೧೩೧. ಲಲಿತಾ ಸಹಸ್ರನಾಮ ೫೫೭ರಿಂದ ೫೬೨ನೇ ನಾಮಗಳ ವಿವರಣೆ

೧೩೧. ಲಲಿತಾ ಸಹಸ್ರನಾಮ ೫೫೭ರಿಂದ ೫೬೨ನೇ ನಾಮಗಳ ವಿವರಣೆ

                                                                                                     ಲಲಿತಾ ಸಹಸ್ರನಾಮ ೫೫೭ - ೫೬೨

Kālahantrī कालहन्त्री (557)

೫೫೭. ಕಾಲಹಂತ್ರೀ

          ಕಾಲ ಎಂದರೆ ಮರಣ. ದೇವಿಯು ಮರಣದ ವಿನಾಶಕಳಾಗಿದ್ದಾಳೆ. ಯಾರು ಆತ್ಮಸಾಕ್ಷಾತ್ಕಾರವನ್ನು ಹೊಂದಿದ್ದಾರೆಯೋ ಅವರಿಗೆ ದೇವಿಯು ಮರಣವನ್ನು ನಾಶವಾಗಿಸುತ್ತಾಳೆ. ಶ್ವೇತಾಶ್ವತರ ಉಪನಿಷತ್ತು, ’ಕಾಲಕರಃ’ ಅಂದರೆ ಬ್ರಹ್ಮವು ಕಾಲವನ್ನು ಉಂಟುಮಾಡುತ್ತದೆ, ಎಂದು ಹೇಳುತ್ತದೆ. ಯಾವಾಗ ಆತ್ಮವು ಕರ್ಮ ನಿಯಮ ಅಥವಾ ದೈವ ನಿಯಮವು ತನಗೆ ನಿಗದಿ ಪಡಿಸಿದ ಸಮಯವನ್ನು ಅಧಿಗಮಿಸುವ ಸನಿಹಕ್ಕೆ ಬರುತ್ತದೆಯೋ ಆಗ ಮರಣವು ಸಂಭವಿಸುತ್ತದೆ. ಹೆಚ್ಚಿನ ವಿವರಗಳಿಗೆ ೫೫೨ನೇ ನಾಮವಾದ ಸರ್ವ-ಮೃತ್ಯು-ನಿವಾರಿಣಿಯ ಚರ್ಚೆಯನ್ನು ನೋಡಿ.

          ಈ ಸಹಸ್ರನಾಮದ ವೈಶಿಷ್ಠ್ಯವೇನೆಂದರೆ ಇದರಲ್ಲಿ ಯಾವುದೇ ನಾಮವು ಪುನಾರವೃತಗೊಂಡಿಲ್ಲ. ಆದರೆ ಒಂದೇ ಅರ್ಥವನ್ನು ಕೊಡುವ ಒಂದಕ್ಕಿಂತ ಹೆಚ್ಚಿನ ನಾಮಗಳಿರುವ ಪ್ರಸಂಗಗಳಿವೆ. ಇದರ ಉದ್ದೇಶವೇನೆಂದರೆ ಬಹು ಮುಖ್ಯವೆಂದು ಪರಿಗಣಿತವಾಗಿರುವ ಕೆಲವೊಂದು ಚಟುವಟಿಕೆಗಳ ಬಗೆಗೆ ಒತ್ತು ಕೊಟ್ಟು ಹೇಳುವುದಾಗಿದೆ. ಉದಾಹರಣೆಗೆ ೫೫೨ನೇ ನಾಮದಿಂದ ೫೫೭ನೇ ನಾಮದವರೆಗೆ ದೇವಿಯು ಮೃತ್ಯುವನ್ನು ನಾಶಪಡಿಸುತ್ತಾಳೆ ಎನ್ನುವುದರ ಬಗ್ಗೆ ಹೇಳಲಾಗಿದೆ. ಈ ಎಲ್ಲಾ ನಾಮಗಳ ಗೂಡಾರ್ಥವು ಆತ್ಮಸಾಕ್ಷಾತ್ಕಾರವಾಗಿದೆ. ಯಾರು ದೇವಿಯನ್ನು ಅಂತರಂಗದೊಳಗೆ ಅರಿಯುತ್ತಾರೆಯೋ ಅವರು ಮರಣವನ್ನು ಅಧಿಗಮಿಸುತ್ತಾರೆ ಎಂದರೆ ಅವರು ಮತ್ತೆ ಹುಟ್ಟಿ ಬರುವುದಿಲ್ಲ. ಈ ಪ್ರಪಂಚದಲ್ಲಿ ಹುಟ್ಟಿದ ಪ್ರತಿ ಜೀವಿಯೂ ತಪ್ಪದೇ ಮರಣ ಕ್ರಿಯೆಯನ್ನು ಹೊಂದಲೇ ಬೇಕು ಮತ್ತು ಅವುಗಳ ಭೌತಿಕ ಕಾಯಗಳ ವಿನಾಶವು ಆಗಲೇ ಬೇಕು. ಆತ್ಮಸಾಕ್ಷಾತ್ಕಾರವನ್ನು, ಕೇವಲ ಅವಿದ್ಯೆ ಅಥವಾ ಅಜ್ಞಾನವನ್ನು ಹೋಗಲಾಡಿಸಿಕೊಳ್ಳುವುದರ ಮೂಲಕವಷ್ಟೇ ಪಡೆಯಬಹುದು.

