ಆಯುಧ ಪೂಜೆ, ವಿಜಯದಶಮಿ (2)

ಆಯುಧ ಪೂಜೆ, ವಿಜಯದಶಮಿ (2)

ನಾಡಹಬ್ಬ ನವರಾತ್ರಿಯ ಆಗಮನದೊಂದಿಗೆ ಸಾಲು ಸಾಲಾಗಿ, ಹಬ್ಬಗಳ ಸಾಲು ಒಂದರ ಹಿಂದೆ ಒಂದರಂತೆ ಬರುವ ಸಡಗರ. ಇನ್ನೇನು ನವರಾತ್ರಿಯ ಕೊನೆಯ ತಿರುವಿನಲ್ಲೆ 'ಹರಿ ರಾಯ ಹಾಜಿ (ನಮ್ಮ ಬಕ್ರೀದ್)' ಕಾಣಿಸುತ್ತಿದೆ. ಸಿಂಗಪುರದಲ್ಲಿ ಎಂದಿನಂತೆ ತಿಂಗಳಿಗೂ ಮುನ್ನದ ದೀಪಾವಳಿ ದೀಪಾಲಂಕಾರ ಆರಂಭವಾಗಿದೆ. ಆದರೂ ನವರಾತ್ರಿಯ ನಾಡಹಬ್ಬ ಒಂದು ರೀತಿಯ ವಿಶೇಷ ಪುಳಕದ್ದು. ಒಂದೆಡೆ, ತೀರಾ ಸಾಂಪ್ರದಾಯಿಕ ಹಾಗೂ ವೈಯಕ್ತಿಕ ಮಟ್ಟದ್ದೆನ್ನಬಹುದಾದ ಹಾಗೂ ಆಚರಣೆಯಲ್ಲಿಯು ಬಹುಶಃ ಪ್ರತಿಯೊಬ್ಬರ ಸ್ವಂತ ಸಂಪ್ರದಾಯ, ಆಚರಣೆಗಳ ಪ್ರಭಾವಕ್ಕೊಳಗಾದ 'ಮಹಾಲಯ ಅಮಾವಾಸೆ' ಯಿಂದ ಆರಂಭವಾದರೆ, ಮುಕ್ತಾಯದ ತುದಿಯಲ್ಲಿ ತೀರಾ ಸಮೂಹ ಪ್ರಜ್ಞೆಯಲ್ಲಿ ಆಚರಿಸಲ್ಪಡುವ ಆಯುಧ ಪೂಜೆ ಹಾಗು ವಿಜಯದಶಮಿ (ದಸರ). 

ಮಹಾಲಯ ಅಮಾವಾಸೆಯ ಹಿರಿಯರ ಪೂಜೆಯ ಆಚರಣೆ, ಮಾಡಬೇಕಾದ ಭಕ್ಷ್ಯ ಭೋಜ್ಯಗಳ ಪಟ್ಟಿ, ಮಾಡಿ ಎಡೆಯಿಟ್ಟು ಕಾಕರಾಜನ ಕೃಪದೃಷ್ಟಿಗೆ ಬೀಳಲೆಂದು ಕಾಯುವ ಹುನ್ನಾರ, ತಡವಾದರೆ ಅಪಚಾರವಾಯ್ತೆಂದು ಮತ್ತೆ ಮಂಗಳಾರತಿ ಎತ್ತಿ ಕೋಪಿಸದೆ ಬಂದು ಎಡೆಯೆತ್ತಲು ಬೇಡಿಕೊಳ್ಳುವ ಪೂಜೆ, ಆ ಹಬ್ಬದ ಸಂಧರ್ಭವಾಗಿ ಹಿರಿಯವನ ಮನೆಯಲೆಲ್ಲರೂ ಸಾಂಪ್ರದಾಯಿಕವಾಗಿ ಸೇರುತ್ತಿದ್ದ ಗಳಿಗೆ - ಎಲ್ಲವೂ ನೆನಪಾಗುತ್ತಿದೆ. ಎಷ್ಟು ಇನ್ನು ಹಾಗೆ ಉಳಿದು ಮುಂದುವರೆಯುತ್ತಿದೆಯೊ, ಉಳಿದಿದೆಯೊ, ಉಳಿಯಲಿದೆಯೊ ಎನ್ನುವ ಆತಂಕಕ್ಕೂ 'ಕಾಲಾಯ ತಸ್ಮೈ ನಮಃ' ಅನ್ನುತ್ತಲೆ ನವರಾತ್ರಿಯ ಮತ್ತೊಂದು ತುದಿಯಲಿರುವ ಆಯುಧ ಪೂಜೆಯ ಅಲಂಕರಣ, ಸಂಭ್ರಮ, ಆಯುಧಗಳ 'ಪೂಜೆ', ದಸರ ಮೆರವಣಿಗೆ ಉತ್ಸವ, ಅಚರಣೆ ಮತ್ತೆ ಈ ಸಿಂಗಾಪುರದ ಬೆಂಗಾಳಿಗಳು ಆಚರಿಸುವ ದುರ್ಗಾಪೂಜೆ, ಮತ್ತಿತರ ಭಾರತೀಯರ 'ದಾಂಡಿಯಾ' ನೃತ್ಯ - ಎಲ್ಲವೂ ಕಣ್ಮುಂದೆ ಬಂದು ನಿಲ್ಲುತ್ತಿದೆ. ಆಯುಧ ಪೂಜೆಯ ಮೈಸೂರಿನ ಬೀದಿಗಳಲ್ಲಿ ಅಕ್ಕಪಕ್ಕದ ಜನ ಊಟಕ್ಕೆಳೆದೊಯ್ಯುತ್ತಿದ್ದ ತುಣುಕುಗಳು ಬಂದು ನಿಲ್ಲುತ್ತಿವೆ. ಇವೆಲ್ಲಾ ಕಾಡಿದ್ದ ಹೊತ್ತಲ್ಲಿ ಬರೆದಿದ್ದ (ಒಂದು ವರ್ಷದಿಂದೀಚೆಗೆ) ನಾಲ್ಕಾರು ಕವನಗಳನ್ನು ಸಂಸ್ಕರಿಸಿ, ಒಗ್ಗೂಡಿಸಿ ಒಂದು ಜೋಡಿ ಕವನದ ರೂಪದಲ್ಲಿ ಪ್ರಕಟಿಸುತ್ತಿದ್ದೇನೆ - ಕೆಲವು ನೆನುಪಿನ ಪಲುಕಿಗೆ ಜತೆಯಾಗಲೆಂದು. ಹಾಗೆಯೆ, ಎಲ್ಲ ಸಂಪದಿಗರಿಗೂ, ನಾಡಿನ ಜನತೆಗೂ, ಸಕಲ ವಿಶ್ವ ಕನ್ನಡಿಗರಿಗೂ ನವರಾತ್ರಿ ನಾಡಹಬ್ಬದ, ಆಯುಧಪೂಜೆ, ವಿಜಯದಶಮಿಯ, ಹಾರ್ದಿಕ ಶುಭಾಕಾಮನೆಗಳನ್ನು ಕೋರುವ ರೂಪದಲ್ಲಿ. 

ಉದ್ದದ ದೃಷ್ಟಿಯಿಂದ ಎರಡೂ ಕವನವನ್ನು ಬೇರೆಯಾಗಿ ಪ್ರಕಟಿಸುತ್ತಿದ್ದೇನೆ, ಅದರೆ ಎರಡರಲ್ಲೂ ಒಂದೆ ವಿವರಣೆ ಉಳಿಸಿಕೊಂಡಿದ್ದೇನೆ. 

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು

ಆಯುಧ ಪೂಜೆ, ವಿಜಯದಶಮಿ (2)
_________________________________

ನವರಾತ್ರಿಯ ನವಮಿ, ಆಯುಧಪೂಜೆ ಸ್ವಾಮಿ
ನಾಳೆಗೆ ವಿಜಯದಶಮಿ, ದಸರೆಯ ದನಿ ಧಮನಿ!
ಅರಮನೆಗೆ ಅಲಂಕಾರ, ಹತ್ತು ದಿನವೂ ಸಡಗರ
ದಿನವೂ ಸಂಗೀತ ನಾಟ್ಯ, ದರ್ಬಾರದಲೆ ಕಲೆ ಸತ್ಯ!

ಅಖಾಡಕುಸ್ತಿ ಪಂಥ ಸ್ವಸ್ತಿ, ವಸ್ತುಪ್ರದರ್ಶನದ ಸ್ಪೂರ್ತಿ 
ದಸರ ಮೆರವಣಿಗೆಗೆ ಆಸ್ತಿ, ಬೆಲೆ ಕಟ್ಟಲ್ಹೇಗೆ ಸಂಸ್ಕೃತಿ!
ಆಯುಧಪೂಜೆ ಮಾನವಮಿ, ಕಲೆಹಾಕಿ ದೈನಂದಿನ ಶಮಿ
ಅನ್ನಕೊಡೊ ಆಯುಧ ಸ್ವಾಮಿ, ಅದ ಸಹಕರಿಸಿದ್ದೆಲ್ಲ ಮಾಮಿ!

ಕುಂಕುಮ ಅರಿಶಿನ ಭಂಡಾರ, ಹಚ್ಚಿ ಹೂವಿನಹಾರ ಸಿಂಗಾರ
ಬಣ್ಣ ಬಣ್ಣ ವಿನ್ಯಾಸದ ಅಗರ, ಗರಬಡಿಸುವ ಸರದಾರ ತರ!
ಬಸ್ಸು ಆಟೊ ಬೈಕು ಸೈಕಲ್ಲು, ಮಚ್ಚು ಚಾಕುಚೂರಿ ಒಳಕಲ್ಲು
ಗಣಕಯಂತ್ರದಿಂದಿಡಿದೆಲ್ಲೆಲು, ಪೆನ್ನು ಪುಸ್ತಕ ಆಯುಧ ಸಲ್ಲು!

ಪೂಜಿಸಿದ ಆಯುಧ ವಿಶ್ರಾಮ, ಅಲಂಕರಣ ವಾಹನ ಪ್ರಣಾಮ 
ಸೊಗದಿ ಬೀಗಿ ಬಿಟಿಎಸ್ಸುಬಸ್ಸು, ಓಡಾಟದ ಕಳೆಯೆ ಹುಮ್ಮಸ್ಸು!
ಕುರುಬಗೌಡರ ಸ್ನೇಹ ಗೆಳೆತನ, ಇದ್ದರೆಳೆದೊಯ್ಯುವರು ಆದಿನ  
ಕುರಿಕೋಳಿ ಖಂಡುಗದ ಸದನ, ತಿಂದು ತೇಗುವ ಜನಕೆ ಸುದಿನ!

ಜಯ ಪತಾಕೆಯಾರಿಸಿದ ದಿನ, ವಿಜಯದಶಮಿ ಸೊಂಪು ಮನ
ಗುಂಪುಗುಂಪಾಗಿ ಜನಗಣಮನ, ದಸರೊತ್ಸವನೋಡಲ್ಹೋಗೋಣ!
ಆನೆಯಂಬಾರಿ ಪಲ್ಲಕ್ಕಿ ಮೇಲೆ, ತಾಯಿ ಭುವನೇಶ್ವರಿಗೆ ಮಾಲೆ
ಸಾಲು ಸಾಲಾಗಿ ಜತೆ ಗೂಡಿದ, ಕಲಾಚಾರ ಸಂಸ್ಕೃತಿ ಸಮೃದ್ಧ!

--------------------------------------------------------------------------------------------------------------------
ನಾಗೇಶ ಮೈಸೂರು,  12.10.2013
--------------------------------------------------------------------------------------------------------------------
 

Comments

Submitted by partha1059 Sat, 10/12/2013 - 07:14

ಆಯುಧಪೂಜೆಯ ಪೂರ್ಣ ಪರಿಚಯ ಪದ್ಯದಲ್ಲಿಯೆ !
ಏನು ವಿಷ್ಯ ಕೊಟ್ಟರು ಪದ್ಯದಲ್ಲಿ ಬರೆಯುವಿರಿ!
ಮನೋರಮೆ ಇದ್ದಿದ್ದರೆ ತನ್ನ ಅಭಿಪ್ರಾಯ ಬದಲಿಸಿಕೊಳ್ಳುತ್ತಿದ್ದಳು :-)

Submitted by nageshamysore Sat, 10/12/2013 - 12:04

In reply to by partha1059

ಪಾರ್ಥಾ ಸಾರ್, ಮನೋರಮೆಯ ಕುರಿತ ನಿಮ್ಮ ಕಾಮೆಂಟ್ 'ಪಾಯಿಂಟ್ ಬ್ಲಾಂಕ್'. ನಾನೂ ಹುಡುಕುತ್ತಲೆ ಇದ್ದೇನೆ 'ಎಲ್ಲಿದ್ದಾಳಾ ಮನೋರಮೆ' ಎಂದು - ಸಿಕ್ಕಿದರೆ ಕೇಳಿಯೆಬಿಡೋಣ ಅಂದುಕೊಳ್ಳುತ್ತಲೆ. ಕಾದಿದ್ದಷ್ಟೆ ಲಾಭ - ಕೊನೆಗೆ "ಎಲ್ಹುಡುಕಲಿ ಮನೋರಮೆಗೆ.." ಎಂದು ಮತ್ತೊಂದು ಕವನ ಬರೆದು ಸುಮ್ಮನಾದೆ :-) (ಸರಿ ಸುಮಾರು ಒಂದು ವರ್ಷದ ಹಿಂದೆ ಬರೆದ ಕವನ - ೧೭.ಅಕ್ಟೋಬರ. ೨೦೧೨ ರಲ್ಲಿ)