ಗಣೇಶ ಹಾಗು ನಾನು

ಗಣೇಶ ಹಾಗು ನಾನು

 ಗಣೇಶ ಹಾಗು ನಾನು============ ಬಾನುವಾರ ಏಳುವಾಗಲೆ ಸ್ವಲ್ಪ ತಡ , ಆದರೂ ಒಂದು ವಾಕಿಂಗ್ ಮುಗಿಸಿಬಿಡೋಣ ಎಂದು ಮನೆ ಬಿಟ್ಟು ನಾಲಕ್ಕು ಹೆಜ್ಜೆ ಇಟ್ಟಿದೆ. ನಮ್ಮಿಂದ ಮೂರನೆ ಮನೆ ಕೃಷ್ಣಮೂರ್ತಿ ಬಾಗಿಲಲ್ಲಿ ನಿಂತಿದ್ದರು. ನನ್ನ ಕಂಡು ನಗುತ್ತ ಮಾತನಾಡಿದರು, ಸ್ವಲ್ಪ ಉಡುಪಿ ಕಡೆ ಬಾಷೆ ಆದರು ಕನ್ನಡ ಅಂತಾದ್ರೆ ಅಡ್ಡಿಯಿಲ್ಲ. "ಏನು ಇಷ್ಟು ತಡ ಮಾಡಿ ಹೊರಟ್ಟಿದ್ದೀರಿ" "ಹೀಗೆ ವಾಕಿಂಗ್ ತಡ ಆಯ್ತು " ಅಂದವನು ಹೀಗೆ ಏನೊ ಮಾತನಾಡುತ್ತ ನಿಂತೆವು. ಅದೇನು ಬೆಳಗ್ಗೆ ಬೆಳಗ್ಗೆ ಬಾಗಿಲಲ್ಲಿ ನಿಂತಿರುವಿರಿ ಅಂದೆಅದೇನೊ ಯೋಚಿಸಿ, "ಒಳಗೆ ಬನ್ನಿ " ಎನ್ನುತ್ತ ಹೊರಟವರು ಹೇಳಿದರು"ಯಾರೊ ಮನೆಗೆ ಬರುವದಿತ್ತು, ರಿಲೇಶನ್ಸ್  ನಮ್ಮವರ ಬಳಗ" ಎಂದರುಸರಿ ಮತ್ತೆ ನಾನು ಬೇರೆ ಏತಕ್ಕೆ ಅಂದುಕೊಳ್ಳುವದರೊಳಗೆ, ಅವರ ಮನೆ ಮುಂದೆ ಭಯಂಕರ ಶಬ್ದ ಮಾಡುತ್ತ ಸ್ಕೂಟರ್ ಒಂದು ಬಂದು ನಿಂತಿತು. ನಾನು ಹಿಂದೆ ತಿರುಗಿ ನೋಡುವಾಗ ಆ ವ್ಯಕ್ತಿಯನ್ನು ಗಮನಿಸಿದೆ. ಸ್ಕೂಟರ್ ಮೇಲೆ ಅವರು ಕುಳಿತ ಶೈಲಿ, ಒಳ್ಳೆ ಇಲಿ ಮೇಲೆ ಕುಳಿತ ಗಣಪನಂತೆಯೆ ಅನ್ನಿಸಿ ನನಗೆ ಒಳಗೆ ನಗು. ಆತ ಮತ್ತು ಮತ್ತು ಅಷ್ಟೆ ಗಾತ್ರದ ಅವರ ಪತ್ನಿ ಸ್ಕೂಟರಿನಿಂದ ಇಳಿದು, ಸ್ಕೂಟರಿಗೆ ಸ್ಟಾಂಡ್ ಹಾಕುವಾಗ, ಪಾಪ ಸ್ಕೂಟರ್ ಉಸಿರು ಬಿಡುತ್ತಿತ್ತು.ಒಳಗೆ ಬಂದ ಅವರಿಗೆ, ಸ್ವಾಗತ ಕೋರುತ್ತ, ಕೃಷ್ಣಮೂರ್ತಿಯವರು, ನನ್ನನ್ನು ಅವರಿಗೆ ಪರಿಚಯಿಸಿದರು,"ಇವರು, ನಮ್ಮ ಪಕ್ಕದ ಮನೆಯವರು, ಹೀಗೆ ಬಂದಿದ್ದಾರೆ " ಎನ್ನುತ್ತ , ಮತ್ತೆ ಅವರನ್ನು ಪರಿಚಯಿಸುತ್ತ"ಇವರು ಗಣೇಶ ಅಂತ, ಪೇಪರಿನಲ್ಲಿ ಕೆಲಸ ಮಾಡುತ್ತಾರೆ, ಕನ್ನಡದಲ್ಲಿ ಏನಾದರು ಬರೆಯುತ್ತಿರುತ್ತಾರೆ, ಇವರು ಅವರ ಪತ್ನಿ" ಎನ್ನುತ್ತ ಪರಿಚಯಿಸಿದರು.