ಖೈರುದ್ದೀನನಿಗೆ ಹಬ್ಬದ ಶುಭಾಶಯ ಹೇಳಿ..

ಖೈರುದ್ದೀನನಿಗೆ ಹಬ್ಬದ ಶುಭಾಶಯ ಹೇಳಿ..

ಸಿಂಗಪುರದಲಿ ಇಂದು (15. ಅಕ್ಟೋಬರ್) ಮುಸ್ಲಿಂ ಬಂಧುಗಳ ಹಬ್ಬ 'ಹರಿ ರಾಯ ಹಜಿ' ನಿಮಿತ್ತ ರಜೆ. ಇದು ನಮ್ಮಲ್ಲಿ ಆಚರಿಸುವ 'ಬಕ್ರೀದ್'ನ ಸಮಾನಾರ್ಥಕ (ನಮ್ಮಲ್ಲಿ ಈ ಬಾರಿ ಆಚರಣೆ ಒಂದು ದಿನದ ನಂತರ  - ಅಂದರೆ 16. ಅಕ್ಟೋಬರ್ ಎಂದು ಕಾಣುತ್ತದೆ, ರಜೆಯ ದಿನಗಳ ಪಟ್ಟಿ ನೋಡಿದರೆ). ಹಬ್ಬದ ನೇರ ಆಚರಣೆಯ ಅನುಭವವಿರದಿದ್ದರೂ, ಪ್ರತಿ ಬಾರಿ ಹಬ್ಬದ ಮುನ್ನಾ ಅಥವ ನಂತರ ಆಫೀಸು ಗೆಳೆಯ ಖೈರುದ್ದೀನನೊಂದಿಗೆ ಮತ್ತಷ್ಟು ಸಹೋದ್ಯೋಗಿ ಗೆಳೆಯರ ಪುಟ್ಟ ಬಳಗ ಲಂಚು, ಡಿನ್ನರಿನಲ್ಲಿ ಸೇರುವ ಹವ್ಯಾಸ. ಹಬ್ಬದಲ್ಲಿ ಕಾಣುವ ವಾತಾವರಣ ಮತ್ತು ಆಚರಣೆಯ ಕೆಲವು ತುಣುಕುಗಳನ್ನು ನನ್ನ ಸಿಂಗಪುರದಲ್ಲಿನ ಅನುಭವದ ಮಿತಿಯೊಳಗಿನ ಮೂಸೆಯಲ್ಲೆ ಹಿಡಿಯುವ ಯತ್ನ ಈ ಕವನ. ಬಹುಶಃ ನೇರ ಹಬ್ಬ ಆಚರಿಸದವರ ದೃಷ್ಟಿಯಲ್ಲಿ ಹಬ್ಬ ಹೇಗೆ ಕಂಡೀತೆಂಬ ಒಂದು ವಿಭಿನ್ನ ದೃಷ್ಟಿಕೋನವೆನ್ನಬಹುದು. ಆದರೆ ಈ ಮಾರುಕಟ್ಟೆಯ ಯುಗದಲ್ಲಿ ಎಲ್ಲ ಹಬ್ಬಗಳು, ಸಂಪ್ರದಾಯಗಳು ವಾಣಿಜ್ಯೀಕರಣದ ಪ್ರಭಾವದಿಂದಲೊ ಏನೊ ಹೆಚ್ಚುಕಡಿಮೆ ಶಾಪಿಂಗು, ಉಂಡು-ತಿನ್ನಾಟಗಳ ಗದ್ದಲದಲ್ಲೆ ಹೆಚ್ಚು ಮುಳುಗಿಹೋಗುವುದು ಸಾಮಾನ್ಯವಾಗಿ ಕಾಣುವ ಪ್ರಕ್ರಿಯೆ. ನಡುವಲ್ಲೆ ಹೊಸ ಬಟ್ಟೆ ತೊಟ್ಟು, ನೆಂಟರಿಷ್ಟರೊಡನೆ ಮಾತಾಟವಾಡಿ ಕಾಲ ಕಳೆದು ಹಬ್ಬದ ನಿಜ ಸಂಭ್ರಮ ಅನುಭವಿಸುವುದೂ ಕಷ್ಟವಾಗುತ್ತಿರುವುದು ಈಗಿನ ಟ್ರಾಫಿಕ್ಕು, ದೂರಗಳ ದೆಸೆಯೊ ಅಥವ ತೆಳುವಾಗುತ್ತಿರುವ ಸಂಪ್ರದಾಯಗಳ ಬಂಧವೊ ಅನ್ನುವುದು ಒಂದು ರೀತಿಯ ಗೊಂದಲ, ಜಿಜ್ಞಾಸೆಯೆ. 

