ನಾವು ನಮ್ಮ ಹವ್ಯಾಸಗಳನ್ನು ಮರೆಯುತ್ತಿದ್ದೇವೆಯೇ?

ನಾವು ನಮ್ಮ ಹವ್ಯಾಸಗಳನ್ನು ಮರೆಯುತ್ತಿದ್ದೇವೆಯೇ?

ಇವತ್ತು ಹೀಗೆ ಸುಮ್ಮನೆ, ಕಾಲೇಜಿನಲ್ಲಿ ಗೆಳೆಯರೆಲ್ಲಾ ಬರೆದು ಕೊಟ್ಟ ಆಟೋಗ್ರಾಫ್ ನೋಡುತ್ತಾ ಇದ್ದೆ. ಅದರಲ್ಲಿ ಕಣ್ಣು ಸೆಳೆದಿದ್ದು ಅವರು ಬರೆದ ಹವ್ಯಾಸಗಳ ಬಗ್ಗೆ. ಕೆಲವರಿಗೆ ಓದುವ ಬರೆಯುವ ಹವ್ಯಾಸಗಳಿದ್ದರೆ, ಇನ್ನೂ ಕೆಲವರಿಗೆ ಹಾಡು ಕೇಳುವುದು, ಹಾಡು ಹಾಡುವುದು, ಕೆಲವರು ಅವರು ಇಷ್ಟಪಡುವ ಆಟಗಳ ಬಗ್ಗೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಬರೆದಿದ್ದರು. ಆದರೆ ಅದೆಷ್ಟು ಜನ ಆ ಹವ್ಯಾಸಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೋ ಗೊತ್ತಿಲ್ಲ.

 

ಹೀಗೆ ನಾನು ಅದೆಷ್ಟೋ ಜನ ಸ್ನೇಹಿತರನ್ನ, ಓರಗೆಯವರನ್ನ ನೋಡಿದ್ದಿನಿ. ಚಿಕ್ಕವರಿದ್ದಾಗ ಅದೆಷ್ಟೋ ಒಳ್ಳೆಯ ರೀತಿಯ ಹವ್ಯಾಸಗಳನ್ನು ಬೆಳೆಸಿಕೊಂಡಿರುತ್ತಾರೆ, ಆದರೆ ಅವರಲ್ಲಿ ಕೆಲವು ಜನ ಬೆಳೆಯುತ್ತಾ ಹೋದ ಹಾಗೆ ತಮ್ಮ ಹವ್ಯಾಸಗಳನ್ನು ಮರೆಯುತ್ತಾ ಹೋಗಿ ಒಂದು ವಯಸ್ಸನ್ನು ದಾಟಿದ ಮೇಲೆ ಅದನ್ನು ಸಂಪೂರ್ಣವಾಗಿ ಮರೆತು ಬಿಡುತ್ತಾರೆ. ಕೆಲವು ಜನ ತಮ್ಮ ಹವ್ಯಾಸಗಳನ್ನೇ ವೃತ್ತಿಯನ್ನಾಗಿ ಬೆಳೆಸಿಕೊಳ್ಳುವವರಿದ್ದಾರೆ, ಇಂತವರು ಅಪರೂಪಕ್ಕೆ ಅಲ್ಲೊಬ್ಬರು, ಇಲ್ಲೊಬ್ಬರು ಇರುತ್ತಾರೆ. ಮತ್ತೆ ಕೆಲವರಿರುತ್ತಾರೆ ತಮ್ಮ ಒಳ್ಳೆಯ ಹವ್ಯಾಸಗಳನ್ನು ಮರೆತು, ಕೆಟ್ಟ ಹವ್ಯಾಸಗಳನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳುವವರಿದ್ದಾರೆ. ಇಂತವರು ನಮಗೆ ಆಗಾಗ ಅಲ್ಲಿ, ಇಲ್ಲಿ ಕಾಣಸಿಗುತ್ತಾರೆ. ಪುಣ್ಯವಂತರು, ತಮ್ಮ ಮತ್ತು ಜಗತ್ತಿನ ಚಿಂತೆಯೇ ಇಲ್ಲದ ಜನ.

 

ಬದಲಾಗುತ್ತಿರುವ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ನಾವು ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ತೊಡಗಿದ್ದು, ನಮ್ಮನ್ನೇ ನಾವು ಮರೆಯುವ ಪರಿಸ್ಥಿತಿಯನ್ನ ತಲುಪಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ನಮಗೆ ನಮ್ಮ ಹವ್ಯಾಸಗಳೆಲ್ಲ ನೆನಪಾಗುತ್ತವೆ. ದಿನಕ್ಕೆ ಎಂಟರಿಂದ ಹತ್ತು ಗಂಟೆಗಳ ಕಾಲ ಕಛೇರಿಯಲ್ಲಿ ಕಳೆದು, ಎರಡು ಮೂರು ಗಂಟೆಗಳನ್ನು ರಸ್ತೆಯಲ್ಲಿ ಕಳೆದು ಮನೆ ತಲುಪುವ ಹೊತ್ತಿಗೆ ಸುಸ್ತೋ, ಸುಸ್ತು. ಇನ್ನೂ ಹವ್ಯಾಸಗಳಿಗೆ ಸಮಯವೆಲ್ಲಿ. ಅಲ್ಪ ಸ್ವಲ್ಪ ಸಮಯಸಿಕ್ಕರೂ, ಆಸಕ್ತಿಯ ಕೊರತೆ, ಏಕಾಗ್ರತೆಯ ಕೊರತೆ. ಕಾರಣಗಳು ಒಂದೇ, ಎರಡೇ. ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲಾ. ಕೆಲವರಿಗಂತು ಬಿಡಿ, ಕೆಲಸ ಇರಲಿ, ಬಿಡಲಿ ಅವರಂತು ಖಾಲಿ ಇರುವುದಿಲ್ಲ. ದಿನದ ಹತ್ತು ಗಂಟೆ ಪೇಸಬುಕ್ಕಲ್ಲಿ, ಸಿರಿಯಲ್ ನೋಡುವುದರಲ್ಲಿ, ಹರಟೆ ಹೋಡೆಯುವುದರಲ್ಲಿ ಕಾಲ ಕಳೆದರೂ, ಒಳ್ಳೆಯ ಹವ್ಯಾಸಗಳಿಗೆ ಸಮಯವೇ ಇರುವುದಿಲ್ಲ.

 

ನನಗೆ ಚಿಕ್ಕವನಾಗಿದ್ದಾಗಿನಿಂದಲು ಓದುವುದು, ಬರೆಯುವುದು ಅಂದರೆ ತುಂಬಾ ಇಷ್ಟವಾದ ವಿಷಯವಾಗಿತ್ತು. ಮನೆಗೆ ಸಾಮಾನು ಕಟ್ಟಿ ತಂದ ವೃತ್ತ ಪತ್ರಿಕೆಯ ತುಣುಕಾಗಲಿ, ರಸ್ತೆಯಲ್ಲಿ ಬಿದ್ದ ಕಾಗದದ ತುಣುಕಾಗಲಿ ಸಿಕ್ಕರೆ ಒಂದು ಅಕ್ಷರವನ್ನು ಬಿಡದೇ ಓದುತ್ತಿದ್ದೆ. ಅದು ಹೈಸ್ಕೂಲು ಸೇರಿದ ಮೇಲೆ ಇನ್ನಷ್ಟು ಬೆಳೆದು, ಕಾಲೇಜು ದಿನಗಳಲ್ಲಿ ಉಚ್ಚಾಯ ಸ್ಥಿತಿಯನ್ನು ತಲುಪಿತ್ತು. ಆದರೆ ಯಾವಾಗ ಕಾಲೇಜು ದಿನಗಳು ಕಳೆದು, ಉನ್ನತ ಶಿಕ್ಷಣದತ್ತ ಮುಖಮಾಡಿ ಹೊರೆಟೆನೋ ಅಲ್ಲಿಗೆ ನನ್ನ ಹವ್ಯಾಸಗಳಿಗೆ ಒಂದು ದೀರ್ಘ ವಿರಾಮ ಬಿತ್ತು. ಅದು ಸುಮಾರು ಹತ್ತು ವರ್ಷಗಳವರೆಗೆ. ಉನ್ನತ ಶಿಕ್ಷಣವನ್ನು ಮುಗಿಸಿ, ಕೆಲಸ ಮಾಡಲು ಪ್ರಾರಂಭಿಸಿದೆನೋ, ಅಲ್ಲಿಗೆ ನನ್ನ ಹವ್ಯಾಸಗಳಿಗೆ ಒಂದು ಪುಲ್ ಸ್ಟಾಪ್. ಈಗ ಮತ್ತೆ ಅದೇ ಹವ್ಯಾಸಗಳನ್ನು ಪುನರಾರಂಭಿಸಿದ ನಂತರ ಅನ್ನಿಸುತ್ತಿದೆ, ನನ್ನ ಜೀವನದ ಅಮೂಲ್ಯ ಹತ್ತು ವರ್ಷಗಳನ್ನು ಅಜ್ನಾತವಾಸದಲ್ಲಿ ಕಳೆದು, ಹಾಳು ಮಾಡಿಬಿಟ್ಟೆನಲ್ಲ ಎಂದು. ಆದರೆ ಇತರರ ಹಾಗೆ ಸಂಪೂರ್ಣ ಮರೆತ ದುಃಖವಿಲ್ಲ. ಮತ್ತೆ ಪುನರಾರಂಭಿಸಿದ್ದಕ್ಕೆ ಸಂತೋಷವಿದೆ.

 

ನನ್ನ ಹಾಗೆ ನನ್ನ ಸ್ನೇಹಿತರದೆಷ್ಟೋ ಜನ ಇದ್ದಾರೆ, ತಮ್ಮ ಹವ್ಯಾಸಗಳನ್ನು ಸಂಪೂರ್ಣ ಮರೆತಿರುತ್ತಾರೆ. ಅಂತವರಿಗೆ ನಾನು ಕೇಳುವುದಿಷ್ಟೇ, ನೀವು ಯಾಕೆ ನಿಮ್ಮ ಹವ್ಯಾಸಗಳನ್ನು ಮುಂದುವರೆಸಬಾರದು? ಎಂದು ನನ್ನ ಕೆಲವು ಸ್ನೇಹಿತರನ್ನ ಕೇಳಿದಾಗ, ಎಲ್ಲರ ಉತ್ತರವೂ ಒಂದೇ, "ಸಮಯ ಎಲ್ಲಿದೆ?". ನಮಗೆ ಸಮಯ ಸಿಗುವುದಿಲ್ಲ ಎನ್ನುವುದು ತಪ್ಪು. ನಾವು ನಮ್ಮ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ ಎನ್ನುವುದು ಸತ್ಯ. ನೆನಪಿರಲಿ, ಎಲ್ಲರಿಗೂ ಇರುವುದು ೨೪ ಗಂಟೆನೆ. ಆ ೨೪ ಗಂಟೆಯನ್ನು ನಾವು ಹೇಗೆ ಉಪಯೋಗಿಸಿಕೊಳ್ಳುತಿದ್ದೇವೆ ಎನ್ನುವುದು ಮುಖ್ಯ. ನಾವು ನಮ್ಮ ಹವ್ಯಾಸಗಳಿಗೆ ದಿನಾ ಪೂರ್ತಿ ವಿನಿಯೋಗಿಸಬೇಕಿಲ್ಲ, ದಿನಕ್ಕೆ ಒಂದರ್ಧ ಗಂಟೆ, ಹೋಗಲಿ ಎರಡು ಮೂರು ಗಂಟೆ ವಿನಿಯೋಗಿಸಿದರು ಸಾಕು. ಹವ್ಯಾಸಗಳಿಂದ ನಮ್ಮ ಮನಸ್ಸು ಕೂಡ ಮುದಗೊಂಡಿರುತ್ತದೆ. ಮಾನಸಿಕವಾಗಿಯೂ, ದೈಹಿಕವಾಗಿಯೂ ಉತ್ಸುಕರಾಗಿರುತ್ತೇವೆ. ಅದು ನಮಗೆ ಉಳಿದ ಕೆಲಸಗಳನ್ನು ಮಾಡಲು ಇನ್ನಷ್ಟು ಪ್ರೇರೇಪಿಸುತ್ತದೆ. ಒಮ್ಮೆ ಪ್ರಯತ್ನಿಸಿ ನೋಡಿ. 

--ಮಂಜು ಹಿಚ್ಕಡ್