ಗೋಕುಲ ನಿರ್ಗಮನ‍ [ ಕೃಷ್ಣ ..ಕೃಷ್ಣ ...ಕೃಷ್ಣ - (10) ]

ಗೋಕುಲ ನಿರ್ಗಮನ‍ [ ಕೃಷ್ಣ ..ಕೃಷ್ಣ ...ಕೃಷ್ಣ - (10) ]

ಚಿತ್ರ

ಕೃಷ್ಣ ..ಕೃಷ್ಣ ...ಕೃಷ್ಣ - (10) ಗೋಕುಲ ನಿರ್ಗಮನ

ಇಲ್ಲಿಯವರೆಗೂ…

ಗಣೇಶ ನುಡಿದ

“ಹಾಗಿದ್ದಲ್ಲಿ ಮುಂದುವರೆಸು ಕೃಷ್ಣ ನಿನ್ನ ಮಾತನ್ನು, ಈಗ ಹೇಳು, ನೀನೇನೊ ಯಶೋಧೆಯ ಮಗನಾಗಿ ಬೆಳೆದೆ, ಚಿಕ್ಕ ಮಗುವಿನಲ್ಲಿ ಸರಿಯೆ, ಆದರೆ ದೊಡ್ಡವನಾದಂತೆ ಎಂದಿಗು ನೀನು ಅವರ ಮಗನಲ್ಲ ಎನ್ನುವ ಅನುಮಾನ ಬರಲಿಲ್ಲವೆ. ಅಲ್ಲದೆ ನಿನಗೆ ನೀನು ನಂದಗೋಪ, ಹಾಗು ಯಶೋಧೆಯ ಮಗನಲ್ಲ ಎಂದು ಯಾವಾಗ ತಿಳಿಯಿತು, ಆಗೆಲ್ಲ ನಿನ್ನ ಮನಸಿನ ಸ್ಥಿತಿ ಹೇಗಿತ್ತು”

ಮುಂದೆ ಓದಿ...

ಕೃಷ್ಣನೆಂದ ನಗುತ್ತ

“ಬಹಳ ಸೂಕ್ಷ್ಮವಾದ ಪ್ರಶ್ನೆಯನ್ನೆ ಕೇಳಿದೆ ಗಣಪ. ನಿನ್ನ ಮಾತು ನಿಜ. ಗೋಕುಲದಲ್ಲಿ ಸ್ನೇಹಿತರೊಡನೆ ಇದ್ದ ನನ್ನ ಮನಸ್ಸು ಸದಾ ಅವರೆಲ್ಲರಿಗಿಂತ ವಿಭಿನ್ನವಾಗಿಯೆ ಚಿಂತಿಸುತ್ತಿತ್ತು.  ಕೆಲವೊಮ್ಮೆ ನನಗೆ ಅನುಮಾನ ನಾನು ಏಕೆ ಎಲ್ಲರಿಗಿಂತ ಭಿನ್ನ ಎಂದು. ಬಹುಶಃ ಸ್ನೇಹಿತರಿಗಾಗಿ ಬೆಣ್ಣೆ ಕದಿಯುವಾಗಲೆ ನನ್ನ ಮನದ ಚಿಂತನೆ ಬಂಡಾಯದಂತೆ ಇರುತ್ತಿತ್ತು , ದನ ಕಾಯುವರು ನಾವು, ಅವುಗಳಿಗೆ ಮೇವು ಹಾಕುವರು ನಾವು, ನೀರು ಕುಡಿಸಿ ಹಾಲು ಕರೆಯುವರು ನಾವು ಆದರು ಮಕ್ಕಳಿಗೆ ಹಾಲು ಮೊಸರು ಸಿಗುತ್ತಿರಲಿಲ್ಲ ಎಲ್ಲವು ಮಥುರಾಗೆ ಹೋಗುತ್ತಿತ್ತು. ನಾನು ದಾರಾಳವಾಗಿ ಹಾಲು ಮೊಸರನ್ನು ನನ್ನ ಸ್ನೇಹಿತರಿಗೆ ಹಂಚುತ್ತಿದ್ದೆ. ನನ್ನ ಮೇಲೆ ಆಕ್ರಮಣಗಳಾಯಿತು ಕಂಸನ ಕಡೆಯವರಿಂದ  ಚಿಕ್ಕ ವಯಸಿನಲ್ಲಿಯೆ ಆಗ ನನ್ನ ಅರಿವಿನಲ್ಲಿ ಅವೆಲ್ಲ ಏನೆ ಇರಲಿಲ್ಲ, ಆದರೆ ನಾನು ದೊಡ್ಡವನಾದ ನಂತರ ನಮ್ಮ ಅಪ್ಪ ಅಮ್ಮ ಸದಾ ನನ್ನ ಬಗ್ಗೆ ಎಚ್ಚರ ವಹಿಸುತ್ತಿದ್ದರು, ಎಲ್ಲಿ ತಿರುಗಾಡಲು ಹೋದರು ಕಾವಲು ಇರುತ್ತಿತ್ತು. ಅಪ್ಪ ಅಮ್ಮನ ಕಣ್ಗಾವಲಿನಲ್ಲಿಯೆ ನಾನು ಇರಬೇಕಿತ್ತು. ಆಗೆಲ್ಲ ನನಗೆ ಅನುಮಾನ ಶುರುವಾಗುತ್ತಿತ್ತು.  ಗೋಕುಲದಲ್ಲಿ  ಇಷ್ಟೊಂದು ಮಕ್ಕಳಿರುವಾಗ ನನ್ನ ಮೇಲೆಯೆ ಏಕೆ ಆಕ್ರಮಣ ಆಗಬೇಕು. ಯಾವ ಕಾರಣಕ್ಕೆ ನನ್ನ ಮೇಲೆ ಕೊಲೆಯ ಪ್ರಯತ್ನ ಆಯಿತು, ಅದು ಅಷ್ಟು ಚಿಕ್ಕವನಾಗಿರುವಾಗ, ಹಾಲು ಕುಡಿಯುವ ಹಸುಗೂಸಾಗಿದ್ದ ನನ್ನ ಮೇಲೆ ಯಾರಿಗಾದರು ಏಕೆ ದ್ವೇಷ, ಒಮ್ಮೆ ದ್ವೇಷವಿದ್ದರು ಅದು ಯಾವ ಕಾರಣಕ್ಕೆ ಎಂದು ಚಿಂತಿಸುತ್ತಿದ್ದೆ, ಆದರೆ ಅಪ್ಪನಾಗಲಿ ಅಮ್ಮನಾಗಲಿ  ಸರಿಯಾದ ಉತ್ತರ ಹೇಳುತ್ತಿರಲಿಲ್ಲ. ಅವರು ನನ್ನಿಂದ ಏನನ್ನೊ ಮುಚ್ಚಿಡುತ್ತಿದ್ದಾರೆ ಎಂದು ಭಾಸವಾಗುತ್ತಿತ್ತು”

