೧೧೭. ಲಲಿತಾ ಸಹಸ್ರನಾಮ ೪೬೪ರಿಂದ ೪೬೮ನೇ ನಾಮಗಳ ವಿವರಣೆ

೧೧೭. ಲಲಿತಾ ಸಹಸ್ರನಾಮ ೪೬೪ರಿಂದ ೪೬೮ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೪೬೪-೪೬೮

Kālakaṇṭhī कालकण्ठी (464)

೪೬೪. ಕಾಲಕಂಠೀ

            ಶಿವನು ತನ್ನ ಕಂಠದಲ್ಲಿರುವ ನೀಲಿ ಬಣ್ಣದ ವಿಷದಿಂದಾಗಿ ಕಾಲಕಂಠನೆಂದು ಕರೆಯಲ್ಪಟ್ಟಿದ್ದಾನೆ. ಈ ವಿಷವು ಕಾಲಕೂಟ ಅಥವಾ ಹಾಲಾಹಲ ಎಂದು ಕರೆಯಲ್ಪಡುವ ಮಾರಣಾಂತಿಕ ವಿಷವಾಗಿದ್ದು, ಸಮುದ್ರಮಥನದ ಸಮಯದಲ್ಲಿ ಅದು ಶಿವನಿಂದ ನುಂಗಲ್ಪಟ್ಟಿತು. ದೇವಿಯು ಶಿವನ ಪತ್ನಿಯಾಗಿರುವುದರಿಂದ ಆಕೆಯು ಕಾಲಕಂಠೀ ಎಂದು ಹೆಸರಿಸಲ್ಪಟ್ಟಿದ್ದಾಳೆ. ಶಿವನು ಹಾಲಾಹಲವನ್ನು ನುಂಗುವಾಗ ದೇವಿಯು ಅವನ ಕಂಠವನ್ನು ಒತ್ತಿ ಹಿಡಿದು ಅವನು ವಿಷವನ್ನು ನುಂಗುವುದನ್ನು ತಡೆಹಿಡಿದಳೆಂದು ಹೇಳಲಾಗುತ್ತದೆ. ಕಾಲಕಂಠೀ ಎನ್ನುವ ಒಂದು ದೈವವು ರಾಕ್ಷಸ ಸಂಹಾರಕ್ಕಾಗಿ ಕಾಳಿಯೊಂದಿಗೆ ಶಿವನಿಂದ ಸೃಷ್ಟಿಸಲ್ಪಟ್ಟಿತ್ತು.

           ಕಾಲ ಎಂದರೆ ಮೃದು ಧ್ವನಿ ಮತ್ತು ಕಂಠೀ ಎಂದರೆ ಕಂಠವುಳ್ಳವಳು. ಬಹುಶಃ ಇದು ದೇವಿಯ ಮಧುರ ಮತ್ತು ಮೃದುವಾದ ಧ್ವನಿಯನ್ನು ಸೂಚಿಸುತ್ತದೆ (ನಾಮ ೨೭ನ್ನು ನೋಡಿ).

Kāntimatī कान्तिमती (465)

೪೬೫. ಕಾಂತಿಮತೀ

            ದೇವಿಯು ಕಾಂತಿಯಿಂದ ಕೂಡಿದ್ದು ಹೊಳೆಯುವವಳಾಗಿದ್ದಾಳೆ. ೪೪೯ನೇ ನಾಮವಾದ ‘ಕಾಂತೀ’ಯನ್ನು ನೋಡಿ. ಮತಿ ಎನ್ನುವುದಕ್ಕೆ ಹಲವಾರು ಅರ್ಥಗಳಿವೆ; ಬುದ್ಧಿವಂತಿಕೆ ಮೊದಲಾದವು. ಈ ನಾಮವು ದೇವಿಯ ಬುದ್ಧಿವಂತಿಕೆಯು ಪ್ರಕಾಶಿಸುತ್ತಿದೆ ಎಂದು ಹೇಳುತ್ತದೆ.

Kṣobhiṇī क्षोभिणी (466)

೪೬೬. ಕ್ಷೋಭಿಣೀ

         ದೇವಿಯು ಶಿವನೊಳಗೆ ಸೃಷ್ಟಿಸಬೇಕೆಂಬ ಸ್ಪಂದನ ಅಥವಾ ಪ್ರಚೋದನೆಯನ್ನುಂಟು ಮಾಡುತ್ತಾಳೆ. ಕ್ಷೋಭೆ ಎಂದರೆ ಅಲುಗಾಡುವಿಕೆ ಅಥವಾ ಕದಲಿಕೆ. ಈ ಕ್ಷೋಭೆಯ ಪರಿಣಾಮದಿಂದ ಶಿವನು ಆತ್ಮ ಅಥವಾ ಪುರುಷರನ್ನು ಪ್ರಕೃತಿಯೊಂದಿಗೆ ಸಂಯೋಗ ಹೊಂದುವಂತೆ ಮಾಡಿ ಸೃಷ್ಟಿ ಕ್ರಿಯೆಯು ಮೊದಲಾಗುವಂತೆ ಮಾಡುತ್ತಾನೆ. ಜೀವಿ (ಆತ್ಮ) ಅಥವಾ ಪುರುಷನು ಪ್ರಕೃತಿಯೊಂದಿಗೆ ಪ್ರತಿಕ್ರಿಯಿಸಿದಾಗ ಮಾತ್ರವೇ ಅದು ರೂಪಾಂತರ ಹೊಂದಲು ಸಾಧ್ಯವಾಗುತ್ತದೆ. ಈ ಕ್ರಿಯೆಯನ್ನು ಆತ್ಮ ಅಥವಾ ಜೀವಿಯ ಅನಾವರಣದ ಪ್ರಕ್ರಿಯೆ ಎಂದು ಕರೆಯಲಾಗುತ್ತದೆ. ಕೇವಲ ಪ್ರಕೃತಿ ಮಾತ್ರವೇ ಸೃಷ್ಟಿ ಕ್ರಿಯೆಯನ್ನು ಅನಾವರಣಗೊಳಿಸಬಲ್ಲುದು. ಯಾವಾಗ ಆತ್ಮ ಅಥವಾ ಜೀವಿಯು ಪ್ರಕೃತಿಯೊಂದಿಗೆ ಸಹಯೋಗ ಹೊಂದುತ್ತದೆಯೋ ಆಗ ಪ್ರಕೃತಿಯು ಮೊದಲು ಸೂಕ್ಷ್ಮ ಅಭೌತಿಕ ವಸ್ತುವಾಗಿ ತದನಂತರ ಸ್ಥೂಲ ರೂಪವಾಗಿ ಅನಾವರಣಗೊಳ್ಳುತ್ತದೆ. ಒಮ್ಮೆ ಸ್ಥೂಲ ರೂಪಗಳು ಉದ್ಭವವಾದ ಮೇಲೆ, ಆತ್ಮಗಳ ಕರ್ಮಗಳು ಅನಾವರಣಗೊಳ್ಳಲು ಪ್ರಾರಂಭವಾಗಿ, ಸೃಷ್ಟಿಯ ಕ್ರಿಯೆಗಳು ಅಂಕುರಾರರ್ಪಣಗೊಳ್ಳುತ್ತವೆ. ಈ ಪ್ರಕ್ರಿಯೆಯನ್ನೇ ಸ್ಪಂದನ ಅಥವಾ ಶಿವನ ಕ್ರಿಯಾಶೀಲ ಅಂಶವೆಂದು ಕರೆಯಲಾಗುತ್ತದೆ.

Śūkṣmarūpiṇī शूक्ष्मरूपिणी (467)

೪೬೭. ಸೂಕ್ಷ್ಮರೂಪಿಣೀ

          ಈ ನಾಮವು ದೇವಿಯ ಸೂಕ್ಷ್ಮ ರೂಪವನ್ನು ಉಲ್ಲೇಖಿಸುತ್ತದೆ. ಇದುವರೆಗಾಗಲೇ ಚರ್ಚಿಸಿರುವಂತೆ ದೇವಿಯನ್ನು ಮೂರು ರೂಪಗಳಲ್ಲಿ ತಿಳಿಯಬಹುದು. ಮೊದಲನೆಯದು ಆಕೆಯ ಸ್ಥೂಲ ರೂಪವಾಗಿದ್ದು ಇದನ್ನು ಈ ಸಹಸ್ರನಾಮದ ಧ್ಯಾನದ ಶ್ಲೋಕಗಳಲ್ಲಿ ವರ್ಣಿಸಲಾಗಿದೆ. ದೇವಿಯ ಸೂಕ್ಷ್ಮರೂಪವು ಕಾಮಕಲಾ (ನಾಮ ೩೨೨) ಆಗಿದೆ ಮತ್ತು ಈ ನಾಮವು ಅದನ್ನು ಸೂಚಿಸುತ್ತದೆ. ದೇವಿಯ ಸೂಕ್ಷ್ಮಾತೀಸೂಕ್ಷ್ಮ ರೂಪವು ಆಕೆಯ ಕುಂಡಲಿನೀ ರೂಪ (ಕುಂಡಲಿನೀ ನಾಮ ೧೧೦) ಅಥವಾ ಪರಾ-ರೂಪ (ನಾಮ ೩೬೬) ಆಗಿದೆ. ಈ ಮೂರೂ ರೂಪಗಳನ್ನು ಈ ಸಹಸ್ರನಾಮದಾದ್ಯಂತ ಸಾಕಷ್ಟು ಚರ್ಚಿಸಲಾಗಿದೆ.

           ಕಠೋಪನಿಷತ್ತು (೧.೨.೨೦) ಈ ಸೂಕ್ಷ್ಮ ರೂಪವನ್ನು ವಿವರಿಸುತ್ತದೆ. ಅದು ’ಅಣೋಃ ಅಣಿಯಾನ್ ’ ಎಂದರೆ ಸಣ್ಣದಕ್ಕಿಂತ ಸಣ್ಣದು ಎಂದು ಹೇಳುತ್ತದೆ. ಆತ್ಮವು ಸಣ್ಣದಕ್ಕಿಂತ ಸಣ್ಣದು ಮತ್ತು ದೊಡ್ಡದಕ್ಕಿಂತ ದೊಡ್ಡದಾಗಿದ್ದು ಇದರಿಂದ ಎಲ್ಲ ಅಸ್ತಿತ್ವವು ಉದ್ಭವವಾಗುತ್ತದೆ ಮತ್ತು ಯಾರು ಈ ಪ್ರಕ್ರಿಯೆಯನ್ನು ಅರಿತಿದ್ದಾರೋ ಅವರನ್ನು ಆತ್ಮಸಾಕ್ಷಾತ್ಕಾರ ಹೊಂದಿದ ವ್ಯಕ್ತಿ ಎಂದು ಕರೆಯಲಾಗುತ್ತದೆ.

         ಮುಂಡಕ ಉಪನಿಷತ್ತು (೧.೧.೬) ಹೇಳುತ್ತದೆ, “ಸುಸೂಕ್ಷ್ಮಮ್” ಮತ್ತದರ ಅರ್ಥವೂ ಸಹ ಸಣ್ಣದಕ್ಕಿಂತ ಸಣ್ಣದಾಗಿದೆ. ಅದು ನಿತ್ಯವಾದದ್ದು; ಸೃಷ್ಟಿಗೆ ಕಾರಣವಾದದ್ದು ಮತ್ತು ಕೇವಲ ಅವನಿಗಾಗಿ ಯಾರು ಪರಿತಪಿಸುತ್ತಾರೆಯೋ ಅವರು ಮಾತ್ರ ಅವನನ್ನು (ಪರಬ್ರಹ್ಮನನ್ನು) ಸಾಕ್ಷಾತ್ಕರಿಸಿಕೊಳ್ಳಬಹುದು/ತಿಳಿಯಬಹುದು.

         ವಿಷ್ಣು ಸಹಸ್ರನಾಮದ ೪೫೭ ನಾಮವೂ ಸಹ ’ ಸೂಕ್ಷ್ಮಃ ಆಗಿದ್ದು ಅದು ಸಹ ಇದೇ ಅರ್ಥವನ್ನು ಕೊಡುತ್ತದೆ. ಅರ್ಜುನನು ಶ್ರೀ ಕೃಷ್ಣನನ್ನು ಭಗವದ್ಗೀತೆಯಲ್ಲಿ (೧೧.೧೮) ಸಂಭೋದಿಸುತ್ತಾ, "ನಿನ್ನ ರೂಪವನ್ನು ನೋಡುವುದು ಕಷ್ಟ, ಏಕೆಂದರೆ ಸೂರ್ಯನ ಪ್ರಭೆಯಂತೆ ಸುತ್ತಲೂ ಹರಡಿರುವ, ಉರಿಯುವ ಬೆಂಕಿಯಂತಹ ಅದರ ಪ್ರಖರ ಕಿರಣಗಳಿಂದಾಗಿ. ಆದರೂ ಸಹ ನಾನು ಈ ಪ್ರಜ್ವಲಿಸುವ ರೂಪವನ್ನು ಎಲ್ಲೆಡೆ ಕಾಣುತ್ತಿದ್ದೇನೆ."

         ಮೂಲಾಧಾರ ಚಕ್ರದಲ್ಲಿ ನಿರಂತರ ಇರುವ ಅಗ್ನಿಗೆ ಅರ್ಪಣೆಯಾಗುವ ಒಂದು ವಿಧವಾದ ಆಂತರಿಕ ಅಗ್ನಿಯ ಆಹುತಿಯನ್ನೂ ಸಹ ಸೂಕ್ಷ್ಮ ಎಂದು ಕರೆಯಲಾಗುತ್ತದೆ. ಇದನ್ನು ಮಾನಸಿಕವಾಗಿ ಕೈಗೊಳ್ಳುವುದರಿಂದ ಅದನ್ನು ಸೂಕ್ಷ್ಮ ಹೋಮ ಎಂದು ಕರೆಯುತ್ತಾರೆ (ಹೋಮವೆನ್ನುವುದು ದೇವತೆಗಳಿಗೆ ತುಪ್ಪವನ್ನು ಆಹುತಿಯಾಗಿ ಅಗ್ನಿಯಲ್ಲಿ ಅರ್ಪಿಸುವ ಕ್ರಿಯೆಯಾಗಿದೆ).

Vajreśvarī वज्रेश्वरी (468)

೪೬೮. ವಜ್ರೇಶ್ವರೀ

            ವಜ್ರೇಶ್ವರಿಯು ಆರನೇ ತಿಥಿ ನಿತ್ಯದೇವಿಯಾಗಿದ್ದು ಆಕೆಯನ್ನು ಶ್ರೀ ಚಕ್ರದ ಜಾಲಂದರ ಪೀಠದಲ್ಲಿ ಪೂಜಿಸಲಾಗುತ್ತದೆ, ಆಕೆಯು ವಿಶುದ್ಧಿ ಚಕ್ರ ಅಥವಾ ಕಂಠ ಚಕ್ರದಲ್ಲಿ ನಿವಸಿಸುತ್ತಾಳೆ. ಇದೇ ಶ್ರೀ ಚಕ್ರದ ಪೂಜೆಯಲ್ಲಿ ಹದಿನೆಂಟನೇ ಆವರಣದಲ್ಲಿ ಮಹಾ-ವಜ್ರೇಶ್ವರೀ ಎನ್ನುವ ದೇವತೆಯಿದ್ದು ಆಕೆಯನ್ನು ಶ್ರೀ ಚಕ್ರದ ಅತ್ಯಂತ ಒಳಗಿನ ತ್ರಿಕೋಣದಲ್ಲಿ ಪೂಜಿಸಲಾಗುತ್ತದೆ. ಈ ದೇವಿಯು ವಿದ್ಯಾ ತತ್ವ, ವಿಶ್ವವನ್ನು ಸುಸ್ಥಿತಿಯಲ್ಲಿಡುವುದು (ಪಾಲಿಸುವುದು), ಸ್ವಪ್ನಾವಸ್ಥೆ, ಜ್ಞಾನ ಶಕ್ತಿ, ದೇವಿಯ ಕಾಮಕಲಾ ರೂಪ ಮೊದಲಾದವುಗಳನ್ನು ಪ್ರತಿನಿಧಿಸುತ್ತದೆ. ಶ್ರೀ ಚಕ್ರ ಪೂಜೆಯನ್ನು ಸಂಪೂರ್ಣವಾಗಿ ವಿಭಿನ್ನ ದೃಷ್ಟಿಯಿಂದ ನೋಡಬೇಕಾಗಿದೆ. ಬ್ರಹ್ಮದ ವಿವಿಧ ಕ್ರಿಯೆಗಳನ್ನು ಪ್ರತಿನಿಧಿಸುವ ಹಲವಾರು ದೇವತೆಗಳಿದ್ದಾರೆ. ಅಂತಹ ಪ್ರತಿಯೊಂದು ಕ್ರಿಯೆಗಳನ್ನೂ ಸಹ ದೇವತಾ ರೂಪದಲ್ಲಿ ಪೂಜಿಸುವುದರಿಂದ ಅವುಗಳನ್ನು ಅರಿಯಬಹುದಾಗಿದೆ. ಬ್ರಹ್ಮದ ಅಂತಹ ಕ್ರಿಯೆಗಳನ್ನು ಅರಿಯದೇ ಕೇವಲ ಆಚರಣೆಗಳನ್ನು ಮಾಡುವುದರಿಂದ ಅದು ನಮ್ಮನ್ನು ಸಾಕ್ಷಾತ್ಕಾರದೆಡೆಗೆ ಕರೆದೊಯ್ಯುವುದಿಲ್ಲ. ಬ್ರಹ್ಮದ ಗುಣಲಕ್ಷಣಗಳನ್ನು ಪೂಜಿಸಿದ ನಂತರ, ಶ್ರೀ ಚಕ್ರದ ಮಧ್ಯದಲ್ಲಿರುವ ಬಿಂದುವಿನಲ್ಲಿ ಶಿವ ಮತ್ತು ಶಕ್ತಿಯರನ್ನು ಪೂಜಿಸಲಾಗುತ್ತದೆ; ಅದು ಪ್ರಕಾಶ ಮತ್ತು ವಿಮರ್ಶ ರೂಪದಲ್ಲಿರುವ ಸೃಷ್ಟಿಯ ಕೇಂದ್ರಬಿಂದುವಾಗಿದೆ.

           ವಜ್ರ ಎಂದು ಹೆಸರಿರುವ ಕಣ್ಣಿಗೆ ಕಾಣದ ಒಂದು ನದಿಯಿದೆ ಅಲ್ಲಿ ಹಂಸಗಳ ಮಧುರವಾದ ಸಂಗೀತ ಧ್ವನಿಯ ಅಲೆಗಳು ಹರಿಯುತ್ತಿರುತ್ತವೆ. ಈ ನದಿಯ ದಂಡೆಯಲ್ಲಿ ವಜ್ರಾಭರಣಗಳಿಂದ ಅಲಂಕೃತವಾದ ದೇವತೆಯೊಬ್ಬಳಿರುತ್ತಾಳೆ. ಈಕೆಯನ್ನು ದೇವತೆಗಳ ಅಧಿನಾಯಕನಾದ ಇಂದ್ರನು ಪೂಜಿಸುತ್ತಾನೆ.

          ಇಂದ್ರನು ತನ್ನ ಪ್ರಸಿದ್ಧವಾದ ಮಾರಣಾಂತಿಕ ಅಸ್ತ್ರವಾದ ವಜ್ರಾಯುಧವನ್ನು ಈ ವಜ್ರೇಶ್ವರಿಯನ್ನು ಕುರಿತು ತಪಸ್ಸು ಮಾಡುವುದರ ಮೂಲಕ ಪಡೆದುಕೊಂಡನೆಂದು ಹೇಳಲಾಗುತ್ತದೆ. ದೇವಿಯು ಇಂದ್ರನ ತಪಸ್ಸಿನಿಂದ ಪ್ರಸನ್ನಳಾಗಿ ಅವನಿಗೆ ಈ ಅಸ್ತ್ರವನ್ನು ಕರುಣಿಸಿದ್ದರಿಂದ ಅವನು ಹಿಂತಿರುಗಿ ತನ್ನ ಲೋಕಕ್ಕೆ ಹೋಗಲು ಸಾಧ್ಯವಾಯಿತಂತೆ.

******

         ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 464-468 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
No votes yet

Comments

Submitted by nageshamysore Fri, 09/13/2013 - 18:22

ಶ್ರೀಧರರೆ, ೧೧೭. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯಸಾರ ಪರಿಷ್ಕರಣೆಗೆ ಸಿದ್ದ.

ಲಲಿತಾ ಸಹಸ್ರನಾಮ ೪೬೪-೪೬೮
_______________________________________

೪೬೪. ಕಾಲಕಂಠೀ
ಕಾಲಕೂಟ ನುಂಗಿದ ಶಿವ, ನೀಲಿ ಹಾಲಾಹಲದ ಕಾಲಕಂಠ
ಸತಿ ಕಾಲಕಂಠೀ ತಡೆದ ಗರಳ, ಪತಿಪ್ರೇಮದ ಕುರುಹೆ ದಿಟ
ಶಿವ ಸೃಜಿಸಿ ದೈತ್ಯ ದಮನ ರೂಪ, ಕಾಳಿಯ ಜತೆಗಿಟ್ಟ ದೈವ
ಮೃದು ಮಧುರ ಲಲಿತಾ ಧ್ವನಿ ಮುಕುಟಾ, ಸಂಗೀತದ ಭಾವ

೪೬೫. ಕಾಂತಿಮತೀ
ಹೊಳೆಯುವದೆಷ್ಟು ತರಹದ ಕಾಂತಿ, ಫಳಫಳಿಸುವ ಲಲಿತಾ ಮತಿ
ಬುದ್ದಿವಂತಿಕೆಯಾಗಿ ಪ್ರಕಾಶಿಸುತ, ಜಗಕೆ ಹಂಚುವಳು ಕಾಂತಿಮತೀ
ಜ್ಞಾನದಾತೆ ಪಸರಿಸಲು ಜ್ಞಾನ, ನೀಡಿಹಳು ಬುದ್ದಿಮತ್ತೆ ಮೂಲದ್ರವ
ಕಾಂತಿಪ್ರಕಾಶ ರೂಪದಿ ಹರಡಿ, ಎಲ್ಲರ ಕೈಗೆಟುಕಿಸೊ ವಿಶಾಲಭಾವ!

೪೬೬. ಕ್ಷೋಭಿಣೀ
ಶಿವ ಸ್ಪಂದನದ ಕ್ಷೋಭೆ, ಸೃಷ್ಟಿಗವನ ಪ್ರಚೋದಿಸಿ ಲಲಿತೆ ಕ್ಷೋಭಿಣೀ
ಜೀವಾತ್ಮ ಅನಾವರಣಕೆ ಪ್ರಕೃತಿ, ಪುರುಷನ ಪ್ರೇರೇಪಿಸುವ ಧಾರಿಣಿ
ಸೂಕ್ಷ್ಮಾ ಅಭೌತಿಕ ವಸ್ತು, ಸ್ಥೂಲರೂಪವಾಗಿ ಕರ್ಮಾತ್ಮ ಅನಾವರಣ 
ಶಿವಕ್ರಿಯಾಶೀಲಾಂಶ ಸ್ಪಂದನ ಪ್ರಕ್ರಿಯೆ, ಸೃಷ್ಟಿಕ್ರಿಯೆಗಂಕುರಾರ್ಪಣ!

೪೬೭. ಸೂಕ್ಷ್ಮರೂಪಿಣೀ
ತ್ರಿರೂಪದೆ ಪ್ರಸ್ತುತೆ ಲಲಿತೆ, ಸ್ಥೂಲ, ಸೂಕ್ಷ್ಮಾತಿಸೂಕ್ಷ್ಮ, ಸೂಕ್ಷ್ಮ
ಕಾಮಕಲಾ ಸೂಕ್ಷ್ಮರೂಪ, ಕುಂಡಲಿನೀ-ಪರಾ ಸೂಕ್ಷ್ಮಾತಿಸೂಕ್ಷ್ಮ
ಅಣುವಿನಣು ದೈತ್ಯಕುದೈತ್ಯ, ಸಕಲ ಅಸ್ತಿತ್ವಮೂಲ ನಿತ್ಯಸತ್ಯ
ಮೂಲಾಧಾರಾಗ್ನಿಗಾಹುತಿಸೂಕ್ಷ್ಮ, ಪ್ರಖರದೆ ಆತ್ಮಸಾಕ್ಷಾತ್ಕಾರ!

೪೬೮. ವಜ್ರೇಶ್ವರೀ
ವಿದ್ಯಾತತ್ವ-ವಿಶ್ವಪಾಲನೆ-ಜ್ಞಾನಶಕ್ತಿ-ಸ್ವಪ್ನಾವಸ್ಥೆ-ಕಾಮಕಲಾ ಪ್ರತಿನಿಧಿ
ಶ್ರೀ ಚಕ್ರ ಷಡ್ ತಿಥಿನಿತ್ಯದೇವಿ, ಜಾಲಂದರಪೀಠದೆ ನೆಲೆ ಚಕ್ರ ವಿಶುದ್ಧಿ
ಒಳತ್ರಿಕೋಣಪೂಜಿತೆ ದೇವಿ ಮಹಾವಜ್ರೇಶ್ವರಿ, ಬ್ರಹ್ಮದ ಕ್ರಿಯೆಯರಿಸಿ
ಹಂಸದನಿ ನದಿತಟದೆ ಇಂದ್ರಪೂಜಿತೆ ಲಲಿತೆ, ವಜ್ರಾಯುಧದಿ ಹರಸಿ!
 
ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು