ಸಂದಿಗ್ಧತೆ (ಕಥೆ)

ಸಂದಿಗ್ಧತೆ (ಕಥೆ)

‘ನಾನೀಗ ನಮ್ಮ ಮನೆಯವರನ್ನು ಬಿಟ್ಟು ಬಹಳ ದೂರ ಬಂದುಬಿಟ್ಟಿದ್ದೇನೆ, ತಂಗಿಯೊಬ್ಬಳಿದ್ದಾಳೆಂದು ಆಗಾಗ ಅವಳ ಮನೆಗೆ ಹೋಗಿ, ಮಕ್ಕಳೊಂದಿಗೆ ಆಟವಾಡಿಕೊಂಡು, ಇದ್ದದ್ದುಂಡು ಬರುತ್ತಿದ್ದೆ. ಈಗೀಗ ಅವಳೂ ದುಂಬಾಲು ಬೀಳೋದು ಕಂಡು ಅಲ್ಲಿಗೂ ಅಷ್ಟಾಗಿ ಹೋಗುತ್ತಿಲ್ಲ’ ಎಂದು ಒಂದು ಗುಟುಕು ಬಿಯರ್ ಹೀರಿಕೊಂಡ ಲಕ್ಷ್ಮಣ್ ನೊಂದು ನುಡಿದ. ಸರಿಯಿದ್ದರು, ಕುಡಿದು ಗಿರ್ಕಿ ಹೊಡೆಯುತ್ತಿದ್ದರೂ ತುಂಬಾ ಭಾವುಕನಂತೆ ಮಾತನಾಡುವುದು, ಮಧ್ಯೆ ಮಧ್ಯೆ ವಚನ, ವೇದಾಂತ, ಪುರಾಣ ಸಂಬಂಧಿ ವಿಚಾರಗಳನ್ನು ತುರುಕುವುದು, ಜೊತೆಗೆ ಎಂದೂ ಸಿಗರೇಟ್ ಸೇದದಿರುವುದು ಆತನ ದೈನಂದಿನ ಅಭ್ಯಾಸ. ನಾನು ಮತ್ತು ಆತ ಆಗಾಗ ಸಂಧಿಸಿದರೆ ಅದು ಈ ರೀತಿಯ ಮಬ್ಬುಗತ್ತಲಲ್ಲಿಯೇ, ಅದೂ ಇಷ್ಟವಾಗುವ ಮಂದಬೆಳಕು ಚೆಲ್ಲುವ ಬೆಂಗಳೂರು ಮೈಸೂರು ರೋಡಿನ ಈ ಬಾರ್‍ನಲ್ಲಿ.

 

ಲಕ್ಷ್ಮಣ್, ತಾನಾಯಿತು, ತನ್ನಿಷ್ಟವಾಯಿತು ಎಂಬಂತೆ ಬದುಕಲು ಇಷ್ಟಪಡುವ ಹುಡುಗನಾದರೂ, ಈ ಲೋಕ ಆ ಪ್ರಕಾರವಾಗಿ ತನ್ನನ್ನು ಬದುಕಲು ಬಿಡುತ್ತಿಲ್ಲ ಎಂದು ಬೆಟ್ಟ ಅಗೆದು ಇಲಿ ಹಿಡಿದವನಂತೆ ಮಾತನಾಡುವವ. ಯಾವಾಗಲೂ ಮಂಕಾಗಿ, ಭಾರ ಹೊತ್ತ ಕಣ್ಣುಗಳೊಂದಿಗೆ, ಬೋಳಿಸದ ಗಡ್ಡ, ಬೆರಟು ಬೆರಟಾದಂತೆ ಕಾಣುವ ಚರ್ಮ, ಒರಟೊರಟಾದ ಕೂದಲಿನ ಮನುಷ್ಯ. ಮೊದಲು ತಿಂಗಳಿಗೊಮ್ಮೆ ಕುಡಿಯುತ್ತಿದ್ದವ, ಮೊನ್ನೆ ಮೊನ್ನೆವರೆಗೂ ವಾರಕ್ಕೊಮ್ಮೆ ಬಾರಿನ ಮುಂದೆ ನಿಂತು ಫೋನಾಯಿಸಲು ಶುರುವಿಟ್ಟುಕೊಂಡ. ಈಗಿಗಂತೂ ಪ್ರತಿದಿನವೂ ಬಿಯರ್ ಹೀರುತ್ತಾನೆ, ಯಾವುದೇ ಕಾರಣಕ್ಕೂ ವಿಸ್ಕಿ, ಬ್ರಾಂಡಿ ಕುಡಿಯಬಾರದು, ಅವು ನಮ್ಮ ಲಿವರನ್ನು ಕೊರೆಯುವ ಆಸಿಡ್ ಎಂದು ಹೇಳಿದ್ದವನು ಬಿಯರ್ ಬೇಸರವಾಗಿ ಅವುಗಳನ್ನೇ ತರಿಸಿಕೊಂಡುಬಿಡುತ್ತಾನೆ.  ಕೆಲವು ದಿನಗಳ ಹಿಂದೆ ಅಚಾನಕ್ಕಾಗಿ ಅವನ ರೂಮಿಗೆ ಹೋಗಿದ್ದಾಗ ಟೇಬಲ್ಲಿನ ಮೇಲೆ ಬಿಯರ್ ಬಾಟಲ್, ಒಂದೆರಡು ಕೋಳಿ ಮಾಂಸದ ತುಂಡು ಇಟ್ಟುಕೊಂಡು ಕುಳಿತಿದ್ದ. ಅರ್ಧರಾತ್ರಿಯಲ್ಲಿ ನಾಯಿಯೊಂದು ಕುಯ್ಯೋ ಎಂದು ಬೊಗಳುವಂತೆ ಟೀವಿ ಕೂಗಿಕೊಳ್ಳುತ್ತಿದ್ದರೆ, ಮೂಲೆಯಲ್ಲಿ ಸುರಿದಿದ್ದ ಅದೆಷ್ಟೋ ದಿನದ ಕಸದಿಂದ ವಾಸನೆ ಬರುತ್ತಿತ್ತು. ಅಸ್ತವ್ಯಸ್ತವಾಗಿ ಬಿದ್ದಿದ್ದ ಹಾಸಿಗೆ ಮೇಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದ್ದ ಕಸ. ಪಕ್ಕದಲ್ಲೇ ಇದ್ದ ಮತ್ತೊಂದು ಬೆಂಚಿನ ಮೇಲೆ ಮಡಚಿಡದ, ಒಗೆಯದ ಬಟ್ಟೆಗಳು. ನನ್ನನ್ನು ಕಂಡವನೇ ‘ಹೇಳಿ ಬರೋದಲ್ಲವೇ, ಬಿಯರ್ ಈಗ ತಂದದ್ದಲ್ಲ, ಮೊದಲೇ ಇದ್ದದ್ದು’ ಎಂದು ಹೇಳುವುದರ ಮೂಲಕ ತಾನೇನು ನಿತ್ಯ ಕುಡುಕನಲ್ಲವೆಂದು ಸಾಬೀತು ಪಡಿಸಲು ಪ್ರಯತ್ನಿಸಿದ್ದ. ಬಟ್ಟೆಗಳನ್ನು ಸರಸರನೆ ಹ್ಯಾಂಗರ್‍ಗಳಿಗೆ ಸಿಕ್ಕಿಸಿ, ನೆಲ ಗುಡಿಸಲು ಕಸಪೊರಕೆ ಹಿಡಿದುಕೊಂಡು, ‘ಅಡುಗೆ ಮನೆಕಡೆ ಹೋಗ್ಬೇಡ, ಮೊದಲು ಕೆಲವು ಪಾತ್ರೆಗಳಿಗೆ ನೀರು ಚಿಮುಕಿಸ್ತೇನೆ’ ಎಂದಿದ್ದ.

‘ಏನು ಇದ್ದಕ್ಕಿದ್ದಂತೆ ಬಂದದ್ದು, ಒಂದೆರಡು ಪೈಸೆ ಖರ್ಚು ಮಾಡಿ ಫೋನ್ ಮಾಡಿದ್ರೆ ನಿನ್ನಪ್ಪನ ಗಂಟೆಲ್ಲ ಮುಗಿದುಬಿಡುತ್ತಿತ್ತೆ?’ ಎಂದ ಲಕ್ಷ್ಮಣ್ ನನಗೂ ಲೋಟಕ್ಕೆ ಬಿಯರ್ ಹಾಕಲು ಬಂದ. ‘ನಂದು ಊಟ ಆಗಿದೆ,  ಬಿಯರ್ ಬೇಡ, ಕುಡಿದರೆ ವಾಂತಿಯಾದೀತು? ಸಿಗರೇಟ್ ಹಚ್ಚಿಕೊಳ್ಳುತ್ತೇನೆ’ ಎಂದಿದ್ದೆ.

 

‘ಈ ಹಬ್ಬಕ್ಕಾದರೂ ನೆಕ್ಲೇಸ್ ಕೊಡಿಸಿ, ನಿಮ್ಮ ಯೋಗ್ಯತೆಗೆ ಪ್ರತಿ ಹಬ್ಬದಲ್ಲೂ ಸುಮ್ಮನೆ ಸುಳ್ಳು ಹೇಳೋದೆ ಆಯ್ತು’ ಎಂಬ ಹೆಂಡತಿಯ ಮಾತಿಗೆ ಬೇಸರಗೊಂಡು ಸುಮ್ಮನೆ ಗಾಡಿ ಓಡಿಸಿಕೊಂಡು ಆ ದಿನ ಲಕ್ಷ್ಮಣನ ರೂಮಿಗೆ ಹೋಗಿದ್ದೆ.

‘ಈ ಚಿನ್ನ ಎಂದರೇನು? ಅಲ್ಲಿ ಲೋಹಕ್ಕಿಂತ ಬಣ್ಣಕ್ಕೆ ಬೆಲೆ ಅಲ್ಲವೇ?’ ಎಂದು ಕೇಳಿದ ಲಕ್ಷ್ಮಣ್ ಮಾತಿನ ಆ ದಿನ ನನಗೆ ಉತ್ತರಿಸಲಾಗಲಿಲ್ಲ.

 

‘ಮದುವೆಯ ಸಮಯದಲ್ಲಿ ಮಳ್ಳಿಯಂತಿದ್ದ ನನ್ನ ಹೆಂಡತಿಯ ಉಪಟಳ ಈಗೀಗಂತು ಮಿತಿಮೀರಿಹೋಯಿತು. ಮಾತು ಮಾತಿಗೂ ಚಿನ್ನ, ಸೀರೆ, ಮನೆ, ಕಾರು ಎಂದು ಅವಲತ್ತುಕೊಳ್ಳುತ್ತಾಳೆ. ರುಚಿಯಾದ ಅಡುಗೆ ಮಾಡಿಯೂ ಬಡಿಸುವುದಿಲ್ಲ, ಊಟ ನಾಲಗೆ ಮೇಲೆ ಬೀಳದೆ ಹಸಿವಿನ ತೃಷೆ ನೀಗಿಸಲು ಹೊಟ್ಟೆಗೆ ಇಳುಗುತ್ತದೆ, ಮನೆ ಎನ್ನುವುದು ಮಸಣವಾಗಿದೆ, ಒಳಗೆ ಕಾಲಿಟ್ಟರೆ ತಲೆಬೇನೆ ಶುರುವಾಗುತ್ತದೆ. ಕುಯ್ಯೋ ಕುಯ್ಯೋ ಎನ್ನುವ ಮಕ್ಕಳಿಗೂ ಹೇಳಿಕೊಟ್ಟಿದ್ದಾಳೆ. ಹೊಸ್ತಿಲು ದಾಟಿದರೆ ಸಾಕು ‘ಅಪ್ಪ ಅದು ಕೊಡಿಸು, ಇದು ಕೊಡಿಸು’ ಎಂದು ಪೀಡಿಸುವುದಲ್ಲದೇ ಈ ಎಳೆ ವಯಸ್ಸಿಗೆ ಅವರಿವರಿಗೆ ಹೋಲಿಸಿ ಹಂಗಿಸುತ್ತವೆ. ನೆರೆ ಮನೆಯವರು ಹೊಸ ಬಟ್ಟೆ ತಂದರೆ ಇವಳಿಗೆ ಉರಿ, ನೆಂಟರು ಹೊಸ ಕಾರು ತಂದರೆ ನನಗೆ ಸಾಲ ಮಾಡಲು ಪೀಡಿಸುತ್ತಾಳೆ, ಫೈನಾನ್ಸ್ ರಂಗಪ್ಪನಿಗೆ ಫೋನ್ ಮಾಡಲೇ ಎನ್ನುತ್ತಾಳೆ, ಬೇಡವೆಂದರೆ ಎಗರುತ್ತಾಳೆ. ಹೆತ್ತವರ ಗಡಿಬಿಡಿಗೋ, ಅಜ್ಜಿ ಸತ್ತುಹೋಗುತ್ತಾಳೆ, ಅಜ್ಜನಿಗೆ ಕಾಯಿಲೆ, ಅಪ್ಪನ ಕೊನೆಯಾಸೆಯಂತೆ ಅದು ಇದು ಎಂದುಕೊಂಡು ಕುಂಟು ಕಾರಣವೊಡ್ಡಿ  ಯಾರನ್ನೋ ತಂದು ಅವಸರಕ್ಕೆ ಗಂಟು ಹಾಕಿಬಿಟ್ಟು ಇಕ್ಕಟ್ಟಿಗೆ ಸಿಲುಕಿಸಿಬಿಡುತ್ತಾರೆ. ಮದುವೆಗೆ ಮುಂಚಿನಿಂದಲೂ ನನಗೆ ನನ್ನ ಜನ, ನನ್ನ ದೇಶವೆಂದರೆ ಬಹಳ ಆಪ್ತ. ನನ್ನ ಜನರ ನಡುವೆಯೇ ಗೋಡೆ ನಿರ್ಮಿಸುವ ಪರಮ ದುಷ್ಟರಿದ್ದಾರೆ. ಅವರೆಲ್ಲರಿಗೂ ಎದೆಗೊಟ್ಟು ಹೋರಾಡುವುದನ್ನು ಕಾಲೇಜು ದಿನಗಳಿಂದಲೂ ಕಲಿತುಬಂದವನು ನಾನು. ನನ್ನ ಹಳ್ಳಿಯ ಮೇಲೆ ಹಾದು ಹೋಗುವ ಪ್ರತಿ ರಸ್ತೆಯಲ್ಲೂ ನನ್ನ ನಿಸ್ವಾರ್ಥ ಪ್ರಯತ್ನದ ಬೆವರಿದೆ. ಹಣಕ್ಕೆ ಆಸೆ ಪಡದೆ, ಇದ್ದದ್ದನ್ನೂ ಕೈ ಚಾಚಿದವರಿಗೆ ಕೈ ಮುಗಿದು ಎರೆದುಕೊಟ್ಟವನು. ಇವಳಿಗೋ ನನ್ನ ಸಮಾಜಸೇವೆಯೆಂದರೆ ಮೆಣಸಿನಕಾಯಿ ತಿಂದಂತೆ. ‘ಶ್ರೀಮಂತರಾಗಿ ಹುಟ್ಟಿದ್ದ ನಾವು ನಿಮ್ಮ ಸಮಾಜ ಸೇವೆಯಿಂದ ಈಗೀಗ ಬಡವರಾಗಿ ಸಾಯ್ತಾ ಇದ್ದೇವೆ, ಮನೆಮಂದಿ ನೆಮ್ಮದಿಗಿಲ್ಲದ ನಿಮ್ಮ ದೇಶ ಸೇವೆಗೆ ಮಣ್ಣು ಹಾಕ’ ಎಂದೊದರುತ್ತಾಳೆ. ನನ್ನ ನಿಸ್ವಾರ್ಥ ತುಡಿತ, ಸಮಾಜಸೇವೆಯೂ ಮದುವೆಗೆ ಮುಂಚೆ ಆಕೆ ನನ್ನನ್ನು ಮೆಚ್ಚಿಕೊಳ್ಳಲು ಒಂದು ಕಾರಣವಾಗಿತ್ತು. ಈಗಿಗಂತೂ ಅವಳೊಡನೆ ಹಾಸಿಗೆ ಮೇಲೂ ಮಲಗಲು ಆಸೆಯಾಗೋದಿಲ್ಲ, ಮೈಸೋಕಿದ ಕಡೆಯೆಲ್ಲ ಗಾಯ ಎದ್ದಂತೆ ನೋವಾಗುತ್ತದೆ ಕಣೋ ಲಕ್ಷ್ಮಣ್ ಎಂದು ಹೇಳುವಷ್ಟರಲ್ಲಿ ಆತ ನನ್ನ ಕೈ ಹಿಡಿದಿದ್ದ.

