ಲಂಚ್ ಲವ್ ಸ್ಟೋರಿ..!

ಲಂಚ್ ಲವ್ ಸ್ಟೋರಿ..!

ಆತ ವಿಧುರ. ಈಕೆ ಗೃಹಿಣಿ. ಆತನಿಗೆ ಈಗ ನಿವೃತ್ತಿ ವಯಸ್ಸು. ಈಕೆ ಮದುವೆಯಾಗಿದ್ದಾಳೆ. ಗಂಡನಿಗೆ ಈಕೆ ಬಗ್ಗೆ ಏನೋ ನಿರಾಸಕ್ತಿ. ಕಾರಣ ತಿಳಿಯದು. ಒಮ್ಮೆ ಒಂದು ಘಟನೆ ನಡೆದು ಹೋಗುತ್ತದೆ. ಆ ಘಟನೆಯಿಂದ ಆಗೋದು ಅವಘಡ ಅಲ್ಲ. ಪ್ರೀತಿಯ ಆರಂಭ. ಇದು ಕತೆ. ದಿ ಲಂಚ್ ಬಾಕ್ಸ್ ಕತೆ. ಈ ಶುಕ್ರವಾರ ತೆರೆಗೆ ಬಂದಿರೋ ಚಿತ್ರದ ಕತೆ.

ಅದು ಮುಂಬೈ ನಗರ. ಸಾವಿರ..ಸಾವಿರ ಜನರ ಓಡಾಟ. ಲೋಕಲ್ ಟ್ರೈನ್ ನಲ್ಲಿ ಇಡೀ ಬುದುಕೇ ಕಳೆದು ಹೋಗುತ್ತದೆ. ಆ ಜಂಚಾಟದಲ್ಲಿ ಊಟದ ಡಬ್ಬ ತೆಗೆದುಕೊಡು ಹೋಗಲು ಸಾಧ್ಯವೇ ಆಗೋದಿಲ್ಲ. ಆಫೀಸ್ ಕೆಲಸಕ್ಕೆ ಹೋಗೋರಿಗೆ. ಅದಕ್ಕೇನೆ ಮುಂಬೈ ನಗರದಲ್ಲಿ ಡಬ್ಬಾವಾಲಾಗಳಿದ್ದಾರೆ. ಆಫೀಸ್ ನ ಊಟದ ಸಮಯಕ್ಕೆ ಸರಿಯಾಗೆ ಡಬ್ಬಿಗಳನ್ನ ತಲುಪಿಸುತ್ತಾರೆ. ಇದೇ ಪ್ರಾಮಾಣಿಕತೆಗೆ ಡಬ್ಬಾವಾಲಾಗಳು ಮುಂಬೈನ್ ನಲ್ಲಿ ಖ್ಯಾತರು. ಹಾಗೆ ದಿ ಲಂಚ್ ಬಾಕ್ಸ್ ಚಿತ್ರದ ಕಥಾನಾಯಕ ಸಾಜನ್ ಫರ್ನಾಂಡಿಸ್ ಗೆ ಊಟದ ಬಾಕ್ಸ್ ಬರುತ್ತದೆ. ಅದು ದಿನವೂ. ಒಮ್ಮೆ ಒಂದು ಸಣ್ಣ ಬದಲಾವಣೆ ಆಗುತ್ತದೆ. ದಿನವೂ ಬರುತ್ತಿರೋ ಲಂಚ್ ಬಾಕ್ಸ್ ಆದಿನ ಬಂದಿರೋದಿಲ್ಲ. ಬದಲಿಗೆ ಬೇರೆ ಯಾರದೋ ಬಾಕ್ಸ್ ಸಾಜನ್ ಕೈಗೆ ಬರುತ್ತದೆ...

ಅಲ್ಲಿಂದ ಕತೆ ತೆರೆದು ಕೊಳ್ಳುತ್ತದೆ. ಅದು ಹೊಸ ಪ್ರೀತಿಗೊಂದು ನಾಂದಿ. ಹೆಂಡ್ತಿಯನ್ನ ಕಳೆದು ಕೊಂಡ ಸಾಜನ್. ಮತ್ತೆ ಪ್ರೀತಿ ಹುಟ್ಟುಬಹುದೆಂಬ ನಂಬಿಕೆನೂ ಇಲ್ಲದೆ ಬದುಕು ಸಾಗಿಸುತ್ತಲೇ ಇರುತ್ತಾರೆ. ಯಾರದೋ ಲಂಚ್ ಬಾಕ್ಸ್ ನಲ್ಲಿ ಒಂದು ಪುಟ್ಟ ಚೀಟಿ ಸಿಗುತ್ತದೆ. ಆಗ ಅದನ್ನ ಓದಿದಾಗ ಎದೆಯಲ್ಲಿ ಏನೋ ಹೊಸ ಭಾವ. ಹೊಸ ಕನಲುವಿಕೆ.ಪುಟ್ಟ ಪತ್ರಕ್ಕೆ ಪ್ರತಿಕ್ರಿಯಿಸೋ ಮನಸ್ಸು. ತಟ್ಟನೇ ಸಾಜನ್ ಸಾಲು ಬರೆದು ಬಿಡ್ತಾರೆ. ಊಟ ಚೆನ್ನಾಗಿದೆ. ಕೊಂಚ ಖಾರ ಹೆಚ್ಚಿತ್ತು ಅನ್ನೋ ಸಾಲುಗಳವು.

ಈಕಡೆಯಿಂದ ಆ ಸಾಲುಗಳನ್ನ ಓದಿದ ಕಂಗಳಲ್ಲಿ ಏನೋ ಹೊಸ ಹೊಳಪು. ಪತಿಯಿಂದ ಎಂದೂ ನಿರೀಕ್ಷಿಸದೇ ಇರೋ ಪ್ರತಿಕ್ರಿಯೇ. ಒಮ್ಮೆ ಖುಷಿ. ಇನ್ನೊಮ್ಮೆ ಅನುಮಾನ. ಎರಡನೇ ದಿನವೂ ಅದೇ ರೀತಿಯ ಪತ್ರದ ಪ್ರತಿಕ್ರಿಯೆ. ಮನಸ್ಸಿನಲ್ಲಿ ಹುಟ್ಟಿದ ಅನುಮಾನ ನಿಜವಾಗುತ್ತದೆ. ಇದು ತನ್ನ ಪತಿಯ ಪ್ರತಿಕ್ರಿಯೆ ಅಲ್ಲವೇ ಅಲ್ಲ ಎಂಬುದು. ಹಾಗೆ ಪತ್ರ ಓದಿದವಳ ಹೆಸ್ರು. ಇಲಾ. ಗೃಹಿಣಿ. ಪ್ರತಿ ದಿನವೂ ಪತಿಗೆ ಊಟದ ಡಬ್ಬಿ ಕಳಿಸುತ್ತಲೇ ಇರುತ್ತಾಳೆ. ಆದ್ರೆ, ತಾನು ಕಳಿಸಿದ ಊಟದ ಡಬ್ಬಿ ಬೇರೆಯವರ ಕೈಗಿ ಸೇರುತ್ತಿದೆ. ಅದು ಡಬ್ಬಾವಾಲಾಗಳ  ತಪ್ಪಿನಿಂದ. ಇರಲಿ ಬಿಡು ಅನ್ನುತ್ತಲೇ ಇಲಾ ಬೇರೆ ಗಂಡಸಿಗೆ ಡಬ್ಬಿಯನ್ನ ಕಳಿಸುತ್ತಲೇ ಹೋಗುತ್ತಾಳೆ...

ಹೀಗೆ ಇಲಾ ಮತ್ತು ಸಾಜನ್ ಮಧ್ಯೆ ಪತ್ರ ಸಂಬಂಧ ಬೆಳೆಯುತ್ತಲೇ ಹೋಗುತ್ತದೆ. ಡಬ್ಬಾವಾಲಗಳ ಕೃಪೆಯಿಂದ. ದಿನ ಊರುಳಿದಂತೆ, ಪತ್ರದಲ್ಲಿಯೇ ಭಾವನೆಗಳ ವಿನಿಮಯವಾಗುತ್ತದೆ. ಒಮ್ಮೆಯಾದ್ರೂ ಬೇಟಿಯಾಗೋ ಆಸೆ ಚಿಗುರೊಡೆಯುತ್ತದೆ. ಅಲ್ಲಿಗೆ ಇಬ್ಬರ ಮಧ್ಯೆದ ಸಂಬಂಧ ಒಂದು ಅರ್ಥ ಪಡೆದುಕೊಳ್ಳುತ್ತದೆ. ಅದೇ ಧೈರ್ಯದಲ್ಲಿಯೇ ಇಲಾ ಒಂದು ಜಾಗಕ್ಕೆ ಬರುತ್ತಾಳೆ. ಸಾಜನ್ ಅವಳ ಬೇಟಿಗೆ ಸಜ್ಜಾಗುತ್ತಾರೆ. ನಿಗದಿಪಡಿಸಿದಂತೆ, ಇಬ್ಬರೂ ಬರುತ್ತಾರೆ. ಆದ್ರೆ, ಪರಸ್ಪರ ಬೇಟಿಯಾಗುತ್ತಾರಾ..? ಹೌದು. ಮುಖಾ-ಮುಖಿ ಆಗುತ್ತಾರೆ. ಸಾಜನ್ ಅವಳನ್ನ ದೂರದಿಂದಲೇ ನೋಡುತ್ತಾರೆ. ಆಕೆ ಸಾಜನ್ ನೋಡಲು ಆಗೋದೇಯಿಲ್ಲ. ಯಾಕೆ. ಥಿಯೇಟರ್ ನಲ್ಲಿ ನೋಡಿ. ನಾನು ನೋಡಬೇಕಿದೆ. ಅಲ್ಲಿ ಏನಾಗುತ್ತದೆಂಬ ಕುತೂಹಲ ನನಗು ಇದೆ....

ದಿ ಲಂಚ್ ಬಾಕ್ಸ್ ಹಿಂದಿನ ಸತ್ಯ; ದಿ ಲಂಚ್ ಬಾಕ್ಸ್ ಚಿತ್ರದಲ್ಲಿ ಇರ್ಫಾನ್ ಖಾನ್ ಹಿರಿಯ ವ್ಯಕ್ತಿ ಸಾಜನ್ ಪಾತ್ರ ನಿರ್ವಹಿಸಿದ್ದಾರೆ. ಇಲಾ ಪಾತ್ರವನ್ನ ರಂಗಭೂಮಿ ಕಲಾವಿದೆ, ನಮ್ರತ್ ಕೌರ್ ಮಾಡಿದ್ದಾರೆ. ಇವರ ಹಿಂದೆ ಇರೋರು ನಿರ್ದೇಶಕ ರಿತೇಷ್ ಬಾತ್ರಾ. ಕಿರುಚಿತ್ರ ಮಾಡೋವಲ್ಲಿ ಎತ್ತಿದ ಕೈಗೆ. ಡಾಕ್ಯೂಮೆಂಟ್ರಿ ನಿರ್ದೇಶನದಲ್ಲಿ ರಿತೇಷ್ ಖ್ಯಾತರು. ಮುಂಬೈ ಡಬ್ಬಾವಾಲಾಗಳ ಮೇಲೆ ಡಾಕ್ಯೂಮೆಂಟ್ರಿ ಮಾಡಲು ಹೋದಾಗಲೇ, ದಿ ಲಂಚ್ ಬಾಕ್ಸ್ ಲವ್ ಸ್ಟೋರಿ ಹೊಳೆದಿದೆ. 2007 ರಲ್ಲಿಯೇ ಕತೆ ಮಾಡಿಕೊಂಡಿದ್ದಾರೆ. ಕತೆ ಕೇಳಿದ ಅನೇಕರು ನಿರ್ಮಾಣಕ್ಕೆ ಮುಂದೆ ಬಂದಿದ್ದಾರೆ. ಹಾಗೆ 2012 ರಲ್ಲಿ ಚಿತ್ರೀಕರಣ ಆರಂಭವಾಗಿದೆ. ಇದೇ ಶುಕ್ರವಾರ ಭಾರತ ಸೇರಿದಂತೆ, ಅಮೆರಿಕದಲ್ಲೂ ತೆರೆಗೆ ಬಂದಿದೆ. ಅಷ್ಟೇ ಅಲ್ಲ. ಕೇನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಚಿತ್ರ ಪ್ರರ್ದಶನ ಕಂಡು,ಪಾಸಿಟಿವ್ ರೆಸ್ಪಾನ್ಸ್ ಕೂಡ ಪಡೆದಿದೆ.

-ರೇವನ್.ಪಿ.ಜೇವೂರ್