ್ಣದದ.ಇದೇ ಊರಾಗ ನಾ ನಿಂಗ ನೌಕರಿ ಕೊಡಸ್ತೀನಿ ಒಂದ್ ವರ್ಷಾ ಮಾಡು.ಆ ಸಾಲಾ ಮುಟ್ಸು.ಆಮೇಲೆ ಅವ್ರ ಮನಸ್ಸೂ ಬದಲಾದೀತು.ಇಲ್ಲಾಂದ್ರ ನಾ ಇದ್ದೀನಿ ಹ್ಯಾಂಗೊ ಮಾಡಿ ಅವನ್ ಜೊತಿ ನಿನ್ ಲಗ್ನಾ ಮಾಡ್ತೀನಿ.ಆದ್ರ ನೀ ಯಾವ್ ಕಾರಣಕ್ಕೂ ಮನಿ ಬಿಟ್ಟು ಹೋಗೋದಾಗ್ಲಿ ಜೀವಾ ತಕ್ಕೊಳೊದಾಗ್ಲಿ ಮಾಡಾಂಗಿಲ್ಲಾ.ನಂಗ ಫ್ರಾಮಿಸ್ ಮಾಡು ಎಂದೆ.ಸರಿ ಅಂತ ಒಪ್ಪಿಕೊಂಡಳು.ಸವಿತಾಳನ್ನು ಕರೆದು ಯಾವಕಾರಣಕ್ಕೂ ಅವಳ ಮನಸ್ಸು ನೋಯಿಸಕೂಡದು, ಅವಳ ಮನಸ್ಸಿನ ವಿರುದ್ಧ ಮದುವೆ ಪ್ರಯತ್ನ ಮಾಡಬಾರದೆಂದು ವಾಣಿಯ ಸಮ್ಮುಖದಲ್ಲೇ ಶರತ್ತು ಹಾಕಿ ಮುಂದಿನ ಭಾನುವಾರ ಮತ್ತೆ ಬರುವುದಾಗಿ ಹೇಳಿ ಬಂದೆ.ಏನೊ ಒಂದು ದೊಡ್ಡ ಕಾರ್ಯ ನಿರ್ವಹಿಸಿದ ತೃಪ್ತಿ ನನಗಾಯ್ತು.ಇರಲಿ ಯಾರಿಗೂ  ನೋವಾಗದಂತೆ ಒಂದುದಾರಿ ಹುಡುಕಿದರಾಯ್ತೆಂದು ಅಂದುಕೊಂಡೆ.

 

