೧೨೭. ಲಲಿತಾ ಸಹಸ್ರನಾಮ ೫೩೫ರಿಂದ ೫೪೦ನೇ ನಾಮಗಳ ವಿವರಣೆ

೧೨೭. ಲಲಿತಾ ಸಹಸ್ರನಾಮ ೫೩೫ರಿಂದ ೫೪೦ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೫೩೫ - ೫೪೦

Svāhā स्वाहा (535)

೫೩೫. ಸ್ವಾಹಾ

           ಯೋಗಿನಿಯರನ್ನು ವರ್ಣಿಸಿದ ನಂತರ ವಾಕ್-ದೇವಿಯರು ಲಲಿತಾಂಬಿಕೆಯ ವರ್ಣನೆಯನ್ನು ಮುಂದುವರೆಸುತ್ತಾರೆ.

           ಲಲಿತಾಂಬಿಕೆಯು ದೇವತೆಗಳಿಗೆ ಅರ್ಪಿಸುವ ಆಹುತಿಗಳ ಸ್ವರೂಪದಲ್ಲಿದ್ದಾಳೆ. ಈ ವಿಧವಾದ ಆಹುತಿಗಳ ಮಂತ್ರಗಳು ಸ್ವಾಹಾ ಎನ್ನುವ ಶಬ್ದದಿಂದ ಕೊನೆಗೊಳ್ಳುತ್ತವೆ. ಹೆಚ್ಚಿನ ವಿವರಗಳನ್ನು ಮುಂದಿನ ನಾಮದಲ್ಲಿ ಕೊಡಲಾಗಿದೆ.

           ಲಿಂಗ ಪುರಾಣವು (೧೩.೯), ಪಶುಪತಿಯ (ಶಿವನ ಉಗ್ರ ಸ್ವರೂಪದ) ಅರ್ಧಾಂಗಿಯು ಬೆಂಕಿಯ ರೂಪದಲ್ಲಿರುವ ಸ್ವಾಹಾ ಆಗಿದ್ದಾಳೆ ಮತ್ತಾಕೆಯು ಕಾರ್ತಿಕೇಯನ ಮಾತೆಯಾಗಿದ್ದಾಳೆ ಎಂದು ಹೇಳುತ್ತದೆ.

Svadhā स्वधा (536)

೫೩೬. ಸ್ವಧಾ

           ದೇವಿಯು ಪಿತೃಗಳಿಗೆ ಅರ್ಪಿಸುವ ಆಹುತಿಯಾಗಿದ್ದಾಳೆ ಮತ್ತು ಅಂತಹ ಮಂತ್ರಗಳು ಸ್ವಧಾ ಎನ್ನುವುದರೊಂದಿಗೆ ಕೊನೆಗೊಳ್ಳುತ್ತವೆ.