 

‘ನಿಮ್ಮದು ಅರೆಂಜ್ ಮ್ಯಾರೇಜಲ್ಲವೇ?’ ಈ ಪ್ರಶ್ನೆ ಎಸೆದಿದ್ದ ಲಕ್ಷ್ಮಣನ ಮೊಗದಲ್ಲಿ ಮತ್ತೊಂದು ಪ್ರಶ್ನೆ ಕಾಣುತ್ತಿತ್ತು. ‘ಹೌದು’ ಎಂದೆ. ‘ಲವ್ ಮ್ಯಾರೇಜಂತು ನಡೆಯೋಕೆ ಬಿಡದ ದೇಶಭಕ್ತರು ನೀವು, ಒಪ್ಪಿಕೊಂಡೇ ಅಪ್ಪಿಕೊಂಡಿರುವ ಮದುವೆ, ಇಲ್ಲಾದರೂ ನೆಮ್ಮದಿ ಬೇಡವೆ? ಥೂ..’ ಎಂದ.

 

ಅವನ ಮಾತಿನಲ್ಲಿ ಅರ್ಥವಿದೆಯೆಂದು ಒಪ್ಪಿಕೊಳ್ಳುವುದರಲ್ಲಿ ನಾನು ಎಡವಲಾರೆ. ನನಗಿಂತ ಕೇವಲ ಎರಡೇ ವರ್ಷ ಚಿಕ್ಕವನಾದರೂ, ಇಬ್ಬರೂ ಒಟ್ಟಿಗೆ ಓದಿದವರು. ಆತ ಇನ್ನೂ ಮದುವೆ ಆಗದೆ ತಾನು ಪ್ರೀತಿಸುತ್ತಿರುವ ಹುಡುಗಿಗೋಸ್ಕರ ಕಾಯುತ್ತಿರುವವನು. ಆಕೆಯೋ ಇನ್ನೂ ಓದುತ್ತಿರುವ ಹುಡುಗಿ. ಮದುವೆ ಎಂದರೆ ಓದು ಮುಗಿಯಬೇಕು, ಏನೇನೋ ಕೂಡಬೇಕು, ಮತ್ತೇನೋ ಕಳೆಯಬೇಕು. ಲಕ್ಷ್ಮಣ್‍ನನ್ನು ಬಾಲ್ಯದಿಂದಲೂ ಬಲ್ಲೆ. ಕೇವಲ ಒಂದು ವರ್ಷದವನಾಗಿದ್ದಾಗ ತಾಯಿಯನ್ನು ಕಳೆದುಕೊಂಡು ಮಲತಾಯಿಯ ದಬ್ಬಾಳಿಕೆಯಲ್ಲಿ ಬೆಳೆದವನು. ತಿಂದರೆ ಹಳಸಲು ಇಲ್ಲದಿದ್ದರೆ ಹಸಿವು ಎಂಬಂತೆ ಅವನ ಬಾಲ್ಯ ಸಾಗಿತ್ತು. ಕಾರಣವೇ ಇಲ್ಲದೆ ಬಡಿಯುತ್ತಿದ್ದ ಮಲತಾಯಿಯ ದಾಷ್ರ್ಯ ಆತ ಸಾಯುವವರೆವಿಗೂ ಮರೆಯಾಗದಿರಲೆಂದೋ ಏನೋ ಮೈಮೇಲೆಲ್ಲಾ ಏಟಿನ ಗುರುತುಗಳಿದ್ದವು, ಸುಟ್ಟ ಕಲೆಗಳಿದ್ದವು, ಗಿಂಡಿದ ಚಿಬ್ಬಳಿದ್ದವು, ಇನ್ನೂ ಇವೆ. ವಾರದಲ್ಲಿ ಒಂದೈದು ದಿನವಾದರೂ ಆತ ಅನಾಥನಂತೆ ನಮ್ಮ ಬೀದಿಯ ಚರಂಡಿಯ ಮೇಲೆ ಇರುವ ಪಡಸಾಲೆಯ ಜಗಲಿಯಲ್ಲಿ ಚಳಿಗೆ ಅವಚಿಕೊಂಡು ಮಲಗಿಕೊಳ್ಳುತ್ತಿದ್ದ. ಮಗನಲ್ಲದವನು ಮನೆಗೆ ಬರದಿದ್ದರೆ ತಲೆ ಕೆಡಿಸಿಕೊಳ್ಳದ ಎರಡನೆ ತಾಯಿ ಒಂದೆಡೆಯಾದರೆ, ದಿನದ ಇಪ್ಪತ್ತ ನಾಲ್ಕು ಘಂಟೆಗಳಲ್ಲಿಯೂ ಕುಡಿದು ತೂರಾಡುತ್ತಿದ್ದ ಅವನಪ್ಪನೊಂದೆಡೆ. ಮನೆಗೆ ಬಂದರೆ ಮಕ್ಕಳ ಸಂಖ್ಯೆಯನ್ನು ಎಣಿಸುವಷ್ಟು ಒಳ್ಳೆಯವನು ಆತನಲ್ಲ, ಬದಲಾಗಿ ಸಿಕ್ಕ ಮಕ್ಕಳನ್ನು ಪಾಪಿಗಳು ಎಂದು ಕೂಗಿ ಕೂಗಿ ಬಡಿಯುತ್ತಿದ್ದವನು. ಇದೇ ಗತಿ ಇವನ ಅಣ್ಣಂದಿರಿಗೂ ಇತ್ತು. ರಾತ್ರಿ ಮನೆಗೆ ಹೋದರೆ ಕಾರಣವಿಲ್ಲದೇ ಏಟು ತಿನ್ನುವ ಕರ್ಮ, ಮುಂಜಾನೆ ಎದ್ದು ಹೋದರೆ ರಾತ್ರಿ ಮನೆಗೆ ಬಂದಿಲ್ಲವೆಂಬ ಕಾರಣದಿಂದ ಹೊಡೆತ. ಲಕ್ಷ್ಮಣ್‍ಗೆ, ಹಬ್ಬ ಹರಿದಿನಗಳ ಅರಿವಿಲ್ಲದಿದ್ದರೂ ಎಲ್ಲಾದರೂ ಕುಣಿಯುವ ಅವಕಾಶ ಸಿಕ್ಕರೆ ಮೈಮರೆತು ಕುಣಿದು ಬೆವರು ಸುರಿಸುತ್ತಿದ್ದ. ಎಲ್ಲಾ ನೋವನ್ನು ಮರೆಯುವ ಮನಸ್ಸು ತೀವ್ರ ತೆರನಾಗಿ ಕೆರಳುವುದು ಸಹಜ. ಈ ದಿನದವರೆವಿಗೂ ಆತನಿಗೆ ಕುಣಿಯುವುದು ಎಂದರೆ ತುಂಬಾ ಇಷ್ಟ. ಮುಂಜಾನೆ ಐದಕ್ಕೆ ಎದ್ದು ಐದಾರು ಕಿಲೋಮೀಟರ್ ನಡೆದು ಒಂಭತ್ತು ಘಂಟೆಯ ‘ಭ್ರಮರಾಂಭ’ ಬಸ್ಸು ಬರುವವರೆವಿಗೂ ಅವರಿವರ ಹೊಲಗಳಲ್ಲಿ ಅವರೆಕಾಯಿ ಕೊಯ್ದು ಎರಡು ರೂಪಾಯಿ ಸಂಪಾದಿಸಿ ಎರಡನೆ ತಾಯಿಗೆ ಕೊಡಬೇಕಾಗಿತ್ತು. ನಂತರ ಅವರೇಕಾಯಿ ವಾಸನೆಯ ಬಟ್ಟೆಯಲ್ಲಿಯೇ ನೆಪಮಾತ್ರಕ್ಕೆ ಶಾಲೆಗೆ ಹೋಗುತ್ತಿದ್ದವನು ಸಂಜೆ ಬಂದೊಡನೆ ಮತ್ತೆ ಟೈಲರ್ ಕೆಂಪಣ್ಣನ ಬಳಿ ಬಟ್ಟೆಗಳಿಗೆ ಗುಂಡಿ ಹೊಲೆಯಲು ಹೋಗಿ ಒಂದೆರಡು ರೂಪಾಯಿ ಸಂಪಾದಿಸಿ ಚಿಕ್ಕಮ್ಮನಿಗೆ ಕೊಡುತ್ತಿದ್ದವನು. ದುಡಿಯುವ ಈ ಎರಡೂ ಕೆಲಸಗಳಲ್ಲಿ ಒಂದನ್ನು ಆತ ತಪ್ಪಿಸಿಬಿಟ್ಟರೂ ಆಕೆ ಮನ ಬಂದಂತೆ ಬಡಿಯುತ್ತಿದ್ದಳು, ತೊಡೆ, ಬೆನ್ನು, ಹೊಟ್ಟೆಯನ್ನು ಗಿಂಡಿ ಮುಂಜಾನೆವರೆವಿಗೂ ನೋವಿರುವಂತೆ ಮಾಡಿಬಿಡುತ್ತಿದ್ದಳು. ಆಗಾಗ ‘ನನ್ನ ತಾಯಿಯನ್ನ ಕಿತ್ತುಕೊಂಡ ದೇವರು ನನಗೆ ಮೋಸ ಮಾಡಿಬಿಟ್ಟ, ಜೊತೆಗೆ ಮಲತಾಯಿಯೊಬ್ಬಳನ್ನು ಕೊಟ್ಟು ಇನ್ನೂ ದೊಡ್ಡ ಮೋಸ ಮಾಡಿಬಿಟ್ಟ’ ಎಂದು ಹೇಳಿಕೊಂಡು ‘ಚೆ’ ಎನ್ನುತ್ತಾನೆ. ಆದರೆ, ಕಣ್ಣಿಂದ ನೀರು ತೊಟ್ಟಿಕ್ಕುವುದಿಲ್ಲ. ಜೊತೆಗೆ, ಯಾವುದೇ ದೇವರ ವಿಗ್ರಹ, ಫೋಟೋ ಕಂಡರೆ ಕೈ ಮುಗಿಯುತ್ತಾನೆ. ಇಷ್ಟೆಲ್ಲಾ ಕಷ್ಟಕೊಟ್ಟ ಅದೇ ಮಲತಾಯಿಗೆ ಹೃದಯದ ಕಪಾಟಿನಲ್ಲಿ ತೊಂದರೆ ಕಾಣಿಸಿಕೊಂಡಾಗ ಈತನೇ ಮುಂದೆ ನಿಂತು ಖರ್ಚು ಮಾಡಿ ಗುಣಪಡಿಸಿದ್ದ, ತನ್ನ ತಂದೆ ಅಪಘಾತದಲ್ಲಿ ಮೂಳೆ ಮುರಿದುಕೊಂಡಾಗಲೂ ಹಗಲು ರಾತ್ರಿ ಜೊತೆಯಿದ್ದು ಆಪರೇಷನ್ ಮಾಡಿಸಿದ್ದ.

 

ವಾರಕ್ಕೆ ಮೂರು ಬಾರಿಯಾದರೂ ಆತನನ್ನು ನನ್ನ ಮನೆಗೆ ಕೂಗುತ್ತೇನೆ. ಆದರೆ ಆತ ಬರಲೊಲ್ಲ. ಅಪರೂಪಕ್ಕೆ ಬಂದಾಗ ನನ್ನ ಹೆಂಡತಿ ಆತನೊಡನೆ ಸರಿಯಾಗಿ ಮಾತನಾಡುವುದಿಲ್ಲ. ನನ್ನ ಗೆಳೆಯರು, ಸಂಬಂಧಿಕರು ಯಾರೇ ಬಂದರೂ ಆಕೆ ಮುಖಕೊಟ್ಟು ಮಾತನಾಡುವುದಿಲ್ಲ. ಒಂದು ರೀತಿಯ ಧಿಮಾಕು, ಅಹಂಕಾರ. ಗೆಳೆಯರಿಗೆ ಟೀ ಕೇಳಿದರೆ ಮುಖಕ್ಕೆ ಹೊಡೆದಂತೆ ಹಾಲಿಲ್ಲ ಎನ್ನುತ್ತಾಳೆ, ಊಟಕ್ಕೆ ತಂಗಳು ಬಡಿಸುತ್ತಾಳೆ. ಇದಕ್ಕೆಲ್ಲಾ ಕಾರಣ ಗೆಳೆಯರು, ಸಂಬಂಧಿಕರಲ್ಲ, ಬದಲಾಗಿ ಕೇಳಿದ್ದನ್ನು ಕೊಡಿಸುವಷ್ಟು ದುಡ್ಡು ನನ್ನಲ್ಲಿಲ್ಲ, ಓಡಾಡಲೂ ಕಾರಿಲ್ಲ, ಇರಲು ಸ್ವಂತ ಮನೆಯಿಲ್ಲ, ಮನೆಯಲ್ಲಿ ಫ್ರಿಡ್ಜ್ ಇಲ್ಲ, ವಾಷಿಂಗ್ ಮೆಷಿನ್ ಇಲ್ಲ, ಇವೇ ಕಾರಣಗಳು, ನಿಜಕ್ಕೂ ಬದುಕಲು ಅಕಾರಣಗಳು. ಈ ದೇಶದ ಒಳಿತಿಗೆ ಹೋರಾಡುವುದೆಂದರೆ ಆಕೆಗೆ ಒಂದು ರೀತಿಯ ವಾಕರಿಕೆ. ಈ ವಿಚಾರದಲ್ಲಿ ಇತರೆ ಕೆಲವು ಗೆಳೆಯರು ಬೇಸರಿಸಿಕೊಂಡರೂ ಲಕ್ಷ್ಮಣ್ ಬೇಸರಿಸಿಕೊಳ್ಳುವುದಿಲ್ಲ, ಬದಲಾಗಿ ‘ಅದೆಲ್ಲಾ ಕಾಮನ್ ಬಿಡಪ್ಪಾ’ ಎನ್ನುತ್ತಾನೆ. ಆಕೆ ತಿಳಿದೂ ಉಪ್ಪು ಹೆಚ್ಚು ಹಾಕಿದ್ದರೆ ಸ್ವಲ್ಪವೂ ಮುಖ ಮುರಿದುಕೊಳ್ಳದೇ ಉಣ್ಣುತ್ತಾನೆ. ಆದರೆ, ಆತನಿಗೆ ನನ್ನ ಹೆಂಡತಿಯ ಸ್ವಭಾವ ಮತ್ತು ಈ ಜೀವನವನ್ನು ಆಕೆ ಸ್ವೀಕರಿಸುವ ರೀತಿ ಇಷ್ಟವಾಗುವುದಿಲ್ಲ ಎಂಬುದು ಸತ್ಯ. ಬಂದವರ ಮುಂದೆ ತಾನು ಚಿನ್ನದ ಚಮಚವನ್ನು ಬಾಯಿಯಲ್ಲಿ ಹಿಡಿದಿಟ್ಟುಕೊಂಡೇ ಹುಟ್ಟಿದ್ದು ಎಂಬಂತೆ ನಟಿಸುವುದು, ಅಸ್ವಾಭಾವಿಕವಾಗಿ ಓಡಾಡುವುದು, ಹೆಚ್ಚು ಮೇಕಪ್ ಮಾಡಿಕೊಳ್ಳುವುದು ಆತನಿಗೆ ಒಂದು ರೀತಿಯ ಕಿರಿಕಿರಿ. ಈ ಹಿಂದೆ ನಾನೊಂದು ಅನಾಥಾಶ್ರಮ ಕಟ್ಟುವ ಆಲೋಚನೆಯಲ್ಲಿದ್ದಾಗ ಆಕೆ ಅಡ್ಡಿಪಡಿಸಿದ್ದಳು. ಆಗ ಆತ ‘ಅದೆಂಥ ಹೆಂಗಸು, ಸಮಾಜಕ್ಕೆ ಒಳಿತಾಗೋ ಕೆಲಸಕ್ಕೂ ಸೈ ಎನ್ನುವುದಿಲ್ಲವೆಂದರೆ ಹೇಗೆ, ಇವರೆಲ್ಲಾ ಬದುಕಿರೋದು ಕೇವಲ ಸಾಯೋದಿಕ್ಕಾ? ಚೆ! ಒಂಟಿತನ ಅನ್ನೋದೂ ಬಂಧನ, ಮದುವೆ ಅನ್ನೋದೂ ಬಂಧನ’ ಎಂದಿದ್ದ.

 

ಇಷ್ಟೆಲ್ಲಾ ತಿಳಿದ ಲಕ್ಷ್ಮಣ್ ಮತ್ತು ನಾನು ಕಳೆದ ವಾರ ನಮ್ಮ ಮನೆಯ ಟೆರೇಸ್ ಮೇಲೆ ಕುಳಿತಾಗ ಆತನ ತುಟಿ ಅದುರುವುದನ್ನು ನಾನು ಗಮನಿಸಿದ್ದೆ. ಆಶ್ಚರ್ಯವಾಗಿ ‘ಏನಾಯಿತು ಮಾರಾಯ’ ಎಂದಾಗ ತಾನು ಈಗ ಪ್ರೀತಿಸುತ್ತಿರುವ ಹುಡುಗಿಯ ಬಗ್ಗೆ ಹೇಳಿಕೊಂಡ. ‘ಓಹೋ! ನೀನು ಮೈಸೂರಿನಲ್ಲಿ ಓದುತ್ತಿದ್ದಾಗ ಪ್ರೀತಿಸಿದ್ದ ಹುಡುಗಿಯನ್ನು ಮರೆತುಬಿಟ್ಟೆಯಾ? ಹಗಲು ರಾತ್ರಿಯೆನ್ನದೇ ಅವಳದೇ ಧ್ಯಾನದಲ್ಲಿರುತ್ತಿದ್ದಲ್ಲೋ ಮಾರಾಯ’ ಎಂದೆ. ಆಕೆಯ ವಿಚಾರ ನೆನಪಿಸಿದ್ದೇ ಆತನ ಕಣ್ಣಿನಲ್ಲಿ ನೀರು ಜಿನುಗಿತು. ಏನೂ ಮಾತನಾಡದೆ ಮೌನಿಯಾಗಿ ಕುಳಿತುಕೊಂಡ. ತನ್ನ ಜೊತೆ ಓದುತ್ತಿದ್ದ ರಮ್ಯಳನ್ನು ಆತ ಮುಂದೆ ಕ್ಷಣವೂ ಬಿಟ್ಟಿರಲು ಸಾಧ್ಯವಾಗುವುದಿಲ್ಲವೇನೋ ಎಂಬಂತೆ ಪ್ರೀತಿಸುತ್ತಿದ್ದ. ‘ಸಾರಿ, ತಪ್ಪಾಯಿತು ಮಾರಾಯ, ಅದಕ್ಕೆ ಯಾಕೆ ಅಳೋದು?’ ಎಂದೆ. ‘ಇದೊಂಥರ ಖುಷಿ ಕೊಡೋ ಅಳು ಕಣೋ , ನಾನು ಆಕೆಯನ್ನು ಪ್ರೀತಿಸಿದ್ದೆ ಹೌದು, ಆದರೆ ಆಕೆ ಒಮ್ಮೆಯೂ ನನ್ನನ್ನು ಪ್ರೀತಿಸುತ್ತೇನೆಂದು ಹೇಳಲಿಲ್ಲವಲ್ಲ, ಈಗ ಆಕೆಗೆ ಮದುವೆ ಆಗಿದೆ, ಆಕೆಯ ವಿಚಾರ ನೆನಪು ನನಗೇತಕೆ?’ ಎಂದು ಆತನೇ ಹೇಳಿದ. ‘ಈಗ ಪ್ರೀತಿಸುತ್ತೀರೋ ಹುಡುಗಿ ನಾನು ಸಂಜೆ ಸಂಗೀತ ಕಲಿಯುವ ಶಾಲೆಗೆ ಬರುತ್ತಿದ್ದವಳು, ನೋಡೋಕೆ ಚೆನ್ನಾಗಿದ್ದಾಳೆ, ನನಗಿಂತ ಎಂಟು ವರ್ಷ ಚಿಕ್ಕವಳು, ಹೆಸರು ನವ್ಯ, ಅವಳ ಓದು ಮುಗಿಯಲು ಇನ್ನೂ ನಾಲ್ಕು ವರ್ಷ ಬೇಕು, ಯಾಕೆ ಅಷ್ಟು ಹಚ್ಚಿಕೊಂಡಳೋ ಗೊತ್ತಿಲ್ಲ, ಒಮ್ಮೆ ಧೈರ್ಯವಾಗಿ ಹೇಳಿಯೇಬಿಟ್ಟಳು, ಒಂಟಿಯಾಗಿ ಬೆಳೆದ ನನಗೆ ಆಕೆಯನ್ನು ಕಂಡಾಗ ಒಂದಷ್ಟು ದಿನವಾದರೂ ಅವಳೊಡನೆ ಬದುಕಬೇಕು ಎಂದೆನಿಸಿತ್ತು, ಆಗಾಗ ಆಕೆಯನ್ನು ಕದ್ದು ಕದ್ದು ನೋಡುತ್ತಿದ್ದೆ ಕೂಡ, ಆದರೆ ಆಕೆ ನಿಮ್ಮನ್ನು ಪ್ರೀತಿಸುತ್ತಿದ್ದೇನೆ ಎಂದು ಧೈರ್ಯವಾಗಿ ಹೇಳಿದಾಗ ಆ ಕ್ಷಣದಲ್ಲಿ ಒಪ್ಪಿಕೊಳ್ಳುವುದೋ ಬೇಡವೋ ಎಂಬ ಗೊಂದಲಕ್ಕೆ ಬಿದ್ದಿದ್ದರೂ ಮುಂದಿನದ್ದು ಯೋಚಿಸದೇ ಒಪ್ಪಿಕೊಂಡು ಬಿಟ್ಟೆ. ಈ ಘಟನೆ ನಡೆದದ್ದು ಎರಡು ವರ್ಷದ ಹಿಂದೆ’ ಎಂದಿದ್ದ. ನನ್ನ ಜೊತೆಗೆ ಅನೇಕ ಬಾರಿ ಕಂಠಪೂರ್ತಿ ಬಿಯರ್ ಹೀರಿದ್ದಾನೆ, ಎಷ್ಟೋ ದಿನ ಇಬ್ಬರೂ ಮನೆಗೆ ತಲುಪಿಕೊಳ್ಳುವುದು ಕಷ್ಟವಾಗಬಹುದೇನೋ ಎಂದುಕೊಂಡು ಪಕ್ಕದಲ್ಲಿಯೇ ಇದ್ದ ಲಾಡ್ಜ್ ನಲ್ಲಿಯೇ ಮಲಗಿಕೊಂಡಿದ್ದೇವೆ. ಆದರೆ, ಒಂದು ದಿನವೂ ಆತ ಈ ವಿಚಾರವನ್ನು ನನಗೆ ತಿಳಿಸಿರಲಿಲ್ಲ, ನನಗೆ ಕೊಂಚವೂ ಸಂದೇಹವೂ ಬಂದಿರಲಿಲ್ಲ. ಆತ ಮಾತು ಮುಂದುವರೆಸುವಷ್ಟರಲ್ಲಿಯೇ ನಾನು ಹುಟ್ಟು ಹಾಕಿದ್ದ ಸ್ವಯಂ ಸೇವಾ ಸಂಸ್ಥೆಯಾದ ‘ದೇಶ ರಕ್ಷಣೆ, ನಮ್ಮ ಹೊಣೆ’ಯ ಕಾರ್ಯಕರ್ತರು ಬಂದು ದೆಹಲಿಯಲ್ಲಿ ನಡೆದಿದ್ದ ಅತ್ಯಾಚಾರದ ವಿರುದ್ಧದ ಪ್ರತಿಭಟನೆಯ ರೂಪುರೇಶೆಯ ಬಗ್ಗೆ ಮಾತನಾಡುತ್ತ ಕುಳಿತುಕೊಂಡರು. ಹೆಂಡತಿಗೆ ಐದು ಟೀ ಮಾಡಿಕೊಂಡು ಬರಲು ಹೇಳಿ ಬಂದಿದ್ದೆ, ಆದರೆ ಆಕೆ ಮಾಡಿಕೊಡಲಿಲ್ಲ. ‘ನಿಮ್ಮ ಸಂಸ್ಥೆಗೆ ಮಣ್ಣು ಹಾಕಿ, ಮಕ್ಕಳಿಗೆ ಸಂಕ್ರಾಂತಿಗೆ ಬಟ್ಟೆ ಕೊಡಿಸುವ ಬಗ್ಗೆ ಯೋಚಿಸಿ’ ಎಂದು ಚೀರಿಕೊಂಡು ಮುಖ ಮುರಿದಿದ್ದಳು.