ನಮ್ಮ ಮುಸ್ಲಿಂ ಬಂಧುಗಳಿಗೆಲ್ಲ 'ಹಬ್ಬದ ಶುಭಾಶಯಗಳು' ಮತ್ತು ಗೆಳೆಯ ಖೈರುದ್ದೀನನ ನೆನೆಯುತ್ತಾ ಈ ಕವನ.

ಖೈರುದ್ದೀನನಿಗೆ ಹಬ್ಬದ ಶುಭಾಶಯ ಹೇಳಿ...
_____________________________

ದಸರೆಯೆ ಇನ್ನು ಆಗಿಲ್ಲ ಮಾಯ
ನಾಳೆಯೆ ಬಂತಲ್ಲಾ ಹರಿರಾಯಾ
ಹಬ್ಬದ ಸಾಲಲ್ಲಿ ಮುಸ್ಲಿಂ ಬಂಧು
ಬಕ್ರೀದಿನ ಕುರ್ಬಾನಿ 'ಗಳಿಗೆ' ಬಂದು ||

ಸಿಂಗಪುರ ಮಲೇಶಿಯ ಇಂಡೋನೇಶಿಯಾ
ಸುತ್ತಮುತ್ತಲ ದೇಶಗಳಲ್ಲೂ ಸುಸಮಯ
ಇದ್ದವರು ಇಲ್ಲದವರಿಗೆ ಹಂಚೊ ಹೃದಯ
ಜನ ಸಮೂಹ ಸಂಸ್ಥೆ ಕಳಿಸಿ ಉದಾರತೆಯ ||

ಇದ್ದ ದೇಶದ ಸರತಿ ಇಲ್ಲದವರಿಗೆ ಪ್ರೀತಿ
ವರುಷದೊಂದು ಹಬ್ಬ ತಿಂದುಣ್ಣೊ ರೀತಿ
ಇದಲ್ಲವೆ ಬದುಕು ಸಹೃದಯಗಳ ಬೆಳಕು
ಭಾತೃತ್ವದಲಿ ಜತೆಗೆ ಹೆಜ್ಜೆಯಿಡಲಿರಬೇಕು ||

ಹಬ್ಬದ ದಿನಗಳ ಸೂಕ್ತಿ 'ಪಾಸರಮಲಂ'ನಲ್ಲಿ
ಭೇಟಿ ನೀಡುತ ತಾತ್ಕಾಲಿಕ ಪೆಂಡಾಲಿನಲಿ
ಬೇಕು ಬೇಡದ್ದೆಲ್ಲ ಖರೀದಿ ಹಬ್ಬದ ಸರದಿ
ಚೌಕಾಸಿ ಮಾಡುವವರೂ ಇಲ್ಲೆ ಗುದ್ದಾಡಿ || 

ಬಟ್ಟೆ ಬರೆಯಿಂದಿಡಿದು ತಿನ್ನಲು ಅಂಗಡಿ
ಏನುಂಟು ಏನಿಲ್ಲ ಮಾರುಕಟ್ಟೆಯ ಬೀದಿ
ಸಾಲಂಕೃತ ದೀಪವಿರದೆ ಹಬ್ಬವೆಲ್ಲುಂಟು
ಕೈ ಬಿಚ್ಚಿ ಖರ್ಚಾಗಿಸಲು ದಾರಿಯೆಷ್ಟುಂಟು ||

ದುಡಿತ ಅವಿರತ ಜನಕೆ ವಿಶ್ರಾಂತ ದಿನ
ಆಚರಿಸಿಹ ಗೆಳೆಯರಿಗೆ ಬಿಡುವೆಲ್ಲಿ ಧ್ಯಾನ
ನೆಂಟರಿಷ್ಟರ ಸಹಿತ ಸಕುಟುಂಬದ ಗುಣಿತ
ಉಂಡೂಟ ಮಾತಾಟ ದಿನ ಕ್ಷಣದಲ್ಲೆ ಹೋಯ್ತ ||

ಗೆಳೆಯ ಖೈರುದ್ದೀನನಿಗೆ ಹರಿರಾಯ ಶುಭ ಹೇಳಿ
ಊರಿಗೆ ಹೊರಡುವ ಮುನ್ನದ ಬೀಳ್ಕೊಡುಗೆ ಪಾಳಿ
ಪ್ರತಿ ಹಬ್ಬದ ಹೊತ್ತಲು ನಾವು ಸೇರುವುದು ಖಚಿತ
ಗೆಳೆಯರೆಲ್ಲ ಕೂಡಿದ ಔತಣಕೂಟದಲಿ ಮಾತೆ ಹಿತ |

- ಧನ್ಯವಾದಗಳೊಂದಿಗೆ 
    ನಾಗೇಶ ಮೈಸೂರು