ಹೀಗೆ ನಾನು ಸಹ ಅನಿವಾರ್ಯವಾಗಿ ಅವರ ಜೊತೆ ಒಳಗೆ ಹೋದೆ. ಎಲ್ಲರೂ ಕುಳಿತಂತೆ, ಎರಡು ನಿಮಿಶ ಮಾತುಕತೆ ಆಡುತ್ತಿರುವಂತೆ, ಕೃಷ್ಣಮೂರ್ತಿಯವರು"ನನಗೆ ಬ್ಯಾಂಕಿನ ಕೆಲಸ್ ಒಂದು ಸ್ವಲ್ಪ ಅರ್ಜೆಂಟ್ ಉಂಟು, ಅರ್ಧ ಗಂಟೆ ಅಷ್ಟೆ ಮುಗಿಸಿ ಬಿಡುವೆ, ಈ ನಡುವೆ ನೋಡಿ ಬ್ಯಾಂಕಿನ ಕೆಲಸ ಅಲ್ಲಿ ಮಾಡುವುದು ಸಾಲದೆ ಮನೆಗೂ ತರುವಂತಾಗಿದೆ, ನೀವಿಬ್ಬರು ಮಾತನಾಡುತ್ತ ಕುಳಿತಿರಿ, ಬೇಗ ಬರುವೆ" ಎನ್ನುತ್ತ , ಒಳಗಿನ ರೂಮಿಗೆ ಹೊರಟು ಹೋದರು. ಈಗ ನನಗೆ ಹೆಚ್ಚು ಕಡಿಮೆ ಕೃಷ್ಣಮೂರ್ತಿಯವರು ನನ್ನನ್ನು ಏಕೆ ಒಳಗೆ ಕರೆದರು ಎಂದು ಅರ್ಥವಾಗಿತ್ತು. ಹಾಗೆ ಈ ವ್ಯಕ್ತಿಯ ಬಗ್ಗೆ ಸ್ವಲ್ಪ ಭಯವು ಪ್ರಾರಂಭ.  ಸರಿ ವಿದಿ ಇಲ್ಲ ಅನ್ನುವಂತೆ ಇಬ್ಬರು ಮಾತನಾಡುತ್ತ ಕುಳಿತೆವು. ಎಲ್ಲಿ ಕೆಲಸ ಏನು ಬರೆಯುತ್ತೀರಿ, ಎನ್ನುತ ಮಾತನಾಡುತ್ತಿರುವಂತೆ, ಅವರು ಸಂಪದದಲ್ಲಿ ಬರೆಯುವ ಗಣೇಶರೆ ಎಂದು ನನಗೆ ಖಾತ್ರಿಯಾಗಿ ಹೋಯ್ತು. ಕಡೆಗೆ ಅವರನ್ನು ಕೇಳಿದೆ, ನೀವೆ ಅಲ್ಲವೆ ಸಂಪದದ ಗಣೇಶ, ಎಂದು,. ಅವರು ನಗುತ್ತ ಒಪ್ಪಿಕೊಂಡರು, ಏನೆಲ್ಲ ಮಾತು ಕೃಷ್ಣ ಕೃಷ್ಣ ಕೃಷ್ಣ ಬಗ್ಗೆ , ಅವರು ಬರೆದಿರುವ ಲಾಲ್ ಬಾಗಿನ ನಯಾಗರ ಬಗ್ಗೆ, ಎಲ್ಲರ ಬಗ್ಗೆ, ಹಾಗೆ ಸಪ್ತಗಿರಿಗಿ ಪೋನ್ ಹಚ್ಚೊಣವೆ ಎಂದು ಮೊಬೈಲ್ ಹುಡುಕಿದರೆ, ಅದೇನೊ ವಾಕಿಂಗ್ ಎಂದು ಹೊರಟಿದ್ದರಿಂದ ಬಿಟ್ಟು ಬಂದಿದ್ದೆ. ಅಷ್ಟರಲ್ಲಿ ಒಳಗಿನಿಂದ , ಗಮ ಗಮ ಅಂತ ತಿಂಡಿಯ ವಾಸನೆ, ನನ್ನನ್ನು ಕೆರಳಿಸಿಬಿಟ್ಟಿತ್ತು.  ಕೃಷ್ಣಮೂರ್ತಿಯವರ ಮನೆಯಾಕೆ, ಎರಡು ಕೈಲಿ ತಿಂಡಿಯ ಪ್ಲೇಟ್ ಹಿಡಿದು ಹೊರಬಂದರು, ತಟ್ಟೆ ತುಂಬಾ ಕಾಣುತ್ತಿದ್ದ ನಾಲಕ್ಕು ನಾಲಕ್ಕು ಪೂರಿ, ಸಾಗು ಚಟ್ನಿ, ಎಲ್ಲವೂ ಮನ ತುಂಬಿಕೊಳ್ಳುತ್ತಿತ್ತು, ಮೊದಲು ಗಣೇಶರ ಮುಂದೆ ತಟ್ಟೆ ಇಟ್ಟು ಉಪಚಾರ ಮಾಡಿದರು, ನನ್ನ ಕಡೆ ನೋಡುವಾಗ ನಾನಾದರೊ ಸುಮ್ಮನೆ ಉಪಚಾರಕ್ಕೆ ಹೇಳಿದೆ"ಅಯ್ಯೋ ನನ್ನದಿನ್ನು ಸ್ನಾನವೆ ಆಗಿಲ್ಲವೆ, ವಾಕಿಂಗ್ ಅಂತ ಹೊರಟಿದ್ದು," ಎಂದುಆಕೆ ಸ್ವಲ್ಪ ಅನುಮಾನಪಟ್ಟರು ಹೇಗೆ ಕೊಡುವುದು ಎಂದು, ನನಗೆ ಗಾಭರಿ ಆಯಿತು, ಅನ್ಯಾಯವಾಗಿ ಅಡ್ಡ ನುಡಿದು ಬಿಟ್ಟೆ, ಇನ್ನು ಆ ತಟ್ಟೆ ಹಾಗೆ ಒಳಗೆ ಹೋದರೆ , ಎಂತಹ ನಿರಾಸೆ, ತಕ್ಷಣ ಹೇಳಿದೆ"ಇರಲಿ ಬಿಡಿ, ಸಂಕೋಚ ಪಡಬೇಡಿ, ಈ ತಿಂಡಿಯನ್ನು ನಿನ್ನೆಯ ಲೆಕ್ಕಕ್ಕೆ ಹಾಕಿಕೊಂಡು ತಿಂದು ಬಿಡುವೆ, ಇಡಿ" ಎಂದು, ಆಕೆ ನಗುತ್ತ ತಟ್ಟೆ ಮುಂದೆ ಇಟ್ಟು ಹೊರಟರು.