ಕೂರ್ಮಾವತಾರ : 'ವಿಮರ್ಶಾನುಭವ ಲೇಖನ'

ಕೂರ್ಮಾವತಾರ : 'ವಿಮರ್ಶಾನುಭವ ಲೇಖನ'

ಹಿನ್ನಲೆ / ಪೀಠಿಕೆ :

ನಮ್ಮ ಬಾಲ್ಯದ ದಿನಗಳಲ್ಲಿ ನಮಗೆ ಸಿನೆಮಾ ನೋಡುವುದೆಂದರೆ ದೊಡ್ಡ ಎಗ್ಸೈಟ್ಮೆಂಟು. ಸಡಗರ, ಸಂಭ್ರಮ, ಉತ್ಸಾಹಗಳಿಂದ ಸಿದ್ದರಾಗಿ ಹೊರಡುತ್ತಿದ್ದೆವು. ಸ್ವಲ್ಪ ದೊಡ್ಡ ಹುಡುಗರಾದ ಮೇಲೆ ತುಸು ಭಿನ್ನ ರೀತಿಯ ಕಥೆ - ಸಮಾನಾಸಕ್ತ ಗೆಳೆಯರ ಜೊತೆ ಸೈಕಲ್ಲಿನಲ್ಲಿಯೊ, ನಡೆದೊ ಟಾಕೀಸು ಸುತ್ತುವ ಚಾಳಿ. ಬಂದ ಎಲ್ಲಾ ಹೊಸ ಚಿತ್ರಗಳಿಗೂ ತಪ್ಪದ ಧಾಳಿ. ಶುಕ್ರವಾರ ಬಂತೆಂದರೆ ಕನಿಷ್ಟ ಒಂದಾದರೂ ಸಿನೆಮಾ ಗಟ್ಟಿಯೆಂದೆ ಅರ್ಥ. ಆದೆ ಈ ದಿನಗಳಲ್ಲಿ ನೋಡಿದರೆ ಮಕ್ಕಳಿಗೆಲ್ಲ ಆ ಅನುಭವದ ತುಣುಕುಗಳೆ ಸಿಗದೇನೊ ಅನಿಸಿಬಿಡುತ್ತದೆ; ಅವರನ್ನು ಹಿಡಿದಿಡಲು ಟೀವಿಯ ಕಾರ್ಟೂನ್ / ಕಾಮಿಕ್ಸ್ ಜಗದ ಚಿತ್ರಗಳು , ವೀಡಿಯೊ ಗೇಮ್ ತರಹದ ಬಗೆಬಗೆ ಗ್ಯಾಡ್ಜೆಟ್ಟುಗಳು ಸೇರಿಕೊಂಡು ಚಿತ್ರ ಮಂದಿರದಲ್ಲಿ ಕೂತು ಚಿತ್ರ ನೋಡುವ ಅನುಭವವನ್ನೆ ನಗಣ್ಯವಾಗಿಸಿಬಿಡುತ್ತವೆ. ಇನ್ನು ನಮ್ಮ ಹಾಗೆ ಹೊರದೇಶಗಳಲ್ಲಿ ನೆಲೆಸಿದ್ದರಂತೂ ಮಾತಾಡುವ ಹಾಗೆ ಇಲ್ಲ - ಕನ್ನಡ ಚಿತ್ರಗಳನ್ನು ಥಿಯೇಟರಿನಲ್ಲಿ ನೋಡುವುದೆ ಕನಸು. ಅಂಥಾದ್ದೆ ವೀಡಿಯೊ ಗೇಮ್ಸ್, ಟೀವಿ ಹಿನ್ನಲೆಯ ಮಗನೊಂದಿಗೆ ಒಂದು 'ಆಪ್ ಬೀಟ್' ಸಿನೆಮಾ ಹಣೆಪಟ್ಟಿಯ "ಕೂರ್ಮಾವತಾರ"ದಂತಹ ಕನ್ನಡ ಚಿತ್ರವೊಂದನ್ನು ವಿದೇಶದ ಥಿಯೇಟರೊಂದರಲ್ಲಿ ನೋಡಬೇಕಾದ ಸಂಧರ್ಭ ಬಂದರೆ? ಆ ಅನುಭವದ ಒಂದು ತುಣುಕು ಈ ಕೆಳಗಿನ ಬರಹ. ಇಲ್ಲಿ ಚಿತ್ರದ 'ಅಸಾಂಪ್ರದಾಯಿಕ' ವಿಮರ್ಶೆ ಮತ್ತು 'ಅನುಭವ'ದ ಹಂಚಿಕೊಳ್ಳುವಿಕೆ ಮಿಳಿತವಾಗಿ ಸೇರಿಕೊಂಡಿರುವ ಕಾರಣ 'ವಿಮರ್ಶಾನುಭವ ಲೇಖನ' ಎಂದು ಕರೆದಿದ್ದೇನೆ - ವಿಭಿನ್ನ ಆಯಾಮವೊಂದರಲ್ಲಿ ಓದಿ ಆಸ್ವಾದಿಸಿದ ಅನುಭವವಾದೀತೆಂಬ ಆಶಯ :-) (ಪ್ರಾಯಶಃ ಈ ಹಿಂದೆ ಸಂಪದದಲ್ಲಿ ಈ ಚಿತ್ರದ ವಿಮರ್ಶೆಯೂ ಪ್ರಕಟವಾಗಿರಬಹುದೆಂದು ಕಾಣುತ್ತದೆ)

ಕೂರ್ಮಾವತಾರ : ಸಾಮಾನ್ಯ ಪ್ರೇಕ್ಷಕನೊಬ್ಬನ ಅನುಭವ, ವಿಮರ್ಶೆಯ ಒಳನೋಟ ('ವಿಮರ್ಶಾನುಭವ ಲೇಖನ')
____________________________________________________________________

ಕನ್ನಡ ಚಿತ್ರಗಳನ್ನು ನೋಡುವ ಅವಕಾಶಗಳೆ ಅಪರೂಪವಾಗಿರುವ ಸಿಂಗಪುರದಲ್ಲಿ ಇತ್ತೀಚೆಗೆ ಬೆಂಗಾಳಿ ಫಿಲಂ ಫೆಸ್ಟಿವಲ್ 2013 ದೆಸೆಯಿಂದ ಅಂತದ್ದೊಂದು ಅವಕಾಶ ದೊರಕುವಂತಾಯ್ತು. ಭಾರತೀಯ ಚಿತ್ರರಂಗದ ನೂರನೆ ವರ್ಷದ ಸ್ಮರಣೆಯ ಕುರುಹಾಗಿ ಆಯ್ಕೆಯಾಗಿದ್ದ ಮೂರ್ನಾಲ್ಕು ಇತರೆ ಭಾಷಾ ಚಿತ್ರಗಳಲ್ಲಿ ಈ ಒಂದು ಕನ್ನಡ ಚಿತ್ರವೂ ಸೇರಿದ್ದು, ಇದರಿಂದಾಗಿ ಬಹಳ ಕಾಲದ ನಂತರ ಥಿಯೇಟರಿನಲ್ಲಿ ಕುಳಿತು ಈ ಅಪೂರ್ವ ಕನ್ನಡ ಚಿತ್ರವನ್ನು ನೋಡುವ ಸದಾವಕಾಶ ದೊರಕಿತು - ಅದೂ ನನ್ನ ಹನ್ನೆರಡು ವರ್ಷ ವಯಸಿನ ಮಗನ ಜತೆಗೆ. ಇಡಿ ಪ್ರಸಂಗಕ್ಕೆ ಹಿನ್ನಲೆಯಾಗಿ ನಾಂದಿ ಹಾಕಿದ್ದು ಸಿಂಗಪುರ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಒಂದು ಪುಟ್ಟ ಸಮಾರಂಭದಿಂದ. ಮೂರು ದಿನದ ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದ ಕನ್ನಡ ಚಿತ್ರ 'ಕೂರ್ಮಾವತಾರ'ದ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರೂ ಚಿತ್ರೋತ್ಸವದ ನಿಮಿತ್ತ ಸಿಂಗಪುರಕ್ಕೆ ಆಗಮಿಸಿರುವರೆಂದು ತಿಳಿಯುತ್ತಲೆ, ಮಿಂಚಿನ ವೇಗದಲ್ಲಿ ಕಾರ್ಯಪ್ರವೃತ್ತರಾದ ಕನ್ನಡ ಸಂಘದ ಪದಾಧಿಕಾರಿಗಳು ಆಯೋಜಕರ ಮುಖಾಂತರ ಶ್ರೀ ಕಾಸರವಳ್ಳಿಯವರನ್ನು ಸಂಪರ್ಕಿಸಿ ಸಿಂಗಪುರದ ಕನ್ನಡಿಗರ ಜತೆ ಒಂದು ಸರಳ ಆತ್ಮೀಯ ಸಮಾರಂಭದಲ್ಲಿ ಪಾಲ್ಗೊಳ್ಳುವ ವ್ಯವಸ್ಥೆ ಮಾಡಿದರು. ಸಂಜೆಯ ಸರಳ ಸಂವಾದ - ಸಂಭಾಷಣೆಯ ಆತ್ಮೀಯ ಕಾರ್ಯಕ್ರಮವಾಗಿ ಮಾರ್ಪಾಡಾದ ಈ ಸುಂದರ ಸಮಾರಂಭದ ಕೆಲವೆ ಆಹ್ವಾನಿತರಿಗೆ ಶ್ರೀಯುತ ಗಿರೀಶ್ ಕಾಸರವಳ್ಳಿಯವರೊಂದಿಗೆ ಮಾತನಾಡುವ, ಸಂವಾದದಲ್ಲಿ ಪಾಲ್ಗೊಳ್ಳುವ, ಅವರ ವೃತ್ತಿ ಜೀವನದ ಅನುಭವ ಮತ್ತು ಕನ್ನಡ ಚಲನಚಿತ್ರೋದ್ಯಮಕ್ಕೆ ಸಂಬಂಧಪಟ್ಟ ಹಲವಾರು ಪ್ರಶ್ನೆಗಳನ್ನು ಕೇಳುವ ಅವಕಾಶ ದಕ್ಕಿತು. 

ಈ ನಡುವೆಯೆ ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಮ್ಮ ಪ್ರಶಸ್ತಿ ವಿಜೇತ ಮತ್ತು ಚಲನಚಿತ್ರೊತ್ಸವಕ್ಕೆ ಆಯ್ಕೆಯಾಗಿದ್ದ ಚಿತ್ರ 'ಕೂರ್ಮಾವತಾರ' ದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಆ ಮೂಲಕವೆ ಈ ಚಿತ್ರದ ಮಾಹಿತಿಯ ತುಣುಕುಗಳು, ಕುತೂಹಲವನ್ನು ಕೆಣಕಿದ್ದು. ಹಾಗೆಯೆ ಸಾಂಧರ್ಭಿಕವಾಗಿ ಮರುದಿನವೆ ಆ ಚಿತ್ರದ ಪ್ರದರ್ಶನವಿರುವುದಾಗಿ ಮತ್ತು ಇನ್ನು ಸಾಕಷ್ಟು ಟಿಕೇಟುಗಳು ಮಾರಾಟವಾಗಬೇಕಾಗಿರುವ ಪರಿಸ್ಥಿತಿಯ ಸೂಕ್ಷ್ಮ ಚಿತ್ರಣವನ್ನು ಲಘುಹಾಸ್ಯದ ಹೊದಿಕೆಯಲ್ಲಿ ಬಿತ್ತರಿಸಿದಾಗಲೆ ಅನಿಸಿತು - ಏನಾದರೂ ಸರಿ ಈ ಚಿತ್ರವನ್ನು ನಾಳೆ ಹೋಗಿ ನೋಡಲೆಬೇಕೆಂದು. ಹೀಗೆ ಆ ವೇದಿಕೆಯಲ್ಲಿ ಉತ್ಪನ್ನವಾದ ತುಡಿತವೆ, ಈ ಚಿತ್ರವನ್ನು ನೋಡುವ ತವಕವಾಗಿ ಬದಲಾಗಿದ್ದು. ಬಹುಶಃ ಕನ್ನಡಿಗರಲ್ಲಿ ಸ್ವಲ್ಪ ಮೊದಲೆ ಮತ್ತು ಇನ್ನಷ್ಟು ವಿಶಾಲ ಸ್ತರದಲ್ಲಿ ಪ್ರಚುರ ಪಡಿಸಿದ್ದರೆ ನೋಡುವವರ ಸಂಖ್ಯೆ ಹೆಚ್ಚಾಗಬಹುದಿತ್ತೆನೊ. ಒಟ್ಟಾರೆ ಟಿಕೆಟ್ ಆನ್ಲೈನಿನಲ್ಲಾದರೂ ಕೊಳ್ಳಬಹುದು ಅಥವಾ ಥಿಯೇಟರಿನ ಕೌಂಟರಿನಲ್ಲಿಯೂ ಕೊಳ್ಳಬಹುದೆಂದಾಗ, ಮರುದಿನ ಅಲ್ಲಿ ಹೋಗೆ ಖರೀದಿಸಲು ನಿರ್ಧರಿಸಿದೆ. ಹೊರಡುವ ಮುನ್ನ ಮಗನನ್ನು ಬೇಗನೆ ಹೋಂವರ್ಕ್ ಮುಗಿಸಲು ಅವಸರಿಸಿ ನಂತರ ಅವನನ್ನು ಜತೆಗೆಳೆದುಕೊಂಡು ಥಿಯೇಟರಿನತ್ತ ಟ್ಯಾಕ್ಸಿ ಹಿಡಿದೆ. ಹಳೆ ಪಾರ್ಲಿಮೇಂಟಿನ ಹತ್ತಿರದ ಆರ್ಟ್ ಹೌಸಿನಲ್ಲಿ ಪ್ರದರ್ಶನ ಎಂದಿದ್ದ ಕಾರಣ ಹುಡುಕಲೇನು ತೊಡಕಿಲ್ಲದೆ ಅರ್ಧಗಂಟೆ ಮೊದಲೆ ತಲುಪಿ ಟಿಕೆಟ್ ಕೌಂಟರಿನತ್ತ ಓಡಿದೆವು. 

ಆದರಲ್ಲೊಂದು ಅನಿರೀಕ್ಷಿತ ಅಚ್ಚರಿ - ಕೌಂಟರಿನಲ್ಲಿ ಟಿಕೇಟುಗಳೆ ಇಲ್ಲಾ! ಆನ್ಲೈನಿನಲ್ಲಿ ಬುಕ್ ಮಾಡಿದ್ದವರಿಗೆ ಮಾತ್ರ ಹಣ ವಸೂಲು ಮಾಡಿ ಟಿಕೇಟು ಕೊಡಲೊಬ್ಬ ಕುಳಿತಿದ್ದಾನಷ್ಟೆ...ಆನ್ಲೈನಿನಲ್ಲಿ ಖರ್ಚಾಗದೆ ಉಳಿದಿದ್ದ ಟಿಕೇಟುಗಳನ್ನು  ಈಗಾಗಲೆ ಮಾರಿ ಮುಗಿಸಿಬಿಟ್ಟಿರುವ ಕಾರಣ ಅಲ್ಲಿ ನಮಗೆ ಮಾರಲು ಆತನ ಬಳಿ ಏನು ಉಳಿದಿರಲಿಲ್ಲ. ಇದೇನಪ್ಪಾ, ನಿನ್ನೆ ತಾನೆ ಸಾಕಷ್ಟು ಟಿಕೇಟು ಉಳಿದಿವೆಯೆಂದರು, ಈ ದಿನ ಎಲ್ಲಾ 'ಸೋಲ್ದ್ ಔಟ್' ಆಗಿಬಿಟ್ಟಿದೆಯಲ್ಲಾ ಎಂದು ತುಸು ಆಳಕ್ಕಿಳಿದು ವಿಚಾರಿಸಿದಾಗ ಅದರ ಮೂಲ ಕಾರಣವೂ ಅರಿವಾಯ್ತು - ಇದು ಮಾಮೂಲಿ ಥಿಯೇಟರಲ್ಲದ ಆರ್ಟ್ ಹೌಸ್ ಆದ ಕಾರಣ ಅಲ್ಲಿರುವ ಆಸನಗಳ ಸಂಖ್ಯೆ ತುಸು ಕಿರಿದು. ಹೀಗಾಗಿ ಇರುವಷ್ಟು ಟಿಕೇಟುಗಳೆಲ್ಲ ಬೇಗನೆ ಖಾಲಿಯಾಗಿಬಿಟ್ಟಿದ್ದವು. ಈಗ ಮಗ ಬೇರೆ ಜತೆಯಲ್ಲಿದ್ದ; ಉದ್ದಕ್ಕೂ ಅವನಿಗೆ ಏನೇನೊ ಕಥೆ ಹೇಳುತ್ತಾ ಆಸೆ ಹುಟ್ಟಿಸಿ ಕರೆದುಕೊಂಡು ಬಂದಿದ್ದೆ , ಇಲ್ಲಿ ನೋಡಿದರೆ ಎಲ್ಲಾ 'ಉಲ್ಟಾ' ಹೊಡೆಯುತ್ತಿದೆಯಲ್ಲಾ ಎಂದುಕೊಳ್ಳುತ್ತಿರುವಾಗಲೆ ನಮ್ಮ ತರದವರೆ ಇನ್ನೊಂದಿಬ್ಬರು ಮಂದಿ ನಮ್ಮ ಗುಂಪಿಗೆ ಸೇರಿಕೊಂಡರು. ಅದೆ ಹೊತ್ತಿಗೆ ಅಲ್ಲಿಗೆ ಬಂದ ಚಲನ ಚಿತ್ರೋತ್ಸವ ನಿರ್ವಹಣಾ ತಂಡದವರು ನಮ್ಮ ಕಥೆಯನ್ನು ಅರಿತು, 'ಬೇರೇನಾದರೂ ತಾತ್ಕಾಲಿಕ ಆಸನದ ವ್ಯವಸ್ಥೆ ಮಾಡಲು ಸಾಧ್ಯವಿರುವುದೆ ನೋಡೋಣ' ಎಂದು ಹೇಳಿ ಒಳಗೆ ಹೋದರು. 

ಆ ಹೊತ್ತಿಗೆ ಚಿತ್ರದ ನಿರ್ದೇಶಕರಾದ ಶ್ರೀ ಗಿರೀಶ್ ಕಾಸರವಳ್ಳಿಯವರೂ ಬಂದು ತಲುಪಿದರು. ಬಹುಶಃ ನಮ್ಮ ಟಿಕೆಟ್ಟಿಲ್ಲದ ಸಂಧರ್ಭ ಅವರಿಗೆ ಅಚ್ಚರಿ ತರಿಸಿರಬೇಕು; ಹಿಂದಿನ ದಿನ ಸಮಾರಂಭದಲ್ಲಿ ಎಲ್ಲಾ ಖರ್ಚಾಗಬಹುದೆಂಬ ಭರವಸೆ ಅವರಲ್ಲಿದ್ದಂತೆ ಕಂಡಿರಲಿಲ್ಲ. ಬಾಗಿಲಿನ ಒಳ ಹೋಗುವ ಹೊತ್ತಲ್ಲೆ ಮತ್ತೆ ಎದುರಾದರು. ಅವರ ಎದುರಿಗೆ ಮಗನನ್ನು ಪರಿಚಯಿಸುತ್ತ, 'ಇವರೆ ನೋಡಪ್ಪಾ, ಈ ಸಿನಿಮಾ ಡೈರೆಕ್ಟರು' ಅಂದೆ. ಅವನೊ ತಲೆ ಹರಟೆ, ಕೈ ಕುಲುಕುತ್ತಾ ತಲೆಯಿಂದ ನಡುತನಕ ಬಗ್ಗಿಸಿ ' ಓಹ್ ! ಗ್ರೇಟ್ ಸಾರ್...ಗುಡ್ ಮಾರ್ನಿಂಗ್ ಸಾರ್....' ಅಂದ ನಾಟಕೀಯವಾಗಿ. "ಏಯ್..ಇದು ಗುಡ್ ಈವ್ನಿಂಗ್ , ಮಾರ್ನಿಂಗ್ ಅಲ್ಲಾ.." ಎಂದು ಬೈಯುತ್ತಲೆ ಒಳಗೆಳೆದುಕೊಂಡು ಹೋದೆ, ನಮ್ಮ ಸೀಟನ್ನು ಹುಡುಕುವ ಅವಸರದತ್ತ. ಕೊನೆಗೆ ನಿಂತಾದರೂ ಸರಿ ಚಿತ್ರ ನೋಡಿಬಿಡುವ ಮಾತಾಡುತ್ತಿದ್ದಾಗ ತಾತ್ಕಾಲಿಕ ಆಸನದ ವ್ಯವಸ್ಥೆಯಾದ ಸುದ್ದಿ ಬಂತು. ಅಲ್ಲಿಗೆಲ್ಲ ನಿರಾಳವಾಗಿ ನಾನೂ ಮಗನೊಡನೆ ತಾತ್ಕಾಲಿಕ ಆಸನವೊಂದನ್ನು ಹಿಡಿದು ಆಸೀನನಾದೆ. ಅಲ್ಲಿಂದ ಚಿತ್ರ ಆರಂಭವಾದದ್ದೆ ಒಂದು ಅದ್ಭುತ ದೃಶ್ಯ ಜಗವೊಂದರೊಳಗೆ ಹೊಕ್ಕ ಅನುಭವ. ಸಾಧಾರಣವಾಗಿ ಕಲಾತ್ಮಕ ಚಿತ್ರಗಳೆಂದರೆ ಸಾಮಾನ್ಯ ನೋಡುಗರ ಕಣ್ಮುಂದೆ ನಿಲ್ಲುವ ದೃಶ್ಯ - ನೀರಸವೆನಿಸುವ, ಬೋರಾದ ಸಂಭಾಷಣೆಯಿಂದ ಕೂಡಿದ, ಹಾಡು ಕುಣಿತಗಳಂತ ಮನರಂಜನೆಯಿಲ್ಲದ, ಬರಿ ಸಂದೇಶ / ಉಪದೇಶಗಳನ್ನು ಸಾರುವ, ಮುಖ್ಯವಾಹಿನಿಯ ಪ್ರೇಕ್ಷಕ ನೋಡಲಾಗದ ಚಿತ್ರವೆಂಬ ಭಾವನೆ, ಯಾ ಅಘೋಷಿತ ಪರಿಕಲ್ಪನೆ; ಪ್ರೇಕ್ಷಕರನ್ನು ಸೆಳೆದು ಗಲ್ಲಾಪೆಟ್ಟಿಗೆ ತುಂಬಿಸುವುದಕ್ಕಿಂತ ಪ್ರಶಸ್ತಿ, ಪದಕಗಳತ್ತ ಗುರಿಯಿಟ್ಟು ತಯಾರಾದ ಸರಕುಗಳೆಂಬ ಪೂರ್ವಾಗ್ರಹ ಪೀಡಿತ ಮನೋಭಾವವೂ ಸಹಜವೆ. ಕಥೆಯಲ್ಲಿರುವ ಗಾಂಧಿ ವಿಚಾರ ಧೋರಣೆಗಳ  ಹಿನ್ನಲೆಯಲ್ಲಿ ಹನ್ನೆರಡು ತುಂಬದ ಮಗನನ್ನು ಕರೆದುಕೊಂಡು, ಅದೂ ವಿಶೇಷ ಪ್ರದರ್ಶನಕ್ಕೆ ಬಂದು ಕೂತಾಗ ಸ್ವಲ್ಪ ಆತಂಕ ಹುಟ್ಟಿದ್ದು ಸಹಜವೆ. 

ಆತಂಕವಿದ್ದದ್ದು ಈಗಿನ ಜಮಾನದ ವಿಡಿಯೋ ಗೇಮ್ಸ್, ಗ್ಯಾಡ್ಜೆಟ್ಟುಗಳ, ಕಾಮಿಕ್ಸ್, ಕಾರ್ಟೂನು, ಪವರ ರೆಂಜರ ಪೀಳಿಗೆಯ ಮಗನ ಬಗ್ಗೆ : ನಿಜವಾಗಿಯೂ ಕೂತು ನೋಡುತ್ತಾನ, ಇಲ್ಲವೆ ಏನಾದರೂ ದಾಂಧಲೆಯೆಬ್ಬಿಸುತ್ತಾನ - ಎಂದು. ಆದರೆ ಚಿತ್ರ ಆರಂಭವಾದ ಸ್ವಲ್ಪ ಹೊತ್ತಿನಲ್ಲೆ ಆ ಭೀತಿ ಪೂರ್ತಿ ಮಾಯ - ಅವನು ತಲ್ಲೀನನಾಗಿ ನೋಡಿದ್ದು ಮಾತ್ರವಲ್ಲದೆ, ಅದರಲ್ಲಿ ಬರುವ ವ್ಯಂಗ್ಯ, ತಿಳಿ ಹಾಸ್ಯದ ತುಣುಕುಗಳನ್ನೆಲ್ಲ ವಯಸ್ಕರಷ್ಟೆ ಸಹಜವಾಗಿ ಅರ್ಥಮಾಡಿಕೊಂಡು ಆನಂದಿಸಿದ್ದು. ನಂತರ ಅವನು ಕೇಳಿದ ಕೆಲವು ಪ್ರಶ್ನೆಗಳಿಂದ ಇಡಿ ಕಥೆಯನ್ನೂ  ಚೆನ್ನಾಗಿ ಅರ್ಥಮಾಡಿಕೊಂಡಿದ್ದು ಅರಿವಾಯ್ತು. ಅದೆಲ್ಲವನ್ನು ಮೀರಿಸಿದ ಹೈಲೈಟ್ ಎರಡು ದಿನಗಳ ನಂತರ ನಡೆದ ಘಟನೆ - ಮನೆಯಲ್ಲಿ ಇಂಗ್ಲೀಷ್ ಪ್ರಬಂಧವೊಂದನ್ನು 'ಹೊಂವರ್ಕ್' ಗಾಗಿ ಓದುತ್ತಿದ್ದಾಗ ತಟ್ಟನೆ ಪ್ರಶ್ನೆ ಕೇಳಿದ:

"ಅಪ್ಪಾ ಈ ಮಂಡೆಲಾ ಅಂದ್ರೆ ಯಾರು?'

ಯಾಕಪ್ಪ ಈ ಪ್ರಶ್ನೆ ಇದ್ದಕ್ಕಿದ್ದಂತೆ ಎಂದುಕೊಳ್ಳುತ್ತಲೆ "ಅವರು ದಕ್ಷಿಣ ಆಫ್ರಿಕಾದ ರಾಜಕೀಯ ನಾಯಕರಾಗಿದ್ದವರು..ಅವರ ಹೆಸರೇಕೆ ಬಂತು..ನಿನ್ನ ಹೋಮ್ವರ್ಕ್ ಮಧ್ಯೆ?"

"ಇಲ್ಲಪ್ಪ ಈ ಪ್ರಬಂಧದಲ್ಲಿ ಗಾಂಧೀಜಿಯವರ ಹೆಸರಿನ ಜತೆ ಈ ಹೆಸರು ಇತ್ತು...ನನಗೆ ಗಾಂಧಿ ಆಗಲೆ ಗೊತ್ತು ಆದರೆ ಮಂಡೆಲಾ ಬಗೆ ಗೊತ್ತಿರಲಿಲ್ಲ..ಅದಕ್ಕೆ ಕೇಳಿದೆ"

ನನಗೊ ಮಿಂಚು ಹೊಡೆದ ಅನುಭವ ಮತ್ತು ಹೆಮ್ಮೆ - ಚಿತ್ರ ನೋಡಿದ ನಂತರ ಕನಿಷ್ಠ ಅವರನ್ನು ಗುರುತಿಸುವ ಮಟ್ಟವಾದರೂ ಇದೆಯಲ್ಲಾ ಎಂದು - ಅದೂ ಹೊರಗಿನ ದೇಶದ ವಾತಾವರಣದಲ್ಲಿ. ಸದ್ಯ, ಅಷ್ಟರಮಟ್ಟಿಗಾದರೂ ಈ ಚಿತ್ರದ ಪ್ರಭಾವ ಬಿತ್ತಲ್ಲಾ ಸಾಕು ಎಂದುಕೊಂಡು ಖುಷಿಪಟ್ಟೆ !

ಅದಿರಲಿ, ಈ ಮಾತು ಮತ್ತು ಪ್ರಸಂಗವನ್ನು ಏಕೆ ತರಬೇಕಾಯಿತೆಂದರೆ - ಕಾರ್ಟೂನೂ, ಕಾಮಿಕ್ಸು, ವೀಡಿಯೋಗೇಮ್ಸ್ನಲ್ಲಿ ಮುಳುಗಿದ, ಕನ್ನಡ ಚಿತ್ರದ ಗಂಧವೆ ಅಷ್ಟಾಗಿ ಇಲ್ಲದ ನನ್ನ ಮಗನಂಥ ಎಳೆಯ ಪೀಳಿಗೆಯವರೂ ಅಷ್ಟೊಂದು 'ಎಂಜಾಯ್' ಮಾಡಿಕೊಂಡು ನಗುತ್ತಾ ನೋಡುವಂತೆ ಮಾಡಿರುವ ಈ ಚಿತ್ರವನ್ನ 'ಆಪ್ ಬೀಟ್' , 'ಕಲಾತ್ಮಕ' ಇತ್ಯಾದಿ ಹಣೆಪಟ್ಟಿಯಡಿ ಸೇರಿಸಿ ಯಾಕೆ ನೋಡುವ ಭಾಗ್ಯದಿಂದ ವಂಚಿತರಾಗುತ್ತಾರೊ ನಮ್ಮ ಪ್ರೇಕ್ಷಕರು - ನನಗಂತೂ ಅರ್ಥವಾಗದ ವಿಷಯ. ಚಿತ್ರವನ್ನು ಹೆಚ್ಚು ಕಡಿಮೆ ಇಂಗ್ಲೀಷ್ ಸಬ್ ಟೈಟಲ್ಸ್ ಓದಿ , ಅರೆಬರೆ ಅರ್ಥವಾಗಿದ್ದ ಸಂಭಾಷಣೆಯನ್ನು ಪೂರ್ತಿ ಗ್ರಹಿಸಬೇಕಾದ ಪಾಡು ಮಗನಿಗೆ - ಇಲ್ಲಿ ಕನ್ನಡ ಕಲಿಯುವ ಸ್ವಾಭಾವಿಕ ವಾತಾವರಣ ಇಲ್ಲದ ಕಾರಣ; ಹಾಡು, ಫೈಟು, ಗನ್ನು, 'ಡಿಶೂಂ' ಗಳಿಲ್ಲದೆಯೂ ಎಷ್ಟು ಆರಾಮವಾಗಿ ಆನಂದಿಸಿದನೆಂದರೆ, ಮೊದಲ ಬಾರಿಗೆ ಜೀವನದಲ್ಲಿ ಒಂದು ಉತ್ತಮ ಸಿನೆಮ ಅವನಿಗೆ ತೋರಿಸಿದ ತೃಪ್ತಿ, ನನಗಾಯ್ತು. ಇದೇ ಜಾಡಿನಲ್ಲಿ ಈ ರೀತಿಯ ಚಿತ್ರಗಳನ್ನು ನೋಡುವ ಅಭ್ಯಾಸವಾಗಿಬಿಟ್ಟರೆ, ಒಂದು ಉತ್ತಮ ಸದಭಿರುಚಿಯೂ ಬೆಳೆದ ಹಾಗಾಗುತ್ತದೆ ಅನ್ನುವ ಆಶಯ. ಬಹುಶಃ ಸಾಮಾನ್ಯ ಪ್ರೇಕ್ಷಕನೊಬ್ಬನ ದೃಷ್ಟಿಯಿಂದ ಈ 'ಆಪ್ ಬೀಟ್' ಹಣೆಪಟ್ಟಿಯ ಚಿತ್ರ ನೋಡಲು ಹೇಗಿತ್ತೆಂಬುದಕ್ಕೆ 'ಇಷ್ಟೆ' ವಿಮರ್ಶೆ ಸಾಕಾಗುತ್ತಾದರೂ, ಚಿತ್ರ ನೋಡಿದಾಗಿನ ಆಳವಾದ ಪ್ರಭಾವ ಮತ್ತಷ್ಟು ಬರೆಯಲು ಪ್ರೇರೇಪಿಸುತ್ತಿದೆಯಾಗಿ, ಚಿತ್ರದ ಕುರಿತು ಕೆಲವು ಮಾತುಗಳನ್ನು ಸೇರಿಸಿಬಿಡುತ್ತೇನೆ.

ಚಿತ್ರದ ಹೆಸರು ಕೂರ್ಮಾವತಾರ - ಏನಿದರ ಅರ್ಥ? ಕೂರ್ಮಾವತಾರ ನಮ್ಮ ಪ್ರಜ್ಞೆಯಲ್ಲಂತರ್ಗತವಾದ ದಶಾವತಾರದಲ್ಲೊಂದೆಂಬ ಅರಿವು ಸಾಮಾನ್ಯವಾಗಿ ಸರ್ವವಿದಿತ. ಆದರೆ ಈ ಚಿತ್ರದಲ್ಲಿ ಏನಿದರ ಸಾಂಕೇತಿಕ ಅರ್ಥ - ಎನ್ನುವುದು ಚಿತ್ರದಷ್ಟೆ ಪ್ರಮುಖ ವಿಷಯವಾಗಿ ಕಾಣುತ್ತದೆ. ಪುರಾಣದಲ್ಲಿ ಸಮುದ್ರ ಮಥನದಲ್ಲಿ ಮುಳುಗುತ್ತಿದ್ದ ಮಂದಾರ ಪರ್ವತವನ್ನು ರಕ್ಷಿಸಲೋಸುಗ, ವಿಷ್ಣು ಕೂರ್ಮಾವತಾರವನೆತ್ತಿ, ಇಡಿ ಪರ್ವತದಡಿಯ ಹೊರೆಯನ್ನು ಬೆನ್ನ ಮೇಲ್ಹೊತ್ತು, ಕಡಗೋಲಿನಂತೆ ಕಡೆವ ಕಾರ್ಯಕ್ಕೆ ಆಧಾರವಾಗಿ ನಿಂತ ಕಥೆಯ ಸಾರವೆ ಇದರ ಮೂಲದ್ರವ್ಯ. ಇದನ್ನೆ ಸಾಂಕೇತಿಕವಾಗಿ ಬಳಸಿರುವ ಕಾಸರವಳ್ಳಿಯವರು, ಇಂದಿನ ದೈನಂದಿನ ಜೀವನದಲ್ಲಿ ಮುಳುಗುತ್ತಿರುವ ನೈತಿಕತೆ, ಪ್ರಾಮಾಣಿಕತೆ, ಮೌಲ್ಯಗಳೆಂಬ ಉದಾತ್ತ ತತ್ವಗಳನ್ನು ನಿರಂತರ ಮೇಲೆತ್ತಿ ಹಿಡಿಯುವ ಕೂರ್ಮವೊಂದರ ಅಗತ್ಯತೆಯನ್ನು ಸಾರಲು ಬಳಸುತ್ತಾರೆ. ಆ ತತ್ವಗಳನ್ನು ಸಂಪೂರ್ಣವಾಗಿ ತನ್ನ ಜೀವನದಲ್ಲಿ ಅಳವಡಿಸಿಕೊಂಡು ಬದುಕಲು ಯತ್ನಿಸಿದ ಗಾಂಧೀಜಿಯ ವಿಚಾರಧಾರೆಯ ಹಿನ್ನಲೆಯಲ್ಲಿ ಕಥೆ ಸಾಗುತ್ತದೆ. ಗಾಂಧಿಯವರ ಅಹಿಂಸೆ, ಅಸಹಕಾರ ಚಳುವಳಿ, ಸ್ವದೇಶೀ, ಉಪವಾಸ ಸತ್ಯಗ್ರಹ ಇತ್ಯಾದಿಗಳಿಗೆ ಸಿಕ್ಕಂತಹ ಪ್ರಚಾರ ಸಿಗದೆ ಇದ್ದುದರಿಂದಲೊ ಅಥವಾ ಅಂತರ್ಗತ ತತ್ವಗಳನ್ನು ಸುಲಭವಾಗಿ ಗಮನಿಸಿ ಅರಗಿಸಿಕೊಳ್ಳಲು ಬೇಕಾದ ಸೂಕ್ಷ್ಮ ಪ್ರಜ್ಞೆಯ ಕೊರತೆಯಿಂದಲೊ - ಈ ಮೇಲಿನ ಆಯಾಮಗಳು ಪರಿಗಣಿತವಾದಷ್ಟು ಪ್ರಮುಖವಾಗಿ, ಗಾಂಧಿ ವ್ಯಕ್ತಿತ್ವದ ವೈಯಕ್ತಿಕ / ನೈತಿಕ ಸನ್ನಡತೆ, ತತ್ವನಿಷ್ಠೆಗಳ ಆಯಾಮ ಹೆಚ್ಚು ಚರ್ಚಿತವಾದಂತೆ ಅಥವಾ ಎಲ್ಲರಿಗೂ ತಿಳಿದಂತೆ ಕಾಣುವುದಿಲ್ಲ. ಈ ನೈತಿಕ ತತ್ವಗಳಿಗೆ ವ್ಯಕ್ತಿನಿಷ್ಠವಾಗಿ ಬದುಕಲು ಯತ್ನಿಸಿದ ಗಾಂಧಿಯ ಚಿತ್ರಣ, ಅದರಿಂದ ವೈಯಕ್ತಿಕ ಜೀವನದಲ್ಲಿ ಅನುಭವಿಸಿದ ನಷ್ಟ, ಪಡಬೇಕಾಗಿ ಬಂದ ತಾಕಲಾಟ, ಹೊಂದಾಣಿಕೆ, ಸ್ವಂತ ಮಕ್ಕಳಿಂದಲೆ ದೂರಾಗಿ ದೂಷಣೆಗೊಳಗಾಗಬೇಕಾಗಿ ಬಂದ ದುರಂತ - ಇವ್ಯಾವುದು ಜನ ಮಾನಸದಲ್ಲಿ ದಟ್ಟವಾಗಿರುವಂತೆ ಕಾಣುವುದಿಲ್ಲ. ತತ್ವ ಸಿದ್ದಾಂತಾನುಸಾರ ಬದುಕಲೆಂದೆ ಮಾಡಿದ ಪ್ರತಿ ಯತ್ನವೂ ತನ್ನದೆ ಬದುಕಿನ ದುರಂತಕ್ಕೆ ಕಾರಣವಾಗುವುದು ಗಾಂಧಿ ಜೀವನದ ಒಂದು ವಿಪರ್ಯಾಸವೂ ಹೌದು.

ಈ ಅಂಶವನ್ನು ಸಮರ್ಥವಾಗಿ ದುಡಿಸಿಕೊಂಡಿರುವುದರಲ್ಲೆ ಶ್ರೀ ಕಾಸರವಳ್ಳಿಯವರ ಒಳಗಿರುವ ನಿರ್ದೇಶಕನ ಅದ್ಭುತ ಕೈ ಚಳಕ ಎದ್ದು ಕಾಣುವುದು. ಈ ಸಿದ್ದಾಂತ-ತತ್ವದ ಎಳೆಯನ್ನೆ ಹಿಡಿದು ಕಥೆಯ ಸೂಕ್ಷ್ಮ ಹಂದರವಾಗಿಸುತ್ತ, ಅದರ ಸುತ್ತಲೆ ಇಡೀ ಚಿತ್ರದ ಕಥೆಯನ್ನು ಒಂದು ಮಧ್ಯಮ ವರ್ಗದ ಕುಟುಂಬವೊಂದರ ದಿನ ಜೀವನದ ರೂಪು-ರೇಷೆಯಡಿಯಲ್ಲಿ ಹೆಣೆಯುತ್ತ, ಗಾಂಧಿ ಅನುಭವಿಸಿರಬಹುದಾದ ತುಮುಲಾ-ತಾಕಲಾಟಗಳನ್ನು ನಾಯಕನ ಪಾತ್ರಧಾರಿಯ ಅನುಭವದ ಮೂಲಕ ಬಿತ್ತರಿಸುತ್ತ ಸಾಗಿದ್ದಂತೆ, ನಮಗರಿವಿಲ್ಲದೆಯೆ ಪ್ರತಿ ಪ್ರೇಕ್ಷಕನ ಅನುಭವವೂ ಆಗುವಂತೆ ಮಾಡಿಬಿಡುತ್ತಾರೆ. ಅಲ್ಲಿನ ಪಾತ್ರದ ದ್ವಂದ್ವ, ತರ್ಕ, ಮನೋಭಾವನೆಯೆಲ್ಲ ನೋಡುಗನವೆ ಆಗಿಬಿಡುತ್ತಾ ಹೋಗುತ್ತವೆ. ಪುರಾಣದ ಕೂರ್ಮನಾದರೊ ಇನಿತೂ ಎಡವದೆ, ತನ್ನ ಕಾರ್ಯದಲ್ಲಿ ಜಯಶೀಲನಾದ;  ಆದರೀ ಆಧುನಿಕ ಅಭಿನವ ಕೂರ್ಮಾವತಾರದ ಖದರು ಹೆಚ್ಚುಕಾಲ ನಿಲ್ಲದೆ, ತನ್ನ ಭಾರಕ್ಕೆ ತಾನೆ ಕುಸಿಯತೊಡಗುತ್ತದೆ -ಭಾವನೆ, ಸಂಬಂಧಗಳೆಂಬ ಸಂಕೋಲೆಯಡಿ ಸಿಕ್ಕುಬಿದ್ದ ನಿರ್ಬಂಧಗಳಿಂದಾಗಿ. ನಿಜ ಜೀವನದಲ್ಲಿ ಗಾಂಧೀಜಿ ವೈಯಕ್ತಿಕ ಸಂಕಷ್ಟಗಳ ಒತ್ತಡಕ್ಕೆ ಪದೆಪದೆ ಸಿಲುಕುತ್ತಿದ್ದರೂ, ಬಗ್ಗದೆ, ವಿಚಲಿತರಾಗದೆ ತಾವು ನಂಬಿದ ಹಾದಿಯಲ್ಲೆ ಮುನ್ನಡೆಯುತ್ತಾರೆ - ಆ ಪ್ರಕ್ರಿಯೆಯಲ್ಲಿ ಅಗಾಧವಾದ ನಷ್ಟ, ನೋವನ್ನನುಭವಿಸಬೇಕಾಗಿ ಬಂದರೂ ಸಹ. ಆದನ್ನೆ ಮಾದರಿಯಾಗಿಟ್ಟುಕೊಳ್ಳುತ್ತ ನಡೆಯಲೆತ್ನಿಸುವ ನಾಯಕ ಪಾತ್ರಧಾರಿಗೆ, ಸಾಮಾನ್ಯನೊಬ್ಬ ತನ್ನ ಜೀವನದಲ್ಲಿ ಗಾಂಧಿಯಾಗುವುದು ಅದೆಷ್ಟು ಕಷ್ಟಕರವೆಂಬ ಸತ್ಯ ನಿಧಾನವಾಗಿ ಮನದಟ್ಟಾಗುತ್ತದೆ. 

ಕತೆಯ ಹಂದರ ಸರಳವೆ ಆದರೂ ಅದು ಬಿಚ್ಚಿಕೊಳ್ಳುತ್ತಾ ಹೋಗುವ ಪರಿ ಅದ್ಭುತ. ವಯಸಿನ ಸಂಧ್ಯಾಕಾಲದಲ್ಲಿ ಸರಕಾರಿ ನೌಕರಿಯಲ್ಲಿದ್ದ, ಭಾವನೆಗಳೆ ಸತ್ತಂತಿದ್ದ ವ್ಯಕ್ತಿಯೊಬ್ಬನಿಗೆ ಟೀವಿ ಸೀರಿಯಲ್ಲೊಂದರಲ್ಲಿ ಗಾಂಧಿ ಪಾತ್ರ ಮಾಡುವ ಆಯಾಚಿತ ಆಹ್ವಾನ ಬರುತ್ತದೆ - ನೋಡಲು ಗಾಂಧಿಯಂತೆ ಕಾಣುತ್ತಾರೆಂಬ ಕಾರಣದಿಂದಾಗಿ. ಆ ನಟನೆ, ಗ್ಲಾಮರುಗಳ ಪರಿವೆಯೆ ಇಲ್ಲದ ಆತ ಸಾರಾಸಗಟಾಗಿ ಬೇಡಿಕೆಯನ್ನು ನಿರಾಕರಿಸಿದರೂ, ಕೊನೆಗೆ ಮನೆಯಲ್ಲಿ ಮೊಮ್ಮಗ, ಮಗ-ಸೊಸೆಯರ ಒತ್ತಾಯಕ್ಕೆ ಮಣಿದು, ಮೊಮ್ಮಗನ ಭವಿತಕ್ಕೆ ಸಹಾಯಕವಾಗಲೆಂದು ಒಪ್ಪಿ ನಟಿಸಲಾರಂಭಿಸುತ್ತಾನೆ. ಆದರೆ ಈತನ ನಟನೆ ಎಷ್ಟು ಕೆಟ್ಟದಿರುತ್ತದೆಂದರೆ, ಈ ಪಾತ್ರ ಬಂದಾಗ ಟಿಆರಪಿ ಕುಸಿದುಬೀಳಲು ಆರಂಭವಾದಾಗ ಎಲ್ಲಾ ಚಿಂತಿತರಾಗುತ್ತಾರೆ. ಭಾವನೆಗಳೆ ಇಲ್ಲದ ತಂದೆಯಲ್ಲಿ ತುಸು ಗಾಂಧೀಜಿಯ ಆವಾಹನೆಯಾಗಲೆಂದು ವ್ಯಾಪಾರಿ ಮನೋಭಾವದ ಮಗ, ಒಂದಷ್ಟು ಗಾಂಧಿ ಕುರಿತ ಪುಸ್ತಕಗಳನ್ನು ತಂದುಕೊಟ್ಟು ಓದಲು ಹೇಳುತ್ತಾನೆ. ನಟನೆ ಪಕ್ವವಾಗಲೆಂದು ಅದನ್ನೆಲ್ಲಾ ಓದುತ್ತಾ ಹೋಗುವ ಈತ ತನ್ನರಿವಿಲ್ಲದಂತೆ ನಿಧಾನವಾಗಿ ಅವುಗಳಿಂದ ಪ್ರಭಾವಿತನಾಗಿ, ತಾನೂ ನಿಜ ಜೀವನದಲ್ಲೂ ಗಾಂಧಿ ತತ್ವಗಳನ್ನು ಮಾಡಿಸಲು ಅಥವ ಹಾಗೆ ಅನುಕರಿಸಲು ಪ್ರೇರೇಪಿಸುತ್ತದೆ. ತದನಂತರ ನಟನೆಯೂ ಉತ್ತಮವಾಗಿ ಈತನ ಪ್ರಸಿದ್ದಿಯೂ ಹೆಚ್ಚುತ್ತಿದ್ದಂತೆ ಎಲ್ಲೆಡೆ ಈ ಮೊದಲೆಲ್ಲೂ ಸಿಗದಿದ್ದ ಮನ್ನಣೆ, ಗೌರವ ದೊರಕಲಾರಂಭಿಸುತ್ತದೆ. ಒಂದು ರೀತಿಯಲ್ಲಿ ನಿಜ ಜೀವನದಲ್ಲು ಗಾಂಧಿಯಂತೆ ಪಾತ್ರ ವಹಿಸುವ ನಡುವಳಿಕೆ ಅವನರಿವಿಲ್ಲದೆ ಗಟ್ಟಿಯಾಗುತ್ತಾ ಹೋಗುತ್ತದೆ. 

ಅಲ್ಲಿಯವರೆಗೆ ಯಾವುದೆ ಜಂಜಾಟಗಳಿಲ್ಲದೆ ತನ್ನ ಪಾಡಿಗೆ ತಾನಂತಿದ್ದವನಿಗೆ ಅಲ್ಲಿಂದಲೆ ತಾಕಲಾಟ, ಆತಂಕ, ಕಂಟಕಗಳು ಆರಂಭವಾಗುವುದು. ಅವನ ಪಾತ್ರದ ದೆಸೆಯಿಂದ ದೊರಕುವ ಹೆಸರೂ / ಪ್ರಸಿದ್ದಿಯನ್ನು 'ಕ್ಯಾಶ್' ಮಾಡಿಕೊಳ್ಳುವ ಹುನ್ನಾರ, ಸುತ್ತಮುತ್ತಲಿನ ಜನರಿಂದ ಆರಂಭವಾಗುತ್ತದೆ. ಜಾಹೀರಾತಿಗೆ ಪ್ರಸಿದ್ದಿಯನ್ನು ಮಾರುವ ಮಗನಾಗಲಿ, ಲೈಸೆನ್ಸ್ ಗಿಟ್ಟಿಸಲು ಬಳಸಿಕೊಳ್ಳುವ ಹಳೆ ಬಾಸಿನ ಮಗನ ಸ್ನೇಹಿತರಾಗಲಿ - ಎಲ್ಲಾ ಆತನ 'ರಾತ್ರೋರಾತ್ರಿ' ಗಳಿಸಿದ ಹೆಸರನ್ನು 'ವಾಣಿಜ್ಯೀಕರಣಿಸಿ' ಒಂದು ಮಾರಾಟವಾಗುವ ಸರಕಿನಂತೆ ಬಳಸತೊಡಗುತ್ತಾರೆ (ಕಮಾಡಿಟಿ). ಅದು ಸ್ಪಷ್ಟವಾಗಿ ಅರಿವಾಗುವಷ್ಟರಲ್ಲಿ ತಾನಾಗಲೆ ಆ ಹಾದಿಗೆ ಎಳೆಯಲ್ಪಟ್ಟಿದ್ದು ತಿಳಿದು, ಅಂದಿನಿಂದ ಅದಕ್ಕೆಲ್ಲ ತಡೆಹಾಕುವ ಉದ್ದೇಶದಿಂದ 'ಗಾಂಧಿ ವಿಧಾನ'ವನ್ನೆ ಅನುಸರಿಸತೊಡಗುತ್ತಾನೆ. ನಿಧಾನವಾಗಿ ತನ್ನ 'ಇಮೇಜ್ ಬ್ರಾಂಡಿನ' ದುರ್ಬಳಕೆಯನ್ನು ಪ್ರತಿಭಟಿಸುವ ಹಾದಿ ಹಿಡಿಯಲು ಶಕ್ತಿ ಮೀರಿ ಪ್ರಯತ್ನಿಸತೊಡಗುತ್ತಾನೆ. ಆದರೆ ಒಂದೆಡೆ ಈ ತಾತ್ವಿಕ , ಸಿದ್ದಾಂತ ಬದ್ದತೆಯ ಯತ್ನ ಸಾಗಿದ್ದಂತೆ ಆ ಆಶಯವೆ ಶತ್ರುವಾಗತೊಡಗುತ್ತದೆ. ಅಲ್ಲಿಯತನಕ ಮನೆಯವರ ಕಣ್ಣಲ್ಲಿ ಹೀರೊ ಎನಿಸಿಕೊಂಡಿದ್ದವ, ಈಗ ಏಕಾಏಕಿ ಹೃದಯ ಶೂನ್ಯ, ಮಮತಾ ರಹಿತ, ಭಾವನಾರಹಿತ, ಕಲ್ಲು ಹೃದಯದ ವ್ಯಕ್ತಿಯೆಂಬ ಪಟ್ಟ ಹೊತ್ತು ತಿರುಗಬೇಕಾಗುತ್ತದೆ. ಮಗ, ಸೊಸೆ, ಮೊಮ್ಮಗ ಬೇಸತ್ತು ಮನೆ ಬಿಟ್ಟು ಹೋಗುತ್ತಾರೆ; ಮಗ ಜೈಲೂ ಸೇರಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗುತ್ತದೆ. ಆ ಪರಿಸ್ಥಿತಿಯಲ್ಲಿ ಪದೆ ಪದೆ ಮನೆಯವರೆಲ್ಲರ ನಿಂದನೆ, ಶಾಪಗಳಿಗೆ ಗುರಿಯಾಗುವ ಸಂಕಟ ಬೇರೆ. ಅಂತೂ, ತಾನೂ ಗಾಢವಾಗಿ ನಂಬಲಾರಂಭಿಸಿದ ತತ್ವಗಳಿಗೆಲ್ಲ ತಿಲಾಂಜಲಿಯಿತ್ತು ಲಂಚ ಕೊಟ್ಟು ಮಗನನ್ನು ಬಿಡಿಸುವ ಸ್ಥಿತಿ ಬರುತ್ತದೆ. ಹಾಗೆಯೆ ಮುಸ್ಲಿಂ ಹುಡುಗನೊಬ್ವ 'ಘೋಡ್ಸೆ' ಪಾತ್ರ ಮಾಡಬಾರದೆಂಬ ಕೆಲವು ಭಂಡರ ಹುನ್ನಾರವನ್ನೂ ತಡೆಯಲಾಗದ ಅಸಹಾಯಕತೆ ಕೊರೆಯತೊಡಗುತ್ತದೆ. ನಿಜ ಜೀವನದಲ್ಲಿ ಗಾಂಧಿಯಾಗಿ ಬದುಕುವ ದ್ವಂದ್ವ , ಗಾಂಧಿಯೆ ಅನುಭವಿಸಿರಬಹುದಾದ ಯಾತನೆ, ನೋವನ್ನೆಲ್ಲಾ ಅವನಾಳಕ್ಕೆ ಅರಿವು ಮಾಡಿಕೊಡುತ್ತಿದ್ದಂತೆ ತನ್ನಲ್ಲೆ ಒಳಗಿಂದೊಳಗೆ ಕುಸಿಯತೊಡಗುತ್ತಾನೆ. ಆ ಕುಸಿತದಲೆ, ಅಂತಹ ದ್ವಂದ್ವಗಳಿಗೆ ಜಗ್ಗದೆ ಎದೆಗೊಟ್ಟು ಸೆಣೆಸಿದ ನಿಜವಾದ ಗಾಂಧಿಯ ಮೇರು ವ್ಯಕ್ತಿತ್ವದ, ಔನತ್ಯದ ಇಣುಕು ನೋಟದ ದರ್ಶನವಾಗುತ್ತದೆ, ನೋಡುಗರ ಮನದಾಳದಲ್ಲಿ. 

ಗಾಂಧಿ ಹತ್ಯೆಯ ಶಾಟಿನೊಂದಿಗೆ ಆರಂಭವಾಗುವ ಇಡೀ ಚಿತ್ರವೆ, ಒಂದು ಫ್ಲಾಶ್ ಬ್ಯಾಕಿನಂತೆ ಸಾಗುತ್ತದೆ. ಎಲ್ಲೂ ಒಂದು ಚೂರು ಬೋರಾಗದೆ ಸಾಗುವ ಚಿತ್ರ, ಆಗಾಗ್ಗೆ ತನ್ನ ತೆಳು-ಹಾಸ್ಯಭರಿತ ಸಂಭಾಷಣೆ, ವ್ಯಂಗ್ಯ ಮತ್ತು ದೃಶ್ಯಗಳಿಂದ ನಗಿಸುತ್ತ, ಚುರುಕು ಮುಟ್ಟಿಸುತ್ತಾ ಸಾಗುತ್ತದೆ. ಚಿತ್ರದಲ್ಲಿ ಬಳಸಿರುವ ಸಣ್ಣ ಕೂರ್ಮವೊಂದು ಸಹ ಇಷ್ಟು ಬೃಹತ್ತಾದ ನೈತಿಕರಾಹಿತ್ಯತೆಯ ಹೊರೆಯನ್ನು ಹೊರಲಾಗದೆ ಸೋತುಹೋದ ಪುಟ್ಟ ಜೀವಿಯ ವಿಷಾದವನ್ನು, ಸಾಂಕೇತಿಕವಾಗಿ ನಿರೂಪಿಸುವಲ್ಲಿ ಯಶಸ್ವಿಯಾಗುತ್ತದೆ. ಚಿತ್ರ ಮುಗಿದ ಮೇಲೂ ನೂರೆಂಟು ಪ್ರಶ್ನೆಗಳನ್ನು ಮನದಲ್ಲಿ ಹುಟ್ಟಿಹಾಕಿದ್ದು ಮಾತ್ರವಲ್ಲದೆ, ಮೇಲೆತ್ತುವ ಕೂರ್ಮವಿಲ್ಲದೆ ಮುಂದೆ ಹೇಗಪ್ಪಾ ಎನ್ನುವ ಆತಂಕವನ್ನು ಕಟ್ಟಿಕೊಡುತ್ತದೆ. 

ಇದೊಂದು ಕನ್ನಡಿಗರೆಲ್ಲರೂ ಹೆಮ್ಮೆ ಪಡಬಹುದಾದ ಕನ್ನಡಿಗನೊಬ್ಬನ ಶ್ರೇಷ್ಠ ಸಾಧನೆ. ಕನ್ನಡಿಗರೆಲ್ಲರೂ ಯಾವ ತರದಲ್ಲಾದರೂ ಈ ಚಿತ್ರವನ್ನು ನೋಡಬೇಕದ ಅಗತ್ಯವಿದೆ  (ಡೀವೀಡಿ ಸಿಗುವಂತಿದ್ದರೆ ಖರೀದಿಸಿಯಾದರೂ ನೋಡಿಯು ಸರಿ). ನಿಮ್ಮ ಮಕ್ಕಳಿಗೆ ನೈತಿಕತೆ, ತತ್ವಬದ್ದತೆ, ನೀತಿ ಭೋಧೆಯ ಪಾಠದ ರುಚಿ ಕಾಣಿಸಬೇಕಂತಲಾದರೂ ಇದನ್ನು ತೋರಿಸುವುದು ಒಳ್ಳೆಯದು. ಈ ಚಿತ್ರಕ್ಕೆ (ಮತ್ತು ಈ ಚಿತ್ರದ ಮೊದಲೂ ಸಹ) ಶ್ರೀ ಗಿರೀಶ್ ಕಾಸರವಳ್ಳಿಯವರಿಗೆ ಸಿಕ್ಕ ಪ್ರಶಸ್ತಿಗಳ ಬಗ್ಗೆ ನಾನಿಲ್ಲಿ ಬರೆಯುವ ಅಗತ್ಯವೆ ಇಲ್ಲ. ಹಾಗೆಯೆ ಈ ಚಿತ್ರದ ಪಾತ್ರಧಾರಿಗಳು, ನಿರ್ದೇಶನ ಇತ್ಯಾದಿಗಳ ಕುರಿತು ಈಗಾಗಲೆ ಸುಮಾರು ವಿಮರ್ಶೆಗಳು ಬರೆಯಲ್ಪಟ್ಟಿವೆ. ಹೀಗಾಗಿ ಅದನ್ನು ಮರುಕಳಿಸುವ ಯತ್ನ ನಾನು ಮಾಡಲ್ಹೋಗುವುದಿಲ್ಲ. ಆದರೆ ಒಂದೆ ಒಂದು ಮಾತು ನಿರ್ಮಾಪಕರಾದ ಬಸಂತಕುಮಾರ ಪಾಟೀಲ ಮತ್ತು ಅಮೃತಾ ಪಾಟೀಲರನ್ನು ಕುರಿತು : ವಾಣಿಜ್ಯ ದೃಷ್ಟಿಯನ್ನು ಗಮನದಲ್ಲಿಡದೆ ಕಾಸರವಳ್ಳಿಯವರಂತ ಪ್ರತಿಭಾವಂತರ ಕೈಲಿ ಕನ್ನಡಕ್ಕೆ ಹೆಮ್ಮೆ ತರುವ ಚಿತ್ರಗಳ ನಿರ್ಮಾಣಕ್ಕೆ ತೊಡಗಿಕೊಂಡಿರುವ ಅವರು ಖಂಡಿತಾ ಅಭಿನಂಧನಾರ್ಹರು. 

ನಾಗೇಶ ಮೈಸೂರು,
ಸಿಂಗಪುರ

Comments

Submitted by makara Wed, 09/25/2013 - 07:43

ನಾಗೇಶರೆ, ನಿಮ್ಮ ವಿಮರ್ಶಾನುಭವ ಬಹಳ ಚೆನ್ನಾಗಿ ಮೂಡಿ ಬಂದಿದೆ. ಹೊರನಾಡಿನ ಕನ್ನಡಿಗರ ತಾಕಲಾಟದೊಂದಿಗೆ ಗಾಂಧಿತನವನ್ನು ಅಳವಡಿಸಿಕೊಳ್ಳಲೆತ್ನಿಸುವ ಮಧ್ಯಮ ವರ್ಗದವರ ತಾಕಲಾಟವನ್ನು ಕುರಿತ ಚಿತ್ರದ ಸಾರಾಂಶವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದೀರ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
Submitted by partha1059 Wed, 09/25/2013 - 08:56

In reply to by makara

ನಾಗೇಶರೆ ನೀವು ಅನುಭವವನ್ನು ಹಿಡಿದಿಟ್ಟಿರುವ‌ ಪರಿ ಗ್ರೇಟ್! ನಾನು ಸಿನಿಮಾ ನೊಡಿಲ್ಲ ಆದರೆ ಈ ಕತೆಯನ್ನು ಮಾತ್ರ ಮೊದಲೆ ಓದಿರುವೆ ಎಲ್ಲಿ ಅಂತ‌ ನೆನಪಿಗೆ ಬರುತ್ತಿಲ್ಲ ! ಅಥವ‌ ಸಿನಿಮಾ ವಿಮರ್ಷೆಯನ್ನು ಎಲ್ಲಿಯಾದರು ಓದಿದ್ದೆನೊ ಗೊತ್ತಿಲ್ಲ ಆದರೆ ನಿಮ್ಮ ಲೇಖನ‌ ಮಾತ್ರ ಚೆನ್ನಾಗಿದೆ! ಪಾರ್ಥಸಾರಥಿ
Submitted by nageshamysore Wed, 09/25/2013 - 14:59

In reply to by partha1059

ಧನ್ಯವಾದಗಳು ಪಾರ್ಥಾ ಸಾರ್, ಈ ಚಿತ್ರದ ಮೂಲ ಕಥೆಯ ಆಧಾರ , ಕುಂ. ವೀರಭದ್ರಪ್ಪನವರ ಒಂದು ಸಣ್ಣಕಥೆ. ಬಹುಶಃ ನೀವು ಪ್ರಕಟವಾಗಿದ್ದ ಆ ಕಥೆಯನ್ನೆ ಓದಿದ್ದೀರೆಂದು ಕಾಣುತ್ತದೆ..ಜತೆಗೆ ವಿಮರ್ಶೆಯನ್ನು ನೋಡಿರಬಹುದು.
Submitted by nageshamysore Wed, 09/25/2013 - 14:56

In reply to by makara

ಶ್ರೀಧರರೆ ತಮ್ಮ ಮಾತು ನಿಜ - ಹೊರನಾಡಿನ ಕೆಲವು ಸಮಸ್ಯೆಗಳು ಕ್ಷುಲ್ಲಕವಾಗಿ ಕಂಡರೂ, ನಮ್ಮದೆ ವಾತಾವರಣ ಸಹಜವಾಗಿ ಕಲಿಸುವ ಎಷ್ಟೊ ಸರಳ ಕಲಿಕೆಗಳು ಒಂದು ದೊಡ್ಡ ಪಂಥವಾಗಿಬಿಡುತ್ತದೆ. ಆ ಹಿನ್ನಲೆಯನ್ನು ಪರಿಗಣಿಸಿ ಬರೆದ ಬರಹವಿದು - ಬಹುಶಃ ಸಾಕಷ್ಟು ಹೊರನಾಡಿಗರ ಅನುಭವ ಹೀಗೆ ಒಂದೆ ತರದ್ದಾಗಿರುತ್ತದೇನೊ? ಈ ಚಿತ್ರ ನೋಡುವ ತನಕ ನನಗೆ ಗಾಂಧಿಯ ಕುರಿತು ಸಾಮಾನ್ಯ ಗೌರವಿದ್ದಾರೂ, ತೀರಾ ವಿಶೇಷವಾದ, ಆಳವಾದ ಒಲುಮೆ ಅನ್ನುವಂಥದ್ದೇನು ಇರಲಿಲ್ಲ. ಆದರೆ ಅವರ ವೈಯಕ್ತಿಕ ನೆಲೆಗಟ್ಟಿನಿಂದ ನೋಡುವ ವಿಭಿನ್ನ ದೃಷ್ಟಿಕೋನವನ್ನು ತೆರೆದಿಟ್ಟ ರೀತಿ ಈ ಚಿತ್ರದ ಹೈಲೈಟು ಅನಿಸಿತು. ಮಾತ್ರವಲ್ಲಾ, ಒಬ್ಬನ ಸಾಧನೆ ಏನೆ ಇರಲಿ - ತಾತ್ವಿಕ ನೆಲೆಗಟ್ಟಿನ ಸಾಧನೆಗಾಗಿ ಏನೆಲ್ಲಾ ವೈಯಕ್ತಿಕ ಹೊಂದಾಣಿಕೆಗಿಳಿಯಬೇಕಾಗುತ್ತದೆ ಅನಿಸಿ ಖೇದವೂ ಆಯ್ತು. ಆಗ ತಕ್ಷಣ ಮನಸಿಗೆ ಬಂದ ಹೆಸರು ಶ್ರೀ ಆಬ್ದುಲ್ ಕಲಾಂ - ಬಹುಶ ಈ ಹೊಂದಾಣಿಕೆಯ ದ್ವಂದ್ವದ ಅರಿವಿದ್ದುದರಿಂದಲೊ ಏನೊ ಅವರು ಜೀವನ ಪರ್ಯಂತ ಬ್ರಹ್ಮಚಾರಿಯಾಗೆ ಉಳಿದು ವೃತ್ತಿ, ಪ್ರವೃತ್ತಿಯತ್ತ ಗಮನ ಹರಿಸಿದರೆಂದು ಕಾಣುತ್ತದೆ.
Submitted by H A Patil Wed, 09/25/2013 - 19:25

ನಾಗೇಶ ಮೈಸೂರು ರವರಿಗೆ ವದ್ನೆಗಳು ಗಿರೀಶ ಕಾಸರವಳ್ಳಿಯವರ ನಿರ್ದೇಶನದ ' ಕೂರ್ಮಾವತಾರ ' ಚಿತ್ವದ ಕುರಿತು ತಾವು ಬರೆದ ಲೇಖನ ಓದಿದೆ. ಕನ್ನಡದ ಬಗೆಗಿನ ತಮ್ಮ ಕಳಕಳಿ ಮತ್ತು ಬದ್ಧತೆ ಮೆಚ್ಚುವಂತಹವು. ನಮ್ಮ ದೌರ್ಭಗ್ಯವೆಂದರೆ ಇಂತಹ ಚಿತ್ರಗಳು ಇಲ್ಲಿನ ಪ್ರಾದೇಶಿಕ ಚಿತ್ರಮಂಧಿರಗಳಲ್ಲಿ ಬಿಡಿ ಜಿಲ್ಲಾ ಕೆಂದ್ರಗಳಲ್ಲೂ ಬಿಡುಗಡೆಯ ಭಾಗ್ಯ ಕಾಣುವುದಿಲ್ಲ. ದೂರದರ್ಶನಗಳಲ್ಲೂ ಬರುವುದಿಲ್ಲ, ಬರಿ ವಿಮರ್ರಶೆಗಳಷ್ಟೆ ನಮ್ಮಂತಹ ಆಸಕ್ತರನ್ನು ತಣಿಸಬೇಕು. ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ನಿರ್ದೇಶಕರಾದ ಅವರು ಬಂಗಾಲಿ ನಿರ್ದೇಶಕರ ಸಮಕ್ಕೆ ಬಂದಿದ್ದಾರೆ, ಇನ್ನೊಂದು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಬಂದರೆ ಅವರು ಅಗ್ರಗಣ್ಯರಾಗುತ್ತಾರೆ, ಬಂಗಾಲಿ ಬಾಬುಗಳನ್ನು ಮೀರಿ ಯಾರೂ ಬೆಳೆಯಬಾರದು ಎಂಬ ಧೋರಣೆಯೆ ಇತ್ತೀಚೆಗೆ ಅವರ ೆರಡು ಮೂರು ಚಿತ್ರಗಳಿಗೆ ಅರ್ಹತೆಯಿದ್ದರೂ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಬಂದಿಲ್ಲವೆಂದು ಓದಿದ ನೆನಪು, ನಿಮ್ಮ ಲೇ ಖನ ಇದನ್ನೆಲ್ಲ ನೆನಪಿಸಿತು, ಧನ್ಯವಾದಗಳು.
Submitted by nageshamysore Fri, 09/27/2013 - 04:18

In reply to by H A Patil

ಧನ್ಯವಾದಗಳು ಪಾಟೀಲರೆ, ಇಲ್ಲಿ ಸಿಂಗಾಪುರದಲ್ಲಿ ಈಚಿನ ದಿನಗಳಲ್ಲಿ ಬಸ್ಸು, ಟ್ರೈನು, ಸಾರ್ವಜನಿಕ ಪ್ರದೆಶಗಳಲ್ಲಿ ತಮ್ಮ ಮೊಬೈಲ್ / ಟ್ಯಾಬ್ಲೆಟ್ಟುಗಳ ಮೂಲಕ ಬೇಕಾದ ವಿಡಿಯೊ, ಟಿವಿ ಸರಣಿ, ಚಲನ ಚಿತ್ರ ನೋಡುತ್ತಿರುತ್ತಾರೆ. ನಮ್ಮಲ್ಲಿ ಸಾಂಪ್ರದಾಯಿಕ ವಿಧಾನದಲ್ಲೂ ಚಿತ್ರಗಳು ನೋಡಬಯುಸುವ ಜನರನ್ನು ತಲುಪುವುದು ಕಷ್ಟ.  ಮುಂದಾದರೂ ಇದು ಬದಲಾಗುತ್ತದೆಂದು ಆಶಿಸೋಣ.