ಗಣೇಶ ನಗುತ್ತ ಹೇಳಿದ

“ಚಿಕ್ಕವನಾದರು ನೀನು ಸರಿಯಾಗಿಯೆ ಯೋಚಿಸುತ್ತ ಇದ್ದೆ ಅನ್ನಿಸುತ್ತೆ. ಹಾಗಿದ್ದಲ್ಲಿ ನೀನು ಅವರಿಬ್ಬರ ಮಗನಲ್ಲ ಎನ್ನುವ ಸತ್ಯ ನಿನಗೆ ಗೊತ್ತಿರಲಿಲ್ಲ ಅನ್ನುವದಾದರೆ  ,  ನಿನಗೆ ಯಾವಾಗ ಅನುಮಾನ ಶುರುವಾಯಿತು”

ಕೃಷ್ಣನೆಂದ

’ಇಲ್ಲ ನಾನು ಅವರ ಮಗನಲ್ಲ ಎನ್ನುವ ಅನುಮಾನ ನನಗೆ ಎಂದಿಗೂ ಬರಲಿಲ್ಲ. ಆದರೆ ಜೊತೆಯಲ್ಲಿದ್ದ ಬಲರಾಮನ ಬಗ್ಗೆ ನನ್ನ ಚಿಂತನೆ ನಡೆಯುತ್ತಿತ್ತು.  ಬಲರಾಮ ತಂದೆ ವಸುದೇವನ ಮೊದಲ ಹೆಂಡತಿಯ, ಅಂದರೆ ರೋಹಿಣಿ ಅಮ್ಮನ ಮಗ ಅಂದರೆ ನನ್ನ ಅಣ್ಣನಾಗಬೇಕು. ಮಥುರಾದಲ್ಲಿರಬೇಕಾದ ಅವನು ಗೋಕುಲದಲ್ಲಿ ನನ್ನ ಜೊತೆಯೆ ಬೆಳೆಯುತ್ತಿದ್ದ. ನಾನು ಅವನನ್ನು ಸಹಜವಾಗಿಯೆ ಅಣ್ಣನೆಂದೆ ಕರೆಯುತ್ತಿದ್ದೆ. ಕಂಸ ಭಯದಿಂದ ಅವನು ಇಲ್ಲಿದ್ದಾನೆಂದು ಹೇಳುತ್ತಿದ್ದರು. ನನಗೆ ಅನ್ನಿಸುವಂತೆ ಅದು ದೊಡ್ಡವರು ಮಾಡಿದ್ದ  ತಪ್ಪು ಆಗಿತ್ತು. ಬಹುಶಃ ಬಲರಾಮ ಇದ್ದ ಕಾರಣದಿಂದಲೆ ಕಂಸನ ಗಮನ ನನ್ನ ಕಡೆ ಹರಿದಿರಲೂ ಸಾಕು . ವಸುದೇವನ ಬಳಗದ ಮೇಲೆಲ್ಲ ದೃಷ್ಟಿ ಇಟ್ಟಿದ್ದ ಕಂಸನಿಗೆ ಬಲರಾಮನು ಗೋಕುಲದಲ್ಲಿ ಬೆಳೆಯುತ್ತಿರುವುದು ತಿಳಿದು, ಜೊತೆಯಲ್ಲಿದ್ದ ನನ್ನ ಕಡೆ ಅವನ ಗಮನ ಹರಿದು, ನಾನು ಸಹ ವಸುದೇವನ ಮಗನೆಂಬ ವಿಷಯ ತಿಳಿದಿರಬಹುದು , ಹಾಗಾಗೆ ತನ್ನ ಗುಪ್ತ ಸೈನಿಕರನ್ನು ನನ್ನನ್ನು ಕೊಲ್ಲಿಸಲು ಕಳಿಸಿರಬಹುದು ಎನ್ನುವುದು ನನ್ನ ಊಹೆ”

ಗಣೇಶ