ಗಣೇಶರ ಗಮನ ಆಗಲೆ ತಟ್ಟೆಯ ಕಡೆ, ತಿನ್ನುತ್ತಲೆ ಎಂದರು"ನೋಡಿ ಪೂರಿ ಹಾಗು ಸಾಗು ಚಟ್ನಿಯ ಜೊತೆ ಸೂಪರ್ ಆಗಿದೆ, ಆದರೆ ಒಂದೆ ದುಃಖ ಪೂರಿಯ ಸೈಜ್ ಕಡಿಮೆ  ,  ಹೋಳಿಗೆಯ ಸೈಜ್ ಇರಬೇಕಾಗಿತ್ತು"ನಾನು ಹೇಳಿದೆ"ಇರಲಿ ಬಿಡಿ ಅಡ್ಜೆಷ್ಟ್ ಮಾಡಿಕೊಳ್ಳೋಣ, ಇನ್ನೊಮ್ಮೆ ಹಾಕಿಸಿಕೊಂಡು ತಿಂದರಾಯಿತು" ಎಂದು, ಒಳಗೆ ಕೇಳಿಸಿತೋ ಏನೊ, ಮತ್ತೆ ತಟ್ಟೆಯಲ್ಲಿ ಪೂರಿ ಹಾಗು ಪಾತ್ರೆಯಲ್ಲಿ ಸಾಗು ಹಿಡಿದು ಹೊರಬಂದರು ಆಕೆ. ಒಳಗಿನಿಂದ ಗಣೇಶರ ಪತ್ನಿಯ ದ್ವನಿ ಕೇಳಿಸುತ್ತಿತ್ತು, "ಅವರಿಗೆ ಸಾಕಮ್ಮ ಹೆಚ್ಚು ತಿಂದರೆ ಆಗಲ್ಲ, ಗೊತ್ತಾಗಲ್ಲ ತಿಂದುಬಿಡುತ್ತಾರೆ" ಎಂದುಗಣೇಶರಿಗೆ ಮತ್ತೆ ನಾಲಕ್ಕು ಪೂರಿ ಹಾಕಿದ ಆಕೆ, ಮತ್ತೆ ಅಲ್ಲಿಯೆ ನಿಂತು ನನ್ನತ್ತ ತಿರುಗಿ ಕೇಳಿದರು"ನಿಮಗೆ ಮತ್ತೆರಡು ಹಾಕ್ಲ?" ಎಂದು. ನಾನು ಸಂಕೋಚ ಆದರು ಬಿಡುವೆನೆ, ಹೇಳಿದೆ"ಬೇಡ ಬಿಡಿ, ಪುನಃ ನೀವು ಇಲ್ಲಿಯವರೆಗೂ ಬರಬೇಕು" ಎಂದುಆಕೆಗೆ ಬೇರೆ ದಾರಿ ಇರಲಿಲ್ಲ, ನನ್ನ ಬಳಿ ಬಂದು ಮತ್ತೆರಡು ಪೂರಿ ಹಾಕಿದರು. ನಾನು ಸಂಕೋಚಕ್ಕೆಂದು ನುಡಿದೆ"ಪಾಪ ನಿಮಗೆ  ನನ್ನಿಂದ ತೊಂದರೆಯಾಯಿತು, ರಜಾ ದಿನ ಬೆಳಗ್ಗೆ: ಎಂದು. ಆಕೆಯಂತು ಹೇಳಿದರು"ಇಲ್ಲ ಹಾಗೇನು ಇಲ್ಲ, ನಿಮ್ಮಗೆ ಅಂತ ಬೇರೆ ಮಾಡಿದ್ದಲ್ಲ, ಇವರೆಲ್ಲ ಬರುವರಿದ್ದರು" ಛೆ!  ಈ ಮಾತಿನ ಅರ್ಥವೇನೊ, ಬೇಡ , ಅರ್ಥ ಯೋಚಿಸಿದರೆ ಪೂರಿಯ ರುಚಿ ಕೆಟ್ಟು ಹೋಗುತ್ತಲ್ಲ. ತಿನ್ನುತ್ತ ನಾನು ಗಣೇಶ ಇಬ್ಬರು, ಅವರು ಮಾಡಿದ್ದ ಬಿಸ್ಕತ್ ಕೇಕ್ ಬಗ್ಗೆ ಚರ್ಚಿಸಿದೆವು. ಅಷ್ಟರಲ್ಲಿ ಕಾಫಿ ಬಂದಿತು, ಸೊಗಸಾಗಿತ್ತು, ಹೀಗೆ ಕಾಲ ಕಳೆಯುವದರಲ್ಲಿ, ಗಣೇಶರು "ನಾವಿನ್ನು ಹೊರಡುತ್ತೇವೆ" ಎಂದರು ನನ್ನ ಜೊತೆ. ಹಾಗೆ ಒಳಗಿದ್ದ ಅವರ ಪತ್ನಿಯತ್ತ ಕೂಗಿದರು"ಇನ್ನು ಹೊರಡೋಣವೆ" ಎನ್ನುತ್ತ. ಅಷ್ಟರಲ್ಲಿ ಕೃಷ್ಣಮೂರ್ತಿಯವರು ಹೊರಬಂದರು, "ಸಾರಿ ನಾನೇನೊ ಬಿಜಿಯಾಗಿಬಿಟ್ಟೆ, ಮತ್ತೊಮ್ಮೆ ಬನ್ನಿ ನಿಧಾನವಾಗಿ" ಎಂದರು. ಗಣೇಶರ ಸ್ಕೂಟರ್ ಸ್ಟಾರ್ಟ್ ಆಯಿತು. ನನಗೆ ಸಂಭ್ರಮ. ಗಣೇಶ ಗಣೇಶ ಎನ್ನುತ್ತಿದೆ.... "ರೀ ಇದೇನ್ರಿ  ರಾತ್ರಿ ಪೂರ್ತಿ ನಿದ್ದೆ ಮಾಡಿದ್ದು ಸಾಲದು ಎಂದು ಬೆಳಗ್ಗೆ ಎದ್ದು ಮತ್ತೆ ಕುರ್ಚಿಯಲ್ಲಿ ತೂಕಡಿಸುತ್ತಿದ್ದೀರಿ" ಎಂದು ನನ್ನವಳು ಕೂಗುತ್ತಿರುವ ಧ್ವನಿಎಚ್ಚರವಾಯಿತು, ನೋಡುತ್ತೇನೆ, ಮತ್ತೆ ಕುರ್ಚಿಯಲ್ಲಿ ಕುಳಿತು ಮಂಪರಿನಲ್ಲಿ ಕನಸು, ಈ ನಡುವೆ ಅದೇನೊ, ರಾತ್ರಿ ನಿದ್ದೆಯ ನಂತರ, ಬೆಳಗ್ಗೆ ಕಾಫಿ ಕುಡಿದಾದ ಮೇಲೆ ಮತ್ತೆ ಕುರ್ಚಿಯಲ್ಲಿ ಒಂದು ಕೊಸರು ನಿದ್ದೆ ಮಾಡುವ ಅಭ್ಯಾಸ ಆಗಿ ಹೋಗಿತ್ತು. ನನ್ನಾಕೆ ಕಸ ಗುಡಿಸಲು ಪೊರಕೆ ಜೊತೆ ಸಿದ್ದಳಾಗಿ ನಿಂತಿದ್ದಳು.  ಅಲ್ಲವೆ ಈ ರೀತಿ ಕುರ್ಚಿಯಲ್ಲಿ ಕುಳಿತೆ ಕನಸು ಬಿತ್ತು ನೋಡು, ಎನ್ನುತ್ತ ವಾಕಿಂಗ್ ಹೋಗಿದ್ದು, ಪಕ್ಕದ..ಪಕ್ಕದ..ಪಕ್ಕದ ಮನೆಯಲ್ಲಿ ಭರ್ಜರಿಪೂರಿ ಸಾಗು ತಿಂದಿದ್ದನ್ನು ವರ್ಣಿಸಿದೆ. ಸ್ನಾನಕ್ಕೆ ಹೊರಡೋಣ ಅನ್ನುತ್ತ ಎದ್ದೆ"ರೀ ಈ ನಡುವೆ ನೀವು ಪೂರ ಸೋಮಾರಿ ಆಗುತ್ತಿದ್ದೀರಿ, ರಜಾ ದಿನವಾದರು ಒಂದು ವಾಕಿಂಗ್ ಹೋಗಿ ಬರಬಾರದ?" ಎಂದಳು"ಈಗಿನ್ನು ವಾಕಿಂಗ್ ಆಯಿತಲ್ಲೆ" ಎಂದೆ ನಗುತ್ತ"ಯಾವಾಗ ಹೋದಿರಿ ಇಲ್ಲೆ ಕುಳಿತ್ತಿದ್ದೀರಲ್ಲ" ಎಂದಳು"ಹೇಳಲಿಲ್ಲವೆ, ಈಗಿನ್ನು ನಿದ್ದೆಯ ಮಂಪರಿನಲ್ಲಿ ಬಿದ್ದ ಕನಸಿನಲ್ಲೆ ವಾಕಿಂಗ್ ಮುಗಿಸಿದೆನಲ್ಲ" ಎಂದು ನಗುತ್ತ ಎದ್ದವನು, "ಹೋಗಲಿ ಇವತ್ತು ಬೆಳಗಿನ ತಿಂಡಿಗೆ ಏನು ಮಾಡುವೆ " ಎಂದೆ"ತಿಂಡಿ, ಆಗಲೆ ತಿಂಡಿ ತಿಂದು ಆಯ್ತಲ್ಲ , ಮತ್ತೆ ಯಾವ ತಿಂಡಿ" ಎಂದಳು ನನ್ನಾಕೆ, ಸೀರಿಯಸ್ ಆಗಿ"ಏ ಯಾವಗ ತಿಂದೆನೆ, ಇನ್ನು ನೀನು ತಿಂಡಿ ಕೊಟ್ಟೆ ಇಲ್ಲ" ಎಂದೆ, ಆಶ್ಚರ್ಯದಿಂದ"ನೀವೆ ಹೇಳಿದಿರಲ್ಲ, ವಾಕಿಂಗ್ ಮುಗಿಸಿ, ಕೃಷ್ಣಮೂರ್ತಿ ಮನೆಯಲ್ಲಿ ಎಂಟು ಪೂರಿ ತಿಂದು ಬಂದೆ ಎಂದು, ತಿಂಡಿ ಆಯ್ತಲ್ಲ ಬಿಡಿ" ಎನ್ನುತ್ತ, ಒಳ ಹೋದಳುನಾನು ಬೆಪ್ಪಾಗಿ ನಿಂತೆ.

Rating
No votes yet

Comments

Submitted by venkatb83 Fri, 09/27/2013 - 17:51

ನೀವೆ ಹೇಳಿದಿರಲ್ಲ, ವಾಕಿಂಗ್ ಮುಗಿಸಿ, ಕೃಷ್ಣಮೂರ್ತಿ ಮನೆಯಲ್ಲಿ ಎಂಟು ಪೂರಿ ತಿಂದು ಬಂದೆ ಎಂದು, ತಿಂಡಿ ಆಯ್ತಲ್ಲ ಬಿಡಿ"

ಹೋಳಿಗೆ -ದೊಡ್ದಪ್ಪಳ ಸೈಜ್ ಇದ್ದ ಪೂರಿ -ಮತ್ತು ಅದರ ದೊಡ್ಡಣ್ಣ ದೋಸೆ ಅಳತೆ ಅಗಲ ಈಗೀಗ ರೇಟು ಹೆಚ್ಚಿ - ಸ್ಲಿಮ್ ಆಗುತ್ತಿವೆ ..!!

>>>.ಗುರುಗಳೇ ನೀವ್ ಈ ಸಪ್ತಗಿರಿವಾಸಿ ನಂಬರ್ ಮರೆತಿಲ್ಲವಸ್ಟೆ ....!!

;())))) ಮೊದಲಿಗೆ ಓದುತ್ತಾ ಓದುತ್ತಾ -ನನಗೆ ನೀವು ಅಪ್ಪಿ ತಪ್ಪಿ ಗಣೇಶ್ ಅಣ್ಣ ಆವರಣ ಅಚಾನಕ್ ಆಗಿ ಭೇಟಿ ಆಗಿ ಆ ಧಿವ್ಯ ಅನುಭವ - ಆ ಮೃತ ಘಳಿಗೆಗೆ ಒಡೆಯರಾದಿರಿ ಎಂದುಕೊಂಡೆ - ಆದರೆ ಜಗತ್ತಿನ ಯಾವುದೇ ತನಿಖಾ ಸಂಸ್ಥೆಗೆ ಸೆಡ್ಡು ಹೊಡೆಯುವ ಗಣೇಶ್ ಅಣ್ಣ ಅವರು ಕನಸಿನಲ್ಲಿ ಬಂದು ದರ್ಶನ ಕೊಟ್ಟಿರುವರು ಎಂದು ತಿಳಿದು ಮತ್ತು ಆ ದಿವ್ಯ ಅನುಭವ -ಮತ್ತು ಅಮೃತ ಘಳಿಗೆ ನಂಗೆ (ನಂಗೆ ಮಾತ್ರ ಮೊದಲು )ಬರಲಿ ಎಂದು ಯೋಚಿಸಿದೆ ... !!

ಗಣೇಶ್ ಅಣ್ಣ ಅವರು ಅವರ ಸರಿಯಾದ/ ನಿಜವಾದ ...!! ಹೆಸರು ಮತ್ತು ವಯಸ್ಸು ತಿಳಿಸಿದರೆ ಅವರಣನ್ ಪತ್ತೆ ಹಚ್ಚೋದು ಅಷ್ಟೇನು ಕಷ್ಟ ಅಲ್ಲ ..!!

ಮುಸ್ಸಂಜೇಲಿ ಓದುತ್ತ ಒಳ್ಳೆ ಮಜಾ ಬಂತು ...
ಶೀರ್ಷಿಕೆ ನೋಡಿಯೇ ಮೊದಲಿಗೆ ಗಣೇಶ್ ಅಣ್ಣ ಅವರ ಬಗ್ಗೆಯ ಅನಿಸಿತು ಆಮೇಲೆ ನೀವ್ ಈ ನಡುವೆ ಬರೆದ ಕೃಷ್ಣ -ರಾಮ - ಗಣೇಶ ಬಗ್ಗೆಯೇ ಮತ್ತೊಂದು ಬರಹವಾ ಎಂದುಕೊಂಡೆ -ಓಪನ್ ಮಾಡಿದರೆ -ಗಣೇಶ ಅಣ್ಣ ಅವರ ಬಗ್ಗೆಯೇ ...!!
ಆಪರೇಶನ್ ಗಣೇಶ್ ಹಂಟ್ ೩ -( ಈ ಮೊದಲು ನಾನು -ರಾ ಮೊ ಅವರು ಮಾಡಿದ್ದು )ಶುರು ಮಾಡೋಣವೆ?
ಶುಭವಾಗಲಿ
\।

Submitted by partha1059 Sat, 09/28/2013 - 11:40

In reply to by venkatb83

ಸಪ್ತಗಿರಿ ಅಂತೂ ದೀರ್ಘ ಕಾಲದ ನಂತರ ನನ್ನ ಬರಹದ ಪ್ರತಿಕ್ರಿಯೆ ಕಾಲಂಗೆ ಕಾಲಿಟ್ಟಿರಿ, ಸಂತಸವಾಯಿತು. ಈ ನಡುವೆ ನೀವು ಅಪರೂಪವೆ ಅಲ್ಲೊಮ್ಮೆ ಇಲ್ಲೊಮ್ಮೆ ಬಂದರು , ಯಾವುದೊ ಪ್ರತಿಕ್ರಿಯೆಗಳನ್ನು ನೋಡಿ ಆರಿಸಿ ಅದಕ್ಕೊಂದು ಉಪಪ್ರತಿಗ್ರಿಯೆ ಕೊಟ್ಟರೆ ನಂತರ ಮಾಯ!
ಗಣೇಶರವರನ್ನು ಹುಡುಕುತ್ತ ಹೋಗಬೇಡಿ ಬಿಡಿ, ಅವರೆ ಒಂದು ದಿನ ಎದುರಿಗೆ ಬರುವರು ನಿಮ್ಮ ಮದುವೆಗೆ ಅಹ್ವಾನಿಸಿ !
"ಈ ನಡುವೆ ಬರೆದ ಕೃಷ್ಣ -ರಾಮ - ಗಣೇಶ ಬಗ್ಗೆಯೇ ಮತ್ತೊಂದು ಬರಹವಾ ಎಂದುಕೊಂಡೆ"
ಒಮ್ಮೆ ನೀವೆ ಕೇಳಿದ್ದೀರಿ, ರಾಮಾಯಣ , ಮಹಾಬಾರತದ ಬಗ್ಗೆ ಬರಹಗಳನ್ನು ಬರೆಯಿರಿ ಎಂದು !
ಒಂದು ಮಾತಂತು ನಿಜ, ಶೀರ್ಷಿಕೆ ನೋಡುವಾಗಲೆ ಇದು ಇಂತದೆ ಬರಹ ಎಂದು ಕೊಳ್ಳುವರು ಬಹಳ, ನೀವಾದರು ಓದಿ ನೋಡಿ ಅದಕ್ಕೊಂದು ಪ್ರತಿಕ್ರಿಯೆ ನೀಡಿದ್ದೀರಿ. ಆದರೆ ಕೆಲವು ಸಾರಿ , ಶೀರ್ಷಿಕೆ ನೋಡುವಾಗಲೆ, ಅದರೊಳಗೆ ಏನಿದೆ ಎಂದು ಇಣಿಕಿ ಸಹ ನೋಡದೆ ಎರಡರೆಡು ಪುಟ ಪ್ರತಿಕ್ರಿಯೆ ಒಗೆದು ಹೋಗುತ್ತಾರೆ :-)
ಈಗ ಬರೆಯುತ್ತಿರುವ ಕೃಷ್ಣ... ಸಹ ಹದಿನೆಂಟು ಅದ್ಯಾಯದ್ದು !! ಆದರೆ ಬರಹ ಕುರಿತಾದ ವಿಮರ್ಷೆ ಕಡಿಮೆಯೆ !
ಇರಲಿ ಬಿಡಿ !
ಇನ್ನು ಫೇಸ್ ಬುಕ್ ಮುಂತಾದ ಕಡೆಯು ಅಷ್ಟೆ ಮೋದಿ-ರಾಹುಲ್ ಎನ್ನುವ ಪದ ನೀವು ಬಳಸಿದರೆ ಕಡಿಮೆ ಎಂದರೂ ನೂರು ಲೈಕ್, ಹತ್ತಿಪ್ಪತು ಪ್ರತಿಕ್ರಿಯೆ ಇಲ್ಲದಿದ್ದರೆ... ಅಷ್ಟೆ ಬರಹದ ಹಣೆಬರಹ. ಏನು ಮಾಡುವ ಹಾಗಿಲ್ಲ... trend ಅಂದುಕೊಳ್ಳುವುದು.

Submitted by ಗಣೇಶ Sun, 09/29/2013 - 22:01

In reply to by venkatb83

-ಆ ಧಿವ್ಯ ಅನುಭವ - ಆ ಮೃತ ಘಳಿಗೆಗೆ ಒಡೆಯರಾದಿರಿ ಎಂದುಕೊಂಡೆ..:)
- ಮೃತ ಘಳಿಗೆ !?:) ಸಪ್ತಗಿರಿವಾಸಿ, ತುಂಬಾ ದೊಡ್ಡ ಮಾತು. ನಾನು ಸಾಮಾನ್ಯ ಮಾನವ. ಆದ್ದರಿಂದ ಪತ್ತೆ ಹಚ್ಚೋದು ಕಷ್ಟ. ಪಾರ್ಥರು ತಿಳಿಸಿದಂತೆ ನಿಮ್ಮ ಮದುವೆಯಲ್ಲಿ ಭೇಟಿಯಾಗೋಣ.. ಕೃಷ್ಣ, ಸೃಷ್ಠಿ, ಲಾಲ್ ಬಾಗ್..ಬಗ್ಗೆ ಅಲ್ಲೇ ಮಾತನಾಡೋಣ..ಏನಂತೀರಿ:)

Submitted by sathishnasa Fri, 09/27/2013 - 20:50

ಹಗಲಲ್ಲಿ ಕಂಡ ಕನಸು ನಿಜ ಆಗುತ್ತೆ ಅಂತಾರೆ ಈ ಭಾನುವಾರ ಗಣೇಶ್ ರವರು ಸಿಕ್ಕರು ಸಿಗಬಹುದು......!!! .....ಸತೀಶ್

Submitted by ಗಣೇಶ Sun, 09/29/2013 - 21:45

In reply to by sathishnasa

:) ಈ ಭಾನುವಾರ ಭೇಟಿಯಾಗಿರುತ್ತಿದ್ದರೆ.......
ಮುಂದಿನ ಸಂಡೆ ಪುನಃ ಭೇಟಿಯಾಗಲು ಹೋದರೆ, ನನ್ನ ಸ್ಕೂಟರ್ ಸೌಂಡ್ ಕೇಳಿದ ಕೂಡಲೇ ಜತೆಯಲ್ಲಿದ್ದ ಸಪ್ತಗಿರಿವಾಸಿಗೆ "ಭಾಗ್ ವೆಂಕಟ್ ಭಾಗ್, ಲಾಲ್ ಬಾಗ್ ಬಗ್ಗೆ ಕೊರೆಯಲು ಗಣೇಶರು ಬಂದರು" ಎಂದು ಪಾರ್ಥರು ’ಧೋತಿ ಫಾಡ್‌ಕೆ’ ಓಡುವರು..:) :)

