ಹದಿನಾರು ಸಾವಿರ ನಾರಿಯರ ವಲ್ಲಭ ‍‍[ಕೃಷ್ಣ..ಕೃಷ್ಣ..ಕೃಷ್ಣ (14)]

ಹದಿನಾರು ಸಾವಿರ ನಾರಿಯರ ವಲ್ಲಭ ‍‍[ಕೃಷ್ಣ..ಕೃಷ್ಣ..ಕೃಷ್ಣ (14)]

ಚಿತ್ರ

ಕೃಷ್ಣ..ಕೃಷ್ಣ..ಕೃಷ್ಣ (14)- ಹದಿನಾರು ಸಾವಿರ ನಾರಿಯರ ವಲ್ಲಭ

ಇಲ್ಲಿಯವರೆಗೂ ..
ಕೃಷ್ಣ
“ಗಣೇಶ ನೀನು ಅದೇಕೊ ನನ್ನನ್ನು ಅಪರಾದಿ ಸ್ಥಾನದಲ್ಲಿ ನಿಲ್ಲಿಸಿ ಪ್ರಶ್ನೆ ಕೇಳುತ್ತಿರುವೆ ಅನ್ನಿಸುತ್ತಿದೆ, ನನ್ನ ವರ್ತನೆ ಬಗ್ಗೆ ನಾನೆ ವ್ಯಾಖ್ಯಾನ ಮಾಡಬೇಕೆ ವಿಚಿತ್ರವೆನಿಸುತ್ತಿದೆ. ಅಷ್ಟಕ್ಕು ಗೋಪಿಕೆಯರು ಎಂದರೆ ಯಾರು ಗಣೇಶ, ಅವರೆಲ್ಲ ಮುಗ್ದ , ಗೋಕುಲದ ಹೆಣ್ಣು ಮಕ್ಕಳು. ನನ್ನ ಬಗ್ಗೆ ಹಲವು ವಿಧ ವಿಧವಾದ ಕತೆಗಳನ್ನು ಕೇಳಿ ಮರುಳಾಗಿ ಬಂದ ಮುಗ್ದೆಯರು, ನನ್ನ ಕೊಳಲಿನ ದ್ವನಿ ಕೇಳಿ ಇಷ್ಟಪಡುತ್ತಿದ್ದವರು. ನನ್ನ ನೋಡಲು ಮನೆಗಳಲ್ಲಿಯ ಕೆಲಸಗಳನ್ನು ತೊರೆದು ಬರುತ್ತಿದ್ದರು ಅನ್ನುವುದು ಸತ್ಯ. ಬಹುಶಃ ಅವರ ಭಾವ ಎಂತದು ಎಂದು ಯಾರು ಅರ್ಥಮಾಡಿಕೊಳ್ಳುವುದು ಕಷ್ಟವೆ. ಆದರೆ ಅಲ್ಲಿ ಕಾಮವಿದೆ, ನಾನು ಗೋಪಿಕೆಯರನ್ನೆಲ್ಲ ಕಾಮಿಸುತ್ತಿದ್ದೆ ಅನ್ನುವುದು ಅತ್ಯಂತ ಮೂರ್ಖತನವೆ ಗಣೇಶ. ಅಲ್ಲಿ ಇದ್ದದ್ದು ಶುದ್ದ ಸ್ನೇಹ, ಪ್ರೇಮ. ಅದು ಬೇರೆಯದೆ ಆದ ಶುಭ್ರ ನಿರಂಬಳ ನಿರಪೇಕ್ಷ ಲೋಕ”
ಮುಂದೆ ಓದಿ...
ಗಣೇಶ
“ಕೃಷ್ಣ ಇಲ್ಲಿ ನಿನ್ನನ್ನು ಅಪರಾಧಿ ಎನ್ನುವದಾಗಲಿ ಅಥವ ನಿನ್ನನ್ನು ವಿಚಾರಣೆ ನಡೆಸುತ್ತಿದ್ದೇನೆ ಅನ್ನುವದಾಗಲಿ ಸತ್ಯವಲ್ಲ. ನಾನು ನಿನ್ನ ಸ್ನೇಹಿತನಾಗಿ ಇಲ್ಲಿ ಕುಳಿತಿರುವೆ. ನನ್ನ ಉದ್ದೇಶದಲ್ಲಿ ಎರಡು ಭಾಗವಿದೆ. ಮೊದಲನೆಯದು ಸ್ನೇಹಿತನಾಗಿ ನಿನ್ನ ಮನವನ್ನು ಅರಿಯುವುದು. ನಿನ್ನಲ್ಲೆ ಹೆಪ್ಪುಕಟ್ಟಿರುವ ಭಾವನೆಗಳಲ್ಲ ನೀರಾಗಿ ಹರಿದರೆ, ಯುಗ ಯುಗಗಳಿಂದ ಹೊಗಳಿಕೆ ನಿಂದನೆಗಳನ್ನು ಹೇಳಿ ಕಲ್ಲಾಗಿರುವ ನಿನ್ನ ಮನ ಮೃದು ಮಾಡುವುದು. ಎರಡನೆ ಉದ್ದೇಶವಿದೆ, ಅದೆಂದರೆ ನಿನ್ನ ಜೀವನದ ಕತೆಯಲ್ಲಿ ಬಹಳಷ್ಟು ಉತ್ಪ್ರೇಕ್ಷೆ ಇದೆ ಎಂದು ನನ್ನ ಅನಿಸಿಕೆ. ನಿನ್ನ ಜೀವನದ ಬಗ್ಗೆ ನೀನೆ ಹೇಳುವಂತಾದರೆ ಹಲವು ಅನುಮಾನಗಳು ಗೊಂದಲಗಳು ದೂರವಾಗುವುವು ಅಲ್ಲವೆ?. ಅಥವ ಹೀಗೂ ಭಾವಿಸಿಕೊ, ನೀನು ಎದುರಿಗೆ ಇಲ್ಲದಾಗಲು ನಿನ್ನ ಬಗ್ಗೆ ಸದಾ ಅಪಾದನೆಗಳನ್ನು ಹೊರಿಸುತ್ತಿರುವ, ಅಥವ ಮಿಥ್ಯ ಪ್ರಚಾರಮಾಡುತ್ತಿರುವ, ಹಾಗೆ ಅತಿರೇಕಗಳ ಕತೆ ಹಬ್ಬಿಸುತ್ತಿರುವ ಎಲ್ಲರಿಗು ಸತ್ಯ ದರ್ಶನವಾಗುವದಲ್ಲವೆ. ಹಾಗು ಸರಿಯೆ ಅದಕ್ಕಾಗಿಯೆ ನಿನ್ನನ್ನು ನಾನು ಪ್ರಶ್ನೆ ಕೇಳುತ್ತಿರುವೆ ಎಂದು ಭಾವಿಸು. ಅನ್ಯಥಾ ಭಾವಿಸದಿರು”
ಕೃಷ್ಣ
“ನನಗೆ ಅರಿವಿದೆ ಗಣೇಶ ನಿನ್ನ ಸ್ವಭಾವವನ್ನು ಬಲ್ಲೆ. ಹಿಂದೊಮ್ಮೆ ಚತುರ್ಥಿಯದಿನ ನಿನ್ನನ್ನು ಪೂಜಿಸದೆ ಚಂದ್ರನನ್ನು ನೋಡಿದೆ ಎಂದು ನನ್ನ ಮೇಲೆ ಸ್ಯಮಂತಕ ಮಣಿಯನ್ನು ಕದ್ದೆ ಎನ್ನುವ ಅಪಾದನೆ ಬಂದಿತ್ತು. ನಂತರ ಅದು ಹೇಗೊ ಬಗೆಹರಿಸಿಕೊಂಡೆ ಅಂತ ಇಟ್ಟುಕೊ. ಈಗಲು ಸಹ ನನ್ನ ಮೇಲಿರುವ ಅಪಾದನೆಗಳ ನಿವಾರಣೆಗೆ ನೀನೆ ಸ್ವತಃ ಬಂದಿರುವೆ ಎನ್ನುವುದೆ ನನಗೆ ಸಂತಸ. ನನ್ನ ಮೇಲಿರುವ ಅಪಾದನೆಗಳಾದರೊ ಹತ್ತು ಹಲವು ತರದ್ದು, ಎಂಟು ಮಂದಿ ಪಟ್ಟದ ರಾಣಿಯರಲ್ಲದೆ, ಮತ್ತೆ ಹದಿನಾರು ಸಾವಿರ ಯುವತಿಯರನ್ನು ಮದುವೆ ಆದನೆಂದು ಎಲ್ಲರು ಹೇಳುವರು ಅದು ಹೊಗಳಿಕೆಯೊ , ನಿಂದನೆಯೊ ನಾನು ಅರಿಯೆ ಗಣೇಶ “