Kamalākṣa-niṣevitā कमलाक्ष-निषेविता (558)

೫೫೮. ಕಮಲಾಕ್ಷ-ನಿಷೇವಿತಾ

          ದೇವಿಯು ಕಮಲದ ಕಣ್ಣುಗಳುಳ್ಳವನಾದ ವಿಷ್ಣುವಿನಿಂದ ಪೂಜಿಸಲ್ಪಡುತ್ತಾಳೆ. ಸೌಂದರ್ಯ ಲಹರಿಯೂ (ಶ್ಲೋಕ ೫) ಸಹ ಇದನ್ನು ಹೀಗೆ ಹೇಳುವ ಮೂಲಕ ದೃಢಪಡಿಸುತ್ತದೆ, "ಹರಿಸ್ತ್ವಾಮ್ ಆರಾಧ್ಯ" ಅಂದರೆ ‘ಹರಿಯು ನಿನ್ನನ್ನು ಆರಾಧಿಸಿದ’. ವಿಷ್ಣುವು ದೇವಿಯನ್ನು ಪೂಜಿಸುವ ಮೂಲಕ ರಾಕ್ಷಸ ಸಂಹಾರಕ್ಕಾಗಿ ತನ್ನ ಮೋಹಿನೀ (ನಾಮ ೫೬೨) ರೂಪವನ್ನು (ಸ್ತ್ರೀ ರೂಪವನ್ನು) ಪಡೆದ. ಬಹುಶಃ ಈ ನಾಮದಲ್ಲಿ ಸ್ತ್ರೀಯರ ಪಾತಿವ್ರತ್ಯವನ್ನು ಒತ್ತಿ ಹೇಳುವುದು ವಾಗ್ದೇವಿಯರ ಉದ್ದೇಶವಾಗಿರಬಹುದು. ಸ್ತ್ರೀಯರನ್ನು ಯಾವಾಗಲೂ ಗೌರವದ ಚಿಹ್ನೆಯಾಗಿ ಭಾರತೀಯ ಶಾಸ್ತ್ರ ಗ್ರಂಥಗಳಲ್ಲಿ ಕಾಣಲಾಗಿದೆ. ಕಮಲಾಕ್ಷ ಎಂದರೆ ಕಮಲದ ಕಣ್ಣುಗಳನ್ನುಳ್ಳವನು ಎಂದರೆ ವಿಷ್ಣುವು ಕಮಲವನ್ನು ಹೋಲುವ ಸುಂದರವಾದ ಕಣ್ಣುಗಳನ್ನು ಹೊಂದಿದ್ದಾನೆ ಎಂದರ್ಥ.

