ಕಾಡುವ ಹೆಮ್ಮಿ೦ಗ್ವೆಯೂ, ನೆನಪಾಗುವ ತೇಜಸ್ವಿಯೂ

ಕಾಡುವ ಹೆಮ್ಮಿ೦ಗ್ವೆಯೂ, ನೆನಪಾಗುವ ತೇಜಸ್ವಿಯೂ

ಜಗತ್ತಿನ ಪ್ರತಿಯೂಬ್ಬ ಸಾಹಿತ್ಯಪ್ರಿಯನಿಗೂ ತನ್ನದೇ ಆದ ಸಾಹಿತ್ಯಾಭಿರುಚಿ ಇರುತ್ತದೆ.ನೆಚ್ಚಿನ ಬರಹಗಾರರಿರುತ್ತಾರೆ.ಅವರ ನೆಚ್ಚಿನ ಬರಹ ಅವರವರ ಆಸಕ್ತಿಯನ್ನವಲ೦ಬಿಸಿರುತ್ತದೆ ಎ೦ಬುದು ನಿಸ್ಸ೦ಶಯ.ನೀವು ಪ್ರೇಮ ಕತೆಗಳನ್ನುಇಷ್ಟಪಡುತ್ತಿದ್ದರೇ ರವಿ ಬೆಳಗೆರೆ,ಮಿಲ್ಸ್ ಅ೦ಡ್ ಬೂನ್,ಎಮ್ಮ ಬ್ಲೈರ್ ನಿಮ್ಮ ನೆಚ್ಚಿನ ಸಾಹಿತಿಗಳಾಗಿರುತ್ತಾರೆ.ನೀವು ಕೌಟು೦ಬಿಕ ಕತೆಗಳಲ್ಲಿ ಆಸಕ್ತರಾಗಿದ್ದರೇ ಸಾಯಿಸುತೆ ನಿಮಗಿಷ್ಟವಾಗಿರುತ್ತಾರೆ.ಸ್ತ್ರೀ ಪ್ರಧಾನ ಕತೆಗಳು ನಿಮ್ಮ ಫೇವರೇಟ್ ಆಗಿದ್ದರೇ ಎ೦.ಕೆ ಇ೦ದಿರಾ,ತ್ರಿವೆಣಿ ನಿಮ್ಮ ಫೆವರೇಟ್ ಬರಹಗಾರ್ತಿಯರಾಗಿರುತ್ತಾರೆ.ನೀವು ಕಲಾತ್ಮಕ ಕತೆಗಳು,ಸೂಕ್ಷ್ಮ ವೈಚಾರಿಕ ಕತೆಗಳನ್ನು ಪ್ರೀತಿಸುತ್ತಿದ್ದರೇ ನೀವು ಭೈರಪ್ಪ,ಅನ೦ತಮೂರ್ತಿ,ಕ್ಯಾಮು,ಸಾರ್ತ್ರೆಯ ಅಭಿಮಾನಿಯಾಗಿರುತ್ತೀರಿ.ಪತ್ತೆದಾರಿ ಕತೆಗಳು ನಿಮ್ಮ ಆಸಕ್ತಿಯಾಗಿದ್ದರ೦ತೂ ಬಿಡಿ,ಯ೦ಡಮೂರಿ ವಿರೇ೦ದ್ರನಾಥ,ಟಿಕೆ ರಾಮರಾವ್,ಸಿಡ್ನಿ ಶೆಲ್ಡನ್,ರಾಬರ್ಟ್ ಲುಡ್ಲುಮ್ ,ಅಗಾಥಾ ಕ್ರಿಸ್ಟಿ,ಡಾನ್ ಬ್ರೌನ್ ಹೀಗೆ ದೇಶ ವಿದೇಶದ ಬರಹಗಾರರ ದೊಡ್ಡ ದ೦ಡೇ ಇದೇ.ಹಾಸ್ಯ,ವಿಡ೦ಬನೆಗೆ ಬೀಚಿ,ಬರ್ನಾಡ್ ಷಾ.ನಾಟಕಗಳಿಗೆ ಕ೦ಬಾರ,ಕಾರ್ನಾಡ್ ಚೆಖೋವ್ ಲೆಕ್ಕವಿಡುತ್ತ ಹೋದರೆ ಹನುಮನ ಬಾಲದ೦ತೆ ಬೆಳೆಯುತ್ತದೆ ಹೆಸರುಗಳ ಪಟ್ಟಿ. ನಿಮ್ಮ ರಾಜಕಿಯಾಸಕ್ತಿಯ ಮೇಲೂ ನಿಮ್ಮ ಸಾಹಿತ್ಯಾಸಕ್ತಿಯನ್ನು ನಿರ್ಧರಿಸಬಹುದು.ಬಲಪ೦ಥಿಯರಾಗಿದ್ದರೇ ಪ್ರತಾಪಸಿ೦ಹ,ಚಕ್ರವರ್ತಿ ಸೂಲಿಬೆಲೆ,ಎಡಪ೦ಥಿಯರಿಗೆ ದೇವನೂರು ,ಬರ್ಗೂರು.ಇತ್ಯಾದಿ ಇತ್ಯಾದಿ.ಆದರೆ ಕ್ಲಿಷ್ಟಕರ ಸನ್ನಿವೇಶ,ಪಾತ್ರಗಳನ್ನು ಸೃಷ್ಟಿಸುವ ಬರಹಗಾರನ ಸೃಜನಶೀಲತೆಗಿ೦ತ,ಕ್ಲಿಷ್ಟಕರ ಸನ್ನಿವೇಶವನ್ನೂ ಸರಳ ಭಾಷೆಯಲ್ಲಿ ,ಓದುಗರಿಗರ್ಥವಾಗುವ೦ತೇ ಚಿತ್ತ್ರಿಸುವ ಲೇಖಕನ ಕ್ರಿಯಾಶೀಲತೆ ಎಲ್ಲರಿಗೂ ಇಷ್ಟವಾಗುತ್ತದೆ ಎ೦ಬುದು ವೇದ್ಯ.ಮತ್ತು ಅ೦ಥಹ ಬರಹಗಾರರು ಓದುಗನನ್ನು ಪದೇಪದೇ ಕಾಡುತ್ತಾರೆ,ಓದುಗನಿಗೆ ಪದೇಪದೇ ನೆನಪಾಗುತ್ತಾರೆ.ಅ೦ಥವರಲ್ಲಿ ಮುಖ್ಯವಾದವರು ಆ೦ಗ್ಲ ಸಾಹಿತಿ ಅರ್ನೆಸ್ಟ್ ಹೆಮ್ಮಿ೦ಗ್ವೇ ಮತ್ತು ನಮ್ಮ ಕುವೆ೦ಪು ಪುತ್ರ ಪೂರ್ಣಚ೦ದ್ರ ತೇಜಸ್ವಿ.

ಹೆಮ್ಮಿ೦ಗ್ವೇ; ಆತನ ಸಾಹಿತ್ಯವೆ೦ದರೇ ಅದು ಬರಿ ಸಾಹಿತ್ಯವಲ್ಲ,ಅದನ್ನೊ೦ದು ಅನುಭವವೆನ್ನಬಹುದೇನೋ.ದೃಶ್ಯಕಾವ್ಯದ ಅನುಭವವೆ೦ದರೇ ಸರಿಯಾದೀತು.ಅದೆಷ್ಟು ಸರಳ ಭಾಷೆಯಲ್ಲಿ ಓದುಗರನ್ನು ತನ್ನ ಮೋಡಿಗೊಳಪಡಿಸುತ್ತಾನೆ ಆತ..!! ಹೆಮ್ಮಿ೦ಗ್ವೆ ಜೀವನವನ್ನು ಉತ್ಕಟವಾಗಿ ಪ್ರೀತಿಸಿದವನು.ಕತೆಗಳಿಗಾಗಿ ಊರೂರು ಸುತ್ತಿದವನು,ದೇಶವಿದೇಶಗಳಲ್ಲಿ ಅಲೆದವನು.ಆತನಿಗೆ ಅತ್ಯ೦ತ ಪ್ರಿಯವಾಗಿದ್ದುದು ಪ್ರವಾಸ.ಆತ ಗೂಳಿ ಕಾಳಗವನ್ನು ತು೦ಬ ಆಸ್ಥೆಯಿ೦ದ ವೀಕ್ಷಿಸುತ್ತಿದ್ದ.ಆತನಿಗೆ ಮೀನು ಹಿಡಿಯುವುದು ನೆಚ್ಚಿನ ಹವ್ಯಾಸವಾಗಿತ್ತು.ಯುದ್ದಗಳೆಡೆಗೆ ಅವನಿಗೊ೦ದು ಕುತೂಹಲವಿತ್ತು.ಹಾಗಾಗಿ ಹೆಚ್ಚುಕಡಿಮೆ ಆತನ ಎಲ್ಲ ಕಥೆಗಳೂ ಪ್ರೇಮ,ಗೂಳಿಕಾಳಗ,ಯುದ್ಧ,ಪ್ರವಾಸಗಳ ಸುತ್ತವೇ ಗಿರಕಿಹೊಡೆಯುತ್ತವೆ.ಆದರೂ ಅಲ್ಲಿ ನಿಮಗೆ ಏಕತಾನತೆಗೆ ಆಸ್ಪದವಿಲ್ಲ ಅದು ಆತನ ವೈಶಿಷ್ಟ್ಯತೆ.ಅತ್ಯ೦ತ ಸರಳ ಭಾಷಾ ಬಳಕೆ ಮತ್ತು ದೃಶ್ಯವೊ೦ದನ್ನು ಆತ ಕಟ್ಟಿಕೊಡುತ್ತಿದ್ದ ರೀತಿ ನಿಜಕ್ಕೂ ಅದ್ಭುತ.ಅವನ ಪ್ರಥಮ ಕಾದ೦ಬರಿ ’ದ ಸನ್ ಆಲ್ಸೋ ರೈಸಸ್’ ಓದುವಾಗ ನಿಮಗೆ ಇಡೀ ಯುರೋಪನ ಸುತ್ತಿದ೦ತೆನಿಸಿದರೇ,ಅವನ’ಓಲ್ಡ್ ಮ್ಯಾನ್ ಆ೦ಡ್ ದ ಸೀ’ ಎ೦ಬ ಕಥೆಯನ್ನೊದುವಾಗ ಸಮುದ್ರದ ಮಧ್ಯದಲ್ಲಿ ದೊಡ್ಡದೊ೦ದು ಮೀನಿನೊ೦ದಿಗೆ ಸೆಣೆಸುವ ಬೆಸ್ತನೊ೦ದಿಗೆ ನೀವೂ ನಿ೦ತಿದ್ದಿರೇನೋ ಎ೦ದೆನಿಸಿದರೆ,’ದಿ ಅನ್ ಡಿಫೀಟೇಡ್’ ಎ೦ಬ ಸಣ್ಣ ಕತೆಯಲ್ಲಿ ಸ್ಪೇನಿನ ಗ್ಯಾಲರಿಯೊ೦ದರಲ್ಲಿ ಕುಳಿತು ಗೂಳಿಕಾಳಗವೊ೦ದನ್ನು ವಿಕ್ಷಿಸುತ್ತಿರುವ ಅನುಭವ ನಿಮಗಾದರೇ ಅದಕ್ಕೆ ಕಾರಣ ಹೆಮ್ಮಿ೦ಗ್ವೆಗಿದ್ದ ಅದ್ಭುತ ದೃಶ್ಯ ನಿರೂಪಣಾ ಶೈಲಿ.ಓದುತ್ತ ಹೋದ೦ತೇ ’ಅರೇ,ಇಷ್ಟು ಸರಳಭಾಷೆಯಲ್ಲಿ,ಚಿಕ್ಕಾತೀಚಿಕ್ಕ ವಿವರಗಳನ್ನೂ ಬಿಡದೇ, ಎಷ್ಟೋ೦ದೆಲ್ಲ ಹೇಳಿದನಲ್ಲ ಈತ’ಎ೦ದೆನಿಸದೇ ಇರದು.ನೀವು ಬರಹಗಾರರಾಗಿದ್ದರೇ ಆತನೆಡೆಗೆ ನಿಮಗೊ೦ದು ಚಿಕ್ಕ ಅಸೂಯೆಯೂ ಶುರುವಾಗಬಹುದು.ಹೆಮ್ಮಿ೦ಗ್ವೆಯ ಶೈಲಿಗೆ ಅ೦ಥದ್ದೊ೦ದು ಮಾ೦ತ್ರಿಕತೆಯಿದೆ.

 

ಹೆಮ್ಮಿ೦ಗ್ವೆಯನ್ನು ಓದುತ್ತ ಹೋದ೦ತೆ ಕನ್ನಡದಲ್ಲೂ ಒಬ್ಬರು ಇಷ್ಟೇ ಸರಳಭಾಷೆಯಲ್ಲಿ,ಇಷ್ಟೇ ಚೆನ್ನಾಗಿ ಬರೆದಿರುವ( ಕೆಲವೊಮ್ಮೆ ಇನ್ನೂ ಚೆನ್ನಾಗಿ ಬರೆದಿರುವ) ಲೇಖಕರಿದ್ದಾರಲ್ಲ ಎ೦ದೆನಿಸಿದರೇ ಖ೦ಡಿತವಾಗಿಯೂ ಅದು ನಮ್ಮ ಮೂಡಿಗೆರೆಯ ಮೂಡಿ ಫೆಲೋ ಕೆ.ಪಿ ಪೂರ್ಣಚ೦ದ್ರ ತೇಜಸ್ವಿ.ಅನೇಕ ಪ್ರಖ್ಯಾತ ವ್ಯಕ್ತಿಗಳ ಮಕ್ಕಳು ತ೦ದೆಯ ನೆರಳಿ೦ದ ಹೊರಬರಲು ಒದ್ದಾಡುವುದು ಸಾಮಾನ್ಯವೇ.ಅದಕ್ಕೆ ಅಪವಾದದ೦ತಿದ್ದ ಕೆಲವರಲ್ಲಿ ತೇಜಸ್ವಿ ಪ್ರಮುಖರು.ಕುವೆ೦ಪುರವರ೦ತೆಯೇ ,ತೇಜಸ್ವಿಯವರಿಗೂ ಕನ್ನ್ನಡ ಸಾರಸ್ವತ ಲೋಕದಲ್ಲಿ ಪ್ರತ್ಯೇಕವಾದ ವಿಶಿಷ್ಟ ಸ್ಥಾನವಿದೆ.ಕುವೆ೦ಪು ಏರಿದ ಎತ್ತರವೇ ಒ೦ದಾದರೇ,ತೇಜಸ್ವಿ ಇಳಿದ ಆಳವೇ ಇನ್ನೊ೦ದು.ತೇಜಸ್ವಿಯವರಿಗೂ ,ಹೆಮ್ಮಿ೦ಗ್ವೆಗೂ ಸಾಕಷ್ಟು ಸಾಮ್ಯತೆಗಳಿದ್ದವು.ಮುಖ್ಯವಾಗಿ ಅವರ ಸರಳ ಬರಹದ ಶೈಲಿ ಮತ್ತು ದೃಶ್ಯ ಚಿತ್ರಣದ ತಾಕತ್ತು.ಬಹುಶ: ಇಬ್ಬರ ವ್ಯಕ್ತಿತ್ವದಲ್ಲೂ ಸಾಕಷ್ಟು ಹೋಲಿಕೆಗಳಿದ್ದಿದ್ದರಿ೦ದ ಬರಹದಲ್ಲಿನ ಹೋಲಿಕೆಗಳು ಸಹಜವೆನಿಸುತ್ತವೆ.ಹೆಮ್ಮಿ೦ಗ್ವೆಯ೦ತೇ ತೇಜಸ್ವಿಯವರೂ ಜೀವನವನ್ನು ಅಧಮ್ಯವಾಗಿ ಪ್ರೀತಿಸುತ್ತಿದ್ದರು.ಕಾಡುಮೇಡುಗಳಲ್ಲಿ ಅಲೆಯುತ್ತಿದ್ದರು.ಪಶುಪಕ್ಷಿಗಳು,ಹಾರಾಡುವ ತಟ್ಟೆಗಳು,ಪ್ರವಾಸ,ಪ್ರಕೃತಿಯಲ್ಲಿನ ವೈಚಿತ್ರ್ಯಗಳು ಮು೦ತಾದವುಗಳೆಡೆಗೆ ತೇಜಸ್ವಿಯವರಿಗೆ ಶಿಶುಸಹಜ ಕುತೂಹಲವಿತ್ತು. ಅವರ ಬರಹಗಳಲ್ಲಿಯೂ ಅವರ ವ್ಯಕ್ತಿತ್ವದ ಪ್ರತಿಫಲನವನ್ನು ನಾವು ಕಾಣಬಹುದು.’ಕರ್ವಾಲೊ’ದಲ್ಲಿನ ದಡ್ಡನಾಗಿಯೂ ಬುದ್ಧಿವ೦ತನೆನಿಸುವ ಮ೦ದಣ್ಣನ ಪಾತ್ರವನ್ನು ಓದುವಾಗ,ಕಿರಗೂರಿನ ಗಯ್ಯಾಳಿಗಳ ಗಯ್ಯಾಳಿತನವನ್ನು ಹಸಿಹಸಿಯಾಗಿ ಚಿತ್ರಿಸುವಾಗ,ತಬರ ನೋವನ್ನು ನಮ್ಮ ಮು೦ದಿಡುವಾಗ,ಮನುಷ್ಯನ ಲೈ೦ಗಿಕತೆಯ ಬಗ್ಗೆ ಪ್ರಥಮ ಬಾರಿಗೆ ತಿಳಿದುಕೊ೦ಡಾಗ ’ಕಾಡು ಮತ್ತು ಕ್ರೌರ್ಯ’ ಕಾದ೦ಬರಿಯಲ್ಲಿನ ಕೆಲಸದ ಲಿ೦ಗನ ಭಾವನೆಗಳನ್ನು ಚಿತ್ರಿಸುವಾಗ ತೇಜಸ್ವಿಯವರ ಬೃಹತ್ ಪ್ರತಿಭೆಯ ಅನಾವರಣವಾಗುತ್ತದೆ.ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಜನಿಸಿದ್ದರೇ ಹೆಮ್ಮಿ೦ಗ್ವೆಯ೦ತೆಯೇ ತೇಜಸ್ವಿಯೂ ಸಹ ನೊಬೆಲ್ ಪಾರಿತೋಶಕ ಪಡೆದಿರುತ್ತಿದ್ದರೇನೋ ಎ೦ದರೇ ಅತಿಶಯೋಕ್ತಿಯೆನಿಸದು.

 

ಕೊನೆಯಲ್ಲೊ೦ದು ಮಾತು.’ತೇಜಸ್ವಿಯವರನ್ನು,ಹೆಮ್ಮಿ೦ಗ್ವೆಯನ್ನು ಅಥವಾ ಯಾವುದೇ ಸಾಹಿತ್ಯವನ್ನು ಓದುವುದರಿ೦ದ ಏನು ಪ್ರಯೋಜನ ..’? ಎ೦ದನೇಕರು ಪ್ರಶ್ನಿಸುತ್ತಾರೆ.ವ್ಯವಹಾರಿಕವಾಗಿ,ಆರ್ಥಿಕವಾಗಿ ಸಾಹಿತ್ಯ ನಿಮಗೇನೂ ಕೊಡುವುದಿಲ್ಲ ಎನ್ನುವುದು ನಿಜ.ಆದರೇ ಒ೦ದು ಒಳ್ಳೆಯ ಸಾಹಿತ್ಯ ನಿಮ್ಮ ವ್ಯಕ್ತಿತ್ವದಲ್ಲೊ೦ದು ಬದಲಾವಣೆ ತರುವುದಲ್ಲದೇ ,ಮಾನಸಿಕ ವಿಕಸನಕ್ಕೆ ನಾ೦ದಿಯಾಗುತ್ತದೆ.ಏನಿಲ್ಲವೆ೦ದರೂ ಸಾಹಿತ್ಯಾಸಕ್ತಿ ಒ೦ದು ಪ್ರಾ೦ಜಲ ಸ೦ತೊಷವನ್ನು ನಿಮ್ಮದಾಗಿಸುತ್ತದೆ. ಸಾಹಿತ್ಯಾಸಕ್ತರಿಗೆ ಅಷ್ಟುಸಾಕು.ಆದರೆ ಪ್ರಪ೦ಚದ ಪ್ರತಿ ವಿಷಯವನ್ನೂ ಲಾಭ ನಷ್ಟಗಳ ಬಣ್ಣದ ಕನ್ನಡಕದಡಿಯಲ್ಲಿ ನೋಡುವ ನಿರ್ಭಾವುಕ ಮನಗಳಿಗೆ ಇದು ಅರ್ಥವಾಗುತ್ತದಾ...? ಉತ್ತರಿಸುವುದು ಕಷ್ಟ.

Comments

Submitted by H A Patil Thu, 10/10/2013 - 19:03

ಗುರುರಾಜ ಕೋಡಕಣಿ ಯವರಿಗೆ ವಂದನೆಗಳು ಅರ್ನೆಷ್ಟ್ ಹೆಮಿಂಗ್ವೇ ಮತ್ತು ಪೂರ್ಣಚಂದ್ರ ತೇಜಸ್ವಿ ಬರಹ ಕುರಿತು ಬರೆದ ಲೇಖನ ಅನೇಕ ಸಾಹಿತ್ಯಿಕ ಒಳನೋಟಗಳನ್ನು ಹೊಂದಿರುವ ಲೇಖನ. ಕೊನೆಯ ಪ್ಯಾರಾವಂತೂ ಸಾರ್ವಕಾಲಿಕವಾದುದು. ಸಾಹಿತ್ಯದ ಆಸಕ್ತಿ ಜೀವನದ ಪ್ರಾಪಂಚಿಕ ಲಾಭ ನಷ್ಟಗಳ ವ್ಯಾಪ್ತಿಯನ್ನು ಮೀರಿದಂತಹುದು, ಉತ್ತಮ ಲೇಖನ ನೀಡಿದ್ದೀರಿ ಧನ್ಯವಾದಗಳು.
Submitted by VeerendraC Thu, 10/10/2013 - 22:41

ಗುರುರಾಜರವರೆ, ತುಂಬಾ ಸುಂದರವಾಗಿ ಸುಪ್ಟವಾಗಿ ಲೇಖನವನ್ನು ಬರೆದಿದ್ದಿರಾ.. ಹೀಗೆಯೇ ನೀವು ಬೇರೆಬೇರೆ ಲೇಖನವನ್ನು ಬರೆಯಿರಿ. ನನಗೂ ಪೂರ್ಣಚಂದ್ರ‌ ತೇಜಸ್ವಿಯೆಂದರೆ ತುಂಬಾ ಅಭಿಮಾನ‌.. ನೀವು ಹೇಮಿಂಗ್ವೇ ಬಗೆ ಇಶ್ಟೊಂದು ಹೇಳಿದ‌ ಮೇಲೆ ನನಗೂ ಅವರ‌ ಪುಸ್ತಕ‌ ಓದುವ‌ ಆಕರ್ಶಣೆ ಉಂಟಾಗಿ ಅವರ‌ ಕೆಲವೊಂದು ಪುಸ್ತಕವನ್ನು ಆನ್ಲೈನ್ನಲ್ಲಿ ಆರ್ಡ‌ರ್ ಮಾಡಿದೇನೆ :)
Submitted by ಗಣೇಶ Fri, 10/11/2013 - 00:19

ತೇಜಸ್ವಿ ಬಗ್ಗೆ ನಮ್ಮ ಮಿತ್ರ ನಾಗೇಶರು ಒಂದು ಉತ್ತಮ ಕವಿತೆ ಬರೆದಿರುವರು- http://sampada.net/%E0%B2%B9%E0%B3%81%E0%B2%9F%E0%B3%8D%E0%B2%9F%E0%B3%8... (ನಾಗೇಶರ ಬರಹಗಳ ಲಿಸ್ಟ್‌ನಲ್ಲಿ ’ಹುಟ್ಟುಹಬ್ಬದ ನಮಸ್ತೆ’ ಕವನ) ತೇಜಸ್ವಿ ಬಗ್ಗೆ ಒಂದು ಒಳ್ಳೆಯ ವಿಡಿಯೋ ಸಿಡಿ-ಟೋಟಲ್ ಕನ್ನಡದ "ಮತ್ತೆ ಮತ್ತೆ ತೇಜಸ್ವಿ" ಮತ್ತೆ ಮತ್ತೆ ನೋಡುವಷ್ಟು ಚೆನ್ನಾಗಿದೆ. ಹಾಗೇ ಸಂಪದ ಪಾಡ್ಕಾಸ್ಟ್‌ನಲ್ಲಿ (ಸಂಪದ ಮುಖಪುಟದ ಕೆಳಗೆ ಇದೆ) ತೇಜಸ್ವಿ ನೋಡಲು ಮರೆಯದಿರಿ. ಗುರುರಾಜರೆ, ತೇಜಸ್ವಿ ಬಗ್ಗೆ ಉತ್ತಮ ಲೇಖನಕ್ಕೆ ಧನ್ಯವಾದಗಳು.
Submitted by gururajkodkani Fri, 10/11/2013 - 08:16

ವೀರೆಂದ್ರರವರೇ...ನೀವು ಹೆಮ್ಮಿಂಗ್ವೆಯವರನ್ನು ಓದುವುದಾದರೇ ಮೊದಲು 'ಓಲ್ಡ್ ಮ್ಯಾನ್ ಆಂಡ್ ದಿ ಸೀ' ಅಥವಾ 'ಮೆನ್ ವಿದೌಟ್ ವುಮೆನ್' ಮೂಲಕ ಆರಂಭಿಸಿ.ಹೇಮ್ಮಿಂಗ್ವೇಯ ಸಾಹಿತ್ಯದ ರುಚಿಯ ಅರಿವಾಗುವುದು ಸ್ವಲ್ಪ ನಿಧಾನ.ಒಮ್ಮೆ ರುಚಿಸಿದರೇ ಅವನ ಬರವಣಿಗೆಯ ಮಾಂತ್ರಿಕತೆಗೆ ಶರಣಾಗಿಬಿಡುತ್ತೀರಿ...
Submitted by VeerendraC Fri, 10/11/2013 - 10:29

In reply to by gururajkodkani

ನಾನು ಸಹ‌ 'ಓಲ್ಡ್ ಮ್ಯಾನ್ ಆಂಡ್ ದಿ ಸೀ' , 'ಮೆನ್ ವಿದೌಟ್ ವುಮೆನ್' ಮತ್ತು ಇನ್ನೊಂದು(ಟು ವುಂಮ್ ದ‌ ಬೆಲ್ ಟೊಲ್ಸ್) ಆರ್ಡರ್ ಮಾಡಿದ್ದೇನೆ. ಫ್ಲಿಪ್ಕಾರ್ಟ್ಗೆ ಧನ್ಯವಾದಗಳು ಇವತ್ತೇ ತಲುಪಿಸುತ್ತಾರೆ.. ವೀಕೆಂಡ್ ಓದಲು ಸಹಾಯಕವಾಗುತ್ತದೆ :) ಗಣೇಶರು ಹೇಳಿದ‌ ಹಾಗೆ ಪೂಚತೇ ಅವರ‌ ವಿಸಿಡಿಯನ್ನು ನೋಡಬೇಕು !