೧೩೪. ಲಲಿತಾ ಸಹಸ್ರನಾಮ ೫೭೨ರಿಂದ ೫೭೪ನೇ ನಾಮಗಳ ವಿವರಣೆ

೧೩೪. ಲಲಿತಾ ಸಹಸ್ರನಾಮ ೫೭೨ರಿಂದ ೫೭೪ನೇ ನಾಮಗಳ ವಿವರಣೆ

                                                                                                               ಲಲಿತಾ ಸಹಸ್ರನಾಮ ೫೭೨ - ೫೭೪

Parāśaktiḥ पराशक्तिः (572)

೫೭೨. ಪರಾಶಕ್ತಿಃ

          ದೇವಿಯು ಪರಾಶಕ್ತಿಯಾಗಿದ್ದಾಳೆ ಏಕೆಂದರೆ ಆಕೆಯು ಪರಶಿವನ ಸಂಗಾತಿಯಾಗಿದ್ದಾಳೆ. ಆಕೆಯು ಪರಾ ಎಂದರೆ ಅತ್ಯುನ್ನತವಾದ ಶಕ್ತಿಯಾಗಿದ್ದಾಳೆ. ಇದರ ಬಗ್ಗೆ ೩೬೬ನೇ ನಾಮವಾದ ’ಪರಾ’ದಲ್ಲಿಯೂ ಚರ್ಚಿಸಲಾಗಿದೆ. ಮಾನವ ಶರೀರದಲ್ಲಿ ಹತ್ತು ವಸ್ತುಗಳಿದ್ದು ಅವುಗಳನ್ನು ಧಾತುಗಳೆಂದು ಕರೆಯುತ್ತಾರೆ. ಅವುಗಳಲ್ಲಿ ಚರ್ಮ, ರಕ್ತ, ಮಾಂಸ, ಕೊಬ್ಬು ಮತ್ತು ಮೂಳೆಗಳು ದೇವಿಯಿಂದ ಉದ್ಭವವಾದರೆ, ಮಜ್ಜೆ, ವೀರ್ಯ/ಅಂಡಾಣು, ಪ್ರಾಣ ಮತ್ತು ಆತ್ಮಗಳು ಶಿವನಿಂದ ಉದ್ಭವವಾಗಿವೆ. ಹತ್ತನೆಯ ಧಾತುವೇ ಪರಾಶಕ್ತಿ.

         ಶಿವನು ಶಕ್ತಿಯೊಂದಿಗೆ ಸಮಾಗಮ ಹೊಂದಿದರೆ ಮಾತ್ರವೇ ರೂಪಾಂತರವನ್ನು ಹೊಂದಬಲ್ಲ. ಇದನ್ನು ಸೌಂದರ್ಯ ಲಹರಿಯು (ಸ್ತೋತ್ರ ೧) ವಿವರಿಸುತ್ತದೆ, "ಶಿವನು ಶಕ್ತಿಯೊಂದಿಗೆ ಒಂದುಗೂಡಿದಾಗ ಮಾತ್ರವೇ ಅವನು ಆವಿರ್ಭಾವಗೊಳ್ಳಬಲ್ಲ. ಇಲ್ಲದಿದ್ದರೆ ಶಿವನು ಒಂದು ಸ್ಪಂದನೆಯನ್ನೂ ಸಹ ಮಾಡಲಾರ". ಶ್ವೇತಾಶ್ವತರ ಉಪನಿಷತ್ತು (೬.೮) ಹೀಗೆ ಹೇಳುತ್ತದೆ, "ಅವನ ಪರಾಶಕ್ತಿಯು ವಿವಿಧ ಪ್ರಕಾರವಾಗಿದೆ. ಅದು ಸ್ವಾಭಾವಿಕವೂ, ಜ್ಞಾನ ಕ್ರಿಯೆಯೂ (ಎಲ್ಲ ವಿಷಯಗಳಲ್ಲೂ ಜ್ಞಾನದ ಪ್ರವೃತ್ತಿ), ಬಲಕ್ರಿಯೆಯೂ (ಕೇವಲ ವಸ್ತುವಿನ ಸಮೀಪ ಇರುವುದರಿಂದ ಅದನ್ನು ವಶಪಡಿಸಿಕೊಂಡು ನಿಯಂತ್ರಿಸಬಲ್ಲ ಶಕ್ತಿ) ಆಗಿದೆ". ಅವನ ಪರಾಶಕ್ತಿ ಇಲ್ಲದಿದ್ದರೆ ಇವು ಅವನಿಗೆ ಸಾಧ್ಯವಾಗುತ್ತಿರಲಿಲ್ಲ.

