ಬಿಲಿಯನ್ನುಗಟ್ಟಲೆ ಡಾಲರುಗಳ ಎಡವಟ್ಟು

ಬಿಲಿಯನ್ನುಗಟ್ಟಲೆ ಡಾಲರುಗಳ ಎಡವಟ್ಟು

ಒಂದು ಕಾಲದಲ್ಲಿ ಜಗತ್ತಿನ ಬಹುಭಾಗ ಕಂಪ್ಯೂಟರುಗಳಲ್ಲಿ ಅಳವಡಿಸಲಾಗಿದ್ದ ಆಪರೇಟಿಂಗ್ ಸಿಸ್ಟಮ್ (ಕಾರ್ಯಾಚರಣ ವ್ಯವಸ್ಥೆ) ಮೈಕ್ರೊಸಾಫ್ಟ್ ಕಂಪೆನಿಯದ್ದಾಗಿತ್ತು. ಈ ಕಂಪೆನಿಯನ್ನು ಸ್ಥಾಪಿಸಿದ ಬಿಲ್ ಗೇಟ್ಸ್ ಇದರಲ್ಲಿ ಮಾಡಿದ ಹಣದಿಂದಾಗಿ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯೆಂಬ ಖ್ಯಾತಿ ಪಡೆದುಕೊಂಡ. ಮೈಕ್ರೊಸಾಫ್ಟ್ ಕಂಪೆನಿಯ ವ್ಯಾಪಾರವಿದ್ದುದು 'ಪರ್ಸನಲ್ ಕಂಪ್ಯೂಟರ್' ಅಥವ 'ಪಿ ಸಿ' - ಇದರ ಸುತ್ತ. ವಿಶ್ವದಲ್ಲಿ ಎಲ್ಲೆಡೆ ಡೆಸ್ಕ್ ಟಾಪ್ ಅಥವ ಪರ್ಸನಲ್ ಕಂಪ್ಯೂಟರುಗಳಿಗೆ ಮೈಕ್ರೊಸಾಫ್ಟ್ ಕಂಪೆನಿಯ ಜನಪ್ರಿಯ "ವಿಂಡೋಸ್" ತಂತ್ರಾಂಶವೇ ಹೆಚ್ಚಿನಂತೆ ಬಳಕೆಯಾಗುತ್ತಿದ್ದುದು.