ಗಣೇಶ
“ಸರಿಯಾದ ವಿಷಯವನ್ನೆ ಕೆದಕಿದೆ. ನಾನು ಕೇಳುವ ಸಂಕಟ ತಪ್ಪಿಸಿದೆ ಬಿಡು. ಈಗ ಹೇಳು ನಿನಗೆ ಇದ್ದ ಎಂಟು ಪಟ್ಟದರಿಸಿಯರನ್ನು ಹೊರತುಪಡಿಸಿಯು ಹದಿನಾರು ಸಾವಿರ ಪತ್ನಿಯರನ್ನು ಏಕೆ ಮದುವೆಮಾಡಿಕೊಂಡೆ?. ಅದರ ಹಿಂದಿರುವ ಸತ್ಯವಾದರು ಏನು”
ಕೃಷ್ಣ
“ಗಣೇಶ ಎಂಟು ಮಂದಿ ರಾಣಿಯರ ಜೊತೆ ನನ್ನ ವಿವಾಹ ಬಹುತೇಕ ರಾಜಕೀಯ ಸ್ವರೂಪದ್ದು. ನಾನು ಆಗಿದ್ದ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿತ್ತು. ಜರಾಸಂಧನ , ಹಾಗು ಅವನ ಆಶ್ರಿತ ರಾಜನಾಗಿದ್ದ ರುಕ್ಮಿಣಿಯ ಅಣ್ಣ ರುಕ್ಮಾಂಗದನ ಅಭಿಮಾನ ಭಂಗ ಮಾಡಲು, ಅವರನ್ನು ಮಾನಸಿಕವಾಗಿ ಮಣಿಸಲು ರುಕ್ಮಿಣಿಯನ್ನು ನಾನು ವಿವಾಹವಾಗುವುದು ಅನಿವಾರ್ಯವಾಗಿತ್ತು. ಅಲ್ಲದೆ ರುಕ್ಮಿಣಿಯನ್ನು ನಾನು ಬಲವಂತವಾಗಿ ಹೊತ್ತು ಏನು ತರಲಿಲ್ಲ. ಅವಳಾಗಿಯೆ ಒಲಿದು ನನ್ನ ಜೊತೆ ಬಂದವಳು. ಒಲಿದು ಬಂದವಳನ್ನು ವಿವಾಹವಾಗುವುದು ಸಂಸ್ಕಾರ ಆಚಾರಗಳೆ ಆಗಿವೆ ಅನಾದಿಕಾಲದಿಂದಲು, ಅವಳನ್ನು ಮದುವೆಯಾದ ನಂತರ ರುಕ್ಮಾಂಗದನ ಮೇಲೆ ಒಂದು ಹಿಡಿತವಿತ್ತು. ಆದರೆ ಅ ಅವಕಾಶದಲ್ಲಿ ಶಿಶುಪಾಲ ನನಗೆ ಶತ್ರುವಾದ.
ಹಾಗೆ ಸತ್ಯಭಾಮೆಯಾದರು ಅಷ್ಟೆ. ಅವಳು ತನ್ನ ತಂದೆಯನ್ನು ವಿರೋಧಿಸಿ ನನ್ನನ್ನು ವಿವಾಹವಾದವಳು, ಅವಳ ತಂದೆ ಸತ್ರಾರ್ಜಿತ ನನ್ನ ಮೇಲೆ ಕಳ್ಳತನದ ಅಪಾದನೆ ಹೊರಸಿದವನು ಸ್ಯಮಂತಕ ಮಣಿಯ ಮರೆಯಾದ ಸಂದರ್ಭದಲ್ಲಿ., ನಾನು ಎಲ್ಲರೆದುರು ನಿರಪರಾಧಿ ಎಂದು ಸಾಧಿಸಿತೋರಿಸಬೇಕಾಯಿತು. ಅಂತಹ ಸತ್ರಾರ್ಜಿತನ ಮಗಳು ನನಗೆ ಒಲಿದು ಬಂದಾಗ ತಿರಸ್ಕರಿಸಲು ಸಾದ್ಯವಿರಲಿಲ್ಲ. ಅಲ್ಲದೆ ಅವರೆಲ್ಲ ನನ್ನ ಹಿನ್ನಲೆ ಅರಿತು ಬಂದವರೆ, ನಾನಾಗಲೆ ವಿವಾಹಿತನೆಂದು ತಿಳಿದು ಸಹ ನನ್ನನ್ನು ವರಿಸಿದವರು. ಅಲ್ಲಿ ನಾನು ಯಾರಿಗು ಮೋಸಮಾಡುವ ಪ್ರಶ್ನೆಯೆ ಇಲ್ಲ.
ನನಗೆ ಮತ್ತೊಂದು ಮಾತು ನಗು ತರಿಸುತ್ತದೆ ಗಣೇಶ. ನಾನು ಎಂದೂ ಯಾವ ರಾಜ್ಯಕ್ಕು ಚಕ್ರವರ್ತಿಯಾಗಿರಲಿಲ್ಲ ಕಡೆಗೆ ರಾಜನಾಗಿರಲು ಇಲ್ಲ, ಒಬ್ಬ ಸೈನ್ಯಾಧಿಕಾರಿಯು ಅಲ್ಲ. ಆದರುನನ್ನ ಪತ್ನಿಯರನ್ನು ಎಲ್ಲರು ಪಟ್ಟದರಸಿಯರು ಎಂದೆ ಕರೆದರು. ಪಟ್ಟವೆ ಇಲ್ಲದಿದ್ದರು ಪಟ್ಟದರಸಿಯರು ಎಂತ ವಿಚಿತ್ರವಲ್ಲವೆ”
ಕೃಷ್ಣ ನಗುತ್ತಿದ್ದ.
ಗಣೇಶ ಸಹ ನಗುತ್ತ ನುಡಿದ
“ಹೌದು ಕೃಷ್ಣ. ನಾನು ಹೇಳಲಿಲ್ಲವೆ ನೀನ ಜೀವನದ ಘಟನೆಗಳೆಲ್ಲ ಅಸಾಮಾನ್ಯವೆ. ಹಾಗು ಪವಾಡಸದೃಷ್ಯವೆ. ಅದಿರಲಿ ನನ್ನ ಪ್ರಶ್ನೆಯ ಮುಂದಿನ ಭಾಗಕ್ಕೆ ಉತ್ತರ ಹೇಳು. ಈ ರೀತಿ ಎಂಟು ಜನ ಇರುವಾಗಲು ನೀನು ಮತ್ತೆ ಹದಿನಾರು ಸಾವಿರ ಮಂದಿಯನ್ನು ವರಿಸಿದ್ದು ಅಸಹಜವಲ್ಲವೆ. ಜನರು ಕರೆಯುವ ಕಾಮುಕನೆಂಬ ಮಾತಿಗೆ ನೀನೆ ದಾರಿ ಮಾಡಿಕೊಟ್ಟಂತಲ್ಲವೆ ?”
ಕೃಷ್ಣ ನುಡಿದ
“ಗಣೇಶ ಈ ಪ್ರಸಂಗವನ್ನು ಹೇಗೆ ವರ್ಣಿಸಬೇಕು ನನಗೆ ತಿಳಿಯುತ್ತಿಲ್ಲ. ಆದರು ನನ್ನ ನೆನಪಿನಲ್ಲಿರುವಂತೆ ತಿಳಿಸುವೆ. ಆಗ ಪಾಂಡವರು ಅಶ್ವಮೇಧ ಯಾಗ ಮಾಡುತ್ತಿದ್ದ ಸಮಯ. ನಾನು ಜರಾಸಂಧನನ್ನು ಹೇಗಾದರು ಮುಗಿಸಿಬಿಡಲು ನಿರ್ಧರಿಸಿದ್ದೆ. ಮೊದಲಿಗೆ ನಾನು ಹಾಗು ಅಣ್ಣ ಬಲರಾಮನು ಹೋಗುವದೆಂದು ಅಂದುಕೊಂಡೆ. ಆದರು ಬಲರಾಮನು ಸಾಹಸಿಯಾದರು ದುಡುಕು ಅಲ್ಲದೆ ಜರಾಸಂಧನಿಗೆ ನನ್ನ ಹಾಗು ಬಲರಾಮನ ಪಟ್ಟುಗಳೆಲ್ಲ ತಿಳಿದಿವೆ. ನಮ್ಮೊಡನೆ ಯುದ್ದವೆಂದರೆ ವಿಜೃಂಭಿಸುತ್ತಾನೆ ಅನ್ನಿಸಿತು. ಅವನಿಗೆ ಸ್ವಲ್ಪ ಅನಿರೀಕ್ಷಿತವಾಗಿರಬೇಕು ಅಂದರೆ, ಭೀಮ ಹಾಗು ಅರ್ಜುನರೆ ಸರಿ ಅನ್ನಿಸಿತು. ವೇಶ ಮರೆಸಿ ಅಲ್ಲಿ ಹೋದೆವು. ನಗರ ಪ್ರವೇಶವಾದ ಮೇಲೆ ಅವನ ಅರಮನೆಯನ್ನು ಹೊಕ್ಕಮೇಲೆ ನಾವು ಎಂದು ಜರಾಸಂಧನಿಗೆ ತಿಳಿಯಿತು. ಅದು ಅವನಿಗೆ ಮೊದಲ ಅಘಾತ ನಾವು ನೇರ ಅವನ ಅರಮನೆಯನ್ನೆ ಪ್ರವೇಶ ಮಾಡಿದ್ದೆವು. ಅವನು ಸಹ ಮಾತಿಗೆ ಸಿಕ್ಕುಬಿದ್ದಿದ್ದ , ನಮ್ಮನ್ನು ನೇರ ಯುದ್ದದಲ್ಲಿ ಎದುರಿಸುವ ಅಹ್ವಾನ ಸ್ವೀಕರಿಸಿದ್ದ.
ನಿನಗೆ ಗೊತ್ತಿಲ್ಲ ಗಣೇಶ ಸೈನಿಕರ ಯುದ್ದವೆ ಬೇರೆ ಅಲ್ಲಿ ಸೋಲು ಗೆಲುವು ನಮ್ಮ ಸೈನ್ಯದ ಶಕ್ತಿಯನ್ನು, ನಮ್ಮಲ್ಲಿರುವ ಅಯುಧ ಶಕ್ತಿಯನ್ನು ಅವಲಂಬಿಸಿರುತ್ತೆ, ಆದರೆ ನೇರ ಮುಖಾಮುಖಿಯುದ್ದವೆ ಬೇರೆ ಅಲ್ಲಿ ಯಾವುದೆ ಇತರೆ ತಂತ್ರಗಳು ಕೆಲಸಮಾಡುವದಿಲ್ಲ. ಅವರ ದೈಹಿಕ ಶಕ್ತಿಯನ್ನಷ್ಟೆ ನಂಬಬೇಕಾಗಿರುತ್ತದೆ ನನಗೆ ಬೇಕಾಗಿದುದ್ದು ಸಹ ಅದೆ. ಜರಾಸಂಧ ಭೀಮನೊಡೆನೆ ನೇರ ಹಣಾಹಣಿಗೆ ಸಿದ್ದನಿದ್ದ “
ಗಣೇಶ ಉತ್ಸಾಹದಿಂದ ನುಡಿದ
“ಹೌದು ಕೃಷ್ಣ ಈ ಪ್ರಸಂಗ ಗೊತ್ತಿದೆ. ಭೀಮ ಜರಾಸಂಧನನ್ನು ಸೋಲಿಸಿ ಅರ್ಧ ಮಾಡಿ ಸೀಳಿದ ಕಡೆಗೊಮ್ಮೆ ನಿನ್ನ ಸಲಹಯಂತೆ ಉದುದ್ದಕ್ಕೆ ಸೀಳಿ ಬೇರೆ ಬೇರೆಯಾಗಿ ವಿರುದ್ಧ ಮುಖವಾಗುವಂತೆ ಹಾಕಿದ ಕಡೆಗೊಮ್ಮೆ ಭೀಮ ಗೆದ್ದ ಅಲ್ಲವೆ”.
ಕೃಷ್ಣ ನಗುತ್ತಿದ್ದ
“ಗಣೇಶ ನೀನು ನನ್ನ ಶ್ರಮ ತಪ್ಪಿಸಿದೆ. ನೀನು ಹೇಳಿದಂತೆ ಭೀಮ ಜರಾಸಂದನನ್ನು ಕೊಂದು ಆಗಿತ್ತು. ನಮಗೆ ರಾಜ್ಯದ ಹುಚ್ಚು ಏನಿರಲಿಲ್ಲ. ಜರಾಸಂಧನ ರಾಜ್ಯವನ್ನು ಅವನ ಮಗನಾದ ಸಹದೇವನಿಗೆ ವಹಿಸಿಬಿಟ್ಟೆವು. ಈ ದೊಡ್ದ ದೊಡ್ಡ ವೀರರ ಕತೆಯೆ ಇಷ್ಟು ನೋಡು ಹೊರಗೆ ಅವರೆಲ್ಲ ಪ್ರಖ್ಯಾತರಾಗಿರುತ್ತಾರೆ ಆದರೆ ಒಳಗೆ ಬರಿ ಹುಳುಕು ಅವರ ರಾಜ್ಯದಲ್ಲಿ ಅವರಿಗೆ ಸಾಕಷ್ಟು ವಿರೋಧವಿರುತ್ತದೆ, ಕಂಸನ ರಾಜ್ಯದಲ್ಲಿ ಇದ್ದಂತೆ ಜರಾಸಂಧನಿಗೆ ಒಳಗೆ ಸಾಕಷ್ಟು ವಿರೋಧವಿತ್ತು ಹಾಗಾಗಿ ನಮ್ಮ ಕೆಲಸ ಸಲಿಸಾಯಿತು. ಒಂದು ವಿಚಿತ್ರವೆಂದರೆ ಪ್ರಪಂಚದಲ್ಲಿ ಪ್ರಖ್ಯಾತ ವೀರರ ಮಕ್ಕಳು ಅದೇಕೊ ಹೇಡಿಗಳಾಗಿರುತ್ತಾರೆ ನೋಡು ಜರಾಸಂಧನ ಮಗ ಸಹದೇವನು ಹಾಗೆ ಹೆದರಿ ನಡುಗುತ್ತಿದ್ದ ನಮ್ಮ ಮಾತುಗಳನ್ನೆಲ್ಲ ಕೇಳಲು ಸಿದ್ದನಿದ್ದ