“ಅಂದರೆ ನೀನು ಹೇಳುವಂತೆ ಬಲರಾಮನ ಕಾರಣದಿಂದ ಕಂಸನಿಗೆ ನಿನ್ನ ಮೇಲೆ ಗಮನ ಬಿತ್ತೆ.  ನಿನಗೆ ಬಲರಾಮ ಸಂಬಂಧದಲ್ಲಿ ಅಣ್ಣನಾಗಬೇಕು ಅನ್ನುವುದು ನಿನಗೆ ತಿಳಿದಿರಲಿಲ್ಲವೆ, ತಿಳಿದಿದ್ದರೆ, ನೀನು ಸಹ ವಸುದೇವನ ಮಗನೆ ಎಂಬ ಸತ್ಯ ಸಹ ನಿನಗೆ ಹೇಗೆ ತಿಳಿಯಿತು”

ಕೃಷ್ಣ ನಗುತ್ತ

"ಎಷ್ಟೊಂದು ಪ್ರಶ್ನೆಗಳು ಗಣೇಶ. ಬಲರಾಮ ಅಲ್ಲಿ ಇದ್ದ ಕಾರಣಕ್ಕೆ ಕಂಸನ ಗಮನ ಗೋಕುಲದ ಕಡೆಗೆ ಹರಿಯಿತು ಅನ್ನುವುದು  ನಿಜವಾದ ತರ್ಕ. ಇಲ್ಲದಿದ್ದರೆ ಕೇವಲ ಒಬ್ಬ ನಾಯಕನಾಗಿದ್ದ  ನಂದಗೋಪನತ್ತ ಕಂಸನ ಗಮನ ತಿರುಗುತ್ತಲೆ ಇರಲಿಲ್ಲ. ಬಲರಾಮನನ್ನು ಸಹ ರಕ್ಷಣೆಯ  ಕಾರಣದಿಂದಲೆ ಅಲ್ಲಿ ಬಿಡಲಾಗಿತ್ತು. ಮತ್ತೊಂದು ಕಾರಣ ನನಗೆ ಜೊತೆಯಾಗಿ ಅವನು ಬೆಳೆಯುತ್ತಾನೆ, ಇಲ್ಲದಿದ್ದರೆ ರಾಜವಂಶದ ಜೊತೆಗಿನ ಸಂಬಂಧ ಕಡಿದುಹೋಗಬಾರದು ಅನ್ನುವ ಕಾರಣಕ್ಕು ಇರಬಹುದು ಹೇಗೊ ಬಲರಾಮನಂತು ಜೊತೆಗಿದ್ದ.  ನಾನು ಸಹಜವಾಗಿಯೆ ಅವನನ್ನು ಅಣ್ಣ ಎಂದು ಕರೆಯುತ್ತಿದ್ದೆ ಹೊರತಾಗಿ ಅವನು ನನಗೆ ನಿಜವಾದ ಅಣ್ಣ ಎನ್ನುವ ಚಿಂತನೆ ನನ್ನ ತಲೆಗೆ ಬಂದಿರಲಿಲ್ಲ. ಹಾಗಾಗಿ ನಾನು ಸಹ ವಸುದೇವನ ಮಗನೆ ಇರಬಹುದು ಎನ್ನುವ ಸತ್ಯ ಸಹ ನನಗೆ ತಿಳಿದಿರಲಿಲ್ಲ.  ನನ್ನ ಚಿಂತನೆ ಬಲಿಯುತ್ತ ಹೋಗಿ, ಬಲರಾಮನೇಕೆ ಗೋಕುಲದಲ್ಲಿ ಇದ್ದಾನೆ ಎಂದು ಚಿಂತಿಸುವಾಗ, ನನ್ನ ಮೇಲೆ ನಡೆಯುತ್ತಿದ್ದ ಆಕ್ರಮಣಗಳಿಂದ ಆಶ್ಚರ್ಯವಾಗಿತ್ತು. ಕಂಸ ಒಂದು ವೇಳೆ ಅನುಮಾನಿತನಾಗಿದ್ದರೆ ಬಲರಾಮನನ್ನು ಕೊಲ್ಲಲು ಪ್ರಯತ್ನಪಡಬೇಕಿತ್ತು, ಆದರೆ ನನ್ನನ್ನೇಕೆ ಕೊಲ್ಲಲು ಪ್ರಯತ್ನ ಪಡುತ್ತಿರುವ ಎಂದು ಸಹ ನನಗೆ ಆಶ್ಚರ್ಯವಾಗಿತ್ತು”

ಗಣೇಶ

’ಕಡೆಗೊಮ್ಮೆ ನೀನು ವಸುದೇವನ ಮಗ ಎಂದು ತಿಳಿದಾಗ ನಿನಗೆ ಹೇಗೆ ಅನ್ನಿಸಿತು. ಮಥುರೆಗೆ ಹೊರಟು ನಿಂತಾಗ ನಿನಗೆ ಸಂಕಟವಾಗಲಿಲ್ಲವೆ”

ಕೃಷ್ಣ

“ಇಲ್ಲ, ನಾನು ವಸುದೇವನ ಮಗ ಎನ್ನುವುದು ನನಗೆ ತಿಳಿಯುವ ಹೊತ್ತಿಗೆ ನನಗೆ ಬಹುತೇಕ ಅನುಮಾನ ಪ್ರಾರಂಭವಾಗಿತ್ತು, ನನಗೂ ಮಥುರಾ ನಗರಕ್ಕು ಏನೊ ಸಂಬಂಧವಿದೆ ಅನ್ನುವದಂತು ಖಚಿತವಾಗಿತ್ತು. ಮಥುರೆಯಿಂದ ನನ್ನನ್ನು ನೋಡಲು ಪದೆ ಪದೆ ಯಾರಾದರು ಬರುತ್ತಲೆ ಇದ್ದರು. ಆದರೆ ಅವರು ಬರುತ್ತಿದ್ದ ಕಾರಣಗಳು ಮಾತ್ರ ಬೇರೆ ಬೇರೆ, ನಂದಗೋಪನ ಜೊತೆಗಿನ ವ್ಯವಹಾರ ಅನ್ನುವಂತೆ ಬರುತ್ತಿದ್ದರು.
ನಾನಾದರೊ ನನ್ನ ಗೋಕುಲವಾಯಿತು, ನನ್ನ ಹಸುಗಳಾಯಿತು, ಸ್ನೇಹಿತರು ಮತ್ತು ರಾಧೆ ಎನ್ನುವಂತೆ ಇದ್ದುಬಿಟ್ಟಿದ್ದೆ, ನನ್ನದೆ ಆದ ಸುಂದರಲೋಕ. ಗೋಕುಲದ ಹೊರಗಿನ ಯಾವುದೆ ಪ್ರಪಂಚಕ್ಕು ನನಗೂ ಸಂಬಂಧವೆ ಇರಲಿಲ್ಲ. ಹಗಲೆಲ್ಲ ಹಸು ಕರುಗಳು, ಸುತ್ತಲಿನ ಹಸಿರು, ನೀರು,ಪ್ರಕೃತಿ  ಇವುಗಳು, ರಾತ್ರಿಯಾದರೆ ಯಮುನೆಯ ತೀರ ಗೋಪಿಕೆಯರು  ಹಾಡು ಕುಣಿತ ಇಂತಹವು. ಹೇಗೊ ಮನೆ ಸೇರಿ ಅಮ್ಮನಿಗೆ ಮುಖ ತೋರಿಸಿ ಮಲಗಿದರೆ ನಿದ್ರಾ ದೇವಿ ನನ್ನನ್ನು ಆವರಿಸಿಕೊಂಡುಬಿಡುತ್ತಿದ್ದಳು. ಸುಖವಾದ ಜೀವನ.

ಹಾಗಿರುವಾಗ ಒಮ್ಮೆಲೆ ಮಥುರೆಯಿಂದ ಒಂದು ರಥ ಬಂದಿತ್ತು. ನನ್ನನ್ನು ಮಥುರೆಗೆ ಕರೆದೊಯ್ಯಲು !. ನನಗೆ ಅತೀವ ಆಶ್ಚರ್ಯ ಅನ್ನಿಸಿತು. ವರ್ಷಗಳ ಕಾಲ ಯುದ್ದೊನ್ಮಾದದಿಂದ ಮಥುರೆಯಿಂದ ಹೊರಗಿದ್ದ  ಕಂಸ , ಹಿಂದೆ ತಿರುಗಿ ಬಂದಿದ್ದ. ಮಾಡಿದ್ದ ಅತಿಯಾದ ಯುದ್ದಗಳು ಹಾಗು ಗೆಲುವಿನಿಂದ ಅತೀವವಾದ ಆತ್ಮವಿಶ್ವಾಸ ತುಂಬಿತ್ತು ಅನ್ನಿಸುತ್ತೆ. ಜೊತೆಗೆ ಅವನ ಸುತ್ತ ಇದ್ದ ದುಷ್ಟ ಹಿತೈಷಿಗಳ ಗುಂಪು. ನನ್ನನ್ನು ಮಥುರೆಗೆ ಕರೆತರಲು ಪ್ರೇರಿಪಿರಬಹುದು.

ಇಷ್ಟು ದಿನ ಪರದೆಯ ಹಿಂದೆ ನಡೆಯುತ್ತಿದ್ದ  ಘರ್ಷಣೆ ನೇರಾ ನೇರಾ ಎನ್ನುವಂತ ಕಾಲಕ್ಕೆ ನಾನು ಬಂದು ನಿಂತಿದ್ದೆ. ಇಷ್ಟು ಕಾಲದವವರೆಗೂ ನನ್ನನ್ನು ಪರದೆಯ ಹಿಂದೆ ಇಡಲಾಗಿತ್ತು , ಹಿರಿಯರೆಲ್ಲ ಸೇರಿ ನನ್ನನ್ನು ಸುಳ್ಳಿನ ಕತ್ತಲಿನಲ್ಲಿ ಮುಚ್ಚಿಟ್ಟಿದ್ದರು.

ಯಾವಾಗ ಕಂಸ ನೇರವಾಗಿ ನನಗೆ ಹೇಳಿಕಳಿಸಿದನೊ  ಆಗ ವಸುದೇವನ ಗುಂಪು ಪೂರ್ತಿಯಾಗಿ ಹೆದರಿಹೋದರು. ಅವರಿಗೆಲ್ಲ ಅರ್ಥವಾಗಿಹೋಗಿತ್ತು ಕಂಸನು ನನ್ನನ್ನು ಹಾಗು ಅಣ್ಣ ಬಲರಾಮನನ್ನು ಸುಮ್ಮನೆ ಉಪಚಾರಕ್ಕಾಗಿ  ಮದುರೆಗೆ ಕರೆಸುತ್ತಿಲ್ಲ , ಮಥುರಾಗೆ ನಾನು ಹೋದ ಕ್ಷಣದಲ್ಲೆ ನಾನಿನ್ನು ಹಿಂದಿರುಗಿ ಬರುವದಿಲ್ಲ ಅನ್ನುವುದು ಎಲ್ಲರಿಗು ಅರ್ಥವಾಗಿಹೋಗಿತ್ತು. ನನ್ನನ್ನು ಹಾಗು ಅಣ್ಣ ಬಲರಾಮನನ್ನು ಕೊಲ್ಲುವ ಕಾರಣಕ್ಕಾಗಿಯೆ    ಕರೆಯಲಾಗಿತ್ತು. ಆದರೆ ನೆಪ ಮಾತ್ರ ಮಥುರಾನಗರದಲ್ಲಿ  ನಡೆಯುತ್ತಿರುವ ಉತ್ಸವ.

ಮಥುರೆಯಿಂದ ಬಂದಿದ್ದ ಅಕ್ರೂರ ಹಾಗು ಉಳಿದ ಹಿರಿಯರು, ರಾಜಕಾರಣಕ್ಕೆ ಅತಿ ಸನಿಹದಲ್ಲಿರುವರು, ನಿರ್ಧರಿಸಿದ್ದರು. ಮುಂದೆಯು ಸಹ ನನ್ನನ್ನು ಸುಳ್ಳಿನ ಕತ್ತಲಿನಲ್ಲಿ ಇಡುವದರಿಂದ ನನ್ನ ಜೀವಕ್ಕೆ ತೊಂದರೆ ಇದೆ ಎಂದು. ಹಾಗಾಗಿ ಅವರೆಲ್ಲ ಸೇರಿ ಗೋಕುಲದಲ್ಲಿ ಸಭೆ   ನಡೆಸಿ ನಿರ್ಧರಿಸಿ, ನನ್ನನ್ನು ಕರೆಸಿದರು, ಎಲ್ಲರ ನಡುವೆ ನಾನು ಇರುವಾಗ ನಾನು ನಂದಗೋಪನ ಮಗ ಅಲ್ಲ , ಬದಲಿಗೆ ಸೆರೆಯಲ್ಲಿರುವ   ವಸುದೇವನ ಮಗ ಎನ್ನುವ ಸತ್ಯವನ್ನು  ನನ್ನ ಮುಂದೆ ತೆರೆದಿಟ್ಟರು. ಅಷ್ಟೆ ಅಲ್ಲ ನನ್ನ ಜನನವಾಗಿರುವುದೆ ಕಂಸನನ್ನು ಕೊಲ್ಲಲ್ಲು ಎನ್ನುವ ಸತ್ಯವನ್ನು ಸಹ ಒತ್ತಿ ಒತ್ತಿ ಹೇಳಿದರು. ತಂದೆ ತಾಯಿಯರನ್ನು ಸೆರೆಯಿಂದ ಬಿಡಿಸುವ ಜವಾಬ್ದಾರಿಯು ನನ್ನದೆ ಆಗಿತ್ತು”

ಗಣೇಶ

“ಕೃಷ್ಣ ಎಲ್ಲವನ್ನು ಒಟ್ಟಿಗೆ ಕೇಳುವಾಗ,  ಜವಾಬ್ದಾರಿ ತಲೆಯ ಮೇಲೆ ಬರುವಾಗ ನಿನಗೆ ಅಚ್ಚರಿಯಾಗಲಿಲ್ಲವೆ. ಭಯ ಅನ್ನಿಸಲಿಲ್ಲವೆ. ಅಲ್ಲದೆ ನೀನು ಮಥುರೆಗೆ ಹೋಗಬೇಕಿತ್ತು. ಅಲ್ಲಿ ನಿನ್ನ ಜೀವಕ್ಕೆ ಕುತ್ತು ಇದೆ ಎಂದು ತಿಳಿದಿತ್ತು. ಹಾಗಿರುವಾಗ ಮಥುರೆಗೆ ಹೋಗಲು ಹೇಗೆ ಒಪ್ಪಿದೆ”

ಕೃಷ್ಣ

“ಗಣೇಶ , ಅಚ್ಚರಿ ಸ್ವಲ್ಪ ಕಡಿಮೆಯೆ ಆಯಿತು ಅಂದುಕೋ” ನಗುತ್ತಿದ್ದ ಕೃಷ್ಣ

“ನಾನು ಮೊದಲು ಊಹಿಸಿದ್ದೆ ಇಂತದೋ ಏನೋ ಇದ್ದೆ ಇದೆ , ಎಂದಿಗೊ ನನ್ನ ಎದುರಿಗೆ ಸತ್ಯ ಅನಾವರಣಗೊಳ್ಳುತ್ತೆ ಎಂದು ತಿಳಿದಿದ್ದೆ, ಹಾಗಾಗಿ ಅಚ್ಚರಿ ಆಶ್ಚರ್ಯಗಳು ಸ್ವಲ್ಪ ಕಡಿಮೆಯೆ ಆಯಿತು. ಆದರೆ ನನ್ನ ಕಣ್ಣೆದುರಿಗೆ ನಿಂತಿದ್ದು ಅಮ್ಮ ಯಶೋಧ, ಹಾಗು ನನ್ನ ಪ್ರಿಯ ಸಖಿ ರಾಧೆ ಇಬ್ಬರೆ. ತಂದೆ ನಂದಗೋಪನಿಗೆ ಮೊದಲೆ ತಿಳಿದಿತ್ತು ಅನ್ನುವುದು ಸತ್ಯ. ಹಾಗಾಗಿ ಸಭೆಯಲ್ಲಿ ಅವರು ಸುಮ್ಮನೆ ಮೌನವಾಗಿ ಕುಳಿತು ನನ್ನತ್ತ ನೋಡುತ್ತಿದ್ದರು. ಆದರೆ ಮುಗ್ದೆಯಾದ ನನ್ನ ತಾಯಿ ವಿಷಯವನ್ನು ಹೇಗೆ ಸ್ವೀಕರಿಸುವರೊ ಅನ್ನುವ ಆತಂಕ ನನ್ನನ್ನು ಕಾಡಿಸುತ್ತಿತ್ತು. ಹಾಗೆಯೆ ರಾಧೆ ಎನ್ನುವ ಆ ಹೆಣ್ಣು ನನ್ನನ್ನು ಕೇವಲ ಗೋಕುಲದ ಒಬ್ಬ ಹುಡುಗನನ್ನಾಗಿಯೆ ನೋಡಿರುವಳು. ಈಗ ಇಂತಹ ಒಂದು ದುರ್ಗಮ ಲೋಕಕ್ಕೆ ಕಾಲಿಡಲು ಹೋಗುತ್ತಿರುವನೆಂಬ ಸತ್ಯವನ್ನು ಹೇಗೆ ಅರಗಿಸಿಕೊಳ್ಳುವಳು ಎನ್ನುವ ವ್ಯಥೆ ನನ್ನನ್ನು ಕಾಡಿತ್ತು. ಅದೇಕೊ ನನಗೆ ಅನ್ನಿಸಿಬಿಟ್ಟಿತು. ಈಗ ಗೋಕುಲದಿಂದ ನಾನು ಮಥುರೆಗೆ ಹೋಗುತ್ತಿರುವುದು ಅಲ್ಪಕಾಲಕ್ಕಲ್ಲ. ಅದು ಶಾಶ್ವತವಾದ ಪಯಣ ಎಂದು. ಮತ್ತೆಂದು ಹಿಂದಿರುಗಿ ಬರಲಾರೆ ಎನ್ನುವ ಸತ್ಯ ಅದು ಹೇಗೊ ನನ್ನ ಮನಸಿಗೆ ಹಿಂಸೆ ಕೊಡುತ್ತಿತ್ತು. ಯಶೋಧ ಅಮ್ಮನನ್ನು ನೆನೆಯುತ್ತ  ಕಣ್ಣುಗಳಲ್ಲಿ ದುಃಖಾಶ್ರು ತುಂಬುತ್ತಿತ್ತು. ಆದರೆ ಅದು ಏಕೊ ಮೊದಲ ಸಾರಿ ಹೋಗುತ್ತಿದ್ದರು ಮಥುರೆ ಪರಿಚಿತ ಎಂದೆ ಅನ್ನಿಸುತ್ತಿತ್ತು. ಭಯವಾಗಲಿ ಆತಂಕವಾಗಲಿ ಯಾವ ಭಾವವು ಕಾಡಲೆ ಇಲ್ಲ. “

ಗಣೇಶ

’ಮಥುರೆಗೆ ಹೋಗುವಾಗ ಕಂಸ ಹೇಗಿರುವನೊ, ಎನ್ನುವ ಭಯ ಅಥವ ಅವನನ್ನು ಕೊಲ್ಲುವುದು ಹೇಗೆ ಎನ್ನುವ ಯೋಚನೆಗಳು ಏನಾದರು ಕಾಡಿದವೆ”

ಕೃಷ್ಣ

“ಕಂಸನ ಬಗ್ಗೆ ಭಯವೇನು ಕಾಡಲಿಲ್ಲ. ಆದರೆ ಎಂತಹ ಸನ್ನಿವೇಶಗಳನ್ನು ಎದುರಿಸಬೇಕೊ ಅನ್ನುವ ಆತಂಕವಂತು ಇತ್ತು. ಆದರೂ ಅದೇಕೊ ಸರಿಯೊ ತಪ್ಪೊ   ನಾನು ಮಥುರೆಗೆ ಹೊರಡುವಾಗಲೆ ಕಂಸನನ್ನು ಕೊಲ್ಲಲು ಹೋಗುತ್ತಿರುವೆ ಎನ್ನುವ ಭಾವವೆ ನನ್ನ ಮನದಲ್ಲಿ ತುಂಬಿಹೋಗಿತ್ತು.   ನನ್ನ ಸುತ್ತಮುತ್ತಲಿದ್ದ ಜನ, ಅಕ್ರೂರ ಹಾಗು ಮಥುರೆಯಿಂದ ಬಂದಿದ್ದವರು ಸಹ ನನ್ನಲ್ಲಿ ಆ ರೀತಿಯ ಯೋಚನೆಗಳೆ ತುಂಬಿರುವಂತೆ ನೋಡಿಕೊಂಡರು”