Submitted by ಗಣೇಶ Sun, 09/29/2013 - 21:36

:) :) ಗೋವರ್ಧನ ಗಿರಿ ಎತ್ತುವ ಬದಲು ಪಾರ್ಥಸಾರಥಿ ಗಣೇಶನ ವಿಷಯ ಎತ್ತಿದ್ದಾರೆ..:) ಕೃಷ್ಣನ ಸರಣಿ ನಡುವೆ ನನಗೂ ಒಂದು ಸ್ಥಳ ನೀಡಿದ್ದಕ್ಕೆ ಪಾರ್ಥರಿಗೆ ತುಂಬಾ ಧನ್ಯವಾದಗಳು.
ಬಹುಷಃ ನಿಮಗೆ ನನ್ನ ಬಗ್ಗೆ ಯಾರೋ ವರದಿ ನೀಡುತ್ತಿದ್ದಾರೆ! ಹೆಚ್ಚುಕಮ್ಮಿ ಅದೇ ಹೆಸರಿನ ವ್ಯಕ್ತಿಯ ಮನೆಗೆ ಪತ್ನಿಯೊಂದಿಗೆ ಆಗಾಗ ಹೋಗುತ್ತಿರುವೆ.(ತೂಕ ಸರಿಯಾಗಲು ಹಿಂದೆ ಪತ್ನಿ ಕುಳಿತುಕೊಳ್ಳದಿದ್ದರೆ ಸ್ಕೂಟರ್ ಮುಂದೆ ಹೋಗುವುದೇ ಇಲ್ಲರೀ :( ) ನೀವು ಬರೆದುದರಲ್ಲಿ ಸ್ವಲ್ಪ ತಿದ್ದುಪಡಿ- ನೇರ ಅಡುಗೆಕೋಣೆಗೇ ನುಗ್ಗುವೆ! ಡೈನಿಂಗ್ ಟೇಬ್‌ಲ್ ಇಲ್ಲದಿದ್ದರೆ,ನೆಲ ಆದರೂ ಪರವಾಗಿಲ್ಲ- ಬಾಣಲೆಯಿಂದ ನೇರ ತಟ್ಟೆಗೆ ಬಿಸಿಬಿಸಿ ಪೂರಿ..ತಿನ್ನುವ ಮಜವೇ ಬೇರೆ.
-".. ಈ ತಿಂಡಿಯನ್ನು ನಿನ್ನೆಯ ಲೆಕ್ಕಕ್ಕೆ ಹಾಕಿಕೊಂಡು ತಿಂದು ಬಿಡುವೆ, ಇಡಿ"!! :)
ಪಾರ್ಥರೆ, ಛೇ.. ಈ ಐಡಿಯಾ ನೀವು ಮೊದಲೇ ನನಗೆ ಕೊಡಬೇಕಿತ್ತು:( ಪರವಾಗಿಲ್ಲ, ಇನ್ನು ಮುಂದೆ ಉಪಯೋಗಿಸಿಕೊಳ್ಳುವೆ. :)
-.." ಸ್ಕೂಟರಿಗೆ ಸ್ಟಾಂಡ್ ಹಾಕುವಾಗ, ಪಾಪ ಸ್ಕೂಟರ್ ಉಸಿರು ಬಿಡುತ್ತಿತ್ತು." :) :)
ಹಾಗೆ ಹೊಟ್ಟೆಬಿರಿಯ ತಿಂದರೆ ಏದುಸಿರು ಬಿಡದೇ ಏನು? ನಾನಲ್ಲ..ಈ ಪರ್ಕುಟ್ ಸ್ಕೂಟರ್ ಕಣ್ಣಿಗೆ ಪೆಟ್ರೋಲ್ ಬಂಕ್ ಬಿತ್ತು ಅಂದರೆ ಮುಂದೆ ಹೋಗಲೇ ಕೇಳುವುದಿಲ್ಲ. ಪೂರಿಸಾಗು ನಾನು ತುಂಬಿಸ್ಕೊಂಡ ಹಾಗೇ, ಪೆಟ್ರೋಲ್ ಏರ್ ಅದು ತುಂಬಿಸಿಕೊಳ್ಳುವುದು.:(
ಏನೇ ಅನ್ನಿ ಪಾರ್ಥರೆ, ಕನಸಲ್ಲೂ ನೀವು ನನ್ನ(ಹಾಗೂ ನಿಮ್ಮ:) ) ಇಷ್ಟದ ಸಬ್ಜೆಕ್ಟೇ ತೆಗೆದುಕೊಂಡಿದ್ದೀರಿ. ತಿಂದರೆ ಐದೂ ಬೆರಳಲ್ಲಿ ಹೊಟ್ಟೆತುಂಬಾ ತಿನ್ನಬೇಕು. ಬೇಕಾ ಬೇಡವಾ ಅಂತ ಎರಡೇ ಬೆರಳಲ್ಲಿ ತಿನ್ನುವವರನ್ನು ಕಂಡರೆ ನನಗೆ ಆಗುವುದಿಲ್ಲ. ಎಲ್ಲಾ ಗಣೇಶ ಹೆಸರಿನ ಮಹಿಮೆಯಿರಬೇಕು. ಆದರೆ ಅದೇ ಗಣೇಶನ ಹೆಸರಲ್ಲಿ "ಸಂಕಷ್ಠಿ ಉಪವಾಸ" ಮಾಡುತ್ತಾರಲ್ಲಾ! ಎರಡೂ ಕೈಯಲ್ಲಿ ತಿನ್ನಿ ಎಂದು ಮೋದಕ ಇತ್ಯಾದಿ ಹಿಡಕೊಂಡು,ಸಿಕ್ಕಿದ್ದನ್ನೆಲ್ಲಾ ತಿನ್ನುವ ಇಲಿಯನ್ನು ವಾಹನ ಮಾಡಿಕೊಂಡವನ ಹೆಸರಲ್ಲಿ ಉಪವಾಸ! ಇದಕ್ಕಿಂತ ಬೇಸರದ ವಿಷಯ ಗಣೇಶನಿಗೆ ಬೇರಿನ್ನೇನಾದರೂ ಇದೆಯಾ? ತಿನ್ನುವ ವಿಷಯದಲ್ಲಿ ಬರೆಯಲು ಬೇಕಾದಷ್ಟಿದೆ..ಆದರೆ ಪಾರ್ಥರಿಗೆ ಗೋವರ್ಧನಗಿರಿ ಬಗ್ಗೆ ಬರೆಯಲು ಬಿಡುವು ಕೊಡಬೇಕಲ್ಲ.
-"ತಿಂಡಿ ಆಯ್ತಲ್ಲ ಬಿಡಿ" ಎನ್ನುತ್ತ, ಒಳ ಹೋದಳುನಾನು ಬೆಪ್ಪಾಗಿ ನಿಂತೆ." :) :) :)