ಅನಾಥರೆಲ್ಲಾ ಈ ಜಗದೊಳಗೆ

ಅನಾಥರೆಲ್ಲಾ ಈ ಜಗದೊಳಗೆ

 ಅನಾಥರೆಲ್ಲಾ ಈ ಜಗದೊಳಗೆ

    “ನಾಥನು ನೀನು ಅನಾಥನು ನಾನಯ್ಯ
    ನಾಥೋಜ ಗುರು ಜಗನ್ನಾಥ ವಿಠ್ಠಲ ಪ್ರಿಯಾ”
                ಶ್ರೀ ಜಗನ್ನಾಥ ದಾಸರು.

    ಮುಂಜಾನೆಯ ಹೊತ್ತು, ಬಹಳ ಚಟುವಟಿಕೆಯಿಂದ ಕೂಡಿದ ಸಮಯ. ವಾಕಿಂಗ್, ಚಹಾ, ಮಕ್ಕಳನ್ನು ಶಾಲೆಗೆ ಕಳುಹಿಸುವುದು, ಪೇಪರ ಓದುವುದು, ಸ್ನಾನ, ಪೂಜೆ, ಟಿಫಿನ್, ಆಫೀಸಗೆ ತಯಾರಾಗುವ ಗಡಿಬಿಡಿ, ಹೆಂಡತಿಯ ಮಾತುಗಳು ಹೀಗೆ. ಇಂದು ನಸುಕಿನಲ್ಲಿ ಏಳುವಾಗಲೇ ವಾಕಿಂಗ್‍ಗೆ ಹೋಗುವ ಕುರಿತು ಮನಸ್ಸಿರಲಿಲ್ಲ. ಒಲ್ಲದ ಮನಸ್ಸಿನಿಂದಲೇ ಹೋಗಿಬಂದಿದ್ದೆ. ಮುಂದಾಗುವುದು ಕೆಲವೊಮ್ಮೆ, ಮೊದಲೇ ಇನ್ನಿತರ ಚಟುವಟಿಕೆ, ಘಟನೆಗಳಿಂದ ಗೊತ್ತಾಗುತ್ತದೆಯೋ ಹೇಗೋ? ಮನಸ್ಸು ವಿಹ್ವಲವಾಗಿತ್ತು. ವಾಕಿಂಗ್ ಮುಗಿಸಿ ಮನೆಗೆ ಬಂದು ಚಹಾ ಕುಡಿಯುವ ಮುನ್ನ ಫೋನ ಬಂದಿತ್ತು. ಹುಡುಗರು ಸ್ಕೂಲಿಗೆ ತಯಾರಾಗುವ ಧಾವಂತದಲ್ಲಿದ್ದರು, ನಡುವೆಯೇ ತಮ್ಮ ಸಮಸ್ಯೆ ಹೇಳುತ್ತಿದ್ದರು. ಅದು ಯಾವುದೂ ನನ್ನ ಕಿವಿಗೆ ಬೀಳುತ್ತಿರಲಿಲ್ಲ. ಅವಳೂ ಕೂಡ ಸಾಯಂಕಾಲ ಹೊರಗೆ ಹೋಗಿ ಬರುವ ಕುರಿತು ಅಡುಗೆ ಮನೆಯಿಂದಲೇ ಹೇಳುತ್ತಿದ್ದಳು. ಅದಕ್ಕೂ ನನ್ನ ಸ್ಪಂದನೆ ಇರಲಿಲ್ಲ. ಸ್ಮಶಾನ ವೈರಾಗ್ಯ ಬರುವುದು ಆ ಹೊತ್ತಿನಲ್ಲೇ. ಸ್ಕೂಲವ್ಯಾನ ಬಂದಿದ್ದೂ ಗೊತ್ತಾಗಲಿಲ್ಲ. ವ್ಯಾನಿನೊಳಗಿಂದ ಮಕ್ಕಳು “ಟಾ, ಟಾ” ಹೇಳಿದಾಗ ಶಾಸ್ತ್ರಕ್ಕೆ ಕೈ ಎತ್ತಿದ್ದೆ. ಬಿಸಿಬಿಸಿ ಚಹಾ ಕೊಡುತ್ತ ಅವಳು ಮೊದಲು ಕೇಳಿದ್ದು ಅದೇ, “ಯಾಕೆ? ಏನಾಯ್ತು? ಒಂಥರಾ ಇದ್ದಿರಿ.” “ತಂದೆ........ಹಾಂ...... ರವಿಯ ತಂದೆ ಹೋಗ್ಬಿಟ್ರು” ನನ್ನ ಬಾಯಿಯಿಂದ ಹೊರಬಂದ ಮಾತಿಗೆ ಅವಳೂ ಗಾಭರಿಯಾದಳು.
    ಕೆಲವು ಸಂಬಂಧಗಳು ಹೀಗೆಯೇ, ರಕ್ತದ ಪಾತ್ರವೇ ಇರುವುದಿಲ್ಲ. ಆದರೂ ಅವಿನಾಭಾವ ಸಂಬಂಧ. ಅನೋನ್ಯತೆ, ವಿಶ್ವಾಸ, ಮಮತೆ, ಆಕರ್ಷಣೆ ಎಲ್ಲವೂ ಮೇಳೈಸಿರುತ್ತವೆ. ನಮ್ಮ ಮನೆಯಿಂದ ಒಂದಿಷ್ಟು ದೂರ ಅವರ ಮನೆ. ಅದು ಕೂಡ ನನ್ನ ಮನೆಯಂತೆ. ನಾನು ಕೂಡ, ಅದರ ಸದಸ್ಯ ಎಂದು ಹಕ್ಕಿನಿಂದ ಹೇಳುವುದು ಅನ್ಯರ ದೃಷ್ಟಿಯಲ್ಲಿ ತಪ್ಪಾಗುತ್ತದೆ ಎಂತಾದರೂ ಅವರ ಮಾನಸ ಪುತ್ರನಂತಾಗಿದ್ದೆ. ತಂದೆ-ಮಗನ ಸಂಬಂಧಗಳು ಸಾಮಾನ್ಯವಾಗಿ ಹೆÉೀಗಿರುತ್ತವೆಯೋ, ಹಾಗೆಯೇ ಇಲ್ಲಿಯೂ ಕೂಡ ಪ್ರಾಥಮಿಕ ಶಿಕ್ಷಣ ಮುಗಿಸಿ ಹಳ್ಳಿಯಿಂದ ಇಲ್ಲಿಗೆ ಬಂದಾಗ ಎಲ್ಲವೂ ಹೊಸತಾಗಿತ್ತು. ಜಾಣ ಹುಡುಗನಲ್ಲದಿದ್ದರೂ ದಡ್ಡನಲ್ಲ ನಾನು. ತಂದೆಯವರದು ಸರ್ಕಾರಿ ನೌಕರಿಯಲ್ಲ, ಖಾಸಗಿ ಉದ್ಯೋಗ. ನಾನೊಬ್ಬನೇ ಪ್ರೀತಿಯ ಮಗ. ಒಂದಿಷ್ಟು ಚೆನ್ನಾಗಿ ಓದಿ, ಉದ್ಯೋಗ ಪಡೆದು, ತಕ್ಕ ಮಟ್ಟಿಗೆ ಬದುಕು ಸಾಗಿಸಲಿ ಎಂಬ ಉದ್ದೇಶ ಅವರಿಗಿತ್ತು. ಹೆತ್ತವರಿಗೆ ಈ ರೀತಿ ವಿಚಾರ ಇರುವುದು ಸಹಜವೇ. ಗಣಿತ ಮತ್ತು ವಿಜ್ಞಾನಕ್ಕಾಗಿ ಎಂದು ಟ್ಯೂಷನ್‍ಗೆ ಸೇರಿಸಿದ್ದರು. ನಾನು ಟ್ಯೂಷನ್ ಹೋಗುತ್ತಿದ್ದುದು ಅವರ ಬಳಿಗೇ. ಎಂಟನೇ ತರಗತಿಯಲ್ಲಿದ್ದಾಗ ಸಾಯಂಕಾಲದ ಹೊತ್ತಿನಲ್ಲಿ ಅವರ ಮನೆಗೆ ಹೋದಾಗ, ಅವರು ರಾತ್ರಿ ಊಟದ ಪೂರ್ವಭಾವಿ ತಯಾರಿಯಲ್ಲಿರುತ್ತಿದ್ದರು. ಅಕ್ಕಿ ತೊಳೆಯುವುದು, ತರಕಾರಿ ಹೆಚ್ಚುವುದು, ಪಾತ್ರೆ ತೊಳೆಯುವುದು ಹೀಗೆ. ಅವರೊಬ್ಬರೇ ಮನೆಯಲ್ಲಿ. ಯಾವಾಗಲೋ ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಅವರ ಮಗ ರವಿ ಬಂದು ಹೋಗುತ್ತಿದ್ದುದು ನೆನಪು. ಆದರೆ ರವಿಯು ಅವರ ಜೊತೆ ಇರುವುದಾಗಲಿ, ಮಲಗುವುದಾಗಲಿ ಇಲ್ಲ. ನನಗೆ ಯಾವುದೂ ಅರ್ಥವಾಗುತ್ತಿರಲಿಲ್ಲ. ಆ ವಯಸ್ಸೇ ಹೀಗೆ. ಕೆಲ ದಿನಗಳ ನಂತರ ಮನೆಯಲ್ಲಿ ಈ ಕುರಿತು ಕೇಳಿದ್ದೆ. ನನ್ನ ತಾಯಿಯು, “ನಿನಗೆ ಅಥವಾಗಲ್ಲ. ಸುಮ್ನೆ ಕೂಡು” ಎಂದಷ್ಟೇ ಹೇಳುತ್ತಿದ್ದರು. “ಅಭ್ಯಾಸ ಮಾಡು, ಹೆಚ್ಚಿಗೆ ವಿಚಾರ ಮಾಡ್ಬೇಡ” ತಂದೆಯವರ ಆದೇಶ. ಟ್ಯೂಷನ್ ಮುಗಿಸಿಕೊಂಡು ಬರುವಾಗ, “ಕೇಶವಾ, ಕೂಡು, ಇಲ್ಲೇ ಆಟ ಆಡು,” “ಊಟ ಮಾಡಿಕೊಂಡು ಹೋಗು”, “ನಿನ್ನ ಹೊಂವರ್ಕ ಏನಾದರಿದ್ದರೆ ಇಲ್ಲೇ ಮಾಡು” ಹೀಗೆ ಅವರು ನಿತ್ಯ ಹೇಳುವ ಮಾತುಗಳು. ಆವಾಗ ನನಗೆ ಯಾವಾಗ ಟ್ಯೂಷನ್ ಮುಗಿಸಿ ಮನೆಗೆ ಹೋದೇನು ಎಂಬ ಅತುರ. “ಚಹಾ, ತಣ್ಣಗಾಯ್ತು” ಎಂದು ಅವಳು ಹೇಳಿದಾಗ ವಿಚಾರಗಳಿಂದ ವಾಸ್ತವಕ್ಕೆ ಬಂದೆ. “ವೃದ್ಧಾಶ್ರಮಕ್ಕೆ ಫೋನ ಮಾಡ್ಬೇಕು ರವಿಗೂ ಕೇಳ್ಬೇಕು, ಅಂತ್ಯಸಂಸ್ಕಾರ ಎಲ್ಲಿ? ಯಾವಾಗ”?
