ಈರುಳ್ಳಿ ರಾಜಕೀಯ

ಈರುಳ್ಳಿ ರಾಜಕೀಯ

ಈರುಳ್ಳಿಯ ಬೆಲೆ ಮತ್ತೆ ಏರುತ್ತಿದೆ. ದೇಶದ ಬೇರೆಬೇರೆ ಭಾಗಗಳಲ್ಲಿ ಈರುಳ್ಳಿಯ ಬೆಲೆ ಶೇಕಡಾ ೨೦ರಿಂದ ಶೇಕಡಾ ೮೦ರ ವರೆಗೆ ಏರಿದೆ - ಡಿಸೆಂಬರ್ ೨೦೧೨ರಿಂದ ಜನವರಿ ೨೦೧೩ರ ಅವಧಿಯಲ್ಲಿ!

ಈ ಅವಧಿಯಲ್ಲಿ ಇತರ ತರಕಾರಿಗಳ ಬೆಲೆಯೂ ಏರಿದೆ. ಅದರೆ ಈರುಳ್ಳಿಯ ಬೆಲೆಯ ರಾಜಕೀಯ ಪ್ರಭಾವಕ್ಕೆ ಸಾಟಿಯೇ ಇಲ್ಲ. ಯಾಕೆಂದರೆ, ಅದಕ್ಕೆ ಯಾವುದೇ ಸರಕಾರವನ್ನು ಉರುಳಿಸುವ ತಾಕತ್ತಿದೆ. ಭಾರತದ ಮೊದಲ ಕಾಂಗ್ರೆಸ್ಸೇತರ ಕೇಂದ್ರಸರಕಾರವನ್ನು ಪದಚ್ಯುತಗೊಳಿಸಲು ಇಂದಿರಾಗಾಂಧಿಗೆ ೧೯೮೦ರಲ್ಲಿ ಸಹಾಯವಾದದ್ದು ಏರುತ್ತಿದ್ದ ಈರುಳ್ಳಿ ಬೆಲೆಯಿಂದ. ೧೯೯೮ರಲ್ಲಿಯೂ ಹಾಗೆಯೇ ಆಯಿತು. ಢೆಲ್ಲಿ ಮತ್ತು ರಾಜಸ್ಥಾನಗಳಲ್ಲಿ ಅಧಿಕಾರದ ಗದ್ದುಗೆ ಏರಿದ್ದ ಬಿಜೆಪಿಗೆ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಯಾಕೆಂದರೆ, ಆಗ ಈರುಳ್ಳಿಯ ಬೆಲೆಯಲ್ಲಿ ಅತ್ಯಧಿಕ ಹೆಚ್ಚಳವಾಗಿತ್ತು. ಡಾ. ಮನಮೋಹನ ಸಿಂಗ್ ಅವರಂತಹ ಕಡಿಮೆ ಮಾತಿನ ಪ್ರಧಾನಮಂತ್ರಿಯೂ ೨೦೧೦ರಲ್ಲಿ "ಈರುಳ್ಳಿಯ ಬೆಲೆ ಏರಿಕೆ ಭಾರೀ ಕಾಳಜೆಯ ವಿಷಯ" ಎಂದು ಹೇಳಿಕೆ ನೀಡದರೆಂದರೆ, ಈರುಳ್ಳಿಯ ಬೆಲೆ ಎಬ್ಬಿಸಬಹುದಾದ ರಾಜಕೀಯ ಬಿರುಗಾಳಿಯನ್ನು ಅಂದಾಜು ಮಾಡಿಕೊಳ್ಳಿ.

ಈರುಳ್ಳಿ ಬೆಲೆಯ ಬಗ್ಗೆ ಮಾತ್ರ ಯಾಕೆ ಇಷ್ಟೆಲ್ಲ ಗದ್ದಲ? ಇದರ ಬಗ್ಗೆ ಯಾವುದೇ ಸಾಮಾಜಿಕ, ಆರ್ಥಿಕ ಅಥವಾ ರಾಜಕೀಯ ಅಧ್ಯಯನ ನಡೆದಿಲ್ಲ. ಗೋಧಿ ಮತ್ತು ಭತ್ತದ ಬೆಳೆಗಾರರ ಶಕ್ತಿಯುತ ಲಾಬಿ ಇದೆ. ಈರುಳ್ಳಿ ಬೆಳೆಗಾರರ ಲಾಬಿಯೇ ಇಲ್ಲ. ಆದರೂ, ಈರುಳ್ಳಿ ಬೆಲೆಯೇರಿಕೆ ದೇಶದಲ್ಲೆಲ್ಲ ದೊಡ್ಡ ಸುದ್ದಿಯಾಗುತ್ತದೆ! ಇತರ ಜೀವನಾವಶ್ಯಕ ವಸ್ತುಗಳಾದ ಪೆಟ್ರೋಲ್, ಡೀಸಿಲ್, ಹಾಲು ಇತ್ಯಾದಿಗಳ ಬೆಲೆಯೇರಿಕೆಯಿಂದ ಮಧ್ಯಮವರ್ಗದ ಕುಟುಂಬಗಳು ತತ್ತರಿಸುತ್ತವೆ. ಆದರೆ, ಜನಪ್ರಿಯ ಟಿವಿ ಧಾರಾವಾಹಿ ಬಗ್ಗೆ ಮಾತನಾಡಿದಂತೆ, ಅವರು ಮಾತನಾಡುವುದು ಈರುಳ್ಳಿಯ ಬೆಲೆಯೇರಿಕೆ ಬಗ್ಗೆ ಮಾತ್ರ! ರಾಜಕೀಯ ಧುರೀಣರಂತೂ ನೀರಿನ ಕೊರತೆ ಅಥವಾ ನೀರಿನ ಬೆಲೆಯೇರಿಕೆ ಆದಾಗಲೂ ಸುಮ್ಮನಿರುತ್ತಾರೆ. ಆದರೆ, ಈರುಳ್ಳಿಯ ಬೆಲೆಯೇರಿದಾಗ ಕೋಲಾಹಲ ಎಬ್ಬಿಸುತ್ತಾರೆ.

ಹಾಗಂತ, ಈರುಳ್ಳಿಯ ಬೆಲೆ ನಿಯಂತ್ರಣಕ್ಕಾಗಿ ಅಧಿಕಾರದಲ್ಲಿರುವ ಯಾವ ರಾಜಕೀಯ ಪಕ್ಷವೂ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ - ಈರುಳ್ಳಿಯ ರಫ್ತು ನಿಷೇಧ ಅಥವಾ ಈರುಳ್ಳಿಯ ಹೊಸ ಆಯಾತದ ಹೊರತಾಗಿ.

ಈರುಳ್ಳಿಯ ಬೆಲೆ ದೇಶದ ಮಾರುಕಟ್ಟೆಯಲ್ಲಿ ಬೆಲೆಗಳ ಏರಿಳಿತದ ಪರಿಣಾಮಕಾರಿ ಸೂಚಕ ಎನ್ನಬಹುದು. ಯಾಕೆಂದರೆ, ಈರುಳ್ಳಿಯ ಬೆಲೆಯೇರಿಕೆಗೆ ಕಾರಣವಾದ ಅಂಶಗಳೇ ಇತರ ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆಗೂ ಕಾರಣ.

ಯಾವುದೇ ವಸ್ತುವಿನ ಬೆಲೆಯೇರಿಕೆಗೆ ಕಾರಣ, ಅದರ ಬೇಡಿಕೆ ಮತ್ತು ಪೂರೈಕೆಯೆ ಅಸಮತೋಲನ. ಸಂಶೋಧನೆಯ ಪ್ರಕಾರ, ಈರುಳ್ಳಿ ಹಾಗೂ ಇತರ ಕೃಷಿ ಉತ್ಪನ್ನಗಳ ಬೆಲೆಯೇರಿಕೆಗೆ ಕಾರಣವಾಗುವ ಅಂಶಗಳು: ಸಾಗಾಟದ ಕುಂದುಕೊರತೆ, ಪರಿಣಾಮಕಾರಿ ವಿತರಣೆಯ ಕೊರತೆ ಮತ್ತು ಮಾರುಕಟ್ಟೆಯ ವೈಪರೀತ್ಯ. ತಮ್ಮ ಲಾಭಕ್ಕಾಗಿ ಎಲ್ಲ ವಸ್ತುಗಳ ಬೆಲೆಗಳನ್ನೂ ಏರುಪೇರು ಮಾಡುವ ಮಧ್ಯವರ್ತಿಗಳ ಪಾತ್ರವನ್ನೂ ಮರೆಯುವಂತಿಲ್ಲ.

ನ್ಯಾಷನಲ್ ಕೌನ್ಸಿಲ್ ಆಫ್ ಎಪ್‍ಲೈಯಿಡ್ ಇಕನಾಮಿಕ್ ರೀಸರ್ಚ್ ೨೦೧೦ -೨೦೧೧ರ ಈರುಳ್ಳಿ ಬೆಲೆಯೇರಿಕೆ ಬಗ್ಗೆ ತನಿಖೆ ನಡಿಸಿ ವರದಿ ಸಲ್ಲಿಸಿದೆ. ಅದರ ಪ್ರಕಾರ, ಈರುಳ್ಳಿಯನ್ನು ಶೇಖರಿಸಿ ಅದರ ಬೆಲೆಯನ್ನು ಏರಿಸಿದ ರಖಂ ವ್ಯಾಪಾರಿಗಳನ್ನು ಸರಕಾರ ರಕ್ಷಿಸಿತ್ತು! ಈಗಿನ ಬೆಲೆಯೇರಿಕೆ ಅಸಹಜ ಎನ್ನುತ್ತದೆ ನ್ಯಾಷನಲ್ ಹಾರ್ಟಿಕಲ್ಚರ್ ಡೆವಲಪ್‍ಮೆಂಟ್ ಆಂಡ್ ರೀಸರ್ಚ್ ಫೌಂಡೇಷನ್. ಯಾಕೆಂದರೆ ಜನವರಿ ೨೦೧೩ರ ತನಕ ಎಲ್ಲ ಪ್ರಧಾನ ಮಾರುಕಟ್ಟೆಗಳಿಗೂ ಸಾಕಷ್ಟು ಪ್ರಮಾಣದಲ್ಲಿ ಕೊಯ್ಲಾದ ಈರುಳ್ಳಿ ಬಂದಿದೆ. ಹಾಗಾಗಿ, ರಖಂ ವ್ಯಾಪಾರಿಗಳ ಕಳ್ಳಾಟವನ್ನು ಅಲ್ಲಗಳೆಯುವಂತಿಲ್ಲ.

ಈಗಲೂ ಸರಕಾರ ಕೈಗೊಳ್ಳುವುದು ಅದೇ ಹಳೆಯ ಪರಿಹಾರ ಕ್ರಮವನ್ನು - ಅಂದರೆ ಈರುಳ್ಳಿ ಆಯಾತ ಮಾಡಿ ಪೂರೈಕೆ ಹೆಚ್ಚಿಸುವುದು ಅಥವಾ ರಫ್ತು ನಿಷೇಧಿಸುವುದು. ಇದು ಈರುಳ್ಳಿಯ ಬೆಲೆಯನ್ನು ಕೃತಕವಾಗಿ ಇಳಿಸುತ್ತದೆ. ಆದರೆ ದೀರ್ಘಾವಧಿಯಲ್ಲಿ ಈರುಳ್ಳಿ ಬೆಳೆಗಾರರು ಇದರ ಕೃಷಿ ಕೈಬಿಡುವಂತೆ ಮಾಡುತ್ತದೆ - ತಮಗೆ ನ್ಯಾಯಯುತ ಬೆಲೆ ಸಿಗುವುದಿಲ್ಲ ಎಂಬ ಆತಂಕದಿಂದಾಗಿ. ಯಾವತ್ತಾದರೂ ಈರುಳ್ಳಿ ಬೆಲೆಯೇರಿಕೆಯಿಂದಾಗಿ ಬೆಳೆಗಾರರಿಗೆ ಲಾಭವಾಗಿದೆಯೇ? ಈಗಲೂ ಬೆಳೆಗಾರರಿಗೆ ಸಿಗುತ್ತಿರುವುದು ಕಿಲೋಕ್ಕೆ ಕೇವಲ ರೂ. ೮ರಿಂದ ರೂ.೧೦.
ಕೋಟಿಗಟ್ಟಲೆ ಜನರು ಉಣ್ಣಲಿಕ್ಕಾಗಿ ಆಹಾರ ಬೆಳೆಗಳನ್ನು ಬೆಳೆಸುವ ಎಲ್ಲ ಬೆಳೆಗಾರರ ಪಾಡೂ ಇದೇ ಅಲ್ಲವೇ?

Comments

Submitted by makara Sat, 09/28/2013 - 07:25

ಈರುಳ್ಳಿಯನ್ನು ಬೆಳೆದವರಿಗಾಗಲಿ ಅಥವಾ ಅದನ್ನು ತಿನ್ನುವವರಿಗಾಗಲಿ ಯಾರದೋ ಒಬ್ಬರ ಕಣ್ಣಲ್ಲಿ ನೀರಂತೂ ಖಂಡಿತವಾಗಿ ಹರಿಸುತ್ತದೆ. ಬೆಲೆ ಕಡಿಮೆಯಾದಾಗ ರೈತರು, ಬೆಲೆಯೇರಿದಾಗ ಗ್ರಾಹಕರು! :(
Submitted by makara Wed, 10/02/2013 - 10:53

ಕೃಷ್ಣಾರಾವ್ ಸರ್, ನಿಮ್ಮ ಕೆಲವೊಂದು ಲೇಖನಗಳನ್ನು ನನ್ನ ಕಕ್ಷಿದಾರನೊಬ್ಬ ನಿರ್ವಹಿಸುತ್ತಿರುವ ತೆಲುಗು ಕೃಷಿ ಮಾಸ ಪತ್ರಿಕೆ - ಸೇದ್ಯ ಫಲಂ (ವ್ಯವಸಾಯದ ಫಲ) ಎನ್ನುವುದರಲ್ಲಿ ತೆಲುಗಿಗೆ ತರ್ಜುಮೆ ಮಾಡಿ ಪ್ರಕಟಿಸಬೇಕೆಂದುಕೊಳ್ಳುತ್ತಿದ್ದೇನೆ. ಹಾಗೆಯೇ ಇನ್ನೊಂದು ತೆಲುಗು ಮಾಸ ಪತ್ರಿಕೆ”ವಿನಿಯೋಗ ದರ್ಶಿನಿ’ಗೆ ಮಾಹಿತಿ ಹಕ್ಕು ಆಧರಿಸಿದ ಲೇಖನಗಳನ್ನು ಕಳುಹಿಸಬೇಕೆಂದುಕೊಂಡಿದ್ದೇನೆ. ಇದಕ್ಕೆ ನೀವು ಅನುಮತಿ ಕೊಟ್ಟರೆ ಈ ವಿಷಯದಲ್ಲಿ ನಾನು ಮುಂದುವರೆಯುತ್ತೇನೆ. ನನ್ನ ಈ-ಮೇಲ್ ವಿಳಾಸ ಹೀಗಿದೆ - sridharbandri@gmail.com; ಇಲ್ಲಿಗೆ ನಿಮ್ಮ ವ್ಯಕ್ತಿಗತ ವಿವರಗಳನ್ನು ಕಳುಹಿಸಿದಲ್ಲಿ ಪ್ರಕಟಣೆಗೆ ಅನುಕೂಲವಾಗುತ್ತದೆ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