ಈರುಳ್ಳಿ ಬೆಲೆಯೇರಿಕೆ, ಲಾಭ ಯಾರಿಗೆ?

ಈರುಳ್ಳಿ ಬೆಲೆಯೇರಿಕೆ, ಲಾಭ ಯಾರಿಗೆ?

ಈರುಳ್ಳಿ ಬೆಲೆ ದಿನದಿನವೂ ಏರುತ್ತಿದೆ. ಆಗಸ್ಟ್ ತಿಂಗಳಿನಲ್ಲಿ ಗಣೇಶ ಚತುರ್ಥಿಯ ಸಮಯದಲ್ಲಿ ಕಿಲೋ ರೂಪಾಯಿ ೮೦ ದಾಟಿತ್ತು!

ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ೨೦ ಸಪ್ಟಂಬರ್ ೨೦೧೩ (ಶುಕ್ರವಾರ)ರಂದು ಈರುಳ್ಳಿಯ ರಫ್ತಿನ ಕನಿಷ್ಠ ದರವನ್ನು ಟನ್ನಿಗೆ ೯೦೦ ಡಾಲರ್ ಎಂದು ನಿಗದಿಪಡಿಸಿತು. (ಈರುಳ್ಳಿಯ ರಫ್ತನ್ನು ನಿಯಂತ್ರಿಸಿ, ಈರುಳ್ಳಿ ಬೆಲೆ ಇಳಿಸಲಿಕ್ಕಾಗಿ) ಇದರಿಂದಾಗಿ ದೇಶದ ಎರಡು ಮುಂಚೂಣಿ ಈರುಳ್ಳಿ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಕುಸಿಯಿತು.

ಮುಂಬೈಯಿಂದ ೨೨೦ ಕಿಮೀ ದೂರದಲ್ಲಿರುವ ಲಾಸಲ್‍ಗಾಂವ್‍ನ ಕೃಷಿ ಉತ್ಪನ್ನ ಮಾರುಕಟ್ಟಿಯು ನಮ್ಮ ದೇಶದ ಅತಿ ದೊಡ್ಡ ಈರುಳ್ಳಿ ಮಾರುಕಟ್ಟೆ. ಅಲ್ಲಿ ಆಗಸ್ಟಿನ ೩ನೇ ವಾರದಲ್ಲಿ ಈರುಳ್ಳಿ ರಖಂ ಮಾರಾಟದ ಬೆಲೆ ಕ್ವಿಂಟಾಲಿಗೆ ರೂ.೫,೬೦೦. ಕೇಂದ್ರ ಸರಕಾರದ ಕ್ರಮದಿಂದಾಗಿ, ಲಾಸಲ್‍ಗಾಂವ್ ಮಾರುಕಟ್ಟೆಯಲ್ಲಿ ೨೦ ಸಪ್ಟಂಬರ್ ೨೦೧೩ರಂದು ಈರುಳ್ಳಿಯ ಬೆಲೆ ಕ್ವಿಂಟಾಲಿಗೆ ರೂ.೧,೦೦೦ಕ್ಕಿಂತ ಜಾಸ್ತಿ ಕುಸಿಯಿತು. ಅಲ್ಲಿ ಅಂದು ಕನಿಷ್ಠ ಸರಾಸರಿ ದರ ಕ್ವಿಂಟಾಲಿಗೆ ರೂ.೨,೦೦೦ ಹಾಗೂ ಗರಿಷ್ಠ ಸರಾಸರಿ ದರ ರೂ.೪,೩೫೦ ( ಆ ದಿನ ಒಟ್ಟು ಮಾರಟಕ್ಕೆ ಬಂದ ಈರುಳ್ಳಿ ೫,೫೦೦ ಕ್ವಿಂಟಾಲ್)

ಕರ್ನಾಟಕದ ಹುಬ್ಬಳ್ಳಿಯ ಈರುಳ್ಳಿ ಮಾರುಕಟ್ಟೆಯಲ್ಲಿ ಕೂಡ ಇದೇ ಪರಿಸ್ಥಿತಿ. ನೂರಾರು ರೈತರು ಮಾರಾಟಕ್ಕಾಗಿ ಈರುಳ್ಳಿಯನ್ನು ಎಪಿಎಂಸಿಗೆ ತಂದಿದ್ದರು. ಆದರೆ ರಖಂ ಖರೀದಿದಾರರಾದ ಏಜೆಂಟರು, ಈರುಳ್ಳಿಯ ಕನಿಷ್ಠ ಬೆಲೆಯನ್ನು ಕ್ವಿಂಟಾಲಿಗೆ ರೂ.೧೦೦ ಎಂದು ಘೋಷಿಸಿದರು. ಇದಕ್ಕೆ ಅವರಿತ್ತ ಕಾರಣ: ಈರುಳ್ಳಿ ರಫ್ತಿಗೆ ಕೇಂದ್ರ ಸರಕಾರದ ತಡೆ ಮತ್ತು ರೈತರು ತಂದ ಈರುಳ್ಳಿಯ ಕಳಪೆ ಗುಣಮಟ್ಟ.