    ಕೆಲ ತಿಂಗಳುಗಳು ಕಳೆದ ಮೇಲೆ ನನಗೆ, ಅವರಿವರು ಮಾತನಾಡುವ ವಿಷಯಗಳಿಂದ ಗೊತ್ತಾಗಿತ್ತು. ಅವರು ಒಬ್ಬರೇ ಏಕೆ ಮನೆಯಲ್ಲಿದ್ದದ್ದು. ಅವರಿಗೆ ಮದುವೆಯಾದಂದಿನಿಂದ, ಗಂಡ-ಹೆಂಡತಿಯಲ್ಲಿ ಹೊಂದಾಣಿಕೆ ಕೊರತೆ ಇತ್ತು. ಪ್ರಾರಂಭದಲ್ಲಿದ್ದ ಕೊರತೆಯು, ಮುಂದೆ ವರ್ಷಗಳು ಕಳೆದಂತೆ ಅವರಿಬ್ಬರ ನಡುವೆ ದೊಡ್ಡ ಬಿರುಕಿನಂತೆ ಮಾರ್ಪಾಟಾಗಿತ್ತು. ಯಾವುದೋ ಕ್ಷಣದಲ್ಲಿ ಕೂಡಿದ್ದಕ್ಕೆ ಸಾಕ್ಷಿ ಎಂಬಂತೆಯೇ ರವಿಯು ಮಗನಾಗಿ ಜನಿಸಿದ್ದ. ಮನೆಯ ವಾತಾವರಣ ರವಿಯ ಬಾಲ್ಯವನ್ನೇ ಹಾಳು ಮಾಡಿತ್ತು. ತಂದೆಯ ಆರೈಕೆಯಲ್ಲಿಯೂ ಬೆಳೆಯಲಿಲ್ಲ, ತಾಯಿಯ ಪ್ರೀತಿಯೂ ಸಿಗಲಿಲ್ಲ.
    ಡೆಡ್‍ಬಾಡಿಯನ್ನು ವೃದ್ಧಾಶ್ರಮಕ್ಕೆ ತರುವವರಿದ್ದಾರೆ ಎಂಬ ಮಾಹಿತಿ ಸಿಕ್ಕಿತು. ತೀರ್ಥಕ್ಷೇತ್ರಗಳ ದರ್ಶನಕ್ಕೆಂದು ಹೋಗಿದ್ದ ಅವರು ನಿಜವಾಗಿಯೂ ದೇವರ ಬಳಿ ಹೋದರಲ್ಲಾ! ತಿರುಪತಿಯಿಂದ ಬಾಡಿ ಬರಬೇಕು. ವೃದ್ಧಾಶ್ರಮದವರೇ ಯಾತ್ರೆ ಏರ್ಪಡಿಸಿದ್ದರು. ಯಾತ್ರೆಯನ್ನು ಮೊಟಕುಗೊಳಿಸಿ ಮರಳಲಿದ್ದಾರೆ ಎಂಬ ವಿಷಯ ಗೊತ್ತಾಯಿತು. ಸಾಯಂಕಾಲದವರೆಗೆ ಬರಬಹುದು. ಅವರ ಸಾವಿಗಿಂತ, ಅವರ ಜೀವಿತಾವಧಿಯ ಘಟನೆಗಳೇ ನನ್ನ ನೋವಿಗೆ ಕಾರಣವಾಗಿದೆ. ಹೀಗೆ ಬಂದರು, ಬದುಕಿದರು, ಮತ್ತೆ ಹೋದರು. ಈ ಘಟ್ಟಗಳ ನಡುವಿನಂತರದ ಅವಧಿಗಳಲ್ಲಿ ಅವರು ಬದುಕನ್ನು ಸಂಭ್ರಮದಿಂದ ಅನುಭವಿಸಲಾಗಲಿಲ್ಲ ಎಂಬ ಒಂದೇ ಅಂಶ ನನ್ನ ಕಣ್ಣೀರಿಗೂ ಕಾರಣವಾಯ್ತು. ನನ್ನ ಏಕಾಂತದ ಅಳುವಿಗೆ ಅವಳು ಏನೂ ಹೇಳಲಿಲ್ಲ. ಅಗಲಿಕೆಯ ದುಃಖವನ್ನು ಹೊರಹಾಕಿಕೊಳ್ಳಲೆಂದು ಮಾತನಾಡಿಸದೇ ಮೌನಕ್ಕೆ ಶರಣಾಗಿದ್ದಳು. ನನ್ನ ರೋಧನೆ ನಿರರ್ಗಳವಾಗಿ ನಡೆದಿತ್ತು.
    ಅದು ಏಕೋ ಅವರಿಬ್ಬರೂ ಒಂದೇ ಸೂರಿನಡಿ ಸಂಸಾರ ಸಾಗಿಸುವುದು ಕಷ್ಟವಾಗಿತ್ತಂತೆ. ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಎದುರುಬದಿರು ಕುಳಿತುಕೊಂಡು ಪರಿಹರಿಸಿಕೊಳ್ಳಬಹುದು. ಅವರ ಹೆಂಡತಿಗೆ ಅವರೊಂದಿಗೆ ಬದುಕಬೇಕು ಎಂದೆನಿಸಿರಲಿಲ್ಲ. ಈ ಹಂತದಲ್ಲಿ ಪರಿಹಾರವೆಂಬುದು ಮರೀಚಿಕೆಯಾಗಿ ಬಿಡುತ್ತದೆ. ಇಲ್ಲಿ ಆಗಿದ್ದೂ ಅದೇ. ಕಾನೂನಿನ ನೆರವು ಅವರಿಬ್ಬರನ್ನು ಬೇರ್ಪಡಿಸಿತ್ತು. ಅವರು ಇಲ್ಲಿ, ಅವರ ಅವರು ಅಲ್ಲಿ. ಇಲ್ಲಿಯೂ ಇಲ್ಲ, ಅಲ್ಲಿಯೂ ಸಲ್ಲ ಎಂಬ ಸ್ಥಿತಿ ರವಿಯದಾಗಿತ್ತು. ರವಿಯು ಚಿಕ್ಕಮಗುವಾಗಿದ್ದರಿಂದ ತಾಯಿಯ ಬಳಿ ಇದ್ದ. ಆದರೆ ತಾಯಿಯ ಸಾಮಿಪ್ಯವೇನೋ ಸಿಕ್ಕಿತ್ತು, ಆದರೆ ಅವಳ ಮಮತೆಯ ಲಾಲನೆ ಪೋಷಣೆ ಸಿಗಲೇ ಇಲ್ಲ. ತಾಯಿಯದೂ ಸರ್ಕಾರಿ ನೌಕರಿ. ಒಂಟಿತನದ ಬದುಕು ಏಕೆ? ಎಂಬ ಆಶಯದಿಂದಲೋ ಅಥವಾ ಪರಿಚಯದವರಾಗಿದ್ದ ಹಾಗೂ ಇಷ್ಟೆಲ್ಲಾ ಅವಘಡಗಳಿಗೆ ಪರೋಕ್ಷವಾಗಿ ಕಾರಣೀಭೂತರಾಗಿದ್ದ ಆ ವ್ಯಕ್ತಿಯೊಂದಿಗೆ ಬದುಕಿನ ರಥವನ್ನು ಮುನ್ನಡೆಸಬೇಕೆಂದು ನಿರ್ಧರಿಸಿದ್ದರಿಂದಲೋ, ಪರಿಚಿತ ವ್ಯಕ್ತಿಯೊಡನೆ ಮತ್ತೊಂದು ಹೊಸ ಬದುಕು ಕಳೆಯಲು ಮದುವೆಯೆಂಬೋ ಘಟನೆ ಘಟಿಸಿತ್ತು. ಎಲ್ಲವನ್ನು ಮರೆತು ರವಿಯ ತಾಯಿಯು ಹೊಸ ಬದುಕಿನ ಜಂಜಾಟದಲ್ಲಿ ಮುಳುಗಿದ್ದರೆ, ಅವರು ಎಲ್ಲವನ್ನು ಹೃದಯದಲ್ಲಿ ಹಾಗೆಯೇ ಇರಿಸಿಕೊಂಡು, ಪ್ರತಿದಿನವೂ ಇಂದಿಗೆ ಎಲ್ಲ ಮುಗಿಯಿತು ಎಂಬರ್ಥದಲ್ಲಿ ಜೀವಿಸಿದ್ದರು. ಎಷ್ಟೊಂದು ಬರ್ಬರ ಬದುಕು ಎಂಬುದು ಯಾರಿಗೆ ಅರ್ಥವಾಗುತ್ತದೆ ಹೇಳಿ?
    ಈ ಎಲ್ಲ ವಿಷಯಗಳು ಅರ್ಥವಾಗುವ ಹೊತ್ತಿಗೆ ನನ್ನ ಹೈಸ್ಕೂಲು ಬದುಕು ಮುಗಿದಿತ್ತು. ನನ್ನ ಬುದ್ಧಿಯೂ ಪಕ್ವಗೊಂಡಿತ್ತು. ಅವರ ನೋವು, ಯಾತನೆ, ಏಕಾಂಗಿತನ ಹೀಗೆ ಎಲ್ಲದರ ಸ್ಪಷ್ಟತೆ ಅರ್ಥವಾಗಿತ್ತು. ಮೊದಮೊದಲು ಅವರು, “ಇನ್ನೂ ಸ್ವಲ್ಪ ಹೊತ್ತು ಇರು,” “ನಿಂಗೇನು ಬೇಕು ಕೇಳು”, “ಸೈಕಲ್ ಬೇಕಾ”, “ಹೊಸಾ ಶರ್ಟ ಬೇಕಾ” ಎಂದು ಹೇಳುತ್ತಿದ್ದ ಮಾತುಗಳಿಗೆ ಯಾವ ರೀತಿ ಸ್ಪಂದಿಸಬೇಕು ಎಂಬ ಪ್ರಬುದ್ಧತೆ ಇರಲಿಲ್ಲ. ನಂತರ ಎಲ್ಲವೂ ಅರ್ಥವಾಗುತ್ತಿತ್ತು. ಕಳೆದುಕೊಂಡ ಪ್ರೀತಿಯನ್ನು, ಚಲಾಯಿಸಲಾಗದ ತಂದೆ ಕರ್ತವ್ಯವನ್ನು ನನ್ನ ಮುಖಾಂತರ ಒಂದಿಷ್ಟು ಅನುಭವಿಸಲು ಅವರು ಹೆಣಗಿದರೇನೋ ಎಂಬಂಶ ತಡವಾಗಿ ಮನದಾಳಕ್ಕೆ ಮುಟ್ಟಿತ್ತು. ಸಾಧ್ಯವಾದ ಮಟ್ಟಿಗೆ ಹಂತ ಹಂತವಾಗಿ ಸ್ಪಂದಿಸಲಾರಂಭಿಸಿದ್ದೆ. ಅದಾಗಲೇ ಭಾವನಾತ್ಮಕ ಸಂಬಂಧ ಗಟ್ಟಿಗೊಳ್ಳಲಾರಂಭಿಸಿತ್ತು. ಒಣಗಿದ ಮರವೂ ಮತ್ತೊಮ್ಮೆ ಚಿಗುರಿದಂತೆ.
    “ಸ್ನಾನವನ್ನಾದರೂ ಮಾಡಿ, ಮೈ ಹಗುರಾಗುತ್ತದೆ” ಎಂಬ ಅವಳ ಮಾತು ಕೇಳಿಸಿತು. “ಸುದ್ದಿ ಕೇಳಿದ ಮೇಲೆ ಹೇಗೆ ಸ್ನಾನ ಮಾಡಲಿ” ಉತ್ತರಕ್ಕೆ ಅವಳು ತಬ್ಬಿಬ್ಬಾಗಲಿಲ್ಲ. ಎಲ್ಲವೂ ಅವಳಿಗೆ ತಿಳಿದ ಹಾಗೂ ಜೀರ್ಣೀಸಿಕೊಂಡ ವಿಷಯವೇ. “ಹಾಗಲ್ಲ....... ಸ್ನಾನ ಮಾಡಿದರೆ, ಒಂದಿಷ್ಟು ಹೊಟ್ಟೆಗೆ......” ದುಃಖಿಸುತ್ತಲೇ ಹೇಳಿದಳು. ನನ್ನ ಎಲ್ಲ ನೋವು, ನಲಿವುಗಳಿಗೆ ಜೀವನದ ಪ್ರತಿ ಘಟ್ಟದಲ್ಲಿ ಜೊತೆಗಿದ್ದು, ದುಃಖಿಸಿದ್ದಾಳೆ, ನಲಿದಿದ್ದಾಳೆ, “ಬದುಕಲು ಸಂಗಾತಿ ಕೊಡು, ಯಾತನೆ ಅನುಭವಿಸಲಿಕ್ಕೆ ಬೇಡ” ಎಂದು ದೇವರಿಗೆ ಮೊರೆಯಿಟ್ಟೇ ಮದುವೆಯಾಗಬೇಕು. “ಸ್ನಾನ, ತಿಂಡಿ ಏನೂ ಬೇಡ. ಹುಡುಗರು ಬಂದ ನಂತರ ಲಕ್ಷವಿರಲಿ” ಎಂದಷ್ಟೇ ಹೇಳಿ ಕಣ್ಣೊರಿಸಿಕೊಂಡೆ. ಬೈಕ ಏರಿ ಹೊರಟ ನನಗೆ ಪಯಣವು ಭಾರ ಎನಿಸಲಾರಂಭಿಸಿತು. ಕಾಲೇಜ ಹತ್ತಿರ ಬೈಕ ನಿಲ್ಲಿಸಿ, ಬೆಂಚ ಮೇಲೆ ಮಲಗಿದೆ.