Tāmbhūla-pūrita-mukhī ताम्भूल-पूरित-मुखी (559)

೫೫೯. ತಾಂಬೂಲ-ಪೂರಿತ-ಮುಖೀ

          ದೇವಿಯು ವೀಳ್ಯದ ಎಲೆಯನ್ನು ಕರ್ಪೂರ ವೀಟಿಕಾ(ನಾಮ ೨೬)ದೊಂದಿಗೆ ಅಗಿಯುವುದಕ್ಕೆ ಇಷ್ಟಪಡುತ್ತಾಳೆ. ವೀಳೆ ಎಲೆಗಳು ಅವಳ ತುಟಿಗಳನ್ನು ಕೆಂಪಾಗಿಸುತ್ತವೆ. ಕರ್ಪೂರ ವೀಟಿಕದೊಂದಿಗಿನ ವೀಳೆ ಎಲೆಯು ಸೊಗಸಾದ ಸುಗಂಧವನ್ನು ಹೊರಹೊಮ್ಮಿಸುತ್ತದೆ. ಈ ನಾಮವು ದೇವಿಯ ಮುಖವು ವೀಳ್ಯದೆಲೆಗಳಿಂದ ಕಂಗೊಳಿಸುತ್ತದೆ ಎನ್ನುತ್ತದೆ. ತಾಂಬೂಲವನ್ನು ಅಗಿಯುವುದರಿಂದ ಕೆಂಪಾದ ರಸವು ಉತ್ಪನ್ನವಾಗುತ್ತದೆ. ಕೆಂಪು ಬಣ್ಣವು ಕರುಣೆಯ ಸಂಕೇತವಾಗಿರುವುದರಿಂದ ದೇವಿಯ ಮುಖವು ಕರುಣಾರಸ ಪೂರಿತವಾಗಿದೆ ಎನ್ನುವುದನ್ನು ಈ ನಾಮವು ಪರೋಕ್ಷವಾಗಿ ಹೇಳುತ್ತದೆ.

Dāḍimī-kusuma-prabhā दाडिमी-कुसुम-प्रभा (560)

೫೬೦. ದಾಡಿಮೀ-ಕುಸುಮ-ಪ್ರಭಾ

         ದೇವಿಯು ದಾಳಿಂಬೆ ಹೂವಿನಂತೆ ಹೊಳೆಯುತ್ತಾಳೆ, ಅವುಗಳು ಗಾಢ ಕೆಂಪು ಬಣ್ಣವನ್ನು ಹೊಂದಿರುತ್ತವೆ. ದೇವಿಯ ಪೂಜೆಯಲ್ಲಿ ದಾಳಿಂಬೆ ಹೂವುಗಳನ್ನು ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ಅದರ ನಂತರ ದಾಸವಾಳದ ಹೂವು, ಇದು ಕಡುಗೆಂಪು ಬಣ್ಣದ ದಳಗಳನ್ನು ಹೊಂದಿದ್ದು ಅದನ್ನು ಬಹತೇಕರು ದೇವಿಯ ಪೂಜೆಗೆ ಬಳಸುತ್ತಾರೆ. ಅಭಿರಾಮಿ ಅಂಧಾಧಿಯ (ಇದು ದೇವಿಯನ್ನು ಕುರಿತಾದ ೧೦೦ ಸ್ತುತಿ ಪದ್ಯಗಳನ್ನು ಹೊಂದಿರುವ ತಮಿಳು ಕಾವ್ಯ. ಅದು ಸ್ವಲ್ಪ ಹೆಚ್ಚು ಕಡಿಮೆ ಸೌಂದರ್ಯ ಲಹರಿಯಂತಿರುತ್ತದೆ) ಕೊನೆಯ ಪದ್ಯವೂ ಸಹ ದೇವಿಯ ಮೈಕಾಂತಿಯನ್ನು ದಾಳಿಂಬೆ ಹೂವಿಗೆ ಹೋಲಿಸುತ್ತದೆ. ದೇವಿಯೊಂದಿಗೆ ಅನುಬಂಧ ಹೊಂದಿರುವ ಎಲ್ಲವೂ ಕೆಂಪು ಬಣ್ಣದ್ದಾಗಿವೆ. ದೇವಿಯ ಕೆಂಪು ಮೈಕಾಂತಿಯ ಕುರಿತಾಗಿ ಈ ಸಹಸ್ರನಾಮದಲ್ಲಿ ಪದೇ ಪದೇ ಒತ್ತಿ ಹೇಳಲಾಗಿದೆ. ಇದರ ಕಾರಣವನ್ನು ೫೫೭ನೇ ನಾಮದ ಚರ್ಚೆಯಲ್ಲಿ ಕೊಡಲಾಗಿದೆ.

Mṛgākṣī मृगाक्षी (561)

೫೬೧. ಮೃಗಾಕ್ಷೀ

          ದೇವಿಯ ಕಣ್ಣುಗಳು ಜಿಂಕೆಯ ಕಣ್ಣಿನಂತೆ ಕಾಣುತ್ತವೆ. ಬ್ರಹ್ಮದ ವರ್ಣನೆಯು ಸಾಧ್ಯವಿಲ್ಲದೇ ಇರುವುದರಿಂದ ನಮಗೆ ಗೊತ್ತಿರುವ ಅತ್ಯಂತ ಉತ್ತಮವಾದ ವಸ್ತುಗಳನ್ನು ಉಲ್ಲೇಖಿಸಲಾಗುತ್ತದೆ. ಜಿಂಕೆಯ ಕಣ್ಣುಗಳು ಅತ್ಯಂತ ಮೋಹಕವಾಗಿದ್ದು ಅವು ಸುತ್ತಲೂ ತಿರುಗುತ್ತಾ ಎಲ್ಲಾ ಕಡೆಗೂ ಏಕಕಾಲಕ್ಕೆ ನೋಡುತ್ತವೆ. ಲಲಿತಾಂಬಿಕೆಯು ಈ ಜಗದ ಪರಿಪಾಲಿಕಿಯಾಗಿರುವುದರಿಂದ ಅವಳು ಈ ಪ್ರಪಂಚದ ಎಲ್ಲಾ ಕಡೆಗಳನ್ನೂ ಎರಡು ಕಾರಣಗಳಿಗಾಗಿ ನೋಡುತ್ತಿರುತ್ತಾಳೆ. ಮೊದಲನೆಯ ಕಾರಣವೆಂದರೆ ದೇವಿಯು ಈ ಪ್ರಪಂಚವನ್ನು ಪರಿಪಾಲಿಸುವುದರಿಂದ ಆಕೆಯು ಸ್ವಯಂ ಆಗಿ ಎಲ್ಲಾ ಚಟುವಟಿಕೆಗಳನ್ನು ಪರಿಶೀಲಿಸುತ್ತಾಳೆ. ಎರಡನೆಯದಾಗಿ, ಅವಳು ಹಾಗೆ ಮಾಡುವಾಗ ಆಕೆಯು ಕೇವಲ ತನ್ನ ನೋಟ ಮಾತ್ರದಿಂದಲೇ ತನ್ನ ನಿಜ ಭಕ್ತರಿಗೆ ಮುಕ್ತಿಯನ್ನು ಕರುಣಿಸುತ್ತಾಳೆ. ಆಕೆಯು ತನ್ನ ಭಕ್ತರು ಒಂದು ಕ್ಷಣವೂ ಸಹ ಮುಕ್ತಿಗಾಗಿ ಕಾಯಬಾರದು ಎನ್ನುವ ಉದ್ದೇಶದಿಂದ ಹಾಗೆ ಮಾಡುತ್ತಾಳೆ. ದೇವಿಯು ಅವರಿಗೆ ಮುಕ್ತಿಯನ್ನು ಕೇವಲ ತನ್ನ ಕುಡಿನೋಟದಿಂದಲೇ ಕರುಣಿಸುತ್ತಾಳೆ.

         ಲಲಿತಾ ತ್ರಿಶತಿಯೂ ಸಹ ನಾಮ ೧೦೩ರಲ್ಲಿ (ಹರಿಣೇಕ್ಷಣಾ) ಇದೇ ಅರ್ಥವನ್ನು ಕೊಡುತ್ತದೆ.

Mohinī मोहिनी (562)

೫೬೨. ಮೋಹಿನೀ

          ದೇವಿಯು ಮೋಹಪರವಶಗೊಳಿಸುತ್ತಾಳೆ (ಸಮ್ಮೋಹನಗೊಳಿಸುವವಳಾಗಿದ್ದಾಳೆ). ಅವಳ ಸೌಂದರ್ಯವನ್ನು ಹೊಗಳಲು ಸೂಕ್ತ ಪದಗಳು ಸಿಗದೇ ಇದ್ದದ್ದರಿಂದ ವಾಗ್ದೇವಿಗಳು ಈ ಶಬ್ದವನ್ನು ಬಳಸಿದ್ದಾರೆ. ಅತ್ಯಂತ ಚೆಲುವಾಗಿರದ ಹೊರತು ಮೋಹವು ಉಂಟಾಗುವುದಿಲ್ಲ. ದೇವಿಯು ಸೌಂದರ್ಯವೇ ಮೂರ್ತಿವೆತ್ತಂತವಳು, ಏಕೆಂದರೆ ಆಕೆಯ ಚೆಲುವು ಜ್ಞಾನ, ಕೌಶಲ್ಯ ಮತ್ತು ಕರುಣೆಯಿಂದ ಮಾಡಲ್ಪಟ್ಟಿದೆ.

         ಯಾವಾಗ ವಿಷ್ಣುವು ಆಕೆಯನ್ನು ಪೂಜಿಸುವುದರಿಂದ ತನ್ನ ಮೋಹಿನೀ ರೂಪವನ್ನು ಪಡೆದನೋ ಆಗ ಅವನು ರಾಕ್ಷಸರನ್ನು ಸಮ್ಮೋಹಗೊಳಿಸಿದ (೫೫೮ನೇ ನಾಮದ ಚರ್ಚೆಯನ್ನು ನೋಡಿ).

                                                                                                                                 ******

        ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM MEANING 557 - 562 http://www.manblunder.com/2010/01/lalitha-sahasranamam-meaning-557-562.htmlಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Mon, 10/14/2013 - 17:18