 

ಈ ಪ್ರತಿಭಟನೆ ಗೌಜು ಗದ್ದಲದ ನಡುವೆ ಇಂದಿನವರೆವಿಗೂ ಲಕ್ಷ್ಮಣನೊಡನೆ ಮಾತನಾಡಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಪರಿಸ್ಥಿತಿಯ ಕಾರಣದಿಂದ ಆತನೊಂದಿಗೆ ಬಾರ್ ನಲ್ಲಿ ಕುಳಿತ್ತಿದ್ದೇನೆ. ‘ಮನೆಯವರನ್ನು ದೂರ ಮಾಡುವಂತಹ ಪರಿಸ್ಥಿತಿ ಏನೋ ಬಂದಿದೆ ಈಗ? ನೀನು ತಾಯಿ ಇಲ್ಲದೇ ಬೆಳೆದವನು, ಹದಿನೈದು ತುಂಬೋವರೆವಿಗೂ ಹೇಗೋ ಬೆಳೆದ ನಿನ್ನನ್ನ ನಂತರ ಸಾಕಿದ್ದು ನಿನ್ನತ್ತಿಗೆಯಂದಿರು ಮತ್ತು ಅಣ್ಣಂದಿರು ಎಂಬುದನ್ನ ಮರಿಬೇಡ, ಸತ್ತು ಹೋದ ತಾಯಿ ನನ್ನ ಅತ್ತಿಗೆಯಂದಿರ ರೂಪದಲ್ಲಿ ಬಂದಿದ್ದಾಳೆಂದು ನೀನೇ ಹೇಳುತ್ತಿದ್ದೆ’ ಎಂದೆ.

ಅಷ್ಟು ಬೇಗ ಆತ ಒಂದು ಬಿಯರ್ ಬಾಟಲ್ ಮುಗಿಸಿದ್ದ, ಇಂದೇಕೋ ಸಿಗರೇಟ್ ಕೂಡ ಕೇಳಿದ, ನಾನು ನೀಡಲಿಲ್ಲ. ‘ಸಿಗರೇಟ್ ಸೇದೋದು, ಕುಡಿಯೋದು ಇವೆಲ್ಲಾ ನಮ್ಮ ಕಿಡ್ನಿ, ಲಿವರ್ ನನ್ನು ತಿಂದು ಹಾಕಿಬಿಡುತ್ತವೆ ಕಣೋ, ಕುಡಿಯೋದನ್ನೇ ಬಿಟ್ಟುಬಿಡೋಣವೆಂದು ಎಷ್ಟು ಬಾರಿ ಹೇಳಿದ್ದೇನೆ, ಆದರೆ ಈಗ ನೀನು ಸಿಗರೇಟನ್ನು...’ ಎನ್ನುವಷ್ಟರಲ್ಲಿ ಆತ ಪ್ಯಾಕಿನಿಂದ ಒಂದು ಸಿಗರೇಟ್ ಕಸಿದುಕೊಂಡು ತುಟಿಗಿಟ್ಟು ಬೆಂಕಿ ಹಚ್ಚಿದ್ದ.

 

‘ನಾನೀಗ ಸಂದಿಗ್ಧತೆಯಲ್ಲಿದ್ದೇನೋ ಕಣೋ, ಮನೆಯಲ್ಲಿ ಮದುವೆ ಮಾಡಿಕೊಳ್ಳಲು ವಿಪರೀತ ಹಿಂಸೆ ಮಾಡ್ತಾ ಇದ್ದಾರೆ, ಒಂದು ವರ್ಷ ಹೇಗೋ ಸತಾಯಿಸಿಕೊಂಡು ಬಂದಿದ್ದೆ, ಆದರೆ ಈಗ ಹಾಸಿಗೆ ಹಿಡಿದಿರುವ ನಮ್ಮ ತಂದೆಯನ್ನು ಮುಂದಿಟ್ಟುಕೊಂಡು ಹೊಸ ಬಗೆಯ ಆಟ ಶುರುವಿಟ್ಟುಕೊಂಡಿದ್ದಾರೆ, ಬೀದಿ ಬೀದಿ ಸುತ್ತೋ ಹುಚ್ಚನನ್ನ ಹಿಡಿದು ಮದುವೆ ಮಾಡೋ ಹಾಗೆ ಆಡ್ತಾ ಇದ್ದಾರೆ. ಹುಡುಗಿ ಸಿಗೋಲ್ಲ, ಈಗ ಒಂದೆರಡು ಕಡೆ ಒಳ್ಳೆಯ ಸಂಬಂಧ ಬಂದಿದೆ, ಮದುವೆ ಖರ್ಚು ಅವರೇ ನೋಡ್ಕೋತಾರೆ, ನಿನ್ನಭಿಪ್ರಾಯ ಏನು ಅಂತಾರೆ, ಇನ್ನೆರಡು ವರ್ಷದವರೆವಿಗೆ ಮದುವೆ ಬೇಡ ಅಂದರೂ ಅವರು ಒಪ್ಪಲ್ಲ, ಹೇಗಾದರೂ ಮಾಡಿ ಒಪ್ಪಿಸಿಕೊಳ್ಳಬೇಕು ಅನ್ನೋದೇ ಅವರ ಹಠ...’ ಹೀಗೆ ಹೇಳುತ್ತ ಹೋದವನು ಒಂದು ಘಂಟೆವರೆವಿಗೂ ಮಾತನಾಡಿ ಹಗುರಾದ.

 

ಮದುವೆಯ ಖರ್ಚನ್ನು ತಾವೇ ನೋಡಿಕೊಂಡು ಮದುವೆ ಮಾಡಿಕೊಡಲು ಹುಡುಗಿಯ ಮನೆಯವರು ತಯಾರಿದ್ದರೂ ಸಣ್ಣ ಪುಟ್ಟವು ಎಂದುಕೊಂಡೇ ಲಕ್ಷ ಲಕ್ಷ ಖರ್ಚಾಗುತ್ತದೆ. ಆದರೆ, ಲಕ್ಷ್ಮಣನ ಅಣ್ಣಂದಿರು ಆ ಖರ್ಚನ್ನೂ ನೋಡಿಕೊಂಡು ಮದುವೆ ಮಾಡಿಕೊಡಲು ತಯಾರಿದ್ದರು. ಯಾವಾಗಲೂ ಒಂಟಿ ಇರುತ್ತಾನೆ, ಊಟ ತಿಂಡಿಗೆ ತೊಂದರೆ, ಹೊರಗಿನ ಊಟ ಆರೋಗ್ಯಕ್ಕೆ ಒಳ್ಳೆಯದಲ್ಲ, ತನ್ನ ಬಟ್ಟೆ ತಾನೇ ಒಗೆದುಕೊಳ್ಳಬೇಕು, ಜೊತೆಗೆ ಮಲತಾಯಿಯ ಅಪೌಷ್ಠಿಕತೆಯಲ್ಲಿ ಬೆಳೆದಾತ ನಂತರದ ದಿನಗಳಲ್ಲಿ ಹಾಸ್ಟೆಲ್ ಗಳಲ್ಲಿ ಬೆಳೆದಿದ್ದರಿಂದ ಆದಷ್ಟು ಬೇಗ ತನ್ನದೇ ಸಂಸಾರ ಕಟ್ಟಿಕೊಂಡು ಬಂದವಳ ಜೊತೆ ಆರಾಮವಾಗಿರಲಿ, ಹೆಂಡತಿ ಬಂದುಬಿಟ್ಟರೆ ಎಲ್ಲಾ ಕಷ್ಟಗಳು ಮಾಯವಾಗಿ ಸುಖ ಜೀವನ ದೊರಕಿಬಿಡುತ್ತದೆ ಎಂಬುದು ಅವರಭಿಪ್ರಾಯ. ಅದೂ ಇಲ್ಲದಿದ್ದರೆ ಆತ ಯಾರನ್ನಾದರೂ ಇಷ್ಟ ಪಟ್ಟಿದ್ದರೆ ಅವರನ್ನೇ ಮದುವೆಯಾಗಲಿ ಎಂದೂ ಹೇಳುತ್ತಾರಂತೆ. ಆದರೆ, ಈತನ ಪರಿಸ್ಥಿತಿ ಗಂಟುಬಿದ್ದು ನುಲಿದುಕೊಂಡ ನೂಲನ್ನು ಬಿಡಿಸಿದಂತಿದೆ. ‘ನಿಮ್ಮ ಪ್ರೀತಿ ವಿಚಾರ ಎಲ್ಲರಿಗೂ ಮುಟ್ಟಿಸಿ ಮದುವೆಯ ಬಗ್ಗೆ ಯೋಚಿಸೋದಲ್ಲವೇ?’ ಎಂದರೆ ಅದೂ ಆಗುವುದಿಲ್ಲವೆನ್ನುತ್ತಾನೆ. ಆತ ಹೇಳುವಂತೆ ಹುಡುಗಿ ಇನ್ನೂ ಓದುತ್ತಿದ್ದಾಳೆ, ಅವರ ಮನೆಯಲ್ಲಿ ಮದುವೆಯ ಬಗ್ಗೆ ಆಲೋಚಿಸಿಲ್ಲ, ಇವಳಿಗಿಂತ ಮುಂಚೆ ಹುಟ್ಟಿರುವ ಇಬ್ಬರು ಹುಡುಗಿಯರಿಗೇ ಮದುವೆ ಆಗಿಲ್ಲ. ಜೊತೆಗೆ ಇವನದು ಮತ್ತು ಆಕೆಯದು ಬೇರೆ ಬೇರೆ ಜಾತಿ. ಅವರೋ ಲಕ್ಷ್ಮಣನ ಮನೆಯವರಂತೆ ಮಾನವೀಯತೆಗೆ ಬೆಲೆ ಕೊಡುವವರಲ್ಲ, ಬದಲಾಗಿ ಅಂತರ್ಜಾತಿ ವಿವಾಹಕ್ಕೆ ಉರಿದುಬೀಳುವ ಜನ, ಮರ್ಯಾದೆ ಹತ್ಯೆಗೂ ಹೆದರದೆ ಕೊಲೆ ಮಾಡಿ ಒಂದಷ್ಟು ವರ್ಷ ಜೈಲಿನಲ್ಲಿ ಇದ್ದು ಬರಲೂ ಹೇಸದವರು. ಈ ಪರಿಸ್ಥಿತಿಯಲ್ಲಿ ಆತ ತನ್ನಿಷ್ಟದ ಹುಡುಗಿಯನ್ನು ಸಾಮಾಜಿಕವಾಗಿ ತೋರಿಸಿಕೊಳ್ಳಲು ಬಹಳ ಹೆದರಿದ್ದ ಎನ್ನುವುದಕ್ಕಿಂತ ಗೊಂದಲದಲ್ಲಿದ್ದಾನೆ ಎಂಬುದು ಗೊತ್ತಾಗುತ್ತಿತ್ತು. ತನ್ನ ಮನೆಯವರು ತನ್ನಭಿಲಾಶೆಗೆ ಎದುರು ಬರುವುದಿಲ್ಲವೆಂಬುದು ಆತನಿಗೆ ಸ್ಪಷ್ಟವಾಗಿತ್ತು, ಆದರೆ ಹುಡುಗಿಯ ಮನೆಯವರನ್ನು ಹೇಗೆ ಒಪ್ಪಿಸಿಕೊಳ್ಳುವುದು, ಈ ವಿಚಾರವಾಗಿ ಮಾತನಾಡಿದರೆ ನವ್ಯಳ ಓದನ್ನು ಅರ್ಧಕ್ಕೆ ಮೊಟಕುಗೊಳಿಸಿ ಮನೆಯಲ್ಲಿಯೇ ಉಳಿಸಿಕೊಳ್ಳಬಹುದು, ಪರ್ಯಾಯವಾಗಿ ಆಕೆಯ ಮದುವೆಗೆ ಏರ್ಪಾಡು ಮಾಡಿಕೊಳ್ಳಬಹುದು ಎಂಬ ಭಯ ಆತನನ್ನು ತೀವ್ರವಾಗಿ ಕಾಡುತ್ತಿತ್ತು.

 

‘ನೀನು ಬುದ್ಧಿವಂತ, ಇಷ್ಟೆಲ್ಲಾ ಗೊಂದಲಗಳ ಅರಿವಿರಲಿಲ್ಲವೇ?’ ಎಂದು ಕೇಳಿದ್ದೆ. ಅದಕ್ಕೆ ಆತ ‘ಆ ಸಮಯದಲ್ಲಿ ಆಕೆ ಪ್ರಪೋಸ್ ಮಾಡಿದಾಗ ನನಗೆ ಒಪ್ಪಿಕೋಬೇಕು ಅನ್ನಿಸ್ತು ಒಪ್ಪಿಕೊಂಡ್ಬಿಟ್ಟೆ, ಆದರೆ ಈಗ ದುಡುಕಿಬಿಟ್ಟೆ  ಅನ್ನಿಸ್ತಾ ಇದೆ, ನವ್ಯ ಶುದ್ಧ ಮನಸ್ಸಿನ ಹುಡುಗಿ, ನನ್ನನ್ನು ಎಷ್ಟು ಹಚ್ಚಿಕೊಂಡಿದ್ದಾಳೆಂದರೆ ‘ನನ್ನನ್ನು ಬಿಟ್ಟುಬಿಡು’ ಎಂದು ಒಮ್ಮೆ ತಮಾಷೆಗೆ ಹೇಳಿದಾಗ, ಜ್ವರ ಬಂದು ಒಂದು ವಾರ ಹಾಸಿಗೆ ಹಿಡಿದಿದ್ದಳು, ಆಕೆ ನನ್ನನ್ನು ಮತ್ತು ಆಕೆಯ ಕುಟುಂಬದವರನ್ನೂ ಬಿಡಲು ತಯಾರಿಲ್ಲ, ನೀನೊಂದು ಒಳ್ಳೆಯ ಸ್ಥಾನಕ್ಕೆ ಬಂದು ಸೆಲೆಬ್ರಿಟಿಯಾಗು ನಂತರ ನಮ್ಮ ಮನೆಯವರು ನಿನ್ನನ್ನೇ ಅರಸಿ ಬರ್ತಾರೆ, ನೀನು ಆ ರೀತಿ ಆಗ್ತೀಯ ಅಂತ ನನಗೆ ಗೊತ್ತು ಅಂತಾಳೆ’ ಎಂದಿದ್ದ. ನಿಜ ಹೇಳಬೇಕೆಂದರೆ ಲಕ್ಷ್ಮಣ್ ಒಬ್ಬ ದೊಡ್ಡ ಪ್ರತಿಭಾವಂತ, ಹಣದಲ್ಲಿ ಎಲ್ಲವನ್ನೂ ಅಳೆಯುವ ಈ ಜಗತ್ತಿನಲ್ಲಿ ಆತನ ಪ್ರತಿಭೆಗೆ ಬೆಲೆ ಸಿಕ್ಕಿರಲಿಲ್ಲ, ಮರು ಪ್ರಯತ್ನ ಮಾಡದೆ ಈ ಗೊಂದಲಕ್ಕೆ ಸಿಲುಕಿಕೊಂಡವನೇ ಹೈರಾಣಾಗಿಹೋಗಿದ್ದ. ಮಿತಿಮೀರಿ ಕುಡಿದ ಕಾರಣ ಇಂದೂ ಲಾಡ್ಜ್‍ನಲ್ಲಿ ತಂಗಬೇಕಾಯಿತು. ರಾತ್ರಿ ಆತನ ಜೊತೆ ಮಲಗಿದ ನನಗೆ ಒಂದು ಕಡೆ ನನ್ನ ಹೆಂಡತಿ ಮಕ್ಕಳ ಗೋಳು, ಮತ್ತೊಂದೆಡೆ ಲಕ್ಷ್ಮಣನ ಸಧ್ಯದ ಸ್ಥಿತಿಗೆ ಮರುಗಿ ನಿದ್ದೆ ಬರಲಿಲ್ಲ. ಕಂಠಪೂರ್ತಿ ಕುಡಿದಿದ್ದರೂ ಲಕ್ಷ್ಮಣನ ಹಾಸಿಗೆಯ ಹೊರಳಾಟ ಆತನ ಮಾನಸಿಕ ಸಂಧಿಗ್ದತೆಯನ್ನು ನನಗೆ ವಿವರಿಸುತ್ತಿತ್ತು.

 

ಮುಂಜಾನೆ ಬೇಗ ಎದ್ದವನೇ ಮನೆಗೆ ಬಂದೆ. ಮಕ್ಕಳು ತುಂಬಾ ತಾತ್ಸಾರದಿಂದ ನನ್ನೆಡೆಗೆ ಮುಖ ತಿರುಗಿಸಿಕೊಂಡವು. ಆಕೆಯ ಬಳಿಗೆ ಹೋದರೆ ಆಕೆಯೂ ಒಣ ಅಹಂಕಾರದಿಂದ ನನ್ನೆಡೆಗೆ ನೋಡಲಿಲ್ಲ. ‘ಸಾರ್ರಿ ಭವ್ಯ, ರಾತ್ರಿ ಬರಲಾಗಲಿಲ್ಲ’ ಎಂದೆ. ಅದಕ್ಕವಳು ‘ನೀವು ಎಲ್ಲಿಗಾದ್ರೂ ಹೋಗಿ, ನಿಮ್ಮನ್ನ ಕಟ್ಟಿಕೊಂಡ ಮೇಲೆ ನಮಗೇನು ಉಪಯೋಗವಾಗಿದೆ’ ಎಂದಳು. ಅವಳ ಮೊಗದಲ್ಲಿ ರಾತ್ರಿಯೆಲ್ಲಾ ಗಂಡ ಎಲ್ಲಿದ್ದ, ಅವನ ಮನೆಯಿಂದ ಅವನೇ ಹೊರಗೆ ಹೋಗಿ ಎಷ್ಟು ಕಷ್ಟ ಅನುಭವಿಸಿರಬಹುದು, ನಿದ್ದೆ ಮಾಡಿದ್ದನೋ ಇಲ್ಲವೋ ಇತ್ಯಾದಿಯಾಗಿ ಯಾವ ಆಲೋಚನೆಯೂ ಇರಲಿಲ್ಲ. ‘ಹಾಳಾಗಿ ಹೋಗಲಿ ಬಿಡು, ಈಗೇಕೆ ಅಮ್ಮ ಮಕ್ಕಳೆಲ್ಲಾ ಈ ರೀತಿಯಾಗಿ ಮುನಿಸಿಕೊಂಡಿರೋದು’ ಎಂದ ಕೂಡಲೇ ಆಕೆ ಯಾವುದೋ ಸಣ್ಣ ಕಾಗದವನ್ನು ಮುಖದ ಮೇಲೆಸೆದಳು. ಆ ಕಾಗದ ನನ್ನ ಬ್ಯಾಂಕ್ ಅಕೌಂಟಿನ ‘ಮಿನಿ ಸ್ಟೇಟ್‍ಮೆಂಟ್’ ಆಗಿತ್ತು, ರಾತ್ರಿ ಇಲ್ಲೇ ಎಲ್ಲೋ ಮರೆತು ಹೋಗಿದ್ದೆ. ‘ನಿಮ್ಮ ಹೆಂಡತಿ ಮಕ್ಕಳ ಮೇಲೆ ಆಸೆಯಿರೋರು ಅನಾಥಾಶ್ರಮ ಕಟ್ಟೋಕೆ ಈ ರೀತಿಯಾಗಿ ಮೂರು ಲಕ್ಷ ದುಡ್ಡನ್ನು ಬ್ಯಾಂಕಿನಿಂದ ಎಳೆದುಕೊಳ್ಳುತ್ತಿರಲಿಲ್ಲ, ಗಲ್ಲಿ ಗಲ್ಲಿಯಲ್ಲಿ ಹೆಕ್ಕಿ ತಿನ್ನುವ ದರಿದ್ರ ಮಕ್ಕಳ ಮೇಲಿರೋ ಆಸೆ ನಿಮಗೆ ನಮ್ಮ ಮೇಲಿಲ್ಲ, ಥೂ...’ ಎಂದಳು. ‘ಅಯ್ಯೋ, ನಾನೇನು ಕಡಿಮೆ ಮಾಡಿದ್ದೇನೆ ನಿಮಗೆ, ಮನೆಯಲ್ಲಿ ಎಲ್ಲವೂ ಇದೆಯಲ್ಲ, ಒಂದೇ ಒಂದು ದಿನ ಏನಾದ್ರೂ ನಿಮ್ಮನ್ನ ಖಾಲಿ ಹೊಟ್ಟೆನಲ್ಲಿ ಇರಿಸಿದ್ದಿದೆಯೇ?’ ಎಂದೆ. ‘ಥೂ... ನಿಮ್ಮನ್ನು ಕಟ್ಟಿಕೊಂಡು ನಾನು ಹಾಳಾದೆ’ ಎಂದವಳೇ ಮನೆಯಿಂದ ಹೊರಗೆ ಹೋದಳು. ಅವಳು ಏನೇ ಹೇಳಿದರೂ ನಾನು ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ, ಬೀದಿ ಬದಿಯಲ್ಲಿ ಭಿಕ್ಷೆ ಬೇಡುವವರ ಮೇಲೆ ಕಾಳಜಿ ಇಟ್ಟಿರುವ ನನಗೆ ನನ್ನ ಹೆಂಡತಿ ಮಕ್ಕಳಿಗೆ ಅರ್ಧ ದಾರಿಯಲ್ಲಿ ಮೋಸ ಮಾಡದೆ ಹೋಗದಿರುವುದೂ ಗೊತ್ತು. ಎಷ್ಟೇ ಮಾಡಿದರೂ, ರಮಿಸಿದರೂ ನನ್ನೆಡೆಗಿನ ಆಕೆಯ ಕೊಂಕು ನುಡಿಗಳು ಇದ್ದೇ ಇರುತ್ತದೆ. ಆದರೆ, ಆಗಾಗ ಈ ವಿಚಾರಗಳು ನನ್ನ ಮಾನಸಿಕ ಸಮತೋಲನವನ್ನು ಅಲುಗಾಡಿಸಿ ನನ್ನ ಕೆಲಸಕ್ಕೆ ಅಡ್ಡಿಯಾಗುತ್ತವೆ ಎಂಬುದು ಸತ್ಯ.

 

ಅನಾಥಾಶ್ರಮದ ವಸತಿ ಗೋಡೆಗಳು ಈಗಷ್ಟೇ ಮೇಲೇಳುತ್ತಿವೆ, ಕಟ್ಟಡ ನಿರ್ಮಾಣಗಳಿಗೆ ನಾನು ಖರ್ಚು ಮಾಡುತ್ತಿರುವ ಮುಕ್ಕಾಲು ಭಾಗ ಸಾರ್ವಜನಿಕರಿಂದ ದೇಣಿಗೆಯಾಗಿ ಬಂದದ್ದು. ಆದುದರಿಂದ ನಾನು ಯಾವಾಗಲೂ ಆ ಕಟ್ಟಡಗಳ ಪಕ್ಕವೇ ಇರುತ್ತೇನೆ, ಮೇಸ್ತ್ರಿ ನನಗೆ ತಿಳಿದವನಾದರೂ ಪುಕ್ಸಟ್ಟೆಯಾಗಿ ಹಣ ಪೋಲಾಗದಿರುವಂತೆ ನೋಡಿಕೊಳ್ಳುತ್ತೇನೆ. ಆದರೆ, ಇಂದೇಕೋ ಕೈಕಾಲುಗಳು ಹಾಸಿಗೆಯ ಮೇಲೇ ಮರಗಟ್ಟಿದ್ದವು. ಸಧ್ಯ ಮನಸ್ಸು ಲಕ್ಷ್ಮಣ್ ಸ್ಥಿತಿಯ ಬಗ್ಗೆಯೇ ಯೋಚಿಸುತ್ತಿತ್ತು. ಆತನ ಅಣ್ಣಂದಿರಿಗೆ ವಿಚಾರ ಮುಟ್ಟಿಸೋಣವೆಂದರೆ ನನಗೂ ಆತನಂತೆಯೇ ಆ ಹುಡುಗಿಯ ವಿಚಾರದಲ್ಲಿ ಗೊಂದಲ ಮೂಡಿತ್ತು. ಆತನ ಮೊಬೈಲ್‍ನಲ್ಲಿ ಆ ಹುಡುಗಿಯ ಅಮ್ಮನ ಮೊಬೈಲ್ ನಂಬರ್ ಇತ್ತು, ರಾತ್ರಿಯೇ ಆ ನಂಬರನ್ನು ಕೇಳಿ ತೆಗೆದುಕೊಂಡಿದ್ದೆ. ಮುಂಜಾನೆ ಮಾತನಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿಕೊಡುತ್ತೇನೆ, ಯೋಚಿಸಬೇಡ ಎಂದು ಲಕ್ಷ್ಮಣ್‍ಗೆ ಹೇಳಿದ್ದೆ. ಸ್ವಲ್ಪ ಚೇತರಿಸಿ ಉಸಿರು ಎಳೆದುಕೊಂಡವನೇ ನೇರವಾಗಿ ನವ್ಯಳ ಅಮ್ಮನಿಗೆ ಫೋನಾಯಿಸಿದೆ. ರಿಂಗ್ ಆಗುವ ಹೊತ್ತಿಗೆ ಯಾಕೋ ಗೊಂದಲ ಮೂಡಿ ಕಟ್ ಮಾಡಿದ್ದೆ. ‘ನಾನು ಮಾಡುತ್ತಿರುವುದು ಸರಿಯೇ?’ ಎಂದು ನನ್ನನ್ನು ನಾನೇ ಕೇಳಿಕೊಂಡೆ. ನಂತರ ಈ ಜನಗಳಿಗೆ ಸುಬುದ್ಧಿ ಹೇಳಿ ತಿದ್ದಿ ತೀಡಿ ಲಕ್ಷ್ಮಣನನ್ನು ಉಳಿಸಿಕೊಳ್ಳಬೇಕು ಎಂದೆನಿಸಿತ್ತು. ಮತ್ತೆ ಫೋನಾಯಿಸಿದೆ.

 

ನನ್ನನ್ನು ಮೊದಲು ಪರಿಚಯಿಸಿಕೊಳ್ಳುವಾಗ ಅವರನ್ನು ಅಮ್ಮ ಎಂದು ಕರೆಯುತ್ತಿದ್ದೆ. ಅಮ್ಮ ಎಂಬ ಶಬ್ದ ಆಕೆಯ ಕಿವಿಗೆ ಬಿದ್ದೊಡನೆ ತುಂಬಾ ಮೃದುವಾಗಿ ಹೋದರು. ನಂತರ ಈ ಯಾವತ್ತೂ ವಿಚಾರಗಳನ್ನು ಆಕೆಗೆ ಮುಟ್ಟಿಸಿದೆ. ‘ನಿಮ್ಮ ಮಗಳು ಮತ್ತು ನನ್ನ ಗೆಳೆಯ ಲಕ್ಷ್ಮಣ್ ಒಬ್ಬರನ್ನೊಬ್ಬರು ಪ್ರೀತಿಸ್ತಾ ಇದ್ದಾರೆ’ ಎಂದಾಗ ಆಕೆಯ ಧ್ವನಿ ನಡುಗಲು ಪ್ರಾರಂಭಿಸಿತು. ಈ ವಿಚಾರ ಹೇಳುವುದಕ್ಕಿಂತ ಮುಂಚೆ ಎಷ್ಟೋ ದುರಂತಗಳನ್ನು ಆಕೆಗೆ ಹೇಳುವುದಲ್ಲದೇ, ಕೇವಲ ಮಾನವೀಯತೆಯ ಈ ಜಗದಲ್ಲಿ ಮನುಷ್ಯರು ತಮ್ಮ ತಮ್ಮ ನಡುವೆ ಗೆರೆ ಎಳೆದುಕೊಂಡು ಹೇಗೆ ತಮ್ಮ ಅವಸಾನಗಳಿಗೆ ಕಾರಣವಾಗುತ್ತಿದ್ದಾರೆ ಎಂಬುದನ್ನು ಸುತ್ತಲಿನ ಉದಾಹರಣೆಗಳ ಮೂಲಕ ಸವಿವರವಾಗಿ ತಿಳಿಸಿದ್ದೆ, ಜೊತೆಗೆ ಲಕ್ಷ್ಮಣ್ ಎಂಬ ಒಬ್ಬ ಒಳ್ಳೆಯ ಮತ್ತು ಪ್ರತಿಭಾವಂತ ಹುಡುಗನ ಬಗ್ಗೆಯೂ ತಿಳಿಸಿಕೊಟ್ಟಿದ್ದೆ. ಒಮ್ಮೆಲೇ ಆಕೆ ‘ನೀವು ಸುಳ್ಳು ಹೇಳ್ತಾ ಇದ್ದೀರಿ, ನನ್ನ ಮಗಳು ಅಂಥವಳಲ್ಲ’ ಎಂದರು.

‘ಅಂಥವಳಲ್ಲ ಎಂದರೆ ಅರ್ಥವೇನು? ಆಕೆಯೇನು ವ್ಯಭಿಚಾರ ಮಾಡಿಲ್ವಲ್ಲ ಆಕೆಯ ಮನಸ್ಸು ಇಷ್ಟ ಪಟ್ಟ ಹುಡುಗನನ್ನು ಬಿಟ್ಟು ಮತ್ತೊಬ್ಬ ಹುಡುಗನಿಗೆ ಆಕೆಯನ್ನ ನೀವು ಮದ್ವೆ ಮಾಡಿಕೊಟ್ಟದ್ದೇ ಆದ್ರೆ ಅದನ್ನ ನಾನು ವ್ಯಭಿಚಾರ ಅಂತ ಹೇಳ್ತೇನೆ’ ಎಂದೆ.

 

‘ಈ ವಿಚಾರ ನನ್ನ ಗಂಡ ಮತ್ತು ಅವರಣ್ಣನಿಗೆ ತಿಳಿದ್ರೆ ಅಲ್ಲೋಲ ಕಲ್ಲೋಲ ಆಗುತ್ತೆ, ಕೂಡಲೇ ಅವರಿಗೆ ತಿಳಿಸಿಬಿಡ್ತೇನೆ, ನೀವೇ ಮಾತಾಡ್ಕೊಳ್ಳಿ’ ಎಂದಾಗ ‘ದಯವಿಟ್ಟು ಅವಸರ ಪಡ್ಬೇಡಿ, ಈ ಎಲ್ಲಾ ಅವಸರಗಳಿಂದ ನಿಮ್ಮ ಮಗಳಿಗೆ ತೊಂದರೆ ಆಗಬಹುದು, ನಿಮ್ಮ ಗಂಡ, ಅವರ ಕಡೆಯೋರ ದುಡುಕಿನಿಂದ ಅಪಾಯ ಆಗಬಹುದು’ ಎಂದೆ. ಅದಕ್ಕವರು ‘ನನ್ನ ಪರಿಸ್ಥಿತಿಯನ್ನೂ ಅರ್ಥ ಮಾಡ್ಕೊಳ್ಳಿ, ಮಗಳು ಈ ರೀತಿ ಮಾಡಿರೋದನ್ನು ತಾಯಿಯೇ ಮುಚ್ಚಿಟ್ಟಳು ಅನ್ನೋ ಅಪವಾದ ಬರೋಲ್ವ’ ಎಂದಾಗ ‘ಸದ್ಯಕ್ಕೆ ಏನೂ ನಿರ್ಧಾರ ಬೇಡ, ನಿಮ್ಮ ಮಗಳಿಗೆ ತಿಳಿಯದಂತೆ ಇರಿ, ಮೊದಲು ಆರಾಮವಾಗಿ, ನಂತರ ಯೋಚಿಸಿ ನನಗೆ ಫೋನ್ ಮಾಡಿ’ ಎಂದು ಹೇಳಿ ಫೋನ್ ಕಟ್ ಮಾಡಿದ್ದೆ.

 

ಆ ಅಮ್ಮ ಮಾತಿನ ಮಧ್ಯೆ ‘ನಿಮ್ಮ ಮಗಳು ಮುಂದೆ ಈ ಸ್ಥಿತಿಗೆ ಬಂದ್ರೆ ನೀವು ಒಪ್ಪಿಕೊಂಡು ಬಿಡ್ತಿರಾ?’ ಎಂದರು, ಅದಕ್ಕೆ ನಾನು ‘ಖಂಡಿತವಾಗಿಯೂ’ ಎಂದಿದ್ದೆ. ಆದರೆ, ‘ಈ ಸ್ಥಿತಿ’ ಎಂಬುದೇ ನನಗೆ ಅರ್ಥವಾಗಲಿಲ್ಲ. ಯಾವ ಸ್ಥಿತಿಯದು? ಮನಸ್ಸಿಗೆ ಕಟ್ಟುಪಾಡನ್ನು ಎಳೆಯುವ ಆ ಸ್ಥಿತಿಯ ಜೀವಂತಿಕೆ ಇನ್ನೂ ಏಕೆ ಇರಬೇಕು, ನಾಶವಾಗುವ ಬದಲು ದಿನದಿಂದ ದಿನಕ್ಕೆ ತನ್ನ ಕಬಂಧಬಾಹುವನ್ನು ವಿಸ್ತಿರಿಸಿಕೊಳ್ಳುತ್ತಿರುವುದಾದರೂ ಯಾಕೆ ಎಂಬುದೇ ಅರ್ಥವಾಗುತ್ತಿಲ್ಲ. ಈ ಜೀವನ ಉದ್ಭವಿಸುವ ಘಟ್ಟದಲ್ಲಿ ಅರ್ಥಗೊಳ್ಳುವ ವಿಚಾರಗಳು ದಿನಗಳೆದಂತೆ ಅಪಾರ್ಥಗೊಳ್ಳುವುದೇ ಹೆಚ್ಚು. ಪ್ರಪಂಚ ಆಧುನಿಕತೆಯೆಡೆಗೆ ನುಗ್ಗುತ್ತಿದೆ ಎಂಬ ವಿಚಾರ ಗಲ್ಲಿ, ಬೀದಿ, ಮನೆ ಮನೆಗಳಿಗೆ ಬಂದಾಗ ಪೊಳ್ಳಾಗಿ ಕಾಣುತ್ತದೆ. ಇಷ್ಟೆಲ್ಲಾ ಮಾತನಾಡುವ ನಾನು, ಫೋನಾಯಿಸುವ ಮೊದಲು ಆ ತಾಯಿಯ ಸ್ಥಿತಿಯನ್ನೂ ಅರ್ಥಮಾಡಿಕೊಂಡಿದ್ದೆ. ಒಂದು ಕಡೆ ತನ್ನ ಮಗಳನ್ನು ರಕ್ಷಿಸಿಕೊಳ್ಳಬೇಕು, ಮತ್ತೊಂದೆಡೆ ಗಂಡ ಸಂಬಂಧಿಕರಿಗೆ ವಿಚಾರ ಮುಟ್ಟಿಸದೇ ಇರಲಾಗದು. ನಾಳೆದಿನ ಹುಡುಗಿ ಅವಸರಪಟ್ಟು ಹುಡುಗನ ಜೊತೆ ಓಡಿಹೋಗಿ ಎಲ್ಲಿಯಾದರೂ ಮದುವೆಯಾದರೆ ತಾಯಿಗೆ ಮೊದಲೇ ತಿಳಿದಿದ್ದೂ ಆಕೆ ಏನೂ ಮಾಡಲಿಲ್ಲವಂತೆ ಎಂಬ ಅಪವಾದವನ್ನು ಮೈಮೇಲೇರಿಕೊಳ್ಳುವ ಭಯ. ಲಕ್ಷ್ಮಣನ ಪ್ರಕಾರವಾಗಿ ಹೇಳುವುದಾರೆ ಕೊಲೆ ಮಾಡಲು ಹೇಸದ ಆ ಜನಗಳ ನಡುವೆ ಆ ತಾಯಿ ಗೊಂದಲ, ಭಯ, ಆತಂಕ ಸಂದಿಗ್ಧತೆಯಲ್ಲಿ ಬದುಕಬೇಕಾಗುತ್ತದೆ. ನವ್ಯಳಿಗಿಂತ ದೊಡ್ಡವರಾದ ಮತ್ತೆರಡು ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ಮೊದಲು ಯೋಚಿಸಬೇಕು, ನಂತರವೇನಿದ್ದರೂ ಈಕೆಯದು, ಈಕೆ ಅವಸರ ಪಟ್ಟರೆ ಅವರಿಬ್ಬರಿಗೆ ತೊಂದರೆಯಾಗಬಹುದು. ಲಕ್ಷ್ಮಣ್ ಮನೆಯಲ್ಲಿ ಒತ್ತಾಯಿಸುವಂತೆ ಮುಂದಿನ ವಾರದಲ್ಲಿಯೇ ಆಕೆಯನ್ನು ಧಾರೆಯೆರೆದು ಕೊಡಲು ಸಾಧ್ಯವಿಲ್ಲ. ಮದುವೆಯ ನಂತರ ಕೂಡಿಕೊಳ್ಳುವ ಭರವಸೆಯಿಂದ ನವ್ಯ ಮನೆಯನ್ನು ಬಿಟ್ಟು ಬಂದುಬಿಡಬಹುದು, ಆದರೆ, ಸಧ್ಯದ ಮತ್ತು ಆನಂತರದ ಪರಿಸ್ಥಿತಿಯಲ್ಲಿ ಸಂದಿಗ್ಧತೆಗೆ ಸಿಲುಕಿಕೊಳ್ಳುವುದೆಂದರೆ ನವ್ಯಳ ತಾಯಿಯೆ. ಆದರೆ, ಮನುಷ್ಯ ಮನುಷ್ಯ ನಡುವಿನ ಗೆರೆಗಳನ್ನು ನಾಶಪಡಿಸುವ ನಿಟ್ಟಿನಲ್ಲಿ ನಮ್ಮೆಯ ಸ್ಥಿತಿಗಳಿಂದ ನಾವು ಹೊರಗೆ ಬರಲೇಬೇಕಾಗುತ್ತದೆ. ಆದರೆ, ಮಾನಸಿಕ ವಿಚಾರಗಳು ಸಾರ್ವತ್ರಿಕವಾಗಿ ಬಿಂಬಿತವಾಗಲು ಮಾನಸಿಕ ವಿಕಾರಿಗಳು ಬಿಡುವರೇ?

 

ನಾನು ಬೆಚ್ಚಿಬೀಳುವಂತೆ ಇದ್ದಕ್ಕಿದ್ದಂತೆ ನನ್ನ ಮೊಬೈಲ್ ಹೊಡೆದುಕೊಂಡಿತು. ಲಕ್ಷ್ಮಣ್ ಫೋನಾಯಿಸಿದ್ದ, ಏನು ಮಾತನಾಡುವುದು ಎಂಬುದೇ ತಿಳಿಯಲಿಲ್ಲ. ‘ಹಲೋ’ ಎಂದ ಆತನ ಮಾತಿನಲ್ಲಿಯೂ ನಡುಕವಿತ್ತು. ‘ಏನು ಮಾರಾಯ, ಎಲ್ಲಿದ್ದೀಯ?’ ಎಂದೆ. ಆತ ‘ನವ್ಯಳ ಅಮ್ಮ ಫೋನ್ ಮಾಡಿದ್ದರು, ನವ್ಯಳ ಬಾಯಿಯಿಂದ ನಾನು ನಿನ್ನನ್ನು ಅಷ್ಟಾಗಿ ಹಚ್ಚಿಕೊಂಡಿಲ್ಲ, ನೀನು ಬೇರೆ ಯಾರನ್ನಾದರೂ ಮದ್ವೆ ಆಗಿ ಚೆನ್ನಾಗಿರು ಎಂದು ಹೇಳಿಸಿದ್ರು’ ಎಂದ. ಆತನ ಮಾತಿನ ಧಾಟಿಯಲ್ಲಿ ಗೊಂದಲವಿತ್ತು. ಆಕೆಯಾದರೂ ಸುಖವಾಗಿರಲಿ ನಾನು ಒಂಟಿಯಾಗಿರುವೆ ಎನ್ನುವ ಭಾವನೆಯಲ್ಲಿದ್ದಾನೆಂಬಂತೆ ನನಗೆ ಭಾಸವಾಗುತ್ತಿತ್ತು. ‘ಹೌದೇ? ಇದೊಂದು ಕೆಟ್ಟ ಕನಸೆಂದುಕೊಂಡು ಮರೆತು ನಿಮ್ಮಣ್ಣಂದಿರು ನೋಡಿರುವ ಹುಡುಗಿಯನ್ನು ಮದ್ವೆ ಆಗ್ಬಿಡು’ ಎಂದವನು ನವ್ಯಳ ಅಮ್ಮನ ಜೊತೆ ಮಾತನಾಡಿದ್ದರ ವಿಚಾರವನ್ನು ಮುಟ್ಟಿಸಿದೆ. ‘ಸಾಧ್ಯವೇ ಇಲ್ಲ, ಅವರಮ್ಮನ ಬಲವಂತಕ್ಕೆ ಆಕೆ ಹೇಳಿರಬಹುದು, ಆದರೆ ಆಕೆಯ ಮನಸ್ಸು ಅರೆಕ್ಷಣವೂ ನನ್ನನ್ನ ಬಿಟ್ಟಿರೋಲ್ಲ’ ಎಂದ. ಅನೇಕ ಸಂದಿಗ್ಧತೆಯನ್ನು ಮೀರಿ ಬಂದಿರುವ ನನಗೆ ಈ ಗೊಂದಲವನ್ನು ಪರಿಹರಿಸುವುದು ಕಷ್ಟವೇನೋ ಎನಿಸಿತು. ಸೂಕ್ಷ್ಮದರ್ಶಕ ಕಣ್ಣುಗಳಿಂದ ನೋಡಿದಾಗ ಇಲ್ಲಿ ತೊಂದರೆಯೇ ಇಲ್ಲ, ಯಾರೋ ನೀಚರು ಎಂದೋ ಎಳೆದ ಗೆರೆಗಳೊಳ ಪರಿಧಿಗಳಿಗೆ ಸಿಲುಕಿಕೊಂಡು ನಾವುಗಳೆಲ್ಲ ಸಂಕಟ ಪಡುತ್ತಿದ್ದೇವೆ ಎಂದೆನಿಸಿತು.