ಜರಾಸಂಧನಂತಹ ರಾಜರಿಗೆ ಅದೊಂದು ಮೋಜು, ಯಾವ ದೇಶದ ಮೇಲೆ ಯುದ್ದಕ್ಕೆ ಹೋದರು ಅವರನ್ನು ಸೋಲಿಸಿದ ನಂತರ ಅಲ್ಲಿಂದ ಕೆಲವು ಜೀತದಾಳುಗಳನ್ನು ಅಲ್ಲದೆ ಆ ದೇಶದಸುಂದರ ಯುವತಿಯರು ದಾಸಿಯರನ್ನೆಲ್ಲ ಎಳೆದು ತರುವುದು. ಜರಾಸಂಧನಾದರು ಇಪ್ಪತ್ತು ವರ್ಷ ಕಾಲ ಯುದ್ದದಲ್ಲಿಯೆ ಮುಳುಗಿದವನು. ಅವನ ಹೋಗಿ ಜಯಗಳಿಸಿದ ಕಡೆಯಲ್ಲೆಲ್ಲ ಸಿಗುತ್ತಿದ್ದ ಸಾವಿರಾರು ಸೇವಕರು, ಹಾಗೆ ಸಾವಿರಾರು ಸುಂದರ ಯುವತಿಯರನ್ನೆಲ್ಲ ಎಳೆದು ತಂದು ಸೆರೆಯಲ್ಲಿಟ್ಟಿದ್ದ. ಅವರನ್ನೆಲ್ಲ ಅವನಾಗಲಿ ಅವನ ಮಕ್ಕಳಾಗಲಿ ಸೈನಿಕರಾಗಲಿ ಸುಮ್ಮನೆ ಬಿಟ್ಟಿರಲಿಲ್ಲ.
ನಾನು ಅಂತದನ್ನೆಲ್ಲ ಗಮನಿಸಿ ಸೆರೆಮನೆಯಲ್ಲಿರುವ ಎಲ್ಲ ಯುದ್ದಖೈದಿಗಳನ್ನು ದಾಸಿಯರನ್ನು ಬಿಡುಗಡೆಮಾಡಬೇಕೆಂದು ಜರಾಸಂಧನ ಮಗನಿಗೆ ತಿಳಿಸಿದೆ ಅವನು ಒಪ್ಪಿ ಎಲ್ಲರನ್ನು ಬಿಟ್ಟುಬಿಟ್ಟ ಸಾವಿರಾರು ಜನ ನನ್ನನ್ನು ಹೊಗಳುತ್ತ ಅವರ ದೇಶಕ್ಕೆ ಹೊರಟುಹೋದರು. ಆದರೆ ಸೆರೆಯಲ್ಲಿದ್ದ ರಾಜಕುವರಿಯರು ದಾಸಿಯರದೆ ಸಮಸ್ಯೆಯಾಯಿತು ಅವರನ್ನೆಲ್ಲ ಬಿಡುಗಡೆ ಮಾಡಿದರು ಸಹ ಅವರ ದೇಶಕ್ಕೆ ಅವರು ಹೋಗಲು ಸಿದ್ದವಿರಲಿಲ್ಲ. ಏಕೆಂದರೆ ಅವರಿಗೆ ಗೌರವಪುರ್ಣ ಸ್ವಾಗತ ಸಿಗುವದಿಲ್ಲ ಎನ್ನುವ ಖಾತ್ರಿ ಅವರಿಗೆ. ನನಗು ಸಹ ಅವರನ್ನೆಲ್ಲ ಏನು ಮಾಡುವುದು ಎನ್ನುವ ಸಮಸ್ಯೆ. ಜರಾಸಂಧನನ್ನು ಕೊಲ್ಲಲು ಹೋಗಿ ಅಲ್ಲಿಂದ ಯುದ್ದಖೈದಿಗಳನ್ನು ಬಿಡಿಸಿ ನನ್ನ ಮೇಲೆ ಸಮಸ್ಯೆ ನಾನೆ ಎಳೆದುಕೊಂಡಿದ್ದೆ.
ಅವರೆಲ್ಲರೂ ನನ್ನನ್ನು ಕೇಳಿಕೊಂಡರು ಕೃಷ್ಣ ನಮಗೆಲ್ಲ ಏನಾದರು ದಾರಿ ತೋರಿಸು ಎಂದು . ಸರಿ ಎಂದು ಧೈರ್ಯ ಮಾಡಿ ಎಲ್ಲರನ್ನು ದ್ವಾರಕೆಗೆ ಸಾಗಿಸಿಕೊಂಡು ಬಂದೆ. ಯಾರಮನೆಗಳಲ್ಲು ಅವರಿಗೆ ಸ್ವಾಗತವಿರಲಿಲ್ಲ. ಕಡೆಗೊಮ್ಮೆ ಅವರನ್ನೆಲ್ಲ ದ್ವಾರಕೆಯ ಹೊರವಲಯದಲ್ಲಿ ಒಂದು ಸಣ್ಣ ಬಾಗವನ್ನೆ ನಿರ್ಮಿಸಿ ಅಲ್ಲಿರಲು ಒಪ್ಪಿಸಿದೆ. ಅವರದೆ ಆದ ಒಂದು ಚಿಕ್ಕ ಕೇರಿ ನಿರ್ಮಾಣವಾಯಿತು. ಸಂಸಾರ ನಿರ್ವಹಣೆಗಾಗಿ ಅವರು ಕೈಕೆಲಸಗಳಲ್ಲಿ ತೊಡಗಿಕೊಂಡರು , ನಾನು ಸಾಕಷ್ಟು ಸಹಾಯ ಮಾಡಿದೆ, ಮಹಾರಾಜ ಉಗ್ರಸೇನನನ್ನು ಒಪ್ಪಿಸಿ ಅರಮನೆಯಿಂದಲು ಸಹಾಯ ಏರ್ಪಾಡುಮಾಡಿದೆ. ಅವರೆಲ್ಲ ಪಶುಸಂಗೋಪನೆ ವ್ಯಾಪಾರ , ವ್ಯವಸಾಯಗಳಲ್ಲಿ , ಮತ್ಸೋಧ್ಯಮಗಳಲ್ಲಿ ತೊಡಗಿಕೊಂಡರು
ಆದರೆ ಅದು ಹೇಗೊ ಜನರ ಮದ್ಯೆ ಕೆಲವರು ಕುಯುಕ್ತಿಯಿಂದ ಅವರೆಲ್ಲ ನನ್ನ ಪತ್ನಿಯರೆಂದೆ ಪ್ರಚಾರಮಾಡಿದರು ಅವರು ಸಾವಿರ ಜನರಿದ್ದರೊ ಅಥವ ಹದಿನಾರು ಸಾವಿರ ಜನರಿದ್ದರೊ ಒಟ್ಟಿನಲ್ಲಿ ನನಗೆ ಹದಿನಾರು ಸಾವಿರ ಪತ್ನಿಯರೆಂದು ಪ್ರಚಾರವಾಯಿತು. ನಾನು ಆ ಪ್ರಚಾರವನ್ನು ಮೌನವಾಗಿಯೆ ಒಪ್ಪಿಕೊಂಡು ಸುಮ್ಮನಾಗಿದ್ದೆ ಏಕೆಂದರೆ ಅದರಲ್ಲಿ ಆ ಹೆಂಗಸರ ಸೌಖ್ಯವು ಅಡಗಿತ್ತು. ನನ್ನ ಹೆಸರಿನ ಭಯದಿಂದ ಆ ಹೆಂಗಸರ ತಂಟೆಗೆ ಯಾವ ಯಾದವ ಪುಂಡ ಪೋಕರಿಗಳು ಹೋಗುತ್ತಿರಲಿಲ್ಲ. ಊರ ಹೊರಗಿದ್ದ ಅವರೆಲ್ಲ ಮೇಲೆ ದುಷ್ಟರ ಕಣ್ಣು ಬೀಳುತ್ತಿರಲಿಲ್ಲ”
ಕೃಷ್ಣ ಮೌನ ತಾಳಿದ
ಗಣೇಶ ನುಡಿದ
“ಅಂತು ಕೃಷ್ಣ ನೀನು ಪರರಿಗಾಗಿ ಅಪನಿಂದನೆಗಳನ್ನು, ಅಪಪ್ರಚಾರಗಳನ್ನು ಸಹಿಸುತ್ತ ಹೋದೆ ಅನ್ನು. ಒಂದು ರೀತಿ ಅದು ತುಂಬಾ ಕಷ್ಟಕರ ಅಲ್ಲವೆ. ನಿಂದನೆಯನ್ನು ಎದುರಿಸುವ ಮನೋಸ್ಥಿತಿ ಇರುವುದು ಬಹಳವೆ ಕಷ್ಟ. ಆದರು ಅವರು ನಿನ್ನ ಪತ್ನಿಯರೊ ಅಲ್ಲವೊ ?”
ಕೃಷ್ಣ ನೊಂದು ನುಡಿದ
“ಗಣೇಶ ಇಷ್ಟೆಲ್ಲ ವಿವರಣೆ ಕೇಳಿದ ಮೇಲು ಸಹ ಅನುಮಾನ ಉಳಿದಿದೆ ಎಂದರೆ ನಾನು ಏನು ಹೇಳಲಾದೀತು. ನಾನು ಅಪಾದನೆ ಒಪ್ಪಿಕೊಂಡಿದ್ದೆ ಎಂದರೆ ಅವರನ್ನೆಲ್ಲ ಮಾನಸಿಕವಾಗಿಪತ್ನಿಯರಂತೆ ಸ್ವೀಕರಿಸಿದ್ದೆ ಎಂದೆ ಅರ್ಥ. ಆ ಅಸಹಾಯಕ ಹೆಣ್ಣುಗಳಿಗೆ ನಾನು ಅಧಾರವಾಗಿದ್ದೆ ಎನ್ನುವುದು ಸತ್ಯ. ಇದರಿಂದ ಯಾರು ಅಪಾದನೆ ಮಾಡಿದರು ಚಿಂತೆ ಇಲ್ಲ ಅವರಿಗೆಲ್ಲ ಒಂದು ಸಾಮಾಜಿಕ ನ್ಯಾಯ ಸಿಕ್ಕಂತೆ ಎಂದು ನನ್ನ ಅಭಿಪ್ರಾಯ. ಜರಾಸಂಧ ಅವರಿಗೆ ಮಾಡಿದ್ದ ಮೋಸಕ್ಕೆ ನಾನು ಸಾಂತ್ವನ ನೀಡಲು ಪ್ರಯತ್ನಿಸಿದ್ದೆ ಅಷ್ಟೆ “
ಕೃಷ್ಣ ತನ್ನ ಮಾತು ನಿಲ್ಲಿಸಿದ. ಗಣೇಶನು ಕೃಷ್ಣನಿಗೆ ಸ್ವಲ್ಪ ಸಮಯ ನೀಡುವನಂತೆ ಅಥವ ಕೃಷ್ಣನ ಮಾತುಗಳನ್ನು ಅರಗಿಸಿಕೊಳ್ಳುವನಂತೆ ಸುಮ್ಮನೆ ಕುಳಿತಿದ್ದ.
ಸ್ವಲ್ಪ ಕಾಲ ಕಳೆದಿತ್ತೇನೊ ಮತ್ತೆ ಗಣೇಶ ಪ್ರಶ್ನಿಸಿದ
“ಕೃಷ್ಣ ನಿನ್ನ ರಾಧೆಯ ಕತೆಯದಾದರು ಎಂತಹುದು, ಇಂದಿಗೂ ರಾಧಮಾದವ ಪ್ರೇಮವೆಂದೆ ವರ್ಣಿಸುತ್ತಾರೆ ಆದರೆ ನಿಮ್ಮಿಬ್ಬರ ಮದುವೆಯಾದರು ಏಕೆ ಆಗಲಿಲ್ಲ”

ಮುಂದುವರೆಯುವುದು..

ಚಿತ್ರ ಕೃಪೆ : krishna with gopis
http://www.brajdhamsewa.org/content/radha-krishna-gopis-5?size=_original

Rating
No votes yet

Comments

Submitted by makara Wed, 10/09/2013 - 07:14

ಪಾರ್ಥ ಸರ್,
ತಪ್ಪಿಹೋಗಿದ್ದ ಎಲ್ಲಾ ಲೇಖನಗಳನ್ನು ಒಮ್ಮೆಗೇ ಓದಿ ಮುಗಿಸಿದೆ. ಆಧುನಿಕರು ಎತ್ತುತ್ತಿರುವ ಪ್ರಶ್ನೆಗಳಿಗೆ ಸೂಕ್ತವಾಗಿಯೇ ಉತ್ತರಿಸಿದ್ದೀರ. ನನಗೂ ನೀವು ಪವಾಡಗಳನ್ನು ಸಾಮಾನ್ಯ ಘಟನೆಗಳೆಂದು ಚಿತ್ರಿಸಿದಾಗ ಸ್ವಲ್ಪ ಬೇಸರ ಮೂಡಿದ್ದು ನಿಜ; ಆದರೆ ಪುನರಾವಲೋಕನ ಮಾಡಿದಾಗ ಇವೆಲ್ಲವೂ ಕವಿ ಕಲ್ಪನೆ ಇರುವ ಸಾಧ್ಯತೆಯೂ ಹೆಚ್ಚು ಹಾಗೆಯೇ ಜನ ತಮಗೆ ಯಾರಾದರೂ ಇಷ್ಟವಾದರೆ ಅವರ ಬಗ್ಗೆ ಇರುವುದನ್ನೆಲ್ಲಾ ಉತ್ಪ್ರೇಕ್ಷೆ ಮಾಡಿ ಹೇಳುತ್ತಾರೆ ಎನ್ನುವುದು ನಿಜ. ಅದೇ ವಿಧವಾಗಿ ಯಾರಾದರೂ ಒಬ್ಬರು ಇಷ್ಟವಾಗದಿದ್ದರೆ ಅವರ ಬಗೆಗೆ ಕೆಟ್ಟದ್ದಾಗಿ ಇಲ್ಲಸಲ್ಲದ್ದನ್ನೆಲ್ಲಾ ಹೇಳುವುದು ಲೋಕರೂಡಿ, ಹಾಗಾಗಿ ನಿಮ್ಮ ಸಮರ್ಥನೆಗಳು ಸೂಕ್ತವಾಗಿಯೇ ಇವೆ ಎನಿಸುತ್ತಿದೆ. ನಿಮ್ಮ ಮಾಲಿಕೆಯನ್ನು ಓದುತ್ತಿದ್ದಂತೆ ಕೆಲವೊಂದು ವಿಚಾರಗಳೂ ಹೊಳೆದದ್ದು ಸುಳ್ಳಲ್ಲ. ಅದೇನೆಂದರೆ ರಾವಣಿನಿಗೆ ಹತ್ತು ತಲೆ ಇದ್ದವೆಂದರೆ, ಅವನಿಗೆ ಭೌತಿಕವಾಗಿ ಅಲ್ಲ ಆದರೆ ಮಾನಸಿಕವಾಗಿ ಹತ್ತು ತಲೆಗಳಿದ್ದವೆಂದೂ ಅರ್ಥೈಸಬಹುದಲ್ಲವೇ? ಅಂದರೆ ಅವನಿಗೆ ಹತ್ತು ಜನರ ಬುದ್ಧಿ ಶಕ್ತಿ ಇತ್ತು ಎಂದುಕೊಳ್ಳಬಹುದು. ಇರಲಿ ಬಿಡಿ, ಈ ಪವಾಡಗಳನ್ನೆಲ್ಲಾ ನಂಬಲಿ ಬಿಡಲಿ, ಅದನ್ನು ಬದಿಗಿಟ್ಟು ಯೋಚಿಸಿದಾಗ ಕೃಷ್ಣ ಹೇಗೆ ತಾನು ಭೋದಿಸಿದಂತೆ ಸಮಚಿತ್ತನಾಗಿದ್ದ ಎಂದು ಮನದಟ್ಟಾಗುವಂತೆ ಮಾಡುತ್ತದೆ ನಿಮ್ಮ ಲೇಖನ ಸರಣಿ. ಸರಣಿ ಮುಂದುವರೆಯಲಿ,
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ
ಫಾರ್ಮ್ಯಾಟಿನ ತೊಂದರೆ ನನ್ನ ಲೇಖನವನ್ನೂ ಕಾಡಿದೆ ಅದನ್ನು ಹೇಗೆ ಸರಿಪಡಿಸಬೇಕೋ ತಿಳಿಯದು. ನಾಡಿಗರೇ ಇದಕ್ಕೆ ಸೂಕ್ತ ಪರಿಹಾರ ಸೂಚಿಸಬಹುದು.

ಶ್ರೀಧರರೆ, ಈ ವಿಷಯವನ್ನು ನೋಡುವ ದೃಷ್ಟಿಕೋನಗಳು ವಿಭಿನ್ನವಿರಬಹುದು. ಈ ಸರಣಿಯಲ್ಲಿ ಪಾರ್ಥರ ದೃಷ್ಟಿಕೋನ ಒಂದು ರೀತಿ ವೈಶಿಷ್ಠ್ಯಪೂರ್ಣವಾಗಿದೆ - ಸತ್ಯಕಾಮರ 'ರಾಜಕ್ರೀಡೆಯ' ರೀತಿ. ಹಾಗೆಯೆ ಮನು ರವರ 'ಮಹಾಸಂಪರ್ಕ' ಓದಿದರೆ ಇಡೀ ಕಥಾನಕವನ್ನೆ ಪೂರ್ಣ ವೈಜ್ಞಾನಿಕ ದೃಷ್ಟಿಕೋನದಿಂದ ಬರೆಯಲೆತ್ನಿಸುವ ಅಸಾಧಾರಣ ದೃಷ್ಟಿ ಕಾಣುತ್ತದೆ (ಪವಾಡ ಅನ್ನುವ ರೀತಿಯಲ್ಲಲ್ಲ - ಉದಾಹರಣೆಗೆ ವಿಶ್ವರೂಪಕ್ಕೂ ವೈಜ್ಞಾನಿಕ ವಿವರ ಕೊಡುವ ಯತ್ನ). ಕೃಷ್ಣ  ಹದಿನಾರು ಸಾವಿರ ಪತ್ನಿಯರೊಂದಿಗೆ ಏಕಕಾಲದಲ್ಲಿದ್ದ ಎಂಬುದನ್ನು ಪೌರಾಣಿಕವಾಗಿ ಪವಾಡ ಎಂದು ಆರಾಧಿಸಿದಷ್ಟೆ , ಬಹುಶಃ ಆಗಲೆ 'ಕ್ಲೋನಿಂಗ್' ಟೆಕ್ನಾಲಜಿಯಂತಹ ತಂತ್ರವನ್ನು ಬಳಸಿ ಬಹುರೂಪಿ ಸೃಷ್ಟಿಯನ್ನು ಸಾಧ್ಯವಾಗಿಸಿದ್ದರು ಎಂದರೆ - ಆ ಪವಾಡವೆ ವಿಜ್ಞಾನವಾಗಿ ಬಿಡುತ್ತದೆ. ಹೀಗೆ ಪವಾಡಕ್ಕೂ ವಿಜ್ಞಾನಕ್ಕೂ ಬೇರ್ಪಡಿಕೆಯ ಗೆರೆ ಅತಿ ಸೂಕ್ಷ್ಮ - ಆ ಗೆರೆ ನಮ್ಮ ಆ ಹೊತ್ತಿನ 'ಅಜ್ಞಾನ' ಎಂದರೂ ಅತಿಶಯವಿಲ್ಲ. ಅಜ್ಞಾನ ಹರಿದು ತಿಳುವಳಿಕೆ ಬಂದಾಗ ಪವಾಡಗಳು ಸಾಮಾನ್ಯ ವಿಷಯಗಳಾಗಿಬಿಡಬಹುದು. ನನಗನಿಸುವ ಮಟ್ಟಿಗೆ ಎರಡು ದೃಷ್ಟಿಕೋನಗಳನ್ನು ಸಮಾನ ಮನೋಭಾವದಲ್ಲಿ ಸ್ವೀಕರಿಸಬೇಕು. ಸತ್ಯ ಕಾಲದ ಹೊದರಿನಲ್ಲಿ ವೈಜ್ಞಾನಿಕವಾಗಿಯೊ, ಇನ್ನಾವುದೊ ತರದಲ್ಲೊ ಅನಾವರಣಗೊಳ್ಳುವತನಕ - ಎರಡೂ ಯುಕ್ತಾಯುಕ್ತ ವಾದಗಳೆ ಹೊರತು ಅಂತಿಮಗಳಲ್ಲ-:-)

ಹೌದು ನಾಗೇಶಮೈಸೂರು ಸಾರ್, ಈ ಕತೆಯಲ್ಲಿ ನಾನು ಕೃಷ್ಣ ತಾನು ದೈವವಾದರು ಮನುಷ್ಯನಂತೆ ಬದುಕಿ ತೋರಿಸಿದ ಎಂದು ಪ್ರತಿಪಾದಿಸಲು ಯತ್ನಿಸಿದ್ದೇನೆ. ನನ್ನ ಅಭಿಪ್ರಾಯದಂತೆ ಪವಾಡದ ಅವಶ್ಯಕತೆ ಇರುವುದು ಜನಮನವನ್ನು ಆಕರ್ಷಿಸಲು ಮಾತ್ರ ಅಂತಹ ಅವಶ್ಯಕತೆ ದೈವಕ್ಕೆ ಇರುವದಿಲ್ಲ. ಕೆಲವು ಸ್ವಘೋಷಿತ ದೈವ ಮಾನವರಿಗೆ ಮಾತ್ರ ಅಂತಹ ಅವಶ್ಯಕತೆ ಇರುತ್ತದೆ, ಅಥವ ಕೆಲವೊಮ್ಮೆ ಕೆಲವು ಯೋಗಿಗಳು ಸಹಜವಾಗಿಯೆ ಅಂತಹ ಪವಾಡ ಪ್ರದರ್ಶಿಸಿದರು ಸಹ ಅದು ಅವರ ಹಿರಿಮೆಯನ್ನು ತೋರಿಸಲು ಅಲ್ಲ, ಜನರನ್ನು ಸರಿದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸಲು ಮಾತ್ರ. ರಾಮನಾಗಲಿ ಕೃಷ್ಣನಾಗಲಿ ತಮ್ಮ ಬಾಳುವೆಯನ್ನೆ ಜಗತ್ತಿಗೆ ಮಾದರಿ ಎಂಬಂತೆ ತೋರಿಸಿದವರು.
ಹಾಗೆ ರಾಧೆಯ ಜೊತೆಯ ಕೃಷ್ಣ, ಜೀವನ ಅವಲೋಕನ ಎಂಬ ಬಾಗದಲ್ಲಿ, ಮತ್ತು ಅದರ ಮುಂದಿನ ಬಾಗ ಬರಲೆ ಇನ್ನು ರಾಧೆ ಈ ಎಲ್ಲ ಕಡೆ ಕೃಷ್ಣನು ಹೃದಯ ಇರುವ ಮನುಷ್ಯನಂತೆ, ಅಥವ ನೊಂದವನಂತೆ , ಕಾಣಿಸುತ್ತಾನೆ, ಆದರೆ ಅವನ ಜೀವನ ಪರಿಶೀಲಿಸಿದಾಗ ನನ್ನ ಭಾವನೆ ತಪ್ಪು ಎಂದು ನನಗೆ ಅನ್ನಿಸುತ್ತಿಲ್ಲ. ಮುಂದಿನ ಭಾಗ 'ಬರಲೇ ಇನ್ನು ರಾಧೆ' ಓದಿ ನೋಡಿ ತಿಳಿಸಿ, ಆ ಬಾಗ ಬರೆದಿದ್ದರು ಪ್ರಕಟಿಸಲು ಯೋಚಿಸುತ್ತಿದ್ದೆ, ಆದರೆ ಶ್ರೀನಾಥ ಬಲ್ಲೆಯವರ ಪ್ರಶ್ನೆಯೊಂದು ಆ ಬಾಗವನ್ನು ಪ್ರಕಟಿಸಲು ಪ್ರೇರೆಪಿಸಿತು