ಶ್ರೀಧರರೆ, ೧೩೧. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯಸಾರ ಪರಿಷ್ಕರಣೆಗೆ ಸಿದ್ಧ :-)
ಲಲಿತಾ ಸಹಸ್ರನಾಮ ೫೫೭ - ೫೬೨
__________________________
೫೫೭. ಕಾಲಹಂತ್ರೀ 
ಉಂಟುಮಾಡುತ ಕಾಲ ಬ್ರಹ್ಮ ನಿಗದಿಸುತ  ತುದಿ ಮೊದಲ
ಆತ್ಮವಧಿಗಮಿಸೆ ನಿಯಮಿತ ಸಮಯ ಸಾವಿನ ಮಹಾಕಾಲ
ಕಾಲವೆ ಮರಣ ಗೆಲ್ಲಲದ, ಆತ್ಮ ಸಾಕ್ಷಾತ್ಕಾರವೆ ಸಹಯಾತ್ರಿ
ಗೆದ್ದವರಾ ಮರಣ ವಿನಾಶಕಳಾಗಿ, ದೇವಿ ಲಲಿತೆ ಕಾಲಹಂತ್ರೀ ||
೫೫೮. ಕಮಲಾಕ್ಷ-ನಿಷೇವಿತಾ 
ಕಮಲ ಸುಂದರ ನಯನ, ಪಡೆದ ಜಗನ್ಮೋಹಿನಿಯ ವದನ
ದೈತ್ಯ ನಿಗ್ರಹ-ಸಂಭಾಳಿಕೆ, ಸ್ತ್ರೀ ರೂಪ ಪಡೆಯೆ ಪೂಜಿಸಿದನ
ಆರಾಧಿಸಿದಾ ಕಮಲಾಕ್ಷ ಹರಿಗೆ, ಮೋಹಕ ಹೆಣ್ಣಿನ ಇಂಗಿತ
ಕರಗತವಾಗಿಸಿದಳೆ ಸೋದರಿ ಲಲಿತೆ, ಕಮಲಾಕ್ಷ ನಿಷೇವಿತಾ ||
೫೫೯. ತಾಂಬೂಲ-ಪೂರಿತ-ಮುಖೀ
ವಿಳೆಯದೆಲೆ ತಾಂಬೂಲ, ಕರ್ಪೂರ ವೀಟಿಕಾ ಸುಗಂಧದ ಜತೆ
ಕರುಣಾರಸ ಕಂಪು, ಪಸರಿಸಿ ದೇವಿಯ ತುಟಿಯೆಲ್ಲ ಕೆಂಪಾಯ್ತೆ
ತಾಂಬೂಲಪ್ರಿಯೆ ದೇವಿ ವದನ ವೀಳ್ಯದೆಲೆಯಲಂಕಾರ ಪಲ್ಲಕ್ಕಿ
ಕರುಣಾಪೂರ್ಣವದನೆ ಲಲಿತೆಯಾಗಿ ತಾಂಬೂಲಪೂರಿತಮುಖಿ ||
೫೬೦. ಡಾಡಿಮೀ-ಕುಸುಮ-ಪ್ರಭಾ 
ದಾಳಿಂಬೆ ದಾಸವಾಳದ ಕೆಂಪು ಹೂಗಳೆ ಶ್ರೇಷ್ಠ ದೇವಿ ಆರಾಧನೆಗೆ
ದಾಳಿಂಬೆಯ ಕೆಂಪು ಮೈಕಾಂತಿಯಲಿ, ಹೊಳೆವ ಲಲಿತಾ ಸೊಬಗೆ
ಗಾಢ ಕೆಂಪಿನದೆಲ್ಲ ಮಾತೆಯ, ಅನುಬಂಧದಲಿ ಚೆಲ್ಲುತಲಿ ಸೌರಭ
ಕೆಂಪಿನ ಸಾಗರದಲಿ ಮಜ್ಜನದಲಿಹಳು, ದಾಡಿಮೀ ಕುಸುಮ ಪ್ರಭಾ ||
೫೬೧. ಮೃಗಾಕ್ಷೀ 
ಬ್ರಹ್ಮದ ವರ್ಣನೆ ನಿಲುಕದು, ಉತ್ಕೃಷ್ಟವಿಹುದೆಲ್ಲ ಹೋಲಿಸೆ ಸೂಕ್ತ
ಮೋಹಕ ಹರಿಣಾಕ್ಷಿಯ ನೋಟದೆ, ಸಂಗ್ರಹ ಸುತ್ತೆಲ್ಲಾ ದೃಷ್ಟಿಸುತ್ತ
ಜಗಪರಿಪಾಲಕಿ ಲಲಿತಾಂಬೆ, ಇಂತು ಪರಿಪಾಲನಾರ್ಥಾವಲೋಕನ
ಜತೆಯಲೆ ಭಕ್ತರಿಗೆ ಮುಕ್ತಿ, ನೋಟದೆ ಕರುಣಿಸೊ ಮೃಗಾಕ್ಷೀ ನಯನ ||
೫೬೨. ಮೋಹಿನೀ 
ಮೋಹ,ಪರವಶಗೊಳ್ಳದವರಾರು ದೇವಿಯ ಸಮ್ಮೋಹಕ ರೂಪಕೆ
ಪದದಲ್ಹಿಡಿಯಲಾಗದ ಸೌಂದರ್ಯ, ವರ್ಣನೆಗಿನ್ನು ಉಪಮೆ ಬೇಕೆ
ಮೂರ್ರ್ತಿವೆತ್ತ ಸೌಂದರ್ಯದ ಖನಿ, ಜ್ಞಾನ ಕೌಶಲ ಕರುಣಾಪೂರ್ಣಿ
ಮೂಕವಿಸ್ಮಿತ ಪರವಶ ಹರಿ, ದೈತ್ಯರನ್ಹಣಿಯೆ ತಾನಾದ ಮೋಹಿನೀ ||
 
- ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು