ರಾಧೆ ನಾನಿನ್ನು ಬರಲೆ? [ಕೃಷ್ಣ ..ಕೃಷ್ಣ ..ಕೃಷ್ಣ (17)]

ರಾಧೆ ನಾನಿನ್ನು ಬರಲೆ? [ಕೃಷ್ಣ ..ಕೃಷ್ಣ ..ಕೃಷ್ಣ (17)]

ಚಿತ್ರ

ಕೃಷ್ಣ ..ಕೃಷ್ಣ ..ಕೃಷ್ಣ (17)-ರಾಧೆ ನಾನಿನ್ನು ಬರಲೆ?

ಇಲ್ಲಿಯವರೆಗೂ..

ಕೃಷ್ಣ

“ಗಣೇಶ, ನಾನು ಪಶ್ಚಾತಾಪ ಪಡಲಿಲ್ಲ, ಅವನ ಕುಕೃತ್ಯಗಳಿಗೆ ಅವನಿಗೆ ಸರಿಯಾದ ಶಿಕ್ಷೆ ಎಂದರೆ ಸಾವೇ ಆಗಿತ್ತು, ಆದರೆ ನಾನು ಹೇಳಿದ್ದು ಆ ಘಟನೆ ನನ್ನ ಜೀವನದ ಮೇಲೆ ಪರಿಣಾಮ ಬೀರಿತ್ತು , ನನ್ನ ಜೀವನದ ದಿಕ್ಕನ್ನೆ ನಿರ್ಧರಿಸಿತು ಎಂದು ಅಷ್ಟೆ”

ಗಣೇಶ ಹಾಗು ಕೃಷ್ಣರ ನಡುವೆ ದೀರ್ಘ ನೀರವ ಮೌನವೊಂದು  ನೆಲಸಿತು

ಮುಂದೆ ಓದಿ..

ಗಣೇಶ ನಿಧಾನಕ್ಕೆ ಕೇಳಿದ

“ಕೃಷ್ಣ  ನನ್ನ ಎಲ್ಲ ಪ್ರಶ್ನೆಗಳು ಮುಗಿದವು, ಸೂರ್ಯೋದಯದ ಸಮಯ ಸನ್ನಿಹಿತವಾಯಿತು, ಇಬ್ಬರು ನಮ್ಮ  ಜಾಗಗಳಿಗೆ ಹೊರಡಲೆಬೇಕಾದ ಸಮಯ ಹತ್ತಿರವಾಯಿತು. ನಾನಂತು ಗೋಕರ್ಣಕ್ಕೆ ಹೋಗಬೇಕು ನೀನಾದರು ಉಡುಪಿಯ ದೇವಾಲಯಕ್ಕೆ ಹೊರಡಬೇಕು , ಕಟ್ಟ ಕಡೆಯ ಪ್ರಶ್ನೆ ಒಂದನ್ನು ಕೇಳಲೆ?”

ಕೃಷ್ಣ ಶಾಂತವಾಗಿ ನುಡಿದ,

“ಗಣೇಶ ಇನ್ನು ನಿನ್ನ ಅನುಮಾನಗಳು ತೀರಲಿಲ್ಲವೆ, ಎಲ್ಲವನ್ನು ವಿವರಿಸಿದ ಮೇಲು ಇನ್ನು ಪ್ರಶ್ನೆ ಉಳಿದಿದೆಯ ?”

ಗಣೇಶ

“ಹಾಗಲ್ಲ ಕೃಷ್ಣ ಇದು ಅನುಮಾನದ ಪ್ರಶ್ನೆಯಲ್ಲ ಕುತೂಹಲದ ಪ್ರಶ್ನೆ,  ನೀನು ಗೋಕುಲವನ್ನು ಬಿಟ್ಟು  ಹೊರಟುಹೋದ ನಂತರ ಎಂದು ಹಿಂದೆ ಬರಲಿಲ್ಲ ಅನ್ನುತ್ತಾರೆ , ಆದರೆ ನೀನು ಒಂದೆ ಒಂದು ಸಾರಿಯು ಬಂದು ನಿನಗಾಗಿ ಕಾಯುತ್ತಿದ್ದ ರಾಧೆಯನ್ನು ಬೇಟಿಮಾಡಲಿಲ್ಲವೆ “

ಕೃಷ್ಣನ ಮುಖದ ಮೇಲೆ ಶಾಂತ ಭಾವ ನೆಲೆಸಿತು, ಕಣ್ಣುಗಳಲ್ಲಿ ಅಪೂರ್ವ ಪ್ರೀತಿ.

ಕೃಷ್ಣನ ದ್ವನಿ ಭಾವಪೂರ್ಣವಾಗಿತ್ತು.

“ಗಣೇಶ ಇಲ್ಲಿಯವರೆಗು ನನ್ನನ್ನು ಯಾರು ಕೇಳದ ಪ್ರಶ್ನೆ ಕೇಳಿದೆ. ನಿಜ ನನ್ನ ಜೀವನದುದ್ದಕ್ಕು ನನ್ನನ್ನು ಕಾಡಿದ ಭಾವ ರಾಧ! ಅವಳನ್ನು ನೋಡಬೇಕೆಂದು ಮನಸ್ಸು ತುಡಿಯುತ್ತಿತ್ತು. ಆದರೆ ನಾನು ನನ್ನದೆ ಆದ ನಾನೆ ನೈದ ಬಲೆಯಲ್ಲಿ ಸಿಕ್ಕಿಬಿದ್ದಿದ್ದೆ. ರಾಜಕೀಯದಲ್ಲಿ ಒಂದೊಂದೆ ಹೆಜ್ಜೆ ಇಡುತ್ತ, ನನ್ನ ಸ್ವಂತ ಭಾವಗಳಿಗೆ ಜಾಗವೆ ಇಲ್ಲದಂತೆ ಆಗಿತ್ತು. ಮೊದಲೆ ಹೇಳಿದಂತೆ ರುಕ್ಮಿಣಿಯಾಗಲಿ ಸತ್ಯಭಾಮೆಯಾಗಲಿ ಅವರೆಲ್ಲ ನನ್ನನ್ನು ಒಲಿದು ಬಂದವರು ನನ್ನ ಪ್ರೀತಿ ಪಾತ್ರರು ಆದರೆ ರಾಧೆ  ನಾನು ಒಲಿದವಳು ನಾನು ಪ್ರೀತಿಸಿದವಳು. ಆದರು ಅವಳ ಜೊತೆ ಇರುವ ಭಾಗ್ಯ,ಅವಕಾಶ ನನಗೆ ಇರಲಿಲ್ಲ ಅದಕ್ಕೆ ನಾನು ಆರಿಸಿಕೊಂಡಿದ್ದ ಜೀವನ ಮಾರ್ಗ ಕಾರಣವಾಗಿತ್ತು. ಹಾಗೆಂದು ಅವಳನ್ನು ಮರೆತು ನಾನು ಇರಲಿಲ್ಲ. ಅಗಾಗ್ಯೆ ಅವಳ ಬಗ್ಗೆ ಸುದ್ದಿಯನ್ನು ತರಿಸಿಕೊಳ್ಳುತ್ತಿದ್ದೆ. ನನಗೆ ಗೊತ್ತಿತ್ತು ಅವಳು ಜೀವನ ಪೂರ್ತಿ ನನ್ನನ್ನು ಕಾಯುತ್ತಲೆ ಇರುವಳು ಎಂದು ಅವಳ ಪ್ರೀತಿ ಅಂತದ್ದು.  ನನ್ನ ನಿರೀಕ್ಷೆಯಲ್ಲಿಯೆ ತನ್ನ ಜೀವನವನ್ನು ಸವೆಸಿಬಿಟ್ಟಳು ಅವಳು. ಆದರೆ ನನಗೆ ಅವಳನ್ನು ಹೋಗಿ ನೋಡುವ ಮನಸ್ಥಿತಿ ಇರಲಿಲ್ಲ. ಅದು ಅವಳ ಜೀವನದ ಶಾಂತಿಯನ್ನು ಕದಡುವದೆಂದು ಅನ್ನಿಸುತ್ತಿತ್ತು. ಹಾಗಾಗೆ ಎಂದು ಹೋಗಲಿಲ್ಲ “

ಕೃಷ್ಣ ನಿಲ್ಲಿಸಿದ, ಗಣೇಶ ಕೃಷ್ಣ ಮುಖವನ್ನೆ ನೋಡುತ್ತಿದ್ದ

“ದ್ವಾರಕೆಯಲ್ಲಿ ಕಡೆ ಕಡೆಯ ದಿನಗಳವು. ಎಲ್ಲಡೆಯು ಅರಾಜಕತೆ. ಉಗ್ರಸೇನ ಮಹಾರಾಜನ ಮಾತುಗಳೆಂದರೆ ಯಾರಿಗು ಲಕ್ಷ್ಯವಿಲ್ಲ. ಕಿರಿಯರು ಹಿರಿಯರ ಮಾತನ್ನು ಪುರಸ್ಕರಿಸುತ್ತಿರಲಿಲ್ಲ.  ಸಮುದ್ರತೀರದಲ್ಲಿ  ಅಂತರ್ಯುದ್ಧ ನಡೆಯುವ ಸಾಧ್ಯತೆ ನನಗೆ ಗೂಡಚಾರರ ಮೂಲಕ ತಿಳಿಯಿತು. ನನಗೆ ಏಕೊ ಅನ್ನಿಸಿಬಿಟ್ಟಿತು ಯಾದವರ ಕಡೆಯ ದಿನಗಳು ಹತ್ತಿರ ಬಂದಿವೆ ಎಂದು. ಹಾಗೆ ಮತ್ತು ಅನ್ನಿಸಿತು ನನ್ನ ದಿನಗಳು ಮುಗಿದವು ಎಂದು. ಅದೇಕೊ ನನಗೆ ರಾಧೆಯನ್ನು ಒಮ್ಮೆ ನೋಡಿ ಬರುವ ಆಸೆ ಅತಿಯಾಯಿತು. ನಾನು ಒಬ್ಬನೆ ಕುದುರೆ ಹತ್ತಿ  ಗೋಕುಲಕ್ಕೆ ಹೊರಟುಬಿಟ್ಟೆ”

ಗಣೇಶ ಕೃಷ್ಣನ ಮುಖ ಆಶ್ಚರ್ಯದಿಂದ ನೋಡುತ್ತಿದ್ದ , ಕೇಳಿದ

“ಅಂದರೆ ಕೃಷ್ಣ ನೀನು ನಿನ್ನ ರಾಧೆಯನ್ನು ಪುನಃ  ನೋಡಿದೆಯ ಅವಳಲ್ಲಿ ಮಾತನಾಡಿದೆಯ, ನಿನ್ನ ಪ್ರಿಯೆ ಪುಟ್ಟ ಹುಡುಗಿ ರಾಧೆಯ ಮನ ಮುಖಗಳು ಸಂತೋಷದಿಂದ ತುಂಬಿಹೋಗಿರಬೇಕು”

ಕೃಷ್ಣ ಜೋರಾಗಿ ನಗಲು ಪ್ರಾರಂಬಿಸಿದ

“ಇದೆಂತ ಕಲ್ಪನೆ ಗಣೇಶ ನಿನ್ನದು. ನಾನು ರಾಧೆಯನ್ನು ನೋಡಲು ಹೋಗುವಾಗ ನನ್ನ ಜೀವನದ ಕಡೆಯ ದಿನಗಳು ಹತ್ತಿರದಲ್ಲಿದ್ದವು ಎಂದು ಹೇಳಲಿಲ್ಲವೆ, ರಾಧೆ ನನಗಿಂತ ಒಂದೆರಡು ವರುಷ ದೊಡ್ಡವಳೆ ಅಲ್ಲವೆ. ನನಗೆ ಆಗಲೆ ಎಪ್ಪತ್ತು ವರುಷಗಳು ದಾಟಿದ್ದವು ಹಾಗೆ ರಾಧೆ ಕೂಡ ನನಗಿಂತ ದೊಡ್ಡವಳೆ ಇನ್ನು ಪುಟ್ಟ ಹುಡುಗಿ ಹೇಗೆ ಆಗುತ್ತಾಳೆ ಅಲ್ಲವೆ”

ಗಣೇಶನ ಮುಖ ಗಲಿಬಿಲಿಯಲ್ಲಿ ಹೇಗೆ ಹೇಗೊ ಆಯಿತು, ಕೃಷ್ಣ ನಗುತ್ತ ನುಡಿದ

“ಆದರು ನಿನ್ನ ಮಾತು ನಿಜ ಗಣೇಶ , ನನ್ನ ರಾಧೆ ಇನ್ನು ಪುಟ್ಟ ಹುಡುಗಿಯ ಹಾಗೆ ಇದ್ದಳು. ಆವಳ ಮನಸ್ಸು ನಾನು ಗೋಕುಲ ಬಿಟ್ಟಾಗ ಹೇಗೆ ಶುದ್ದವಾಗಿ ನನ್ನ ಬಗ್ಗೆ ಪ್ರೀತಿ ತುಂಬಿಕೊಂಡಿತ್ತೊ ಆಗಲು ಹಾಗೆಯೆ ಇದ್ದಿತ್ತು. ವಯಸಿನ ಯಾವ ಲಕ್ಷಣವು ಅವಳ ನಡೆ ನುಡಿಗಳಲ್ಲಿ ಅಥವ ಭಾವದಲ್ಲಿ ಇರಲಿಲ್ಲ. ಅಷ್ಟು ವರ್ಷಗಳು ಕಾದರು ಅವಳಲ್ಲಿ ನನ್ನ ಬಗ್ಗೆ ಯಾವ ಅಸಮಾಧಾನವು ಇರಲಿಲ್ಲ. ನಾನು ಅವಳನ್ನು ನೋಡಲು ಬರುವುದು ಅವಳಿಗೆ ಗೊತ್ತು ಎನ್ನುವಂತೆ ಸ್ವಾಗತಿಸಿದಳು”

ಗಣೇಶ ಕುತೂಹಲದಿಂದ ಕೃಷ್ಣ ಮಾತನ್ನು ಕೇಳುತ್ತಿದ್ದ

“ನಾನು ಗೋಕುಲವನ್ನು ಪ್ರವೇಶಿಸುವಾಗ,  ಗೋಕುಲದ ಜನರೆಲ್ಲ ನಿದ್ದೆಗೆ ಶರಣಾಗಿದ್ದರು.  ರಾತ್ರಿ ದೇವಿ ತನ್ನ ಮಾಯದ ಸೆರಗನ್ನು ಎಲ್ಲಡೆ ಹಾಸಿದ್ದಳು. ಹುಣ್ಣಿಮೆಯ ಪೂರ್ಣ ಚಂದ್ರ ಅಗಸವನ್ನು ತುಂಬಿದ್ದ. ಗೋಕುಲದ ಸಮೀಪದ ಯಮುನಾ ತೀರದ ಬೃಂದಾವನ ನೆಲದ ಮೇಲೆಲ್ಲ ಮಲ್ಲಿಗೆ ಹರಡಿದಂತೆ ಚಂದ್ರನ ಬೆಳಕಲ್ಲಿ ಹೊಳೆಯುತ್ತಿತ್ತು. ಅದೇ ಜಾಗ ನಾನು ಹಾಗು ಗೋಕುಲದ ನನ್ನ ಸ್ನೇಹಿತರು. ಗೋಕುಲದ  ಹಳ್ಳಿಯ ಮುಗ್ದೆಯರು, ಕೆಲ  ಇಳಿವಯಸಿನ ಸ್ತ್ರೀಯರು ಎಲ್ಲರು ಸೇರಿ ರಾಸಲೀಲೆಯ ವೈಭವದ     ಸಂಗೀತ ನೃತ್ಯ ನಾಟಕ ಸಂಭ್ರಮ ಎಲ್ಲ ಸಂಗಮಗಳ ತಾಣ,  ನನ್ನ ರಾಧೆ ನನ್ನನ್ನು ಆರಾಧಿಸುತ್ತಿದ್ದ ನಾನು ರಾಧೆಯನ್ನು ಆರಾಧಿಸುತ್ತಿದ್ದ ಅದೆ ಯಮುನಾತೀರ ಪ್ರಶಾಂತವಾಗಿತ್ತು. ಅದೆ ನದಿ ಅದೆ ನೆಲ ಅದೆ ಮರಗಳು ಅದೆ ಸೋಪಾನದ ಕಲ್ಲುಗಳು ಅವುಗಳ ಮದ್ಯೆ ನನ್ನ ರಾಧೆ ಒಂಟಿಯಾಗಿ  ನದಿಯನ್ನೆ ನೋಡುತ್ತ ಕುಳಿತ್ತಿದ್ದಳು”

ಗಣೇಶನಿಗೆ ಉಧ್ವೇಗ ಜಾಸ್ತಿಯಾಗಿತ್ತು, ಬಹುಶಃ ಈ ಘಟನೆಯನ್ನು ಕೇಳಿತ್ತಿರುವುದು ನಾನೆ ಮೊದಲು ಇರಬಹುದು

ಕೃಷ್ಣ ಮುಂದುವರೆಸಿದ

“ಹೌದು ಗಣೇಶ, ಆ ಚಂದ್ರನ ಬೆಳದಿಂಗಳು ತುಂಬಿದ ಯಮುನತೀರದಲ್ಲಿ , ಬೃಂದಾವನ ಎಂದು ನಾವೆಲ್ಲ ಕರೆಯುತ್ತಿದ್ದ ಆ ಹೊನ್ನ ಮರಳ ರಾಶಿಯಲ್ಲಿ ಮರದ ಕೆಳಗೆ , ಒಂಟಿಯಾಗಿ ವಿರಹಿಣಿಯಂತೆ ರಾಧೆ ಕುಳಿತ್ತಿದ್ದಳು. ನಾನು ಅವಳನ್ನು ನೋಡುತ್ತ ಇದ್ದದ್ದು ಸುಮಾರು ಐವತ್ತು ವರುಷಗಳ ನಂತರ ಆದರು ನನ್ನ ಹೃದಯ ಅವಳನ್ನು ದೂರದಿಂದಲೆ ಗುರುತಿಸಿತು. ನನ್ನ ಕುದುರೆಯು ಅದೇನೊ ಮೋಡಿಗೆ ಒಳಗಾದಂತೆ ನಿಧಾನವಾಗಿ ನಡೆಯುತ್ತ ಇದ್ದದ್ದು, ಅವಳನ್ನು ದೂರದಿಂದ ಕಾಣುತ್ತಲೆ ನಿಂತಿತ್ತು. ಹಾಲಬೆಳದಿಂಗಳಲ್ಲಿ ಯಮುನೆಯ ಕಲರವ ಹೊರತುಪಡಿಸಿ ಪೂರ್ಣ ಮೌನ. ಅಪೂರ್ವ ಶಾಂತಿ ತುಂಬಿತ್ತು.

