ಕಾಗಕ್ಕ -ಗುಬ್ಬಕ್ಕನ ಕಥೆ..

ಕಾಗಕ್ಕ -ಗುಬ್ಬಕ್ಕನ ಕಥೆ..

ಆಗಿನ್ನೂ ನಾವು ಐದಾರು ವರ್ಷದ ಮಕ್ಕಳು, ಮನೆಯಲ್ಲಿ ಅಕ್ಷಾರಾಭ್ಯಾಸದ ಜೊತೆಗೆ ನಮ್ಮ ಆಟೋಟಗಳು ಸಾಗಿದ್ದವು. ಮನೆಯಲ್ಲಿ ಯಾರಾದರೂ ಹಿರೀಯರಿದ್ದರೆ ನಮ್ಮನ್ನೆಲ್ಲ ಕಥೆ ಹೇಳಿ ಮಲಗಿಸುತ್ತಿದ್ದುರು. ನಾವು ಅಷ್ಟೇ ಮನೆಗೆ ಯಾರಾದರೂ ಹಿರೀಯರು ಬರಲಿ, ಅಥವಾ ನಾವು ಯಾರದ್ದಾದರೂ ಹಿರಿಯರಿದ್ದ ಮನೆಗೆ ಹೋಗಲಿ, ಅಲ್ಲಿದ್ದ ಹಿರಿಯರಿಗೆ ಕಥೆ ಹೇಳುವಂತೆ ಒತ್ತಾಯಿಸುತ್ತಿದ್ದೆವು. ನಮ್ಮ ಮನೆಯಲ್ಲಿ ತಂದೆಯವರು ರಾಮಾಯಣ, ಮಹಾಭಾರತದಲ್ಲಿ ಬರುವ ಕಥೆಗಳನ್ನು ಹೇಳುತಿದ್ದರೂ, ಪಂಚತಂತ್ರದ ಕಥೆಗಳನ್ನು ಹೇಳಿದ್ದು ಕಡಿಮೆಯೇ. ನಾವು ಚಿಕ್ಕವರಿದ್ದಾಗ ನಮ್ಮ ಊರಲ್ಲಿ, ನಮ್ಮ ಮನೆಯಿಂದ ಒಂದೆರಡು ಮನೆಗಳಾಚೆ ಒಬ್ಬ ವಯಸ್ಸಾದ ಮಹಿಳೆಯಿದ್ದಳು. ಆಕೆಗಾಗ ೮೦ರ ವಯಸ್ಸು, ಅವಳಿಗೆ ಚಿಕ್ಕ ಮಕ್ಕಳೆಂದರೆ ತುಂಬಾ ಪ್ರೀತಿ. ನಾವು ಸಾಯಂಕಾಲ ಆಗುತ್ತಿದ್ದ ಹಾಗೆ ಆಕೆಯ ಮನೆಯ ಕಡೆ ಹೋಗಿ ಕಥೆ ಹೇಳುವಂತೆ ಒತ್ತಾಯಿಸಿದಾಗ ಆಕೆ ನಮಗೆ ಪಂಚತಂತ್ರದ ಕಥೆಯಬ್ಬು ಹೇಳುತ್ತಿದ್ದರು, ನಾವು ಕೂಡ ಅಷ್ಟೇ ಆಸಕ್ತಿಯಿಂದ ಅವಳು ಹೇಳುವ ಕಥೆಗಳನ್ನು ಕೇಳುತ್ತಿದ್ದೆವು. ನಮಗೆಲ್ಲ ಆಕೆ ಕಥೆ ಹೇಳುವ ಕಥೆ ಅಜ್ಜಿಯಾಗಿದ್ದಳೇ ಹೊರತು ಆಕೆಯ ಹೆಸರಾಗಲಿ, ಆಕೆಯ ಪೂರ್ವಾಪರ ವಿಷಯಗಳಾಗಲಿ ತಿಳಿದಿರಲಿಲ್ಲ. ತಿಳಿಯುವ ವಯಸ್ಸು ಅದಾಗಿರಲಿಲ್ಲ. ಒಮ್ಮೆ ಆಕೆ ಕಾಗೆ ಮತ್ತು ಗುಬ್ಬಿಗಳನ್ನು ಸೇರಿಸಿ ಒಂದು ಕಥೆ ಹೇಳಿದ್ದಳು, ಅದೇ ಕಾಗಕ್ಕ-ಗುಬ್ಬಕ್ಕರ ಕಥೆ. ಕಾಗೆ ಗುಬ್ಬಿಗಳು ಹೇಗೆ ಸ್ನೇಹಿತರಾಗಿದ್ದರು, ಒಮ್ಮೆ ಕಾಗೆ ಗುಬ್ಬಿಯ ಮೊಟ್ಟೆಯನ್ನು ಕದ್ದು ತಿಂದದ್ದರಿಂದ ಅವರಿಬ್ಬರಲ್ಲಿ ಧ್ವೇಷ ಬೆಳೆಯಿತು ಎನ್ನುವುದರ ಬಗ್ಗೆ ಆ ಕಥೆ.

