ಲೂಸಿಯಾ ನೀಡಿದ ಕನಸಿನ ಅಮಲು...!

ಲೂಸಿಯಾ ನೀಡಿದ ಕನಸಿನ ಅಮಲು...!

ಕನಸಿನೊಳಗೆ ನಾನೋ. ನನ್ನೊಳಗೆ ಕನಸೋ. ಬದುಕು ಶುರುವಾಗೋದು ನಿಜವಾಗ್ಲೂ, ನಿಜದಲ್ಲಿ ತೆರೆದುಕೊಳ್ಳುವುದು ಕನಸು. ಈ ದ್ವಂದ್ವಗಳಿಲ್ಲದೆ ಸಾಗೋ ಸಿನಿಮಾ ಲೂಸಿಯಾ. ಚಿತ್ರದ ಓಟ ಶೃತಿ ಹಿಡಿದಂತೆ, ಏನೋ ಒಂದು ಸಣ್ಣ ಅಮಲು. ಆ ಅಮಲಿನಲ್ಲಿ ತೇಲೋ ನಿಕ್ಕಿ...ಆತನ ಬದುಕೋ ವಿಚಿತ್ರ. ಟಾಕೀಸ್ ನಲ್ಲಿ ಬ್ಯಾಟ್ರಿ ಬಿಡೋದೇ ಈತನ ಕಾಯಕ. ಕನಸ್ಸು ದೊಡ್ಡದಲ್ಲ. ಮನಸ್ಸು ಚಿಕ್ಕದಲ್ಲ. ರೂಮು ಅಂತ ದೊಡ್ಡದೂ ಅಲ್ಲ. ಐದು ಜನರ ಮಧ್ಯೆ ಈತನದೂ ಒಂದು ಬದುಕು. ರಾತ್ರಿ ನಿದ್ದೆ ಬರೋದಿಲ್ಲ. ಹಗಲು ತೆಲೆ ನೋವು ಹೋಗೋದಿಲ್ಲ. ಬದುಕಿಗೊಂದು ಗುರಿನೇ ಇಲ್ಲ. ಇದ್ದರೂ ಅದು ಶಂಕರಣ್ಣನ ಟಾಕೀಸ್  ನ್ಯಾಗೆ ಬ್ಯಾಟ್ರಿ ಬಿಡೋದೆ. ಬ್ಯಾಟ್ರಿ ಬಿಡೋ ನಿಕ್ಕಿಗೆ ಒಮ್ಮೆ ಲೂಸಿಯಾ ಸಿಗುತ್ತಾಳೆ.. ಅಲ್ಲ...ಸಿಗುತ್ತದೆ. ಅಂದ್ರೆ, ನಿದ್ರೆ ಬಾರದೇ ಇರೋ ಕಂಗಳಿಗೆ ನಿದ್ರೆ ತರೋ ಕನಸಿನ ರಾಣಿ ಈ ಲೂಸಿಯಾ. ದಿನವೂ ತೆಗೆದುಕೊಂಡು ಕನಸ್ಸಿಗೆ ಜಾರೋದೇ ನಿಕ್ಕಿ ಕೆಲಸ. ಆ ಕನಸಲ್ಲಿ ಈತನೇ ಸಿನಿಮಾ ತಾರೆ. ಹೆಸ್ರು ನಿಕಿಲ್...ದೊಡ್ಡ..ದೊಡ್ಡ ಸಿನಿಮಾಗಳ ಹೀರೋ..