ಇದರಿಂದ ರೊಚ್ಚಿಗೆದ್ದ ರೈತರು ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಒಂದು ತಾಸು ರಸ್ತೆ ತಡೆ ನಡೆಸಿದರು. ಹಿಂದಿನ ದಿನ ಈರುಳ್ಳಿಯ ಕನಿಷ್ಠ ಬೆಲೆ ಕ್ವಿಂಟಾಲಿಗೆ ರೂ.೩,೦೦೦ ಇದ್ದದ್ದು, ಈ ದಿನ ರೂ.೧೦೦ಕ್ಕೆ ಕುಸಿದಿತ್ತು. ಹಾಗೆಯೇ ಗರಿಷ್ಠ ಬೆಲೆ ಕ್ವಿಂಟಾಲಿಗೆ ರೂ.೪,೭೦೦ ಇದ್ದದ್ದು ರೂ.೧,೫೦೦ಕ್ಕೆ ಕುಸಿದಿತ್ತು. ಇದುವೇ ಅವರ ಆಕ್ರೋಶಕ್ಕೆ ಕಾರಣ. ಕೊನೆಗೆ ಎಪಿಎಂಸಿ ಅಧಿಕಾರಿಗಳು ಈರುಳ್ಳಿ ಹರಾಜನ್ನು ಮರುದಿನಕ್ಕೆ ಮುಂದೂಡಿದರು.

ಮರುದಿನ ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಗರಿಷ್ಠ ಬೆಲೆ ಕ್ವಿಂಟಲ್ಲಿಗೆ ರೂ.೩,೮೦೦ಕ್ಕೆ ಏರಿತು ಎಂಬುದು ಬೇರೆ ಮಾತು. ಇಂತಹ ಪರಿಸ್ಥಿತಿಯಲ್ಲಿ, ಬೆಳಗಾಂ ಜಿಲ್ಲೆಯ ನಂದಿಹಳ್ಳಿಯ ಪರಶು ಮಾಡಾರ್ ಅವರ ಮಾತು ರೈತರ ಅಸಹಾಯಕತೆಯನ್ನು ಧ್ವನಿಸುತ್ತದೆ, "ಇದೇ ಗುರುವಾರ ನಾನು ಕ್ವಿಂಟಾಲಿಗೆ ೪,೨೦೦ ರೂಪಾಯಿ ರೇಟಲ್ಲಿ ೨೦೦ ಚೀಲ ಈರುಳ್ಳಿ ಮಾರಿದ್ದೆ. ಇವತ್ತು (ಶುಕ್ರವಾರ) ಅಂಥದ್ದೇ ೧೦೦ ಚೀಲ ಈರುಳ್ಳಿ ಮಾರಿದ್ದು ಕ್ವಿಂಟಾಲಿಗೆ ೧,೫೦೦ ರೂಪಾಯಿ ರೇಟಲ್ಲಿ. ೨೪ ಗಂಟೆಯೊಳಗೆ ಈರುಳ್ಳಿ ರೇಟು ಅದೆಂಗೆ ಕುಸೀತದೆ? ಇದೆಲ್ಲ ಏಜೆಂಟರ ಮತ್ತು ಎಪಿಎಂಸಿ ಅಧಿಕಾರಿಗಳ ಹುನ್ನಾರ."

ಬಡವರ ಊಟಕ್ಕೆ ಬೇಕಾದ ಈರುಳ್ಳಿಯ ಬೆಲೆ ಏರಿಸಿ ಲಾಭ ಮಾಡಿಕೊಳ್ಳಲಿಕ್ಕಾಗಿ ಅದನ್ನು ವ್ಯಾಪಾರಿಗಳು ದಾಸ್ತಾನು ಮಾಡುತ್ತಿದ್ದಾರೆ ಎಂಬುದು ಸರಕಾರಕ್ಕೆ ತಿಳಿದಿದೆ. ಆದರೂ ರಖಂ ವ್ಯಾಪಾರಿಗಳ ಉಗ್ರಾಣಗಳಿಗೆ ಸರಕಾರ ಯಾಕೆ ದಾಳಿ ಮಾಡುತ್ತಿಲ್ಲ?