ಗಣೇಶ

ಕೃಷ್ಣ ಸಾಮಾನ್ಯ ಜನರು ಎಷ್ಟೆ ಹೋರಾಡಬಹುದು. ಜಗಳವಾಡಬಹುದು ಆದರೆ ಒಬ್ಬ ಮನುಷ್ಯ ಮತ್ತೊಬ್ಬನನ್ನು ಕೊಲ್ಲುವುದು ಅನ್ನುವ ಮನಸ್ಥಿತಿ ತುಂಬಾನೆ ಕಷ್ಟ. ಅದು ಮೊದಲ ಬಾರಿ ಅನ್ನುವಾಗ ಅಷ್ಟು ಸುಲುಭವಲ್ಲ. ಹಾಗಿರುವಾಗ ನೀನು ಕಂಸನನ್ನು ಕೊಲ್ಲಲು ಹೊರಟೆ ಅನ್ನುವಾಗ ಅಥವ ಮಥುರೆಯಲ್ಲಿ ಕಂಸನನ್ನು ಕೊಲ್ಲುವಾಗ ನಿನ್ನ ಮನಸಿಗೆ ಹೇಗನಿಸಿತು.

ಮುಂದುವರೆಯುವುದು….

ಚಿತ್ರ ಕೃಪೆ : ಗೋಕುಲ ನಿರ್ಗಮನ

http://neelanjana.wordpress.com/tag/sri-rama-pattabhisheka/

 

Rating
No votes yet

Comments

Submitted by nageshamysore Sun, 10/06/2013 - 06:37

ಪಾರ್ಥಾ ಸಾರ್, ನಿಜದಲ್ಲಿ ನಡೆವ ಘಟನೆಗಳು ಸುತ್ತಲಿನವರ ಕಲ್ಪನೆ, ಉತ್ರ್ಪೇಕ್ಷೆ, ಊಹೆಗಳಿಂದ ಬಣ್ಣ ಬಣ್ಣದ ಕಥಾನಕಗಳಾಗಿ ರಂಜನೀಯ ರೂಪದಲ್ಲಿ ಹರಡುವುದು ಅತಾರ್ಕಿಕ ಸಾಧ್ಯತೆಯೇನಲ್ಲ. ಹಾಗೆ ಹಬ್ಬಿದ ಕಥೆಗಳ ರಂಜನೀಯತೆಯನ್ನು ಬದಿಗಿಟ್ಟು, ಪೂರ್ಣ ವಸ್ತುನಿಷ್ಠ ಕೋನದಲ್ಲಿ ವಿಶ್ಲೇಷಿಸುವ 'ರೀವರ್ಸ್ ಇಂಜಿನಿಯರಿಂಗ್' ತ್ರಾಸದಾಯಕ ಮತ್ತು ಸುಲಭ ಸಾಧ್ಯವಲ್ಲ. ಆ ಪ್ರಯತ್ನ ಚೆನ್ನಾಗಿ ಮೂಡಿಬರುತ್ತಿದೆ ಈ ಸರಣಿಯಲ್ಲಿ. ಮುಂದುವರೆಯಲಿ :-)

Submitted by ಗಣೇಶ Sun, 10/06/2013 - 23:47

In reply to by nageshamysore

ನಾಗೇಶರೆ, ಪಾರ್ಥರಿಗೆ ಇದು ತ್ರಾಸದಾಯಕವಲ್ಲ. ಅವರು ಕೃಷ್ಣನ ಪಾತ್ರದೊಳಗೆ ಮುಳುಗಿದ್ದಾರೆ. ೧೮ ಎಪಿಸೋಡ್ ಆದ ಮೇಲೆ ನಾವು ಅವರನ್ನು ಕಲಿಯುಗಕ್ಕೆ ಎಳಕೊಂಡು ಬರಬೇಕು.:)

Submitted by nageshamysore Mon, 10/07/2013 - 03:53

In reply to by ಗಣೇಶ

ಅದೇನು ತೀರಾ ಕ್ಲಿಷ್ಟಕರವಲ್ಲ ಬಿಡಿ ಗಣೇಶ್ ಜಿ.. ಇದೆ ಸೂತ್ರವನ್ನನುಸರಿಸಿದ ಸತ್ಯಕಾಮರ 'ರಾಜ ಕ್ರೀಡೆ' ಕಾದಂಬರಿ ಓದಿಸಿಬಿಟ್ಟರಾಯ್ತು :-)