            ಕೆಲಸದ ಒತ್ತಡದಲ್ಲಿ ವಾರ ಸರಿದದ್ದೇ ತಿಳಿಯಲಿಲ್ಲ.ಭಾನುವಾರ ಲಗುಬಗೆಯಿಂದ ಎಲ್ಲ ಕೆಲಸ ಮುಗಿಸಿ ಸವಿತಾಳಲ್ಲಿ ಹೋದೆ.ಅಂಗಳದ ಕಟ್ಟೆಯ ಮೇಲೆ ಅಕ್ಕಿ ಆರಿಸುತ್ತ ಕುಳಿತಿದ್ದ ಅವಳು ನನ್ನ ನೋಡಿ ನಿರ್ಲಿಪ್ತವಾಗಿ ಸ್ವಾಗತಿಸಿದಳು.‘ಯಾಕ ಅರಾಂ ಅದಿ ಹೌದಿಲ್ಲೊ?’ ಅಂದೆ. ‘ಇನ್ನೆಲ್ಲಾ ಅರಾಮ ನೋಡು. ಯಾಕಂದ್ರ ಇದ್ದೊಬ್ಬ ಮಗಳು ಕೈ ಬಿಟ್ಟು ಹೋದ್ಲು.’ ಅಂದ್ರ? ನಾನು ಗಾಭರಿಯಿಂದ ಕೇಳಿದೆ. ನಿನ್ನೆ ಮುಂಜಾನೆ ಯಾರೀಗೂ ಹೇಳ್ದೆ ಕೇಳ್ದೆಉಟ್ಟ ಬಟ್ಟೀಮೇಲೆ ಮನಿ ಬಿಟ್ಟು ಹೋದ್ಲವ್ವಾ.ಮನ್ನಿ ರಾತ್ರಿ ಅವರ ಅಪ್ಪನ ಕೂಡ ಜಗಳ ತೆಗದಾಳ.ಆ ಹುಡುಗನ ಜೋಡಿ ಕದ್ದು ಫೋನಿನ್ಯಾಗ ಲಲ್ಲೆ ಹೊಡೀತಿದ್ಲು.ಅವರು ತಡೀಲಾರ್ದ ಬೈದಾರ.ಅಷ್ಟಕ್ಕ ನಮಗಿಬ್ಬರಿಗೂ ‘ನಂಗೇನಾರಾ ಬೈದು ಹೊಡದು ಮಾಡಿದ್ರ ಹುಶಾರು ಪೋಲಿಸ್ ಕಂಪ್ಲೆಂಟ್ ಕೊಟ್ಟು ಒಳಗ್ ಹಾಕಸ್ತೀನಿ ಹುಶಾರು" ಅಂತ ದೊಡ್ ಬಾಯಿ ಮಾಡಿ ಹೆದರಿಕಿ ಹಾಕಿದ್ಲು.ಪಾಪಾ ಅವರಪ್ಪಾ ಮತ್ತೂ ಮನಸೀಗ ತೊಗಳ್ದೇ ಉಂಡ್ ಮಲಗು ಅಂತ ಜುಲ್ಮಿ ಮಾಡಿಉಣ್ಣಿಸಿದ್ರು.ನೀನೇ ಹೇಳವ್ವಾ ನಾವ್ ಯೇನ್ ತಪ್ಪ್ ಮಾಡೀವಿ ಅಂತ ನಮ್ಗ ಈ ಶಿಕ್ಷಾ ಕೊಟ್ಟಾಳ.ನಿನ್ನಿಯಿಂದ ಒಂದ್ ತುತ್ತು ಗಂಟಲದಾಗ ಇಳಿವಲ್ದು.ಜೀವಕ್ಕ ಜೀವಾ ಮಾಡಿ ಬೆಳೆಸಿದ ನಂಗ ಆಕಿ ಅಂದ್ಲಲ್ಲಾ ತಾನು ಇವತ್ತು ಹೀಂಗ್ ಆಗಾಕ ನೀನೇ ಕಾರಣಾ ಅಂತಾ.ಪೋಲೀಸರ ಕೈಯ್ಯಾಗ ಹಿಡಿದು ಕೊಡೊ ಅಂಥಾ ತಪ್ಪು ನಾವೇನ್ ಮಾಡೀವಿ?.ಈಗ ಎಲ್ಲಂದ್ರ ಅಲ್ಲಿ ಹೆಣ್ ಮಕ್ಳ ಮ್ಯಾಲ ದೌರ್ಜನ್ಯ ನಡೀತಾವ.ಅದಕ್ಕ ನಮ್ ಮಗಳು ದೂರದೂರಿನ್ಯಾಗ ಇರ್ತಾಳಲ್ಲಾ ಅಂತ ಭಯಾ ಕಾಳಜಿಯಿಂದ ನಾವು ಇವರ ಬಗ್ಗೆ ವಿಚಾರಮಾಡೋದೂ ತಪ್ ಕೆಲ್ಸಾ ಏನು? ಇದೇ ಕಟ್ಟಿ ಮ್ಯಾಲ ಕುಂತು ಆಕಿ ಊರಿಂದ ಬರೂ ಮುಂದ ದಾರಿ ನೋಡ್ತಾ ಇರ್ತಿದ್ದೆ.ಇನ್ನು ಯಾರೀಗಾಗಿ ಕಾಯ್ಲಿ.ಹೋಗೂ ಮುಂದ ನನ್ ಮ್ಯಾಲ್ ಅಪವಾದಾ ಹಾಕಿ ಹೋದ್ಲಲ್ಲಾ ಆಕಿ ಕೆಟ್ಟ್ ಹೋಗಾಕ ನಾ ಹ್ಯಾಂಗ್ ಕಾರಣಾ ಅಗ್ತೀನಿ.ತಾಯಿ ಪ್ರೀತೀಲಿ ದೋಷಾ ಹುಡುಕಾತಳಲ್ಲಾ.ನಾ ಯಾರಿಗ್ ಮಗಳೇ ಅನ್ಲಿ’ ಅವಳು ಹುಚ್ಚರಂತೆ ಹಲುಬಿ ಅಳುತ್ತಿದ್ದರೆ ನಾನು ದಿಗ್ ಭ್ರಾಂತಿಯಿಂದ ಮಾತು ಮರೆತು ನಿಂತೆ.ಅಯ್ಯೋ ದೇವರೆ ಯಾಕೆ ಈ ಮಕ್ಕಳು ಹೀಗಾಗುತ್ತಿದ್ದಾರೆ.ಹೆತ್ತೊಡಲಿಗೇ ಬೆಂಕಿಯಿಟ್ಟು ಹೋಗುವ ದುಷ್ಟತನ ಎಲ್ಲಿಂದ ಮೈಗೂಡಿಸಿಕೊಳ್ಳುತ್ತಿದ್ದಾರೆ?  ಓದುಗರೇ ನೀವೇ ಹೇಳಿ ಈ ರೀತಿ ಸರಿಯೆ? 

Rating
No votes yet

Comments