          ಮಾರ್ಕಂಡೇಯ ಪುರಾಣವು (೨೬.೬-೯) ಒಬ್ಬ ಗೃಹಸ್ಥನನ್ನು (ವಿವಾಹವಾಗಿ ಕೌಟುಂಬಿಕ ಜೀವನವನ್ನು ನಡೆಸುತ್ತಿರುವವನು) ಒಂದು ಪವಿತ್ರ ಆಕಳಿನ ಮೂರ್ತರೂಪವನ್ನಾಗಿ ಚಿತ್ರಿಸುತ್ತದೆ. ಆಕಳ ಬೆನ್ನು ಋಗ್ವೇದವಾಗಿದೆ, ಅದರ ತೊಡೆಯ ಭಾಗವು ಯಜುರ್ವೇದವಾಗಿದೆ ಮತ್ತು ಆಕಳಿನ ಮುಖ ಹಾಗೂ ಕುತ್ತಿಗೆಯ ಭಾಗಗಳು ಸಾಮವೇದವಾದರೆ, ಅದರ ಕೊಂಬುಗಳು ಸತ್ಕಾರ್ಯಗಳಾಗಿವೆ, ಅದರ ಕೂದಲುಗಳು ವಿವೇಕಿಗಳ ನುಡಿಗಳಾಗಿವೆ, ಅದರ ಸೆಗಣಿ ಮತ್ತು ಮೂತ್ರಗಳು ಶಾಂತಿ ಮತ್ತು ಅಭಿವೃದ್ಧಿಯಾಗಿವೆ, ಅದರ ನಾಲ್ಕು ಪಾದಗಳು ಮಾನವ ಜಾತಿಯ ನಾಲ್ಕು ವರ್ಣಗಳಾಗಿವೆ, ಸ್ವಾಹಾ, ಸ್ವಧಾ, ವಷಟ್ ಮತ್ತು ಹಂತಗಳು ಆಕಳಿನ ಮೊಲೆತೊಟ್ಟುಗಳಾಗಿವೆ. ಈ ಪುರಾಣವು ಮುಂದುವರೆಯುತ್ತಾ ಹೇಳುತ್ತದೆ ಅಂತಹ ಮನುಷ್ಯನು (ಗೃಹಸ್ಥನು) ದೇವರು, ಋಷಿ, ಪಿತೃ, ಸಹ ಮಾನವರು ಹಾಗೂ ಇತರೇ ಜೀವಿಗಳು (ಇದನ್ನೇ ಗೃಹಸ್ಥನು ಕೈಗೊಳ್ಳಬೇಕಾದ ಪಂಚ ಮಹಾಯಜ್ಞಗಳೆನ್ನುತ್ತಾರೆ - ಹೆಚ್ಚಿನ ವಿವರಗಳನ್ನು ೯೪೬ನೇ ನಾಮವಾದ ಪಂಚ ಯಜ್ಞ ಪ್ರಿಯಾ ಎನ್ನುವಲ್ಲಿ ಚರ್ಚಿಸೋಣ) ಮತ್ತು ತನ್ನ ಸ್ವಂತ ಶರೀರವನ್ನು ಪೋಷಿಸಿಕೊಳ್ಳಬೇಕು.

         ಸ್ವಾಹಾ ಮತ್ತು ಸ್ವಧಾ ಎನ್ನುವವರು ಅಗ್ನಿಯ ಇಬ್ಬರು ಹೆಂಡಿರು ಎಂದೂ ಸಹ ಹೇಳಲಾಗುತ್ತದೆ.

Amatiḥ अमतिः (537)

೫೩೭. ಅಮತಿಃ

          ದೇವಿಯು ಅವಿದ್ಯಾ ಅಥವಾ ಅಜ್ಞಾನದ ಸ್ವರೂಪಳಾಗಿದ್ದಾಳೆ. ಸೃಷ್ಟಿಯ ಪ್ರಾರಂಭವು ಪ್ರಜ್ಞಾರಹಿತವಾಗಿತ್ತು; ಅದನ್ನೇ ಅವ್ಯಕ್ತ ರೂಪವೆನ್ನುತ್ತಾರೆ (ನಾಮ ೩೯೮). ‘ಮೂಲಪ್ರಕೃತಿ’ಯಿಂದ (ನಾಮ ೩೯೭) ಅವ್ಯಕ್ತ, ಮಹತ್ (ಬುದ್ಧಿ), ಚಿತ್ತ, ಅಹಂಕಾರ, ಮೊದಲಾದವುಗಳು ಸೃಷ್ಟಿಸಲ್ಪಟ್ಟವು. ಅಂತಹ ಅವ್ಯಕ್ತ ರೂಪದಲ್ಲಿ ಬುದ್ಧಿಯನ್ನು ಅಮತಿ ಎಂದು ಕರೆಯಲಾಗುತ್ತದೆ. ಈ ಹಂತದಲ್ಲಿ ಪ್ರಕೃತಿಯ ಮೂರು ಗುಣಗಳಾದ ಸತ್ವ, ರಜೋ ಮತ್ತು ತಮೋ ಗುಣಗಳು ಸಮತೋಲನದಲ್ಲಿರುತ್ತವೆ. ಪ್ರಕೃತಿಯ ಈ ಗುಣಗಳ ಸಮತೋಲದಲ್ಲಿನ ಯಾವುದೇ ವಿಧವಾದ ವ್ಯತ್ಯಾಸವು ಕಾಮ, ವಿವೇಕ ಮತ್ತು ಕರ್ಮವನ್ನುಂಟು (ಚಟುವಟಿಕೆಯನ್ನುಂಟು) ಮಾಡುತ್ತವೆ.

