೧೩೦. ಲಲಿತಾ ಸಹಸ್ರನಾಮ ೫೫೦ರಿಂದ ೫೫೬ನೇ ನಾಮಗಳ ವಿವರಣೆ

೧೩೦. ಲಲಿತಾ ಸಹಸ್ರನಾಮ ೫೫೦ರಿಂದ ೫೫೬ನೇ ನಾಮಗಳ ವಿವರಣೆ

                                                                                                               ಲಲಿತಾ ಸಹಸ್ರನಾಮ ೫೫೦-೫೫೬

Viyadādi-jagat-prasūḥ वियदादि-जगत्-प्रसूः (550)

೫೫೦. ವಿಯದಾದಿ-ಜಗತ್-ಪ್ರಸೂಃ

           ದೇವಿಯು ಪಂಚ ಮಹಾಭೂತಗಳಾದ ಆಕಾಶ, ವಾಯು ಮೊದಲಾದುವುಗಳ ಸೃಷ್ಟಿಕರ್ತಳು. ತೈತ್ತರೀಯ ಉಪನಿಷತ್ತಿನ ಪ್ರಕಾರ (೨.೧), "ಆ ಆತ್ಮನಿಂದ (ಬ್ರಹ್ಮದಿಂದ) ಆಕಾಶವು ಉತ್ಪನ್ನವಾಯಿತು, ಆಕಾಶದಿಂದ ವಾಯು, ವಾಯುವಿನಿಂದ ಅಗ್ನಿ, ಅಗ್ನಿಯಿಂದ ನೀರು ಮತ್ತು ನೀರಿನಿಂದ ಭೂಮಿಯ ಆವಿರ್ಭಾವವಾಯಿತು". ಮಹಾಪ್ರಳಯದ ಸಮಯದಲ್ಲಿ ಇದರ ವಿರುದ್ಧ ಕ್ರಿಯೆಯು ಉಂಟಾಗುತ್ತದೆ. ದೇವಿಯೇ ಆ ಆತ್ಮ ಅಥವಾ ಬ್ರಹ್ಮವೆಂದು ಇಲ್ಲಿ ಉಲ್ಲೇಖಿಸಲಾಗುತ್ತಿದೆ. ಈ ನಾಮವು ೩೯೭ನೇ ನಾಮವಾದ ಮೂಲಪ್ರಕೃತಿಯೊಂದಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ.

Sarva-vyādhi-praśamanī सर्व-व्याधि-प्रशमनी (551)

೫೫೧. ಸರ್ವ-ವ್ಯಾಧಿ-ಪ್ರಶಮನೀ

           ದೇವಿಯು ಎಲ್ಲಾ ವಿಧವಾದ ರೋಗಗಳನ್ನು ಗುಣಪಡಿಸುತ್ತಾಳೆ. ಸರ್ವವ್ಯಾಧಿಯೆಂದರೆ ಅದು ದೈಹಿಕ ಮತ್ತು ಮಾನಸಿಕ ಎರಡೂ ವಿಧವಾದ ರೋಗಗಳನ್ನು ಒಳಗೊಳ್ಳುತ್ತದೆ. ಅಂತರಂಗದಲ್ಲಿನ ಬ್ರಹ್ಮವನ್ನು ಸಾಕ್ಷಾತ್ಕರಿಸಿಕೊಳ್ಳಲು ಒಬ್ಬನಿಗೆ ಕೇವಲ ಪರಿಶುದ್ಧವಾದ ಮನಸ್ಸಿದ್ದರೆ ಸಾಲದು ಅದರೊಂದಿಗೆ ಅವನಿಗೆ ಆರೋಗ್ಯಪೂರ್ಣವಾದ ಶರೀರದ ಅವಶ್ಯಕತೆಯೂ ಇದೆ. ದೈವೀ ಶಕ್ತಿಯು ಅತ್ಯಂತ ಶಕ್ತಿಯುತವಾದುದರಿಂದ ಆ ಬ್ರಹ್ಮಾಂಡ ಶಕ್ತಿಯನ್ನು ತಡೆದುಕೊಳ್ಳಲು ದೇಹವು ಸಾಕಷ್ಟು ಬಲಿಷ್ಠವಾಗಿರಬೇಕು. ೮೭೬  ನಾಮವು ‘ನಿರಾಮಯಾ’ ಆಗಿದ್ದು ಅದು ದೇವಿಯು ರೋಗರಹಿತಳಾಗಿದ್ದಾಳೆ ಎನ್ನುತ್ತದೆ.

