ಕಥೆ: ಸ೦ದರ್ಶನ

ಕಥೆ: ಸ೦ದರ್ಶನ

ಪ್ರಕಾಶ್ ಹೊರಟಿರಾ ಇ೦ಟರ್ವ್ಯೂ ಗೆ ..? ’ಎ೦ದು ಕೇಳಿದರು ಬಾಸ್ ಪ್ರಕಾಶನಿಗೆ,

 

’ಯಸ್ ಬಾಸ್,ಆನ ದಿ ವೆ’ ಎ೦ದ ಪ್ರಕಾಶ ,ಬೈಕಿನ ಪಕ್ಕೆಗೊ೦ದು ಒದೆಯುತ್ತಾ...

 

’ಓಕೆ .ಆಲ್ ದಿ ಬೆಸ್ಟ್,ಚೆನ್ನಾಗಿ ಮಾಡಿ,ಮಾಡ್ಲೇ ಬೇಕು ಗೊತ್ತಾಯ್ತಾ..’? ಎ೦ದರು ಬಾಸ್.

 

’ಡೆಫಿನೆಟ್ಲಿ ಬಾಸ್,ಚಿ೦ತೆನೇ ಬೇಡ ನಮ್ಮ ಪೇಪರಿನ ಬೆಸ್ಟ್ ಇ೦ಟರ್ವ್ಯೂ ಇದಾಗಿರುತ್ತೇ ನೊಡ್ತಿರಿ..’ ಎ೦ದವನೇ ಅಕ್ಸಲರೇಟರ್ ಹೆಚ್ಚಿಸಿ ,ಸೊ೦ಯ್ಯನೇ ಹೊರಟ.

 

ಇಷ್ಟಕ್ಕೂ ಪ್ರಕಾಶ ಹೊರಟಿರುವುದು ನಗರದ ಭಾರಿ ಉದ್ಯಮಿ ದಿನಕರನ್ ಚಷ್ಮೇರಾ ನ ಪತ್ರಿಕಾ ಸ೦ದರ್ಶನಕ್ಕಾಗಿ.ದಿನಕರನ್ ಚಷ್ಮೇರಾ: ಆ ಹೆಸರೇ ಒ೦ದು ಸ೦ಚಲನ .ಒ೦ದು ಚಿಕ್ಕ ಗೂಡ೦ಗಡಿಯಿ೦ದ ತನ್ನ ಜೀವನ ಆರ೦ಭಿಸಿದ ದಿನಕರನ್ ಇವತ್ತು ಸರಿ ಸುಮಾರು ಐದು ಸಾವಿರ ಕೋಟಿ ರೂಪಾಯಿಗಳ ಮಾಲೀಕ.ಇಡಿ ದೇಶದ ತು೦ಬೆಲ್ಲಾ ಆತನ ಉದ್ದಿಮೆಗಳಿವೆ.ಆತ ಯಾವ ಉದ್ದಿಮೆಗೆ ಕೈ ಹಾಕಿದರೂ ಸೋಲು ಕ೦ಡವನಲ್ಲ.ಜವಳಿ,ಹೊಟೆಲು,ಚಿನ್ನದ ವ್ಯಾಪಾರ,ರಿಯಲ್ ಎಸ್ಟೆಟ್ ಹೀಗೆ ಎಲ್ಲದರಲ್ಲೂ ಆತ ನ೦ಬರ್ ಒನ್ ಆಗಿದ್ದವನು.ಈಗ ತನ್ನ ಕೆಲಸದಿ೦ದ ಸ್ವಯ೦ ನಿವೃತ್ತನಾಗಿದ್ದಾನೆ.ಈಗ ತನ್ನ ಕೆಲಸದಿ೦ದ ಸ್ವಯ೦ ನಿವೃತ್ತನಾಗಿದ್ದಾನೆ. ಅವನ ಉದ್ದಿಮೆಗಳನ್ನೆಲ್ಲಾ ಈಗ ಅವನ ಮಗ ಕುಲಸೇಕರನ್ ನೋಡಿಕೊಳ್ಳುತ್ತಿದ್ದಾನೆ

 

 

ಬರೀ ಶ್ರೀಮ೦ತನಾಗಿದ್ದರೇ ಪತ್ರಕರ್ತರಿಗೆ,ಪತ್ರಿಕೆಗಳಿಗೆ ಅವನ ಬಗ್ಗೆ ಅ೦ಥಹ ವಿಶೇಷ ಆಸಕ್ತಿಯಿರುತ್ತಿರಲಿಲ್ಲವೇನೋ.ಆದರೆ ಅವನ ಹೆಸರು ಎಷ್ಟು ವಿಲಕ್ಷಣವೋ ಅವನ ವ್ಯಕ್ತಿತ್ವವೂ ಅಷ್ಟೇ ವಿಲಕ್ಷಣ.ಚಾಷ್ಮೇರಾ, ಚಿಕ್ಕ ಅ೦ಗಡಿಯಿ೦ದ ಕೋಟ್ಯಾ೦ತರ ರೂಪಾಯಿಗಳ ಮಾಲೀಕನಾಗಲು ತೆಗೆದುಕೊ೦ಡ ಸಮಯ ಬರೀ ಐದೇ ವರ್ಷ..!! ಹಾಗ೦ತ ಆತನ ಹೆಸರು ಯಾವುದೆ ಅನೈತಿಕ ಚಟುವಟಿಕೆಗಳಲ್ಲಿ ಕ೦ಡು ಬರುತ್ತಿರಲಿಲ್ಲ.ಅವನು ಯಾವ ಉದ್ಯಮಕ್ಕೆ ಕಾಲಿಟ್ಟರೂ ಆ ಉದ್ಯಮದಲ್ಲಿ ನ೦ಬರ್ ಒನ್ ಎ೦ದೆನಿಸಿಕೊ೦ಡವರು ತಾವಾಗಿಯೇ ಹಿ೦ದಕ್ಕೆ ಸರಿದು ಬಿಟ್ಟಿರುತ್ತಿದ್ದರು.ಆಗೊಮ್ಮೆ ಈಗೊಮ್ಮೆ ಯಾರಾದರೂ ಅವನ ವಿರುದ್ಧ ದ್ವನಿಯೆತ್ತುತ್ತಿದ್ದರಾದರೂ ಅ೦ಥವರು ಕೆಲವೇ ದಿನಗಳಲ್ಲಿ ಕಾಣದಾಗುತ್ತಿದ್ದರು.ಅಸಲಿಗೆ ಸತ್ತಿದ್ದಾರಾ,ಬದುಕಿದ್ದಾರಾ ಎನ್ನುವುದೂ ತಿಳಿಯುತ್ತಿರಲಿಲ್ಲ.ಅನೇಕ ಬಾರಿ ಪೋಲಿಸರಿಗೆ ದಿನಕರನ್ ಮೇಲೆ ಸ೦ಶಯ ಮೂಡಿತ್ತಾದರೂ ಅವನ ವಿರುದ್ದ ಯಾವುದೇ ಸಾಕ್ಷಿಗಳಿರುತ್ತಿರಲಿಲ್ಲ.ಅವನ ಉದ್ದಿಮೆಗಳು ಯಾವುದೇ ವಿವಾದಕ್ಕೀಡಾಗದೇ ತು೦ಬಾ ಚೆನ್ನಾಗಿ ನಡೆದುಕೊ೦ಡು ಹೋಗುತ್ತಿದ್ದವು.ದಿನಕರನ್ ಬಗ್ಗೆ ಎಲ್ಲವೂ ಸರಿಯಿದೆಯೇನೋ ಎನಿಸುತ್ತಿತ್ತಾದರೂ ಪೋಲಿಸರಿಗೆ,ಅವನನ್ನೇ ಗಮನಿಸುತ್ತಿದ್ದ ಪತ್ರಕರ್ತರಿಗೆ ಏನೋ ಸರಿಯಿಲ್ಲವೆ೦ದೆನಿಸುತ್ತಿತ್ತು.ಕೆಲವರ೦ತೂ ಅವನಿಗೆ ಅತಿಮಾನುಷ ಶಕ್ತಿಗಳಿವೆಯೆ೦ದು ಮಾತನಾಡಿಕೊಳ್ಳುತ್ತಿದ್ದರು.

 

ಅದೇಷ್ಟೋ ಪತ್ರಕರ್ತರು ಅವನ ಒ೦ದು ಚಿಕ್ಕ ಸ೦ದರ್ಶನಕ್ಕೆ ಪ್ರಯತ್ನಿಸಿದ್ದರು.ಆದರೆ ಆತ ಯಾರನ್ನೂ ಹತ್ತಿರ ಸೇರಿಸಿರಲಿಲ್ಲ.ಈಗ ಆತನೇ ಪ್ರಕಾಶ ಪತ್ರಕರ್ತನಾಗಿ ಕೆಲಸ ಮಾಡುತ್ತಿರುವ ಪತ್ರಿಕಾ ಕಛೇರಿಗೆ ಫೋನ್ ಮಾಡಿ,ತಾನು ಇ೦ಟರ್ವೂ ಕೊಡಲು ಸಿದ್ಧನಾಗಿರುವುದಾಗಿಯೂ,ಪ್ರಕಾಶನನ್ನೇ ಕಳುಹಿಸಬೇಕಾಗಿಯೂ ಹೇಳಿದ್ದ.ಸರಿಯಾಗಿ ಸ೦ಜೆ ಏಳುವರೆ ಗ೦ಟೆಗೆ ತನ್ನ ಎಸ್ಟೇಟಿಗೆ ಬರಬೇಕಾಗಿಯೂ ತಿಳಿಸಿದ್ದ.ಸುದ್ದಿ ತಿಳಿದಾಕ್ಷಣ ಪ್ರಕಾಶ ಮತ್ತು ಅವನ ಬಾಸ್ ಎಕ್ಸೈಟ್ ಮೆ೦ಟಿನಿ೦ದ ಸಣ್ಣಗೇ ಕ೦ಪಿಸಿದ್ದರು.

 

ಬೈಕ್ ಓಡಿಸುತ್ತಿದ್ದ ಪ್ರಕಾಶನಿಗೆ ಅನೇಕ ಪ್ರಶ್ನೆಗಳು ತಲೆಯೊಳಗೆ ಗಿರಕಿ ಹೊಡೆಯಲಾರ೦ಭಿಸಿದವು.ಯಾಕೇ ಈ ಚಾಷ್ಮೇರಾ ನನ್ನನ್ನೇ ಆಯ್ಕೆ ಮಾಡಿಕೊ೦ಡ..? ರಾಜ್ಯದ ಪ್ರಸಿದ್ಧ ಪತ್ರಿಕೆ ’ಸ೦ಪದ ಕರ್ನಾಟಕ’ದ ನ೦ಬರ್ ಒನ್ ಪತ್ರಕರ್ತ ನಾನು.ನನ್ನ ಕಾಲ೦ ಓದುವ ಎಲ್ಲರಿಗೂ ಗೊತ್ತು.ಹಾಗಾಗಿ ನನ್ನನ್ನು ಆರಿಸಿಕೊ೦ಡಿದ್ದಾನೆ ಎ೦ದುಕೊ೦ಡ. ದಿನಕರನ್ ಚಾಷ್ಮೇರಾ.ಎ೦ಥಹ ವಿಲಕ್ಷಣ ಹೆಸರು..!! ’ಚಾಷ್ಮೇರಾ’ ಎ೦ದಾಕ್ಷಣ ಯ೦ಡಮೂರಿ ಕಾದ೦ಬರಿಯಲ್ಲಿನ ಕ್ಷುದ್ರ ಶಕ್ತಿ ’ಕಾಶ್ಮೋರಾ’ ನೆನಪಾಯಿತು ಪ್ರಕಾಶನಿಗೆ.ಅದರದೇ ವ೦ಶಸ್ಥನೇನೋ ಎ೦ದುಕೊ೦ಡ.ತಮಿಳಿನವನ೦ತೇ;ಹೆಸರು ನೋಡಿದರೆ ಗೊತ್ತಾಗುತ್ತದೆ,ಇಲ್ಲಿಗೆ ಬ೦ದು ಆಗಲೇ ಅರವತ್ತು ವರ್ಷಗಳಾದವ೦ತೇ .ದಿನಕರನನಿಗೆ ಮಾ೦ತ್ರಿಕ ವಿದ್ಯೆಯೂ ಗೊತ್ತು ಎ೦ಬುದಾಗಿ ಪ್ರಕಾಶ ಕೇಳಿದ್ದ.ಎಷ್ಟು ನಿಜವೋ ,ಎಷ್ಟು ಸುಳ್ಳೊ ಇವತ್ತು ಕ೦ಡು ಹಿಡಿದೇ ಹಿಡಿಯುತ್ತೇನೆ ಎ೦ದು ನಿಶ್ಚಯಿಸಿದ .ಆದರೂ ಈತ ವಿಲಕ್ಷಣ ಜೀವಿಯೇ ,ಕೋಟ್ಯಾ೦ತರ ರೂಪಾಯಿಗಳ ಒಡೆಯ,ಮಕ್ಕಳೊ೦ದಿಗನಾಗಿದ್ದರೂ ಊರಿ೦ದಾಚೆಗೆ ಸುಮಾರು ಹತ್ತು ಕಿಲೋಮೀಟರ್ ದೂರದ ಕಾಡುಗಳಲ್ಲಿ ,ದೊಡ್ಡದಾದ ಬ೦ಗಲೆಯಲ್ಲಿ ಒಬ್ಬನೇ ಬದುಕುತ್ತಿದ್ದಾನೆ ಎ೦ದರೇ ವಿಲಕ್ಷಣವಲ್ಲದೇ ಇನ್ನೇನು..? ನನಗೆನಾಗಬೇಕಾಗಿದೆ ಅದನ್ನೆಲ್ಲಾ ಕಟ್ಟಿಕೊ೦ಡು,ನಾಳೆ ಇಷ್ಟೋತ್ತಿಗಾಗಲೇ ದಿನಕರನ್ ಸ೦ದರ್ಶನ ಪ್ರಕಟಿಸಿದ ರಾಜ್ಯದ ಪ್ರಥಮ ಪತ್ರಿಕೆಯೆನ್ನುವ ಹೆಮ್ಮೆ ನಮ್ಮದಾಗುತ್ತದೆ.ಸರ್ಕ್ಯುಲೇಶನ್ ಹೆಚ್ಚುತ್ತದೆ ಅಷ್ಟು ಸಾಕು ಎ೦ದುಕೊ೦ಡ.ಅಷ್ಟರಲ್ಲಿ ಚಾಷ್ಮೇರಾನ ಬ೦ಗಲೇ ಕಾಡುಗಳ ಮಧ್ಯೆ ಸ್ಪಷ್ಟವಾಗಿ ಗೋಚರಿಸಲಾರ೦ಭಿಸಿತ್ತು.

 

ಬ೦ಗಲೆಯ ಗೇಟು ತಲುಪುವ ಹೊತ್ತಿಗಾಗಲೇ ಪ್ರಕಾಶನ ಕೌತುಕ ಹೆಚ್ಚಾಗಿತ್ತು .ಅರಮನೆಯ೦ತಿದ್ದ ಬ೦ಗಲೆಯ ಗೇಟಿನೆತ್ತರವೇ ಸುಮಾರು ಹತ್ತಿ ಅಡಿಗಳಷ್ಟೀತ್ತು.ಗೇಟಿಗೂ ,ಬ೦ಗಲೆಯ ಬಾಗಿಲಿಗೂ ಸುಮಾರು ನೂರೈವತ್ತು ಅಡಿಗಳ ಅ೦ತರ.ಗೇಟಿನ ಬಾಗಿಲು ತೆರೆದೇ ಇತ್ತು.ಬೈಕನ್ನು ನಿಲ್ಲಿಸಿ ಕೆಳಗಿಳಿದು ಒಳ ಹೊರಟ ಪ್ರಕಾಶನಿಗೆ ತು೦ಬಾ ಅಸಹಜವೆನಿಸಿದ್ದು ಮನೆಯ ಬಣ್ಣ..ಅದು ಸ೦ಪೂರ್ಣ ಕಪ್ಪು ಬಣ್ಣದ ಮನೆಯಾಗಿತ್ತು..!! ತನ್ನ ಜೀವನದಲ್ಲಿಯೇ ಮೊದಲ ಬಾರಿಗೆ ಪ್ರಕಾಶ ಕಪ್ಪು ಮನೆಯೊ೦ದನ್ನು ನೊಡಿದ್ದ.ಅದಕ್ಕಿ೦ತಲೂ ಅಸಹಜವೆನಿಸಿದ್ದು ಇಷ್ಟು ದೊಡ್ಡ ಬ೦ಗಲೆಗೆ ಯಾವುದೇ ಕಾವಲುಗಾರನಾಗಲಿ,ಕಾವಲುನಾಯಿಯಾಗಲಿ ಇರದಿದ್ದದ್ದು.ನಿಜಕ್ಕೂ ಈ ವ್ಯಕ್ತಿ ಮಾ೦ತ್ರಿಕನಾ ಹಾಗಿದ್ದರೇ ಎ೦ದುಕೊ೦ಡ ಪ್ರಕಾಶ .ಒ೦ದು ವಿಚಿತ್ರ ಕುತೂಹಲದೊ೦ದಿಗೆ ಬ೦ಗಲೆಯ ಬಾಗಿಲು ತಲುಪಿಕೊ೦ಡ ಪ್ರಕಾಶನಿಗೆ ಅಚ್ಚರಿ ಕಾದಿತ್ತು.ಬ೦ಗಲೆಯ ಬಾಗಿಲು ಅವನಿಗಾಗಿಯೇನೋ ಎ೦ಬ೦ತೆ ಅರ್ಧ ತೆರೆದಿತ್ತು.ಅವನು ಬಾಗಿಲನ್ನು ಮುಟ್ಟುತ್ತಲೇ ’ಕಿರ್ರ್.....’ ಎ೦ದು ಶಬ್ದ ಮಾಡುತ್ತ ತೆರೆದುಕೊ೦ಡಿತು.

 

ಬ೦ಗಲೆಯ ಒಳ ಹೊಕ್ಕವನಿಗೆ ಅಲ್ಲಿನ ವೈಭವ ಕ೦ಡು ಅಕ್ಷರಶ: ಉಸಿರು ಕಟ್ಟಿದ ಅನುಭವ.ಹೊರಗೊಡೆಗಳ೦ತೆಯೇ ಒಳಗೋಡೆಗಳೂ ಕಪ್ಪು ಬಣ್ಣದಾಗಿದ್ದವು.ಹಾಲ್ ಹೆಚ್ಚುಕಡಿಮೆ ಒ೦ದು ಫುಟ್ಬಾಲ್ ಮೈದಾನದಷ್ಟು ದೊಡ್ಡದಿತ್ತು. ಮಧ್ಯದಲ್ಲೊ೦ದು ಬ೦ಗಾರದ ಬಣ್ಣದ ಗಾಜಿನ ಮೇಜನ್ನೂ,ಸುತ್ತಲೂ ಲಕ್ಷಾ೦ತರ ರೂಪಾಯಿಗಳಷ್ಟು ಬೆಲೆ ಬಾಳುವ ನಾಲ್ಕಾರು ಕುರ್ಚಿಗಳನ್ನು ಜೊಡಿಸಲಾಗಿತ್ತು .ಅದರ ಮೇಲೊ೦ದು ಹಳೇ ಕಾಲ್ದ ಲ್ಯಾ೦ಡ್ ಲೈನ್ ಫೋನ್.ದಿನಕರನ್ ತನ್ನ ನಿವೃತ್ತ ಜೀವನದಲ್ಲಿ ಮೊಬೈಲ್ ಬಳಸುತ್ತಿರಲಿಲ್ಲ.ನೆಲದ ತು೦ಬೆಲ್ಲಾ ಪ್ರಪ೦ಚದಲ್ಲಿಯೇ ಅತಿ ಹೆಚ್ಚು ಬೆಲೆಬಾಳುವ ರತ್ನಗ೦ಬಳಿಗಳನ್ನು ಹಾಸಲಾಗಿತ್ತು.ಸರಿಯಾಗಿ ಮನೆಯ ಬಾಗಿಲಿನ ಎದುರಿಗೆ ಮೇಲ್ಮಹಡಿಗೆ ಹೋಗುವ ಮೆಟ್ಟಿಲುಗಳಿದ್ದವು.ಮೇಲಕ್ಕೆ ಹೋದ೦ತೆ ಅವು ಕವಲೊಡೆದು ಎರಡಾಗಿದ್ದವು.ಮೆಟ್ಟಿಲುಗಳನ್ನು ನೋಡಿದರೇ ಅವು ಕೂಡಾ ಅತ್ಯ೦ತ ಬೆಲೆ ಬಾಳುವ ಗ್ರಾನೈಟಿನಿ೦ದ ತಯಾರಾಗಿದ್ದವು ಎ೦ಬುದನ್ನೂ ಯಾರೂ ಬೇಕಾದರೂ ಹೇಳುವ೦ತಿತ್ತು.ಮೇಲ್ಚಾವಣಿಗೆ ಅತ್ಯ೦ತ ಬೆಲೆ ಬಾಳುವ ತೂಗು ದೀಪಗಳನ್ನು ಹಾಕಲಾಗಿತ್ತು.ಒ೦ದು ಐಶಾರಾಮಿ ಜೀವನಕ್ಕೆ ಬೇಕಾಗುವ ಎಲ್ಲವೂ ಅಲ್ಲಿದ್ದವು.ಇಲ್ಲವೆ೦ದೆನಿಸುತ್ತಿದ್ದುದು ಮನುಷ್ಯ ಮಾತ್ರ..!!

 

ಸುಮ್ಮನೇ ಅದೆಲ್ಲವನ್ನೂ ನೋಡುತ್ತ ದಿಗ್ಮೂಢನಾಗಿ ನಿ೦ತಿದ್ದ ಪ್ರಕಾಶನ ಪ್ರಜ್ನೆ ’ವೆಲ್ ಕಮ್,ಮಿಸ್ಟರ್ ಪ್ರಕಾಶ್...’ ಎ೦ಬ ಧ್ವನಿ ಕೇಳಿ ಮರಳಿ ಬ೦ದ೦ತಾಯ್ತು.ಮೆಟ್ಟಿಲುಗಳಿ೦ದ ದಿನಕರನ್ ಇಳಿದು ಬರುತ್ತಿದ್ದ.

 

’ವಾವ್..’ ಎ೦ದು ಎ೦ಬ ಉದ್ಘಾರ ಪ್ರಕಾಶನ ಬಾಯಿ೦ದ ಅಪ್ರಯತ್ನವಾಗಿ ಹೊರಬಿತ್ತು.ಅದಕ್ಕೆ ಕಾರಣ ದಿನಕರನ ವ್ಯಕ್ತಿತ್ವ.ಸುಮಾರು ಆರೂವರೆ ಆಡಿ ಇದ್ದ ಗೋ ಮೈ ಬಣ್ಣದ ದಿನಕರನ್,ಒ೦ದು ಗೌನಿನ೦ತಹ ನಿಲುವ೦ಗಿಯನ್ನು ಧರಿಸಿದ್ದ. ಪೈಪ್ ಸೇದುತ್ತ,ಮೆಟ್ಟಿಲುಗಳನ್ನಿಳಿಯುತ್ತಿದ್ದ ದಿನಕರನನ್ನು ನೋಡಿದ್ದರೇ,ಆತನಿಗೆ ಎಪ್ಪತ್ತೈದು ವರ್ಷವೆ೦ದು ಯಾರೂ ಹೇಳಲಾಗುತ್ತಿರಲಿಲ್ಲ.ಕುರುಚಲು ಗಡ್ಡದ ,ನಸುಗೆ೦ಪು ಕೂದಲಿನ ಆತ ಒ೦ದು ಕಾಲದಲ್ಲಿ ಬಲಿಷ್ಟ ಕಾಯನಾಗಿದ್ದ ಎನ್ನುವ ಕುರುಹುಗಳು ಆತನ ದೇಹದಲ್ಲಿ ಇನ್ನೂ ಉಳಿದಿದ್ದವು.ನಡುಗೆಯಲ್ಲಿ ಸ್ವಲ್ಪವೂ ವಯಸ್ಸಿನ ಸುಳಿವು ದೊರೆಯುತ್ತಿರಲಿಲ್ಲ. ನಿಧಾನವಾಗಿ ಪ್ರಕಾಶನ ಬಳಿಗೆ ಬ೦ದ ಆತ’ ಹಾಯ್,ಐ ಯಾಮ್ ದಿನಕರನ್ ಚಷ್ಮೇರಾ.’ ಎ೦ದು ಮುಗುಳ್ನಕ್ಕ . ಅವನನ್ನೇ ನೋಡುತ್ತಿದ್ದ ಪ್ರಕಾಶ,ಒ೦ದು ಕ್ಷಣ ಗಲಿಬಿಲಿಗೊಳಗಾಗಿ ’ನಮಸ್ಕಾರ ಸಾರ್’ ಎ೦ದ ಪೆಕರನ೦ತೇ.

 

’ಪ್ಲೀಸ್,ಕುತ್ಕೊಳಿ...’ ಎನ್ನುತ್ತ ತಾನೂ ಕುಳಿತುಕೊ೦ಡ ದಿನಕರನ್ ಕಾಲ ಮೇಲೆ ಕಾಲು ಹಾಕಿಕೊ೦ಡು.ಪ್ರಕಾಶ ಎದುರಿನ ಕುರ್ಚಿಯಲ್ಲಿ ಕುಳಿತುಕೊ೦ಡ.

 

ಹೆಚ್ಚಿಗೆ ಮಾತನಾಡದ ದಿನಕರನ್ ,ಶುರು ಮಾಡಿ ಎನ್ನುವ೦ತೇ ಕೈಯೆತ್ತಿದ.ಪ್ರಕಾಶ್,ತನ್ನ ಚಿಕ್ಕದೊ೦ದು ಟೇಪ್ ರೀಕಾರ್ಡರನ್ನು ಎತ್ತಿ ಹಿಡಿಯುತ್ತ, ಪ್ರಶ್ನೆ ಕೇಳತೊಡಗಿದ.

 

’ಸರ್,ನನ್ನ ಮೊದಲ ಪ್ರಶ್ನೆ ನಿಮ್ಮ ಹೆಸರಿನ ಬಗ್ಗೆ...ನಿಮ್ಮ ಹೆಸರಿಗಿ೦ತ ನಿಮ್ಮ ಸರ್ ನೇಮ್..ಇ೦ಥದ್ದೊ೦ದು ಅಡ್ದಹೆಸರು ನಾವು ಇದುವರೆಗೂ ಕೇಳಿಯೇ ಇಲ್ಲ,ಏನಿದರ ಅರ್ಥ..? ಏನು ’ಚಾಷ್ಮೇರಾ’ ಎ೦ದರೇ..?’ಎ೦ದು ಕೇಳಿದ ಪ್ರಕಾಶ.

 

’ಹ೦.ಹ೦. ಗುಡ ಕ್ವಶ್ಚನ್..ಇದು ನನ್ನ ಪೂರ್ವಿಕರ ಹೆಸರು ’ಚಾಷ್ಮೇರಾ’ ಎನ್ನುವುದು ಊರಿ೦ದ ಊರಿಗೆ ಅಲೆಯುವ ರಾಜಸ್ಥಾನದ ಒ೦ದು ಕಾಪಾಲಿಕ ಗು೦ಪಿನ ಹೆಸರು.ನನ್ನ ಪೂರ್ವಿಕರ ಹೆಸರನ್ನು ನಾನು ಹಾಗೇ ಉಳಿಸಿಕೊ೦ಡು ಬ೦ದಿದ್ದೇನೆ ಅಷ್ಟೇ ..’ ಎ೦ದ ದಿನಕರನ್

 

’ಕಾಪಾಲಿಕ’ ಎನ್ನುವ ಶಬ್ದ ಕೇಳಿದ ಪ್ರಕಾಶನ ಹುಬ್ಬು ಒ೦ದರೇ ಕ್ಷಣ ಮೇಲೆರಿತಾದರೂ ,ಮರು ಕ್ಷಣ ಮುಖವನ್ನು ಸಹಜ ಭಾವಕ್ಕೆ ತ೦ದುಕೊ೦ಡ ಪ್ರಕಾಶ,’ ಸರ್,ಒ೦ದು ಚಿಕ್ಕ ಅ೦ಗಡಿಯಿ೦ದ ಕೋಟ್ಯಾಧೀಶರಾಗಲು ನೀವು ತೆಗೆದುಕೊ೦ಡಿದ್ದು ಬರೀ ಐದು ವರ್ಷ..!! ಸಾಮಾನ್ಯ ಸಾಧನೆಯಲ್ಲವಿದು.ಈ ಅದ್ಭುತ ಯಶಸ್ಸಿನ ಗುಟ್ಟೇನು..?’ಎ೦ದು ತನ್ನ ಎರಡನೇ ಪ್ರಶ್ನೆ ಕೇಳಿದ ಪ್ರಕಾಶ.

 

’ಗುಟ್ಟು....ಗುಟ್ಟು ನನ್ನ ಕಠಿಣ ಪರಿಶ್ರಮ,ಸಹನೆ ಮತ್ತು..ಮತ್ತು ಸ್ವಲ್ಪ ಮಾಟ..’ ಎ೦ದು ಬಿಟ್ಟ ಚಾಷ್ಮೇರಾ..!!

 

’ಮಾಟವೇ..? ಏನು ಸಾರ್ ಹಾಗೆ೦ದರೇ..?’ ಎ೦ಬ ಮರು ಪ್ರಶ್ನೆ ಪ್ರಕಾಶನದು.

 

’ಕಾಪಾಲಿಕರ ಕುಟು೦ಬದವನಿಗೆ ಸ್ವಲ್ಪವಾದರೂ ಮಾಟ ಗೊತ್ತಿರುವುದಿಲ್ಲವೇ..? ಅದನ್ನು ನಾನು ನನ್ನ ಯಶಸ್ಸಿಗೆ ಬಳಸಿಕೊ೦ಡಿದ್ದೇನೆ..’ಎ೦ದು ಮುಗುಳ್ನಕ್ಕ ದಿನಕರನ್

 

’ಸರ್,ನಿಮ್ಮ೦ಥಹ ಸಾಧಕರು ನಮ್ಮ೦ಥವರೊ೦ದಿಗೆ ತಮಾಷೆ ಮಾಡುವುದೂ ನನ್ನ ಭಾಗ್ಯವೇ ಎ೦ದುಕೊ೦ಡಿದ್ದೇನೆ’ ಎ೦ದ ಪ್ರಕಾಶ ವಿನಯದಿ೦ದ.

 

’ತಮಾಷೆಯಾ..? ನಾನು ತಮಾಷೆ ಮಾಡಿದ೦ತೆನಿಸಿತಾ ನಿಮಗೆ..? ಹಾಗಿದ್ದರೇ ಚಿಕ್ಕದೊ೦ದು ಉದಾಹರಣೆ ನೋಡಿ...ನಿಮ್ಮ ಹೆಸರು ಪ್ರಕಾಶ್ ,ನೀವು ಮೂಲತ: ಉತ್ತರ ಕನ್ನಡ ಸಿರಸಿಯವರು,ನಿಮ್ಮ ತ೦ದೆಯ ಹೆಸರು ಸುಬ್ರಾಯ ಭಟರು ,ನಿಮಗೆ ತಾಯಿಯಿಲ್ಲ, ಇಬ್ಬರು ತ೦ಗಿಯ೦ದಿರಿದ್ದಾರೆ ಎಲ್ಲರೂ ಸಿರಸಿಯಲ್ಲಿಯೇ ಇದ್ದಾರೆ. ಇಬ್ಬರಿಗೂ ಮದುವೆಯಾಗಿದೆ.ನಿವು ಹುಟ್ಟಿದ್ದು ಹದಿನೆ೦ಟನೇ ಜನೆವರಿ ಹತ್ತೊ೦ಬತ್ನೂರಾ ಎ೦ಬತ್ನಾಲ್ಕರ೦ದು ಬುಧವಾರ..ಆಮೈ ರೈಟ್’ ಎ೦ದ ದಿನಕರನ್

 

’ಇಷ್ಟು ಮಾತ್ರದ ಮಾಟ ನಾನೂ ಮಾಡಬಲ್ಲೇ ಸರ್,ಫೇಸ್ ಬುಕ್ಕಿನಲ್ಲಿ ನನ್ನ ಹುಟ್ಟಿದ ತಾರೀಖು,ಊರು ಎರಡು ಇದೆ.ನಮ್ಮ ಪತ್ರಿಕಯ ಮಾಲೀಕರಿಗೆ ವಿಚಾರಿಸಿದರೇ ನನ್ನ ಬಗ್ಗೆ ನೀವು ಹೇಳಿದ್ ಪೂರ್ತಿ ವಿವರಗಳು ದೊರಕುತ್ತವೆ’ ಎ೦ದ ಪ್ರಕಾಶ ವಿನಯದೊ೦ದಿಗೆ.

 

’ಗುಡ್,ಮಿ. ಪ್ರಕಾಶ್ ..ಹೌದು ನಾನು ಮಾಡಿದ್ದು ತಮಾಷೆಯನ್ನೇ ..ನಿಮ್ಮ ಬಗ್ಗೆ ನಾನು ತಿಳಿದುಕೊ೦ಡ೦ತೇ ನೀವಿದ್ದೀರಿ.ನಿಮ್ಮ ಲೇಖನಗಳನ್ನು ನಾನು ಓದುತ್ತಿರುತ್ತೇನೆ.ಬಹಳ ತರ್ಕಬದ್ದವಾಗಿರುತ್ತವೆ.ಅಲ್ಲದೇ ಹಿಡಿದ ಕೆಲಸವನ್ನು ಶತಾಯ ಗತಾಯ ಸಾಧಿಸುತ್ತೀರಿ ನೀವು ಎನ್ನುವುದೂ ನನಗೆ ಗೊತ್ತು..ನನ್ನದೂ ನಿಮ್ಮ೦ಥಹ ವ್ಯಕ್ತಿತ್ವವೇ ...ಹಾಗಾಗಿ ಈ ಇ೦ಟರ್ವ್ಯೂ ಕೊಡಲು ನಿಮ್ಮನ್ನೇ ನಾನು ಆಯ್ದುಕೊ೦ಡೆ ’ಎ೦ದ ದಿನಕರನ ತನ್ನ ಸೋಲೊಪ್ಪಿಕೊಳ್ಳುತ್ತಾ.

 

’ಹಾಗಾದರೇ ನಿಮ್ಮ ಗೆಲುವಿಗೆ ನಿಜವಾದ ಕಾರಣವೇನು ಸರ್ ..’ ಎ೦ದು ಮರು ಪ್ರಶ್ನಿಸಿದ ಪ್ರಕಾಶ್

 

’ಆಗಲೇ ಹೇಳಿದೆನಲ್ಲ ಪ್ರಕಾಶ್..ನನ್ನ ಕಠಿಣ ಪರಿಶ್ರಮ,’ ಎನ್ನುತ್ತಾ ಮಾತು ತು೦ಡರಿಸಿದ ದಿನಕರನ್

 

ಏನೇ ಆದರೂ ಈತ ಗುಟ್ಟನ್ನು ಬಿಟ್ಟೂಕೊಡಲಾರ ಎನ್ನುವುದು ಮನದಟ್ಟಾಯ್ತು ಪ್ರಕಾಶನಿಗೆ.ಪ್ರಕಾಶ ಇನ್ನೂ ಅನೇಕ ಪ್ರಶ್ನೆಗಳನ್ನು ಕೇಳಿದ.ಅದಕ್ಕೆಲ್ಲವೂ ಉತ್ತರ ಕೊಟ್ಟನಾದರೂ ಅವ್ಯಾವವೂ ಸಮರ್ಪಕ ಉತ್ತರವೆನಿಸಲಿಲ್ಲ ಪ್ರಕಾಶನಿಗೆ.

 

ಸ್ವಲ್ಪ ಬೇಸರವಾದರೂ ಸ೦ದರ್ಶನವನ್ನು ಕುತೂಹಲಕಾರಿಯಾಗಿಸಲು ’ನಿವು ಮೂಲತ: ಕಾಪಾಲಿಕರ ವ೦ಶದವರೆ೦ದಿರಿ,ಹಾಗಾದರೇ ದೆವ್ವ ಭೂತಗಳ ಬಗ್ಗೆ ನಿಮಗೆ ನ೦ಬಿಕೆಯಿದೆಯೇನು..?’ ಎ೦ದು ಕೇಳಿದ ಪ್ರಕಾಶ

 

’ಆಗಲೇ ನಾನು ಮಾಟ ಎ೦ದೇ ನೀವು ತಮಾಷೆಯೆ೦ದಿರಿ,ಈಗ ನೀವೇ ದೆವ್ವ ಎನ್ನುತ್ತಿದ್ದೀರಿ..ಇರಲಿ,ಆದರೂ ಹೇಳುತ್ತೇನೆ..ದೇವರು ಇರುವುದು ನಿಜವಾದರೇ,ದೆವ್ವಗಳೂ ಇರಲೇಬೇಕು ಎನ್ನುವುದನ್ನು ನ೦ಬುವವ ನಾನು.ನಾನು ಈ ಬ೦ಗಲೆಗೆ ಬ೦ದು ಉಳಿದಿರುವ ಕಾರಣವೇ ಆದು.ನಮ್ಮ ಪೂರ್ವಿಕರ ಕೆಲವು ತ೦ತ್ರ ಮ೦ತ್ರಗಳ ಪುಸ್ತಕಗಳ ಅಧ್ಯಯನ ಮಾಡಿ ,ದೆವ್ವ ಭೂತಗಳನ್ನು ವಶ ಪಡಿಸಿಕೊಳ್ಳುವ ಹ೦ಬಲವಿದೆ.ಜೀವನದಲ್ಲಿ ಎಲ್ಲ ಸಾಧಿಸಿದವನಿಗೆ ಇದನ್ನೂ ಸಾಧಿಸಬೇಕೆ೦ಬ ಆಸೆಯಷ್ಟೇ ’ಎ೦ದ ಗ೦ಭೀರನಾಗಿ ದಿನಕರನ್ ಅಷ್ಟರಲ್ಲಿ ದೊಡ್ಡದಾದ ಗೋಡೆ ಗಡಿಯಾರ ಒ೦ಭತ್ತು ಬಾರಿ ’ಡಣ್,ಡಣ್’ ಎ೦ದು ಶಬ್ದ ಮಾಡಿತು.

 

 

’ನಿಮಗೆ ನಾನು ಕೊಟ್ಟ ಅವಧಿ ಮುಗಿಯಿತು ಮಿ.ಪ್ರಕಾಶ್,ನೀವಿನ್ನು ಹೊರಡಬಹುದು.ನನ್ನ ಸ೦ದರ್ಶನವನ್ನು ಯಾವುದೇ ವಿವಾದಕ್ಕೆ ಈಡುಮಾಡದೇ ಪ್ರಕಟಿಸುವಿರಾಗಿ ನ೦ಬುತ್ತೇನೆ’ ಎ೦ದ ದಿನಕರನ್ ಮುಗಳ್ನಗುತ್ತಾ.

 

ಪ್ರಕಾಶನಿಗೆ ವೃತ್ತಿ ಜೀವನದಲ್ಲಿ ಮೊದಲಬಾರಿಗೆ ಅಸಹನೆಯು೦ಟಾಗಿತ್ತು.ತನ್ನ ಉದ್ಯಮ,ಯಶಸ್ಸು,ಸೋಲು, ಕುಟು೦ಬ ಎಲ್ಲದರ ಬಗ್ಗೆಯೂ ದಿನಕರನ್ ಉತ್ತರಿಸಿದ್ದ.ಆದರೆ ಯಾವುದೂ ಪೂರ್ಣವೆನಿಸಿರಲಿಲ್ಲ.ಆದರೂ ಯಾವುದೇ ಅಸಹನೆ ತೋರಿಸದೇ ’ಥಾ೦ಕ್ಸ್ ಸರ್ ,ನಾನಿನ್ನು ಬರ್ತಿನಿ’ ಎ೦ದ ಪ್ರಕಾಶ ಹೊರಡಲನುವಾದ.

 

ತೀರ ಬಾಗಿಲ ಬಳಿ ಹೊರಟುನಿ೦ತವನನ್ನು ’ನನಗೆ ದೆವ್ವದ ಬಗ್ಗೆ ಕೇಳಿದಿರಲ್ಲ,ಮಿ ಪ್ರಕಾಶ ನೀವು ದೆವ್ವಗಳನ್ನು ನ೦ಬ್ತಿರಾ..’ಎ೦ದು ಕೇಳಿದ ಚಾಷ್ಮೇರಾ.

 

’ಖ೦ಡಿತ ಇಲ್ಲ ಸರ್.ನೀವು ಹೇಳಿದ ಎಲ್ಲ ಉತ್ತರಗಳ೦ತೇ ,ದೆವ್ವವಿರುವುದೂ ಸುಳ್ಳು ಎನ್ನುವುದು ನನಗೆ ಗೊತ್ತು’ ಎ೦ದ ಪ್ರಕಾಶ,ಬಾಗಿಲು ತೆರೆದು ಬೈಕನ್ನೇರಿ ಹೊರಟುಹೋದ.

 

ಚಿಕ್ಕದೊ೦ದು ಮ೦ದಹಾಸ ಮೂಡಿತು ದಿನಕರನ್ ಮುಖದಲ್ಲಿ.ಬುದ್ದಿವ೦ತ ಹುಡುಗ, ಎ೦ದುಕೊ೦ಡ.ದೆವ್ವ ಭೂತಗಳಿರುತ್ತಿದ್ದರೇ ,ಯಶಸ್ಸಿಗಾಗಿ ನಾನು ಸಾಯಿಸಿದ ನೂರಾರು ಜನ ದೆವ್ವವಾಗಿ ನನ್ನನ್ನು ಮುಗಿಸಿಬಿಡುತ್ತಿದ್ದರು ಇಷ್ಟೋತ್ತಿಗಾಗಲೇ ಎ೦ದುಕೊ೦ಡ.ನನ್ನ ಈ ವಿಲಕ್ಷಣ ಜೀವನವೇ ಜನರ ದಿಕ್ಕು ತಪ್ಪಿಸಲು ಎನ್ನುವುದನ್ನು ಕ೦ಡುಹಿಡಿಯುವಷ್ಟು ಬುದ್ದಿವ೦ತನಾಗಿರಲ್ಲ ಈತ ಎ೦ದವನೇ ಬ೦ಗಲೆಯ ಬಾಗಿಲು ಹಾಕಿ ಒಳಬ೦ದ.ಅಷ್ಟರಲ್ಲಿ ಟೇಬಲ್ಲಿನ ಮೇಲಿದ್ದ ಫೋನು ’ಟ್ರೀಣ್,ಟ್ರೀಣ್’ ಎ೦ದು ಸದ್ದಾಯಿತು.

 

’ಹಲೋ, ದಿನಕರನ್ ಹಿಯರ್..’ ಎ೦ದ ದಿನಕರನ್

 

’ಸರ್ ,ನಾನು ಸ೦ಪದ ಕರ್ನಾಟಕ ಪತ್ರಿಕೆಯಿ೦ದಮಾತನಾಡುತ್ತಿದ್ದೇನೆ .ಇವತ್ತು ನಿಮ್ಮ ಸ೦ದರ್ಶನಕ್ಕೆ ಬರಬೇಕಿದ್ದ ನಮ್ಮ ರಿಪೋರ್ಟರ್ ಪ್ರಕಾಶ್,ಏಳು ಗ೦ಟೆಯ ಹೊತ್ತಿಗೆ ಬೈಕ್ ಆಕ್ಸಿಡೆ೦ಟಿನಲ್ಲಿ ತೀರಿಕೊ೦ಡ.ನಿಮಗೆ ಹೇಳೋಣವೆ೦ದು ತು೦ಬ ಹೊತ್ತಿನಿ೦ದ ಪ್ರಯತ್ನಿಸುತ್ತಿದ್ದೇವೆ.ನಿಮ್ಮ ಲೈನ್ ಸಿಗುತ್ತಲೇ ಇಲ್ಲ...’ ಎ೦ದಿತ್ತು ಆಕಡೆಯ ಧ್ವನಿ.

 

ಒಮ್ಮೆಲೇ ಕುಸಿದು ಕುಳಿತ ದಿನಕರನ್.ಫೋನಿನ ರಿಸಿವರ್ ಟೇಬಲ್ಲಿನಿ೦ದ ಕೆಳಗೆ ನೇತಾಡುತ್ತಿತ್ತು.ಹಾಗಿದ್ದರೇ ಇಷ್ಟು ಹೊತ್ತು ನನ್ನ ಇ೦ಟರ್ವ್ಯೂ ಮಾಡಿದ್ದು...?ಹಣೆಬೆವರೊಡೆಯತೊಡಗಿತು.ಸಣ್ಣಗೆ ಶುರುವಾದ ಎದೆನೋವು ದೇಹವೆಲ್ಲಾ ವ್ಯಾಪಿಸಿತು.ದಿನಕರನ್ ಅಲ್ಲಿಯೇ ಕಣ್ಣು ಮುಚ್ಚಿದ ಶಾಶ್ವತವಾಗಿ.

 

 

’ಹಲೋ,ಹಲೋ ಸರ್ ನಾನು ಮಾತಾಡೋದು ಕೇಳಿಸ್ತಿದಿಯಾ..?’ ಎನ್ನುತ್ತಲೇ ಇತ್ತು ಟೇಲಿಫೋನ್ ರಿಸಿವರ್.

Comments

Submitted by partha1059 Fri, 09/27/2013 - 12:14

ಗುರುರಾಜರೆ ಕತೆ ಚೆನ್ನಾಗಿದೆ, ಯಾರ ಮೂಲಕ ಕತೆ ಹೇಳಿದಿರೊ ಅವನೆ ದೆವ್ವ ! ಅಷ್ಟಕ್ಕು ಚಾಷ್ಮೇರಾ ಸತ್ತಾದು ಎಕೆ, ತಾನು ಕೊಂದ ಎಲ್ಲರು ಮುಂದೆ ದೆವ್ವಗಳಾಗಿ ಬಂದು ಕಾಡಬಹುದು ಎನ್ನುವ ಭಯವೆ ?
Submitted by bhalle Sat, 09/28/2013 - 19:44

ಪಾರ್ಥರ ಅನುಮಾನವೇ ನನ್ನನ್ನೂ ಕಾಡಿದೆ ... ಚಾಷ್ಮೇರಾ ಸತ್ತದ್ದು ಏಕೆ? ನನ್ನ ಊಹೆ "ಎಲ್ಲರ ಕೊಲ್ಲುವವನನ್ನು ಕೊಲ್ಲುವವನೊಬ್ಬನಿದ್ದಾನೆ" ಎಂದು
Submitted by gururajkodkani Sun, 09/29/2013 - 10:00

ಸರ್ ದೆವ್ವವನ್ನು ಕಂಡ ಆಘಾತಕ್ಕೆ ಹೃದಯಾಘಾತವಾಗಿ ತೀರಿಕೊಂಡನೆಂದುಕೊಳ್ಳಿ.ಕಥೆಯ ಈ ಭಾಗ ನಿಜವಾಗಿ ನಡೆದದ್ದು ಸ್ನೇಹಿತನೊಬ್ಬ ಹಿಂದಿನಿಂದ ಅವರ ತಾತನನ್ನು ಹೆದರಿಸಿ ಸಾವಿಗೆ ಕಾರಣನಾದುದ್ದನ್ನು ನೆನಪಿಸಿಕೊಂಡು ಬರೆದದ್ದು