‘ಕಡಲ ತಡಿಯ ಭಾರ್ಗವ’ ನ ಕಡಲನು ಮೀರಿಸಿದ ಬದುಕು

‘ಕಡಲ ತಡಿಯ ಭಾರ್ಗವ’ ನ ಕಡಲನು ಮೀರಿಸಿದ ಬದುಕು

ಇದೇ ಅಕ್ಟೋಬರ್ ೧೦ ಕನ್ನಡ ಕರಾವಳಿಯ ದೈತ್ಯ ಪ್ರತಿಭೆ ಕೋಟ ಶಿವರಾಮ ಕಾರಂತರ ಜನ್ಮ ದಿನನೆವದಲ್ಲಿ ‘ಕಡಲ ತಡಿಯ ಭಾರ್ಗವ’ ನಡೆಸಿದ ಕಡಲಿಗೂ ಮೀರಿದ ಬದುಕಿನತ್ತ ಒಂದು ನೋಟ.

    ‘ಕಾಣದ ಕಡಲಿಗೆ ಹಂಬಲಿಸಿದೆ ಮನ

    ಕಾಣಬಲ್ಲೆನೆ ಒಂದು ದಿನ,

    ಕಡಲನು ಕೂಡಬಲ್ಲೆನೆ ಒಂದು ದಿನ....’

    ಕನ್ನಡದ ರಾಷ್ಟ್ರಕವಿ ಜಿ.ಎಸ್.ಎಸ್. ರವರ ಈ ಕವಿತೆ ನಮಗೆಲ್ಲರಿಗೂ ತಿಳಿದಿರತಕ್ಕದ್ದೆ, ಆದರೆ ನಮ್ಮ ನಡುವೆಯೇ ಇದ್ದ ಹುಟ್ಟಿನಿಂದ ಕಡಲ ತಡಿಯಲ್ಲಿಯೇ ಬೆಳೆದು ಕಡಲನ್ನೂ ಮೀರಿದ ಬದುಕು ನಡೆಸಿದ ವ್ಯಕ್ತಿಯ ಕುರಿತು ಇಂದು ನಾವೊಂದಿಷ್ಟು ನೆನೆಯೋಣವೆ?

    ಹೌದು ಸ್ನೇಹಿತರೆ, ನಿಮ್ಮ ಊಹೆ ಸರಿ, ನಾನು ಹೇಳ ಹೊರಟಿರುವುದು ‘ಕಡಲ ತಡಿಯ ಭಾರ್ಗವ’ ಎಂದೇ ಖ್ಯಾತರಾದ ಶ್ರೀ ಕೋಟ ಶಿವರಾಮ ಕಾರಂತರ ಬಗ್ಗೆ. ಇದೇ ಅಕ್ಟೋಬರ್ ಹತ್ತು ಅವರ ಜನ್ಮದಿನವಾದ ಹಿನ್ನೆಲೆಯಲ್ಲಿ ಕನ್ನಡ ಕರಾವಳಿಯ ದೈತ್ಯ ಪ್ರತಿಭೆ ಕಾರಂತರು, ಅವರ ಸಾಹಿತ್ಯ, ವಿಚಾರಧಾರೆಗಳ ಕುರಿತಾಗಿ ಹಾಗೆ ಸುಮ್ಮನೆ ನಿಮ್ಮೊಡನೆ ನನ್ನದಷ್ಟು ವಿಚಾರ ಹಂಚಿಕೊಳ್ಳುವ ಇಚ್ಚೆಯಿಂದ ಬರೆಯಹೊರಟಿದ್ದೇನೆ. ಇದು ತಮಗೂ ಇಷ್ಟವಾಗಬಹುದೆನ್ನುವುದು ನನ್ನ ಅನಿಸಿಕೆ.  

    ಕೋಟ ಶಿವರಾಮ ಕಾರಂತ

    ಈ ವ್ಯಕ್ತಿ ಮಾಡಿದ ಕೆಲಸ, ಬರೆದ ಬರಹಗಳನ್ನು ನೋಡಿದಾಗ ಯಾರಿಗಾದರೂ ದಿಗ್ಭ್ರಮೆಯಾಗದಿರದು. ಒಬ್ಬ ವ್ಯಕ್ತಿ ಒಂದು ಬದುಕಿನಲ್ಲಿ ಇಷ್ಟೆಲ್ಲವನ್ನೂ ಮಾಡಲು ಹೇಗೆ ಸಾಧ್ಯವೆಂಬ ಪ್ರಶ್ನೆ ಮೂಡಿದರೆ ಆಶ್ಚರ್ಯಪಡಬೇಕಿಲ್ಲ. ಆದರೆ ಕಾರಂತರು ತಾವು ಬದುಕಿದ ಅಷ್ಟೂ ದಿನಗಳು ನವಯುವಕನಂತೆ ಊರೂರು ಅಲೆದು, ಎಲ್ಲಾ ಸಮುದಾಯದ ಜನರೊಡನೆ ಬೆರೆತು  ಬಾಳಿ ತೋರಿಸಿದವರು.

    ನಿರಂತರ ಸಾಧನೆಯ ಛಲ, ಎಲ್ಲವನ್ನೂ ಪರೀಕ್ಷಿಸಿದ ನಂತರವೇ ಸ್ವೀಕರಿಸುವ ಇಲ್ಲವೆ ಬಿಡುವ ಸ್ವಭಾವ, ನಿರಂತರ ಅಧ್ಯಯನ, ಏನೇ ಹೊಸ ವಿಚಾರಗಳಲ್ಲಿನ ಕುತೂಹಲ ಈ ಎಲ್ಲಾ ಗುಣಗಳೂ ಕಾರಂತರಲ್ಲಿ ಬಾಲ್ಯದಿಂದಲೇ ಬೆಳೆದು ಬಂದಿತ್ತು. ಇಂತಹಾ ವ್ಯಕ್ತಿತ್ವದ ಫಲವಾಗಿಯೇ ಕಾರಂತರು ಕೇವಲ ಸಾಹಿತಿ ಮಾತ್ರವಾಗದೆ ಯಕ್ಷಗಾನ ಕಲಾವಿದ, ಸಮಾಜ ಸುಧಾರಕ, ವಿಜ್ಞಾನ ವಿಲಾಸಿ,ಅಲೆಮಾರಿ, ಪತ್ರಕರ್ತ ಪುಸ್ತಕ ಪ್ರಕಾಶಕ, ಚಲನಚಿತ್ರ ನಿರ್ಮಾಪಕ, ಸ್ವಾತಂತ್ರ್ಯ ಹೋರಾಟಗಾರ, ಭಾಷಾ ಶಾಸ್ತ್ರಜ್ಞ ಪರಿಸರ ಹೋರಾಟಗಾರ... ಹೀಗೆ ನಾನಾ ವಿಧದ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಅವರಿಗೆ ಸಾಧ್ಯವಾಯಿತು.

    ಹೀಗೆ ನಡೆದಾಡುವ ವಿಶ್ವಕೋಶದಂತಿದ್ದ ಕಾರಂತರು ಕನ್ನಡದ ಗಾದೆ ಮಾತಾದ ‘ದೇಶ ಸುತ್ತು ಕೋಶ ಓದು’ ಎನ್ನುವ ಮಾತಿಗೆ ಅನ್ವರ್ಥರಾದವರಂತೆ ಬದುಕಿದ್ದವರು. ತಾವು ಬದುಕಿನುದ್ದಕ್ಕೂ ಸದಾ ಕಾಲ ಒಂದಿಲ್ಲೊಂದು ಕಡೆ ಸಂಚಾರಿಸುತ್ತಿದ್ದ ಕಾರಂತರು ತಾವೇ ತಮ್ಮ ಈ ಪರಿಯ ತಿರುಗಾಟದ ಬಗ್ಗೆ ಹೀಗೆ ಹೇಳಿಕೊಂಡಿದ್ದಾರೆ- ‘‘...ಸಂಚಾರ ನನ್ನ ಬದುಕಿಗೆ ಅವಿರತವಾಗಿ ಬೆರೆತದ್ದು, ಪುಟಕೊಟ್ಟಿದ್ದು, ಸೂರ್ತಿಕೊಟ್ಟಿದ್ದು, ಬಾಹ್ಯ ಜಗತ್ತಿನ ಅನುಭವಕ್ಕೆ ಹೆದ್ದಾರಿಯಾದದ್ದು. ... ಆ ಸಂಚಾರದ ಅನುಭವಗಳೇ ನನ್ನ ಸಾಹಿತ್ಯಕ್ಕೆ ಜೀವಕಳೆಯನ್ನು ಒದಗಿಸಬೇಕು. ಸಾಹಿತ್ಯಕ್ಕೆ ಬೇಕಾದ ವಸ್ತುವನ್ನು ಸ್ವಯಂಸೂರ್ತಿಯಿಂದಲೇ ಸೃಷ್ಟಿ ಮಾಡಿ, ಕಲ್ಪನಾವಿಲಾಸದಿಂದಲೇ ಅಲಂಕರಿಸಿ ಯಾರನ್ನೂ ಮೆಚ್ಚಿಸುವುದಕ್ಕೆ ಹೋಗಲಾರೆ. .... ಸಂಚಾರ ನನ್ನ ಪಾಲಿಗೆ ನಿತ್ಯದ ವಿದ್ಯಾಭ್ಯಾಸ.’

    ತನಗೆ ಸರಿಕಂಡದ್ದನ್ನು ಮಾಡಲು ಹಿಂದೆ ಮುಂದೆ ನೋಡದ ಕಾರಂತರು ತಾವು ಮಂಗಳೂರಿನ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ಮಹಾತ್ಮ ಗಾಂಧಿಯವರ ಅಸಹಕಾರ ಚಳವಳಿಯ ಕುರಿತು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅದನ್ನು ಓದಿ ಸ್ಪೂರ್ತಿಗೊಂಡ ಕಾರಂತರು ತಡಮಾಡಲಿಲ್ಲ, ತಕ್ಷಣವೇ ತಮ್ಮ ಕಾಲೇಜು ಪ್ರಾಂಶುಪಾಲರಿಗೆ- “I want to non-co-operate with your education system” ಎಂದು ಚೀಟಿ ನೀಡಿ ಹೊರಬಂದರು. ಮುಂದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ ಕಾರಂತರು ಗಾಂಧಿವಾದದಿಂದ ಸಾಕಷ್ಟು ಪ್ರಭಾವಿತರಾಗಿದ್ದರು. ಆದರೆ ಅದಕ್ಕೇ ಜೋತುಬೀಳದೆ ತಾವು ಪುನಃ ಬದುಕಿನ ವೈವಿಧ್ಯತೆಯ ಕಡೆ ಮುಖಮಾಡಿದರು. ತಮ್ಮ ಜೀವನ ಶೈಲಿಗೆ ಯಾವುದೇ ಕಟ್ಟುಗಳನ್ನು ಅಳವಡಿಸಿಕೊಳ್ಳಲು ಬಯಸದ ಕಾರಂತರಿಗೆ ಗಾಂಧಿಜಿ ಆದರ್ಶ, ಪರಮಹಂಸರಲ್ಲಿ ಭಕ್ತಿಭಾವವನ್ನು ತಾಳುವುದಕ್ಕೆ ಸಾಧ್ಯವಾಯಿತು.

    ಕಾರಂತರಲ್ಲಿನ ಲೋಕದೃಷ್ಟಿ ಅತ್ಯಂತ ವಿಶಾಲವಾದುದಾಗಿತ್ತು. ಕಾರಂತರ ದೃಷ್ಟಿಯಲ್ಲಿ ಯಾವೊಬ್ಬ ವ್ಯಕ್ತಿಯೂ ಶ್ರೇಷ್ಠನಲ್ಲ, ಕಾರಣಾವೆಂದರೆ `ಒಬ್ಬ ವ್ಯಕ್ತಿ ತಾನು ಇಡೀ ಮನುಕುಲದೊಂದಿಗೆ ಮಾತ್ರವಲ್ಲ, ಇಡೀ ಜೀವಸಂಕುಲದೊಂದಿಗೆ ಈ ಬ್ರಹ್ಮಾಂಡಲ್ಲಿ ಬಾಳಬೇಕು. ಒಂದು ಜೀವ ಘಟಕವಾದ ಮನುಷ್ಯ ತನ್ನನು ಇಡೀ ಬ್ರಹ್ಮಾಂಡದೊಂದಿಗೆ ಸಮೀಕರಿಸಿ ನೋಡಿದಾಗ ಮಾತ್ರ ತನ್ನ ಮಿತಿಯನ್ನು ಅರಿತುಕೊಳ್ಳುತ್ತಾನೆ. ತಾನು ಬದುಕಿಗೆ ನೀಡುವುದಕ್ಕಿಂತ ಬದುಕು ತನಗೆ ನೀಡಿದ್ದು ಹೆಚ್ಚು ಎಂದು ತಿಳಿದುಕೊಳ್ಳುತ್ತಾನೆ. ಇದರಿಂದ ಅವನಲ್ಲಿ ಕೀಳರಿಮೆ ಮೂಡಬೇಕಿಲ್ಲ; ವಿನೀತಭಾವ ಬೆಳೆಯಬೇಕು. ಎಲ್ಲದರ ಬಗ್ಗೆ ಕುತೂಹಲ ಹುಟ್ಟಬೇಕು. ಎಲ್ಲವನ್ನೂ ತಿಳಿಯುವಲ್ಲಿ, ಹಂಚಿಕೊಳ್ಳುವಲ್ಲಿ, ಬದುಕನ್ನು ಮತ್ತಷ್ಟು ಸುಂದರ, ಸಮೃದ್ಧಗೊಳಿಸುವಲ್ಲಿ ಸಾರ್ಥಕ್ಯ ಪಡೆಯಬೇಕು.’ ……..` ಮರ ತಾನಾಗಿ ಬೆಳೆಯುತ್ತದೆ. ಆ ರೀತಿ ಮನುಷ್ಯ ಬೆಳೆಯಲಾರ. ನಮ್ಮ ಬದುಕು ಆರಂಭವಾಗುವುದಕ್ಕೆ ಸಾವಿರಾರು ವರ್ಷಗಳ ಮೊದಲೇ ಜೀವರಾಶಿ ಇಲ್ಲಿತ್ತು ಎಂಬುದನ್ನು ತಿಳಿದರೆ ಸಾಕು.’ ಇದು ಮಾನವ ಜೀವನದ ಬಗ್ಗೆ ಕಾರಂತರ ನಿಲುವು.

    ಇನ್ನು ಕಾರಂತರು ತಾವು ಆದರ್ಶವಾದಿಗಳಾಗಿದ್ದರಲ್ಲದೆ, ವಾಸ್ತವವಾದಿಗಳೂ, ನಿರಂತರ ಪ್ರಯೋಗಶೀಲರೂ ಆಗಿದ್ದರು. ಇದರ ಪ್ರತಿಫಲವೆಂಬಂತೆ ತಾವೇ ಖುದ್ದಾಗಿ ನಿಂತು ವಿಧವಾ ವಿವಾಹ, ವೇಶ್ಯೆಯರ ವಿವಾಹಗಳನ್ನು ಮಾಡಿಸಿದ್ದರು. ಅಲ್ಲದೆ ಕರಾವಳಿಯ ಗಂಡುಕಲೆಯಾದ ಯಕ್ಷಗಾನವನ್ನು ದೇಶ ವಿದೇಶಗಳಲ್ಲಿ ಪ್ರಚುರಪಡಿಸಲು ತಂಡಗಳಾನ್ನು ಕಟ್ಟಿಕೊಂಡು ದೇಶ ವಿದೇಶಗಳನ್ನು ಸುತ್ತಿದ್ದರು. ಯಕ್ಷಗಾನದ ಉಳಿವಿಗೆ ಪ್ರಯತ್ನಿಸಿ, ಅದರಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದರು. ತಾವೇ ಸ್ವತಃ ನೃತ್ಯವನ್ನು ಕಲಿತು, ಬ್ಯಾಲೆಯಲ್ಲೂ ಗಂಭೀರ ಪ್ರಯೋಗ ಮಾಡಿದ್ದರು.ಪುಟಾಣಿ ಮಕ್ಕಳಲ್ಲಿದ್ದ ಸುಪ್ತ ಪ್ರತಿಭೆಗಳನ್ನು ಹೊರತರುವ ಉದ್ದೇಶದಿಂದ ಪುತ್ತೂರಿನಲ್ಲಿ ‘ಬಾಲವನ’ ಎಂಬ ಹೆಸರಿನ ಅಸಾಂಪ್ರದಾಯಿಕ ಶೈಕ್ಷಣಿಕ ಕೇಂದ್ರವನ್ನು ಪ್ರಾರಂಭಿಸಿದ್ದ ಕಾರಂತರು ತಾವೇ ಒಂದು ಮುದ್ರಣಾಲಯವನ್ನು ತೆರೆದು ತಮ್ಮ ಪುಸ್ತಕಗಳನ್ನು ಸ್ವತಃ ಮುದ್ರಿಸುತ್ತಿದ್ದರು. ಅಲ್ಲದೆ ಇನ್ನೊಂದು ವಿಶೇಷವೆಂದರೆ ತಮ್ಮ ಹಲವು ಕಾದಂಬರಿಗಳಿಗೆ ತಾವೆ ಮುಖಪುಟದ ಚಿತ್ರಗಳನ್ನೂ ಬರೆದು ಮುದ್ರಿಸಿದ ಬಹುಮುಖ ಪ್ರತಿಭೆ ಕಾರಂತರದು!

 ಚಲನಚಿತ್ರ ರಂಗದಲ್ಲಿಯೂ ಕೈಯಯಾಡಿಸಿದ್ದ ಕಾರಂತರು ‘ಡೊಮಿಂಗೋ’ ಮತ್ತು ‘ಭೂತ ರಾಜ್ಯ’ ಎನ್ನುವ ಎರಡು ಮೂಕಿಚಿತ್ರಗಳನ್ನು ತಯಾರಿಸಿದ್ದರು. ಅದರಲ್ಲಿಯೂ ‘ಡೊಮಿಂಗೋ’ ಚಿತ್ರವನ್ನು ಸ್ವತಃ ತಾವೇ ಚಿತ್ರೀಕರಿಸಿ, ಅಭಿನಯಿಸಿದ್ದಲ್ಲದೆ ತಾವೇ ಸ್ವಯಂ ನಿರ್ದೇಶನವನ್ನೂ ಮಾಡಿದ್ದರು. ಪರಿಸರ ಹೋರಾಟಗಾರರೂ ಆಗಿದ್ದ ಕಾರಂತರು ಪರಿಸರವಾದಿಯಾಗಿಯೇ ಲೋಕಸಭೆ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು. ಅಲ್ಲದೆ ಕೈಗಾ ಅಣುವಿದ್ಯುತ್ ಸ್ಥಾವರದ ವಿರುದ್ಧದ ಹೋರಾಟಕ್ಕೆ ನಾಯಕತ್ವವನ್ನು ವಹಿಸಿದ್ದರು. 
    ಇನ್ನು ಕಾರಂತರ ಬರಹಗಳ ಬಗ್ಗೆ ಹೇಳುವುದಾದಲ್ಲಿ ಮಕ್ಕಳಿಂದ ಮೊದಲ್ಗೊಂಡು ವಯೋವೃದ್ದರವರೆಗೂ ಎಲ್ಲರಿಗೂ ರುಚಿಸುವಂತಹಾ ಸಾಹಿತ್ಯವನ್ನು ಕಾರಂತರು ರಚಿಸಿದ್ದಾರೆ. ಹಾಗೆಯೇ ಕಾರಂತರು ತಾವು ಇಂಥದೇ ಸಾಹಿತ್ಯ ಪಂಥವೊಂದಕ್ಕೆ ಸೇರಿಕೊಂಡವರಲ್ಲ. ನವೋದಯ, ನವ್ಯ, ಬಂಡಾಯ, ದಲಿತ, ನವ್ಯೋತ್ತರ ಹೀಗೆ ಅನೇಕ ಸಾಹಿತ್ಯಿಕ ಚಳವಳಿಗಳು ಕನ್ನಡದಲ್ಲಿ  ಬಂದು ಹೋಗಿದ್ದರೂ ಕಾರಂತರು ಈ ಯಾವ ಚಳವಳಿಯ ಭಾಗವಾಗಿರಲಿಲ್ಲ. ಬಹುಷಃ ಇದೇ ಅವರ ಶ್ರೇಷ್ಠತೆಗೆ ಕಾರಣವಾಗಿರಲಿಕ್ಕೂ ಸಾಕು. ಜೀವನವೇ ಎಲ್ಲಕ್ಕಿಂತಲೂ ದೊಡ್ಡದು ಎಂದು ನಂಬಿದ್ದವರು ಕಾರಂತರು. ತಾವು ಬದುಕಿನುದ್ದಕ್ಕೂ ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದ ಕಾರಂತರು ಒಟ್ಟು ನಲವತ್ತೇಳು ಕಾದಂಬರಿಗಳನ್ನು ಬರೆದಿದ್ದಾರೆ. ಆದರೆ ತಾನು ದೊಡ್ಡ ವ್ಯಕ್ತಿ. ಸಮಾಜದ ಗಣ್ಯ ಲೇಖಕ ಎಂಬ ಬಿಗುಮಾನ ಕಿಂಚಿತ್ತೂ ಇರಲಿಲ್ಲ. ಅವರೆ ಒಂದು ಕಡೆ ಸಾಹಿತಿಗಳ ಕುರಿತಾಗಿ ಹೀಗೆ ಹೇಳಿಕೊಂಡಿದ್ದಾರೆ- ` ಸಾಹಿತಿಗಳಿಗೆ ಸಮಾಜದಲ್ಲಿ ಬೇರೇ ಪಾತ್ರವೇನೂ ಇಲ್ಲ. ಸಾಹಿತಿ ಲೋಕೋದ್ಧಾರಕ ಎಂಬ ಭಾವನೆ ಏನೂ ಬೇಡ. ಆತನೂ ನಿಮ್ಮ ಹಾಗೆ ಮನುಷ್ಯ. ಬದುಕಿನ ಬಗ್ಗೆ ತನ್ನ ಅನುಭವವನ್ನು ಮಾತ್ರ ಹೇಳುತ್ತಾನೆ. ಪರಿಹಾರ ಸೂಚಿಸುವುದಲ್ಲ. ಆತ ಬರೆದ ಮಾತ್ರಕ್ಕೆ ಮಹಾನುಭಾವ ಆಗೋಲ್ಲ. ಬರೆಯದವರೂ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ.’`,ಬರಹಗಾರ ತನ್ನ ಜನಗಳ ಸಲುವಾಗಿ ಶ್ರಮಿಸಬೇಕು. ಅವರ ಬದುಕಿನ ಮೂಕ ಜೀವನಕ್ಕೆ ನಾಲಿಗೆಯಾಗಬೇಕು, ಅವರ ತಿಳಿವಿನ ಅಂಧಕಾರಕ್ಕೆ ಆತ ಬೆಳಕಾಗಬೇಕು ಮತ್ತು ಅವರ ಜೀವನದ ಚಿತ್ತಭಿತ್ತಿಯಾಗಬೇಕು’ ಎನ್ನುತ್ತಿದ್ದವರು ಕಾರಂತರು.
    ‘ಚೋಮನ ದುಡಿ’, ‘ಬೆಟ್ಟದ ಜೀವ’, ‘ಮರಳಿ ಮಣ್ಣಿಗೆ’, ‘ಅಳಿದ ಮೇಲೆ’, ‘ಕನ್ನಡಿಯಲ್ಲಿ ಕಂಡಾತ’, ‘ಮೈ ಮನಗಳ ಸುಳಿಯಲ್ಲಿ’, ‘ಕುಡಿಯರ ಕೂಸು’, ‘ಮೂಕಜ್ಜಿಯ ಕನಸುಗಳು’  ಇವೇ ಮೊದಲಾದ ಕಾದಂಬರಿಗಳು ಕನ್ನಡದಲ್ಲಿ ಮಾತ್ರವಲ್ಲ ಭಾರತೀಯ ಭಾಷಾ ಸಾಹಿತ್ಯದಲ್ಲಿಯೇ ಅತ್ಯಂತ ಉತ್ಕೃಷ್ಠವೆನ್ನಬಹುದಾದ ಕೃತಿಗಳಾಗಿವೆ. ‘ಬೆಟ್ಟದ ಜೀವ’, ‘ಅಳಿದ ಮೇಲೆ’ ಕೃತಿಗಳಲ್ಲಿ ಕಾರಂತರೇ ಸ್ವತಃ ನಿರೂಪಕರಾಗಿರುವುದನ್ನು ಕಾಣುತ್ತೇವೆ. ಸನ್ಯಾಸಿಯ ಬದುಕು’, ‘ಜಗದೋದ್ಧಾರನಾ’, ‘ಕಣ್ಣಿದ್ದೂ ಕಾಣರು’, ‘ಕೇವಲ ಮನುಷ್ಯರು’, ‘ಕನ್ಯಾ ಬಲಿ’ ಇಂತಹಾ ನಾಟಕಗಳಲ್ಲಿ ಕಾರಂತರು ತಮ್ಮ ಸಮಾಜದಲ್ಲಿನ ಮೌಢ್ಯತೆಯನ್ನು ಎತ್ತಿ ತೋರಿಸಿರುವುದಲ್ಲದೆ ಜನರು ಆ ಮೌಢ್ಯದಿಂದ ಹೊರಬರಬೇಕೆಂಬ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.
    ಕಾರಂತರು ಈ ಮೊದಲೇ ಹೇಳಿದಂತೆ ತಮ್ಮ ಬದುಕಿಗೆ ಯಾವುದೇ ಪರಿಧಿಯನ್ನು ಹ್ಕಟ್ತಿಕೊಂಡವರಲ್ಲ. ಹಾಗೆಯೇ ತಮ್ಮ ಬರವಣಿಗೆಯೂ ಕೂಡ ಯಾವುದೇ ಒಂದು ಪ್ರಕಾರಕ್ಕೆ ಸೀಮಿತವಾಗಿರುವುದನ್ನು ಅವರು ಬಯಸುತ್ತಿರಲಿಲ್ಲ. ಅವರು ಬರೆದ ‘ಬಾಲ ಪ್ರಪಂಚ’ ಮತ್ತು ‘ವಿಜ್ಞಾನ ಪ್ರಪಂಚ’ ಮಾಲಿಕೆಗಳು ಒಂದು ವಿಶ್ವವಿದ್ಯಾನಿಲಯವು ಮಾಡಬಹುದಾದ ಕೆಲಸವಾಗಿತ್ತು. ಅಂತಹಾ ಒಂದು ಕೆಲಸವನ್ನು ಕಾರಂತರೊಬ್ಬರೇ ಕೈಕೊಂಡು ಸಾಧಿಸಿದರೆಂದರೆ ಆ ವ್ಯಕ್ತಿಯೊಳಗಣ ದೈತ್ಯ ಪ್ರತಿಭಾಶಕ್ತಿಯ ದರ್ಶನವು ನಮಗಾಗುತ್ತದೆ.
   ‘ಅಬೂನಿಂದ ಬರಾಮಕ್ಕೆ’, ‘ಅಪೂರ್ವ ಪಶ್ಚಿಮ’, ‘ಪೂರ್ವದಿಂದ ಅತ್ಯಪೂರ್ವಕ್ಕೆ’ ಇವು ಕಾರಂತರ ಪ್ರವಾಸಿ ಕಥನಗಳು. ಇವುಗಳಿಂದ ನಾವು ಪಡೆಯಬಹುದಾದ ಮಾಹಿತಿಯು ಅಗಾಧ ಸ್ವರೂಪದ್ದು. ಒಂದು ಪ್ರದೇಶದ ಭೌಗೋಳಿಕ, ಚಾರಿತ್ರಿಕ, ಸಾಂಸ್ಕೃತಿಕ ಹಿನ್ನೆಲೆಗಳು, ಅಲ್ಲಿನ ಸಸ್ಯ, ಪ್ರಾಣಿ ಸಂಕುಲಗಳ ವಿವರಗಳು, ಅಲ್ಲಿನ ಜನಸಂಸ್ಕೃತಿ ಈ ಎಲ್ಲವನ್ನೂ ಕಾರಂತರು ತಮ್ಮ ಕಥನದಲ್ಲಿ ಹಿಡಿದಿರಿಸಿದ್ದಾರೆ.
     ಕಾರಂತರು ತಾವು ದೇವರನ್ನು ಮೊದಲಿನಿಂದಲೂ ನಂಬಿದವರಲ್ಲ. ದೈವ, ದೇವರುಗಳ ಬಗ್ಗೆ ಅವರಲ್ಲಿ ಯಾವ ಬಗೆಯ ಮನೋಭಾವವಿತ್ತೆನ್ನುವುದಕ್ಕೆ ಅವರೇ ಹೇಳಿರುವ ಈ ಮಾತುಗಳು ಸಾಕ್ಷಿ- ` ನಾನು ದೇವರನ್ನು ನಂಬುವುದಿಲ್ಲ. ಏಕೆಂದರೆ ನಾನು ನೋಡಿಲ್ಲ. ನನಗೆ ಯಾವುದು ಗೊತ್ತಿಲ್ಲವೋ ಅದನ್ನು ನಂಬುವುದಿಲ್ಲ. ರಾಮಕೃಷ್ಣ ಪರಮಹಂಸರು ನಂಬಿದ್ದರು. ಅದನ್ನು ತಪಸ್ಸಿನಿಂದ ಕಂಡುಕೊಂಡರು. ನನಗೆ ರಾಮ ಎಂದರೆ ರಾಜಾ ರವಿವರ್ಮ ಅವರ ಚಿತ್ರ. ಕೃಷ್ಣ ಎಂದರೆ ಗುಬ್ಬಿ ವೀರಣ್ಣ ನವರ ಕೃಷ್ಣ ಲೀಲಾ  ನೆನಪಿಗೆ ಬರುತ್ತದೆ.’ ಆದರೆ ಹಾಗೆಂದ ಮಾತ್ರಕ್ಕೆ ಇನ್ನೊಬ್ಬರ ನಂಬಿಕೆಗೆ ಅವರೆಂದಿಗೂ ಘಾಸಿಗೊಳಿಸಿದವರಲ್ಲ. ಅಷ್ಟೇ ಏಕೆ ಒಮ್ಮೆ ಕೊಲ್ಲೂರಿನ ಮೂಕಾಂಬಿಕಾ ದೇವಾಲಯದಲ್ಲಿ ಅಮೂಲ್ಯವಾದ ಒಡವೆಗಳು ಕಳ್ಳತನವಾದಾಗ ತಾವೇ ದೇವಾಲಯದ ಆಡಳಿತದವರನ್ನು ಒಪ್ಪಿಸಿ ನ್ಯಾಯಾಲಯಕ್ಕೆ ರಿಟ್ ಸಲ್ಲಿಸಿದ್ದರು.
    ಪರಂಪರೆಯಿಂದ ಬಂದ ಕೆಲ ಮೌಲ್ಯಗಳು ಮಾನವನಿಗೆ ತನ್ನ ಎಲ್ಲಾ ಕಷ್ಟ ಕಾರ್ಪಣ್ಯಗಳ ನಡುವೆಯೂ ಬದುಕುವ ಸ್ಥೈರ್ಯವನ್ನು ನೀಡುತ್ತವೆ ಎನ್ನುವುದನ್ನು ಕಾರಂತರಿಗೆ ಅರಿವಿತ್ತು. ಅವರು ಸಂಪ್ರದಾಯಗಳನ್ನು ಧಿಕ್ಕರಿಸುತ್ತಿದ್ದರಾದರೂ ಹಬ್ಬ ಹರಿದಿನಗಳು, ಜಾತ್ರೆ, ಉತ್ಸವಗಳು, ದೇವಾಲಯದಲ್ಲಿನ ಶಿಲ್ಪಗಳು, ಚಿತ್ರಭಿತ್ತಿಗಳು ಇವುಗಳಲ್ಲಿ ಕಾರಂತರಿಗೆ ಅಪಾರ ಕುತೂಹಲವಿತ್ತು. ಕಾರಂತ ಕಾದಂಬರಿಗಳಲ್ಲಿ ಬರುವ ಮೂಕಜ್ಜಿಯಂತಹಾ ಪಾತ್ರಗಳಲ್ಲಿ ಕಾರಂತರ ದೈವ ನಂಬಿಕೆಗಳ ಕುರಿತಾದ ಸ್ಪಷ್ಟ ಚಿತ್ರಣಾವನ್ನು ನಾವು ಕಾಣುತ್ತೇವೆ. ಜೀವನಕ್ಕೆ ಸ್ಪೂರ್ತಿಯನ್ನು ತುಂಬಬಲ್ಲ ಪಾತ್ರ ಮೂಕಜ್ಜಿಯದು. ಆಕೆ ಜೀವನವನ್ನು ಅರ್ಥೈಸುವ ರೀತಿ ಬಲು ವಿಶಿಷ್ಟವಾದುದು ಎನ್ನಬೇಕು. ಆಕೆಯೂ ಸೇರಿದಂತೆ ಕಾರಂತ ಕಾದಂಬರಿಯಲ್ಲಿನ ಹಿರಿಯರ ಪಾತ್ರಗಳು  ತೋರುವ ಘನತೆ, ಜೀವನ ಶ್ರದ್ಧೆ ಅಸಾಧಾರಣವಾದುದು.
    ಕಾರಂತರ ಬರವಣಿಗೆಗಳ ಕುರಿತಾಗಿ ಕನ್ನಡದ ಮತ್ತೊಬ್ಬ ಶ್ರೇಷ್ಠ ವಿದ್ವಾಂಸರಾದ ತೀ. ನಂ. ಶ್ರೀಕಂಠಯ್ಯನವರ ಅಭಿಪ್ರಾಯ ಸಹ ಈ ಸಂದರ್ಭದಲ್ಲಿ  ಇಲ್ಲಿ ಉಲ್ಲೇಖಾರ್ಹವಾದುದು. ‘ನಿಸರ್ಗವೇ ನಮ್ಮ ಎದುರಿಗೆ ಸುರುಳಿ ಬಿಚ್ಚಿಕೊಂಡು ಸಾಗುತ್ತಿದ್ದರೆ ಉಂಟಾಗಬಹುದಾದ ಅನುಭವ ಕಾರಂತರ ಕೃತಿಗಳನ್ನು ಓದುತ್ತಿರುವಾಗ ನನಗೆ ಅನೇಕ ವೇಳೆ ಲಭಿಸಿದೆ. ಅವರ ಬರಹದಲ್ಲಿ ಒಟ್ಟಿನ ಮೇಲೆ ಕಲೆಯ ನಿರ್ಮಿತಿಗಿಂತ ನಿಸರ್ಗದ ಆವಿಷ್ಕೃತಿ ಹೆಚ್ಚು. ಇಲ್ಲಿ ನಿಸರ್ಗವೆಂದರೆ ಕಡಲು, ಬೆಟ್ಟ, ಹೊಳೆ, ಕಾಡು ಮೊದಲಾದ ಅಚೇತನ ಪ್ರಕೃತಿ ಮಾತ್ರವಲ್ಲ, ವಿವಿಧ ವಿಚಿತ್ರವಾದ ಮಾನವಪ್ರಕೃತಿಯೂ ಅವರಲ್ಲಿ ಹಾಸುಹೊಕ್ಕಾಗಿ ಸೇರುತ್ತದೆ. ಕಾರಂತರ ಬರವಣಿಗೆ ಬೆಳೆದಂತೆಲ್ಲ ಅವರ ಸಹಾನುಭೂತಿ ಶಕ್ತಿಯೂ ಬೆಳೆದು ಬಂದಿರುವಂತೆ ಕಾಣುತ್ತದೆ. ದುಡಿಮೆ ದುಃಖ ಇವೇ ತಮ್ಮ ಬಾಳಿನ ಸಾರವಾದರೂ ಅಚಲ ಶ್ರದ್ಧೆಯನ್ನು ಭದ್ರವಾಗಿ ನೆಮ್ಮಿ ನಿಲ್ಲುವ ಸ್ತ್ರೀಪಾತ್ರಗಳಲ್ಲಂತೂ ಕಾರಂತರಿಗೆ ಅಪಾರ ಗೌರವ. ಇಂಥ ಪಾತ್ರಗಳಿಂದಲೇ ಅವರ ಮಹಾಕೃತಿ ಮರಳಿ ಮಣ್ಣಿಗೆ, ನಂಬಿದವರ ನಾಕ-ನರಕ ಮೊದಲಾದವು ಅಮರವಾಗಿರುವುದು. ವಿಚಾರಪರರಾದ ಕಾರಂತರ ದೃಷ್ಟಿಯಲ್ಲಿ ಬಾಳ್ವೆಯೇ ಬೆಳಕು. ಆದರೆ ಅನ್ಯರ ಬದುಕನ್ನು ಅರ್ಥಮಾಡಿಕೊಳ್ಳಬೇಕಾದರೆ ಅವರ ಸಾಂಪ್ರದಾಯಿಕವಾದ ನಂಬಿಕೆಗಳನ್ನು -ಅವು ತಮ್ಮವಲ್ಲದಿದ್ದರೂ- ಅರ್ಥಮಾಡಿಕೊಳ್ಳಬೇಕು ಎಂಬುದು ಕಾರಂತರ ಧೃಡತತ್ವ. ಡಾಂಭಿಕವರ್ತನೆಯನ್ನು, ಆಷಾಡಭೂತಿ ವಿದ್ಯೆಯನ್ನು ಕಂಡರೆ ಮಾತ್ರ ಅವರಿಗೆ ಎಂದಿಗೂ ಆಗದು. ಅದನ್ನು ವ್ಯಂಗ್ಯವಾಗಿ ವಾಚ್ಯವಾಗಿ ಅವರು ಖಂಡಿಸುತ್ತಲೇ ಇರುತ್ತಾರೆ. ಇಷ್ಟಾದರೂ ಬದುಕಿನ ಅನಂತ ವಿವಿಧತೆಯನ್ನು ಅವರು ಚೆನ್ನಾಗಿ ಮನಗಂಡವರು; 'ಹಳ್ಳಿಯ ಹತ್ತು ಸಮಸ್ತರು' ಎಂಬ ಅಪೂರ್ವ ಕೃತಿ ಇದಕ್ಕೆ ಉತ್ತಮ ಸಾಕ್ಷಿ. ಕಾದಂಬರಿಯ ತಂತ್ರದ ಕಡೆ ಕಾರಂತರ ಗಮನ ಕಡಿಮೆ. ಆದರೆ ಮನಸ್ಸು ಮಾಡಿದರೆ ಅದರಲ್ಲಿ ಎಂಥ ಸಿದ್ಧಿಯನ್ನು ಅವರು ಮುಟ್ಟಬಲ್ಲರೆಂಬುದನ್ನು ಅವರ 'ಅಳಿದ ಮೇಲೆ' ಸಾರುತ್ತದೆ.’
    ಹೀಗೆ ಒಟ್ತಾರೆ ತೊಂಭತ್ತಾರು ವರ್ಷಗಳ ಕಾಲ ತುಂಬು ಜೀವನ ನಡೆಸಿದ ಕಾರಂತರು ತಾವು ಬಯಸಿದಂತೆ ಬದುಕಿದವರು, ಹೊರತಾಗಿ ಇನ್ನೊಬ್ಬರಿಗಾಗಿ ಅಲ್ಲ. ಅವರು ಬದುಕಿದ ರೀತಿಯಲ್ಲಿ ಅವರಿಗೆ ಸಂತೃಪ್ತಿ ಇತ್ತು. ಇಂತಹಾ ಬಹುಮುಖಿ ವ್ಯಕ್ತಿತ್ವದ ಕಾರಂತರ ಬಗ್ಗೆ ಎಷ್ಟು ಬರೆದರೂ ಸಾಕೆನ್ನಿಸುವುದಿಲ್ಲ. ಅದೇ ಅವರ ಬದುಕಿನ ಅಗಾಧತೆ ಮತ್ತು ವೈವಿದ್ಯಮಯ ವ್ಯಕ್ತಿತ್ವಕ್ಕೆ ಸಾಕ್ಷಿ.  ಕಾರಂತರು ತಾವು ನಡೆಸಿದ ಮತ್ತು ಎಂದಿಗೂ ಬಯಸುತ್ತಿದ್ದ ಕ್ರಿಯಾಶೀಲ ಜೀವನವೇ ನಮಗೆಲ್ಲ ದಾರಿದೀಪವಾಗಬೇಕಿದೆ. ಅಂತಹಾ ಅಪೂರ್ವ ಧೀಮಂತ ಸಾಹಿತಿ ಶಿವರಾಮ ಕಾರಂತರ ದಿವ್ಯ ಚೇತನಕ್ಕೆ ಅವರ ಜನುಮ ದಿನದ ಈ ಸಂದರ್ಭದಲ್ಲಿ ಈ ಅಲ್ಪನ ಭಾವಪೂರ್ಣ ನಮನಗಳು.
    ನಮಸ್ಕಾರ.

Comments

Submitted by H A Patil Thu, 10/10/2013 - 18:10

ರಾಘವೇಂದ್ರ ಅಡಿಗರಿಗೆ ವಂದನೆಗಳು ಕಾರಂತರನ್ನು ನಾವೆಲ್ಲ ಮರೆತು ಬಿಟ್ಟಿದ್ದೇವೆ, ಅವರ ಹುಟ್ಟು ಹಬ್ಬದ ಶುಭ ಸಂಧರ್ಭದಲ್ಲಿ ಅವರ ಬಗ್ಗೆ ತಾವು ಬರೆದ ಅವರ ವ್ಯಕ್ತಿತ್ವದ ಸಮಗ್ರ ದರ್ಶನ ಮಾಡಿಸಿತು, ಕಾರಂತರನ್ನು ಮತ್ತೆ ನಮಗೆ ನೆನಪಿಸಿದ್ದಕ್ಕೆ ಧನ್ಯವಾದಗಳು.