ಈ ಪ್ರಶ್ನೆಯಲ್ಲಿ ಅಡಗಿದೆ ಈರುಳ್ಳಿಯ ರಾಜಕೀಯ. ೧೯೯೮ರಲ್ಲಿ ಈರುಳ್ಳಿ ಬೆಲೆ ಸರಕಾರಗಳನ್ನು ಅಲುಗಾಡಿಸಿದ್ದು ಈಗ ಚರಿತ್ರೆ. ಆಗ, ತನ್ನ ತಪ್ಪು ಧೋರಣೆ ಮನಗಂಡ ಕೇಂದ್ರ ಸರಕಾರ ಈರುಳ್ಳಿಯನ್ನು ಅತ್ಯಾವಶ್ಯಕ ವಸ್ತುಗಳ ಕಾಯಿದೆ, ೧೯೫೫ರ ಅನುಸಾರ ನಿಯಂತ್ರಣಕ್ಕೆ ಒಳಪಡಿಸಿತು. ಅದರ ಪರಿಣಾಮವಾಗಿ ಉಗ್ರಾಣಗಳಿಗೆ ದಾಳಿ ನಡೆಸಿ, ಈರುಳ್ಳಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಾಧ್ಯವಾಯಿತು.

ಆ ಕಾಲದಲ್ಲಿ, ರಾಜಕಾರಣಿಗಳಿಗೆ ಸಂಕಟ ತರಿಸಬಲ್ಲ ಈರುಳ್ಳಿ ತಮಗೆ ಲಾಭ ತರಬಲ್ಲುದು ಎಂದು ಭಾವಿಸಿದರು ರೈತರು. ಹೆಚ್ಚೆಚ್ಚು ಜಮೀನಿನಲ್ಲಿ ಈರುಳ್ಳಿ ಬೆಳೆಯತೊಡಗಿದರು. ಎರಡೇ ವರುಷಗಳಲ್ಲಿ ಈರುಳ್ಳಿಯ ಉತ್ಪಾದನೆ ಹಲವು ಪಟ್ಟು ಹೆಚ್ಚಿತು. ಇದರಿಂದಾಗಿ ಬೆಲೆ ಕುಸಿಯಿತು; ಕ್ವಿಂಟಾಲಿಗೆ ರೂ.೧೫೦ರಿಂದ ರೂ.೨೦೦ ಮಟ್ಟಕ್ಕೆ. ಕಂಗಾಲಾದ ಬೆಳೆಗಾರರು ಲಾಸಲ್‍ಗಾಂವ್‍ನಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಅದೇ ಸಂದರ್ಭದಲ್ಲಿ ಜನ್ಮ ತಳೆಯಿತು ಶರದ್ ಪವಾರ್ ಮುಂದಾಳುತನದ ಎನ್‍ಸಿಪಿ (ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ)

ಅನಂತರ ನಡೆದದ್ದು ರಾಜಕೀಯ ಚದುರಂಗದಾಟ. ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎನ್‍ಸಿಪಿ ಪ್ರತ್ಯೇಕವಾಗಿ ಸೆಣಸಿದವು. ಆದರೆ ಚುನಾವಣೆಯ ನಂತರ ಜೊತೆಗೂಡಿ ಸರಕಾರ ರಚಿಸಿದವು. ಆಗ ಮಾರುಕಟ್ಟೆಯಲ್ಲಿ ಈರುಳ್ಳಿಯ ಸುಗ್ಗಿ. ಈರುಳ್ಳಿ ಬೆಳೆಗಾರರನ್ನೂ ವ್ಯಾಪಾರಿಗಳನ್ನೂ ತನ್ನೆಡೆಗೆ ಸೆಳೆಯಲಿಕಾಗಿ ಮಹಾರಾಷ್ಟ್ರ ಸರಕಾರದಿಂದ ಈರುಳ್ಳಿ ಖರೀದಿ ಘೋಷಣೆ, ಕ್ವಿಂಟಾಲಿಗೆ ರೂ.೩೦೦ರಿಂದ ರೂ.೩೫೦ರ ದರದಲ್ಲಿ. ಆದರೆ, ಮಹಾರಾಷ್ಟ್ರ ಸರಕಾರ ಈ ವ್ಯವಹಾರದಲ್ಲಿ ಕೈಸುಟ್ಟುಕೊಂಡಿತು. ಅಂತಿಮವಾಗಿ, ಟನ್ನುಗಟ್ಟಲೆ ಕೊಳೆತ ಈರುಳ್ಳಿಯನ್ನು ಹೊಂಡಕ್ಕೆ ಸುರಿದು, ಮಹಾರಾಷ್ಟ್ರ ಸರಕಾರ ರೂ.೧೮೨ ಕೋಟಿ ನಷ್ಟ ಅನುಭವಿಸಬೇಕಾಯಿತು. ಅಂತೂ ೨೦೦೪ರಲ್ಲಿ ಈರುಳ್ಳಿಯನ್ನು ಅತ್ಯಾವಶ್ಯಕ ವಸ್ತುಗಳ ಕಾಯಿದೆಯ ವ್ಯಾಪ್ತಿಯಿಂದ ಹೊರಗಿಡಲಾಯಿತು.

ಈಗ ಕೆಂದ್ರ ಸರಕಾರ ಮಾಡಬೇಕಾದ್ದೇನು? ಈರುಳ್ಳಿ ಅತ್ಯಾವಶ್ಯಕ ವಸ್ತುವೆಂದು ಕಾನೂನಿನ ಪ್ರಕಾರ ಪುನಃ ಪರಿಗಣಿಸಲ್ಪಡಬೇಕು. ಆಗ ಮಾತ್ರ, ಕೇಂದ್ರ ಮತ್ತು ರಾಜ್ಯ ಸರಕಾರ ಈರುಳ್ಳಿ ಕಾಳಸಂತೆಕೋರರ ಉಗ್ರಾಣಗಳಿಗೆ ದಾಳಿ ನಡೆಸಿ, ಈರುಳ್ಳಿ ದಾಸ್ತಾನು ವಶಪಡಿಸಿಕೊಂಡು, ಅದನ್ನು ನ್ಯಾಯಬೆಲೆ ಅಂಗಡಿಗಳಿಂದ ವಿತರಿಸಲು ಸಾಧ್ಯ.

ಹೀಗೆ ಮಾಡಿದರೆ, ಈರುಳ್ಳಿ ಬೆಲೆ ಇಳಿಯದೇ ಇದ್ದೀತೇ? ಆದರೆ ಸರಕಾರ ಕಠಿಣಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ರಖಂ ವ್ಯಾಪಾರಿಗಳಿಗೆ ಲಾಭವೇ ಹೊರತು ಬೆಳೆಗಾರರಿಗೇನೂ ಲಾಭವಿಲ್ಲ. ಬೆಳೆಗಾರರಿಗೂ ರೈತರಿಗೂ ಸರಕಾರದಿಂದ ಸಿಗುವುದು ಕೇವಲ ಭರವಸೆಗಳು, ಅಲ್ಲವೇ?

Comments

Submitted by Manjunatha D G Mon, 10/07/2013 - 20:51

ಯಾವುದೇ ಕೃಷಿ ಉತ್ಪನ್ನಗಳನ್ನು ಕೃಷಿಕ‌ ಮಾರುವ‌ ಬೆಲೆಗು, ಗ್ರಾಹಕ‌ ಕೊಳ್ಳುವ‌ ಬೆಲೆಗು ಮದ್ಯೆ ಇರುವ‌ ಅಂತರ‌ ಬಹಳ‌ ಕಡಿಮೆ ಇರಬೆಕು. ಇದರಿಂದ‌ ಕೃಷಿಕನಿಗೂ ಒಳ್ಳೆಯ‌ ಬೆಲೆ ಸಿಗುತ್ತದೆ ಮತ್ತು ಗ್ರಾಹಕರಿಗೂ ಬೆಲೆಯ‌ ಬಿಸಿ ತಟ್ಟುವುದಿಲ್ಲ‌. . ಕೃಷಿ ಉತ್ಪನ್ನಗಳ ಮಾರಾಟ‌ ಮಾಡಲು ಕೃಷಿಕರಿಗೆ ಅನುಕೂಲವಾಗಲೆಂದು ಎ.ಪಿ.ಎಂ.ಸಿ.ಇದ್ದರೂ ಸ್ತಿರವಾದ‌ ಬೆಲೆ ಇಲ್ಲದೇ ಜೂಜಿನ‌ ಮಾದರಿಯಲ್ಲಿ ಯಾವಾಗಲೋ ಕಾರಣವೇ ತಿಳಿಯದೆ ಬೆಲೆ ಏರಿ ಮಾಯವಾಗುವ‌ ಪರಿ ಒಂದು ಅಚ್ಚರಿಯೇ ಸರಿ. ರಾಜಕಾರಣಿಗಳಿಗೆ ವ್ಯಾಪಾರಸ್ತನೇ ಹತ್ತಿರದವನಲ್ಲವೆ ? ಅದಕ್ಕೇ ಹೀಗೆ ಆಗುತ್ತಿರಬಹುದು.
Submitted by addoor Thu, 10/10/2013 - 10:50

In reply to by Manjunatha D G

ಪ್ರಿಯ‌ ಮಂಜುನಾಥ್, ನಮ್ಮ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ‌ ರೈತರ‌ ಸಂಖ್ಯೆ ಸುಮಾರು ಎರಡೂವರೆ ಲಕ್ಷ. ಇನ್ನಾದರೂ ರೈತರ‌ ಹಿತರಕ್ಷಣೆಗಾಗಿ ಸರಕಾರ‌ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ‍_ ಅಡ್ಡೂರು