ಕನಸ್ಸಿನ ಬದುಕಿಗೂ..ನಿಜವಾದ ಜೀವನಕ್ಕೂ ಎಲ್ಲೂ ತಾಳ ತಪ್ಪದಂತೆ ಸಾಗೋ ನಿಕ್ಕಿ ಬದುಕಿನಲ್ಲಿ  ಶ್ವೇತಾ ಪ್ರವೇಶವಾಗುತ್ತದೆ. ಕನಸಲ್ಲೂ ನೀನೇ..ಮನಸಲ್ಲೂ ನೀನೆ. ಲೂಸಿಯಾ ತೆಗೆದುಕೊಂಡಾಗಲೂ ನೀನೆ, ಅನ್ನೋ ಮಟ್ಟಕ್ಕೆ ಶ್ವೇತಾ ಶಾಶ್ವತವಾಗಿ ಉಳಿದು ಬಿಡ್ತಾಳೆ ನಿಕ್ಕಿ ಬದುಕಿನಲ್ಲಿ. ಈ ಮಧ್ಯೆ ಲೂಸಿಯಾ ತೆಗೆದುಕೊಂಡು ಹಾಳಾಗೋ ಹಂತಕ್ಕೆ ಬಂದು ಬಿಡೋ ನಿಕ್ಕಿ ಅಸಲಿಗೆ ಏನಾಗಿರುತ್ತಾನೆ. ಎಂಬುವ ಪ್ರಶ್ನೆಗಳು ಪ್ರೇಕ್ಷಕರನ್ನ ಕಾಡುತ್ತಲೇ ಹೋಗುತ್ತವೆ. ತಮ್ಮೊಳಗೆ ಪ್ರಶ್ನೆ ಮಾಡಿಕೊಂಡು ಹೇಳು ಶಿವಾ ಯಾಕಿಂಗಾದೆ ಅನ್ನೋ ಹಂತಕ್ಕೂ ತಲುಪುವಂತೆ ಮಾಡುತ್ತದೆ. ಕಾರಣ, ಇಲ್ಲಿ ನಿಕ್ಕಿಯ ಎರಡು ಬದುಕಿನ ಚಿತ್ರಣವಿದೆ. ಅದರಲ್ಲಿ ಒಂದು ಬ್ಯಾಟ್ರಿ ಬಿಡೋ ಸಾಮಾನ್ಯ ವ್ಯಕ್ತಿಯ ಜೀವನ. ಇನ್ನೊಂದು ಕಡೆ ಸಿನಿಮಾ ತಾರೆಯಾಗಿ ಮಿಂಚೋ ಶ್ರೀಮಂತ ಬದುಕು. ಈ ಎರಡೂ ಜೀವನದಲ್ಲಿ ಶಂಕರಣ್ಣನ ಅಸ್ಥಿತ್ವ ಖಾಯಂ ಆಗಿದೆ..

ಇದರಿಂದ ಪ್ರೇಕ್ಷಕರಿಗೆ ಇದು ಕನಸ್ಸಾ..ನನಸಾ ಎಂಬ ಗೊಂದಲ ಕಂಡಿತ ಹುಟ್ಟುತ್ತದೆ. ಆದ್ರೆ, ಇದು ತುಂಬಾ ಸಹನೆಯಿಂದ ನೋಡಲೇಬೇಕಾದ ಕನ್ನಡದ ಅದ್ಭುತ ಪ್ರಯೋಗದ ಸಿನಿಮಾ. ಪವನ್ ಕುಮಾರ್ ನಿದೇರ್ಶನದ ವಿಶಿಷ್ಟ ಕಲ್ಪನೆಯ ಚಿತ್ರ. ಕನ್ನಡದಲ್ಲಿ ಇಲ್ಲಿವರೆಗೂ ನಿರ್ಮಾಣಗೊಳ್ಳದೇ ಇರೋ ವಿರಳವಾದ ಸಿನಿಮಾ. ಇಷ್ಟೆಲ್ಲ ಹೊಗಳಿಕೆ ಕೊಡಲು ಕಾರಣವೂ ಇದೆ. ಇಲ್ಲಿವರೆಗೆ ನಿಕ್ಕಿ ಬದುಕಿನ ಕನಸ್ಸಿನ ಚಿತ್ರಣ ಓದಿದಿರಲ್ಲ. ಅಲ್ಲಿ ಇನ್ನೊಂದು ಸತ್ಯವೂ ಇದೆ. ಅದನ್ನ ಹೇಳ್ತಿನಿ ಓದಿ.