ರಾಧೆಯ ಮನಸು ಹೃದಯಗಳಾದರು ಎಂತಹುದು,  ಯಮುನೆಯನ್ನು ದಿಟ್ಟಿಸುತ್ತ ಕುಳಿತವಳು ಹಿಂದೆ ತಿರುಗಿ ಸಹ ನೋಡದೆ ನುಡಿದಳು

“ಕೃಷ್ಣ ಕಡೆಗು ಬಂದೆಯ, ನನ್ನ ಹೃದಯದ ಕರೆ ನಿನಗೆ ಕೇಳಿತಲ್ಲ , ನನ್ನ ಕಾಯುವಿಕೆ ಸಾರ್ಥಕವಾಯಿತು. ಬಾ ಕೃಷ್ಣ”

ಅಷ್ಟು ವರ್ಷಗಳ ನಂತರವು ನನ್ನ ಹೆಜ್ಜೆಯ ಶಬ್ದದಿಂದಲೆ ಗುರುತಿಸಿದ್ದಳು.

ನಾನು ನಿಧಾನಕ್ಕೆ ಅವಳ ಪಕ್ಕ ಹೋಗಿ ಕುಳಿತೆ. ನನ್ನಡೆಗೆ ತಿರುಗಿದಳು. ಅವಳ ಮುಖದಲ್ಲೊಂದು ಅಪೂರ್ವ ಪ್ರಭೆ. ಮನದಲ್ಲಿ ತುಂಬಿಕೊಂಡಿದ್ದ ನನ್ನ ಮೇಲಿನ ಪ್ರೀತಿ ಅವಳ ಕಣ್ಣುಗಳಲ್ಲಿ ತುಳುಕುತ್ತಿತ್ತು. ಮುಖದಲ್ಲಿ  ವಯಸಿನ ಲಕ್ಷಣವಾಗಲಿ. ದುಃಖವಾಗಲಿ. ನನ್ನ ಬಗ್ಗೆ ಅಗ್ರಹವಾಗಲಿ ಯಾವುದೆ ಭಾವವಿಲ್ಲ. ತಪಸ್ಸಿಗೆ ಕುಳಿತಂತ ಪ್ರಶಾಂತ ಭಾವ.   

“ರಾಧ”

ಅನ್ನುವದಕ್ಕಿಂತ ಹೆಚ್ಚಿನ ಮಾತು ನನಗೆ ನುಡಿಯಲಾಗಲಿಲ್ಲ.

ಇಬ್ಬರ ನಡುವೆ ಮಾತಿನ ಅಗತ್ಯವೆ ಇರದಂತ ಮನಸಿನ ಸಂಯೋಗ. ನಿಧಾನಕ್ಕೆ ಚೇತರಿಸಿಕೊಂಡೆ. ಅವಳ ಬಗ್ಗೆ , ಗೋಕುಲದ ಬಗ್ಗೆ, ಅವಳ ಸ್ನೇಹಿತೆಯರ ಬಗ್ಗೆ, ಅಲ್ಲಿ ಮೊದಲು ನಮ್ಮ ಜೊತೆಗಿದ್ದ ಹಸುಗಳ ಬಗ್ಗೆ ಈ ರೀತಿ ಏನೆಲ್ಲ ಮಾತನಾಡಿದೆವು.  

‘ಕೃಷ್ಣ ಇದೇ ನೋಡು ನೀನು ಕೊಳಲು ಊದುತ್ತ ಕುಳಿತಿಕೊಳ್ಳುತ್ತಿದ್ದ ಮರ, ಕಲ್ಲು ಬಂಡೆ’ ಎಂದಳು,

‘ಕೃಷ್ಣ ಇದೇ ನೋಡು ಸದಾ ಹರಿಯುತ್ತಿದ್ದ ಯಮುನಾ’

‘ಕೃಷ್ಣ ಇದೇ ಜಾಗದಲ್ಲಿ ನೋಡು ನೀನು ಕೊಳಲು ಬಾರಿಸುತ್ತಿದ್ದಾಗ ಪಕ್ಕದಲ್ಲಿ ಕಾಳಿಂಗ ಎಂಬ ಎತ್ತು ಮಲಗುತ್ತ ಇದ್ದದ್ದು’’ ಎಂದಳು

ಎಲ್ಲವೂ ಹಾಗೆ , ಹಾಗೆಯೆ ಇದೆ ಕೃಷ್ಣ , ಇಲ್ಲಿಯ ಕಲ್ಲು ನೀರು ಮರ ಗಾಳಿ ಯಾವುದು ಬದಲಾಗಲಿಲ್ಲ ಆದರೆ ಕೃಷ್ಣನಿಲ್ಲದಾಗ ಯಾವುದರಲ್ಲು ಜೀವ ಇರಲಿಲ್ಲ ಎನ್ನುತ್ತ ಕಣ್ಣಲ್ಲಿ ನೀರು ತುಂಬಿಕೊಂಡಳು.

ಮತ್ತೆ ನಕ್ಕಳು

ರುಕ್ಮಿಣೆ, ಸತ್ಯಭಾಮ ಎಲ್ಲ ಹೇಗಿದ್ದಾರೆ ಎಂದು ನಕ್ಕಳು. ನಿನಗೆ ಅದೇನೊ ಹದಿನೆಂಟು ಸಾವಿರ ಪತ್ನಿಯರಂತೆ ಎಂದು ರೇಗಿಸಿದಳು.

ಒಂದೆ ಒಂದು ಸಾರಿಯಾದರು ನನ್ನನ್ನು ಏಕೆ ನೋಡಲು ಬರಲಿಲ್ಲ ಎಂದು ಅಕ್ಷೇಪಿಸಲಿಲ್ಲ.  

“ರಾಧ ನಿನ್ನ ಮಡಿಲಲ್ಲಿ ಒಮ್ಮೆ ಮಲಗುವ ಆಸೆ “ ಎಂದೆ. ರಾಧೆಯು

“ ಹೌದು ಕೃಷ್ಣ ನಾನು ಆ ಒಂದು ಸಂಭವಕ್ಕಾಗಿಯೆ ಜೀವನ ಪೂರ್ತಿ ಕಾದೆ “

ಅನ್ನುತ್ತ ಕಾಲು ಮುಂದು ಚಾಚಿದಳು. ನಾನು ಮರಳ ಮೇಲೆ ಕುಳಿತು ಅವಳ ತೊಡೆಯ ಮೇಲೆ ತಲೆಯಿಟ್ಟು ಕಣ್ಣು ಮುಚ್ಚಿದೆ. ಮನದಲ್ಲಿ ಅಪೂರ್ವ ಶಾಂತಿ ತುಂಬಿಕೊಂಡಿತ್ತು. ನನ್ನ ಮನ ನುಡಿಯುತ್ತಿತ್ತು, ಹೌದು ಈ ಶಾಂತಿಗಾಗಿಯೆ , ಇದನ್ನು ಅರಿಸಿಯೆ ನಾನು ಅಷ್ಟು ದೂರದಿಂದ ಬಂದಿರುವುದು. ಸುಮಾರು ಐವತ್ತು ವರುಷಗಳ ಕಾಲ ತುಂಬಿಕೊಂಡ  ಮನಸಿನ ಒತ್ತಡ, ಸದಾ ಸುತ್ತುತ್ತಿದ್ದ ದೈಹಿಕ ಶ್ರಮ, ಯಾರಲ್ಲಿಯು ಹೇಳಿಕೊಳ್ಳದ ಮನಸಿನ ಕೊರಗು, ಸದಾ ಶತ್ರುಗಳನ್ನು ಎದುರಿಸಿ ಗೂಡುಕಟ್ಟಿದ್ದ ಆತಂಕ , ತನ್ನವರು ಎಂದು ನಂಬಿದ ಜನರಿಗೆ ಕಷ್ಟ ಬಂದಾಗ ಆಗುತ್ತಿದ್ದ ತಳಮಳ ಅದರಿಂದ ಆಗಿದ್ದ ನೋವು , ಎಲ್ಲವು ರಾಧೆಯ ಸನಿಹದಲ್ಲಿ , ಆ ಯಮುನೆಯ ತೀರದಲ್ಲಿ ಕರಗಿ ಹೋಗಿ ಮನವು ಖಾಲಿಯಾಗುತ್ತಿತ್ತು. ಅತೀವ ಪ್ರಶಾಂತತೆ ತುಂಬುತ್ತಿತ್ತು. ಎಂತದೊ ಅಪೂರ್ವ ಶಾಂತಿ.  

ಸಾಕು ಸಾಕಿನ್ನು ಈ ಪ್ರಪಂಚದ ಸಹವಾಸ, ನನ್ನವರು ಎನ್ನುವ ಪೊಳ್ಳು ಅಭಿಮಾನ ಮೋಹ ಬೆಳದಿಂಗಳ ರಾತ್ರಿಯ ಗಾಳಿಯಲ್ಲಿ ಕರಗಿ ಹೋಗುತ್ತಿತ್ತು . ಅರ್ಜುನನಿಗೆ ಯುದ್ಧಭೂಮಿಯಲ್ಲಿ ಮಾಡಿದ ಉಪದೇಶ ನೆನಪಾಯಿತು. ನಾನು ನನ್ನವರು ಅನ್ನುವದೆಲ್ಲ ವ್ಯಾಮೋಹ. ಎದುರಿಗೆ ಇರುವ ಅಣ್ಣ ತಮ್ಮ ತಂದೆ ತಾಯಿ ಚಿಕ್ಕಪ್ಪ ತಾತ ಅನ್ನುವ ಭಾಂದವ್ಯಕ್ಕೆಲ್ಲ ಏನು ಅರ್ಥ ನಾವು ನಂಬಿದ ಸಿದ್ಧಾಂತ ತತ್ವಗಳೆ ಮುಖ್ಯ ಅನ್ನಿಸಿತು. ನಾನು ತೆಗೆದುಕೊಂಡಿದ್ದ ನಿರ್ಧಾರ ನಿಚ್ಚಳವಾಯಿತು. ಏಕೊ ಎಳೆಯ ಮಗುವಿಗೆ ಬರುವಂತೆ ಅಳು ಉಕ್ಕಿ ಉಕ್ಕಿ ಬರುತ್ತಿತ್ತು. ಆದರೆ ರಾಧೆಯ ಮಡಿಲಲ್ಲಿ ಮಲಗಿರುವ ಭಾವ ಇಷ್ಟು ವರ್ಷಗಳ ನಂತರ ಬಂದು ಅವಳ ಮನಸಿಗೆ ಅಹಿತ ಮಾಡುವ ಕೆಲಸ ಬೇಡ ಅನಿಸಿ ಅಳುವನ್ನು ತಡೆಯುತ್ತಿದ್ದೆ, ಆದರೆ ನನಗೆ ಅರಿವಿಲ್ಲದೆ ಕಣ್ಣುಗಳಲ್ಲಿ ನೀರು ಸುರಿಯುತ್ತಿತ್ತು. ನಿಧಾನಕ್ಕೆ ರಾಧೆಯ ಸೀರೆಯಲ್ಲ ಒದ್ದೆಯಾಯಿತು ನನ್ನ ಕಣ್ಣ ನೀರಿನಿಂದ

"ಏಕೆ ಮುಕುಂದ ಅಳುತ್ತಿರುವೆ, ನಿನ್ನ ಕಣ್ಣಲ್ಲಿ ನೀರೆ , ನಾನು ನಿನ್ನ ಕೈಗಳಿಗೆ ಕಣ್ಣೀರು ಒರೆಸುವ ಶಕ್ತಿ ಇದೆ ಅಷ್ಟೆ ಅಂದುಕೊಂಡಿದ್ದೆ ನಿನ್ನ ಕಣ್ಣಲ್ಲಿ ನೀರಿರುವ ವಿಷಯ ಅರ್ಥಮಾಡಿಕೊಳ್ಳಲಿಲ್ಲ ನೋಡು" ಎಂದಳು, ಕಣ್ಣಲ್ಲಿ ನೀರು ತುಂಬಿಕೊಂಡಳು.

ನಾನು ಎದ್ದು ಕುಳಿತು ರಾಧೆಯನ್ನು ನೋಡಿ ನಕ್ಕೆ. ನಿಜ ರಾಧೆ ಎಲ್ಲರ ಕಣ್ಣಿನ ನೀರ ಒರೆಸುವ ಈ ಕೃಷ್ಣನ ಕಣ್ಣೀರು ಒರೆಸುವುದು ನೀನು ಅಂದೆ , ಅವಳು ನಕ್ಕಳು, ಅದೆ ಮುಗ್ದ ನಗು ಅದೆ ಪ್ರಶಾಂತ ನಗು, ಮನಸಿನಲ್ಲಿ ಯಾವ ವ್ಯಾಮೋಹವು ಇಲ್ಲದ, ನನ್ನಿಂದ ಯಾವ ನಿರೀಕ್ಷೆ  ಇಲ್ಲದ ಕಪಟವು ಇಲ್ಲದ ,  ನಗು . ಅವಳ ನಗುವನ್ನು ನೋಡುತ್ತ ನನಗೆ ಪ್ರಪಂಚ ಅರ್ಥವಾಯಿತು ಅನ್ನಿಸಿತು.  ಪ್ರೀತಿಗು ದ್ವೇಷಕ್ಕು ಅರ್ಥ ಸಿಕ್ಕಿತು. ಕಪಟಕ್ಕು ನಿಷ್ಕಪಟಕ್ಕು ವ್ಯತ್ಯಾಸ ಅರ್ಥವಾಗಿತ್ತು. ಮುಗ್ದತೆ, ಸಮರ್ಪಣಾ ಭಾವ ಎಂದರೆ ಏನೆಂದು ತಿಳಿಯುತ್ತಿತ್ತು.  ಏಕೊ ಎಲ್ಲವು ಸಿಕ್ಕಿತು ನನಗೆ ಬೇಕಾದ ಎಲ್ಲವು ಸಿಕ್ಕಿತು ಎನ್ನಿಸಿ ಮನಸ್ಸು ತೃಪಿಯಾಗಿ ಎದ್ದು ನಿಂತೆ.

ಏಕೊ ರಾಧೆಯ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿತ್ತು

"ಏಕೆ ರಾಧೆ, ನಾನು ಮತ್ತೆ ಹೋಗುವೆ ಎಂದು ದುಃಖವೆ?" ಎಂದೆ

ರಾಧ ಅಡ್ಡಡ್ಡ ತಲೆ ಆಡಿಸಿದಳು

"ಇಲ್ಲ ಕೃಷ್ಣ ನೀನು ಈ ದಿನ ಬರುವಾಗಲೆ ಮತ್ತೆ ಹಿಂದೆ ಹೋಗುವೆ ಎಂದು ನನಗೆ ತಿಳಿದಿತ್ತು. ಬಹುಶಃ ನೀನು ನನ್ನನ್ನು ನೋಡಲು ಒಂದು ದಿನ ಬಂದೆ ಬರುವೆ ಎಂದು ಸಹ ತಿಳಿದಿತ್ತು" ಎಂದಳು

"ಮತ್ತೇ ಏಕೆ ಈ ಕಣ್ಣೀರು" ಎಂದೆ

"ಕೃಷ್ಣ ನೀನು ಇಷ್ಟು ವರುಷಗಳ ನಂತರ ನನ್ನನ್ನು ಅರಸಿ ಬರುತ್ತಿದ್ದಿ, ನೀನು ಏನನ್ನೊ ನಿರೀಕ್ಷಿಸಿ ಯಾವುದೋ ಉದ್ದೇಶದಿಂದಲೆ ಬಂದಿರುವೆ ಎಂದು ಗೊತ್ತು, ಆದರೆ ನನ್ನ ದುಃಖ ಅದಕ್ಕಲ್ಲ, ನೀನು ನನ್ನನ್ನು ನೋಡಲು ಮತ್ತೆಂದು ಬರುವದಿಲ್ಲ ಎಂದು ಅರಿವಾಗಿ ಅಳುತ್ತಿರುವೆ" ಎಂದಳು.

ನಾನು ಚಕಿತನಾಗಿದ್ದೆ. ನಾನು ಬಾಯಲ್ಲಿ ಹೇಳದೆ ರಾಧೆ ಎಲ್ಲವನ್ನು ಅರ್ಥಮಾಡಿಕೊಂಡಿದ್ದಳು. ನಾನು ಮತ್ತೆಂದು ಅವಳನ್ನು ನೋಡಲು ಬರುವದಿಲ್ಲ ಎನ್ನುವ ಸತ್ಯ ಅವಳ ಮನಸಿಗೆ ಅದು ಹೇಗೊ ಅರ್ಥವಾಗಿಹೋಗಿತ್ತು. ಯಾದವರ ಕಲಹದ ಬಗ್ಗೆ ಅವಳಿಗೆ ಅರಿವಿದೆಯೊ ಇಲ್ಲವೊ ತಿಳಿದಿಲ್ಲ ಆದರೆ ನನ್ನ ಮನಸನ್ನು ಅಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ದಳು.

ಇನ್ನು ಮಾತನಾಡಲು ಯಾವುದೆ ಪದಗಳು ಇರಲಿಲ್ಲ. ದೂರದಲ್ಲಿದ್ದ ಕುದುರೆ ನನ್ನ ಮನಸನ್ನು ಅರ್ಥಮಾಡಿಕೊಂಡಂತೆ ಹತ್ತಿರ ಬಂದಿತು. ಅದರ ಹಗ್ಗವನ್ನು ಕೈಯಲ್ಲಿ ಹಿಡಿದು ನುಡಿದೆ

"ರಾಧೆ ನಾನಿನ್ನು ಬರಲೆ?"

ಮೌನವಾಗಿ ನನ್ನ ಬಳಿಯಿದ್ದ ಮುರಳಿಯನ್ನು ಅವಳ ಕೈಗೆ ನೀಡಿದೆ, ಅವಳು ಅದನ್ನು ತೆಗೆದುಕೊಂಡು ಎರಡು ಕೈಲಿ ಹಿಡಿದು ನೋಡಿದಳು.

ಆಕೆಯ ಕಣ್ಣಲ್ಲಿ ನೀರು, ಬರಿ ಮೌನ ತಲೆ ಆಡಿಸಿದಳು. ಪ್ರೀತಿಯಿಂದ ನನ್ನ ಮುಖವನ್ನೊಮ್ಮೆ ಭುಜ ಕೈಗಳನ್ನೆಲ್ಲ ಸವರಿದಳು

"ಸರಿ ಕೃಷ್ಣ" ಎಂದಳು

ಕುದುರೆಯನ್ನು ಏರಿದೆ. ಅವಳತ್ತ ನೋಡುತ್ತಿರುವಂತೆ ನಿಧಾನವಾಗಿ ಅಲ್ಲಿಂದ ಹೊರಟೆ. ಯಮುನೆಯ ತಣ್ಣನೆಯ ಗಾಳಿ ಮುಖವನ್ನು ತಡುವುತ್ತಿತ್ತು, ಆಕಾಶದ ಬಣ್ಣ ಬದಲಾಗುತ್ತ ನಕ್ಷತ್ರಗಳೆಲ್ಲ ಮಂಕಾಗುತ್ತಿದ್ದವು. ಬಿಳಿಯ ಮೋಡಗಳು ಅಕಾಶವನ್ನು ತುಂಬುತ್ತ ಬೆಳದಿಂಗಳನ್ನು ತಡೆಯುತ್ತಿತ್ತು. ಹಿಂದೆ ಒಮ್ಮೆ ನೋಡಿದೆ, ಯಮುನೆಯ ದಡದಲ್ಲಿದ್ದ ರಾಧೆ, ಒಂದು ಕಪ್ಪು ಬಿಳುಪು ಚಿತ್ರದಂತೆ ಗೋಚರಿಸುತ್ತಿದ್ದಳು. ಅಲ್ಲಿಂದ ಹೊರಟು ಬಿಟ್ಟೆ”

ಮುಂದುವರೆಯುವುದು..

ಚಿತ್ರಕೃಪೆ :  ರಾಧೆ ನಾನಿನ್ನು ಬರಲೆ?

http://www.wallsave.com/wallpapers/1024x768/radha-krishna-flut/51577/radha-krishna-flut-51577.jpg

ಎಲ್ಲ ಭಾಗಗಳನ್ನು ಒಟ್ಟಾಗಿ ಓದಲು ಕೆಳಗೆ 'ಸರಣಿ'  ಎಂಬ ಆಯ್ಕೆಯ ಕೆಳಗಿರುವ 'ಕೃಷ್ಣ ..ಕೃಷ್ಣ ..ಕೃಷ್ಣ' ಪದವನ್ನು ಕ್ಲಿಕ್ ಮಾಡಿ
 

Rating
Average: 5 (1 vote)

Comments

ಶ್ರಿನಾಥಬಲ್ಲೆಯವರೆ, ನಿಮ್ಮ ಮೆಚ್ಚುಗೆಗೆ ವಂದನೆಗಳು
ಫಾರ್ಮೇಟ್ ಈಗ ಸರಿಯಾಗಿದೆ ನೋಡಿ!
ಸರಿಪಡಿಸಿದ ಸಂಪದ ತಾಂತ್ರಿಕ ವರ್ಗಕ್ಕೆ ಕೃತಜ್ಞತೆಗಳು :‍)

Submitted by swara kamath Fri, 10/11/2013 - 18:48

ಪಾರ್ಥರೆ ನಮಸ್ಕಾರಗಳು.
ತಮ್ಮ" ಕೃಷ್ಣ ಕೃಷ್ಣ ಕೃಷ್ಣ "ಸರಣಿ ಸರಳವಾಗಿ ಅರ್ಥ ಪೂರ್ಣವಾಗಿದೆ.ಇಂದಿನ ಯುವ ಜನಾಂಗದವರ ಮನದಲ್ಲಿ ದೇವರ(ಕೃಷ್ಣ)ಕುರಿತು ಮೂಡುವ
ಅನುಮಾನಗಳಿಗೆ ಒಬ್ಬ ಸ್ನೇಹಿತನು ಮತ್ತೊಬ್ಬ ಸ್ನೇಹಿತನಿಗೆ ಸಲಿಗೆಯಿಂದ ಹೇಳುವರೀತಿಯಲ್ಲಿ ಉತ್ತರ ನೀಡಿ ಸಂಶಯಗಳನ್ನುಬಗೆಹರಿಸಿದ್ದೀರಿ. ನಿಮ್ಮ ಈ ಪ್ರಯತ್ನ ನಿಜಕ್ಕೂ ತುಂಬಾ ಶ್ಲಾಘನೀಯ ವಾದದ್ದು.....ರಮೇಶ ಕಾಮತ್

Submitted by nageshamysore Fri, 10/11/2013 - 20:12

ಪಾರ್ಥಾ ಸಾರ್, ರಾಧೆಯೊಂದಿಗಿನ ಭೇಟಿಯನ್ನು ನೀವು ಹೇಗಾಗಿಸಬಹುದೆಂದು ಊಹಿಸಲು ಯತ್ನಿಸಿದ್ದೆ - ಹಾಗೆಯೆ ಮಾಡಿದ್ದೀರ:-) ಭೇಟಿಯ ಬಿಲ್ಡಪ್ ಮತ್ತು ಭೇಟಿ ಎರಡೂ ಅದ್ಭುತವಾಗಿ ಬಿತ್ತರಗೊಂಡಿವೆ. ಇಡೀ ಎಪಿಸೋಡಿನ ಸೂಪರ ಹೈಲೈಟೆಂದರೆ - ಕೃಷ್ಣ ತನ್ನ ಕೊಳಲನ್ನು ರಾಧೆಗೆ ಕೊಟ್ಟುಬಿಡುವ ಸಾಂಕೇತಿಕತೆ. ಅವರಿಬ್ಬರ ನಡುವಣ ಭಾಂಧವ್ಯ, ಅನುರಾಗ, ಸ್ನೇಹವನ್ನು ಆ ಸಾಂಕೇತಿಕತೆಗಿಂತ ಉನ್ನತ ಸ್ತರದಲ್ಲಿ ಹೇಳಲು ಸಾಧ್ಯವೆ ಇಲ್ಲವೇನೊ ಎನ್ನುವಷ್ಟು ಸೊಗಸಾದ ಸೃಷ್ಟಿ - ಆ ಮುರುಳಿ ನೀಡುವ ಪ್ರಸಂಗ. ತನ್ನ ಕೊರಳ ಗಾನವನ್ನೆ, ಕೊಳಲ ದನಿಯಾಗಿ ಕೊಡುವ ಕೃಷ್ಣ ದೊಡ್ಡವನೊ, ಚೂರೂ, ಸ್ವಾರ್ಥ, ಪ್ರಯತ್ನವಿಲ್ಲದೆ ಬರಿ ನಿಸ್ವಾರ್ಥ ಅವ್ಯಾಜ್ಯ ಪ್ರೇಮದಿಂದಲೆ ಅವನನ್ನು ಆ ಮಟ್ಟಕ್ಕೇರಿಸುವ ರಾಧೆ ದೊಡ್ಡವಳೊ ಎಂಬ ತಾಕಲಾಟ ಮನದಲ್ಲಿ ಹುಟ್ಟಿಸದೆ ಬಿಡುವುದಿಲ್ಲ ಆ ಸಂಘಟನೆ. ತುಂಬ ಮುದ ನೀಡಿದ ಕಂತು :-)

Submitted by partha1059 Fri, 10/11/2013 - 21:57

In reply to by nageshamysore

ವಂದನೆಗಳು ನಾಗೇಶರವರೆ
ನಿಮ್ಮ ಮೆಚ್ಚುಗೆಗೆ ವಂದನೆಗಳು, ಇದೊಂದು ವಿದಾಯದ ಬೇಟಿ, ಕೃಷ್ಣನ ಜೀವನದ ಕಡೆಯ ದಿನಗಳು, ಮುಂದಿನ ಯಾದವರ
ಕಲಹದ ಮುನ್ಸೂಚನೆಯೊಂದಿಗೆ, ರಾಧೆಯನ್ನು ಬೇಟಿ ಮಾಡಲು ಬರುವ ಎನ್ನುವುದು ನನ್ನ ಕಲ್ಪನೆ,
ರಾಧೆಯ ಜೊತೆ ಇರುವಾಗ ಕೃಷ್ಣನಿಗೆ ಅರ್ಜುನನಿಗೆ ಭೋದಿಸಿದ ಭೋದನೆ ಎಲ್ಲವೂ ನೆನಪಾಗುವುದು !
ಎಲ್ಲ ವ್ಯಾಮೋಹಗಳನ್ನು ತೊರೆಯುತ್ತಿದ್ದಾನೆ !
ಅದನ್ನು ಸೂಚಿಸಲು ತನ್ನ ಕೊಳಲನ್ನೆ ಒಪ್ಪಿಸಿದ, ರಾಧೆಗೂ ಕೃಷ್ಣನ ಮನ ಅರ್ಥವಾಗಿ ಹೋಗಿದೆ ! ಇಂತಹ ಪ್ರೇಮ ಅವರಿಬ್ಬರ ನಡುವಿನದು.
ನನಗೂ ಸಹ ಬರೆಯುವಾಗ ತುಂಬಾ ತಾದ್ಯಾತ್ಮ ತಂದುಕೊಟ್ಟ ಭಾಗವಿದು.
ವಂದನೆಗಳು

Submitted by ಗಣೇಶ Sat, 10/12/2013 - 00:10

ಗೋಪಿಯಾ ತಾರೆ ಹೇಂ ಚಾಂದ್ ಹೆ ರಾಧಾ...
ಗೋಪಿಯಾ ಆನಿ ಜಾನಿ ಹೆ, ರಾಧಾ ತೊ ಮನ್ ಕಿ ರಾಣಿ ಹೆ..
ಸಾಂಜ್ ಸಖಾರೆ ಜಮುನಾ ಕಿನಾರೆ ರಾಧಾ ರಾಧಾ ಹಿ ಕಾನ ಪುಕಾರೆ... http://www.youtube.com/watch?v=VmC86-uX7JE
ರಾಧಾ, ಕೊಳಲು, ಕೃಷ್ಣರ -ಕತೆ, ಹಾಡು, ಯಾವ ರೀತಿಯಲ್ಲಿ ಹೇಳಿದರೂ ಇಷ್ಟವಾಗುವುದು. http://www.youtube.com/watch?v=kbpVwopnohE
ಪಾರ್ಥರೆ, ನೀವು ಕೃಷ್ಣನಲ್ಲಿ ರಾಧೆಗಿಂತ ಮಿಗಿಲಾಗಿ ತನ್ಮಯರಾಗಿದ್ದೀರಿ.

Submitted by partha1059 Sat, 10/12/2013 - 07:23

In reply to by ಗಣೇಶ

ಗಣೇಶರೆ ವಂದನೆಗಳು
ನಿಮ್ಮ ಲಿಂಕ್ ಕೇಳುವಾಗ , ಮತ್ಯಾವುದೋ ಹಾಡು ತಗುಲಿ ಹಾಕಿಕೊಂಡಿತು :-)http://www.youtube.com/watch?v=YlfY9ovlcx4