    ಆದರೆ ಕಾಲಕ್ರಮೇಣ ಕಂಪ್ಯೂಟರು ಬಳಸುವವರಿಗಿಂತ ಮೊಬೈಲ್, ಟ್ಯಾಬ್ಲೆಟ್ ಬಳಸುವವರ ಸಂಖ್ಯೆ ಹೆಚ್ಚುತ್ತ ಹೋಯಿತು. ಮೈಕ್ರೊಸಾಫ್ಟಿನ 'ವಿಂಡೋಸ್' ಅಳವಡಿಸಿದ ಮೊಬೈಲುಗಳು ಹೊರಬಂದವಾದರೂ ಮಾರುಕಟ್ಟೆಯಲ್ಲಿ ಹೆಚ್ಚು ದಿನ ಉಳಿಯಲಿಲ್ಲ. ಮಾರುಕಟ್ಟೆಯಲ್ಲಿ ಬೇರೆ ಕಂಪೆನಿಗಳ 'ಸ್ಮಾರ್ಟ್ ಫೋನು'ಗಳು ಮತ್ತು ಟ್ಯಾಬ್ಲೆಟ್ಟುಗಳು ಬಂದವು. ಕೈಯಲ್ಲಿ ಹಿಡಿದು ಸುಲಭದಲ್ಲಿ ಜೊತೆಗೆ ತೆಗೆದುಕೊಂಡು ಹೋಗಬಹುದಾದ ಪುಟ್ಟ ಕಂಪ್ಯೂಟರುಗಳಂತಿರುವ 'ಸ್ಮಾರ್ಟ್ ಫೋನು' ಹಾಗು ಟ್ಯಾಬ್ಲೆಟ್ಟುಗಳಿಂದಾಗಿ ವಿಂಡೋಸ್ ಅಳವಡಿಸಿದ 'ಪರ್ಸನಲ್ ಕಂಪ್ಯೂಟರ್' ಬಳಸುವವರ ಸಂಖ್ಯೆ ಕಡಿಮೆಯಾಗುತ್ತ ಹೋಯಿತು. ಸ್ಯಾಮ್ಸಂಗ್, ಆಪಲ್, ಎಚ್ ಟಿ ಸಿ ಮುಂತಾದ ಕಂಪೆನಿಗಳು ಹೊರತಂದ ಸ್ಮಾರ್ಟ್ ಫೋನುಗಳು ಹಾಗೂ ಟ್ಯಾಬ್ಲೆಟ್ಟುಗಳು ಮಿಲಿಯನ್ನುಗಟ್ಟಲೆ ಸಂಖ್ಯೆಯಲ್ಲಿ ಖರ್ಚಾದವು. ಹೀಗೆ ಖರ್ಚಾದ ಉಪಕರಣಗಳಲ್ಲಿ ಗೂಗಲ್ ಕಂಪೆನಿಯವರ 'ಆಂಡ್ರಾಯ್ಡ್' ಅಥವ ಆಪಲ್ ಕಂಪೆನಿಯವರ 'ಐ ಓ ಎಸ್' ಕಾರ್ಯಾಚರಣ ವ್ಯವಸ್ಥೆಯನ್ನು ಅಳವಡಿಸಿದ ಉಪಕರಣಗಳು ಹೆಚ್ಚಿನ ಪಾಲಿನವು.

    ಒಂದು ಕಾಲದಲ್ಲಿ ಎಲ್ಲೆಡೆ ಕಂಪ್ಯೂಟರುಗಳಿಗೆ ಕಾರ್ಯಚರಣ ವ್ಯವಸ್ಥೆ ಒದಗಿಸಿ ಹಣ ಮಾಡುತ್ತಿದ್ದ ಮೈಕ್ರೊಸಾಫ್ಟಿಗೆ ಇದೊಂದು ಸಂದಿಗ್ಧ ಪರಿಸ್ಥಿತಿಯಾಗಿತ್ತು. ಇದೇ ಸಮಯದಲ್ಲಿ ಈ ಕಂಪೆನಿ ಹೊರತಂದಿದ್ದ 'ವಿಂಡೋಸ್ ವಿಸ್ತ' ಹಾಗು 'ವಿಂಡೋಸ್ ೭' ‍ಮುಂಚಿನ ವಿಂಡೋಸ್ ಆವೃತ್ತಿಗಳಷ್ಟು ಜನಪ್ರಿಯವಾಗದೇ ಈ ಬೃಹತ್ ಕಂಪೆನಿಗೆ ಅತಿದೊಡ್ಡ ಸವಾಲನ್ನು ಸೃಷ್ಟಿಸಿತ್ತು. ಆಗ ಪರ್ಸನಲ್ ಕಂಪ್ಯೂಟರುಗಳಿಗೆ ಹೊರತಂದ ವಿಂಡೋಸ್ ಎಂಟನೇ ಆವೃತ್ತಿಯೊಂದಿಗೆ 'ಸ್ಮಾರ್ಟ್ ಫೋನ್' ಮಾರುಕಟ್ಟೆಯಲ್ಲೂ ಮತ್ತೊಮ್ಮೆ ಬೇರೂರಲು ಪ್ರಯತ್ನ ನಡೆಸಿದ ಮೈಕ್ರೊಸಾಫ್ಟ್ '‍ನೊಕಿಯ' ಕಂಪೆನಿಯೊಡನೆ ಒಪ್ಪಂದ ಮಾಡಿಕೊಂಡು 'ವಿಂಡೋಸ್ ಫೋನ್' ಎಂಬ ಕಾರ್ಯಾಚರಣ ವ್ಯವಸ್ಥೆಯನ್ನು ಹೊರತಂದು ನೊಕಿಯ ಉಪಕರಣಗಳಲ್ಲಿ ಅಳವಡಿಸಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಇದು ನೊಕಿಯ ಒಪ್ಪಂದದಿಂದಾಗಿ ಭಾಗಶಃ ಯಶಸ್ವಿಯಾಯಿತು.