ನಿಕ್ಕಿ ಒಬ್ಬ ಸ್ಟಾರ್ :   ನಿಕ್ಕಿ ರಿಯಲ್  ಲೈಫ್ ನಲ್ಲಿ ಒಬ್ಬ ಸ್ಟಾರ್. ಈತನ ಬದುಕಿನಲ್ಲಿ ಎಲ್ಲವೂ ಇದೆ. ಆದ್ರೆ, ರೋಡ್ ಸೈಡ್ ಬದುಕು ಹೇಗಿದೆ ಎಂಬುದರ ಕಲ್ಪನೆ ಒಂಚೂರು ಇಲ್ಲ. ಸೆಕ್ಯೂರಿಟಿ ಗಾರ್ಡ್ ಮಾಡುವ ಕೆಲಸ ಹೇಗಿರುತ್ತದೆಂಬ ಕುತೂಹಲ ಈ ತಾರೆಗೆ. ಕಾಯಿಪಲ್ಲೆ ಮಾರೋ ವ್ಯಕ್ತಿಯ ಹಾಗೆ ಇದ್ದರೇ ಹೇಗೆ ಎಂಬು ವಿಚತ್ರ ಆಸೆ. ಸಿನಿಮಾ ತಾರೆಯಾಗಿದ್ದರೂ..ಬ್ಯಾಟರಿ ಬಿಡೋ ಸಾಮಾನ್ಯ ವ್ಯಕ್ತಿಯ ಜೀವನದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ. ಇವೆಲ್ಲ ಸೇರಿಕೊಂಡಿರೋ ಈ ದೊಡ್ಡ ತಾರೆಗೆ ಡ್ರಕ್ಸ್ ತೆಗೆದುಕೊಳ್ಳುವ ಚಟ. ಆ ಒಂದೇ ಒಂದು ಚಟ ಈತ ಎಂದೂ ಮಾಡಲು ಆಗಿದ್ದರೋ ಬ್ಯಾಟ್ರಿ ಬಿಡೋವವನ ಜೀವನಕ್ಕೆ ಕರೆದುಕೊಂಡು ಹೋಗುವ ಕನಸ್ಸಿಗೆ ದಾರಿ ಮಾಡಿಕೊಡ್ತದೆ. ಪಿಜ್ಜಾ ಅಂಗಡಿಯಲ್ಲಿ ಆರ್ಡರ್ ತೆಗೆದುಕೊಳ್ಳುವ ಶ್ವೇತಾ ಎಂಬ ಹುಡುಗಿಯನ್ನ ಲವ್ ಮಾಡೋ ಹಾಗೆ ಮಾಡುತ್ತದೆ.ಕನ್ನಡ ಸಿನಿಮಾಗಳನ್ನಷ್ಟೇ ಹಾಕುವ ಏಕೈಕ ಶಂಕರಣ್ಣ ಥಿಯೇಟರ್ ನಲ್ಲಿ ಬ್ಯಾಟರಿ ಬಿಡೋವವನ ಕೆಲಸ ಮಾಡುವಂತೆ ಮಾಡುತ್ತದೆ. ಆದ್ರೆ, ಲೂಸಿಯಾ ಚಿತ್ರ ಓಪನ್ ಆಗೋದೇ ಈ ಕನಸ್ಸಿನಿಂದ. ಸತ್ಯದ ಮೇಲೆ ಹೊಡೆಯೋ ಹಾಗಿರೋ ಈ ಕನಸ್ಸು ಪ್ರೇಕ್ಷಕರನ್ನ ತನ್ನತ್ತ ಸಳೆದಿಡುತ್ತದೆ. ಕೊನೆವರೆಗೂ ಇದು ನಿಕ್ಕಿ ಕಾಣುವ ಕನಸ್ಸು ಎಂಬ ಸತ್ಯವನ್ನ ಬಚ್ಚಿಟ್ಟೇ ಕ್ಲೈಮ್ಯಾಕ್ಸ್ ಗೆ ಕರೆದುಕೊಂಡು ಹೋಗುತ್ತದೆ. ಅದುವೇ ಈ ಚಿತ್ರದ ಸ್ಪೆಷ್ಯಾಲಿಟಿ...

