ಕೃಷ್ಣ..ಕೃಷ್ಣ..ಕೃಷ್ಣ.. - ಕೃಷ್ಣ ದೇವನೊ ಇಲ್ಲ ರಾಕ್ಷಸನೊ

ಕೃಷ್ಣ..ಕೃಷ್ಣ..ಕೃಷ್ಣ.. - ಕೃಷ್ಣ ದೇವನೊ ಇಲ್ಲ ರಾಕ್ಷಸನೊ

ಚಿತ್ರ

ಕೃಷ್ಣ..ಕೃಷ್ಣ..ಕೃಷ್ಣ.. -   ಕೃಷ್ಣ ದೇವನೊ  ಇಲ್ಲ  ರಾಕ್ಷಸನೊ

 

ಗಣೇಶ

"ಅಲ್ಲಿಗೆ ಏನು ಕೃಷ್ಣ, ಈ ಅವತಾರಗಳೆಲ್ಲ ಸುಳ್ಳು ಅನ್ನುವೆಯ, ನಿನ್ನನ್ನು ವಿಷ್ಣುವಿನ , ದೇವರ ಅಂಶವೆನ್ನುವರಲ್ಲ ಅದೆಲ್ಲ ಸುಳ್ಳು ಎಂದು ಹೇಳುವೆಯ? ನೀನು ದೇವರು ಎನ್ನುವ ವಾದವೆ ಸುಳ್ಳೆ"

ಕೃಷ್ಣ

"ಗಣೇಶ, ನೀನು ಎಲ್ಲವನ್ನು ತಿಳಿದಿರುವೆ ನನ್ನನ್ನು ಪುನಃ ಕೇಳುತ್ತಿರುವೆ. ಯಾವುದು ಸುಳ್ಳಲ್ಲ , ನಾವು ಅದನ್ನು  ಅರ್ಥಮಾಡಿಕೊಳ್ಳುವ ರೀತಿಯೆ ಸುಳ್ಳು. ಪ್ರತಿಯೊಬ್ಬ ಮನುಷ್ಯನು ದೇವರ, ವಿಷ್ಣುವಿನ ಅಂಶದಿಂದ ಹುಟ್ಟಿದವನೆ. ಆದರೆ ಅವನು ಬೆಳೆದಂತೆ ಅವನ ಗುಣಸ್ವಭಾವಗಳು  ಅವನಲ್ಲಿರುವ ದೇವ ಸ್ವಭಾವ ನಾಶವಾಗಿ ರಾಕ್ಷಸಗುಣ ಅಧಿಕವಾಗುವುದು. ತನ್ನಲಿರುವ  ವಿಷ್ಣುವಿನ , ದೇವರ ಅಂಶವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಮನುಷ್ಯ ದೇವಮಾನವನಾಗುವನು, ಅವತಾರಪುರುಷನಾಗುವನು ಎನ್ನುವುದು ಸತ್ಯವಲ್ಲವೆ"

ಗಣೇಶ

"ಕೃಷ್ಣ ಅದು ಏಕೆ, ಮನುಷ್ಯ ಹುಟ್ಟುವಾಗ ಮುಗ್ದನಾಗಿರುವನು ಅವನಲ್ಲಿ ವಿಷ್ಣುವಿನ ಅಂಶ ತುಂಬಿರುವುದು ನಂತರ ರಾಕ್ಷಸತ್ವ ಹೆಚ್ಚುತ್ತ ಹೋಗಿ ಕಡೆಗೊಮ್ಮೆ ರಕ್ಕಸನೆ ಆಗುವನು ಎನ್ನುವೆಯಲ್ಲ, ಅದು ಏಕೆ, ಹುಟ್ಟಿದಾಗ ಅವನಲ್ಲಿ ಇದ್ದ ದೈವತ್ವ ನಶಿಸುತ್ತ ಹೋಗುವದೇಕೆ?"

ಕೃಷ್ಣ

"ಅದೇ ಗಣೇಶ ಈ ಕರ್ಮ ಭೂಮಿಯ, ಮಣ್ಣಿನ ವಿಶೇಷ, ಇಲ್ಲಿನ ಸೆಳೆತವೆ ಅಂತದು, ಈ ಭೂಮಿಯ ಮಣ್ಣಿನ ಶಕ್ತಿಯೆ ಅಂತದು. ಆ ಸೆಳೆತವನ್ನು ಯಾರು ಮೀರುವರೊ ಅವರು ದೈವತ್ವವನ್ನು ಸಾಧಿಸುವರು,   ಅಪರೂಪಕ್ಕೆ ಹುಟ್ಟುವ ಅವರನ್ನು ಅವತಾರ ಪುರುಷನೆಂದೆ ಕರೆಯಬಹುದು ಬಿಡು"

ಎನ್ನುತ್ತ ಜೋರಾಗಿ ನಕ್ಕನು

 

ಗಣೇಶ ಕೊಂಚ ಕುತೂಹಲದಿಂದ ಎನ್ನುವಂತೆ ಕೇಳಿದ.

“ಹಾಗಾದರೆ ಕೃಷ್ಣ, ಮತ್ತೆ ಕೆಲವರ ವಾದವಿದೆ, ನೀನು ಕಂಸನ ಸಂಬಂಧಿಯೆ ಅಲ್ಲವೆ , ಕಂಸನು  ರಾಕ್ಷಸ ಎನ್ನುವದಾದರೆ ನೀನು ಕಂಸನ ರಕ್ತ ಸಂಬಂಧಿ ನೀನು ಸಹ ರಾಕ್ಷಸನೆ ಅಲ್ಲವೆ?”

 

ಕೃಷ್ಣ  ಗಣೇಶನನ್ನೆ ದೀರ್ಘವಾಗಿ ನೋಡಿದ, ನಂತರ ನಗಲು ಪ್ರಾರಂಬಿಸಿದ, ನಕ್ಕು ನಕ್ಕು ಅವನ ಕಣ್ಣಲಿ ನೀರು ತುಂಬಿಕೊಂಡಿತು. ಅವನ ನಗುವನ್ನು ನೋಡುತ್ತ ಗೊಂದಲಗೊಂಡ ಗಣೇಶ ಕೇಳಿದ

“ಅದೇನು ಅಷ್ಟೊಂದು ನಗುವಂತಹುದು ಕೃಷ್ಣ , ನಾನಾದರೊ ಸುಮ್ಮನೆ ಲೋಕಾರೂಢಿ ಎನ್ನುವಂತೆ ಕೇಳಿದೆ , ಜನರ ಮಾತು ನನ್ನ ಬಾಯಲ್ಲಿ ಪ್ರಶ್ನೆಯಾಗಿ ಬಂದಿತು ತಪ್ಪೆ” ಎಂದ

 

ಕೃಷ್ಣ ಮತ್ತೆ ನಗುತ್ತ ಹೇಳಿದ

“ಇನ್ನೇನು ಮಾಡಲಿ ಗಣೇಶ. ಈಗ ತಾನೆ ನೀನು ನನ್ನನ್ನು  ‘ನೀನು ದೇವರೆ?”  ಎಂದು ಕೇಳಿದೆ, ನಾನು ಅದಕ್ಕೆ ಉತ್ತರ ಕೊಟ್ಟ ಕ್ಷಣದಲ್ಲಿ  ‘ನೀನು ರಾಕ್ಷಸನ ‘ ಎಂದು ಕೇಳುತ್ತಿರುವೆ . ನಗದೆ ಇನ್ನೇನು ಮಾಡಲಿ ಹೇಳು. ಆಯಿತು ಕಂಸ ರಾಕ್ಷಸ ಎನ್ನುವದಾದರೆ ಅವನ ರಕ್ತ ಸಂಬಂಧಿ ನಾನು ಸಹ ರಾಕ್ಷಸನೆ ಎಂದು ಭಾವಿಸಿದರಾಯಿತು.  ದೇವತೆ ಅಥವ ರಾಕ್ಷಸ ಎನ್ನುವದೆಲ್ಲ ಹುಟ್ಟಿನಿಂದ ನಿರ್ಧರವಾಗುವದಿಲ್ಲ ಗಣಪ. ನಮ್ಮ ನಡತೆ ನಮ್ಮನ್ನು ದೇವರನ್ನಾಗಿಯು ರಾಕ್ಷಸರನ್ನಾಗಿಯೂ ಮಾಡುತ್ತೆ ಬೇರೆಯವರ ಕಣ್ಣಿನಲ್ಲಿ . ಹಾಗೆ ನೋಡಿದರೆ ರಾಕ್ಷಸರಾದರು ರಾಮ ಒಲಿದ ವಿಭೀಷಣ, ನರಸಿಂಹನನ್ನು ಒಲಿಸಿದ ಪ್ರಹ್ಲಾದ, ವಾಮನನಿಗೆ  ದಾನ ಕೊಟ್ಟ ಬಲಿ ಇವರೆಲ್ಲ ರಾಕ್ಷಸರೆ ಅಲ್ಲವೆ. ಈ ಭೂಮಿಯ ಮಣ್ಣಿನ ಸ್ವಭಾವ ಅದು ಗಣೇಶ. ತಮಗೆ ಕಿಂಚಿತ್ತು ಉಪಕಾರ ಮಾಡಿದವರನ್ನು ಈ ಮನುಜರು ದೇವತೆಯನ್ನಾಗಿ ಮಾಡಿ ಪೂಜಿಸುವರು. ಅದು ರಾಮನೊ, ಕೃಷ್ಣನೊ , ಬುದ್ದನೊ, ಅಥವ ಈಚಿನ ಗಾಂಧಿ ಅಥವ ಅಂಬೇಡ್ಕರ್ ಎಲ್ಲರನ್ನು ಆಯಾ ಕಾಲಕ್ಕೆ ಜನ ದೇವರೆಂದೆ ಪೂಜಿಸಿದರು. ಹಲವಾರು ಗುರುಗಳು, ಜನಸೇವಕರು ಸಹ ದೇವತೆಯ ಸ್ಥಾನ ಪಡೆದುಕೊಂಡವರೆ.


ಆದರೆ ಜನರ ನೆನಪಿನ ಶಕ್ತಿ ಮಾತ್ರ ಅತ್ಯಲ್ಪ ಗಣೇಶ. ಜನರಿಗೆ ಎಷ್ಟೆ ಉಪಕಾರ ಮಾಡಿರು, ನೀನು ಯಾವುದೊ ಸಣ್ಣ ಕಾರಣಕ್ಕೆ ಎಡವಿದರು ಅವರ ಕಣ್ಣಲ್ಲಿ ರಾಕ್ಷಸನಾಗಿಬಿಡುವೆ. ಅಷ್ಟೆ ಅಲ್ಲ ಯಾವ ದೇವತೆಯಾದರು ಕಾಲನಂತರದಲ್ಲಿ ಯಾರದೊ ಬಾಯಿಗೆ ಸಿಕ್ಕಿ ವಿವಾದಿತರಾಗಿ ಮತ್ತೆ ಅವರ ದೇವತ್ವಕ್ಕೆ ಕುಂದು ಬರುವುದು. ಸಣ್ಣ ಮಾತು ಸಾಕು ದೇವತೆ ರಾಕ್ಷಸನಾಗಲು ಜನರ ಕಣ್ಣಿನಲ್ಲಿ ಬದಲಾಗಲು “ ಎಂದನು

 

ಗಣೇಶ

‘ನಿನ್ನ ಮಾತು ನಿಜ ಕೃಷ್ಣ.   ಭೂಮಿಯ ಜನರ ಮನಸ್ಸು ಬಹಳ ಸೂಕ್ಷ್ಮ , ಸಣ್ಣ ಕಾರಣವೊಂದು ಸಾಕು ಅವರ ಮೆಚ್ಚುವ ದೈವವನ್ನು ಅವರೇ  ದ್ವೇಷಿಸಲು ‘

ಎನ್ನುತ್ತ ಮತ್ತೆ ಕೇಳಿದ  

"ನಿನ್ನ ಮಾತು ಸರಿ ಕೃಷ್ಣ, ಆದರೆ ಎಲ್ಲಿ ಧರ್ಮಕ್ಕೆ ಕುಂದು ಬರುವುದು, ಆಗ ನಾನು ಮತ್ತೆ ಮತ್ತೆ ಜನ್ಮವೆತ್ತಿ ಅಧರ್ಮವನ್ನು ನಾಶಪಡಿಸಿ ಧರ್ಮವನ್ನು  ಸ್ಥಾಪನೆ ಮಾಡುವೆ ಎನ್ನುವ ನಿನ್ನ ಮಾತಿನ ಕತೆ ಏನು?"

 

ಚಿತ್ರಮೂಲ :   krishna god
ಮುಂದೆವರೆಯುವುದು…..

Rating
No votes yet

Comments

Submitted by partha1059 Sun, 09/15/2013 - 20:41

ಎಲ್ಲ ಬಾಗಗಳನ್ನು ಒಟ್ಟಾಗಿ ಓದ‌ ಬೇಕೆನ್ನುವರು ಮೇಲೆ ಸರಣಿ ಎಂಬಲ್ಲಿ 'ಕೃಷ್ಣ ಕೃಷ್ಣ ಕೃಷ್ಣ' ಎನ್ನುವದನ್ನು ಒತ್ತಿ. ಅಥವ ನನ್ನ ಸ್ವಂತ ಬ್ಲಾಗ್ ನಲ್ಲಿ ಓದಬಹುದು

Submitted by makara Mon, 09/16/2013 - 09:21

ಪಾರ್ಥ ಸರ್,
ಸಂಭಾಷಣೆಗಳು ಸ್ವಾರಸ್ಯಕರವಾಗಿವೆ ಮತ್ತು ವಿಚಾರಯುಕ್ತವಾಗಿವೆ. ಈ ಸರಣಿ ಚೆನ್ನಾಗಿದೆ, ಹೀಗೆಯೇ ಮುಂದುವರೆಸಿರಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by makara Tue, 09/24/2013 - 20:05

ರಾಮೋ ಸರ್,
ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಇದರ ಕುರಿತಾಗಿ ಹಿಂದೊಮ್ಮೆ ಇದೇ ಸಂಪದದಲ್ಲಿ ಸ್ವಾಮಿ ಹರ್ಷಾನಂದರಿಂದ ಕೃಷ್ಣನ ಕಥೆಯ ಸಮರ್ಥನೆಯ ಭಾಗವನ್ನು ಹಾಕಿದ್ದೆ. ಇದು ಎರಡು ಕಂತುಗಳಲ್ಲಿ ಪ್ರಕಟವಾಗಿದ್ದಿತು. ಅದರ ಕೆಲವೊಂದು ಆಯ್ದ ಭಾಗಗಳು ಇಲ್ಲಿವೆ.
" ಈ ಟೀಕೆ ದೂಷಣೆಗಳೆಲ್ಲಾ ಬಂದಿರುವುದು ಮಹಾಭಾರತದಲ್ಲಿ ಮತ್ತು ಭಾಗವತದಲ್ಲಿ ನಿರೂಪಿಸಿರುವ ಕೃಷ್ಣನ ಕಥೆಯ ಆಧಾರದ ಮೇಲೆ ಎಂಬುದು ನಾವು ಮೊದಲು ಗಮನಿಸಬೇಕಾದ್ದು. ಈ ಎರಡೂ ಗ್ರಂಥಗಳು ಕೃಷ್ಣನ ಮಹತ್ವವನ್ನಷ್ಟೇ ಅಲ್ಲ, ಅವನ ದೈವತ್ವವನ್ನೂ ನಿರ್ವಿವಾದವಾಗಿ ಪ್ರತಿಪಾದಿಸುತ್ತಾ ಅವನನ್ನು ಪರಮೇಶ್ವರನೆಂದು ನಿರೂಪಿಸಿವೆ. ಕೃಷ್ಣನನ್ನು ಹಳಿಯುವವರು ಈ ನಿರೂಪಣೆಯನ್ನು ಗಮನಿಸದೆ ಆ ಗ್ರಂಥಗಳು ಅವನ ಬಗ್ಗೆ ಹೇಳಿರುವ ಉಳಿದ ವಿಷಯಗಳನ್ನು ಗಮನಿಸಿ ಟೀಕಿಸುವುದು, ಮೊಟ್ಟೆಯನ್ನು ಇಬ್ಬಾಗವಾಗಿ ಸೀಳಿ ಒಂದು ಭಾಗವನ್ನು ಮರಿ ಮಾಡಲಿಕ್ಕೆ ಇನ್ನೊಂದನ್ನು ಆಮ್ಲೆಟ್ ಮಾಡಲಿಕ್ಕೆ ಬಳಸಿಕೊಂಡ ಗಾವಿಲ ಮಹಾಶಯನ ಅವಿವೇಕಕ್ಕಿಂತ ಭಿನ್ನವೇನಲ್ಲ."
:
:
ಸ್ನಾನ ಮಾಡುತ್ತಿದ್ದ ಗೋಪಿಯರ ಉಡುಪುಗಳನ್ನೆತ್ತಿಕೊಂಡು ಕೃಷ್ಣನು ಅವನ ಸಖರೊಡನೆ ಹತ್ತಿರದ ಮರವನ್ನೇರಿ ಕುಳಿತಾಗ ಗೋಪಿಯರು ಅವುಗಳನ್ನು ಕೊಡು ಎಂದು ಬೇಡಿಕೊಳ್ಳುತ್ತಾರೆ. ಅವುಗಳನ್ನು ಪಡೆಯಲು ನೀರಿನಿಂದ ಹೊರಬಂದು ಕೈಯ್ಯನ್ನೆತ್ತಿ ನಿಲ್ಲಿ ಎನ್ನುತ್ತಾನೆ, ಎಂದು ಭಾಗವತ (೧೦.೨೨)ದಲ್ಲಿ ಹೇಳಿರುವುದು ಸಾರಾಂಶ.

ಅದೇ ಗ್ರಂಥದಲ್ಲಿ (೧೦.೨೨.೧) ಗೋಪಿಯರು ಋತುಮತಿ ಪೂರ್ವ ವಯಸ್ಸಿನ ಕುಮಾರಿಯರೆಂದೂ, (೧೦.೨೨.೩)ರಲ್ಲಿ ಕೃಷ್ಣ ಕೇವಲ ಏಳು ವರ್ಷದ ಬಾಲಕನಾಗಿದ್ದನೆಂದೂ ಹೇಳಿದೆ. ಆದ್ದರಿಂದ ಕೃಷ್ಣನು ಕಾಮವಿಕಾರದಿಂದ ಆ ರೀತಿ ವರ್ತಿಸಿದನೆನ್ನುವುದು ಮೂರ್ಖತನವಾಗುತ್ತದೆ. ವಾಸ್ತವವಾಗಿ ಆ ಗೋಪಕನ್ಯೆಯರು ಕೃಷ್ಣನು ತಮ್ಮ ಭಾವೀ ಪತಿಯಾಗಬೇಕೆಂಬ ಸಂಕಲ್ಪದಿಂದ ಆ ದಿನ ಕಾತ್ಯಾಯನೀ ವ್ರತಾಚರಣೆಯಲ್ಲಿ ನಿರತರಾಗಿದ್ದರು ಎಂದು ಅದೇ ಭಾಗವತದಲ್ಲಿ (೧೦.೨೨.೪) ಹೇಳಿದೆ.
:
;
;
ಇಲ್ಲಿ ಗಮನಿಸಬೇಕಾದ ಒಂದು ಕೌತುಕದ ಸಂಗತಿಯಿದೆ. ಯಧಿಷ್ಠಿರನು ರಾಜಸೂಯ ಯಾಗವನ್ನು ಮಾಡಿದ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದವರಲ್ಲಿ ಬಹುಜನ ಅಗ್ರಪೂಜೆಗೆ ಕೃಷ್ಣನನ್ನು ಆರಿಸಿದಾಗ ಅವನ ಬದ್ಧವೈರಿಯಾದ ಚೇದಿರಾಜ ಶಿಶುಪಾಲನು ಅದನ್ನು ಕಟುವಾಗಿ ವಿರೋಧಿಸಿ ಅವನ ಮೇಲೆ ಹೇಯವಾದ ಬೈಗುಳಗಳ ಮಳೆಗರೆದನಲ್ಲಾ, ಆಗ ಗೋಪಿಯರೊಡನೆ ಕೃಷ್ಣನ ಅಕ್ರಮ ಸಂಬಂಧದ ವಿಷಯವನ್ನೇ ಎತ್ತಲಿಲ್ಲ! (ಮಹಾಭಾರತ ಸಭಾಪರ್ವ, ಅಧ್ಯಾಯ ೩೯ ಮತ್ತು ೪೦ ನೋಡಿ). ಕೃಷ್ಣನ ಕಥೆ ನಮಗೆ ಮೊಟ್ಟ ಮೊದಲು ಪರಿಚಯವಾಗುವುದು ಮಹಾಭಾರತದಲ್ಲೇ ಅಂದ ಮೇಲೆ, ಕೃಷ್ಣ-ಗೋಪಿಯರ ಸಂಬಂಧದ ಪ್ರಸಂಗ ಅಲ್ಲೇ ಇಲ್ಲದ ಮೇಲೆ, ಅದು ಅನಂತರ ಕೃಷ್ಣಭಕ್ತಿ ಪಂಥದ ಪ್ರಚಾರಕ್ಕಾಗಿ ಯಾರೋ ಕವಿ ಕಲ್ಪಿಸಿಕೊಂಡ ಕಥೆಯಾಗಿ ಪ್ರಕ್ಷಿಪ್ತವಾಗಿ ಸೇರಿರಬಹುದಾಗಿದ್ದ ಪಕ್ಷದಲ್ಲಿ ಕೃಷ್ಣನ ನಿಂದಕರ ವಾದಕ್ಕೆ ನೆಲೆಯೇ ಇಲ್ಲವಾಗುತ್ತದೆ.
ಹೆಚ್ಚಿನ ವಿವರಗಳಿಗೆ ಈ ಲೇಖನವನ್ನು ನೋಡಿ.
http://sampada.net/b...

Submitted by RAMAMOHANA Wed, 09/25/2013 - 13:55

ಗುಣಶೇಖರರೆ.., ನಿಮ್ಮ‌ ತರ್ಕ‌ ಬದ್ಧ‌ ಉತ್ತರಕ್ಕೆ ನಮ್ಮ‌ ಯಾವುದೇ ಆಕ್ಷೇಪಣೆ ಇಲ್ಲ‌. ಆದರೆ ಉತ್ತರಿಸುವಾಗ‌ ಬಳಸುವ‌ ಭಾಷಾ ಶೈಲಿ, ಮತ್ತು ರೀತಿ ನೀತಿಯ‌ ಬಗ್ಗೆ ಗಮನವಿರಲೆಂದಷ್ಟೆ ಹೇಳುವುದು. ಪಾರ್ಥಸಾರತಿಗಳು ಕೂಡ‌ ಶ್ರೀ ಕ್ಱಷ್ಣನ‌ ಕಥೆಗಳನ್ನು ಮತ್ತು ಪಾತ್ರವನ್ನು, ಅವರ‌ ಅನಿಸಿಕೆಗಳಿಗೆ ತಕ್ಕಂತೆ ಬದಲಿಸಿ ಬರೆದಿದ್ದಾರೆ. ಅದರಲ್ಲಿ ತಪ್ಪಿಲ್ಲ‌. ನೀವೂ ಕೂಡ‌ ಆ ಅವತಾರ‌ ಪುರುಷನ‌ ಮತ್ತೊಂದು ಮುಖವನ್ನು ಪ್ರಸ್ತುತ‌ ಪಡಿಸಲು ಪ್ರಯತ್ನಿಸುತ್ತಿದ್ದೀರ‌ ಕಂಡಿತಾ ತಪ್ಪಲ್ಲ‌. ಆದರೆ ಹಾಗೆ ನಿರೂಪಿಸುವಾಗ‌ ನಿಮ್ಮ‌ ನಿರೂಪಣ‌ ರೀತಿಗೆ ನೀವೇ ಸ್ವಯಂ ನಿಯಂತ್ರಣ‌ ಹೊಂದಿದ್ದರೆ ಅದು ಕವಿತ್ವವೆನಿಸುತ್ತದೆ. ಇಲ್ಲವಾದಲ್ಲಿ ಅದು ಕೇವಲ‌ ನನ್ನ‌ ವಾದ‌ ಗೆಲ್ಲಬೇಕೆಂಬ‌ ಛಲವೆನಿಸುತ್ತದೆ. ಚರ್ಚೆಗಳು, ವಿಚಾರಧಾರೆಗಳು ಆರೋಗ್ಯಕರವಾಗಿದ್ದರೆ ಮಾತ್ರ‌ ಹೊಸತನ‌ ಮೊಡುತ್ತದೆ. ಸಮಾಜಕ್ಕೆ ಒಳಿತಾಗುತ್ತದೆ. ಇಲ್ಲವಾದಲ್ಲಿ ಜಗಳವಾಗಿಬಿಡುತ್ತವೆ. ಅದರಿಂದ‌ ಯಾವುದೇ ಪ್ರಯೋಜನವಾಗುವುದಿಲ್ಲ‌. ಚರ್ಚೆಗಳು ಹೊಸ‌ ವಿಚಾರಗಳನ್ನು ಮಂಥಿಸಿ, ನೀವಂದಂತೆ ಮೌಢ್ಯ‌ನಿವಾರಣೆ (ನಂಬಿದವರದ್ದು / ನಂಬದಿವರದ್ದು) ಆಗಬೇಕು.
ತಮಗೆ ಶುಭವಾಗಲಿ
ರಾಮೋ