೧೨೧. ಲಲಿತಾ ಸಹಸ್ರನಾಮ ೪೮೫ರಿಂದ ೪೯೪ನೇ ನಾಮಗಳ ವಿವರಣೆ

೧೨೧. ಲಲಿತಾ ಸಹಸ್ರನಾಮ ೪೮೫ರಿಂದ ೪೯೪ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೪೮೫-೪೯೪

Anāhatābja-nilayā अनाहताब्ज-निलया (485)

೪೮೫. ಅನಾಹತಾಬ್ಜ-ನಿಲಯಾ

            ಅನಾಹತ ಚಕ್ರ ಎನ್ನುವುದಕ್ಕೆ ಹೃದಯ ಚಕ್ರವೆಂದೂ ಕರೆಯುತ್ತಾರೆ ಇದು ಕಂಠ ಚಕ್ರ ಅಥವಾ ವಿಶುದ್ಧಿ ಚಕ್ರಕ್ಕಿಂತ ಕೆಳಗಡೆ ಹೃದಯದ ಆವರಣದಲ್ಲಿ ಮೆದುಳಿನ ಬಳ್ಳಿಯಲ್ಲಿ ಇರುತ್ತದೆ. ಇಲ್ಲಿ ಒಂದು ಕಾಲ್ಪನಿಕ ಮಸುಕು ಕೆಂಪು ವರ್ಣದ ಹನ್ನೆರಡು ದಳಗಳುಳ್ಳ ಪದ್ಮವಿರುತ್ತದೆ. ಈ ಚಕ್ರದಲ್ಲಿ ‘ಶಬ್ದ’ವು ಯಾವುದೇ ವಿಧವಾದ ಘರ್ಷಣೆಯಿಲ್ಲದೆ ಉತ್ಪನ್ನವಾಗುತ್ತದೆ. ಈ ಶಬ್ದವನ್ನೇ ‘ಶಬ್ದ ಬ್ರಹ್ಮ’ವೆಂದು ಕರೆಯಲಾಗುತ್ತದೆ. ವೇದಗಳು ಪುರುಷ ಎಂದು ಕರೆಯಲ್ಪಡುವ ಆತ್ಮನೂ ಸಹ ಇಲ್ಲಿ ನಿವಸಿಸುತ್ತಾನೆ ಎಂದು ಹೇಳುತ್ತವೆ. ಕಠೋಪನಿಷತ್ತು (೨.೧.೧೩), "ಅಂಗುಷ್ಠ ಮಾತ್ರದ (ಕೈಯ ಹೆಬ್ಬರಿಳಿನಷ್ಟಿರುವ) ಪುರುಷನು ಅವರ ಹೃದಯಗಳಲ್ಲಿ ಹೊಗೆರಹಿತ ಜ್ಯೋತಿಯಂತೆ ಕಾಣಿಸುತ್ತಾನೆ" ಎಂದು ಹೇಳುತ್ತದೆ. ಈ ಅನಾಹತ ಚಕ್ರದ ಕೆಳಗೆ ಒಂದು ಸಣ್ಣ ಅಷ್ಟದಳದ ಪದ್ಮವಿದ್ದು ಅದರಲ್ಲಿ ಒಬ್ಬನ ಇಷ್ಟದೇವತೆಯನ್ನು ಧ್ಯಾನಿಸಲಾಗುತ್ತದೆ. ಇಲ್ಲಿ ಆತ್ಮನಿಗೂ ಮತ್ತು ಇಷ್ಟ ದೇವತೆಗೂ ಇರುವ ವ್ಯತ್ಯಾಸವನ್ನು ಸ್ಪಷ್ಟವಾಗಿ ಹೇಳಲಾಗಿದೆ; ಇಷ್ಟ ದೇವತೆಯನ್ನು ಬ್ರಹ್ಮದೊಂದಿಗೆ ಹೋಲಿಸಿಕೊಂಡು ಗೊಂದಲಗೊಳ್ಳಬಾರದು. ಮೊದಲ ಹನ್ನೆರಡು ವ್ಯಂಜನಾಕ್ಷರಗಳನ್ನು ಬಿಂದುಗಳೊಂದಿಗೆ ಪ್ರತಿಯೊಂದು ದಳಗಳೊಂದಿಗೆ ಕಲ್ಪಿಸಿಕೊಳ್ಳಲಾಗಿದೆ. ಪದ್ಮದ ಅಂಚು (ಪರಿಧಿಯು) ಷಟ್ಕೋಣಾಕೃತಿಯಲ್ಲಿರುತ್ತದೆ. ಈ ಚಕ್ರವು ವಾಯು ತತ್ವವನ್ನು ಪ್ರತಿನಿಧಿಸುತ್ತದೆ ಮತ್ತು ’ಯಂ (यं) ಇದರ ಬೀಜಾಕ್ಷರವಾಗಿದೆ. ‘ಯಂ’ ಬೀಜಾಕ್ಷರವು ರಕ್ಷಣೆಯನ್ನು ಒದಗಿಸುವುದಕ್ಕೆ ಮೀಸಲಾಗಿದ್ದು ಅದು ಒಬ್ಬನ ಆಸೆಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ. ಒಬ್ಬ ವ್ಯಕ್ತಿಗೆ ಆತ್ಮಬೀಜವನ್ನು ನಿಗದಿ ಪಡಿಸುವಾಗ ಇಂತಹ ಹಲವಾರು ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಈ ಚಕ್ರದಲ್ಲಿ ಪ್ರತಿಷ್ಠಿತವಾಗಿರುವ ದೇವಿಯು ರಾಕಿಣೀ (ನಾಮ ೪೯೪). ಕುಂಡಲಿನಿಯನ್ನು ಕುರಿತು ವಿಶೇಷವಾಗಿ ಚರ್ಚಿಸುವ ಗ್ರಂಥಗಳಲ್ಲಿ ಕಂಡು ಬರುವ ಯೋಗಿನಿಯರ ಹೆಸರುಗಳಿಗೂ ಈ ಸಹಸ್ರನಾಮದಲ್ಲಿ ಪ್ರಸ್ತಾವಿಸಲಾಗಿರುವ ಯೋಗಿನಿಯರ ಹೆಸರುಗಳಿಗೂ ವ್ಯತ್ಯಾಸವಿದೆ. ಉದಾಹರಣೆಗೆ ಈ ಸಹಸ್ರನಾಮದಲ್ಲಿ ಅನಾಹತ ಚಕ್ರದ ಯೋಗಿನಿಯನ್ನು ರಾಕಿಣೀ ಎಂದು ಹೆಸರಿಸಲಾಗಿದ್ದರೆ ಬೇರೆ ಗ್ರಂಥಗಳಲ್ಲಿ ಆಕೆಯನ್ನು ಕಾಕಿನೀ ಎಂದು ಕರೆಯಲಾಗಿದೆ. ಈ ಸಹಸ್ರನಾಮದ ಪ್ರಕಾರ ಕಾಕಿನೀ ಎನ್ನುವುದು ಸ್ವಾಧಿಷ್ಠಾನ ಚಕ್ರದಲ್ಲಿ ಆಸೀನಳಾಗಿರುವ ಯೋಗಿನಿಯ ಹೆಸರು.

           ಈ ನಾಮವು, ಮುಂದಿನ ಒಂಭತ್ತು ನಾಮಗಳಲ್ಲಿ ಪ್ರಸ್ತಾವಿಸಲಾಗಿರುವ ಹೃದಯ ಚಕ್ರದಲ್ಲಿ ನಿವಸಿಸುವ ರಾಕಿಣೀ ದೇವಿಯು ಯಾವಾಗಲೂ ಎಚ್ಚರಿಕೆಯಿಂದ ಇದ್ದು ಲಲಿತಾಂಬಿಕೆಯು ಸಹಸ್ರಾರವನ್ನು ಸೇರಲು ದಾರಿಮಾಡಿಕೊಡುತ್ತಾಳೆ ಎನ್ನುತ್ತದೆ. ಪ್ರತಿ ಬಾರಿ ಲಲಿತಾಂಬಿಕೆಯು ಈ ಚಕ್ರದ ಮೂಲಕ ಹಾದು ಹೋಗುವಾಗ ಇಲ್ಲಿ ಸ್ಥಾಪಿತವಾಗಿರುವ ಆತ್ಮವು ಆಕೆಯಿಂದ ಆಶೀರ್ವದಿಸಲ್ಪಡುತ್ತದೆ. ಇದು ಯಾವಾಗ ಜರಗುತ್ತದೆಯೋ ಆಗ ಕರ್ಮಶೇಷವು ಕಳೆದು ಅದು ಒಬ್ಬ ವ್ಯಕ್ತಿಯನ್ನು ಧಾರ್ಮಿಕನನ್ನಾಗಿಸುತ್ತದೆ.

Śyāmābhā श्यामाभा (486)

೪೮೬. ಶ್ಯಾಮಾಭಾ

            ರಾಕಿಣೀ ದೇವಿಯ ವರ್ಣನೆಯು ಈಗ ಪ್ರಾರಂಭವಾಗುತ್ತದೆ. ಆಕೆಯು ಕಡುನೀಲಿ ಬಣ್ಣವನ್ನು ಹೊಂದಿದ್ದು ಆಕೆಯು ಹದಿನಾರು ವರ್ಷ ವಯಸ್ಸಿನವಳಾಗಿದ್ದಾಳೆ.

Vadanadvayā वदनद्वया (487)

೪೮೭. ವದನದ್ವಯಾ

            ರಾಕಿಣೀ ದೇವಿಯು ಎರಡು ಮುಖಗಳನ್ನು ಹೊಂದಿದ್ದರೆ, ಡಾಕಿನೀಶ್ವರೀ ಯೋಗಿನಿಯು ಒಂದು ಮುಖವುಳ್ಳವಳಾಗಿದ್ದಾಳೆ (ನಾಮ ೪೭೯ - ವದನೈಕ ಸಮನ್ವಿತಾ). ಈ ಸಹಸ್ರನಾಮದಲ್ಲಿ ಚಕ್ರಗಳ ಪ್ರಸ್ತಾವನೆಯು ಮುಖಗಳ ಏರಿಕೆಯ ಅನುಕ್ರಮದಲ್ಲಿ ಇದೆ, ಅದರ ಪ್ರಕಾರ ಅನಾಹತದಲ್ಲಿ (ಹೃದಯ ಚಕ್ರದಲ್ಲಿ) ನೆಲಸಿರುವ ರಾಕಿಣೀ ದೇವಿಗೆ ಎರಡು ಮುಖಗಳಿವೆ.

Daṃṣṭrojjvalā दंष्ट्रोज्ज्वला (488)

೪೮೮. ದಂಷ್ಟ್ರೋಜ್ಜ್ವಲಾ

            ರಾಕಿಣೀ ದೇವಿಗೆ ಕಾಡು ಹಂದಿಗೆ ಇರುವಂತಹ ಭಯಂಕರವಾದ ಕೋರೆ ಹಲ್ಲುಗಳಿವೆ.

Akṣamālādi-dharā अक्षमालादि-धरा (489)

೪೮೯. ಅಕ್ಷಮಾಲಾದಿ-ಧರಾ

           ರಾಕಿಣೀ ದೇವಿಯು ಐವತ್ತೊಂದು ಮಣಿಗಳಿಂದ ರಚಿಸಲ್ಪಟ್ಟ ಮಾಲೆಯನ್ನು ಧರಿಸಿದ್ದಾಳೆ; ಪ್ರತಿಯೊಂದು ಮಣಿಯು ಸಂಸ್ಕೃತ ವರ್ಣಮಾಲೆಯ ಒಂದೊಂದು ಅಕ್ಷರಗಳನ್ನು ಪ್ರತಿನಿಧಿಸುತ್ತದೆ. ಈ ಚಕ್ರದಲ್ಲಿ ಶಬ್ದವು ಯಾವುದೇ ವಿಧವಾದ ಘರ್ಷಣೆಯಿಲ್ಲದೆ ಹೊರಹೊಮ್ಮುತ್ತದೆ. ಸಾಮಾನ್ಯವಾಗಿ ಶಬ್ದವನ್ನು ಉಂಟು ಮಾಡಲು ಎರಡು ವಸ್ತುಗಳ ಅವಶ್ಯಕತೆಯಿದೆ, ಉದಾಹರಣೆಗೆ ಚಪ್ಪಾಳೆ ತಟ್ಟಲು ನಮ್ಮ ಎರಡೂ ಅಂಗೈಗಳ ಅವಶ್ಯಕತೆಯಿದೆ. ಈ ಚಕ್ರವು ತನ್ನಷ್ಟಕ್ಕೇ (ಸ್ವತಃ) ಶಬ್ದವನ್ನುಂಟು ಮಾಡುವ ಸಾಮರ್ಥ್ಯವನ್ನು ಹೊಂದಿರುವುದರಿಂದ (ದೀರ್ಘ ಧ್ಯಾನದಲ್ಲಿ ಅನಾಹತ ಚಕ್ರದ ಮೂಲಕ  ಓಂ (ॐ) ಶಬ್ದವು ಕೇಳಿಸುತ್ತದೆ) ಮತ್ತು ಶಬ್ದವು ಗಾಳಿಯ ಮೂಲಕ ಪ್ರಸರಣ ಹೊಂದುವುದರಿಂದ ರಾಕಿಣೀ ದೇವಿಯು ಅಕ್ಷರಮಾಲೆಯನ್ನು ಧರಿಸಿದ್ದಾಳೆನ್ನುವ ವಾಕ್-ದೇವಿಗಳ ಆಯ್ಕೆಯು ಸೂಕ್ತವಾಗಿಯೇ ಇದೆ.

           ಅಕ್ಷಮಾಲಿಕಾ ಉಪನಿಷತ್ತು ಎನ್ನುವ ಉಪನಿಷತ್ತೊಂದಿದ್ದು ಅದು ಸಂಸ್ಕೃತದ ಐವತ್ತೊಂದು ಅಕ್ಷರಗಳನ್ನು ಕುರಿತು ಚರ್ಚಿಸುತ್ತದೆ. ಅದರ ಪ್ರಕಾರ ಒಬ್ಬನು ಐವತ್ತೊಂದು ವಿಧವಾದ ರತ್ನಗಳು ಹಾಗೂ ಲೋಹಗಳಿಂದ ಮಾಡಲ್ಪಟ್ಟಿರುವ ಮತ್ತು ಬಂಗಾರದ ಅಥವಾ ಬೆಳ್ಳಿಯ ದಾರದಿಂದ ಪೋಣಿಸಲ್ಪಟ್ಟ ಮಣಿಗಳ ಹಾರವನ್ನು ತಯಾರಿಸಿಕೊಳ್ಳಬೇಕು. ಇದನ್ನು ಶಾಸ್ತ್ರೋಕ್ತ ಪೂಜಾ ವಿಧಾನಗಳಿಂದ ಪರಿಶುದ್ಧಗೊಳಿಸಬೇಕು. ಯಾವುದೇ ಮಂತ್ರವನ್ನು ಈ ವಿಧವಾದ ಮಾಲೆಯನ್ನುಪಯೋಗಿಸಿ ಜಪಿಸಿದರೆ ಆ ಮಂತ್ರದ ಸಿದ್ಧಿಯು ಶೀಘ್ರವಾಗಿ ಆಗುವುದು. ಸಾಮಾನ್ಯವಾಗಿ ಎಲ್ಲಾ ಜಪ ಮಾಲೆಗಳನ್ನು ಎಣಿಸುವುದಕ್ಕೆ ಬಳಸುವ ಮೊದಲು ಶಾಸ್ತ್ರಬದ್ಧ ವಿಧಿ-ವಿಧಾನಗಳಂತೆ ಶುದ್ಧಗೊಳಿಸಬೇಕು. ಈ ಜಪಮಾಲೆಗಳನ್ನು ಮಂತ್ರದಷ್ಟೇ ಪವಿತ್ರವೆಂದು ಭಾವಿಸಬೇಕು.

Rudhira-saṁsthitā रुधिर-संस्थिता (490)

೪೯೦. ರುಧಿರ-ಸಂಸ್ಥಿತಾ

            ರಾಕಿಣೀ ದೇವಿಯು ಚರ್ಮದ ನಂತರದ ಧಾತುವಾದ ರಕ್ತದಲ್ಲಿ ಪ್ರತಿಷ್ಠಿತಳಾಗಿದ್ದಾಳೆ. ವಾಕ್-ದೇವಿಗಳು ವಿಶುದ್ಧಿ ಚಕ್ರದ ನಂತರ ಅನಾಹತ ಚಕ್ರವನ್ನು ಇಲ್ಲಿ ಸಂಯೋಜಿಸಿರುವುದಕ್ಕೆ ಇದು ಮತ್ತೊಂದು ಕಾರಣವಾಗಿದೆ.

Kālarātryādi-śaktyaughavṛtā कालरात्र्यादि-शक्त्यौघवृता (491)

೪೯೧. ಕಾಲರಾತ್ರ್ಯಾದಿ-ಶಕ್ತ್ಯೌಘವೃತಾ

            ರಾಕಿಣೀ ದೇವಿಯು ಒಂದೊಂದು ದಳದ ಮೇಲೆ ಆಸೀನರಾಗಿರುವ ಕಾಲರಾತ್ರೀ ದೇವಿ ಮೊದಲಾದ ಅವಳ ಹನ್ನೆರಡು ಸಹಚರರಿಂದ ಸುತ್ತುವರೆಯಲ್ಪಟ್ಟಿದ್ದಾಳೆ. ಕಾಲರಾತ್ರೀ ದೇವಿಯು ರುದ್ರನ ತಮೋ ಗುಣದಿಂದ ಜನಿಸಿದಳೆಂದು ಹೇಳಲಾಗುತ್ತದೆ ಅವಳನ್ನು ಈ ವಿಧವಾಗಿ ಬಣ್ಣಿಸಲಾಗುತ್ತದೆ, "ಆಕೆಯು ಮೂರು ಕಣ್ಣುಗಳನ್ನು ಹೊಂದಿದ್ದು, ಅವಳ ಕಾಂತಿಯು ಉದಯಿಸುವ ಸೂರ್ಯನಂತಿದೆ, ಮತ್ತು ಆಕೆಯ ಕೇಶರಾಶಿಯು ಜಡೆಗಳಿಂದ ಬಿಗಿಗೊಳಿಸಲ್ಪಡದೆ ಕೆದರಿದೆ ಮತ್ತು ಆಕೆಯು ಕಪ್ಪು ವರ್ಣದ ವಸ್ತ್ರಗಳನ್ನು ಧರಿಸದ್ದು ಆಕೆಯು ತನ್ನ ನಾಲ್ಕು ಕೈಗಳಲ್ಲಿ ಲಿಂಗ, ಭುವನ, ದಂಡ ಮತ್ತು ವರದ ಮುದ್ರೆಯನ್ನು ಧರಿಸಿದ್ದಾಳೆ, ಆಕೆಯು ವಿವಿಧ ರೀತಿಯ ಆಭರಣಗಳಿಂದ ಕಂಗೊಳಿಸುತ್ತಾಳೆ, ಆಕೆಯು ಹಸನ್ಮುಖಿಯಾಗಿದ್ದು ದೇವತೆಗಳ ಗುಂಪಿನಿಂದ ಸೇವಿಸಲ್ಪಡುತ್ತಾಳೆ ಮತ್ತು ಆಕೆಯ ಮೈಯು ಮನಸಿಜನಾದ ಕಾಮನ ಬಾಣಗಳಿಂದ ಛಿದ್ರಗೊಂಡು ಘಾಸಿಗೊಳಿಸಲ್ಪಟ್ಟಿದೆ". ಆಕೆಯ ಮಂತ್ರವನ್ನು ಜಪಿಸುವುದರಿಂದ ಒಬ್ಬನ ಶತ್ರುಗಳ ವಿನಾಶವಾಗುತ್ತದೆ. ಆಕೆಯನ್ನು ದುರ್ಗಾ ದೇವಿಯ ಒಂದು ಅವತಾರವೆಂದೂ ಸಹ ಹೇಳುತ್ತಾರೆ.

            ಒಬ್ಬನು ಮರಣ ಶಯ್ಯೆಯಲ್ಲಿರುವಾಗ ಈ ದೇವಿಯು ಕನಸಿನಲ್ಲಿ ಕಾಣಿಸಿಕೊಂಡು ಅವರಿಗೆ ಮರಣದ ಸೂಚನೆಯನ್ನು ಕೊಡುತ್ತಾಳೆ ಎಂದು ಹೇಳಲಾಗುತ್ತದೆ.

            ಕಾಲರಾತ್ರೀ ಎಂದರೆ ಒಬ್ಬ ಮನುಷ್ಯನ ಜೀವನದ ೭೭ನೇ ವರ್ಷದ, ೭ನೇ ತಿಂಗಳಿನ, ೭ನೇ ದಿವಸದ ಒಂದು ವಿಶಿಷ್ಠ ರಾತ್ರಿಯಾಗಿದ್ದು ಅಂದಿನಿಂದ ಆ ಮನುಷ್ಯನು ಶಾಸ್ತ್ರವಿಧಿತ ಕರ್ಮಗಳನ್ನು ಮಾಡುವುದರಿಂದ ವಿನಾಯತಿ ಪಡೆಯುತ್ತಾನೆ ಎನ್ನುವುದನ್ನೂ ಸಹ ಸೂಚಿಸುತ್ತದೆ.

Snigdhaudana-priyā स्निग्धौदन-प्रिया (492)

೪೯೨. ಸ್ನಿಗ್ಧೌದನ-ಪ್ರಿಯಾ

            ರಾಕಿಣೀ ದೇವಿಯು ಘೃತಾನ್ನ (ತುಪ್ಪವನ್ನು ಬೆರೆಸಿದ ಅನ್ನ) ಪ್ರಿಯಳು. ಈ ಆಹಾರವು ಗುಣಮಟ್ಟದ ರಕ್ತವನ್ನು ಉತ್ಪನ್ನ ಮಾಡುತ್ತದೆ.

Mahāvīrendra-varadā महावीरेन्द्र-वरदा (493)

೪೯೩. ಮಹಾವೀರೇಂದ್ರ-ವರದಾ

         ರಾಕಿಣೀ ದೇವಿಯು ವೀರರಿಗೆ ವರಗಳನ್ನು ಕರುಣಿಸುತ್ತಾಳೆ. ಇಲ್ಲಿ ವೀರರೆಂದರೆ ನಿರರ್ಗಳವಾಗಿ ಮಾತನಾಡುವವರು (ಭಾಷಣಕಾರರು) ಮತ್ತು ಅವರ ವಾಗ್ವೈಖರಿಯು ಅವರಿಗೆ ರಾಕಿಣೀ ದೇವಿಯು ಇತ್ತ ವರವಾಗಿದೆ. ಈ ಹೇಳಿಕೆಯು ರಾಕಿಣೀ ದೇವಿಯು ಐವತ್ತೊಂದು ಅಕ್ಷರಗಳ ಮಾಲೆಯನ್ನು ಧರಿಸಿದ್ದಾಳೆನ್ನುವುದಕ್ಕೆ, ವಾಯು ತತ್ವಕ್ಕೆ ಮತ್ತು  ಅನಾಹತ ಶಬ್ದದ ಹೊರಹೊಮ್ಮುವಿಕೆ ಇವುಗಳಿಗೆ ಸೂಕ್ತವಾಗಿ ಹೊಂದಾಣಿಕೆಯಾಗುತ್ತದೆ.

         ಶಿವ ಸೂತ್ರ (೧.೧೧), "ಜಾಗ್ರತ್, ಸ್ವಪ್ನ, ಸುಷುಪ್ತಿಗಳಲ್ಲಿ” ನಾನು’ ಎನ್ನುವ ಅಹಂಕಾರವನ್ನು ಛಿದ್ರಗೊಳಿಸುವುದರಲ್ಲಿ ಆನಂದವನ್ನು ಕಾಣುವವನು ತನ್ನ ಇಂದ್ರಿಯಗಳನ್ನು ಜಯಿಸಿದ ವೀರನಾಗುತ್ತಾನೆ" ಎಂದು ಹೇಳುತ್ತದೆ. ವೀರ ಎಂದರೆ ಇಂದ್ರಿಯಗಳು ಮತ್ತು ಯಾರು ಈ ಇಂದ್ರಿಯಗಳ ಮೇಲೆ ಹತೋಟಿಯನ್ನು ಹೊಂದುತ್ತಾರೆಯೋ ಅವರನ್ನು ವೀರೇಂದ್ರ ಎನ್ನಲಾಗುತ್ತದೆ. ಈ ಸಂದರ್ಭದಲ್ಲಿ ವೀರೇಂದ್ರ ಎಂದರೆ ಯಾರು ಪರಮಾನಂದವನ್ನು ಅನುಭವಿಸುವ ನಾಲ್ಕನೆಯ ಹಂತವಾದ ತುರೀಯಾವಸ್ಥೆಯನ್ನು ಹೊಂದುತ್ತಾರೆಯೋ ಅವರು. ತುರಿಯಾವಸ್ಥೆಯ ಮುಂದಿನ ಹಂತವು ತುರ್ಯಾತೀತ ಅವಸ್ಥೆಯಾಗಿದ್ದು ಅಲ್ಲಿ ಆತ್ಮಸಾಕ್ಷಾತ್ಕಾರವು ಹೊಂದಲ್ಪಡುತ್ತದೆ. ಇವುಗಳು ಒಬ್ಬನ ಪ್ರಜ್ಞೆಯ ವಿವಿಧ ಹಂತಗಳಾಗಿವೆ.

            ಯಾರು "ನಾನು" ಮತ್ತು "ಇದು" ಎನ್ನುವ ತತ್ವಗಳನ್ನು ಅಧಿಗಮಿಸಿದ್ದಾನೆಯೋ ಅವನನ್ನೂ ಸಹ ವೀರ ಎಂದು ಕರೆಯಲಾಗುತ್ತದೆ ಮತ್ತು ರಾಕಿಣೀ ದೇವಿಯು ಅವರಿಗೆ ವರಗಳನ್ನು ನೀಡುವುದರಲ್ಲಿ ಆನಂದವನ್ನು ಪಡೆಯುತ್ತಾಳೆ. (ಆಕೆಯು ವರದ ಹಸ್ತವನ್ನು ಹೊಂದಿದ್ದಾಳೆ - ನಾಮ ೪೯೧)

Rākiṇyambā-svarūpiṇī राकिण्यम्बा-स्वरूपिणी (494)

೪೯೪. ರಾಕಿಣ್ಯಾಂಬ-ಸ್ವರೂಪಿಣೀ

           ದೇವಿಯು ೪೮೫ನೇ ನಾಮದಿಂದ ೪೯೪ನೇ ನಾಮದವರೆಗೆ (ಹತ್ತು ನಾಮಗಳು) ವಿವರಿಸಲಾಗಿರುವ ರಾಕಿಣೀ ಸ್ವರೂಪವನ್ನು ತಾಳುತ್ತಾಳೆ.

******

        ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 485 - 494 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Mon, 09/16/2013 - 21:04

ಶ್ರೀಧರರೆ, ೧೨೧. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯರೂಪ ಪರಿಷ್ಕರಣೆಗೆ ಸಿದ್ದ :

ಲಲಿತಾ ಸಹಸ್ರನಾಮ ೪೮೫-೪೯೪
________________________________________________

೪೮೫. ಅನಾಹತಾಬ್ಜ-ನಿಲಯಾ
ಘರ್ಷಣಾರಹಿತ ಶಬ್ದೋತ್ಪನ್ನ ಅನಾಹತ ಚಕ್ರ, ದ್ವಾದಶದಳ ಕೆಂಪು ಪದ್ಮ
ವಿಶುದ್ಧಿ ತಳ ಹೃದಯಾವರಣ ಮೆದುಳುಬಳ್ಳಿಯ ಶಬ್ದಬ್ರಹ್ಮ ಪುರುಷಾತ್ಮ
ದ್ವಾದಶ ವ್ಯಂಜನಾಕ್ಷರ ಪ್ರತಿ ದಳ, ವಾಯು ತತ್ವ ಚಕ್ರ 'ಯಂ' ಬೀಜಾಕ್ಷರ
ಕಾಮನೆ ಪೂರೈಕೆ, ರಕ್ಷಣೆ ಹೃದಯಚಕ್ರದೊಡತಿ ಕಾಪಿಡೆ ಪಥ ಸಹಸ್ರಾರ ||

೪೮೬. ಶ್ಯಾಮಾಭಾ
ಅನಾಹತ ಚಕ್ರ ನಿವಾಸಿನಿ ರಾಕಿಣೀ ದೇವಿ ಪ್ರಸ್ತುತಿ
ಕಡುನೀಲಿ ಬಣ್ಣದ ಷೋಡಶಿ ಅವಿರತ ಜಾಗೃತ ಸ್ಠಿತಿ
ಸಹಸ್ರಾರ ಹಾದಿಯಲಿ, ಸ್ಥಾಪಿತಾತ್ಮ ಆಶೀರ್ವದಿತ
ಶ್ಯಾಮಾಭಾ ಕಳೆಸುತ ಕರ್ಮಶೇಷ, ವ್ಯಕ್ತಿ ಧರ್ಮದತ್ತ ||

೪೮೭. ವದನದ್ವಯಾ
ಡಾಕಿನಿಯಿರೆ ವದನೈಕ ಕಂಠ, ರಾಕಿಣಿ ಯೋಗಿನಿ ವದನದ್ವಯ
ಹೃದಯಮಂಡಲದ ಎಡಬಲದಂತೆ, ಎರಡು ಮುಖಗಳ ಕಾಯ
ಸರ್ವದಾ ಎಚ್ಚರದಿ ಮಾಡಿ, ಸಹಸ್ರಾರಕೆ ದಾರಿ ಲಲಿತಾಂಬಿಕೆಗೆ
ಹಗಲಿರುಳಿಗೊಂದೊಂದು ಜಾಗೃತವದನ, ಸರದಿಕಾಯುವ ಬಗೆ ||

೪೮೮. ದಂಷ್ಟ್ರೋಜ್ಜ್ವಲಾ
ಒದಗಿಸಿ ರಕ್ಷಣೆ ಹೃದಯಚಕ್ರದ 'ಯಂ' ಬೀಜಾಕ್ಷರ
ಕಾಪಾಡುತಲೆ ಅನಾಹತದೆ ನಶಿಸದಂತೆ ನಿರಂತರ
ಚಕ್ರದೊಡತಿ ರಾಕಿಣೀ ರಕ್ಷಾರೂಪದೆ ದಂಷ್ಟ್ರೋಜ್ಜ್ವಲಾ
ಸಾಕಾರ ಕಾನನವರಹಾ ಭಯಂಕರ ಕೋರೆಯಹಲ್ಲ ||

೪೮೯. ಅಕ್ಷಮಾಲಾದಿ-ಧರಾ 
ಶಬ್ದ ತಂತಾನೆ ಹೊರಟ ಸುಲಲಿತ, ಹೊರಹೊಮ್ಮಿ ಘರ್ಷಣೆರಹಿತ
ಪ್ರಣವದ ಸ್ವಯಂಭುನಾದ ಪ್ರಸರಣ, ಗಾಳಿಯಲಿ ತಾನೆ ತೇಲುತ
ಪಂಚಾದಶೇಕ ಮಣಿರಚಿತ ಮಾಲಾಧಾರಿಣಿ ಅಕ್ಷಮಾಲಾದಿ-ಧರಾ 
ಸಂಸ್ಕೃತಾಕ್ಷರಮಾಲೆಯ ಪ್ರತಿಯಕ್ಷರ ಪ್ರತಿನಿಧಿಸೊ ರಾಕಿಣಿಹಾರ ||

೪೯೦. ರುಧಿರ-ಸಂಸ್ಥಿತಾ
ಚರ್ಮದ ನಂತರದ ಧಾತು, ಬುಡದಲಿ ಹರಿವ ರಕ್ತ
ಎರಡನೆ ಅನುಕ್ರಮ ಅನಾಹತದೆ ರುಧಿರ-ಸಂಸ್ಥಿತಾ
ರಕ್ತಧಾತುವಲಿ ಪ್ರತಿಷ್ಠಿತೆಯಾಗಿ ರಾಕಿಣೀ ಸಂಬಂಧ
ವಿಶುದ್ಧಿ ನಂತರ ಹೃದಯ ಚಕ್ರ ವಾಕ್ದೇವಿ ಕ್ರಮಬದ್ಧ ||

೪೯೧. ಕಾಲರಾತ್ರ್ಯಾದಿ-ಶಕ್ತ್ಯೌಘವೃತಾ
ದ್ವಾದಶದಳದಲಾಸೀನ ಶಕ್ತಿ, ಕಾಲರಾತ್ರ್ಯಾದಿ-ಶಕ್ತ್ಯೌಘವೃತಾ
ಕಾಲರಾತ್ರೀದೇವಿ ತ್ರಿನೇತ್ರೆ, ರುದ್ರ ತಮೋಗುಣದಿಂದ ಜನಿತ
ಉದಯರವಿ ಕಾಂತಿ, ಕೆದರು ಜಡೆ, ಕರಿವಸ್ತ್ರಾಭರಣ ಸುಸ್ಮಿತೆ
ಲಿಂಗ ಭುವನ ದಂಡ ವರದಮುದ್ರಾಭುಜೆ, ಕಾಮಶರ ಛಿದ್ರಿತೆ ||

೪೯೨. ಸ್ನಿಗ್ಧೌದನ-ಪ್ರಿಯಾ
ರುಧಿರ ಪ್ರತಿಷ್ಠಾಪಿತ ರಾಕಿಣೀ, ರಕ್ತದಿ ಪೂರ್ಣ ವಿಲೀನ
ಶ್ರೇಷ್ಠವಿರಿಸೆ ರಕುತದ ಗುಣ, ಬಯಸುವಳು ಮೃಷ್ಟಾನ್ನ
ಉತ್ಕೃಷ್ಟ ನೆತ್ತರನುತ್ಪಾದಿಸೆ ಘೃತಾನ್ನ, ತುಪ್ಪ ಬೆರೆಸಿದನ್ನ
ಮೆಚ್ಚುವ ರಾಕಿಣೀ ಸ್ನಿಗ್ಧೌದನ-ಪ್ರಿಯಾ, ನೆತ್ತರಾಗಿ ಸಂಪನ್ನ ||

೪೯೩. ಮಹಾವೀರೇಂದ್ರ-ವರದಾ
ವೀರ ವಾಗ್ಮಿ ನಿರರ್ಗಳ ವಾಗ್ವೈಖರಿಗೆ, ವರದಹಸ್ತೆ ರಾಗಿಣೀ
ಪಂಚಾದಶೇಕ-ವಾಯುತತ್ವ-ಅನಾಹತಶಬ್ದ ಪೂರಕ ವಾಣಿ
ವೀರರಧಿಗಮಿಸೆ 'ನಾನು' 'ಇದು' ತತ್ವ, ವರದಾತೆ ಆನಂದ 
ಇಂದ್ರಿಯ ಜಯ ತುರ್ಯಾತೀತ, ಮಹಾವೀರೇಂದ್ರ ವರದಾ ||

೪೯೪. ರಾಕಿಣ್ಯಾಂಬ-ಸ್ವರೂಪಿಣೀ
ಅನಾಹತ ಚಕ್ರನಿಲಯೆ, ನೀಲತನು, ರಾಕಿಣೀ ವದನದ್ವಯಾ
ದಂಷ್ಟ್ರೋಜ್ಜ್ವಲಾ ಅಕ್ಷಮಾಲಾದಿಧರಾ, ರುಧಿರಸಂಸ್ಥಿತಾ ಶ್ರೇಯ
ಕಾಲರಾತ್ರ್ಯಾದಿ ಶಕ್ತ್ಯೌಘವೃತಾ, ಸ್ನಿಗ್ಧೌದನಪ್ರಿಯಾ ರಕ್ಷ ರಾಕಿಣೀ
ಮಹಾವೀರೇಂದ್ರವರದಾ ವರದಾಯಿ ರಾಕಿಣ್ಯಾಂಬ-ಸ್ವರೂಪಿಣೀ ||
 
ಧನ್ಯವಾದಗಳೊಂದಿಗೆ
-ನಾಗೇಶ ಮೈಸೂರು