ಬುದ್ದಿವಂತ ಪವನ್; ನಿರ್ದೇಶಕ ಪವನ್ ಕುಮಾರ್ ಬುದ್ದಿವಂತಿಕೆಯನ್ನ ಮೆಚ್ಚಲೇಬೇಕು. ಕನಸ್ಸಿನ ಹಿಂದೆ ಬೆನ್ನತ್ತಿ. ಅದರಲ್ಲೂ ಒಂದು ಸಿನಿಮಾ ಮಾಡಬಹುದೆಂಬ ಕಲ್ಪನೆಯನ್ನ ತೆರೆ ಮೇಲೆ ತಿಳಿಸೋದು ಇದೇ ನೋಡಿ. ಇದು ತುಂಬಾ ಸವಾಲಿನ ಕೆಲಸ. ಕತೆ ಒಲಿದರೂ ಅದನ್ನ ತೆರೆಗೆ ತರೋದು ಇನ್ನೂ ಕಷ್ಟ. ಇನ್ನು ಕಮರ್ಷಿಲ್ ನಿರ್ಮಾಪಕರಿಗೆ ಲೂಸಿಯಾ ಕತೆಯನ್ನ ನಿರೂಪಿಸುವುದಂತೂ ಆಗೋದೇಯಿಲ್ಲ.ಆದ್ರೂ, ಸಮಾನ ಮನಸ್ಕ ಯುವಕರನ್ನ ಇಂಟರ್ ನೆಟ್ ನಲ್ಲಿಯೇ ಕಲೆಹಾಕಿ ಅವರನ್ನೇ ನಿರ್ಮಾಪಕನ್ನಾಗಿಸಿಕೊಂಡು, ಲೂಸಿಯಾ ಮಾಡಿದ ಪವನ್, ಹಲವು ಫಿಲ್ಮ ಫೆಸ್ಟಿವಲ್ ನಲ್ಲಿ ಚಿತ್ರ ಪ್ರದರ್ಶಿಸಿದ್ದಾರೆ. ಬಾಲಿವುಡ್ ನ ಇರ್ಫಾನ್ ಖಾನ್ ರಂತಹ ನಟರೂ ಚಿತ್ರ ವೀಕ್ಷಿಸಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕನ್ನಡವರಿಗೆ ಯಾಕೋ ಈ ಲೂಸಿಯಾ ಅಷ್ಟೇನೂ ಇಷ್ಟವಾಗಲಿಲ್ಲ. ಕ್ಲಾಸ್ ಆಡಿಯೆನ್ಸ್ ಗಳಿಗೆ ಇಷ್ಟವಾಗುವ ಈ ಚಿತ್ರ ನೋಡಿದ ಸಾಮಾನ್ಯ ಜನಕ್ಕೆ, ಪೂರ್ಣ ಚಂದ್ರ ತೇಜಸ್ವಿ ಸಂಗೀತದ ಎಲ್ಲ ಹಾಡುಗಳು ಹೃದಯ ಕದ್ದಿವೆ. ಆದ್ರೆ, ಇದು ಪ್ರತಿ ಕನ್ನಡಿಗನೂ ನೋಡಲೇಬೇಕಾದ ಸಿನಿಮಾ. ಒಮ್ಮೆ ಹೋಗಿ. ಸಹನೆಯಿಂದ ನೋಡಿ. ಕನ್ನಡಿಗರ ಲೂಸಿಯಾ ಪ್ರಯೋಗ ಕಂಡಿತ ಕಾಡುತ್ತದೆ. ನಿಮ್ಮನ್ನೂ ಒಮ್ಮೆ ಕನಸ್ಸಿನ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ವಿದೌತ ಡ್ರಗ್ ಪಿಲ್ಸ್ ...

-ರೇವನ್ ಪಿ.ಜೇವೂರ್