Medhā मेधा (538)

೫೩೮. ಮೇಧಾ

          ಸೃಷ್ಟಿಯ ವಿಕಾಸದೊಂದಿಗೆ, ಅಮತಿಯ ರೂಪದಲ್ಲಿರುವ ದೇವಿಯು ಮೇಧಾ ಅಥವಾ ಬುಧ್ದಿಶಕ್ತಿಯ ರೂಪವಾಗಿ ಮಾರ್ಪಾಡು ಹೊಂದುತ್ತಾಳೆ. ಇದು ದೇವಿಯು ಸೃಷ್ಟಿಯ ಆದಿಯಿಂದ ಅಸ್ತಿತ್ವದಲ್ಲಿದ್ದಳೆನ್ನುವುದನ್ನು ದೃಢ ಪಡಿಸುತ್ತದೆ. ಪ್ರಸಕ್ತ ನಾಮ ಮತ್ತು ಮೇಲಿನ ನಾಮ ಇವೆರಡೂ ನಾಮಗಳು ಮೇಧಾ ಶಕ್ತಿಯು ಅಮೂರ್ತರೂಪದಿಂದ ಅಭಿವೃದ್ಧಿ ಹೊಂದುವುದನ್ನು ವಿವರಿಸುತ್ತವೆ. ದೇವಿಯು ಇವೆರಡರ ರೂಪದಲ್ಲಿಯೂ ಇರುತ್ತಾಳೆನ್ನುವುದು ಅವಳ ಪರಬ್ರಹ್ಮಸ್ವರೂಪವನ್ನು ಅಥವಾ ಸರ್ವವ್ಯಾಪಕತ್ವದ ಗುಣವನ್ನು ದೃಢಪಡಿಸುತ್ತದೆ. ಮೇಧಾ ಎನ್ನುವುದು ವಿಶೇಷವಾಗಿ ವ್ಯಕ್ತಿಗತ ಬುದ್ಧಿಶಕ್ತಿಯನ್ನು ಸೂಚಿಸುತ್ತದೆ.

         ಮಹಾನಾರಾಯಣ ಉಪನಿಷತ್ತು (೪೯.೧) ಹೀಗೆ ಹೇಳುತ್ತದೆ, "ಸರ್ವಾಂತರ್ಯಾಮಿಯಾಗಿರುವ, ಮೇಧಸ್ಸಿನ ದೇವಿಯಾದ, ಶ್ರೇಯಸ್ಸನ್ನುಂಟು ಮಾಡುವ, ದಯಾಮಯಿಯಾದ ಮತ್ತು ನಮ್ಮಲ್ಲಿ ಸಂತಸವನ್ನುಂಟು ಮಾಡುವ ದೇವಿಯು ನಮಗೆ ದರ್ಶನವೀಯಲಿ" (ಮೇದಾ ಸೂಕ್ತಂ ೧).

         ಅಥರ್ವಣ ವೇದವು (೬.೧೦೮) ಹೇಳುತ್ತದೆ, "ಓಹ್ಞ್ ! ವಿವೇಕವೇ (ಮೇಧಾ)! ಮೊದಲು ನಮ್ಮ ಬಳಿ ಹಸುಗಳೊಂದಿಗೆ ಬಾ, ಕುದುರೆಗಳೊಂದಿಗೆ ಬಾ, ಸೂರ್ಯಕಿರಣಗಳನ್ನು ಹೊಂದಿರುವ ನೀನು ನಮಗೆಲ್ಲಾ ಪೂಜನೀಯವಾಗಿದ್ದೀಯ". ಮುಂದಿನ ಶ್ಲೋಕವು ಮುಂದುವರೆಯುತ್ತಾ ಹೀಗೆ ಹೇಳುತ್ತದೆ, "ನಾನು ಮೊದಲು ಪ್ರಾರ್ಥಿಸುತ್ತೇನೆ, ದೇವರುಗಳ ಸಹಾಯಕ್ಕಾಗಿ, ಬ್ರಹ್ಮದಿಂದ ತುಂಬಿದ ವಿವೇಕಕ್ಕಾಗಿ, ಬ್ರಹ್ಮದಿಂದಲೇ ತ್ವರಿತಗೊಳಿಸಲ್ಪಟ್ಟ, ಯೋಗಿಗಳಿಂದ ಹೊಗಳಲ್ಪಟ್ಟ.......".

         ಬುದ್ಧಿ ಶಕ್ತಿಯು ಪರಬ್ರಹ್ಮವನ್ನು ಅರಿಯಲು ಪ್ರಮುಖವಾದ ಅಂಶವೆಂದು ಪರಿಗಣಿತವಾಗಿದೆ.

        ದೇವಿಯು ಅಂತಹ ಬುದ್ಧಿಶಕ್ತಿಯ ರೂಪದಲ್ಲಿದ್ದಾಳೆಂದು ಹೇಳಲಾಗುತ್ತದೆ.

Śrutiḥ श्रुतिः (539)

೫೩೯. ಶ್ರುತಿಃ

          ಶ್ರುತಿಃಗಳೆಂದರೆ ವೇದಗಳು. ದೇವಿಯು ಚತುರ್ವೇದಗಳ ಸ್ವರೂಪದಲ್ಲಿದ್ದಾಳೆ ಅಥವಾ ಎಲ್ಲಾ ವೇದಗಳು ಅವಳ ಸ್ವರೂಪವನ್ನು ಪ್ರತಿನಿಧಿಸುತ್ತವೆ.

Smṛtiḥ स्मृतिः (540)

೫೪೦. ಸ್ಮೃತಿಃ

         ವೇದಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟವಾದದ್ದು ಮತ್ತು ಅವುಗಳಲ್ಲಿ ಬ್ರಹ್ಮದ ಸಂದೇಶವು ಬಹಳ ರಹಸ್ಯವಾದ ವಿಧಾನಗಳಲ್ಲಿ ಹೇಳಲ್ಪಟ್ಟಿದೆ. ವೇದಗಳನ್ನು ಅರಿತುಕೊಳ್ಳಬೇಕಾದರೆ ಅವುಗಳ ಸರಿಯಾದ ವ್ಯಾಖ್ಯಾನವಿರಬೇಕು. ಸ್ಮೃತಿಗಳು ವೇದಗಳಿಂದ ನಿಷ್ಪತ್ತಿಗೊಳಿಸಲ್ಪಟ್ಟು ಅವುಗಳು ಬ್ರಹ್ಮದ ಸಂದೇಶಗಳನ್ನು ಅರ್ಥವಾಗುವ ವಿಧಾನಗಳಲ್ಲಿ ತಿಳಿಸುತ್ತವೆ. ದೇವಿಯು ಈ ವಿಧವಾದ ಸ್ಮೃತಿಗಳ ಸ್ವರೂಪದಲ್ಲಿದ್ದಾಳೆ. ಸ್ಮೃತಿ ಎಂದರೆ ಸಂಗ್ರಹಿಸುವ ಶಕ್ತಿ ಮತ್ತದು ನೆನಪನ್ನೂ ಸೂಚಿಸುತ್ತದೆ. ಉಪನಿಷತ್ತುಗಳನ್ನು ಸ್ಮೃತಿ ವರ್ಗಕ್ಕೆ ಸೇರಿಸಲಾಗಿದೆ.

         ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ (೧೦.೩೪), "ನಾನೇ ವಾಕ್, ಸ್ಮೃತಿ, ಬುದ್ಧಿ, ಇಂದ್ರಿಯಗಳು, ಇವೆಲ್ಲುಗಳ ಶಕ್ತಿ...........", ಎಂದು ಹೇಳುತ್ತಾನೆ.

******

       ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 535-540 http://www.manblunde...ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.  

Rating
Average: 5 (1 vote)

Comments

Submitted by nageshamysore Thu, 10/03/2013 - 18:46

ಶ್ರೀಧರರೆ, ೧೨೭. ಲಲಿತಾ ಸಹಸ್ರನಾಮ ೫೩೫ರಿಂದ ೫೪೦ನೇ ನಾಮಗಳ ವಿವರಣೆಯ ಕಾವ್ಯ ಸಾರ ಪರಿಷ್ಕರಣೆಗೆ ಸಿದ್ದ :-)

ಲಲಿತಾ ಸಹಸ್ರನಾಮ ೫೩೫ - ೫೪೦
__________________________________________

೫೩೫. ಸ್ವಾಹಾ 
ಶಿವನುಗ್ರ ಸ್ವರೂಪದಾ ಪಶುಪತಿಗೆ ಅರ್ಧಾಂಗಿಯಾಗಿರುತೆ
ಬೆಂಕಿಯ ರೂಪದಲಿಹಳೆ 'ಸ್ವಾಹಾ' ಕಾರ್ತಿಕೇಯನ ಮಾತೆ
ಆಹುತಿ ಮಂತ್ರಗಳು ಕೊನೆಗೊಳ್ಳುವ ಶಬ್ದವಾಗಿಹ ಸ್ವಾಹಾ
ದೇವತೆಗಳಿಗರ್ಪಿತ ಆಹುತಿ ಸ್ವರೂಪದಲಿ ಲಲಿತ ಪ್ರಸ್ತುತ ||

೫೩೬. ಸ್ವಧಾ 
ಪವಿತ್ರ ಆಕಳಿನ ಮೂರ್ತರೂಪ ಗೃಹಸ್ಥ, ಆಕಳ ಬೆನ್ನಾಗಿ ಋಗ್ವೇದ
ಜಘನ ಯಜುರ್ವೇದ, ವದನ-ಕುತ್ತಿಗೆ ಸಾಮ, ಕೊಂಬೆ ಸತ್ಕಾರ್ಯ
ಕೂದಲಾಗಿ ವಿವೇಕಿ ನುಡಿ, ಸೆಗಣಿ ಮೂತ್ರ ಶಾಂತಿ-ಅಭಿವೃದ್ಧಿ ಕಾರ್ಯ
ಚತುರ್ವರ್ಣ ಪಾದ, ಮೊಲೆತೊಟ್ಟಾಗಿ ಸ್ವಾಹಾ-ಸ್ವಧಾ-ವಷಟ್-ಹಂತ ||

ದೇವಿ ಪಿತೃಗಳಿಗರ್ಪಿತ ಆಹುತಿ, ಮಂತ್ರ ಕೊನೆಯಾಗುತ 'ಸ್ವಧಾ'
ಕೈಗೊಳ್ಳುತೆ ಪಂಚ ಮಹಾಯಜ್ಞ ಜತೆಗೆ ಸ್ವಪೋಷಣೆ ಗೃಹಸ್ಥನಾದ
ದೇವರು-ಋಷಿ-ಪಿತೃ-ಸಹಮಾನವ-ಸಹಜೀವಿ ಪಂಚ ಮಹಾಯಜ್ಞ
ಸ್ವಾಹಾ, ಸ್ವಧಾಗಳಿಬ್ಬರು ಅಗ್ನಿ ಪತ್ನಿಯರಾಗಿಹಾ ಕೀರ್ತಿಗೂ ಭಾಜನ ||

೫೩೭. ಅಮತಿಃ
ಪ್ರಜ್ಞಾರಹಿತವಿದ್ದ ಸೃಷ್ಟಿಯ ಪ್ರಾರಂಭವೆ, ಅವ್ಯಕ್ತ ರೂಪವಾದ ಸರದಿ
ಮೂಲಪ್ರಕೃತಿಯಿಂದುದ್ಭವ ಅವ್ಯಕ್ತ, ಮಹತ್, ಚಿತ್ತ, ಅಹಂಕಾರಾದಿ
ಅವ್ಯಕ್ತರೂಪದ ಬುದ್ಧಿಹಂತವೆ ಅಮತಿಃ, ದೇವಿಯಾಗಿ ಅವಿದ್ಯಾ ಸ್ವರೂಪಿ
ತ್ರಿಗುಣಗಳಾ ಸಮತೋಲ, ವ್ಯತ್ಯಾಸವಾಗೆ ಕಾಮ ವಿವೇಕ ಕರ್ಮಕೆ ಲಿಪಿ||