Sarva-mṛtyu-nivāriṇī सर्व-मृत्यु-निवारिणी (552)

೫೫೨. ಸರ್ವ-ಮೃತ್ಯು-ನಿವಾರಿಣೀ

          ಮೃತ್ಯು ಎಂದರೆ ಸಾವು. ಸಾವಿನಲ್ಲಿ ಹಲವಾರು ವಿಧಗಳಿವೆ ಉದಾಹರಣೆಗೆ ಆಯಸ್ಸು ಮುಗಿಯುವ ಮುನ್ನವೇ ಉಂಟಾಗುವ ಅಪಘಾತ, ರೋಗ ಅಥವಾ ಇತರೇ ಕಾರಣಗಳಿಂದ ಉಂಟಾಗುವ ಅಕಾಲ ಮರಣಗಳು.

          ಶ್ವೇತಾಶ್ವತರ ಉಪನಿಷತ್ತು (೪. ೧೫) ಈ ಮರಣಗಳ ಕುರಿತು ಹೀಗೆ ಹೇಳುತ್ತದೆ, "ನಿನಗೆ ಅವನೊಂದಿಗಿನ ನಿನ್ನ ಏಕತ್ವದ ಕುರಿತಾಗಿ ತಿಳಿದಿದ್ದರೆ, ನೀನು ಮೃತ್ಯುವಿನ ಭಯದಿಂದ ದೂರನಾಗುತ್ತೀಯ".

          ಕಠೋಪನಿಷತ್ತು (೧.೩.೧೫) ಸಹ ಇದೇ ಅಭಿಪ್ರಾಯವನ್ನು ದೃಢಪಡಿಸುತ್ತದೆ, "ಆ ಆತ್ಮವನ್ನು (ಬ್ರಹ್ಮವನ್ನು)  ತಿಳಿಯುವುದರಿಂದ ಒಬ್ಬನು ಮೃತ್ಯುಮುಖದಿಂದ ವಿಮುಕ್ತನಾಗುತ್ತಾನೆ."

          ಆತ್ಮಸಾಕ್ಷಾತ್ಕಾರದ ಉದ್ದೇಶವನ್ನು ಈ ನಾಮದಲ್ಲಿ ತಿಳಿಸಲಾಗಿದೆ. ಒಬ್ಬನು ಮೃತ್ಯುವಿಲ್ಲದವನಾದರೆ ಅದು ದೈವ ನಿಯಮಕ್ಕೆ ವಿರುದ್ಧವಾಗುತ್ತದೆ. ಇಲ್ಲಿ ಮೃತ್ಯು ನಿವಾರಣೆ ಎಂದರೆ ಪುನರ್ಜನ್ಮವನ್ನು ತಪ್ಪಿಸುವುದಾಗಿದೆ. ಜನನ ಮರಣಗಳು ಕೇವಲ ಸ್ಥೂಲ ಶರೀರಕ್ಕೆ ಮಾತ್ರವೇ ಉಂಟಾಗುತ್ತವೆ. ಯಾವಾಗ ಅಮೃತತ್ವವು (ನಿತ್ಯ ನಿರಂತರವಾದದ್ದು) ಉಲ್ಲೇಖಿಸಲ್ಪಡುತ್ತದೆಯೋ ಅದು ಯಾವಾಗಲೂ ಪರಮಾತ್ಮನನ್ನೇ ಸೂಚಿಸುತ್ತದೆ. ಆತ್ಮವು ಸ್ಥೂಲ ಶರೀರವನ್ನು ಧರಿಸಿ ತನ್ನ ಕರ್ಮಫಲಕ್ಕನುಗುಣವಾಗಿ ಆನಂದ ಅಥವಾ ದುಃಖಗಳನ್ನು ಹೊಂದುತ್ತದೆ. ಮರಣ ಕಾಲದಲ್ಲಿ ಆತ್ಮವು ಶರೀರವನ್ನು ತೊರೆದು ಮತ್ತೊಂದು ಶರೀರವನ್ನು ಸೇರುತ್ತದೆ ತನ್ನ ಕರ್ಮಶೇಷವು ಸಂಪೂರ್ಣವಾಗಿ ಬರಿದಾಗುವವರೆಗೆ. ಆದ್ದರಿಂದ ಮೃತ್ಯು ನಿವಾರಣೆಯೆಂದರೆ ಕರ್ಮಶೇಷವು ಕಳೆದ ನಂತರ ಆತ್ಮವು ಜನನ-ಮರಣಗಳ ಚಕ್ರದಿಂದ ಮುಕ್ತಿ ಹೊಂದಿ ಪರಬ್ರಹ್ಮದಲ್ಲಿ ಲೀನವಾಗುವುದು ಎಂದರ್ಥ. ಈ ನಾಮವು ದೇವಿಯು ಅಂತಹ ಆತ್ಮಗಳಿಗೆ ಮುಕ್ತಿಯನ್ನು ಕೊಡುವವಳಾಗಿದ್ದಾಳೆ ಎಂದು ಹೇಳುತ್ತದೆ.

