'ಕೃಷ್ಣ....ಕೃಷ್ಣ....ಕೃಷ್ಣ' - ಆರಂಭ

'ಕೃಷ್ಣ....ಕೃಷ್ಣ....ಕೃಷ್ಣ' - ಆರಂಭ

ಚಿತ್ರ

'ಕೃಷ್ಣ....ಕೃಷ್ಣ....ಕೃಷ್ಣ'

=============
ಆರಂಭ
=====

 

 

ಇಂದು ಅದೇಕೊ ಬಹಳಷ್ಟು ಬರಹಗಳು ವಿವಾದಕ್ಕೆ ಈಡಾಗುತ್ತವೆ. ಅಥವ ಮತ್ತೊಂದು ರೀತಿ ಹೇಳುವದಾದರೆರೆ ವಿವಾದ ಸೃಷ್ಟಿಯಾಗುವಂತೆ ಬರಹಗಳನ್ನು , ಕಾದಂಬರಿಗಳನ್ನು ರಚಿಸಲಾಗುತ್ತೆ. ಯಾವ ಹಿಂದೂ ಧರ್ಮದ ಶಕ್ತಿಗಳು ವ್ಯಕ್ತಿಗಳು ಒಂದು ಕಾಲಕ್ಕೆ ಪೂಜಿಸಲ್ಪಟ್ಟರೋ ಅವರೆಲ್ಲ ಇಂದು ಅವಹೇಳನಕ್ಕೆ ಒಳಗಾಗುತ್ತಿದ್ದಾರೆ .
ಅಂತಹ ಅವಹೇಳನದ ಕಾರ್ಯ ನಡೆದಾಗ ಅದನ್ನು ಅತ್ತ ಉಗ್ರವಾಗಿ ಪ್ರತಿಭಟಿಸುವ ಶಕ್ತಿಯೂ ಇಲ್ಲದೆ ಇತ್ತ ಅದನ್ನು ನಿರ್ಲಕ್ಷಮಾಡಿ ದೂರಸರಿಸುವ ಮನೋ ದಾರ್ಢ್ಯವು ಇಲ್ಲದೆ ಹಪಹಪಿಸುವ   ಸ್ವಭಾವದಿಂದಾಗಿ   ಸದಾ ವಾದ ವಿವಾದಗಳು ಇಂದಿನ ನಮ್ಮ ಸಮಾಜದಲ್ಲಿ ಎದ್ದು ಕಾಣುವುದು.
ಪೌರಾಣಿಕ ಪಾತ್ರಗಳಾದರೋ ಯಾವುದೋ ಕಾಲಕ್ಕೆ ಸಿಮೀತವಾಗಿದ್ದವರು. ಆಗ ನಿಜವಾಗಿ ಎನು ನಡೆಯಿತು ಎಂದು ಯಾರು ಹೀಗೆ ಎಂದು ಕುರಿತಿಟ್ಟು ಹೇಳಲಾರರು , ಪುರಾಣಗಳನ್ನು ಬರೆದವರೂ ಸಹ  ಯಾವುದೋ ಕಾಲದವರೇ. ಸತ್ಯವಾದ ಘಟನೆಗಳು ಅದನ್ನು ನಿರೂಪಿಸುವಾಗ ಸೇರಿಕೊಂಡ ಕಲ್ಪನೆಗಳು ಎಲ್ಲವೂ ಸೇರಿ ಪುರಾಣದ ಕತೆಗಳು ಕೆಲವೊಮ್ಮೆ ಗೋಜಲು.

ಹಾಗೆಂದು ಅವುಗಳನ್ನು ತಿರಸ್ಕರಿಸಬೇಕೆ. ಹಾಗು ಅವೆಲ್ಲ ಅಸತ್ಯ ಎಂದು ಘೋಷಿಸಬೇಕೆ. ಅದರ ಅಗತ್ಯವಾದರು ಏನಿದೆ. ಅದನ್ನು ಹೇಗಿದೆಯೋ ಹಾಗೆ ಓದುವುದು.ಅರ್ಥಮಾಡಿಕೊಳ್ಳುವುದು ಇಂತಹವನ್ನು ಮಾಡಿದರೆ ಸಾಕು, ಬದಲಾಗಿ ಅದನ್ನೆಲ್ಲ ಸುಳ್ಳು ಎಂದು ವಾದಿಸುವ ಬರದಲ್ಲಿ ಎಲ್ಲವನ್ನು ಅಲ್ಲಗೆಳೆಯುತ್ತ ಹೋದಲ್ಲಿ ಸಮಾಜದಲ್ಲಿ ಅಶಾಂತಿಯೊಂದು ತಲೆದೋರುವುದು. ಹಿಂದೆಲ್ಲ ಕೃಷ್ಣನ ಕತೆಯಾಗಲಿ ರಾಮನ ಕತೆಯಾಗಲಿ ಹಲವರು ತಮಗೆ ತೋರಿದಂತೆ ಅರ್ಥಕೊಡುತ್ತ ವಿವರಿಸಲು ಯತ್ನಿಸುತ್ತಿರುವರೆ. ಅದಕ್ಕಾಗಿ ರಾಮಾಯಣಗಳು ಭಾರತದಲ್ಲಿ ಅಸಂಖ್ಯಾತ. ಹಾಗೆಯೆ ಕೃಷ್ಣನ ಕಾಲದ ಘಟನೆಗಳು ಸಹ ಹಲವು ಅದ್ಭುತಗಳನ್ನು ಪವಾಡ ಸದೃಷ್ಯ ನಿರೂಪಣೆಗಳನ್ನು ಒಳಗೊಂಡಿರುವುದೆ. ಆದರೆ ಕೃಷ್ಣನನ್ನೆ ಒಬ್ಬ ರಾಕ್ಷಸ ಎನ್ನುವ ಮಾತನ್ನು ಒಪ್ಪಲಾಗದು. ಅವನ ಜೀವನದ ಹೋರಾಟಗಳನ್ನೆಲ್ಲ ವಿಫಲ ಎಂದು ಕರೆಯಲಾಗದು.  ಆಗ ಇದ್ದ ಸಾಮಾಜಿಕ ರಾಜಕೀಯ ಪರಿಸ್ಥಿಥಿಗಳೆಲ್ಲ ನಮಗೆ ಅರ್ಥವಾಗದು. ಇಂದಿನ ಪರಿಸ್ಥಿಥಿಗಂತು ಅದು ಹೊಂದಿಕೆಯಾಗದು. ಅವನ ಮಾತುಗಳನ್ನು ಅವನ ಕಾಲದಲ್ಲಿ ನಿಂತು ಅರ್ಥಮಾಡಿಕೊಳ್ಳುವ ಸಹನೆಯಂತು ಈಗ ಯಾರಿಗೂ ಇಲ್ಲ. ಹಾಗೆ ಅವನ ಮಾತುಗಳನ್ನು ಅವನದೆ ಭಾವನೆಯ ಹಿನ್ನಲೆಯಲ್ಲಿ ಅರ್ಥಮಾಡಿಕೊಳ್ಳುವುದು ದುಸ್ತರವೆ.

ಹಾಗೆ ನೋಡಿದರೆ ಎಲ್ಲ ಧರ್ಮ ಗ್ರಂಥಗಳಲ್ಲಿ ಸೇರಿಕೊಂಡಿರುವ ಉಪಕತೆಗಳು ಸಹ ಕಲ್ಪನೆಯಿಂದ ಸೇರಿಕೊಂಡಿರುವಂತಹುದೆ. ನಮ್ಮ ಪುರಾಣದ ಪಾತ್ರಗಳಾಗಲಿ , ಗ್ರೀಕ್ ಮೊದಲಾದ ಪೌರಾಣಿಕ ಪಾತ್ರಗಳಾಗಲಿ ಸದಾ ಒಂದೆ ರೀತಿಯ ಕಲ್ಪನೆಗಳೆ. ನಮ್ಮಲ್ಲಿ ನಾಗಲೋಕವಿದ್ದರೆ, ಯಮಲೋಕವಿದ್ದರೆ ಬೇರೆ ಬೇರೆ ಧರ್ಮಗಳಲ್ಲಿ ಅವರದೆ ಆದ ಲೋಕಗಳು ಇರುತ್ತವೆ. ನಮ್ಮಲ್ಲಿ ಒಬ್ಬಾಕೆ ಸೂರ್ಯನ ವರದಿಂದ ಮಕ್ಕಳನ್ನು ಪಡೆದರೆ. ಅದೇ ರೀತಿಯ ಘಟನೆಗಳು ಬೇರೆ ಧರ್ಮದಲ್ಲೂ ಕಾಣಬಹುದು. ಹಾಗೆಂದು ಧರ್ಮಗಳೆಲ್ಲ ವ್ಯಭಿಚಾರವೆನ್ನಲಾದಿತೆ.  ನಮ್ಮಲ್ಲಿ ಆರ್ಧಮನುಷ್ಯ ಅರ್ಧಸಿಂಹದ ದೇಹದ ದೈವವಿದ್ದರೆ ಬೇರೆ ಧರ್ಮಗಳಲ್ಲಿ ಹಾವಿನ ತಲೆಯ ದೇವತೆಗಳಿರುವದಿಲ್ಲವೆ. ಹಾಗೆಂದು ಸದಾ ಒಂದು ಧರ್ಮವನ್ನು ನಿಂದಿಸುತ್ತ, ಒಂದು ದೈವವನ್ನು ಸದಾ ದ್ವೇಷಮಾಡುತ್ತ ಇರುವ ಅಗತ್ಯವಾದರು ಏನು ನನಗರ್ಥವಾಗುವದಿಲ್ಲ.

  ಕೃಷ್ಣನಂತ ಪುರಾಣದ ಅಥವ ಇತಿಹಾಸದ ಪುರುಷನನ್ನು ಇಂದು ನಾವು ನಿಂದಿಸಿದರೆ, ಅವನು ಬಂದು ತನ್ನನ್ನು ಸಮರ್ಥಿಸಿಕೊಳ್ಳಲಾರ. ಅವನು ಎದುರಿಗೆ ಬರಲಾರದ ಸ್ಥಿಥಿ ಇರುವಾಗ ಅವನನ್ನು ನಿಂದಿಸುತ್ತ ಹೋದರೆ ಅದಕ್ಕೆ ಏನು ಹೇಳುವುದು. ಹಾಗೆಯೆ ಗಣೇಶನಾದರು ಅವನನ್ನು ಯಾರೋ ಒಬ್ಬರು ಬೈದರೆ ಅವನು ತಾನೆ ಏನು ಮಾಡಿಯಾನು. ಮನುಷ್ಯ ತನ್ನ ನೆಮ್ಮದಿಗಾಗಿ , ಶಾಂತಿಗಾಗಿ, ತನ್ನನ್ನು ಕಾಪಾಡುವದೆಂದು ನಂಬಿ ತಾನೆ ನಿರ್ಮಿಸಿಕೊಂಡ ದೈವಭಾವವನ್ನು ತಾನೆ ಖಂಡಿಸುತ್ತ ಟೀಕಿಸುತ್ತ ಹೋದಲ್ಲಿ ದೇವರು ಖಂಡಿತ ಎದುರಿಗೆ ಬಂದು ತನ್ನನ್ನು ಸಮರ್ಥಿಕೊಳ್ಳಲಾರನು.  ಯಾವ ಧರ್ಮ ದೇವರು ಪರಲೋಕ ಇಂತ ಕಲ್ಪನೆಗಳೆಲ್ಲ ಮನುಷ್ಯನ ಶಾಂತಿಗಾಗಿ ನೆಮ್ಮದಿಗಾಗಿ ಆತ್ಮವಿಶ್ವಾಸ ಹೆಚ್ಚಿಸುವದಕ್ಕಾಗಿ ಬೆಳಸಲಾಯಿತು ಇಂದೆ ಅದೇ ದರ್ಮ ದೇವರ ಇಂತಹ ಕಲ್ಪನೆಗಳೆಲ್ಲ ಅದೆ ಮನುಷ್ಯನ ನೆಮ್ಮದಿ ಕೆಡಿಸಲು ವಿಶ್ವಾಸ ಹಾಳುಮಾಡಲು , ಪರಸ್ಪರ ಅಪನಂಭಿಕೆ ಹೆಚ್ಚಿಸಲು ಕಾರಣವಾಗುತ್ತಿರುವುದು ಮಾತ್ರ ಕಾಲದ ವೈರುಧ್ಯ

ಧರ್ಮ  ಪುರಾಣ ದೇವರು ಇವೆಲ್ಲ ಮನುಷ್ಯ ಸಮಾಜದಲ್ಲಿನ ಶಾಂತಿಗಾಗಿ, ಕುಸಿದು ಹೋಗುತ್ತಿರುವ ತನ್ನ ಆತ್ಮಶಕ್ತಿಯನ್ನು ಎತ್ತಿನಿಲ್ಲಿಸುವದಕ್ಕಾಗಿ ಆದಾರ ಮಾಡಿಕೊಂಡ ನಂಬುಗೆಗಳು, ಇಂತಹ ದರ್ಮ ಪುರಾಣ ಬೋಧನೆ ಇಂತಹುವೆಲ್ಲ ಈಗ ಒಬ್ಬರು ಮತ್ತೊಬ್ಬರನ್ನು ಅವಹೇಳನ ಮಾಡುವದಕ್ಕಾಗಿ ಬಳಸುತ್ತಿರುವುದು, ಅಥವ ತಾನು ನಂಬಿದ ಮತ್ತೊಂದು ಸತ್ಯವನ್ನು  ಸರಿ ಎಂದು ನಿರೂಪಿಸಲು ಇರುವ ಮತ್ತೊಂದು ಸತ್ಯವನ್ನು ಸುಳ್ಳು ಎಂದು ಹೇಳುವುದು ನಡೆಯುತ್ತಲೆ ಹೋಗುತ್ತಿದೆ.

ಅಂತಿಮ ಸತ್ಯ ಮಾತ್ರ ಯಾರಿಗೂ ಎಟುಕದು ಎನ್ನುವದನ್ನು ಎಲ್ಲರೂ ಅರ್ಥಮಾಡಿಕೊಂಡಲ್ಲಿ, ಹಾಗೆ ಮತ್ತೊಬ್ಬರ ನಂಬಿಕೆಗಳ ಬಗ್ಗೆ ನಾವು ಸ್ವಲ್ಪ ಸಹನೆ ಬೆಳೆಸಿಕೊಂಡಲ್ಲಿ,  ಸಮಾಜದಲ್ಲಿ ಸ್ವಲ್ಪ ಮಟ್ಟಿಗಾದರೂ ಶಾಂತಿ ನೆಲೆಸೀತು.

ಹಾಗೆ ನನಗೆ ಅನ್ನಿಸಿದ್ದು  ತೀರ ನಿಂದನೆಗೆ ಒಳಗಾಗಿರುವ ಕೃಷ್ಣ ಹಾಗು ಗಣೇಶ ಇವರೆಲ್ಲ ಇಂದು ಎದುರಿಗೆ ಬಂದು ಮಾತನಾಡಲು ತಮ್ಮ ಅಂದಿನ ಮನಸ್ಥಿಥಿ ಹೇಳಿಕೊಳ್ಲಲು ಸಾದ್ಯವಾದಲ್ಲಿ ........ ಇಂತಹ ಒಂದು ಕಲ್ಪನೆಯೆ
'ಕೃಷ್ಣ....ಕೃಷ್ಣ....ಕೃಷ್ಣ"  ಬರಹಕ್ಕೆ ಮೂಲ ಕಾರಣ.

ಹಾಗೆಯೆ ಈ ಬರಹ ಪೂರ್ಣವಾಗಿ ಸಂಭಾಷಣೆಯ ರೂಪದಲ್ಲಿಯೆ ಸಾಗಿದೆ. ಇಲ್ಲಿ ನಾನು ಯಾವ ಮಾತಿಗು ಸಾಕ್ಷಿ ಅಥವ ಟಿಪ್ಪಣಿ ಕೊಡಲಾರೆ. ಇಲ್ಲಿರುವ ಯಾವ ಮಾತನ್ನು ಯಾವುದೆ ಭಾವಗಳಿಗೂ ಮಾತುಗಳಿಗೂ ಯಾವುದೆ ಪುಸ್ತಕದ ಗ್ರಂಥಗಳ ಆಧಾರವಿಲ್ಲ. ಎಲ್ಲವೂ ಕೇವಲ ನನ್ನ ಕಲ್ಪನೆ.  

ಯಾವುದೆ ಮಾತು ಒಪ್ಪಿತವಾದರೆ ಸ್ವೀಕರಿಸಿ. ಇಲ್ಲವೆನ್ನುವದಾದರೆ  ಓದಿ ಮರೆತುಬಿಡಿ. ಮುಂದಿನ ಬಾಗಗಳಲ್ಲಿ ನಿರೀಕ್ಷಿಸಿ

 'ಕೃಷ್ಣ....ಕೃಷ್ಣ....ಕೃಷ್ಣ'

10:09:2013:
20:26:

Rating
No votes yet

Comments

Submitted by makara Fri, 09/13/2013 - 13:33

ಪಾರ್ಥ ಸರ್,
ಕೃಷ್ಣ, ಕೃಷ್ಣ ಒಂದು ಅತ್ಯುತ್ತಮ ವಿಚಾರಯುಕ್ತ ಲೇಖನ. ನಿಮ್ಮ ಕಳಕಳಿ ನನಗೆ ಖಂಡಿತಾ ಅರ್ಥವಾಗುತ್ತದೆ, ಇದೇ ವಿಧವಾದ ಕಾಳಜಿಯಿಂದಾಗಿ ಕೃಷ್ಣನನ್ನು ನಿಂದಿಸುವವರಿಗೆ ಸೂಕ್ತವಾದ ಉತ್ತರವನ್ನು ಸ್ವಾಮಿ ಹರ್ಷಾನಂದರು ಬರೆದ ಲೇಖನವನ್ನು ಪ್ರಕಟಿಸುವುದರ ಮೂಲಕ ಹಿಂದೆ ಸಂಪದದಲ್ಲಿ ಪ್ರಕಟಿಸಿದ್ದೆ. ಅದನ್ನು ನೀವೂ ಸಹ ಓದಿದ್ದೀರೆಂದು ತಿಳಿಯುತ್ತೇನೆ. ಅದರ ಮೊದಲನೇ ಕಂತಿನ ಕೊಂಡಿ ಇಲ್ಲಿದೆ http://sampada.net/b...
ಮೂರ್ಖರು ಆ ಲೇಖನವನ್ನು ಓದಿ ಸುಧಾರಿಸುತ್ತಾರೆನ್ನುವುದು ನನ್ನ ಆಶಯವಲ್ಲ, ಆದರೆ ಅಮಾಯಕರು ಈ ಮೂರ್ಖರು ಹೇಳುವ ಅರ್ಧಂಭರ್ದ ಸತ್ಯಗಳನ್ನು ಓದಿಕೊಂಡು ತಪ್ಪು ಹಾದಿ ಹಿಡಿಯಬಾರದೆನ್ನುವುದೇ ಆ ಲೇಖನವನ್ನು ಪ್ರಕಟಿಸುವ ಉದ್ದೇಶ ಮತ್ತು ಸಜ್ಜನರಿಗೆ ತಾವು ಅನುಸರಿಸುತ್ತಿರುವ ದಾರಿ ಸರಿಯಾಗಿದೆ ಎನ್ನುವುದನ್ನು ದೃಢ ಪಡಿಸುವುದೂ ಅದರ ಹಿಂದಿನ ಉದ್ದೇಶವಾಗಿತ್ತು.
ಒಮ್ಮೆ ಕೃಷ್ಣ ದುರ್ಯೋಧನನನ್ನು ಕರೆದು ಒಬ್ಬನೇ ಒಬ್ಬ ಒಳ್ಳೆಯವನನ್ನು ಹುಡುಕಿಕೊಂಡು ಬಾ ಎಂದನಂತೆ. ಆಗ ಅವನು ತನ್ನ ರಾಜ್ಯವನ್ನೆಲ್ಲಾ ತಿರುಗಿ ಒಬ್ಬನೇ ಒಬ್ಬ ಒಳ್ಳೆಯವನು ತನಗೆ ಸಿಗಲಿಲ್ಲವೆಂದು ಗೋಗರೆದನಂತೆ. ಅದೇ ವಿಧವಾಗಿ ಕೃಷ್ಣನು ಧರ್ಮರಾಯನನ್ನು ಕರೆದು, ಒಬ್ಬನೇ ಒಬ್ಬ ಕೆಟ್ಟ ವ್ಯಕ್ತಿಯನ್ನು ಹುಡುಕಿಕೊಂಡು ಬಾ ಎಂದನಂತೆ. ಆಗ ಅವನೂ ಸಹ ತನ್ನ ರಾಜ್ಯವನ್ನೆಲ್ಲಾ ಸುತ್ತಾಡಿ ತನಗೆ ಒಬ್ಬನೇ ಒಬ್ಬನು ಕೆಟ್ಟ ವ್ಯಕ್ತಿ ಕಂಡು ಬರಲಿಲ್ಲ ಎಂದು ಜೋಲು ಮೋರೆ ಹಾಕಿಕೊಂಡು ಹಿಂದಿರುಗಿದನಂತೆ. ಇದು ಪ್ರಪಂಚವನ್ನು ನಾವು ಯಾವ ದೃಷ್ಟಿಕೋನದಿಂದ ನೋಡುತ್ತೇವೆಯೋ ಅದು ಹಾಗೇ ನಮಗೆ ಗೋಚರಿಸುತ್ತದೆ ಎನ್ನುವ ನೀತಿಯನ್ನು ತಿಳಿಸುತ್ತದೆ.
ಮೇಲಿನ ಕಥೆ ನಿಜವಾಗಿ ನಡೆದದ್ದೂ ಅಲ್ಲ ಹಾಗಂತ ಅದು ಅಸತ್ಯವೂ ಅಲ್ಲ. ಒಬ್ಬರಿಗೆ ಒಂದು ವಿಚಾರವನ್ನು ತಿಳಿ ಹೇಳಬೇಕಾದರೆ ಇಂತಹ ಕಥೆಗಳನ್ನು ಹೊಸೆಯುತ್ತಿದ್ದರು. ಯಾರೋ ಒಬ್ಬನ ಹೆಸರನ್ನು ಪ್ರಸ್ತಾಪಿಸಿದರೆ ಅದು ಜನ ಸಾಮಾನ್ಯರ ಮನಸ್ಸಿಗೆ ನಾಟುವುದಿಲ್ಲ. ಅದೇ ಒಬ್ಬ ಚಾರಿತ್ರ್ಯಾ ಮತ್ತು ಚರಿತ್ರೆಯುಳ್ಳ ಪುರುಷನ ಹೆಸರನ್ನು ಹೇಳಿ ಅದನ್ನು ಹೇಳಿದರೆ ಅದಕ್ಕೊಂದು ಅರ್ಥ ಮತ್ತು ಗೌರವಗಳು ಬರುತ್ತವೆ. ಹಾಗೆಯೇ ಇಂತಹ ವಿಷಯಗಳನ್ನು ಕಥೆಯ ಮೂಲಕ ಹೇಳಿದಾಗ ನೆನಪಿಟ್ಟುಕೊಳ್ಳುವುದು ಸುಲಭ. ಇದು ಪುರಾಣಗಳ ಹಿಂದಿರುವ ಉದ್ದೇಶ. ಕಹಿಯಾದ ಮಾತ್ರೆಗೆ ಸಿಹಿ ಸಕ್ಕರೆಯ ಲೇಪನವಿದ್ದಂತೆ ಈ ಪುರಾಣಗಳು. ಹೇಗೆ ಮಾತ್ರೆಯು ಕಾಯಿಲೆಯಿಂದ ನರಳುವ ಮನುಷ್ಯನಿಗೆ ಉಪಷಮನ ಮಾಡಬಲ್ಲದೋ ಹಾಗೆ ಈ ಪುರಾಣದ ಹೂರಣಗಳಿರುತ್ತವೆ. ಆದರೆ ಇಂದಿನವರು ಬಹುತೇಕ ಎಲ್ಲಾ ಮದ್ದುಗಳಿಗೂ ಅಲರ್ಜಿಯನ್ನು ಬೆಳೆಸಿಕೊಂಡಿರುವುದರಿಂದ ಅದನ್ನು ಅವರದೇ ಪರಿಭಾಷೆಯಲ್ಲಿ ಹೇಳುವುದಕ್ಕೆ ಮತ್ತೊಂದು ವಿಧವಾದ ಪುರಾಣವನ್ನೇ ಹುಟ್ಟು ಹಾಕಬೇಕೇನೋ :))
ಈ ವಿಷಯವನ್ನು ಇಲ್ಲಿ ಏಕೆ ಪ್ರಸ್ತಾಪಿಸುತ್ತಿದ್ದೇನೆಂದರೆ ಎಲ್ಲಾ ಧರ್ಮ ಗ್ರಂಥಗಳಲ್ಲೂ ಒಳಿತು ಕೆಡಕುಗಳಿರಬಹುದು. ಆದರೆ ಹಂಸ ಕ್ಷೀರ ನ್ಯಾಯದಂತೆ, ಅದರಲ್ಲಿರುವ ಒಳಿತನ್ನು ಮಾತ್ರ ಸ್ವೀಕರಿಸಿ ಕೆಟ್ಟದಿದ್ದರೆ ಅದನ್ನು ಕೈಬಿಡುವುದು ಒಳಿತಲ್ಲವೇ? ಅದನ್ನು ಬಿಟ್ಟು ಅದರಲ್ಲಿರುವ ಹುಳುಕುಗಳನ್ನೇ ಹುಡುಕಿ ಪ್ರಸಿದ್ಧರಾಗುವ ತವಕವೋ ಅಥವಾ ತಪ್ಪಾಗಿ ಅರ್ಥೈಸಿಕೊಂಡು ತಾವೇನೋ ಸಾಧಿಸಿ ಬಿಟ್ಟೆವೆಂದು ಹಿಗ್ಗುವ ಹುನ್ನಾರವೋ ಅರ್ಥವಾಗುತ್ತಿಲ್ಲ. ಇದೇ ಕೆಲಸವನ್ನು ಬೇರೆ ಧರ್ಮಗಳ ವಿಷಯದಲ್ಲಿ ಮಾಡುವ ತಾಕತ್ತು ಅಥವಾ ಗುಂಡಿಗೆ ಖಂಡಿತ ಇವರಿಗಿಲ್ಲ; ಒಂದು ವೇಳೆ ಹಾಗೆ ಮಾಡಿದರೆ ಜನಸಂಖ್ಯೆಯ ಲೆಕ್ಕದಲ್ಲಿ ಒಂದು ಸಂಖ್ಯೆ ಕಡಿಮೆಯಾಗುತ್ತದೆಂದು ಇವರು ಬಲ್ಲರು. ಇದರಿಂದಲೇ ಅರ್ಥವಾಗುತ್ತದೆ ಯಾರು ವಿಶಾಲ ಮನೋಭಾವದವರು, ಪರಧರ್ಮ ಸಹಿಷ್ಣುಗಳು ಮತ್ತು ವೈಚಾರಿಕತೆಯನ್ನು ಪ್ರಚೋದಿಸುವವರು ಎನ್ನುವುದು. ನಮ್ಮ ಧರ್ಮ ನಮಗೆ ಹೇಳಿಕೊಟ್ಟಂತೆ ಒಳ್ಳೆಯ ವಿಚಾರಗಳು ಅದೆಲ್ಲಿಂದಲೇ ಬರಲಿ ಅದನ್ನು ಮುಕ್ತವಾಗಿ ಸ್ವೀಕರಿಸೋಣ. ಬೇರೆಯ ಧರ್ಮದಲ್ಲಿ ಇರುವ ಸದ್ಗುಣಗಳನ್ನೂ ರೂಢಿಸಿಕೊಳ್ಳೋಣ. ನಮ್ಮ ಸ್ವಭಾವವನ್ನು ನಾವೇಕೆ ಬಿಡಬೇಕು ಅಲ್ಲವೇ? ಅದೇ ವಿಧವಾಗಿ ಕೃಷ್ಣನೂ ಸಹ ಶಿಶುಪಾಲ ನೂರಾ ಒಂದು ತಪ್ಪು ಮಾಡುವವರೆಗೆ ಸುಮ್ಮನಿದ್ದ ಆಮೇಲೆ ಅವನ ಶಿರಚ್ಛೇದ ಮಾಡಿದ. ನಮ್ಮ ಸಹನೆಗೂ ಒಂದು ಮಿತಿಯಿದೆಯಲ್ಲವೇ ಅದು ಮೀರಿ ಹೋದ ಮೇಲೆ ನಾವೂ ಕೃಷ್ಣನಂತೆ ಶಿಶುಪಾಲರನ್ನು ಸೂಕ್ತವಾಗಿ ಶಿಕ್ಷಿಸೋಣ :) ಆದ್ದರಿಂದ ಸಜ್ಜನರು ಕಳವಳಗೊಳ್ಳುವ ಕಾರಣವೇನೂ ಇಲ್ಲ; ಎಲ್ಲದಕ್ಕೂ ಸಮಯ ಬರುತ್ತದೆ.
ಒಂದು ವೇಳೆ ಕೃಷ್ಣ ಪ್ರಹ್ಲಾದನಂತೆ ಜಾತಿಯಿಂದ ರಾಕ್ಷಸನಾಗಿದ್ದರೂ ಅದು ನಮಗೆ ಗೌಣ. ನಾವು ಮಾನ್ಯ ಮಾಡುತ್ತಿರುವುದು ಅವನ ಜಾತಿಯನ್ನಲ್ಲ ಅವನ ಗುಣಗಳನ್ನು. ಕೇವಲ ಜಾತಿಯಿಂದ ಯಾರೂ ಶ್ರೇಷ್ಠರೆಂದು ನಮ್ಮ ಭರತ ಖಂಡದಲ್ಲಿ ಮಾನ್ಯ ಮಾಡಲ್ಪಟ್ಟಿಲ್ಲ ಅದು ಹಾಗಾಗದು ಕೂಡಾ. ಒಂದು ವೇಳೆ ಹಾಗೆ ಮಾಡಿದ್ದರೆ ಮಹಾಭಾರತವನ್ನು ರಚಿಸಿದ ಮತ್ತು ವೇದಗಳಿಗೆ ಬ್ರಹ್ಮಸೂತ್ರದ ರೂಪದಲ್ಲಿ ಭಾಷ್ಯ ಬರೆದ ಹುಟ್ಟಿನಿಂದ ಬೆಸ್ತನಾದ ವ್ಯಾಸನಾಗಲಿ ಅವನ ಕೃತಿಗಳಾಗಲಿ ಮಾನ್ಯರಾ(ವಾ)ಗುತ್ತಿರಲಿಲ್ಲ. ಅದೇ ವಿಧವಾಗಿ ಬೇಡನಾದ ವಾಲ್ಮೀಕಿ ಬರೆದ ರಾಮಾಯಣವನ್ನಾಗಲಿ ಮಾನ್ಯ ಮಾಡುತ್ತಿರಲಿಲ್ಲ. ತಾನು ಯಾರಿಗೆ ಹುಟ್ಟಿದವನೆಂದೇ ಗೊತ್ತಿಲ್ಲದ ಜಾಬಾಲಿಯೂ ಒಂದು ಸ್ಮೃತಿಯನ್ನು ರಚಿಸಿದ್ದಾನೆ. ಅವನು ಪ್ರಾಮಾಣಿಕವಾಗಿ ತನ್ನ ತಂದೆ ಯಾರೋ ತಿಳಿಯದು ಆದರೆ ತನ್ನ ತಾಯಿಯ ಹೆಸರು ಜಬಾಲ ಎಂದು ನಿಜವನ್ನೇ ನುಡಿದ. ಅವನ ಸತ್ಯಸಂದತೆಯಿಂದಾಗಿ ಆತ ಸತ್ಯಕಾಮ ಜಾಬಾಲಿ ಎಂದೇ ಖ್ಯಾತನಾಗಿದ್ದಾನೆ. ಹಾಗೆ ಜಾತಿಯಿಂದ ಮಾನ್ಯತೆ ಪಡೆಯುವುದಾಗಿದ್ದರೆ ಎಲ್ಲಾ ಕೃತಿಗಳನ್ನೂ ಬ್ರಾಹ್ಮಣರೇ ರಚಿಸಬೇಕಾಗಿದ್ದಿತು ಮತ್ತು ಅವರು ಬರೆದ ಗ್ರಂಥಗಳಷ್ಟೇ ಮಾನ್ಯವಾಗಬೇಕಾಗಿದ್ದಿತು.
"ಅವರವರ ಭಾವಕ್ಕೆ ಅವರವರ ಭಕತಿಗೆ ಶರಣಾಗಿ ಇರುತಿಹನು ಶಿವಯೋಗಿ"
"ಭವಾನೀ ಭಾವನಾಗಮ್ಯ" ಎನ್ನುವ ಪ್ರಸಿದ್ಧ ನುಡಿಗಟ್ಟುಗಳೇ ಇವೆ.
ಹಾಗಾಗಿ ಅವರವರ ಆಲೋಚನೆಯ ಮಟ್ಟಕ್ಕೆ ಅವರವರೇ ಚಿಂತಿಸುತ್ತಾರೆ; ಆದರೆ ನೀವು ಅವರ ಆಲೋಚನೆಯ ಮಟ್ಟವನ್ನು ಹೆಚ್ಚಿಸಿಕೊಳ್ಳಲು ದಾರಿಯನ್ನು ತೋರುತ್ತಿದ್ದೀರ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದು ಬಿಡುವುದು ಅವರವರಿಗೆ ಬಿಟ್ಟ ವಿಚಾರ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by partha1059 Fri, 09/13/2013 - 17:02

ಗುಣಶೇಖರ‌ ಹಾಗು ಮಕರರವರಿಗೆ
ನಮಸ್ಕಾರಗಳು. ನನ್ನ ಬರಹದ‌ ಮೂಲ‌ ಉದ್ದೇಶವನ್ನು ನಾನಿನ್ನು ತಿಳಿಸಿಲ್ಲ. ಹಾಗೆ ಯಾವುದೆ ಧರ್ಮವನ್ನು ತೆಗಳುವುದು ಅಥವ‌ ವಾದಮಾಡುವುದು ಈ ಬರಹದ‌ ಉದ್ದೇಶವೂ ಅಲ್ಲ.
" ಹಾಗೆ ಮತ್ತೊಬ್ಬರ ನಂಬಿಕೆಗಳ ಬಗ್ಗೆ ನಾವು ಸ್ವಲ್ಪ ಸಹನೆ ಬೆಳೆಸಿಕೊಂಡಲ್ಲಿ, ಸಮಾಜದಲ್ಲಿ ಸ್ವಲ್ಪ ಮಟ್ಟಿಗಾದರೂ ಶಾಂತಿ ನೆಲೆಸೀತು."
ಇದೆ ನನ್ನ ಬರಹದ‌ ಮೂಲ‌ ಮಂತ್ರ ಒಬ್ಬರು ಮತ್ತೊಬ್ಬರ‌ ನಂಬಿಕೆಗಳನ್ನು ಪುರಸ್ಕರಿಸಲು ಆಗದಿದ್ದರು ಸಹಿಸಬೇಕು ಆಗ‌ ದ್ವೇಷವಿರುವದಿಲ್ಲ ಅನ್ನುವುದು ನನ್ನ ಉದ್ದೇಶ‌.
ಆ ನಂಬಿಕೆಯ‌ ಸಹನೆಯನ್ನು ತಿಳಿಸಲೆಂದು ಮೇಲೆ ಸಾಂಕೇತಿಕವಾಗಿ ಚಿತ್ರವನ್ನು ಹಾಕಿರುವೆ , ಆ ಚಿತ್ರದ ಉದ್ದೇಶ‌ ಎಲ್ಲರಿಗೂ ಅರ್ಥವಾಗುತ್ತದೆ ಅನ್ನಿಸುತ್ತದೆ. ನನ್ನ ಬರಹದಿಂದ‌ ನಾಸ್ತಿಕರಿಗೆ ಎಷ್ಟು ಕೋಪ‌ ಬರುವುದೊ ಆಸ್ತಿಕರಿಗೂ ಅಷ್ಟೆ ಕೋಪಬರುತ್ತದೆ ಅನ್ನಿಸುತ್ತಿದೆ. ಆದರೆ ಯಾರು ಬೇಸರ‌ ಪಡಲಾರರೆಂದು ನಿರೀಕ್ಷೆ ನನ್ನದು.
ವಂದನೆಗಳೊಡನೆ
ಪಾರ್ಥಸಾರಥಿ

Submitted by nageshamysore Sat, 09/14/2013 - 03:32

ಆಂಗ್ಲದಲ್ಲಿ ಒಂದು ಪ್ರಸಿದ್ದ ಹೇಳಿಕೆ ಕೇಳಿದ್ದೆ. ಅದರ ಸಾರಾಂಶ ಹೆಚ್ಚು ಕಡಿಮೆ ಈ ರೀತಿಯಿದೆ (ಸಾಲು ಯಥಾವತ್ತಾಗಿ ನೆನಪಿನಲಿಲ್ಲ) - "ನಾನು ಮತ್ತೊಬ್ಬರ ಅಭಿಪ್ರಾಯವನ್ನು ಸರ್ವತಾ ಒಪ್ಪದ, ಅದಕ್ಕೆ ಸಂಪೂರ್ಣ ತದ್ವಿರುದ್ಧ ಧೋರಣೆಯಲ್ಲಿ ನಂಬಿಕೆ ಇಟ್ಟವನಾಗಿರಬಹುದು; ಆದರೆ ನಿಮ್ಮ ಧೋರಣೆ ಹಾಗೂ ವಿಚಾರವನ್ನು ಹೊಂದಿರುವ ಆ ನಿಮ್ಮ ಹಕ್ಕಿದೆಯಲ್ಲಾ - ಆ ಹಕ್ಕಿನ ರಕ್ಷಣೆಗೆ ಜೀವವನ್ನೆ ಬೇಕಾದರೂ ಕೊಟ್ಟು, ಹೋರಾಡಿ ರಕ್ಷಿಸುತ್ತೇನೆ"

ಈ ಮಾತಿನಲ್ಲಿ ಒಂದು ಅರ್ಥಪೂರ್ಣ ನೀತಿ ಸಂಹಿತೆಯಿದೆ. ಸಂಪದದ ಒಂದು ಘನತೆ, ಹಿರಿಮೆಯೆಂದರೆ - ಸಮುದಾಯದ ಸದಸ್ಯರು ತಮಗೆ ತಾವೆ ನಿರ್ಬಂಧ ಹಾಕಿಕೊಂಡು, ಸಂಪದದ ಲಿಖಿತ / ಅಲಿಖಿತ ನೀತಿ ಸಂಹಿತೆಯನ್ನು ಸಾಧ್ಯವಿದ್ದಷ್ಟು ಪಾಲಿಸಲು ಯತ್ನಿಸುವುದು. ತಮಗೆ ಸಿಕ್ಕಿದ ಅಭಿವ್ಯಕ್ತಿ ಸ್ವಾತ್ಯಂತ್ರವನ್ನು ಸ್ವೇಚ್ಚೆಯ ಮಟ್ಟಕ್ಕೊಯ್ಯದೆ ಸಂಹಿತೆಯ ಪರಿಧಿಯೊಳಗೆ ನಡುವಳಿಕೆಯನ್ನು ಸೀಮಿತಗೊಳಿಸಲು ಪಡುವ ಶ್ರಮ ಎದ್ದು ಕಾಣುತ್ತದೆ. ಇದನ್ನು ಎಲ್ಲರೂ ಅನುಕರಿಸುವುದರಲ್ಲೆ, ಸಮುದಾಯದ ಯಶಸ್ಸು. ಅಭಿಪ್ರಾಯ 'ಹೇರುವುದು' ವಿಧಾನದ ಬದಲು 'ವ್ಯಕ್ತಪಡಿಸುವುದು' - ಗುರಿಯಾದಾಗ ಎಲ್ಲರೂ, ಅಭಿಪ್ರಾಯವನ್ನುಒಪ್ಪಲಿ, ಬಿಡಲಿ ಕನಿಷ್ಠ ಆ ಹೇಳುವ ಹಕ್ಕನ್ನು ಗೌರವಿಸುವ ಸತ್ಸಂಪ್ರದಾಯಕ್ಕೆ ಮಣೆ ಹಾಕುತ್ತಾರೆ. ಜತೆಗೆ ಅದು ಸಮುದಾಯದ ಪ್ರಬುದ್ದತೆಯನ್ನು ಪ್ರತಿಬಿಂಬಿಸುತ್ತದೆ ಸಹ. ಇದು ಈಗಾಗಲೆ ಸಂಪದದ ಪ್ರತಿಕ್ರಿಯಿಸುವ ಪ್ರಕ್ರಿಯೆಯಲ್ಲಿ, ಮತ್ತು ಬರಹಗಳಲ್ಲಿ ರೂಢಿಯಲ್ಲಿರುವ ಸಂಪ್ರದಾಯ. ಮತ್ತು ಇದು ಯಾವ ಮಟ್ಟದಲ್ಲಿದೆಯೆಂದರೆ - ಬರಹಗಳಲ್ಲಿರುವ, ಕಾಗುಣಿತಗಳಲ್ಲಿರುವ ತಪ್ಪು, ಲೋಪ ದೋಷಗಳನ್ನು ಗಹನವಿದ್ದರಷ್ಟೆ ಎತ್ತಿ ತೋರಿಸುತ್ತ, ಸಣ್ಣ ಪುಟ್ಟದ್ದನ್ನು ಆಡಿ ಮನ ನೋಯಿಸಬಾರದೆಂಬ ವಿಶಾಲ, ಸಹನಾ ಮನೋಭಾವ.

ಹೀಗಾಗಿ ಎಲ್ಲರೂ ಪ್ರಾಮಾಣಿಕವಾಗಿ, ಸರಳವಾಗಿ ಸಂವಹಿಸುವತ್ತ ಗಮನ ಹರಿಸುವುದು ಉಚಿತ. ಪರಸ್ಪರರ ನಂಬಿಕೆಗಳನ್ನು ಪ್ರಶ್ನಿಸುವ ಧೋರಣೆಗಿಂತ ಅವನ್ನು ಗೌರವಿಸುವ, ಅರ್ಥ ಮಾಡಿಕೊಳ್ಳುವ ಅಥವ ಕನಿಷ್ಠ ಸಹನೆಯನ್ನು ತೋರುವ ಪ್ರಾಥಮಿಕ ಮಟ್ಟದ ಫ್ರೌಡಿಮೆ, ಸೈದ್ದಾಂತಿಕ / ಬೌದ್ದಿಕ ಬದ್ದತೆ ಮತ್ತು ಸಾಮರ್ಥ್ಯ ನಮಗೆಲ್ಲರಿಗು ಇದೆಯೆಂಬುದನ್ನು ಒಂದು ಆದರ್ಶ ಸಮುದಾಯದ ನೆಲೆಗಟ್ಟಿನಲ್ಲಿ ಪ್ರತಿಬಿಂಬಿಸೋಣ. ಅಂತಿಮವಾಗಿ ಇಲ್ಲಿರುವವರೆಲ್ಲ ಕನ್ನಡಿಗರೂ ಮತ್ತು ಭಾರತೀಯರೂ - ನಾವೆಲ್ಲ ಒಂದೆ ಸಮಷ್ಟಿ ವೃಕ್ಷದ ಹಲವಾರು ಕವಲುಗಳಾಗಿದ್ದರೂ, ಒಂದೆ ಮೂಲ ತಾಯ್ಬೇರಿನ ಸಂಕುಲವೆನ್ನುವ ಪ್ರಜ್ಞೆ ಮಾರ್ಗದರ್ಶಕವಾಗಿರಲಿ.

ಪಾರ್ಥ ಸಾರ್, ಚಿತ್ರದ ಇಂಗಿತ ಮತ್ತು ಸಂದೇಶ ಅದ್ಭುತವಾಗಿದೆ. ನಿಮ್ಮ ಬರೆಯುವ ಲಹರಿಗೆ ಈ ಸಂವಾದ ತೊಡಕಾಗುವ ಬದಲು, ಮತ್ತಷ್ಟು ಹುರಿದುಂಬಿಸುವ ಪ್ರೇರಕ ಶಕ್ತಿಯಾಗಲೆಂದು ಹಾರೈಸುವೆ :-)

ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು
 

Submitted by sathishnasa Sun, 09/15/2013 - 14:02

" ಮತ್ತೊಬ್ಬರ ನಂಬಿಕೆಗಳ ಬಗ್ಗೆ ನಾವು ಸ್ವಲ್ಪ ಸಹನೆ ಬೆಳೆಸಿಕೊಂಡಲ್ಲಿ, ಸಮಾಜದಲ್ಲಿ ಸ್ವಲ್ಪ ಮಟ್ಟಿಗಾದರೂ ಶಾಂತಿ ನೆಲೆಸೀತು" +1 "ದೇವರು ಖಂಡಿತ ಎದುರಿಗೆ ಬಂದು ತನ್ನನ್ನು ಸಮರ್ಥಿಕೊಳ್ಳಲಾರನು." --- ಸಮರ್ಥಿಸಿಕೊಳ್ಳುವ ಅವಶ್ಯಕತೆ ಅವನಿಗಿಲ್ಲ ಯಾಕೆಂದರೆ ಅವನನ್ನು ನಂಬಿದರು / ದ್ವೇಷಿಸಿದರು ನಷ್ಟ ಅವನಿಗೇನು ಇಲ್ಲ ಅಲ್ಲವೇ ............ ಸತೀಶ್