 

ಇಂದೇಕೋ ಆ ಕಥೆ ತುಂಬಾ ನೆನಪಾಗುತಿತ್ತು. ಆ ಕಥೆ ನೆನಪಾಗಲು ಎರಡು ಮುಖ್ಯ ಕಾರಣಗಳಿವೆ. ಒಂದು ಕಥೆ ಹೇಳುವವರ ಬಗ್ಗೆ, ಇನ್ನೊಂದು ಕಥೆಯಲ್ಲಿ ಬಳಕೆಯಾಗುವ ಪ್ರಾಣಿ ಪಕ್ಷಿಗಳ ಬಗ್ಗೆ. ಹಿಂದೆಲ್ಲ ನಾವು ತಂದೆ-ತಾಯಿ, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು, ಚಿಕ್ಕಪ್ಪ-ದೊಡ್ಡಪ್ಪಂದಿರು, ಅಜ್ಜ-ಅಜ್ಜಿ ಹೀಗೆ ಒಂದು ದೊಡ್ಡ ಅವಿಭಕ್ತ ಕುಟುಂಬದಲ್ಲಿ ಜೀವಿಸುತ್ತಾ ಇದ್ವಿ. ಆಗೆಲ್ಲ ಅಪ್ಪ ಅಮ್ಮಂದಿರು ತಮ್ಮ ಕೆಲಸ ಕಾರ್ಯಗಳಲ್ಲಿ ಇದ್ದಾಗ, ನಾವು ಅಜ್ಜ ಅಜ್ಜಿಯರೊಂದಿಗೆ ಸೇರಿ ಕೇಳುವುದು, ಆಟ ಆಡುವುದು ಮಾಡುತಿದ್ದೆವು. ಅಜ್ಜ-ಅಜ್ಜಿಯರೂ ಅಷ್ಟೇ, ತಮ್ಮ ಜೀವನದ ಅನುಭವಗಳನ್ನ ಕಥೆಗಳ ರೂಪದಲ್ಲಿಯೋ ಅಥವಾ ತಲೆ ತಲಾಂತರದಿಂದ ಕೇಳಿ ತಿಳಿದು ಬಂದ ಪಂಚತಂತ್ರದ ಕಥೆಗಳನ್ನ ಮಕ್ಕಳಿಗೆ ಹೇಳುತ್ತಾ ಇದ್ದರು. ಆಮೇಲೆ ಅವಿಭಿಜಿತ ಅವಿಭಕ್ತ ಕುಟುಂಬಗಳು ಮಾಯವಾಗಿ, ವಿಭಕ್ತ ಕುಟುಂಬಗಳದ ಮೇಲೆ ನಾವು ನಮ್ಮ ತಂದೆ ತಾಯಿಯರಿಂದ ಕಥೆ ಕೇಳಲು ಪ್ರಾರಂಭಿಸಿದೆವು, ಅವರು ಅವರಿಗೆ ಎಷ್ಟು ನೆನಪಿದೆಯೋ ಅಷ್ಟು ಕಥೆಗಳನ್ನ ಹೇಳುತಿದ್ದರು.

 

ಆದರೆ ಇವತ್ತು ನಾವು ನಮ್ಮ ಮಕ್ಕಳಿಗೆ ಕಥೆ ಹೇಳಬೇಕು ಎಂದರೆ ನಮಗಾವ ಪಂಚತಂತ್ರದ ಕಥೆಗಳು ನೆನಪಿವೆ? ಅಲ್ಪ ಸ್ವಲ್ಪ ನೆನಪಿದ್ದರೂ ಹೇಳಲು ಸಮಯವೆಲ್ಲಿದೆ? ಬೆಳಿಗ್ಗೆ ಮನೆ ಬಿಟ್ಟು ರಾತ್ರಿ ಮಕ್ಕಳು ಮಲಗಿದ ಮೇಲೆ ಮನೆಗೆ ಬಂದರೆ ಕಥೆ ಹೇಳುವುದಾದರು ಯಾರಿಗೆ? ಇನ್ನೂ ನಮ್ಮ ಮಕ್ಕಳು ಕಥೆ ಕೇಳಬೇಕು ಎಂದರೆ ಅವರ ಶಾಲೆಯಲ್ಲಿ ಹೇಳಿಕೊಡುವ ಇಂಗ್ಲಿಷ್ ಕಥೆಗಳನ್ನೇ ಕೇಳಬೇಕು. ಅಪ್ಪ ಅಮ್ಮಂದಿರೇ ಊರು ಬಿಟ್ಟು ದೂರದಲ್ಲಿ ಕೆಲಸಮಾಡುತ್ತಿರುವಾಗ ಕಥೆ ಹೇಳಲು ಅಜ್ಜ-ಅಜ್ಜಿಯರೆಲ್ಲಿ? ನಮಗೆ ಪಂಚತಂತ್ರ ಗೊತ್ತಿಲ್ಲ ಅಂದ ಮೇಲೆ ನನ್ನ ಮಗೂಗೆ ಹೇಗೆ ಪಂಚತಂತ್ರದ ಕಥೆಗಳು ಗೊತ್ತಾಗುತ್ತವೆ. ಹೀಗೆ ಮುಂದುವರೆದರೆ ಆ ಕಾಗಕ್ಕ-ಗುಬ್ಬಕ್ಕ ಕಥೆಗಳು ನಮ್ಮೊಂದಿಗೆ ಕೊನೆಯಾಗಿ ಬಿಟ್ಟರು ಆಶ್ಚರ್ಯವೇನಿಲ್ಲ.

 

ನನ್ನ ಯೋಚನೆಗೆ ಇನ್ನೊಂದು ಕಾರಣವೆಂದರೆ, ಹಿಂದೆ ನಮಗೆಲ್ಲ ಕಾಗಕ್ಕ ಅಂದರೆ ಕಾಗೆಮ್ ಗುಬ್ಬಕ್ಕ ಅಂದರೆ ಗುಬ್ಬಿ ಎಂದು ತಕ್ಷಣ ಅರ್ಥವಾಗುತ್ತಿತ್ತು. ಮನೆಯ ಚಾವಣಿಯ ಅಂಚಿಗೆ ಗೂಡು ಕಟ್ಟಿ ಆಟವಾಡುವ ಗುಬ್ಬಿಗಳನ್ನೋ, ಮನೆಯ ಜಗುಲಿಯ ಹೊರಗೆ ಅಂಗಳದಲ್ಲಿ ಸದಾ ಕಾ ಕಾ ಎಂದು ಓಡಾಡುವ ಕಾಗೆಗಳನ್ನ ನೋಡಿದಾಗ, ಓ ಗುಬ್ಬಿ ಹೀಗಿರುತ್ತೆ, ಕಾಗೆ ಹೀಗಿರುತ್ತೆ ಎಂದು ತಕ್ಷಣ ಅರ್ಥವಾಗಿಬಿಡುತ್ತಿತ್ತು. ಆದರೆ ಇವತ್ತು ಬೆಂಗಳೂರಿನಂತ ನಗರದಲ್ಲಿ, ಕಾಗೆ ಗುಬ್ಬಿಗಳನ್ನ ಹುಡುಕಬೇಕಂದರೆ ಅಸಾಧ್ಯವೇ ಸರಿ. ಇಂದು ಹಳ್ಳಿಗಳಲ್ಲೂ ಅಷ್ತೇ, ಹಂಚಿನ ಮತ್ತು ಹುಲ್ಲಿನ ಮನೆಗಳು ಮಾಯವಾಗಿ, ಕಾಂಕ್ರೀಟ ಮನೆಗಳು ತಲೆ ಎತ್ತುತಿವೆ. ಹೆಚ್ಚುತಿರುವ ಕಾಂಕ್ರೀಟ ಮನೆಯಿಂದಾಗಿ ಗುಬ್ಬಿಗಳು ಮಾಯವಾಗುತ್ತಿವೆ. ಕಾಗೆಗಳೂ ಮೊದಲಿನಷ್ಟು ಹೇರಳವಾಗಿಲ್ಲ. ಇದು ಕೇವಲ ಕಾಗೆ-ಗುಬ್ಬಿಗಳಿಗೆ ಸೀಮಿತವಾಗಿಲ್ಲ. ಪಂಚತಂತ್ರದಲ್ಲಿ ಬರುವ ನರೀ, ಮೊಲ, ಸಿಂಹ, ಹುಲಿಗಳದ್ದು ಇದೇ ಸ್ಥಿತಿ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮುಂದಿನ ಪೀಳಿಗೆಗೆ ಕಾಗಕ್ಕ-ಗುಬ್ಬಕ್ಕನ ಕಥೆ ಹೇಳೋದು ಹೇಗೆ? ಒಂದೊಮ್ಮೆ ಹೇಳಿದರೂ ಅವರಿಗೆ ಅರ್ಥ ಆಗೋದಾದರೂ ಹೇಗೆ?

 

--ಮಂಜು ಹಿಚ್ಕಡ್