೫೩೮. ಮೇಧಾ 
ಸೃಷ್ಟಿಯ ಆದಿಯ ಅಮತಿ, ವಿಕಾಸವಾಗುತೆ ಮೇಧಾ-ಬುದ್ಧಿಶಕ್ತಿ
ಅಮೂರ್ತರೂಪಿನಿಂದಭಿವೃದ್ಧಿ, ಸರ್ವವ್ಯಾಪಿಪರಬ್ರಹ್ಮದ ಸಂಗತಿ
ವ್ಯಕ್ತಿಗತ ವಿವೇಕ, ವಿಶೇಷ ಬುದ್ಧಿಶಕ್ತಿಯೆ ಪರಬ್ರಹ್ಮವರಿಯೆ ದಾರಿ
ಆ ಮೇಧಾ-ಬುದ್ಧಿಶಕ್ತಿ ರೂಪದಲಿಹಳು ಲಲಿತೆ ಸದ್ಗತಿಯ ತೋರಿ ||

೫೩೯. ಶ್ರುತಿಃ 
ಶ್ರುತಿಃಗಳೆಂದರೆ ವೇದಗಳು, ಶಬ್ದಬ್ರಹ್ಮವಾಗಿ ಮೂರ್ತರೂಪ
ಚತುರ್ವೇದಗಳ ಸ್ವರೂಪದಲಿಹ ಲಲಿತಾ ಪರಬ್ರಹ್ಮ ಸಂಕಲ್ಪ
ಎಲ್ಲಾ ವೇದಗಳು ಪ್ರತಿನಿಧಿಸುತ ದೇವಿಯ ಸ್ವರೂಪದ ಸರತಿ
ಅರಿವಿಗೆ ನಿಲುಕದ ಜ್ಞಾನವ, ಅರಿವಾಗಿಸುತಿಹಳು ದೇವಿ ಶೃತಿಃ ||
     
೫೪೦. ಸ್ಮೃತಿಃ 
ಬ್ರಹ್ಮದ ಸಂದೇಶದ ರಹಸ್ಯ, ಅಡಕವಾಗಿಹ ವೇದ ಶ್ರುತಿಃ
ಸೂಕ್ತ ವ್ಯಾಖ್ಯಾನಾ ವಿನಃ, ಅರಗಿಸಿ ಅರಿಯಲಾಗದ ಸೂಕ್ತಿ
ಸ್ಮೃತಿಗಳಾಗಿ ನೆನಪು-ಸಂಗ್ರಹ ಶಕ್ತಿ, ಉಪನಿಷತ್ತಿನ ರೂಪ
ವಾಕ್-ಸ್ಮೃತಿ-ಬುದ್ಧಿ-ಇಂದ್ರಿಯ ಶಕ್ತಿಯಾಗಿ ದೇವಿ ಸ್ವರೂಪ ||
 
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
 

Submitted by ಗಣೇಶ Thu, 10/03/2013 - 23:30

-ಮಹಾನಾರಾಯಣ ಉಪನಿಷತ್ತು (೪೯.೧) ಹೀಗೆ ಹೇಳುತ್ತದೆ, "ಸರ್ವಾಂತರ್ಯಾಮಿಯಾಗಿರುವ, ಮೇಧಸ್ಸಿನ ದೇವಿಯಾದ, ಶ್ರೇಯಸ್ಸನ್ನುಂಟು ಮಾಡುವ, ದಯಾಮಯಿಯಾದ ಮತ್ತು ನಮ್ಮಲ್ಲಿ ಸಂತಸವನ್ನುಂಟು ಮಾಡುವ ದೇವಿಯು ನಮಗೆ ದರ್ಶನವೀಯಲಿ" (ಮೇದಾ ಸೂಕ್ತಂ ೧).
--ಶ್ರೀಧರ್‌ಜಿ, ಇಲ್ಲಿ "ಮೇಧಸ್ಸಿನ" ಅಂದರೆ ಕೊಬ್ಬಿನ ಎಂದರ್ಥವಾಗುವುದು. ( http://kn.wiktionary... ) ಮೇಧಾ ಸೂಕ್ತಂ ಏನಿರಬಹುದು ಎಂದು ಹುಡುಕುವಾಗ ಈ ಕೊಂಡಿ ಸಿಕ್ಕಿತು- http://oppanna.com/m... ನಮ್ಮ ನಾಗೇಶರಂತೆ ಅವರೂ ಈ ಸೂಕ್ತವನ್ನು ಕನ್ನಡದಲ್ಲಿ ಕವನವಾಗಿಸಿದ್ದಾರೆ.

ಕ್ಷಮಿಸಿ, ಕೊಂಡಿ ಕನೆಕ್ಟ್ ಆಗುತ್ತಿಲ್ಲ.- oppanna.com/mantra/medha-sooktham ಇದನ್ನು ಕಾಪಿ ಮಾಡಿ ಸರ್ಚಲ್ಲಿ ಪೇಸ್ಟ್ ಮಾಡಿ ನೋಡಿ. kn.wiktionary.org/wiki/ಮೇಧಸ್ಸು -ಈಗಲೂ ಆಗದಿದ್ದರೆ ಡಬಲ್ ಕ್ಷಮಿಸಿ. :)

ಗಣೇಶರೆ
ಮೇಧಿನಿ ಅಂದರೆ ಭೂಮಿ ಎಂದು ಅರ್ಥವುಂಟು
ಆದರೆ ಪುನಹ‌ ಮೇಧಿನಿ ಅಂದರೆ ನೀವು ಹೇಳಿದಂತೆ ಕೊಬ್ಬು ಮಜ್ಜೆ ಮಾಂಸ‌ ಅಂತಹುದೆ
ದೇವಿ ಮಹಾತ್ಮೆಯಲ್ಲಿ ಬರುವ‌ ಕತೆಯಂತೆ ದೇವಿ ಮಧುಕೈಭಟರನ್ನು ಕೊಲ್ಲುವಾಗ‌ (ರಕ್ಕಸನ‌ ಹೆಸರು ಬೇರೆ ಇರಬೇಕೆನೊ) ಅವನ‌ ಮೇಧಸ್ಸು ಕೆಳಗೆ ಬಿದ್ದು ಭೂಮಿಯ‌ ರಚನೆಯಾಯಿತು, ಅದರಿಂದಲೆ ಭೂಮಿಯನ್ನು ಮೇಧಿನಿ ಅನ್ನುವರು
ಹಾಗಾಗಿ ಮೇಧಸ್ಸು ಅಂದರೆ ಕೊಬ್ಬೆ ಅನುಮಾನವಿಲ್ಲ

ಮೇಧಸ್ಸಿನ ಕುರಿತ ಅನುಮಾನ ಮತ್ತು ವಿವರಣೆಯಿತ್ತ ಗಣೇಶ್‌ಜಿ ಮತ್ತು ಪಾರ್ಥ ಸರ್ ಇಬ್ಬರಿಗೂ ಧನ್ಯವಾದಗಳು. ಸರಸ್ವತಿಯನ್ನು ಮೇಧಾದೇವಿ ಎನ್ನುವುದರಿಂದ ನೀವೀಬ್ಬರೂ ಆ ಪದದ ಅರ್ಥವನ್ನು ಕೊಬ್ಬು ಎಂದು ಒತ್ತಿ ಹೇಳಿದ್ದರಿಂದ ಪದಕೋಶವನ್ನು ನೋಡಿದೆ. ಅದರಲ್ಲಿ ಕೆಳಕಂಡಂತೆ ಇದೆ, ದಕ್ಕೆ ರೇಫವಿದ್ದರೆ ಅದು ಬುದ್ಧಿವಂತಿಕೆಯನ್ನು ಸೂಚಿಸುತ್ತದೆ, ಅದೇ ದಕ್ಕೆ ರೇಫವಿಲ್ಲದಿದ್ದರೆ (ಬಾಲವಿಲ್ಲದಿದ್ದರೆ) ಅದು ಕೊಬ್ಬನ್ನು ಸೂಚಿಸುತ್ತದೆ.

ಮೇದಸ್ಸು
ಹುಡುಕು ಪದ: ಮೇದಸ್ಸು
ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು

ಮೇದಸ್ಸು ನಾಮಪದ
(<ಸಂ. ಮೇದಸ್) ೧ ದೇಹದ ಸಪ್ತ ಧಾತುಗಳಲ್ಲಿ ಒಂದು, ಕೊಬ್ಬು ೨ ದೇಹಕ್ಕೆ ಬೇಕಾಗುವ ಜಿಡ್ಡಿನ ಅಂಶ

ಹುಡುಕು ಪದ: ಮೇಧಾವಿ
ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು

ಮೇಧಾವಿ ನಾಮಪದ
(<ಸಂ. ಮೇಧಾವಿನ್) ೧ ಬುದ್ಧಿ ವಂತ, ಬುದ್ಧಿಶಕ್ತಿಯು ಬಲವಾಗಿರುವವನು ೨ ಅಗ್ನಿ ಕಾರ್ಯ ಮುಂ.ವುಗಳನ್ನು ಮಾಡಿದ ಮೇಲೆ ಅಗ್ನಿ ಕುಂಡದ ಅವಶೇಷದಿಂದ ಹಣೆಯ ಮೇಲೆ ಇಟ್ಟುಕೊಳ್ಳುವ ಬೊಟ್ಟು
ದಾಸ ಸಾಹಿತ್ಯ ಕೋಶ

ಮೇಧಾವಿ -
ಗೋಪಿಚಂದನ, ಬುದ್ಧಿವಂತ
@ಪಾರ್ಥಸರ್, ನಾಗೇಶ್ & ಗಣೇಶ್ ಅವರೇ,
ಮಳೆ ಬಂದಿತೆಂದರೆ ಈ ಅಂತರ್ಜಾಲ ಮಾರ್ಜಾಲನಿಗೆ ಅದೇನು ಪ್ರಿಯವೋ ಕಾಣೆ, ತಕ್ಷಣ ನನ್ನ ಅಂತರ್ಜಾಲದ ಸಂಪರ್ಕ ಕಡಿದು ಹೋಗುತ್ತಿದೆ. ಇದೀಗ ರಿಪೇರಿ ಮಾಡಿದ್ದಾರೆ; ಹಾಗಾಗಿ ಮತ್ತೆ ನಿಮ್ಮ ಮುಂದೆ ಹಾಜರಾಗುತ್ತಿದ್ದೇನೆ. ಪ್ರತಿಕ್ರಿಯಿಸಲು ತಡವಾದದ್ದಕ್ಕೆ ಕ್ಷಮೆಯಿರಲಿ. ಈ ವಿರಾಮದ ಸಮಯದಲ್ಲಿ ಸಹಸ್ರನಾಮದ ಸಂಪೂರ್ಣ ಅನುವಾದ ಕಾರ್ಯ ಮುಗಿಯಲಿಕ್ಕೆ ಬಂದಿದೆ. ಹಾಗಾಗಿ ಇನ್ನುಮುಂದೆ ಸಂಪದದಲ್ಲೂ ಹೆಚ್ಚು ಸಕ್ರಿಯನಾಗಬಹುದೆಂದು ಕೊಳ್ಳುತ್ತೇನೆ.
ವಂದನಗಳೊಂದಿಗೆ,
ಶ್ರೀಧರ್ ಬಂಡ್ರಿ

ಶ್ರೀಧರರೆ, ಮಳೆಯ ಇಂಟರ್ವಲ್ ಯಾವುದೊ ಕಾರ್ಯ ಕಾರಣ ನಿಮಿತ್ತವಿರಬಹುದೆಂದು ಅಂದುಕೊಂಡೆ ಮುಂದುವರೆಯಿರಿ. ನಮಗಂತೂ ಇದು ತಾತ್ಕಾಲಿಕ ಬ್ರೇಕು ಎಂದು ಖಚಿತವಿರುವುದರಿಂದ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ :-) ಈಗ ದಸರ ಕಾರಣದಿಂದ ವೇಗ ತಾನಾಗೆ ಹೆಚ್ಚುತ್ತದೆ (ವಿಜಯದಶಮಿ  ಬಂಪರ ಮತ್ತು ದುರ್ಗಾಪೂಜಾ ಸಮಯವಲ್ಲವೆ!). ಆದ ಕಾರಣ ಮಳೆಯ ಅಡಚಣೆ ಆಶೀರ್ವಾದವೆಂದುಕೊಂಡೆ ಮುಂದುವರೆಸಿ..!

ತಮಗೆ ದಸರಾ / ವಿಜಯದಶಮಿ ಶುಭಾಶಯಗಳು!