ಬರಿಗಾಲ ಫಕೀರ

ಬರಿಗಾಲ ಫಕೀರ

ಇವರಿರುವದೇ ಹೀಗೆ..ಶಭ್ರ ಶ್ವೇತ ವಸ್ತ್ರಧಾರಿ..ಹಣೆಯ ಮೇಲೆ ತಿರುನಾಮ..ಬರಿಗಾಲ ಫಕೀರ..ಹಣ ಮುಟ್ಟದೇ ಜೀವಿಸಲು ಸಾಧ್ಯವೇ ಎಂಬ ಪ್ರಯೋಗದಲ್ಲಿ ಯಶಸ್ವಿಯಾದವರು...ಯಾವಾಗಲೂ ಆಚಾರ್ಯ ರಾಮಾನುಜರ ಸ್ಮರಣೆ..ಮೇಲುಕೋಟೆ ಚಲುವನಾರಾಯಣನ ಅನನ್ಯ ಭಕ್ತರು.

ಮೇಲುಕೋಟೆ ಚೆಲುವನಾರಾಯಣನ ಬೀಡು.. ಶ್ರೀವೈಷ್ಣವ ಶ್ರದ್ಧಾಕೇಂದ್ರ. ಅಲ್ಲೊಂದು ಮನೆತನ.."ಐಶಾಮಿ" ಎಂದು ಅದರ ಹೆಸರು. ಆ ಮನೆತನದ ಹಿರಿಯರೆಲ್ಲ  ಯಾರನ್ನೇ ಆಗಲಿ ಅಯ್ಯಾ..ಸ್ವಾಮೀ..ಎಂದು ಕರೆಯುತ್ತಿದ್ದರು. ಹಾಗಾಗಿ ಆ ಮನೆತನಕ್ಕೆ ಐಶಾಮಿ ಎಂಬ ಹೆಸರು. ಆ ವಂಶದ ಕುಡಿ ತಿರು ನಾರಾಯಣ ಅಯ್ಯಂಗಾರ್..."ತಿರು"

ಬಿ.ಕಾಂ ವಿದ್ಯಾಬ್ಯಾಸ. ಅರಸಿ ಬಂದ ಬ್ಯಾಂಕ್ ಉದ್ಯೋಗವನ್ನು ಬಿಟ್ಟು ಸಮಾಜಸೇವೆಯೇ ಜೀವನದ ಉಸಿರು ಎಂದು ಭಾವಿಸಿ ಸದಾ ಸಮಾಜಮುಖಿಯಾಗಿರುವ ವ್ಯ(ಶ)ಕ್ತಿ ತಿರು.

ಆರ್.ಎಸ್.ಎಸ್. ವಿಚಾರಧಾರೆಯಿಂದ ಪ್ರಭಾವಿತರಾಗಿ ರಾಷ್ಟ್ರೋತ್ಥಾನ ಪರಿಷತ್ ಹುಟ್ಟುಹಾಕಿದವರಲ್ಲೊಬ್ಬರು. ಅಲ್ಲಿ ಸಕ್ರಿಯರಾಗಿದ್ದಾಗ "ಭಾರತ-ಭಾರತಿ ಪುಸ್ತಕ ಸಂಪದ" ಎಂಬ ಮಾಲಿಕೆಯಲ್ಲಿ 511 ಪುಸ್ತಕಗಳನ್ನು ಹೊರತರುವಲ್ಲಿ ತಿರು ಅವರ ಪಾತ್ರ ಬಹು ಹಿರಿದು.

ತುರ್ತು ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಆರ್.ಎಸ್.ಎಸ್. ಅನ್ನು ಮುನ್ನಡೆಸಿದವರಲ್ಲಿ ತಿರು ಮೊದಲಿಗರು.

ತಿರು ಬ್ರಹ್ಮಚಾರಿ. ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಸ್ವಯಂಪಾಕಿ. ಹಲವಾರು ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ, ಸ್ವತ: ಸಾಹಿತಿ. ಹೆಜ್ಜೆ- ಯೋಗಕ್ಷೇಮ ಇವರ ಸಂಪಾದಕತ್ವದಲ್ಲಿ ಬರುತ್ತಿರುವ ಪತ್ರಿಕೆಗಳು. ಸಧ್ಯ ಬೆಂಗಳೂರು ಇಸ್ಕಾನ್ ಸಂಸ್ಥೆಯ "ಶ್ರೀ ಕೃಷ್ಣ ಕಲಾ ಕ್ಷೇತ್ರ"ದ ನಿರ್ದೇಶಕರು. ಅಲ್ಲಿನ ಭಕ್ತಿ ವೇದಾಂತ ದರ್ಶನದ ಸಂಪಾದಕರು.

ಶ್ರೀ ರಾಮಾನುಜ ಸೇವಾಟ್ರಸ್ಟ್ ಮೂಲಕ ನಿರಂತರ ಸಮಾಜಸೇವೆ ಇವರದು. ಅಕ್ಷಯಲೋಕ, ವೈಕುಂಠಯಾತ್ರ, ಸುಶ್ರುತ ರಕ್ತನಿಧಿ, ಪುಸ್ತಕಪ್ರೀತಿ...ಹೀಗೆ ಹತ್ತು ಹಲವು ಪ್ರಕಲ್ಪಗಳು. ಸದಾ ರಾಮಾನುಜರದೇ ಧ್ಯಾನ. ಅವರು ಕರ್ನಾಟಕಕ್ಕೆ ಬಂದು 1 ಸಾವಿರ ವರ್ಷಗಳಾಗುವ ಸಮಯದಲ್ಲಿ ರಾಮಾನುಜ ಮಿಲೇನಿಯಂ ಎಂಬ ಬೃಹತ್ ಕಾರ್ಯಕ್ರಮ ಆಯೋಜಿಸಿದ್ದಾರೆ.

ಎಲ್ಲವೂ ಶ್ರೀಕೃಷ್ಣನಿಂದ- ಎಲ್ಲವೂ ಅವನಿಗಾಗಿ. ಎನ್ನುವ ತಿರು  ಸನ್ಯಾಸಿ ಜೀವನ ನಡೆಸುತ್ತಿದ್ದರೂ ಇತರ ಸನ್ಯಾಸಿಗಳಂತೆ ಮಠ-ಶಿಷ್ಯ ಕೋಟೆಯಿಂದ ದೂರ. ಯಾವಾಗಲೂ ಸಮಾಜಮುಖಿಯಾಗಿ ಚಿಂತಿಸುವ ಅವರ ಅಭಿಮಾನಿಗಳು"ನಮ್ಮ ತಿರು" ಎಂಬ ಅಭಿನಂದನಾ ಗ್ರಂಥ ನೀಡಿದ್ದಾರೆ. ತಿರು ಅವರಿಗೆ 60 ತುಂಬಿದಾಗ" ನನ್ನ 60 ನೆನಪುಗಳು" ಎಂಬ ಪುಸ್ತಕ ಬರೆದಿದ್ದಾರೆ.

ಈ ಮಹಾನ್ ವ್ಯಕ್ತಿಯನ್ನು ನೋಡಬಯಸಿದವರು ಬೆಂಗಳೂರು ಇಸ್ಕಾನ್ ಸಂಸ್ಥೆಗೆ ಹೋದರೆ ಅಲ್ಲಿ ಇವರನ್ನು ಕಾಣಬಹುದು.

Comments

Submitted by makara Wed, 09/25/2013 - 08:25

ವಿಶಿಷ್ಠ ವ್ಯಕ್ತಿಯೊಬ್ಬರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು ಬಾಲು ಅವರೆ.
Submitted by rangaramanuja Wed, 09/25/2013 - 19:33

ಈ ಲೇಖನ‌ ತುಂಬಾ ಚೆನ್ನಾಗಿ ಮೂಡಿಬಂದಿದೆ. ಒಬ್ಬ‌ ಅಪರೂಪದ‌ ಮಹಾಮಹಿಮರ‌ ಚಿತ್ರಣವನ್ನು ಲೇಖಕರು ತುಂಬಾ ಮನೋಜ್ನವಾಗಿ ನಿರೂಪಿಸಿದ್ದಾರೆ. ಅದಕ್ಕಾಗಿ ಅವರಿಗೆ ತುಂಬಾ ಧನ್ಯವಾದಗಳು.