 

ಈ ಗೊಂದಲಗಳು ನನ್ನೆದೆಯಲ್ಲಿ ಅಳಿಸಿಹೋಗದಂತೆ ಮನೆ ಮಾಡಿಕೊಂಡಿದ್ದರೂ ಹೇಗೋ ನನ್ನ ಕನಸಾದ ಅನಾಥಾಶ್ರಮದ ಕಟ್ಟಡಗಳನ್ನು ಒಂದು ತಿಂಗಳಿನಲ್ಲಿ ಮುಕ್ಕಾಲು ಭಾಗ ಕಟ್ಟಿಸಿ ಮುಗಿಸಿಕೊಂಡಿದ್ದೆ. ಲಕ್ಷ್ಮಣ್ ವಿಚಾರಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳಲಾಗಲಿಲ್ಲ, ಒಮ್ಮೊಮ್ಮೆ ಮನಸ್ಸನ್ನು ಗಟ್ಟಿ ಮಾಡಿಕೊಂಡು ನನ್ನ ಹೆಂಡತಿ, ಮಕ್ಕಳು, ಗೆಳೆಯರ ಪರಿಧಿಯಿಂದ ಹೊರಗೆ ಬಂದು ಲೌಕಿಕವಾಗಿ ಯೋಚಿಸಿ ಮುನ್ನುಗ್ಗಿಬಿಡುತ್ತೇನೆ. ಮೊನ್ನೆ ಲಕ್ಷ್ಮಣ್ ಕೊಠಡಿಗೆ ಹೋಗಿದ್ದೆ, ಆತ ಒಟ್ಟೊಟ್ಟಿಗೆ ಐದಾರು ವಿಸ್ಕಿ ಬಾಟಲ್ ಖಾಲಿ ಮಾಡುವುದನ್ನು ನೋಡಿ ಗಾಬರಿಗೊಂಡಿದ್ದೆ. ಆತ ಮತ್ತೂ ಖಿನ್ನನಾಗಿದ್ದ. ಎಂದಿನಂತೆ ಆತನ ಕೋಣೆ ಗಬ್ಬು ನಾರುತ್ತಿತ್ತು. ‘ಅಲ್ಲೋ ಮಾರಾಯ, ನಾನು ನೀನು ತಿಂಗಳಿಗೊಮ್ಮೆ ಶಾಸ್ತ್ರಕ್ಕೆ ಎಂಬಂತೆ ಚೂರು ಚೂರು ಬಿಯರ್ ಕುಡಿಯುತ್ತಿದ್ದವರು, ಆದ್ರೆ ಈಗ ನೀನು...’ ಎನ್ನುವಷ್ಟರಲ್ಲಿ ಆತ ಕೈ ಮೇಲಕ್ಕೆತ್ತಿ ‘ಏನೋ ಹಾಳಾಗಿಹೋಗಲಿ ಬಿಡು’ ಎಂಬಂತೆ ಲೊಚಗುಟ್ಟಿದ. ಯಾವುದೋ ನಂಬರಿನ ಕರೆ ಮತ್ತೆ ಮತ್ತೆ ಹೊಡೆದುಕೊಳ್ಳುತ್ತಿತ್ತು, ಆದರೆ, ಆತ ಕರೆ ಸ್ವೀಕರಿಸಿ ಮಾತನಾಡುತ್ತಿರಲಿಲ್ಲ. ಅದೇ ಸಮಯಕ್ಕೆ ಸರಿಯಾಗಿ ನನಗೂ ಒಂದು ಅನಾಮಧೇಯ ಸಂಖ್ಯೆಯಿಂದ ಫೋನ್ ಬಂದಿತ್ತು. ಹೊರಗೆ ನಿಂತು ಹಲೋ ಎಂದಾಗ ಆ ದಡದಿಂದ ನವ್ಯ ಮಾತಾಡಿದ್ದಳು. ‘ಅಲ್ಲಮ್ಮ, ನೀನಿನ್ನೂ ಚಿಕ್ಕ ಹುಡುಗಿ, ಓದಿನ ಕಡೆ ಗಮನ ಕೊಡುವುದಲ್ಲವೇ?’ ಎಂದೆ, ‘ಅದಿರಲಿ, ಅವರು ತಲೆನೋವು ಎಂದು ಮೆಸೇಜ್ ಮಾಡಿದ್ರೂ, ಈಗ ಫೋನ್ ಮಾಡಿದ್ರೆ ರಿಸೀವ್ ಮಾಡ್ತಾ ಇಲ್ಲ, ಏನಾಯ್ತು ಅವರಿಗೆ?’ ಎಂದು ಅತ್ತುಕೊಂಡು ಕೇಳಿದಳು. ಅವಳ ಮಾತಿನಲ್ಲಿ ನಿಷ್ಕಾಮವಾದ ಪ್ರೇಮ ತುಂಬಿಕೊಂಡಿತ್ತು. ಎಲ್ಲೋ ಒಂದು ಕಡೆ ಲಕ್ಷ್ಮಣ್‍ನನ್ನು ಸ್ವಲ್ಪ ಹೆಚ್ಚಾಗಿಯೇ ಮೊಗೆದುಕೊಂಡಿದ್ದಾಳೆ ಎಂದೆನಿಸಿತ್ತು. ‘ನನ್ನ ಜೊತೆಯಲ್ಲಿಯೇ ಇದ್ದಾನೆ, ಮಲಗಿಬಿಟ್ಟಿದ್ದಾನೆ’ ಎಂಬ ಸುಳ್ಳನ್ನು ಹೇಳಿದ್ದೆ. ಮಾತಿನ ಮಧ್ಯೆ ‘ನೀವು ಅಮ್ಮನಿಗೆ ತಿಳಿಸಿದ್ದು ಒಳ್ಳೆಯದೇ ಆಯಿತು, ನನ್ನ ಗೊಂದಲವನ್ನೆಲ್ಲಾ ನೀಗಿಸಿದ್ದೀರಿ, ನಾನು ಸ್ವಲ್ಪ ನಿರಾಳಳಾಗಿದ್ದೇನೆ ಈಗ’ ಎಂದಳು. ‘ಅಲ್ಲಮ್ಮಾ, ಈಗಿನ ಕಾಲ್ದಲ್ಲಿ ಲವ್ ಮ್ಯಾರೇಜ್ ಗಳೆಲ್ಲಾ ಎಲ್ಲಿ ಗೆದ್ದಿವೆ? ಅಮ್ಮನ ಜೊತೆ ಮಾತನಾಡೋವಾಗ ನನ್ನ ಮಗಳು ನನ್ನ ಕಣ್ಣು ಅಂದ್ರು, ಅಂಥವರಿಗೆಲ್ಲಾ ಮೋಸ ಮಾಡಿ ಬಂದು ಕಷ್ಟ ಪಡೋದೆಲ್ಲಾ ಯಾಕೆ?’ ಎಂದೆ. ನನ್ನ ಮಾತಿನಲ್ಲಿ ಆಕೆಯನ್ನು ಬೇರೆಡೆಗೆ ತಿರುಗಿಸಿ ನಂತರ ಲಕ್ಷ್ಮಣ್ ನನ್ನು ಒಪ್ಪಿಸಿಕೊಳ್ಳೋಣ ಎಂಬ ಅಪಕ್ವ ಆಸೆಯಿತ್ತು. ಆದರೆ ಆಕೆ ನಾನು ಹೇಳುವುದು ನಡೆಯುವುದಿಲ್ಲವೆಂಬಂತೆ ನಕ್ಕಳು. ‘ಲಕ್ಷ್ಮಣ್ ಬಗ್ಗೆ ನಿಮಗೆ ಎಷ್ಟು ಗೊತ್ತೋ ಗೊತ್ತಿಲ್ಲ, ಆತನನ್ನ ಸಂಗೀತ ಕ್ಲಾಸ್‍ನಲ್ಲಿ ನಾನು ನೋಡಿದ್ದೇನೆ, ಆತ ಮುಂದೆ ಬರ್ತಾನೆ, ಜಗತ್ತನ್ನೇ ಗೆಲ್ತಾನೆ, ಆಗ ನಮ್ಮ ಮನೆಯವರೇ ಆತನ ಕಾಲು ಹಿಡಿದು ಪಾದ ತೊಳೆದು ನನ್ನನ್ನ ಧಾರೆ ಎರೆದು ಕೊಡ್ತಾರೆ, ನಮ್ಮಪ್ಪ ಒಬ್ಬ ದೊಡ್ಡ ಕುಡುಕ, ಆದರೆ ಲಕ್ಷ್ಮಣ್‍ಗೆ ಕುಡಿಯೋರು ಅಂದ್ರೆ ಆಗೋಲ್ಲ, ನಮ್ಮಮ್ಮ ಅಂಥವರನ್ನೇ ಇಷ್ಟ ಪಡೋದು’ ಅಂದಾಗ ಈ ಸಂಬಂಧದ ಬೆಳವಣಿಗೆಯಲ್ಲಿ ಲಕ್ಷ್ಮಣ್ ತಿಳಿದೋ ತಿಳಿಯದೆಯೋ ತುಂಬಾ ಸುಳ್ಳು ಹೇಳಿದ್ದಾನೆ ಎಂಬುದು ಗೊತ್ತಾಗಿಹೋಗಿತ್ತು. ‘ಹಾಗೇ ಆಗಲಿ, ಒಂದು ವೇಳೆ ಲಕ್ಷ್ಮಣ್ ಗೋಸ್ಕರ ನಿಮ್ಮ ಮನೆಯವರನ್ನು ಬಿಟ್ಟುಬರಬೇಕಾದ ಪರಿಸ್ಥಿತಿ ಬಂದ್ರೆ..’ ಎನ್ನುವಷ್ಟರಲ್ಲಿ ಆಕೆ ‘ಬರುವುದಿಲ್ಲ, ಲಕ್ಷ್ಮಣ್ ಮೇಲೆ ನನಗೆ ನಂಬಿಕೆ ಇದೆ, ಲಕ್ಷ್ಮಣ್ ಹಾಗೂ ನಮ್ಮ ಮನೆಯವರು ಇಬ್ಬರಲ್ಲಿ ಒಬ್ಬರನ್ನು ಬಿಟ್ಟರೂ ನಾನು ಬದುಕುವುದಿಲ್ಲ’ ಎಂದಿದ್ದಳು. ನನಗೆ ಲಕ್ಷ್ಮಣ್ ಈಗ ಮತ್ತೂ ಗೊಂದಲವಾದಂತೆ ಕಂಡ, ಅವನ ಸಂದಿಗ್ಧತೆ ಮತ್ತು ಅವನ ಮುಂದೆ ಹೆಡೆಯೆತ್ತಿ ನಿಂತಿರುವ ಗೊಂದಲಗಳು ಅರ್ಥವಾಗಿದ್ದವು. ಲಕ್ಷ್ಮಣ್ ಅತಿಯಾಗಿ ಕುಡಿಯುತ್ತಿರುವುದನ್ನು ಕಂಡ ನಾನು ಒಂದು ಗುಟುಕನ್ನು ಕೂಡ ಗಂಟಲಿಗೆ ಇಳುಗಿಸಲಿಲ್ಲ, ಆತನೊಡನಿದ್ದ ಗೊಂದಲಗಳು ಆತನನ್ನು ತಿನ್ನುತ್ತಿವೆಯೋ ಅಥವಾ ಇತ್ತೀಚೆಗೆ ಆತ ಚಟವಾಗಿ ಮಾಡಿಕೊಂಡ ಈ ಕುಡಿತವೇ ಆತನನ್ನು ನುಂಗುತ್ತಿರುವುದೋ ಅರ್ಥವಾಗಲಿಲ್ಲ.

 

ಈ ಎಲ್ಲಾ ವಿಚಾರಗಳನ್ನು ತಲೆಗೆ ತುಂಬಿಕೊಂಡು, ತಲೆನೋವು ಉದ್ಭವಿಸಿ ಮನೆಗೆ ಬಂದವನೇ ಗಾಬರಿಗೊಂಡೆ. ಹೆಂಡತಿ ಸೂಟ್‍ಕೇಸ್ ಹಿಡಿದು ಮಕ್ಕಳನ್ನು ಕರೆದುಕೊಂಡು ಎಲ್ಲಿಗೋ ಹೋಗಲು ತಯಾರಿದ್ದಳು. ‘ಏನೇ ಇದು, ಎಲ್ಲಿಗೆ ಈ ಪಯಣ, ಅದೂ ಗಂಡನಿಗೂ ಹೇಳದೆ’ ಎಂದು ನಗುತ್ತ ಹೆಂಡತಿಯನ್ನು ಚುಡಾಯಿಸಿದೆ, ‘ಫೀಸ್ ಕಟ್ಟಲು ಅಪ್ಪ ಬೇಕು, ಈಗ ಎಲ್ಲಿಗೋ ಹೋಗೋದನ್ನ ಹೇಳಿ ಹೋಗೋಕೆ ಅಪ್ಪ ಬೇಡ್ವ?’ ಎಂದವನೇ ಮಗಳ ಹಣೆಗೆ ಮುತ್ತಿಕ್ಕಿದೆ. ‘ಈ ಸಂಕ್ರಾಂತಿ ಹಬ್ಬದಷ್ಟರಲ್ಲಿ ನನಗೊಂದು ವಾಷಿಂಗ್ ಮೆಷಿನ್ ತಂದ್ಕೊಡಿ ಅಂತ ಹೇಳಿದ್ದೆ, ನಿಮಗೆ ಯಾವುದೂ ಆಗೋಲ್ಲ, ನಿಮ್ಮಂತಹ ದರಿದ್ರದವರನ್ನು ಕಟ್ಟಿಕೊಂಡು ಇನ್ಮುಂದೆ ನಂಗೆ ಬದುಕೋಕೆ ಆಗೋಲ್ಲ, ನಾನು ನಮ್ಮಮ್ಮನ ಮನೆಗೆ ಹೋಗ್ತೇನೆ’ ಎಂದಳು. ‘ಪಪ್ಪಾ, ನಾವು ಟಿ.ಸಿ ತಕ್ಕೊಂಡಿದ್ದೇವೆ, ಅಲ್ಲೇ ಓದಿಕೊಳ್ತೇವೆ’ ಎಂದರು ನನ್ನ ಮಕ್ಕಳು. ನನ್ನ ಹೆಂಡತಿಯ ಪ್ರತಿ ಹಠವನ್ನು ಸಹಿಸಿಕೊಂಡು ನಗುತ್ತಲೇ ಬಂದೆನಗೆ ಇಂದೇಕೋ ತುಸು ಕೋಪ ಹೆಚ್ಚಿತ್ತು. ಅಪ್ಪನ ವಿರುದ್ಧ ಮಕ್ಕಳನ್ನೇ ಎತ್ತಿ ಕಟ್ಟಿದಾಗಲೂ ನಾನು ಕೋಪಗೊಂಡಿರಲಿಲ್ಲ, ಆದರೆ ಇಂದು ನನಗೇ ತಿಳಿಯದಂತೆ ಶಾಲೆಗೆ ಹೋಗಿ ಮಕ್ಕಳ ಟಿ.ಸಿ ತೆಗೆದುಕೊಂಡು ಇಷ್ಟೆಲ್ಲಾ ರಂಪಾಟಕ್ಕೆ ಕಾರಣವಾಗಿರುವುದು ನನ್ನ ಶಾಂತ ಮನಸ್ಸನ್ನು ಕೆರಳಿಸಿತ್ತು. ‘ಈ ವಿಚಾರವಾಗಿ ನೀನು ಹಾಳಾಗೋದಲ್ಲದೆ ನನ್ನ ಮಕ್ಕಳನ್ನೂ ಹಾಳು ಮಾಡಿಬಿಟ್ಟೆ, ಇನ್ನಾದರೂ ಚೂರು ಮರ್ಯಾದೆಯಿಂದ ಇರಲು ಕಲಿ, ಸೂಟ್ ಕೇಸ್ ಒಳಗಿಡು' ಎಂದೆ. ‘ನೀವು ಏನೇ ಹೇಳಿದ್ರೂ ಕೇಳೋಲ್ಲ, ಕೋರ್ಟ್‍ನಲ್ಲಿ ಮಾತನಾಡಿ’ ಎಂದೊಡನೆ ಕೆನ್ನೆಗೆ ರಪ್ಪನೆ ಒಂದು ಬಿಟ್ಟೆ. ನನ್ನ ಜುಟ್ಟನ್ನೇ ಹಿಡಿದುಕೊಳ್ಳಲು ಬಂದ ಮಗನ ಎರಡು ಕೈಯನ್ನು ಅದುಮಿಟ್ಟುಕೊಂಡು ಬೆನ್ನಿಗೆರಡು ಭಾರಿಸಿದೆ. ಮಗಳನ್ನೊಮ್ಮೆ ಕೆಕ್ಕರಿಸಿಕೊಂಡು ನೋಡಿದ್ದೆ ಹೆದರಿಕೊಂಡು ಹಿಂದೆ ಸರಿದಳು. ಹೆಂಡತಿ ಎನಿಸಿಕೊಂಡವಳ ಜುಟ್ಟು ಹಿಡಿದುಕೊಂಡು ಮುಖವನ್ನು ಗೋಡೆಗೆ ಗುದ್ದಿಸಿದ್ದೆ ಕೋಣೆ ಸೇರಿಕೊಂಡಳು. ಜಾಡಿಸಿ ಒದ್ದ ರಭಸಕ್ಕೆ ಸೂಟ್ ಕೇಸ್ ಹೊಡೆದುಹೋಗಿ ಒಳಗಿದ್ದ ಬಟ್ಟೆಗಳೆಲ್ಲ ನೆಲದ ಮೇಲೆ ಚೆಲ್ಲಿಕೊಂಡವು.

 

ಈ ಮನೆಯಲ್ಲಿ ನಾನು ಮದುವೆಯಾದ ಸ್ವಲ್ಪ ದಿನಗಳ ನಂತರದಿಂದಲೂ ಒಂಟಿಯೇ, ಹೆಂಡತಿ ಮಕ್ಕಳೆಲ್ಲಾ ಆ ಕಡೆಯ ಕೋಣೆಗೆ ಸೇರಿಕೊಂಡರೆ ನಾನು ಈ ಕೋಣೆಯಲ್ಲಿ ಈ ರೀತಿಯಾಗಿ ಒಬ್ಬನೇ ಬಿದ್ದುಕೊಳ್ಳುತ್ತೇನೆ. ಮುದ್ದು ಮಾಡಿ ಒಲಿಸಿಕೊಂಡರೆ ತಿಂಗಳಿಗೊಂದೆರಡು ಬಾರಿ ನನ್ನೊಡನೆ ಮಲಗಿಕೊಳ್ಳುತ್ತಾಳೆ. ಲಕ್ಷ್ಮಣ್‍ಗೆ ಮದುವೆಯೆಂಬುದೇ ತೊಡಕಾಗಿ ಚಿಂತೆಯಾಗಿದ್ದÀರೆ ನನಗೆ ಮದುವೆ ಆದದ್ದೇ ಚಿಂತೆಯಾಗಿಹೋಗಿದೆ. ಸಮಾಜ, ದೇಶದ ಒಳಿತಿಗೋಸ್ಕರ ದುಡಿಯುತ್ತಿರುವುದೇ ತೊಡಕಾಗಿ ನನ್ನ ಸಂಸಾರವನ್ನು ನುಂಗಿಕೊಳ್ಳುತ್ತಿರುವುದೇನೋ ಅನಿಸುತ್ತಿದೆ. ಏನೇ ಕಾರಣವಿದ್ದರೂ ನನ್ನಂತಹವರು ಸೋಲಬಾರದು ಎಂದುಕೊಂಡು ಗಟ್ಟಿಯಾಗುತ್ತೇನೆ. ಹೌದು ಎಂದು ಛಲ ತಂದುಕೊಳ್ಳುವಷ್ಟರಲ್ಲಿ ಅದೆಲ್ಲೋ ನನ್ನ ಮೊಬೈಲ್ ಜೋರಾಗಿ ಹೊಡೆದುಕೊಳ್ಳತೊಡಗಿತ್ತು. ಈ ಎಳೆದಾಟದಲ್ಲಿ ನನ್ನ ಮೊಬೈಲ್ ಅಲ್ಲೇ ಎಲ್ಲೋ ಬಿದ್ದು ಹೋಗಿತ್ತು, ಹುಡುಕಿಕೊಂಡು ಹೋದಾಗ ಸೋಫಾದ ಕೆಳಗೆ ಸಿಕ್ಕಿತು. ಫೋನ್ ಎತ್ತಿಕೊಂಡೊಡನೆ ನವ್ಯಳ ತಾಯಿಯಿಂದ ಫೋನ್ ಬಂತು.

 

‘ಹಲೋ...’ ಎಂದೊಡನೆ ಆಕೆ ಅಳಲು ಪ್ರಾರಂಭಿಸಿದರು. ಒಂದಷ್ಟು ಹೊತ್ತು ಮಾತನಾಡಿ ಎಲ್ಲದಕ್ಕೂ ಹೂಂ ಎಂದುಕೊಂಡು ಸುಮ್ಮನಾಗಿದ್ದೆ. ಆಕೆ ಹೇಳಿದ ಮಾತುಗಳಿಗೆ ಹೂಂ ಎನ್ನದೇ ವಿಧಿ ಇರಲಿಲ್ಲ. ‘ಆತನ ಹಿನ್ನೆಲೆಯೆಲ್ಲಾ ಮಗಳಿಂದ ತಿಳಿದುಕೊಂಡೆ, ಆತನಿಗೆ ಆಸ್ತಿಯಿಲ್ಲ, ಸ್ವಂತ ಮನೆ ಇಲ್ಲ, ಸರ್ಕಾರಿ ಕೆಲಸ ಇಲ್ಲ, ಸಧ್ಯಕ್ಕೆ ಒಳ್ಳೆಯ ಸಂಬಳ ಬರೋ ಉದ್ಯೋಗವೂ ಇಲ್ಲ, ಇಂಥವರನ್ನ ನಮ್ಮ ಮನೆನಲ್ಲಿ ಯಾರೂ ಒಪ್ಪೋಲ್ಲ, ಬದಲಾಗಿ ಮಗಳನ್ನು ಕೊಂದು ಬಿಡ್ತಾರೆ ಅಷ್ಟೇ, ಕಷ್ಟ ಪಟ್ಟು ಒಪ್ಸೋಣ ಅಂದ್ರೆ ಒಂದೇ ಜಾತಿನೂ ಅಲ್ಲ, ನಮ್ಮ ಜಾತಿಯಲ್ಲಿ ಆಸ್ತಿ ಅಂತಸ್ತು ತುಂಬಿಕೊಂಡಿರೋ ಹುಡುಗರು ತುಂಬಾ ಇದ್ದಾರೆ...’ ಹೀಗೆ ಅವರ ಮಾತು ಸಾಗಿತ್ತು.

 

ಲಕ್ಷ್ಮಣನ ಅಣ್ಣಂದಿರಿಗೆ ಈ ವಿಚಾರವನ್ನು ಮುಟ್ಟಿಸಿ ಅವನನ್ನು ಕಾಪಾಡಿಕೊಳ್ಳೋಣವೆಂಬ ಆಸೆಯಿಂದ ಅವರಿಗೆ ಫೋನಾಯಿಸಿದೆ. ಕುಶಲ-ಕ್ಷೇಮದ ವಿಚಾರವಾದ ನಂತರ ಅವರೂ ಮದುವೆಯ ವಿಚಾರ ಎತ್ತಿಕೊಂಡರು. ‘ನೀನೇ ಹೇಳಪ್ಪ, ಅವನು ಮದುವೆಗೆ ಒಪ್ಪುತ್ತಿಲ್ಲ, ಕಾರಣವೇನೆಂಬುದೂ ತಿಳಿಯುತ್ತಿಲ್ಲ, ಯಾರನ್ನಾದರೂ ಇಷ್ಟಪಟ್ಟಿದ್ದರೆ ಹೇಳಲು ಹೇಳು, ನಾವೇ ನಿಂತು ಮದುವೆ ಮಾಡಿಸಿಕೊಡುತ್ತೇವೆ’ ಎಂದರು. ‘ಕೇಳಿ ನೋಡುತ್ತೇನೆ’ ಎಂದವನೇ ಫೋನಿಟ್ಟೆ. ನವ್ಯಳ ವಿಚಾರವನ್ನು ಈಗ ಮಧ್ಯೆ ತಂದರೆ ಸಧ್ಯಕ್ಕೆ ಎರಡು ಕುಟುಂಬಗಳ ನಡುವೆ ಘರ್ಷಣೆ ಸಂಭವಿಸಿ, ಓದುತ್ತಿರುವ ಆ ಹುಡುಗಿ ಮತ್ತು ಲಕ್ಷ್ಮಣ್ ಇಬ್ಬರಿಗೂ ತೊಂದರೆ ಆಗಬಹುದು, ಉಳಿದಿದ್ದನ್ನು ಕಾಲವೇ ನಿರ್ಣಯಿಸಿಕೊಳ್ಳಲಿ ಎಂದು ಮೌನವಾಗಿಹೋಗಿದ್ದೆ.

 

ಈ ವಿಚಾರವಾಗಿ ಆಲೋಚಿಸುತ್ತಾ ಹೋದಾಗ ಮಾತನಾಡಲು ಮತ್ತೇನೂ ಉಳಿದಿಲ್ಲವೆಂದೆನಿಸಿತ್ತು. ಲಕ್ಷ್ಮಣ್‍ಗೆ ಫೋನಾಯಿಸಿದೆ. ಆತನ ಮಾತಿನಲ್ಲಿ ತೂರಾಟ, ತೊದಲಿತ್ತು. ‘ಲಕ್ಷ್ಮಣ್, ನೀನು ಮುಂದೆ ಬರಬೇಕು...’ ಎಂದೆ. ಆತ ತೊದಲಿ ತೊದಲಿ ಏನು ಹೇಳಿದನೋ ಅರ್ಥವಾಗಲಿಲ್ಲ. ನಿದ್ದೆ ಬರದೆ ಮಹಡಿಯ ಮೇಲೆ ನಿಂತೆ. ಇಷ್ಟು ದಿನ ವಿಶಾಲವಾಗಿ ಕಾಣುತ್ತಿದ್ದ ಆಗಸ ಇಂದೇಕೋ ಹೊಳಪನ್ನು ಕಳೆದುಕೊಂಡು ತುಂಬಾ ಕೃಶವಾಗಿ ಕಂಡಿತ್ತು. ನನ್ನ ಕೆನ್ನೆಯ ಮೇಲಿದ್ದದ್ದು ಕಣ್ಣೀರೋ ಮಳೆಹನಿಯೋ ತಿಳಿಯದಾಯಿತು.