         ಕರ್ಮ ಎನ್ನುವುದು ಒಂದು ವಾಹನಕ್ಕೆ ಇಂಧನವಿದ್ದಂತೆ. ಆ ವಾಹನವು ಅದರಲ್ಲಿರುವ ಇಂಧನವು ಬರಿದಾಗುವವರೆಗೆ ಚಲಿಸುತ್ತಿರುತ್ತದೆ. ಇಂಧನವು ಕರ್ಮಫಲವಾದರೆ, ದೇಹವು ವಾಹನವಾಗಿದೆ. ಒಂದು ವಾಹನವು ಪಯಣಿಸುವ ದೂರವು ಅದರಲ್ಲಿರುವ ಇಂಧನಕ್ಕೆ ನೇರವಾದ ಸಂಬಂಧವನ್ನು ಹೊಂದಿದೆ. ಇದೇ ವಿಧವಾಗಿ ಕರ್ಮಶೇಷವು ಒಂದು ಶರೀರದ ಅವಧಿಯನ್ನು ನಿರ್ಣಯಿಸುತ್ತದೆ.

Agra-gaṇyā अग्र-गण्या (553)

೫೫೩. ಅಗ್ರ-ಗಣ್ಯಾ

          ದೇವಿಯು ಸಮಸ್ತ ಸೃಷ್ಟಿಯಲ್ಲಿ ಪ್ರಥಮಳಾಗಿದ್ದಾಳೆ. ಶಿವನಿಗೆ ಜನ್ಮದಾತರಿಲ್ಲ. ಶಿವನು ಈ ವಿಶ್ವವನ್ನು ಸುಸ್ಥಿತಿಯಲ್ಲಿಡಲು ದೇವಿಯನ್ನು ಕ್ರಿಯಾಶೀಲ ಶಕ್ತಿಯ ಸ್ವರೂಪದಲ್ಲಿ ಸೃಷ್ಟಿ ಮಾಡಿದನು. ಈ ನಾಮವು ಸ್ವಯಂ ಆಕೆಯ ಸೃಷ್ಟಿಯ ಕುರಿತದ್ದಾಗಿದೆ. ಪ್ರಥಮ ಸೃಷ್ಟಿಯ ಸಮಯದಲ್ಲಿ ಶಿವ ಮತ್ತು ಶಕ್ತಿಯರ ಹೊರತಾಗಿ ಬೇರಾರೂ ಇರಲಿಲ್ಲ. ಮಹಾಪ್ರಳಯದ ಸಮಯದಲ್ಲಿ ಕೇವಲ ಶಿವ ಮತ್ತು ಶಕ್ತಿಯರು ಮಾತ್ರವೇ ಉಳಿಯುತ್ತಾರೆ. ಶಿವ ಮತ್ತು ಶಕ್ತಿಯರು ಒಂದು ಯುಗದ ಆರಂಭದಿಂದ ಮತ್ತೊಂದು ಯುಗದ ಆರಂಭದವರೆಗೆ ಇರುತ್ತಾರೆ (ಯುಗಗಳ ಬಗೆಗೆ ನಾಮ ೫೫೫ರಲ್ಲಿ ಚರ್ಚಿಸಲಾಗಿದೆ).

         ಶಿವಾನಂದ ಲಹರಿಯು (೧೦೦ನೇ ಸ್ತೋತ್ರ) ಸಹ ಇದೇ ಅರ್ಥವನ್ನು ಹೊರಹೊಮ್ಮಿಸುತ್ತದೆ, "ಬ್ರಹ್ಮ ಮೊದಲಾದ ಪೂಜನೀಯ ದೇವತೆಗಳಲ್ಲಿ ನೀನೇ ಅಗ್ರಗಣ್ಯನಾಗಿದ್ದೀಯ. ಅಗ್ರಗಣ್ಯರು ಯಾರು ಎನ್ನುವ ಪ್ರಶ್ನೆ ಬಂದಾಗ, ಇತರ ದೇವತೆಗಳು ಹೊಟ್ಟಿನಂತೆ ಹಾರಿಹೋದರೆ ನೀನೋಬ್ಬನೇ ಉತ್ತಮೋತ್ತಮ ಫಲವಾಗಿದ್ದೀಯ (ಗಟ್ಟಿಯಾದ ಕಾಳಾಗಿದ್ದೀಯ)".

Acintya-rūpā अचिन्त्य-रूपा (554)

೫೫೪. ಅಚಿಂತ್ಯ-ರೂಪಾ

          ದೇವಿಯು ಕಲ್ಪನೆಗೆ ನಿಲುಕದ ಅಥವಾ ಗ್ರಹಿಕೆಗೆ ನಿಲುಕದ ರೂಪದಲ್ಲಿದ್ದಾಳೆ; ಇದು ಬ್ರಹ್ಮದ ಲಕ್ಷಣವಾಗಿದೆ. ದೇವಿಯು ಮನಸ್ಸಿನ ಗ್ರಹಿಕೆಗೆ ನಿಲುಕದವಳು ಎಂದು ಹೇಳುವ ನಾಮ ೧೩೯ ಮತ್ತು ೪೧೫ನ್ನು ಇಲ್ಲಿ ಉಲ್ಲೇಖಿಸಬಹುದು. ಇದು ಬ್ರಹ್ಮದ ಅದ್ವಿತೀಯ ಗುಣವಾಗಿದ್ದು ಇದು ಬ್ರಹ್ಮವು ರೂಪರಹಿತವಾಗಿದ್ದು ಅದು ಸರ್ವವ್ಯಾಪಕವಾಗಿದೆ ಎನ್ನುವುದನ್ನು ದೃಢಪಡಿಸುತ್ತದೆ. ದೇವಿಯು ನಾಮ, ರೂಪ, ಗುಣಗಳಿಗೆ ಅತೀತಳಾಗಿದ್ದಾಳೆ. ಆತ್ಮವು ಪ್ರಕೃತಿ ಮತ್ತು ಅದರ ಧಾತುಗಳೊಂದಿಗೆ ಪ್ರತಿಕ್ರಿಯಿಸಿದಾಗ ಮಾತ್ರವೇ ರೂಪವು ಏರ್ಪಡುತ್ತದೆ. ದೇವಿಯು ಎಲ್ಲಾ ಆತ್ಮಗಳ ಮೂರ್ತರೂಪವಾಗಿದ್ದಾಳೆ ಮತ್ತು ಸ್ವಯಂ ಆಕೆಯೇ ಪ್ರಕೃತಿಯಾಗಿದ್ದಾಳೆ.

         ಆತ್ಮವನ್ನು ಪುರಷ ಎನ್ನಲಾಗುತ್ತದೆ ಮತ್ತು ಅದು ಪುಲ್ಲಿಂಗವಾಗಿರಬೇಕು. ಆದರೆ ಮತ್ತೊಂದು ಕಡೆ ಪ್ರಕೃತಿಯನ್ನು ಸ್ತ್ರೀಲಿಂಗವಾಗಿ ವರ್ಣಿಸಲಾಗುತ್ತದೆ. ಯಾವುದೇ ಸೃಷ್ಟಿಯು ಅನಾವರಣಗೊಳ್ಳಬೇಕಾದರೆ ಅದು ಕೇವಲ ಪುರುಷ ಮತ್ತು ಪ್ರಕೃತಿಯರು ಒಂದುಗೂಡಿದಾಗ ಮಾತ್ರವೇ ಸಾಧ್ಯ; ಇದು ಶಿವ-ಶಕ್ತಿಯರ ಐಕ್ಯರೂಪವಾದ ಲಿಂಗದ ಮಹತ್ವವನ್ನು ಒತ್ತಿ ಹೇಳುತ್ತವೆ. ಈ ಐಕ್ಯರೂಪದ ಲಿಂಗವು ಬಹಳಷ್ಟು ಶಕ್ತಿಯುತವಾದುದಷ್ಟೇ ಅಲ್ಲಾ ಅತ್ಯಂತ ಪವಿತ್ರವಾದುದೆಂದೂ ಸಹ ಪರಿಗಣಿಸಲ್ಪಟ್ಟಿದೆ.

Kali-kalmaṣa-nāśinī कलि-कल्मष-नाशिनी (555)

೫೫೫. ಕಲಿ-ಕಲ್ಮಷ-ನಾಶಿನೀ

           ದೇವಿಯು ಕಲಿಯುಗದಲ್ಲಿ ಉಂಟಾದ ಪಾಪಗಳನ್ನು ನಾಶಪಡಿಸುತ್ತಾಳೆ.

           ಮಾರ್ಕಂಡೇಯ ಪುರಾಣದಲ್ಲಿನ (ಅಧ್ಯಾಯ ೪೩, ಶ್ಲೋಕಗಳು ೨೬ರಿಂದ ೩೦) ಕೆಳಗಿನ ಪಂಕ್ತಿಯು ಪ್ರತಿಯೊಂದು ಯುಗಗಳ ಕಾಲಮಾನವನ್ನು ತಿಳಿಸುತ್ತದೆ. ಪ್ರತಿಯೊಂದು ಯುಗಾಂತ್ಯದಲ್ಲಿ ಸಂಪೂರ್ಣ ಲಯವುಂಟಾಗುತ್ತದೆ ಮತ್ತು ಮುಂದಿನ ಯುಗದ ಆದಿಯಲ್ಲಿ ಪುನಃಸೃಷ್ಟಿಯು ಉಂಟಾಗುವುದು ತಿಳಿಯುತ್ತದೆ. ೩,೬೦,೦೦೦ (ಮೂರು ಲಕ್ಷ ಅರವತ್ತು ಸಾವಿರ) ಮಾನವ ಸಂವತ್ಸರಗಳಲ್ಲಿ ಈಗ ನಾವು ಕಲಿಯುಗದ ೫೧೧೪ನೇ ಸಂವತ್ಸರದಲ್ಲಿ (ಇಂಗ್ಲೀಷ್ ಶಕೆ ೨೦೧೩-೧೪) ಇದ್ದೇವೆ.

           ೩೬೦ ಮಾನವ ಸಂವತ್ಸರಗಳು ಒಂದು ದೇವ ವರ್ಷಕ್ಕೆ ಸಮ. ೧೨,೦೦೦ ದೇವ ವರ್ಷಗಳು (೪೩,೨೦,೦೦೦ ಮಾನವ ವರ್ಷಗಳು) ನಾಲ್ಕು ಯುಗಗಳನ್ನು ಒಳಗೊಂಡಿದೆ; ಕೃತಯುಗ (೪,೦೦೦ ದೇವ ವರ್ಷಗಳು), ತ್ರೇತಾಯುಗ (೩,೦೦೦ ದೇವ ವರ್ಷಗಳು), ದ್ವಾಪರಯುಗ (೨೦೦೦ ದೇವ ವರ್ಷಗಳು) ಮತ್ತು ಕಲಿಯುಗ (೧೦೦೦ ದೇವ ವರ್ಷಗಳು). ಉಳಿದ ೨೦೦೦ ದೇವ ವರ್ಷಗಳು ಎರಡು ಯುಗಗಳ ಮಧ್ಯದ ಸಂಧಿಕಾಲವಾಗಿ ಲೆಕ್ಕಿಸಲಾಗುತ್ತದೆ. ಈ ನಾಲ್ಕು ಯುಗಗಳಲ್ಲಿ ಕಲಿಯುಗದಲ್ಲಿ ಹೆಚ್ಚು ಪಾಪಿಗಳಿರುತ್ತಾರೆ ಮತ್ತು ದೇವಿಯು ಕಲಿ ದೇವಿಯ ರೂಪದಲ್ಲಿ ಕಲಿಯುಗದಲ್ಲಿ ಮಾಡಿದ ಪಾಪಗಳನ್ನು ನಾಶಮಾಡುತ್ತಾಳೆ.

           ಪ್ರಪಂಚದ ವಯಸ್ಸನ್ನು ನೋಡಿದರೆ ದೀರ್ಘಕಾಲದ ಹಲವಾರು ದೈನಂದಿನ ವರ್ಷಗಳ ನಂತರ ಮೊದಲ ಮೂರು ಯುಗಗಳು ಈಗಾಗಲೇ ಗತಿಸಿವೆ, ಆದರೆ ಕಲಿಯುಗವು ೩೦೧೨ನೇ ಇಸವಿಯ ಫೆಬ್ರವರಿ ೧೭ ಮತ್ತು ೧೮ರ ಮಧ್ಯರಾತ್ರಿಯಿಂದ ಪ್ರಾರಂಭವಾಗಿ ಅದರಲ್ಲಿ ನಾವು ಜೀವಿಸುತ್ತಿದ್ದೇವೆ. ಪ್ರತಿಯೊಂದು ಯುಗದ ಅವಧಿಯು ಮಾನವರ ದೈಹಿಕ ಮತ್ತು ನೈತಿಕ ಅಧಃಪತನದ ದ್ಯೋತಕವಾಗಿ ಪ್ರತಿಯೊಂದು ಯುಗವು ಅವರೋಹಣದ ವಿಧದಲ್ಲಿ, ೧೭,೨೮,೦೦೦;  ೧೨,೯೬,೦೦೦; ೮,೬೪,೦೦೦ ಮತ್ತು ೪,೩೨,೦೦೦ ಮಾನವ ವರ್ಷಗಳ ಅನುಕ್ರಮದಲ್ಲಿ ಇದೆ. ಈ ನಾಲ್ಕು ಯುಗಗಳ ಒಟ್ಟು ವರ್ಷಗಳು ೪೩,೨೦,೦೦೦ ಮಾನವ ವರ್ಷಗಳು ಇದು ಒಂದು ಮಹಾಯುಗದ ಅವಧಿಯಾಗಿದೆ.

Kātyāyanī कात्यायनी (556)

೫೫೬. ಕಾತ್ಯಾಯನೀ

           ದೇವಿಯು ಎಲ್ಲಾ ದೇವ-ದೇವಿಯರ ಒಟ್ಟು ತೇಜಸ್ಸಿನ ಮೊತ್ತವಾಗಿದ್ದಾಳೆ. ವಾಮ ಪುರಾಣವು ಅತ್ಯಂತ ಶಕ್ತಿಯುತವಾದ ಪ್ರಕಾಶಮಾನವನ್ನು ಕಾತ್ಯಾಯನೀ ಎಂದು ಕರೆಯುತ್ತಾರೆ, ಎಂದು ಹೇಳುತ್ತದೆ. ಕಾತ್ಯಾಯನೀ ದೇವಿಯು ಆಜ್ಞಾ ಚಕ್ರದಲ್ಲಿರುವ ಓಡ್ಯಾಣ ಪೀಠದ (ನಾಮ ೩೭೯) ಅಧಿದೇವತೆಯಾಗಿದ್ದಾಳೆ. ಉಳಿದ ಪೀಠಗಳೆಂದರೆ ಮೂಲಾಧಾರ ಚಕ್ರದಲ್ಲಿರುವ ಗಿರಿ ಪೀಠ, ಅನಾಹತ ಚಕ್ರದಲ್ಲಿರುವ ಪೂರ್ಣಗಿರಿ ಪೀಠ ಮತ್ತು ವಿಶುದ್ಧಿ ಚಕ್ರದಲ್ಲಿರುವ ಜಾಲಂಧರ ಪೀಠ (ನಾಮ ೩೭೮).

         ಈ ನಾಮಕ್ಕೆ ಇನ್ನೊಂದು ವ್ಯಾಖ್ಯಾನವೂ ಇದೆ. ಕ (क) ಎಂದರೆ ಸೃಷ್ಟಿಕರ್ತನಾದ ಬ್ರಹ್ಮ, ಶಿರಸ್ಸು ಅಥವಾ ಕಲ್ಲು. ದೇವಿಯು ಈ ‘ಕ’(क)ದ ಮೇಲೆ ಆಸೀನಳಾಗಿರುತ್ತಾಳೆ (ಇಲ್ಲಿ ’ಕ’ ಎನ್ನುವುದನ್ನು ಪ್ರತ್ಯೇಕವಾಗಿ ಈ ವಿಶ್ವಕ್ಕೆ ಅನ್ವಯಿಸುತ್ತಾರೆ) ಆದ್ದರಿಂದ ಆಕೆಯು ಕಾತ್ಯಾಯನೀ ಎಂದು ಕರೆಯಲ್ಪಟ್ಟಿದ್ದಾಳೆ.

                                                                                                  ******

        ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM MEANING 550 - 556 http://www.manblunder.com/2010/01/lalitha-sahasranamam-meaning-550-555.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Sat, 10/12/2013 - 21:16

ಶ್ರೀಧರರೆ, ೧೩೦. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯಸಾರ ಪರಿಷ್ಕರಣೆಗೆ ಸಿದ್ದ :-)
ಲಲಿತಾ ಸಹಸ್ರನಾಮ ೫೫೦-೫೫೬
_________________________________
೫೫೦. ವಿಯದಾದಿ-ಜಗತ್-ಪ್ರಸೂಃ 
(ಆವೃತ್ತಿ-01)
ಮಹಾಪ್ರಳಯದಲಂತೆ ಸಕಲ ಸರ್ವವೂ ವಿನಾಶ
ನವಸೃಷ್ಟಿಯ ಉತ್ಪನ್ನ ಲಲಿತಾ ಬ್ರಹ್ಮದಿಂದಾಕಾಶ
ಆಗಸದಿಂದ ವಾಯು, ಪಸರಿಸಿರಲಗ್ನಿಯ ಸಮೂಹ
ನೀರಾಗಿ ಇಳೆಯಾಗಿಸಿ ವಿಯದಾದಿ-ಜಗತ್-ಪ್ರಸೂಃ ||
(ಆವೃತ್ತಿ-02)
ಪಂಚ ಮಹಾಭೂತಗಳ, ಸೃಷ್ಟಿಕರ್ತಳು ದೇವಿ ಲಲಿತ
ಬ್ರಹ್ಮರೂಪಿಣಿ ಆತ್ಮನಿಂದುತ್ಪನ್ನ ಆಕಾಶ ಮೊದಲಾಯ್ತ
ಆಕಾಶಜನ್ಯ ವಾಯು, ವಾಯುಜನ್ಯ ಅಗ್ನಿ, ತಂಪಿಗೆ ಸ್ವತಃ
ಅಗ್ನಿಜನ್ಯ-ಜಲದಿಂದಾ ಇಳೆ ವಿಯದಾದಿ-ಜಗತ್-ಪ್ರಸೂಃ ||
೫೫೧. ಸರ್ವ-ವ್ಯಾಧಿ-ಪ್ರಶಮನೀ 
ಬ್ರಹ್ಮ ಸಾಕ್ಷಾತ್ಕಾರಕೆ ಬೇಕು, ಪರಿಶುದ್ಧ ಮನ ಪೌಷ್ಟಿಕ ಶರೀರ
ಸಾಮಾನ್ಯವೆ ದೈವೀ ಬ್ರಹ್ಮಾಂಡ ಶಕ್ತಿ, ಭರಿಸಲು ಬಲಿಷ್ಠ ಪೂರ
ಸಾಧಕನ ಸರ್ವವಿಧ ರುಜಾಪಹರಣ, ಗುಣಕರಿ ಸಂಮೋಹನಿ
ನಿವಾರಿಸುತೆಲ್ಲ ರೋಗದಡೆತಡೆದೇವಿ, ಸರ್ವ-ವ್ಯಾಧಿ-ಪ್ರಶಮನೀ ||
೫೫೨. ಸರ್ವ-ಮೃತ್ಯು-ನಿವಾರಿಣೀ 
ಮೃತ್ಯುವಲು ಹಲವು ಹತ್ತು, ಕಾಲ-ಅಕಾಲದ ತುರ್ತು
ಅದ್ವೈತ ಬ್ರಹ್ಮದೇಕತ್ವ ಅರಿತವಗೆ, ಸಾವಲಿಲ್ಲ ಒಗಟು
ಸ್ಥೂಲಶರೀರ ಕರ್ಮಫಲ ಪರಿವಾರ, ಆತ್ಮಕಾಗಿ ದೋಣೀ
ಪುನರ್ಜನ್ಮ ಚಕ್ರ ವಿಮುಕ್ತಿಸೊ ಸರ್ವ-ಮೃತ್ಯು-ನಿವಾರಿಣೀ ||
ದೇಹವಾಹನಕೆ ಇಂಧನವಾಗಿ ಕರ್ಮಫಲ ಓಡಿಸೊ ದೂರ
ಕರ್ಮಶೇಷದಿಂಧನ ಮುಗಿವಾ ತನಕ ಚಲಿಸಿ ಆತ್ಮಸವಾರ
ಜಿಗಿತ ವಾಹನವಾಹನ ಜಿಗಿದೆ ಕರ್ಮಶೇಷ ಶೂನ್ಯವಾಗುತ
ಪರಬ್ರಹ್ಮ ಲೀನವಾಗೊ ಮುಕ್ತಿ, ಕರುಣಿಸೊ ಬ್ರಹ್ಮವೆ ಲಲಿತ ||
೫೫೩. ಅಗ್ರ-ಗಣ್ಯಾ 
ಹಾರುವ ಜೊಳ್ಳಲ್ಲ ಗಟ್ಟಿ ಕಾಳಂತೆ, ಯುಗಸಂಧಿಯಲಿ ಬರಿ ಶಿವಶಕ್ತಿ
ಯುಗದಾರಂಭದಿಂದಂತಿಮ ಮರುಯುಗದಾರಂಭದಲೂ ಉಪಸ್ಥಿತಿ
ಶಿವಸ್ವಯಂಭು ವಿಶ್ವ ಸುಸ್ಥಿತಿಗೆ, ಕ್ರಿಯಾಶೀಲತೆಶಕ್ತಿ ಸೃಷ್ಟಿಸಿ ದೇವಿಯ
ಮಹಾಪ್ರಳಯದಿಂದನುಗ್ರಹದಲು ಸಾಕ್ಷೀಭೂತಳಾಗಿಹ ಅಗ್ರ-ಗಣ್ಯಾ ||
೫೫೪. ಅಚಿಂತ್ಯ-ರೂಪಾ 
ಗ್ರಹಿಕೆ, ಕಲ್ಪನೆ, ಎಣಿಕೆಗೆ ನಿಲುಕದ ರೂಪವೆ ದೇವಿ ಲಲಿತಾ ಬ್ರಹ್ಮ
ರೂಪರಹಿತ ಸರ್ವವ್ಯಾಪಿ ನಾಮ ರೂಪ ಗುಣಗಳಿಗತೀತದ ಪರಮ
ಪ್ರಕೃತಿ ಧಾತು ಪ್ರಕ್ರಿಯೆಗಷ್ಟೆ ರೂಪ, ಪ್ರಕೃತಿ ಆತ್ಮದ ಮೂರ್ತರೂಪ
ಪುರುಷಾತ್ಮ ಸ್ತ್ರೀ-ಪ್ರಕೃತಿ ಐಕ್ಯತೆ, ಲಿಂಗಾಕಾರ ಶಕ್ತಿ ಅಚಿಂತ್ಯ-ರೂಪಾ ||
೫೫೫. ಕಲಿ-ಕಲ್ಮಷ-ನಾಶಿನೀ 
ಚತುರ್ಯುಗ ೪೩,೨೦,೦೦೦ ಮಾನವ ವರ್ಷ ಮಹಾಯುಗದ ಅವಧಿ
೩೬೦ ಮಾನವ ಸಂವತ್ಸರ ಕೂಡೆ ದೇವ ವರ್ಷವೊಂದಾಗುವಾ ಗಾರುಡಿ
೧೨,೦೦೦ ದೇವವರ್ಷ ನಾಲ್ಕು ಯುಗದೆ, ಕೃತಯುಗದೆ ೪,೦೦೦ ಹಿಡಿ
೩,೦೦೦ ತೇತ್ರಾ, ೨೦೦೦ ದ್ವಾಪರ, ೧೦೦೦ ಕಲಿಯುಗವಾಗಿಹ ಕೈಪಿಡಿ ||
ಯುಗಗಳ ನಡುವಿನ ಸಂಧಿಕಾಲ ೨೦೦೦ ದೇವ ವರ್ಷಗಳ ಲೆಕ್ಕಾಚಾರ
ಆದರೂ ಕಲಿಯುಗದಿ ಹೆಚ್ಚಿದ ಪಾಪಿಗಳ, ಹಣಿಯೆ ಕಲಿದೇವಿ ಅವತಾರ
ಕಲಿಯುಗದಿ ಮಾಡಿದ ಪಾಪನಾಶಕೆ, ದೇವಿ ಹಡೆದ ಕಾಲಮಾನದ ದನಿ
೫೧೧೪ನೇ ಕಲಿಯುಗ ಸಂವತ್ಸರದಲಿಹ ಪ್ರಸ್ತುತ, ಕಲಿ-ಕಲ್ಮಷ-ನಾಶಿನೀ ||
ಪ್ರಪಂಚದ ವಯಸಲಿ ಗತಿಸಿದ ಮೂರು ಯುಗ ನಂತರದೀ ಕಲಿಯುಗ
ದೈಹಿಕ ನೈತಿಕ ಅಧಃಪತನ ದ್ಯೋತಕ, ಅವರೋಹಣದಾ ಪ್ರತಿಯುಗ
೪೩,೨೦,೦೦೦ ವರ್ಷದೆ ನಾಲ್ಕು-ಮೂರು-ಎರಡು-ಒಂದರ ಅನುಪಾತ
ಪ್ರತಿ ಯುಗಾಂತ್ಯದಿ ಲಯ, ಯುಗಾದಿಗೆ ಪುನಃಸೃಷ್ಟಿಯ ಅನುರಣಿಸುತ ||
೫೫೬. ಕಾತ್ಯಾಯನೀ 
ಆಜ್ಞಾಚಕ್ರದ ಓಡ್ಯಾಣ ಪೀಠದಧಿದೇವತೆ ಕಾತ್ಯಾಯನೀ ದೇವಿ
ಅತಿ ಪ್ರಖರಶಕ್ತಿಯ ಪ್ರಕಾಶಮಾನ, 'ಕ' ಮೇಲಾಸೀನತೆ ಛವಿ
ಬ್ರಹ್ಮ-ಶಿರಸ್ಸು-ಶಿಲೆ ವಿಶ್ವಕನ್ವಯ, ಕಾತ್ಯಾಯನೀ ನಾಮಧೇಯ
ದೇವ-ದೇವಿಯರೆಲ್ಲ ತೇಜಸ್ಸ ಮೊತ್ತ, ಲಲಿತಾಕಾಂತಿ ಅಕ್ಷಯ ||
- ಧನ್ಯವಾದಗಳೊಂದಿಗೆ,
  ನಾಗೇಶ ಮೈಸೂರು