ಇಂದು ನನಗೆ ಉಪವಾಸ..

ಇಂದು ನನಗೆ ಉಪವಾಸ..

ಇಂದು ಶ್ರಾವಣ ಮಾಸದ ಮೂರನೆಯ ಶನಿವಾರ. ಕಳೆದ ಎರಡು ಮೂರು ವರ್ಷಗಳಿಂದ ಶ್ರಾವಣ ಮಾಸದ ಶನಿವಾರದ ದಿನ ಮಾತ್ರ ಉಪವಾಸ ಮಾಡುತ್ತೇನೆ. ಹಾಗಂತ ತಿಳಿದು ಕೊಂಡಿದ್ದೇನೆ. ಉಳಿದ ಶನಿವಾರಗಳಲ್ಲಿ ಊಟ ಮಾಡುತ್ತೇನಾದರೂ ಮಾಂಸಾಹಾರ ಸೇವಿಸುವುದಿಲ್ಲ (ಕ್ಷಮಿಸಿ, ಅದು ಶನಿವಾರ ಎಂದು ನೆನಪಿದ್ದರೆ ಮಾತ್ರ). ಇಂದು ಶನಿವಾರ, ಕಛೇರಿಗೆ ರಜೆ ಇದ್ದುದರಿಂದ ಬೆಳಿಗ್ಗೆ ಹತ್ತು ಗಂಟೆಗೆ ಎದ್ದು ಸ್ನಾನದ ಶಾಸ್ತ್ರ ಮುಗಿಸಿದೆ. ಅಷ್ಟೊತ್ತಿಗಾಗಲೇ ನನ್ನ ಹೆಂಡತಿ ಉಪವಾಸವಾದ್ದರಿಂದ ಅಕ್ಕಿಯ ಪದಾರ್ಥಗಳನ್ನು ತಿನ್ನಬಾರದು ಅನ್ನುವ ಉದ್ದೇಶದಿಂದ ರವೆಯ ಉಪ್ಪಿಟ್ಟು ಮಾಡಿಟ್ಟಿದ್ದಳು. ಚೆನ್ನಾಗಿತ್ತು, ಎರೆಡೆರಡು ಬಾರಿ ಹಾಕಿಕೊಂಡು ತಿಂದೆ. ಮಧ್ಯಾನ ಹಸಿವೆಯಾದರೆ ಎನ್ನುವ ಕಾರಣದಿಂದ ಇನ್ನಷ್ಟು ಜಾಸ್ತಿನೇ ತಿಂದೆ.

ಆಮೇಲೆ ಅದು ಇದು ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಿ ಮುಗಿಸುವ ಹೊತ್ತಿಗೆ ಸಮಯ ಆಗಲೆ ೨ ಗಂಟೆ ದಾಟಿತ್ತು. ನನ್ನ ಮಡದಿ ನಾಲ್ಕು ಚಪಾತಿಯ ಜೊತೆಗೆ ಪಲ್ಯ ತಂದು ಮುಂದಿಟ್ಟಳು. ಚಪಾತಿ ಪಲ್ಯದ ವಾಸನೆ ಮೂಗಿಗೆ ಹೊಡೆದದ್ದೇ ತಡ, ಹೊಟ್ಟೆ ಮತ್ತೆ ಚುರುಗುಟ್ಟಲು ಪ್ರಾರಂಭಿಸಿತು. ಚಪಾತಿ ಒಂದೊಂದಾಗಿ ಹೊಟ್ಟೆ ಸೇರಿತು. ಹೊಟ್ಟೆಗೆ ಹಿತವೆನಿಸಿದಂತಾಗಿ ನಿದ್ದೆ ಸೆಳೆಯತೊಡಗಿತು. ಸ್ವಲ್ಪ ಹೊತ್ತು ಮಲಗೋಣ ಎಂದು ಹಾಸಿಗೆಯ ಮೇಲೆ ಹೊರಳಿದೆ. ನಿದ್ದೆ ಅವರಿಸಿದ್ದು ಗೊತ್ತೇ ಆಗಲಿಲ್ಲ. ಹೆಂದತಿ ಬಂದು 'ಏನ್ರಿ, ಎಷ್ಟು ಹೊತ್ತು ಮಲಗಿದ್ದಿರಾ?' ಎಂದಾಗಲೇ ಎಚ್ಚರ. ಸಮಯ ಆರು ದಾಟಿತ್ತು. ಹೆಂಡತಿ ಚಹಾ ಬನ್ ಕೊಟ್ಟಳು, ಸುಮ್ಮನೆ ತಿಂದು, ಒಂದು ಸುತ್ತಿ ತಿರುಗಿ ಬರಲು ಹೊರಗೆ ಹೊರಟೆ.

ಸುತ್ತಾಡಿ ಮನೆ ತಲುವಷ್ಟೊತ್ತಿಗೆ ಗಂಟೆ ಒಂಬತ್ತು ದಾಟಿತ್ತು. ನನ್ನ ಹೆಂಡತಿ ಆಗಲೇ ಕೇಸರಿಬಾತ್, ಪುರಿ ಮಾಡಿಟ್ಟಿದ್ದಳು, ಮೂರು ಪುರಿ, ಸ್ವಲ್ಪ ಕೇಸರಿಬಾತ್ ತಿಂದೆ. ಉಪವಾಸ ಆದ್ದರಿಂದ ಜಾಸ್ತಿ ತಿನ್ನಲು ಹೋಗಲಿಲ್ಲ. ಕೊನೆಯಲ್ಲಿ ಒಂದರ್ದ ಲೋಟ ಹಾಲು ಕುಡಿದು, ಒಂದು ಬಾಳೆ ಹಣ್ಣು ತಿಂದು ಮಲಗಲು ಹೋದೆ. ನಿದ್ದೆ ಬರಲಿಲ್ಲ. ನನ್ನ ಸಹೋದ್ಯೋಗಿಗಳೊಬ್ಬರು, ಅವರ ಏಕಾದಶಿಯ ಉಪವಾಸದ ಪ್ರಸಂಗ ಹೇಳಿದ್ದು ನೆನಪಾಯಿತು. ಅವರು ನನ್ನಂತೆಯೆ ಏಕಾದಶಿಯ ಉಪವಾಸ ಮಾಡುತಿದ್ದರಂತೆ. ಆ ಮೇಲೆ ಜ್ನಾನೋಧಯವಾಗಿ ಉಪವಾಸಮಾಡುವುದನ್ನೇ ನಿಲ್ಲಿಸಿಬಿಟ್ಟರಂತೆ. ನನಗು ಅದೇ ಯೋಚನೆ ಕಾಡಲು ಪ್ರಾರಂಭಿಸಿಬಿಟ್ಟಿದೆ. ದಿನಾ ಪೂರ್ತಿ ತಿಂದ ಮೇಲೆ ಉಪವಾಸ ಅಂದರೆ ಹೇಗೆ?

ನನ್ನಂತೆ ಅದೆಷ್ಟೋ ಸ್ನೇಹಿತರು ಉಪವಾಸ ಮಾಡಿರಬಹುದು, ಆದರೆ ನಾನು ಮಾಡುವಂತೆ ಉಪವಾಸ ಮಾಡುವುದಾಗಿದ್ದರೆ ದಯವಿಟ್ಟು ಅದನ್ನು ಉಪವಸ ಎನ್ನುವುದನ್ನು ನಿಲ್ಲಿಸಿ. ಅದರ ಬದಲು ಚೆನ್ನಾಗಿ ತಿಂದು ಸುಖವಾಗಿರಿ. ನೆನಪಿರಲಿ ಉಪವಾಸ ಎಂದರೆ ನಮಗೆ ತೋಚಿದ್ದನ್ನು, ಬೇಕಾಗಿದ್ದನ್ನು ತಿನ್ನುವುದಲ್ಲ. ಉಪವಾಸ ಎಂದರೆ ದಿನ ಪೂರ್ತಿ ತಿನ್ನದೇ ಇರುವುದು ಎಂದರ್ಥ. ಇದು ದಿನಕ್ಕೆರಡು ಬಾರಿ ತಿಂದು ಉಪವಾಸ ಸತ್ಯಾಗ್ರಹ ಅನ್ನುವವರಿಗು ಅನ್ವಯಿಸುತ್ತದೆ. ಉಪವಾಸಕ್ಕೂ, ನಮ್ಮ ಆಚರಣೆಗಳಿಗೂ ತುಂಬಾ ವತ್ಯಾಸವಿದೆ ಎನ್ನುವುದನ್ನು ಮರೆಯಬೇಡಿ

 

-- ಮಂಜು ಹಿಚ್ಕಡ್

Comments

Submitted by sathishnasa Sun, 09/22/2013 - 13:33

ಉಪವಾಸ ಎಂದರೆ ದೇವರ ಸನಿಹದಲ್ಲಿ ವಾಸ ಎಂದು ಅರ್ಥ ಅಂದರೆ ಅವನ ಸ್ಮರಣೆಯಲ್ಲಿರ ಬೇಕೆಂಬುದು ಅದರ ಉದ್ದೇಶ ಆದರೆ ನಾವು ಅದೊಂದನ್ನು ಬಿಟ್ಟು ಬೇರೆಯದನ್ನೆಲ್ಲ ಮಾಡುತ್ತೇವೆ. ನಿವಂದಂತೆ ಉಪವಾಸ ಎಂದರೆ ಬಗೆ ಬಗೆಯ ತಿಂಡಿಗಳನ್ನು ಮಾಡಿಕೊಂಡು ಊಟಕ್ಕಿಂತ ಜಾಸ್ತಿಯೇ ತಿನ್ನುತ್ತೇವೆ ಹಾಗೆ ಮಾಡುವುದಕ್ಕಿಂತ ಊಟ ಮಾಡುವುದೆ ಒಳ್ಳೆಯದು ಧನ್ಯವಾದಗಳೊಂದಿಗೆ .....ಸತೀಶ್
Submitted by manju.hichkad Sun, 09/22/2013 - 18:06

In reply to by sathishnasa

ನಿಜ ಸತೀಶಅವರೇ, ಇಂದು ಉಪವಾಸ ಎನ್ನುವುದು ದೇವರ ಹೆಸರಿನಲ್ಲಿ ಸಿಕ್ಕಿದ್ದೆನ್ನಲ್ಲಾ ತಿನ್ನುವುದು ಅಂತಾ ಆಗಿ ಬಿಟ್ತಿದೆ. ಹಾಗೆ ತಿನ್ನುವುದೇ ಆಗಿದ್ದರೆ ಉಪವಾಸ ಮಾಡುವುದರಲ್ಲಿ ಏನು ಪ್ರಯೋಜನ?