‍ ಇಂತಿ ನಮಸ್ಕಾರಗಳೊಡನೆ
ಪಾರ್ಥಸಾರಥಿ

ಪಾರ್ಥಾ ಸಾರ್, ಈ ಸರಣಿಯ ಒಂದು ಮಹತ್ವದ ಅಂಶವೆಂದರೆ - ನೀವು ಎಷ್ಟು ಆಳವಾಗಿ ಇಳಿದು ತಲ್ಲೀನರಾಗಿ ಬರೆಯುತ್ತಿದ್ದೀರೆನ್ನುವುದು ಪ್ರತಿ ಸರಣಿಯಲ್ಲೂ ಪ್ರತಿಧ್ವನಿತಗೊಳ್ಳುತ್ತಿದೆ. ಅದರಲ್ಲೂ ರಾಧಾಕೃಷ್ಣರ ಅನೂಹ್ಯ ಮಾದರಿಯ ಸಂಬಂಧದ - ಅನುಭಂಧ ಕುರಿತಾದ ಬರಹ ಈ ಸರಣಿಯ ಹೈಲೈಟ್ಗಳಲ್ಲಿ ಒಂದೆನ್ನಬೇಕು. ನಿಜ ಹೇಳಬೇಕೆಂದರೆ ಕೃಷ್ನ ಒಂದು ವೇಳೆ ನಿಜಕ್ಕೂ ದೇವರೆ ಆಗಿದ್ದರೂ, ಮನುಜನಾಗಿ ಜನ್ಮ ತಾಳಿದ್ದ ಉದ್ದೇಶವೆ ಸಾಮಾನ್ಯ ಮನುಷ್ಯರಂತೆ ಬದುಕಿ ತೋರಿಸಲಿಕ್ಕೆಂದೆ ಇರಬೇಕು. ಅದನ್ನು ತಮಗೆ ತೋಚಿದ ಹಾಗೆ ದೈವತ್ವವನ್ನು ಆರೋಪಿಸಿ ಆರಾಧನೆಯ ಹಾದಿಗಿಳಿದಿದ್ದು ಬಹುಶಃ ತಮಗನುಕರಿಸಲಾಗದ ಮಹತ್ವದ ವ್ಯಕ್ತಿತ್ವಕ್ಕೆ ಜನರು ತೋರಿದ ಆದರಣೆಯ ಭಾವನೆ ಕಾರಣವಿರಬೇಕು. ಆದರೆ ಅದನ್ನು ಆರಾಧನಾ ಬಂಧದಿಂದ ಮುಕ್ತಗೊಳಿಸಿ ಸಾಮಾನ್ಯ ದೃಷ್ಟಿಯಿಂದ ವಿಶ್ಲೇಷಿಸುತ್ತಿರುವ ಪರಿ ನಿಜಕ್ಕೂ ಅಮೋಘ; ಅದರಲ್ಲೂ ತಾರ್ಕಿಕವಾಗಿ, ಅವನ ಮನಸನ್ನೆ ಹೊಕ್ಕಂತೆ, ಅವನ ನುಡಿಗಳಲ್ಲೆ ಬರೆಯಲೆತ್ನಿಸಿರುವುದು ಒಂದು ವಿಧದ ಪರಕಾಯ ಪ್ರವೇಶ ಮಾಡಿದ ಅನುಭವವೆ ಸರಿ - ಆ ಕಾರ್ಯ ನಿಮ್ಮ ಸರಣಿಯಲ್ಲಿ ಸೊಗಸಾಗಿ ಸಾಗುತ್ತಿದೆ. (ಬಹುಶಃ ಅದಕ್ಕೆ ನಿಮ್ಮ ಹೆಸರು ಪಾರ್ಥಸಾರಥಿ ಎಂದಿದೆಯೆ - ಅವನಂತರಾತ್ಮದ ಒಳಹೊಕ್ಕು ಅವನನಿಸಿಕೆಯನ್ನೆ ಬರೆಸಲು?).

ವಿಪರ್ಯಾಸವೆಂದರೆ, ನೀವು ಆಸ್ತಿಕವಾದವಿಲ್ಲದಂತೆ, ಸಾಮಾನ್ಯ ಮನುಜನ ರೂಪದಲ್ಲಿ ಚಿತ್ರಿಸುತ್ತಿದ್ದೀರಾ; ಆದರೆ ಇದನ್ನೆ ನಾಸ್ತಿಕವಾದದ ಹೆಸರಲ್ಲಿ ವಿರೋಧಿಸುವ ವಿಚಿತ್ರ ಜಗ (ಅವರು ಸಾರಬಯಸಿದ್ದನ್ನೆ, ನೀವು ಇನ್ನೊಂದು ತರದಲ್ಲಿ ಸಾರ ಹೊರಟಿದ್ದರೂ !). ಅದೇನೆ ಇದ್ದರೂ ಅದೀಗ ಮುಗಿದ ಕಥೆ - ಸರಣಿ ಆಸಕ್ತಿಪೂರ್ಣವಾಗಿ ಹೊರಹೊಮ್ಮುತ್ತಿದೆ. ಕೊನೆಯ ತನಕ ಇದೆ ತಪನೆ, ತಾದ್ಯಾತ್ಮಕತೆಯಲ್ಲಿ ಹೊರಹೊಮ್ಮಲಿ :-)

- ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
 

ವಿಪರ್ಯಾಸವೆಂದರೆ, ನೀವು ಆಸ್ತಿಕವಾದವಿಲ್ಲದಂತೆ, ಸಾಮಾನ್ಯ ಮನುಜನ ರೂಪದಲ್ಲಿ ಚಿತ್ರಿಸುತ್ತಿದ್ದೀರಾ; ಆದರೆ ಇದನ್ನೆ ನಾಸ್ತಿಕವಾದದ ಹೆಸರಲ್ಲಿ ವಿರೋಧಿಸುವ ವಿಚಿತ್ರ ಜಗ (ಅವರು ಸಾರಬಯಸಿದ್ದನ್ನೆ, ನೀವು ಇನ್ನೊಂದು ತರದಲ್ಲಿ ಸಾರ ಹೊರಟಿದ್ದರೂ !).
ಹಹ್ಹ.....
ನಿಜ ನಾಸ್ತಿಕರಿಂದ ವಿರೋಧ ಬಂದ ಕಾರಣ ಅದರಲ್ಲಿ ಕೃಷ್ಣ ಎನ್ನುವ ಹೆಸರಷ್ಟೆ ಅವರು ಓದಿದ್ದು ಕಾರಣವಿರಬಹುದು... ಒಳಗಿರುವದನ್ನು ಓದದೆ.
ಆಸ್ತಿಕರು ಸಿಟ್ಟಾಗಬಹುದು ನಿಮ್ಮ ಬರಹ ವಿಮರ್ಷೆ ಓದಿದರೆ.. ಇವನು ನಾಸ್ತಿಕನಾ ಎಂದು
...ಆದರೆ ನಾನು ಸ್ವಷ್ಟವಾಗಿ ಹೇಳಿದ್ದೇನೆ.
ಕೃಷ್ಣನು ಮಾನವನಾಗಿ ಬದುಕಿ ತೋರಿಸಿದ.......... ದೈವ!
ಅಂದರೆ ನಾನು ಆಸ್ತಿಕವಾದವನ್ನು ಅಲ್ಲಗೆಳೆಯುತ್ತಿಲ್ಲ. :‍)

ನಿಜ ಪಾರ್ಥ ಸರ್, ಈಗ ಲೇಖನದ ಫಾರ್ಮ್ಯಾಟ್‌ ಸರಿಹೋಗಿದೆ. ಅದೇ ವಿಧವಾಗಿ ಪ್ರತಿಕ್ರಿಯೆಗಳ ಸ್ವರೂಪವೂ ಬದಲಾದರೆ ಚೆನ್ನಾಗಿರುತ್ತದೆ.