    ನೊಕಿಯ ಫಿನ್ನಿಶ್ ಮೂಲದ ಕಂಪೆನಿ. ನೊಕಿಯ ಒಂದು ಕಾಲದಲ್ಲಿ ‍ರಬ್ಬರ್ ‍ಉತ್ಪನ್ನಗಳನ್ನು ಮಾರುತ್ತಿದ್ದ ಕಂಪೆನಿ. ಕಳೆದ ಒಂದೂವರೆ ದಶಕದಲ್ಲಿ ತನ್ನ ಮೊಬೈಲ್ ಉಪಕರಣಗಳ ವ್ಯಾಪಾರದಿಂದಾಗಿ ಮನೆಮಾತಾಗಿದ್ದ ನೊಕಿಯ ಕಂಪೆನಿಗೆ ಯೂರೋಪ್ ಭದ್ರ ನೆಲೆ. ಯೂರೋಪಿನಲ್ಲಿ ಸಹಜವಾಗಿ ವಿಂಡೋಸ್ ಅಳವಡಿಸಿದ್ದ ನೊಕಿಯ ಹೆಚ್ಚು ಮಾರಾಟವಾದವು. 'ನೊಕಿಯ ಲುಮಿಯ' ಎಂಬ ಹೆಸರಿನಲ್ಲಿ ಹೊರಬಂದ ಉಪಕರಣಗಳ ‍‍ಪಾಲು ಜಗತ್ತಿನಾದ್ಯಂತ ಸ್ಮಾರ್ಟ್ ಫೋನು ಮಾರುಕಟ್ಟೆಯಲ್ಲಿ ಸುಮಾರು ೮% ಕ್ಕೇರಿತು. ಹೀಗಿದ್ದೂ ನೊಕಿಯ ತೀರ ನಷ್ಟಗಳಲ್ಲಿ ಮುಳುಗಿತ್ತು. ಇನ್ನು ಈ ಕಂಪೆನಿಗೆ ಜೀವ ತುಂಬುವುದು ಯಾವುದಾದರೂ ದೊಡ್ಡ ‍ಕಂಪೆನಿಯೊಂದರ ಖರೀದಿಯಿಂದಲೇ ಸಾಧ್ಯ ಎನ್ನುವಂತಿರುವಾಗ ಕಳೆದ ವಾರ ಮೈಕ್ರೊಸಾಫ್ಟ್ ‍ಸುಮಾರು ಏಳು ಬಿಲಿಯನ್ ಡಾಲುರುಗಳ ವೆಚ್ಚದಲ್ಲಿ ನೊಕಿಯ ಕಂಪೆನಿಯ ಮೊಬೈಲ್ ವ್ಯಾಪಾರವನ್ನು ಖರೀದಿಸಿಬಿಟ್ಟಿತು! ‍‍‍"‍ಮೈಕ್ರೊಸಾಫ್ಟಿನ ಏಳು ಬಿಲಿಯನ್ ಡಾಲರ್ ಮಿಸ್ಟೇಕ್" ಎಂದು ಹಲವು ಮಾಧ್ಯಮಗಳು ‍ಇದನ್ನು ವರದಿ ಮಾಡಿದವು!
    ‍
ನೊಕಿಯ ಕಂಪೆನಿಯ ‍ಅವನತಿ
    ೨೦೧೦ರಲ್ಲಿ ಮೈಕ್ರೊಸಾಫ್ಟ್ ಕಂಪೆನಿಯೊಂದಿಗೆ ‍ಒಪ್ಪಂದ ಮಾಡಿಕೊಳ್ಳುವ ಮೊದಲು ಸ್ಮಾರ್ಟ್ ಫೋನುಗಳ ಮಾರುಕಟ್ಟೆಯಲ್ಲಿ ನೊಕಿಯ ಕಂಪೆನಿಯ ಪಾಲು ಸುಮಾರು ‍೪೦% ರಷ್ಟಿತ್ತು. ‍ಜೊತೆಗೆ ಆ ಸಮಯದಲ್ಲಿ ತಾನು ಹೊರತರುತ್ತಿದ್ದ 'ಸಿಂಬಯನ್' ಹಾಗು 'ಲಿನಕ್ಸ್' ಆಧರಿಸಿದ ಕಾರ್ಯಾಚರಣ ವ್ಯವಸ್ಥೆಗಳನ್ನು ನೊಕಿಯ ಉತ್ತಮಪಡಿಸದೆ ಸಂಪೂರ್ಣ ಸ್ಥಗಿತಗೊಳಿಸಿಬಿಟ್ಟಿತು. ‍ವರ್ಷ ಕಳೆದಂತೆ ಸ್ಮಾರ್ಟ್ ಫೋನು ಮಾರುಕಟ್ಟೆಯಲ್ಲಿ ಅದರ ಪಾಲು ಕ್ಷೀಣಿಸುತ್ತ ಹೋಯಿತು. ಒಂದು ಕಾಲದಲ್ಲಿ ಮೊಬೈಲ್ ಫೋನು ‍‍ಮಾರುಕಟ್ಟೆಯ ಸಿಂಹಪಾಲು ‍ಹೊಂದಿದ್ದ ‍ನೊಕಿಯ ಹತ್ತು ವರ್ಷಗಳಲ್ಲಿಯೇ ‍ಹರಾಜಿಗೆ ಬಂದದ್ದು ಜಗತ್ತಿನಾದ್ಯಂತ ವಿಸ್ಮಯ ಮೂಡಿಸಿದ ಸಂಗತಿ.
     
೯೦೦ ಮಿಲಿಯನ್ ಡಾಲರುಗಳ ಎಡವಟ್ಟು
    ಇತ್ತೀಚೆಗೆ ಅತಿ ಹೆಚ್ಚು ಜನಪ್ರಿಯವಾಗುತ್ತಿರುವ ಟ್ಯಾಬ್ಲೆಟ್ಟುಗಳ ಮಾರುಕಟ್ಟೆಯಲ್ಲಿ ಗೂಗಲ್ ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆಯನ್ನು ಬಳಸುವ ಟ್ಯಾಬ್ಲೆಟ್ಟುಗಳ ಪಾಲು ‍ಸಿಂಗಪುರದ ಕಂಪೆನಿಯೊಂದರ ವರದಿಯಂತೆ ೫೩%.  ‍ಆಪಲ್ ಕಂಪೆನಿಯ ಪ್ರಸಿದ್ಧ ಐ-ಡ್, ಐ-ಪಾಡ್ ಮಿನಿ ಉಪಕರಣಗಳ ಪಾಲು ಮಾರುಕಟ್ಟೆಯಲ್ಲಿ ‍೪೨.೯%. ‍‍‍೨೦೧೩ ಎರಡನೇ ಕ್ವಾರ್ಟರ್ ಒಂದರಲ್ಲೇ ಮಾರಾಟವಾದ ಒಟ್ಟು ಟ್ಯಾಬ್ಲೆಟ್ಟುಗಳ ಸಂಖ್ಯೆ ‍ವರದಿಯಂತೆ ೩೪.೨ ಮಿಲಿಯನ್. ‍ಮೈಕ್ರೊಸಾಫ್ಟ್ ಕಂಪೆನಿ ಈ ಮಾರುಕಟ್ಟೆಯಲ್ಲೂ ಬೇರೂರುವ ಪ್ರಯತ್ನದಲ್ಲಿ 'ಸರ್ಫೇಸ್' ಹಾಗೂ 'ಸರ್ಫೇಸ್ ಆರ್ ಟಿ' ಎಂಬ ‍ಉಪಕರಣಗಳನ್ನು ಹೊರತಂದಿದೆ. ಈಗಿನಂತೆ ವರದಿಗಳ ಪ್ರಕಾರ ಮೈಕ್ರೊಸಾಫ್ಟಿನ ಪಾಲು ಈ ಮಾರುಕಟ್ಟೆಯಲ್ಲಿ ೪% ರಿಂದ ೪.೫%. ೨೦೧೩ರ ನಾಲ್ಕನೇ ಕ್ವಾರ್ಟರಿನ ಆದಾಯದ ವರದಿಯಲ್ಲಿ ಮೈಕ್ರೊಸಾಫ್ಟ್ ‍ತನ್ನ 'ಸರ್ಫೇಸ್ ಆರ್ ಟಿ' ಉಪಕರಣಗಳನ್ನು ಹೊರತರುವ ಖರ್ಚಿನಲ್ಲಿ ಸುಮಾರು ೯೦೦ ಮಿಲಿಯನ್ ಡಾಲರುಗಳನ್ನು ಸೇರಿಸಿತು. 'ಇಷ್ಟೊಂದು ‍‍‍‍‍‍‍ಹಣ ಹೇಗೆ ಖರ್ಚಾಯಿತು?' ಎನ್ನುತ್ತ ಮಾಧ್ಯಮಗಳು ‍ಈ ಎಡವಟ್ಟನ್ನು ‍ಅವಲೋಕಿಸಿದವು. ‍‍ಜುಲೈ ೧೯ರಂದು ಮೈಕ್ರೊಸಾಫ್ಟ್ ಕಂಪೆನಿಯ ಶೇರುಗಳು ‍ಕುಸಿದು ಒಂದೇ ದಿನದ ಅವಧಿಯಲ್ಲಿ ಸುಮಾರು ‍‍‍೩೨ ಬಿಲಿಯನ್ ಡಾಲರುಗಳಷ್ಟು ‍ಶೇರು ಮಾರುಕಟ್ಟೆಯಲ್ಲಿ
    ಕಳೆದುಕೊಂಡಿತು!

    ಬರುವ ದಿನಗಳಲ್ಲಿ ನೊಕಿಯ ‍ಹೆಸರಿನಡಿ ಬರುವ ಮೊಬೈಲ್ ಫೋನುಗಳನ್ನು ಮಾರುಕಟ್ಟೆ, ಮಾಧ್ಯಮ ಹಾಗೂ ಗ್ರಾಹಕ - ಎಲ್ಲರೂ ‍ಜಾಗರೂಕತೆಯಿಂದ ವೀಕ್ಷಿಸುವಂತಾಗಬಹುದು. ಏಕೆಂದರೆ, ಬಿಲಿಯನ್ನುಗಟ್ಟಲೆ ಬೆಲೆ ಬಾಳುವ ಮೈಕ್ರೊಸಾಫ್ಟ್ ಕಂಪೆನಿಗೆ ನೊಕಿಯ ಹೊರತರುತ್ತಿರುವ ಸಾಮಾನ್ಯ ಬಳಕೆಯ ಮೊಬೈಲ್ ಫೋನುಗಳಲ್ಲಿ ಇರುವ ಆಸಕ್ತಿ ಅಷ್ಟಕ್ಕಷ್ಟೇ. ತನ್ನ ಸ್ಮಾರ್ಟ್ ಫೋನ್ ಮಾರುಕಟ್ಟೆಯನ್ನು ಬಲಪಡಿಸಿಕೊಳ್ಳಲು ಮೈಕ್ರೊಸಾಫ್ಟ್ ನೊಕಿಯದ ಹಲವು ಉಪಕರಣಗಳ ‍ಉತ್ಪಾದನೆಯನ್ನು ಸ್ಥಗಿತಗೊಳಿಸಲೂಬಹುದು.

ಚಿತ್ರ ಕೃಪೆ: geek.com

Comments

Submitted by spr03bt Thu, 09/12/2013 - 11:34

ನಾಡಿಗರೆ, ನಿಮ್ಮ ಲೇಖನ ಚೆನ್ನಾಗಿದೆ. ನಾನು ನೋಕಿಯ ಅಭಿಮಾನಿಗಳಲ್ಲಿ ಒಬ್ಬ. ನಾನು ಬಳಸಿರುವ ನಾಲ್ಕು ಫೋನ್ಗಳಲ್ಲಿ ಮೂರು ನೋಕಿಯ ಕ೦ಪನಿಯವು. ಈಗಿರುವುದು ನೋಕಿಯು ಲೂಮಿಯ. ನಾನು ಕೊ೦ಡದ್ದು ನೋಡಿ ನನ್ನ ನಾಲ್ವರು ಸಹುದ್ಯೋಗಿಗಳು ಸಹ ಖರೀದಿಸಿದ್ದಾರೆ. ನನಗ೦ತೂ ಲುಮಿಯಾ ಖುಷಿ ಕೊಟ್ಟಿದೆ.
Submitted by hpn Sun, 09/15/2013 - 19:11

In reply to by spr03bt

ನೊಕಿಯ ಲುಮಿಯ ಚೆನ್ನಾಗಿದೆ ಎಂಬ ನಿಮ್ಮ ಮಾತು ಒಪ್ಪುವಂಥಾದ್ದು. ಆದರೆ ಹೀಗಿದ್ದೂ ನೊಕಿಯ ಕಂಪೆನಿ ಮಾರಾಟಕ್ಕೆ ಬಂದಿತಲ್ಲ. ಮೈಕ್ರೊಸಾಫ್ಟ್ ಕಂಪೆನಿ ಅಡಿಯಲ್ಲಿ ಇನ್ನು ನೊಕಿಯ ಹೇಗೆ ಮುಂದುವರೆದೀತು? ನೊಕಿಯ ಮೊಬೈಲ್ ಗ್ರಾಹಕರಾದ ನಿಮಗೂ ಕುತೂಹಲ ಇದ್ದೀತು?
Submitted by venkatb83 Fri, 09/13/2013 - 14:20

"೯೦೦ ಮಿಲಿಯನ್ ಡಾಲರುಗಳ ಎಡವಟ್ಟು" ;(((( ನಾಡಿಗರೇ -ಬಹು ದಿನಗಳ ನಂತರ ನಿಮ್ಮಿಂದ ಒಂದು ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಹಣಕಾಸು ವ್ಯಾಪಾರ ಮನೋಭಾವದಲ್ಲಿ ಪ್ರಭಾವ ಬೀರುವ ವಿಷಯದ ಬಗ್ಗೆ ಸಕಾಲಿಕ ವಿವರಣಾತ್ಮಕ ಬರಹ . ಆಂಗ್ಲ ನುಡಿ ಟೇಕನ್ ಫಾರ್ ಗ್ರಾಂಟಡ್ ತರಹ -ನೋಕಿಯಾ ಬಳಕೆದಾರರ ಮನದ ಮಿಡಿತ ತುಡಿತ ಅರಿತು ಅವರು ಉಪಯೋಗಿಸಬಹುದಾದ ಮೊಬೈಲು ತಯಾರಿಸುವಲ್ಲಿ ಸಂಪೂರ್ಣ ವಿಫಲ ಆಯ್ತು . . ಆರಂಬಿಕ -ಮಧ್ಯಮ ವರ್ಗದ ಜನರ ಬಳಕೆಗೆ ಮೊಬೈಲು ಬಿಡುಗಡೆ ಆದರೂ -ಏಕ ರೀತಿಯ ಕಾರ್ಯಾಚರಣೆ- ಅನಾಕರ್ಷಕ ವಿನ್ಯಾಸ,ಅದೇ ಹಳೆಯ ಸಿಂಬಿಯನ್ ಜಾವ ವ್ಯವಸ್ಥೆ ನೋಕಿಯ ಅವನತಿಗೆ ಕಾರಣವಾಯ್ತು. ಬಳಕೆದಾರರ ನಾಡಿ ಮಿಡಿತ ಅರಿಯುವಲ್ಲಿ ನೋಕಿಯ ಎಡವಿತು - - ಮೊದಲ ಸ್ಥಾನದಲ್ಲಿದ್ದ ಕಂಪನಿ ಧಿಡೀರನೆ ಪ್ರಪಾತಕ್ಕೆ ಬಿದ್ದು ಸ್ಯಾಮ್ಸಂಗ್ ಮೊದಲ ಸ್ಥಾನಕ್ಕೆ ಬಂತು .. ನಾನು ಮೊದಲು ಉಪಯೋಗಿಸಿದ ೭ ಮೊಬೈಲುಗಳು ನೋಕಿಯ -ಆಮೇಲೆ ಅದ್ಕೆ ಗುಡ್ ಬೈ ಹೇಳಿ ಸ್ಯಾಮ್ಸಂಗ್ ಕಾರ್ಬಿ ಪ್ರೋ ಖರೀದಿಸಿ ಈಗಲೋ ಅದನ್ನೇ ಉಪಯೋಗಿಸುತ್ತಿರುವೆ.. ಆಯಾಯ ಪ್ರದೇಶಗಳ ಮಾರುಕಟ್ಟೆ -ಜನರ ಮನೋಸ್ಥಿತಿ ಅರಿತು ಸೆಟ್ ಬಿಡುಗಡೆ ಮಾಡುವ ಸ್ಯಾಮ್ಸಂಗ್ ನಡೆ ಚೆನ್ನ.. ಯಾರಿಗೊತ್ತು ಮುಂದೊಮ್ಮೆ ನೋಕಿಯಗೆ ಅದ ಗತಿ ಸ್ಯಾಮ್ಸಂಗ್ ಗೂ ಬರಬಹುದೇ ? ಹಾಗೆ ಆಗದಿರಲಿ ..!! ಮೈಕ್ರೋಸಾಫ್ಟ್ -ಖರೀದಿಸಿ ನೋಕಿಯ ಮಾರುಕಟ್ಟೆ ಮತ್ತೆ ಹೆಚ್ಚಬಹುದೆ? ಕಾದು ನೋಡಬೇಕು ...!! ಶುಭವಾಗಲಿ \।
Submitted by nageshamysore Sun, 09/15/2013 - 20:50

ನಾಡಿಗರೆ,  ನೋಕಿಯ ಅವನತಿಯ ಎರಡು ಪ್ರಮುಖ ಅಂಶಗಳು ಪ್ರಾಯಶಃ (ನನ್ನ ಅನಿಸಿಕೆಯಲ್ಲಿ): 1. ಸ್ಟೀವ್ ಜಾಬ್ಸ್ : ಸ್ಮಾರ್ಟ್ ಫೋನಿನ ಜಗದ ಬದಲಾವಣೆಯ ವೇಗೋತ್ಕರ್ಷಕ್ಕೆ ಜಾಬ್ಸ್ ಮುಖ್ಯ ಕಾರಣ. ಇಲ್ಲವಾದಲ್ಲಿ ಈಗಾಗಲೆ ಆಗಿರುವ ಬೆಳವಣಿಗೆಯ ಮಟ್ಟ ತಲುಪಲು ಇನ್ನು ಹಲವಾರು ವರ್ಷಗಳೆ ತಗುಲುತ್ತಿತ್ತು ಮತ್ತು ಕುಂಠಿತ ಗತಿಯಲ್ಲಿ ಬದಲಾವಣೆಯಾಗುತ್ತಿತ್ತು. ಈ ಸಂಧರ್ಭದಲ್ಲಿ ನೋಕೀಯಾದಂತ ಕಂಪನಿಗಳಿಗೆ ಬದಲಾಗಳು ಸಾಕಷ್ಟು ಸಮಯ ಸಿಗುತ್ತಿತ್ತೊ ಏನೊ...? 2. ನೋಕಿಯಾ ಮೊಬೈಲ್ ಜಗದ ಮೊದಲನೆ ಸ್ಥಾನದಲ್ಲಿದ್ದುದು : ಮೊದಲ ಸ್ಥಾನ ಕವಿಸಿದ ಮಂಪರಿನಿಂದಾಗಿ ಸುತ್ತಮುತ್ತ ಏನಾಗುತ್ತಿದೆಯೆಂಬ ಅರಿವುಂಟಾಗುವಷ್ಟರಲ್ಲಾಗಲೆ ತಡವಾಗಿ ಹೋಗಿತ್ತು. ಲುಮೀಯಾದಂತ ಉತ್ಪನ್ನ ಹೊರತಂದರೂ, ಅದರಲ್ಲಿ ಬೇರೆ ಸ್ಮಾರ್ಟ್ ಫೋನ್ ಮೀರಿಸಿ ಗ್ರಾಹಕರನ್ನು ಮತ್ತೆ ಸೆಳೆಯುವಂತ ಗಿಮಿಕ್ ಸಾಧ್ಯವಿರಲಿಲ್ಲ. ಸಾಧ್ಯವಿದ್ದರೂ ಆ ಮಾರುಕಟ್ಟೆಯ ಗಾತ್ರ ಚಿಕ್ಕದಾಗಿತ್ತು. ಇನ್ನು ಮೈಕ್ರೊಸಾಪ್ಟಿನಂತಹ ಕಂಪನಿ ಕೈ ಸೇರಿದ ಮೇಲೆ, ಸ್ವಾತ್ಯಂತ್ರವೂ ಇರದ ಕಾರಣ - ನೋಕಿಯ ಒಂದು ರೀತಿ ಮುಗಿದ ಅಧ್ಯಾಯವೆಂದೆ ನನ್ನ ಭಾವನೆ. ಧನ್ಯವಾದಗಳೊಂದಿಗೆ   ನಾಗೇಶ ಮೈಸೂರು  
Submitted by JagadeeshBC Thu, 09/26/2013 - 04:45

ಸಾಕಷ್ಟು ವಿವರಗಳಿಂದ ಕೂಡಿದೆ. ಅಲ್ಲದೇ, ಬಹುರಾಷ್ಟ್ರೀಯ ಕಂಪನಿಗಳ ಒಳ ವ್ಯವಹಾರಗಳ ಬಗ್ಗೆ, ಒಂದು ಒಳ್ಳೆಯ ಉದಾಹರಣೆ ಕೂಡ. ಮೈಕ್ರೋಸಾಫ್ಟ್ ಕಂಪನಿಯವರ ಬಹುತೇಕ ತಂತ್ರಾಂಶಗಳು ಮತ್ತು ಉಪಕರಣಗಳು ಇದೇ ರೀತಿಯಲ್ಲಿ, ಬೇರೆ ಕಂಪನಿಗಳನ್ನು ಕೊಂಡು, ತನ್ನ ಹೆಸರನ್ನು ಮಾತ್ರ ಜೋಡಿಸಿ, ಹೆಚ್ಚು ಬೆಲೆಗೆ ಮಾರಾಟ ಮಾಡುವ ತಂತ್ರದ ಉದಾಹರಣೆ. ಬಹುಶಃ Nokia ಕಂಪನಿಯ punch line ಆದ "Connecting people" ಅನ್ನು, "Disconnecting Nokia from people" ಎಂದು ಬದಲಾಯಿಸಬೇಕೆನಿಸುತ್ತದೆ.