    ಅವರ ಮೇಲೆ ನನಗೆ ಅನುಕಂಪದ ಮುಖೇನ ಮಮತೆ ಬಂತೋ, ಅಥವಾ ಒಬ್ಬ ಮಾನವ ಇನ್ನೊಬ್ಬನ ನೋವಿನಲ್ಲಿ ಎಷ್ಟರಮಟ್ಟಿಗೆ ಭಾಗಿ ಆಗಬಹುದು ಎಂಬ ನೀತಿಯಿಂದಲೋ ಅಥವಾ......... ಕೆಲವು ತಿರುವುಗಳು ನಮಗೆ ಗೊತ್ತಿರದ ರೀತಿಯಲ್ಲಿ ಎದುರಿಗೆ ಗೋಚರಿಸುತ್ತವೆ. ಕೆಲವು ಸಲ ಗೊತ್ತಾಗಿ ತಿರುಗಿ ಬಿಡುತ್ತವೆ. ಇನ್ನು ಕೆಲವು ಸಲ ನಮಗೇ ಗೊತ್ತಾಗದೇ ಆ ತಿರುವಿನಲ್ಲಿ ನಡೆದು ಬಿಡುತ್ತವೆ. ನನ್ನ ಹದಿಹರೆಯದ ಬದುಕಿನಲ್ಲಿ ಕವಲು ಒಡೆದಿದ್ದನ್ನು ಮೊದಲು ಗಮನಿಸಿದ್ದು, ನನ್ನ ತಾಯಿ, ಮೇಲಿಂದ ಮೇಲೆ ಅಲ್ಲಿಗೆ ಹೋಗುವುದು, ಅವರೊಟ್ಟಿಗೆ ಹೆಜ್ಜೆ ಸವೆಸುವುದು, ಬಾಂಧವ್ಯದೊಂದಿಗೆ ಒಲವು ತೋರಿಸುವುದು, ಈ ಎಲ್ಲ ಪ್ರಾರಂಭಿಕ ಬದಲಾವಣೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದ ತಾಯಿಯವರು, ತಂದೆಯ ಬಳಿ, “ಅವನಿಗೆ ಈಗಲೇ ತಿಳಿಹೇಳಿ, ಯಾವುದು ಸರಿ, ತಪ್ಪು, ಎಂದು ತಿಳಿಯದ ವಯಸ್ಸು, ಮುಂದೆ ಇದೇ ಅತಿಯಾಗಿ ನಮ್ಮನ್ನೇ ಮರೆತಾನು, ಏನು ಹೇಳಲು ಬರುವುದಿಲ್ಲ” ಎಂದು ಹೇಳಿದ್ದಿರಬಹುದು, ಈ ಎಲ್ಲ ಅಂಶಗಳನ್ನು ಒಟ್ಟುಗೂಡಿಸಿ ತಂದೆಯವರೂ ಅಷ್ಟೇ ಗಾಂಭೀರ್ಯದಿಂದ, ಯಾವುದೇ ರೀತಿಯಲ್ಲಿ ಮನಸ್ಸು ಗಲಿಬಿಲಿಗೊಳ್ಳದಂತೆ, ಹಿತಚಿಂತಕನಂತೆ ಎಲ್ಲವನ್ನು ಎಳೆಎಳೆಯಾಗಿ ವಿವರಿಸಿದ್ದರು. ನಾನು ಪ್ರಬುದ್ಧ ಎಂಬ ಅಂಶ ಅವರಿಗೆ ಅರಿವಿತ್ತು. “ನೀವು ಹೆತ್ತವರು, ಈ ದೇಹ ನಿಮ್ಮಿಂದಲೇ. ನಿಮ್ಮಯ ಸೇವೆಗೆಂದೇ ಇದೆ. ಅಲ್ಲಿ ಅವರು ಅನುಭವಿಸುತ್ತಿರುವ ಯಾತನೆಯನ್ನು ಯಾರು ಕಡಿಮೆ ಮಾಡಲಾರರು. ಅವರು ನನ್ನ ಸಾಮಿಪ್ಯದಲ್ಲಿ ಯಾವ ಅನುರಾಗವನ್ನು ಮರಳಿ ಪಡೆಯುತ್ತಿದ್ದಾರೋ ಗೊತ್ತಿಲ್ಲ, ದುಃಖವನ್ನು ಶಮನ ಮಾಡಲಾಗದಿದ್ದರೂ, ಕಣ್ಣೀರ ಹನಿಯನ್ನಾದರೂ ಒರೆಯಿಸಬಹುದು. ನಿಮ್ಮನ್ನು ಒಟ್ಟಾರೆ ಮರೆತುಬಿಟ್ಟು ಅವರಲ್ಲಿಗೇ ಹೋಗಿರುವುದು ಊಹಾತೀತ ವಿಚಾರ. ಆದರೆ ಅವರೊಂದಿಗೆ ಒಂದಿಷ್ಟು ಹೊತ್ತು ವ್ಯಯಿಸುವುದರಿಂದ, ಅವರಿಗೆ ಕಿಂಚಿತ್ತಾದರೂ ನೆಮ್ಮದಿ ತರುತ್ತದೆ ಎಂದರೆ ಅದೂ ಕೂಡ ಒಂದು ಸೇವೆಯ ಭಾಗವಲ್ಲವೇ?” ಭಾವಾವೇಶದಲ್ಲಿ ಚಿಂತಕನಂತೆ ನುಡಿದಿದ್ದೆ. ತಂದೆಯವರಿಗೆ ಎಲ್ಲವೂ ಸ್ಪಷ್ಟವಾಗಿತ್ತು, ನನಗೂ ನಿರಾಳವಾಗಿತ್ತು. ಕಾಲೇಜಗೆ ಬರುವ ಹುಡುಗ-ಹುಡುಗಿಯರ ಕಲರವ ನನ್ನ ನೆನಪುಗಳಿಗೆ ಬ್ರೇಕ್ ಹಾಕಿದವು. ರವಿಯ ಮನೆ ಕಡೆಗೆ ಬೈಕ ಓಡಲಾರಂಭಿಸಿತು.
    ರವಿಗೂ ಮದುವೆಯಾಗಿದೆ, ಮಕ್ಕಳಿದ್ದಾರೆ, ತಂಗಿಯೂ ಇದ್ದಾಳೆ. ನಿಜವಾಗಿಯೂ ಈಗ ಅವನು ಅನಾಥನಾಗಿದ್ದಾನೆ. ತಂಗಿಯ ತಂದೆ ಆಕ್ಸಿಡೆಂಟನಲ್ಲಿ ತೀರಿದರು, ತಂಗಿಯ ತಾಯಿ (ರವಿಯ ತಾಯಿ ಎಂದು ಹೇಳಬಹುದು) ಹೃದಯ ಸ್ಥಂಬನದಿಂದ ಮೃತರಾದರು. ಈಗ ನಿಜವಾದ ತಂದೆಯೂ ಇಲ್ಲವಾಗಿದ್ದಾರೆ. ರವಿಯೂ ಬಹಳ ಇಕ್ಕಟ್ಟಿನ ಬದುಕೇ ಸವೆಸಿದ. ಬಾಲ್ಯವೆಂಬುದು ಯಾವಾಗಲೂ ನವನವೀನವೇ. ಕಳೆದು ಹೋಗುವ ಬಾಲ್ಯ ಹಿಂತಿರುಗಿ ಬರುತ್ತದೆಯೇ? ಬಾಲ್ಯದಿಂದ ಹಿಡಿದು ಪ್ರೈಮರಿ ಶಿಕ್ಷಣದವರೆಗೆ ತಾಯಿಯ ವಾತ್ಸಲ್ಯರಹಿತ ಆರೈಕೆಯಲ್ಲಿ ಬೆಳೆದ. ತಂಗಿ ಅನ್ನಿಸಿಕೊಂಡವಳು ಬೆನ್ನಿಗೆ ಬಂದ ಮೇಲೆ, ಮತ್ತೆ ಎಲ್ಲವೂ ಬಿಗಡಾಯಿಸಿತ್ತು. ಪ್ರೌಢ ಶಿಕ್ಷಣಕ್ಕೆ ಬಂದಾಗ ಇವನ ಬುದ್ಧಿಯೂ ಪ್ರೌಢವಾಗಿತ್ತು. ಜನಕನ ಮನೆಗೆ ಹೋಗಿ ಬರುತ್ತಿದ್ದ. ಆ ವಿಷಯಕ್ಕೆ ತಾಯಿಗೂ, ಇವನಿಗೂ ರಾದ್ಧಂತವಾಗುತ್ತಿತ್ತು. ನನಗೇ ಬೇಡವಾದ ವ್ಯಕ್ತಿಯ ಬಳಿ ಮಗನೂ ಹೋಗಿ ಬರುವುದು ಅವರಿಗೆ ಇಷ್ಟವಿರಲಿಲ್ಲವೇನೋ? ಇದು ಇವನಿಗೆ ಕಷ್ಟವಾಗಿತ್ತು. ಬಳ್ಳಿಯೊಂದು ಯಾವುದೇ ಮರಕ್ಕೂ ಸುತ್ತಿಕೊಳ್ಳದೇ ಆಸರೆಯನ್ನೇ ಕಳೆದುಕೊಳ್ಳುವ ಸಂದರ್ಭದಲ್ಲಿ ದೂರದ ಸಂಬಂಧಿ ಅಜ್ಜಿಯ ಆಸರೆ ಪಡೆದು ಶಿಕ್ಷಣ ಪೂರೈಸಿ ಶಾಲಾ ಶಿಕ್ಷಕನಾಗಿದ್ದ, ಮದುವೆಯನ್ನು ಮಾಡಿಕೊಂಡ, ಮಕ್ಕಳನ್ನು ಪಡೆದ, ಮುಂದೆ ಅನಾಥಳಾಗಿದ್ದ ತಂಗಿಯ ಆರೈಕೆ ಭಾರವನ್ನು ನಿಷ್ಠೆಯಿಂದಲೇ ಹೊತ್ತ.
    “ಬಾ.....ಕೂಡು” ಎಂದಷ್ಟೇ ಹೇಳಿದ ರವಿ. ಬಾಡಿ ಹೋಗಿದ್ದ ಮುಖ, ಕೆಂಪಗಾಗಿದ್ದ ಕಣ್ಣು, ಬಳಲಿದ್ದ ದೇಹ. “ನನಗೇ ಬಾಡಿ ಕೊಡಿ, ಅಂತ್ಯ ಸಂಸ್ಕಾರ ಮಾಡುತ್ತೇವೆ ಅಂತ ಕೇಳಿದೆ, ಆದರೆ ಆಶ್ರಮದವರು ಬೇಡ ಎಂದರು” ಅಂತ್ಹೇಳಿದ. ಬಂಧುಗಳ ಪ್ರೀತಿ, ಆರೈಕೆ, ಉಪಚಾರದಿಂದ ವಂಚಿತರಾದವರು ವೃದ್ಧಾಶ್ರಮಕ್ಕೆ ಬಂದು ಆಸರೆ ಪಡೆದಾಗ, ಅವರಿಗಾರೂ ಸಂಬಂಧಿಗಳು ಇರುವುದಿಲ್ಲ, ಯಾವ ಸಂಬಂಧಗಳು ಇರುವುದಿಲ್ಲ, ಎಲ್ಲವೂ ವೃದ್ಧಾಶ್ರಮವೇ. ಹೀಗಾಗಿ ಅಂಥವರು ತೀರಿ ಹೋದಾಗ ಅವರ ಅಂತ್ಯಸಂಸ್ಕಾರವನ್ನು ಅವರೇ ಮಾಡಿ ಮುಗಿಸುತ್ತಾರೆ. ಬಹುಶಃ ಇದೇ ವಿಚಾರದಿಂದ ನಿರಾಕರಿಸಿರಬಹುದೆಂದು ಊಹಿಸಿದೆ ಆಶ್ರಮಕ್ಕೆ ಫೋನ ಮಾಡಿ ಕೇಳಿದೆ, ಇನ್ನೆರಡು ಗಂಟೆಗಳಲ್ಲಿ ಬಾಡಿ ಬರಬಹುದು ಎಂಬ ಸುದ್ದಿ ತಿಳಿಯಿತು. ರವಿಯನ್ನು ಕೂಡಿಸಿಕೊಂಡು ಬೈಕನ್ನು ವೃದ್ಧಾಶ್ರಮದ ಕಡೆಗೆ ಓಡಿಸಿದೆ.
    ಆಶ್ರಮದ ಗಾರ್ಡನ್‍ನಲ್ಲಿನ ಮಾವಿನ ಗಿಡದ ಕೆಳಗೆ ಕುಳಿತೆವು. ಇಬ್ಬರೂ ಮೌನಕ್ಕೆ ಶರಣಾಗಿದ್ದವು. ಅವರು ನನಗೆ ಕೊಡಿಸದ ಸೈಕಲ್, ಹೊಸ ಬಟ್ಟೆ.......... ಎಲ್ಲಕ್ಕಿಂತ ಹೆಚ್ಚಾಗಿ ವಿವರಿಸಲು ಬಾರದ ಆ ಆತ್ಮೀಯತೆ, ನಿಷ್ಕಲ್ಮಶ ಪ್ರೀತಿ, ಮಮತೆ, ನಿರ್ಮಲ ಒಲವು..... ಎಲ್ಲವೂ ಕಣ್ಮುಂದೆ ಸುಳಿದಾಡಿತು. ನನಗೆ ನನ್ನ ತಂದೆ-ತಾಯಿ ಎಲ್ಲವನ್ನು ನೀಡುತ್ತಿದ್ದರು, ಈ ವಿಷಯದಲ್ಲಿ ಪರಮಸುಖಿಯಾಗಿದ್ದೆ ನಾನು. ಅವರೂ ಕರೆದಾಗ ಒಲ್ಲೆ ಅನ್ನದೇ ಅವರ ಜೊತೆ ಇರುತ್ತದೆ, ಅವರೊಂದಿಗೂ ಬದುಕಿದೆ. ಅದು ಅವರಿಗೆ ಹಿತಕೊಟ್ಟಿದೆ ಎಂದೇ ಭಾವಿಸಿದ್ದೇನೆ. ರವಿಯೂ ಒಂದು ಹಂತದವರೆಗೆ ತಾಯಿಯ ಬಳಿ ಬೆಳೆದು, ನಂತರ ಅಜ್ಜಿಯ ಅಸರೆಯಲ್ಲಿದ್ದುಕೊಂಡು ಶಿಕ್ಷಣ ಪೂರೈಸಿಕೊಂಡ. ತಿಳುವಳಿಕೆ ಬಂದು ತಂದೆಯ ಹತ್ತಿರ ಹೋಗಬೇಕು ಎಂದಾಗ ತಾಯಿಯ ಕೋಪದಲ್ಲಿ ಮೆತ್ತಗಾಗಿದ್ದ. ಅಜ್ಜಿಯ ಆಸರೆಯಲ್ಲಿ ಇದ್ದಾಗಲಾದರೂ ತಂದೆಯ ಬಳಿಗೆ ಹೋಗಬಹುದಿತ್ತು, ಅದು ಆಗಲಿಲ್ಲ. ಕೆಲವು ಘಟನೆಗಳು ಪ್ರಶ್ನಾರ್ಥಕವಾಗಿಯೇ ಉಳಿದು ಬಿಡುತ್ತವೆ, ಕಾಲನ ಘಟ್ಟದಲ್ಲಿ ಲೀನವಾಗಿ ಬಿಡುತ್ತವೆ.
    ಈ ಎಲ್ಲ ಘಟನೆಗಳ ಮಧ್ಯದ ಅವಧಿಯಲ್ಲಿ ಅವರು ನನ್ನಲ್ಲಿ ರವಿಯನ್ನು ಕಂಡರೋ, ಅಥವಾ ಮಗನಿದ್ದೂ ಇಲ್ಲದ ಅನಾಥ ಪ್ರಜ್ಞೆಯಲ್ಲಿ, ಒಳಗೆ ಹುದುಗಿಕೊಂಡು ಮಾನವ ಸಹಜ ಮೋಹವನ್ನು ನನ್ನೆಡೆಗೆ ಹರಿಸಿದರೋ ಗೊತಿಲ್ಲ. ನನ್ನಲ್ಲಿ ಮಗನಿಗಿಂತ ಹೆಚ್ಚು ...... ಇನ್ನು ಹೆಚ್ಚು, ಅಷ್ಟು ಹೆಚ್ಚು ಅಭಿಮಾನ ವಿರಿಸಿಕೊಂಡಿದ್ದರು. ಅವರು ನನಗೆ ನಿಜವಾಗಿ ತಂದೆಯಾಗಿರದಿದ್ದರೂ, ಆ ಸಂಬಂಧಕಷ್ಟೇ ಅರ್ಥ ಮಿತಿಗೊಳಿಸುವ ಬದಲು ಅದನ್ನು ಮೀರಿನಿಂತ ಕೆಲವು ಸಂಬಂಧಗಳು ಭಾವನಾತ್ಮಕವಾಗಿ ಗಟ್ಟಿಬೇರಿನಂತೆ ನೆಲೆ ನಿಂತವುಗಳಾಗಿರುತ್ತವೆ. ಅವರನ್ನು ಅತ್ಯುತ್ತಮ ಸ್ನೇಹಿತ ಎನ್ನಬಹುದೋ, ಮಮತೆ, ಅನುರಾಗದ ಧಾರೆ ಸುರಿಸಿದ ಆಪ್ತ ಬಂಧು ಎನ್ನಬಹುದೋ, ಇದೆಲ್ಲವ ಮೀರಿ ಮತ್ತಿನ್ನೇನೋ ......... ಇದಕ್ಕೆ ಸ್ಪಷ್ಟ ಭಾಷ್ಯವಿಲ್ಲ. ಅವರು ನನ್ನನ್ನೂ ಮಗನೆಂದೇ ನಂಬಿದ್ದರು. ನನ್ನ ಮದುವೆಯಲ್ಲಿ ಅದೆಷ್ಟು ಸಂಭ್ರಮದಿಂದ ವಿಜ್ರಂಭಿಸಿದ್ದರು. ಕಾಲಗಳು ಉರುಳಿ ಹೋಗುವ ಘಟ್ಟಗಳಲ್ಲಿ ನಾನು ನನ್ನ ಹೆತ್ತವರನ್ನು ಹಂತಹಂತವಾಗಿ ಕಳೆದುಕೊಂಡೆ. ಹೆತ್ತವರ ಸಾವಿನ ವಿಷಯ ನನಗೆ ಈಗಲೂ ಜೀರ್ಣಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೆತ್ತವರನ್ನು ದೇವರು ಎನ್ನುತ್ತೇವೆ. ಆದರೆ ದೇವರಿಗೆ ಹುಟ್ಟಿಲ್ಲ, ಸಾವಿಲ್ಲ. ಇವರು ಹೇಗೆ ನಮ್ಮನ್ನು ಇಲ್ಲಿ ಬಿಟ್ಟು ಹಾಗೆ ಹೋದರು? ದೇವರಂಥವರ ಸಾವು ಎಂದು ಸಮೀಕರಿಸಬಹುದು.
    ಓಡಾಡಲಾಗದ ಕೃಶ ಶರೀರದ ಕೆಲ ವೃದ್ಧರು ಯಾತ್ರೆಗೆ ಹೋಗಿರಲಿಲ್ಲ. ಅವರೆಲ್ಲರ ಮುಖವು ಬಾಡಿತ್ತು. ತಮ್ಮ ಗುಂಪಿನಲ್ಲಿ ಒಬ್ಬನ ಸಂಖ್ಯೆ ಕಡಿಮೆಯಾಯಿತಲ್ಲಾ ಎಂಬ ಸಂಕಟ, ನೋವು. ತನ್ನವರು ಯಾರು ಇಲ್ಲ, ಇದ್ದರೂ ಉಪಯೋಗವಿಲ್ಲ ಎಂಬರ್ಥಕ್ಕೆ ಬಂದಾಗ ಆಸರೆಯಾಗುವುದು ಈ ವೃದ್ಧಶ್ರಮ. ಗಾಭರಿಯಲ್ಲಿದ್ದ ವೃದ್ಧ, ವೃದ್ಧೆಯರೆಲ್ಲಾ ನಮ್ಮನ್ನೇ ದಿಟ್ಟಿಸುತ್ತಿದ್ದರು. ನಾವು ಯಾವ ವ್ಯಕ್ತಿಯನ್ನು ಹುಡುಕಿಕೊಂಡು ಬಂದಿದ್ದೇವೆ ಎಂದು ಅವರಿಗೆ ಅರ್ಥವಾಗಿರಬೇಕು. ಆ ವ್ಯಕ್ತಿಯ ಸಾವಿನ ನಂತರ ಕಾಣಿಸಿಕೊಂಡ ಈ ಮುಖಗಳನ್ನು ಕಂಡ ಅವರಿಗೆ ಸಿಟ್ಟು, ತಾತ್ಸಾರ ಬಂದಿರಬೇಕು, ಅಲ್ಲದೇ ನಮ್ಮೆಲ್ಲರದೂ ಒಂದು ದಿನ ಹೀಗೆಯೇ ಎಂಬ ಸ್ಪಷ್ಟ ನಿರ್ಧಾರಕ್ಕೆ ಬಂದಂತಿತ್ತು.
    ಅವರಿಗೂ ವಯಸ್ಸಾಗಿತ್ತು, ದೇಹಕ್ಕಾದ ವಯಸ್ಸಿಗಿಂತ ಮನಸ್ಸಿಗಾಗುವ ವಯಸ್ಸು ಎಷ್ಟು ಘೋರ ಎಂಬುದು ಅನುಭವಿಸಿದವರಿಗೇ ಗೊತ್ತು. ಸಾವಿನ ಸುಮಾರು ತಿಂಗಳುಗಳ ಹಿಂದಿನ ತನಕವೂ ಹೋಗಿ ಬಂದಿದ್ದೆ. ಸೇವೆ ಎಂಬುದನ್ನು ಕರ್ತವ್ಯಕ್ಕೆ ಬದಲಾಯಿಸಿಕೊಂಡಿದ್ದೆ. ನಿನ್ನದೂ ಒಂದು ಸಂಸಾರ, ಜವಾಬ್ದಾರಿಗಳು ಹೆಚ್ಚು, ಆ ಕಡೆಗೆ ನೀನೀಗ ಹೆಚ್ಚು ಲಕ್ಷ ಕೊಡಬೇಕು. ನನ್ನದಿನ್ನೇನಿದೆ, ಒಂದು ಕಾಲು ಇಲ್ಲಿ, ಇನ್ನೊಂದು ಅಲ್ಲಿ ಎಂದು ಪದೇ ಪದೇ ಅದನ್ನೇ ಹೇಳುತ್ತಿದ್ದರು, ನನ್ನ ತಂದೆಗೆ ಎಂದು ಗದರಿದ್ದಿಲ್ಲ. ಅವರನ್ನು ಗದರಿದ್ದೆ, “ನೀವು ಹೀಗೆ ಮಾತನಾಡಬೇಡಿ. ನನ್ನದೊಂದು ಸಂಸಾರ ಎಂದು ನೀವೇ ಹೇಳಿರುವಿರಿ. ನೀವೂ ಅದರ ಭಾಗವೇ. ಹೀಗೆಲ್ಲಾ ವಿಚಾರ ಮಾಡಿ ನಿಮ್ಮ ಮನಸ್ಸು ಗಲಿಬಲಿ ಮಾಡಿಕೊಳ್ಳಬೇಡಿ, ನನ್ನನ್ನು ವಿಚಲಿತಗೊಳಿಸಿ ವಿಮುಖನನ್ನಾಗಿಸಬೇಡಿ” ಎಂದು.
    ಒಂದು ದಿನ ಅವರ ಫೋನ ಬಂದಿತ್ತು, “ಕೇಶವಾ, ನಾನು ನನ್ನ ಆಸ್ತಿಯನ್ನೆಲ್ಲಾ ಮಾರಿಬಿಟ್ಟೆ” ಎಂದು ಹೇಳಿದ್ದರು. ನನಗೆ ಅವರ ಮಾತಿನಿಂದ ಯಾವುದೇ ಗೊಂದಲ, ದಿಗ್ಭ್ರಮೆ ಉಂಟಾಗಿರಲಿಲ್ಲ. ಅವರ ಸ್ವಯಾರ್ಜಿತ ಆಸ್ತಿ, ಏನು ಬೇಕಾದರೂ ಮಾಡಬಹುದು. “ಬಂದ ಹಣವನ್ನೆಲ್ಲಾ ವೃದ್ಧಾಶ್ರಮಕ್ಕೆ ದೇಣಿಗೆ ಕೊಟ್ಟಿರುವೆ” ಎಂದಾಗಲೂ ನಾನು, “ಒಳ್ಳೆಯದನ್ನೇ ಮಾಡಿದಿರಿ” ಎಂದು ಹೇಳಿದ್ದೆ. ಫೋನಿನಲ್ಲಿ ಸಂಭಾಷಿಸುವಾಗ ಸ್ಥಿತಪ್ರಜ್ಞನಂತೆ  ಇದ್ದ ನನಗೆ ಫೋನಿಟ್ಟ ಬಳಿಕ ಚಡಪಡಿಕೆ ಶುರುವಾಗಿತ್ತು. ಎಲ್ಲ ಆಸ್ತಿ ಮಾರಿದ್ದಾರೆ ಎಂದರೆ ಮನೆಯನ್ನು ಮಾರಿರಬೇಕಲ್ಲಾ, ಈ ಇಳಿವಯಸ್ಸಿನಲ್ಲಿ ಅವರು ಎಲ್ಲಿರಬೇಕು? ಒಂದು ಕ್ಷಣ ಮೈ ಜುಂ ಎಂದಿತ್ತು, ದೇಶಾಂತರ ಹೊರಟರೇ!? ಮತ್ತೆ ಅವರಿಗೆ ಫೋನ ಮಾಡಿ, “ನಮ್ಮ ಕಡೆಗೆ ಬಂದು ಬಿಡಿ, ನನಗೂ ಸಮಾಧಾನವಾಗುತ್ತದೆ” ಎಂದಿದ್ದೆ. “ಕೇಶವಾ, ನಿನ್ನ ಸೂಕ್ಷ್ಮ ಪ್ರಜ್ಞೆ ನಾ ಬಲ್ಲೆ. ನಾನು ಅಲ್ಲಿಗೆ ಬರಲಾರೆ ಎಂದು ನೇರವಾಗಿ ಹೇಳಿ ನಿನಗೆ ನೋವು ಕೊಡಲಾರೆ. ಆ ದಿನ ಬರಲಿ ನಾನೇ ಬರುತ್ತೇನೆ” ಎಂದರು. “ನೀವೀಗ ಇದ್ದದ್ದು?” ನನ್ನ ಕುತೂಹಲದÀ ಪ್ರಶ್ನೆ. ನನ್ನ ಅಂತರಾಳ ಬಲ್ಲ ಅವರು ಹೇಳಿದರು, “ಗಾಭರಿ ಬೀಳಬೇಡ ನಾನೆಲ್ಲೂ ದೇಶಾಂತರ ಹೋಗಲ್ಲ. ಇಲ್ಲೇ ವೃದ್ಧಾಶ್ರಮದಲ್ಲಿದ್ದೇನೆ. ಸಮಯ ಸಿಕ್ಕಾಗ ವೃದ್ಧಾಶ್ರಮಕ್ಕೆ ಬಂದು ಹೋಗು, ನಾನು ಬಂದು ಭೇಟಿಯಾಗಲು ಪ್ರಯತ್ನಿಸುತ್ತೇನೆ”. ವೃದ್ಧಾಶ್ರಮ ಸೇರುವ ನಿರ್ಧಾರ ಏಕೆ ಮಾಡಿದಿರಿ? ಎಂದು ಕೇಳಬೇಕೆನ್ನುವ ಮಾತು ಗಂಟಲಿನಲ್ಲಿಯೇ ಉಳಿದುಕೊಂಡಿತು. ಅವರು ಈ ರೀತಿ ನಿರ್ಧಾರ ತೆಗೆದುಕೊಳ್ಳುವ ಪೂರ್ವದಲ್ಲಿ ತಮ್ಮ ಅಂತರಾತ್ಮದೊಂದಿಗೆ ಸಂಭಾಷಿಸಿರಲೇಬೇಕು. ಇದುವೇ ಸರಿ ನಿರ್ಧಾರ ಎಂದು ನಿರ್ಧರಿಸಿರಲೂಬಹುದು. ಈ ಸಂಧ್ಯಾಸಮಯದಲ್ಲಿ ಅವರನ್ನು ಪ್ರಶ್ನಿಸಿ ಮತ್ತೆ ಗೊಂದಲಕ್ಕೆ ದೂಡುವುದು ಬೇಡ ಎಂದು ನಿರ್ಧರಿಸಿದ್ದೆ. ನಂತರ ಅನೇಕ ಬಾರಿ ಆಶ್ರಮಕ್ಕೂ ಹೋಗಿ ಬಂದಿದ್ದೆ. ಅವರಲ್ಲಿಯೂ ಮಹತ್ತರ ಬದಲಾವಣೆಗಳಾಗಿದ್ದವು. ಎಲ್ಲವನ್ನು ತೊರೆದ ವೈರಾಗ್ಯ ಮನೋಭಾವ ಅವರಲ್ಲಿ ಮಿಳಿತವಾಗಿತ್ತು. ಆದರೆ ಅವರ ಸಾವು ಇಷ್ಟು ಬೇಗ ಘಟಿಸುತ್ತದೆ ಎಂದು ಊಹಿಸಿರಲಿಲ್ಲ. ಸಾವೇ ಹೀಗೆ.
    ಟೆಂಪೋದ ಹಿಂದಿನ ಬಾಗಿಲನ್ನು ತೆರೆದು ನಾವಿಬ್ಬರೂ, ಬಿಳಿ ಬಟ್ಟೆಯಲ್ಲಿ ಸುತ್ತಿಕಟ್ಟಿದ ಅವರ ಶವವನ್ನು ಹೊರಗೆ ತೆಗೆದು ವೃದ್ಧಾಶ್ರಮದ ಹಾಲ್‍ನಲ್ಲಿ ಮಲಗಿಸಿದೆವು. ಅಲ್ಲಿ ಅದಾಗಲೇ ಅವರು ಸಹಚರರು ಭಜನೆ ಶುರು ಮಾಡಿದ್ದರು. ಅವರ ಪಕ್ಕದಲ್ಲಿಯೇ ಕುಳಿತು ರವಿ ಕಣ್ಣೀರಿಡುತ್ತಿದ್ದ. ನಮ್ಮವರಿಗೆ ನಾವು ಜೀವಿತಾವಧಿಯಲ್ಲಿ ಯಾವ ಸೇವೆಯನ್ನು ಮಾಡದಿದ್ದರೂ, ಈ ಕೊನೆಯ ಸೇವೆ ಅರ್ಪಿಸಬೇಕಾಗುತ್ತದೆ. ವೃದ್ಧಾಶ್ರಮದ ಸಿಬ್ಬಂದಿಗಳು ಅಂತ್ಯಸಂಸ್ಕಾರದ ತಯಾರಿಯಲ್ಲಿದ್ದರು. ನಾನು ಹೋಗಿ ಆಶ್ರಮದ ಮುಖ್ಯಸ್ಥರನ್ನು ಭೇಟಿಯಾಗಿ, “ಶವವನ್ನು ಅಂತ್ಯ ಸಂಸ್ಕಾರಕ್ಕೆಂದು ಅವರ ಮಗನಿಗೆ ಹಸ್ತಾಂತರಿಸದಿರುವ ಬಗ್ಗೆ ನಮಗೆ ಬೇಸರವಿಲ್ಲ. ಕೊನೇ ಪಕ್ಷ ಅಗ್ನಿ ಸ್ಪರ್ಶಕ್ಕಾದರೂ ಅವನಿಗೆ ಅವಕಾಶ ನೀಡಿ” ಎಂದು ವಿನಂತಿಸಿದೆ. ಇಂಥ ಅನೇಕ ಸಾವುಗಳನ್ನ ಕಂಡ, ಅಂತ್ಯಸಂಸ್ಕಾರ ನೆರವೇರಿಸಿದ ಅವರಿಗೆ ನನ್ನ ಬೇಡಿಕೆ ಹೊಸದೆನಿಸಲಿಲ್ಲ. “ನಮ್ಮ ಆಶ್ರಮದ ನಿಯಮಗಳ ಪ್ರಕಾರ ಅಂತ್ಯಸಂಸ್ಕಾರವನ್ನು ನಾವೇ ನಿರ್ವಹಿಸುತ್ತೆವೆ. ತದನಂತರ ರೀತಿಗಳ ಪ್ರಕಾರ ನಿಮ್ಮ ಮನೆಯಲ್ಲಿ ಕ್ರಿಯಾಕರ್ಮಗಳನ್ನು ಕೈಗೊಳ್ಳಿ” ಎಂದಷ್ಟೆ ಉತ್ತರಿಸಿದರು. ನನಗೆ ಸಮಾಧಾನವಾಗಲಿಲ್ಲ. ಅವರನ್ನೇ ಹಿಂಬಾಲಿಸಿ ಅದೇ ಕೋರಿಕೆ ಮತ್ತೆ ಮತ್ತೆ ಮಂಡಿಸಿದೆ. “ಬನ್ನಿ ಆಫೀಸ ರೂಮಿಗೆ” ಎಂದು ಮುನ್ನಡೆದರು. ನನಗೊಂದಿಷ್ಟು ನಿರಾಳವಾಗಿತ್ತು. ರವಿಗೆ ತನ್ನ ಕೊನೆಯ ಸೇವೆ ಕೈಗೊಳ್ಳಲು ಅವಕಾಶ ಸಿಕ್ಕಿತಲ್ಲಾ ಎಂಬ ನಿರುಮ್ಮಳತೆ. ಫೈಲನಲ್ಲಿನ ಒಂದು ಪತ್ರ ಓದಲು ತಿಳಿಸಿದರು. ವೃದ್ಧಾಶ್ರಮಕ್ಕೆ ಸುಮಾರು ಮೂರು ತಿಂಗಳುಗಳ ಹಿಂದೆ ಅವರು ಬರೆದ ಪತ್ರ. ಸಾವು ಯಾವಾಗ ಬರುತ್ತದೆ ಎಂದು ಯಾರಿಗೂ ಗೊತ್ತಿರುವುದಿಲ್ಲ, ಎಂದೇ ಈ ಪತ್ರ ಬರೆದಿರಬಹುದು. “ಮಹನೀಯರೇ, ನಾನೀಗ ಅನಾಥ, ಎಂದೇ ಇಲ್ಲಿ ಆಶ್ರಮ ಪಡೆದಿದ್ದು. ನಾನೊಬ್ಬನೇ ಅನಾಥನಲ್ಲಾ. ಅನಾಥರೆಲ್ಲಾ ಈ ಜಗದೊಳಗೆ. ನನ್ನಂಥ ಬಹುತೇಕ ಅನಾಥರಿಗೆ ಕೊನೆಯ ದಿನಗಳಲ್ಲಿ ಊಟ, ವಸತಿ, ಉಪಚಾರಕ್ಕೆ ತೊಂದರೆಯಾಗದಿರಲಿ ಎಂಬ ಸದಿಚ್ಛೆಯಿಂದ ಆಸ್ತಿಯನ್ನೆಲ್ಲಾ ಮಾರಿ ನಿಮ್ಮ ಆಶ್ರಮಕ್ಕೆ ನೀಡಿರುವೆ. ಇದನ್ನು ದಾನ ಎಂದು ಹೇಳಿಕೊಳ್ಳುವ ಗರ್ವಿಷ್ಟನೂ ನಾನಲ್ಲ. ಇದೊಂದು ಸೇವೆ ಅಷ್ಟೇ. ನಾನೂ ನಿಮ್ಮಿಂದ ಊಟ, ವಸತಿ, ಉಪಚಾರ ಪಡೆಯುತ್ತಿರುವವನೇ. ನನಗೆ ಬದುಕು ಸಾಕು ಎಂದೆನಿಸಿದಾಗ ಆತ್ಮಹತ್ಯೆಯ ವಿಚಾರ ಮಾಡಿಯೇ ಇಲ್ಲ. ಅದು ಹೇಡಿಗಳ ವಿಚಾರ. ದೇವರು ಕರುಣಿಸಿದ ಅವಧಿ ಪೂರ್ತಿ ನಾವು ಬದುಕಲೇಬೇಕು. ನಾಥನು ಅವನು, ಅನಾಥರು ನಾವೆಲ್ಲ. ನಮ್ಮ ಸರದಿ ಬಂದಾಗ ಕೊನೆಯ ಶರಣು ಹೇಳಲೇಬೇಕು. ಆತ್ಮ ತೊರೆದು ಹೋಗುವ ದೇಹವು ಪಂಚಭೂತಗಳಲ್ಲಿ ವಿಲೀನ ಆಗಲೇಬೇಕು. ನನ್ನ ನಿರ್ಜೀವ ದೇಹಕ್ಕೆ ಆಶ್ರಮದವರಾದ ನೀವೇ ಅಗ್ನಿಸ್ಪರ್ಶ ಮಾಡಬೇಕು ಎಂಬುದೇ ನನ್ನ ಆಶಯ. ಯಾರು ನನ್ನವರಾಗಲಿಲ್ಲ. ನನ್ನ ಏಕಾಂಗಿ ಜೀವನದಲ್ಲಿ ಒಂದಿಷ್ಟು ನೆಮ್ಮದಿ ದೊರೆತಿದ್ದು ಕೇಶವನ ಸಾಮಿಪ್ಯದಲ್ಲಿ. ಅವನ ಮನಸ್ಸು ಬಲು ಸೂಕ್ಷ್ಮ, ನನ್ನ ಸಾವಿನ ಸುದ್ದಿ ಅವನಿಗೆ ತಿಳಿಸಿ ದುಃಖ ನೀಡಬೇಡಿ. ಆದಾಗ್ಯೂ ಅವನು ಆ ಕ್ಷಣದಲ್ಲಿ ಇಲ್ಲಿಗೆ ಬಂದರೆ ಅವನಿಂದ ಅಗ್ನಿಸ್ಪರ್ಶ ಮಾಡಿಸಲು ನನ್ನದೇನೂ ಅಭ್ಯಂತರವಿಲ್ಲ” ಪತ್ರದಲ್ಲಿ ಎಲ್ಲ ವಿಷಯವನ್ನು ಸೂಚ್ಯವಾಗಿ ತಿಳಿಸಿದ್ದರು.
    ಸ್ಮಶಾನದ ಕಡೆಗೆ ಅವರ ಅಂತಿಮ ಯಾತ್ರೆ ನಡೆದಿತ್ತು. “ಜೈರಾಮ, ಶ್ರೀರಾಮ, ಜೈಜೈರಾಮ” ವ್ಯಾನಿನ ಸ್ಪೀಕರ್ ಮೂಲಕ ಕೇಳಿ ಬರುತ್ತಿತ್ತು. ನಡಿಗೆಯನ್ನು ತೀವ್ರಗೊಳಿಸಿ ಮುಖ್ಯಸ್ಥರನ್ನು ತಲುಪಿ ಕೊನೆಯ ಬಾರಿ ಕೋರಿದೆ, “ಸಾವಿನ ಪೂರ್ವದ ಘಟನೆಗಳು ಈಗ ಬೇಡ, ಧರ್ಮಸಿಂಧು ಪ್ರಕಾರ ತಂದೆಯ ದೇಹಕ್ಕೆ ಮಗನೇ ಅಗ್ನಿಯನ್ನು ಸ್ಪರ್ಶಿಸಬೇಕು. ನನ್ನ ಮತ್ತು ಅವರ ಸಂಬಂಧವನ್ನು ಈ ಸಮಯದಲ್ಲಿ ಯಾವ ರೀತಿ ಅರ್ಥೈಸಬೇಕು ಎಂಬುದು ಅಪ್ರಸ್ತುತ. ಅವರ ಇಚ್ಛೆಯಂತೆ ನಾನು ಅಗ್ನಿಸ್ಪರ್ಶ ಮಾಡುವುದಕ್ಕಿಂತ ರವಿಯೇ ಆ ಕಾರ್ಯ ಮಾಡುವುದು ಸೂಕ್ತ, ದಯವಿಟ್ಟು ಅವಕಾಶ ಕೊಡಿ”. ನನ್ನ ಆರ್ತನಾದ ಅವರಿಗೆ ಎಷ್ಟು ತಟ್ಟಿತೋ ಗೊತ್ತಿಲ್ಲ, ಮೆರವಣಿಗೆ ನಡೆದಿತ್ತು.
    ಗಾಳಿಯ ಸ್ಪರ್ಶದೊಂದಿಗೆ ಅಗ್ನಿಯೂ ಧಗಧಗನೇ ಉರಿಯುತ್ತಿತ್ತು. ಅವರ ದೇಹವು ಅದರೊಳಗೆ. ನನ್ನೊಳಗೆ ಅಗ್ನಿ ದಹಿಸುತ್ತಿತ್ತು. ಎಲ್ಲರೂ ವೃದ್ಧಾಶ್ರಮಕ್ಕೆ ಮರಳಿದ್ದರು. ನಾನು ಮತ್ತು ರವಿ ಇಬ್ಬರೇ ಅಲ್ಲಿ. ಅವರು, “ಬದುಕಿದ್ದಾಗ ಅನಾಥನಾಗಿದ್ದೆ” ಎಂದು ಪತ್ರದಲ್ಲಿ ಬರೆದಿದ್ದರು. ಸಂಬಂಧಗಳ ಬೆಸುಗೆ ಬಿಚ್ಚಿದಾಗ, ಏಕಾಂಗಿ ಜೀವನವು ದೀರ್ಘ ಪಯಣವಾದಾಗ, ಅನಾಥ ಬದುಕಿನ ಕಂದಕಕ್ಕೆ ನಮ್ಮನ್ನು ಜಾರಿಸಿಬಿಡುತ್ತದೆ. ರವಿಯೂ ಕೂಡ ವಾಸ್ತವದಲ್ಲಿ ಅನಾಥನಾಗಿದ್ದ ಅನಾಥ ಪ್ರಜ್ಞೆಯ ಗುಂಗಿನಲ್ಲಿಯೇ ನನ್ನ ಬೈಕ ಸವಾರಿ ಮನೆಯ ಕಡೆ ನಡೆದಿತ್ತು. ಈ ಜಗದೊಳಗೆ ಒಬ್ಬೊಬ್ಬರೇ ಹೇಗೆ ಅನಾಥರಾಗಿ ಓಡುತ್ತ ಬದುಕಲಸಾಧ್ಯವಾಗಿ ಹೇಗೆ ಕುಸಿಯುತ್ತಾರೆ ಎಂಬ ಎಲ್ಲ ಮಗ್ಗುಲಗಳ ದರ್ಶನ ಒಂದೊಂದಾಗಿ ಕಣ್ಣಮುಂದೆ ಸುಳಿದಾಡಿತು. ಸಂಬಂಧಗಳ ಸಂಕೀರ್ಣತೆ ಅರ್ಥವಾಗದೇ ಹೋಯಿತು.
ಕೊನೇ ಮಾತು:ಅಗ್ನಿಸ್ಪರ್ಶ ಯಾರು ಮಾಡಿದರು ಎಂಬ ವಿಚಾರವನ್ನು ಓದುಗರ ವಿವೇಚನೆಗೆ ಬಿಡಲಾಗಿದೆ.     ಕಥೆಗಾರನಾಗಿ, “ಅಗ್ನಿಸ್ಪರ್ಶ” ಎಂಬ ಕರ್ಮಕ್ಕೆ ನಾನು ಅಷ್ಟು ಪ್ರಾಧಾನ್ಯ ನೀಡಿಲ್ಲ. ನಿತ್ಯ ಕರ್ಮಗಳನ್ನೇ ನಾವು ಎಷ್ಟು ನಿಷ್ಕಲ್ಮಶವಾಗಿ, ನಿಷ್ಕಳಂಕವಾಗಿ ನಿರ್ವಹಿಸುತ್ತೆವೆ ಎಂಬುದನ್ನು ನಾವೇ ವಿಮರ್ಶಿಸಿಕೊಳ್ಳಬೇಕಾಗಿದೆ. ನಮ್ಮ ಕರ್ಮಗಳಿಗೆ ನಾವೇ ವಿಮರ್ಶಕರಾದರೆ, ಬೇರೆ ವಿಶ್ಲೇಷಣೆಗಳ ಅಗತ್ಯತೆ ಇಲ್ಲ ಎಂದು ಎಲ್ಲರ ಆಶಯವಾದರೆ !?
                             -0ಂ0-