         ಕಾಶ್ಮೀರ ಶೈವ ತತ್ವದ ಕುರಿತಾಗಿರುವ ’ಪರಾ‍ತ್ರೀಶಿಕಾ‍ ವಿವರಣ’ ಎನ್ನುವ ಪ್ರಾಚೀನ ಗ್ರಂಥವು ಹೀಗೆ ಹೇಳುತ್ತದೆ, "ಪೂಜನೀಯ ಮತ್ತು ಪರಮ ದೈವೀ ಚೈತನ್ಯವಾದ ದೇವಿಯು ಏಕಕಾಲಕ್ಕೆ ಮೂರು ಅಂಶಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯಗಳಲ್ಲಿ ಅಭಿಗಮನವನ್ನು ಹೊಂದುತ್ತಾಳೆ, ಆಕೆಯೇ ಪರಾಶಕ್ತಿ ಮತ್ತು ಆಕೆಯು ಜ್ಞಾನದ ಎಲ್ಲಾ ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ವಿಹರಿಸುತ್ತಾಳೆ. ಸಮಸ್ತ ಪ್ರಪಂಚದ ಅಸ್ತಿತ್ವಕ್ಕೆ ಎರಡು ಮುಖಗಳಿವೆ. ಮೊದಲನೆಯದು ಮೂಲ ವಿಶ್ವವಾದರೆ ಮತ್ತೊಂದು ಅದರ ಪ್ರತಿಫಲನವಾಗಿದೆ. ಈ ಸಮಸ್ತ ಬ್ರಹ್ಮಾಂಡವು ಪರಾಶಕ್ತಿಯಾಗಿದೆ ಮತ್ತು ಸಮಸ್ತ ಸೃಷ್ಟಿಯು ಆಕೆಯ ವ್ಯಕ್ತವಾಗುವಿಕೆಯಾಗಿದೆ. ಪರಾಶಕ್ತಿಯ ಗರ್ಭದಲ್ಲಿ ಪರಾ-ವಾಕ್ ಉಪಸ್ಥಿತವಾಗಿದ್ದು ಅದರಿಂದಲೇ ಮಾತು ಹೊರಹೊಮ್ಮುತ್ತದೆ. ಸಂಕುಚಿತ ಪ್ರಜ್ಞೆಯು, ದೇವಲೋಕದ ಹಸುವಾದ ಕಾಮಧೇನುವಿನ ಕೆಚ್ಚಲಿನಂತಿದೆ; ಏಕೆಂದರೆ ಅದರೊಳಗೆ ಅದು ಎಲ್ಲಾ ವಾಸ್ತವಗಳನ್ನು ಹಿಡಿದಿಟ್ಟುಕೊಂಡಿದೆ. ಅದು ಎಲ್ಲಾ ವಾಸ್ತವಗಳ ಅನೇಕತೆಯನ್ನು ಎತ್ತಿಹಿಡಿಯುತ್ತದೆ, ಆವಿರ್ಭಾವಗೊಳ್ಳುತ್ತದೆ, ಅದು ವಿಶಾಲವಾಗಿ ಪಸರಿಸುವ ಜ್ಞಾನ ಶಕ್ತಿಯಾಗಿದೆ.  ತಿಳಿದುಕೊಳ್ಳುವಾತನ ಮತ್ತು ತಿಳಿದವನ ಕುರಿತಾದ ಪರಿಮಿತ ಅನುಭವವನ್ನು ಹೊರತಾರದೇ, ಅದು ಪ್ರಜ್ಞೆಯ ಪರಿಶುದ್ಧ ರೂಪದಲ್ಲಿ ನಿವಸಿಸುತ್ತದೆ, ಅದು ಹದಿನೇಳು ಕಲಾಗಳನ್ನು ಹೊಂದಿರುವ ಪರಿಪೂರ್ಣ ಪರಾಶಕ್ತಿಯಾಗಿದೆ."

        ಪರಾಶಕ್ತಿಯು ಪರಮ ದೈವೀ ಚರ ಶಕ್ತಿಯಾಗಿದೆ ಮತ್ತದು ಕನ್ನಡಿಯಲ್ಲಿ ಕಾಣುವಂತಹ ಶಿವನ ಪ್ರತಿರೂಪವಾಗಿದ್ದು ಎಲ್ಲಾ ದೈವೀ ಕ್ರಿಯೆಗಳಿಗೆ ಕಾರಣವಾಗುತ್ತದೆ. ಲಿಂಗ ಪುರಾಣವು, "ಈ ಸಮಸ್ತ ಪ್ರಪಂಚದಲ್ಲಿ ಇರುವ ಎಲ್ಲಾ ವಸ್ತುಗಳ ಬಲಗಳು ’ಶಕ್ತಿ’ಯಾದರೆ ಆ ವಸ್ತುಗಳು ಸ್ವಯಂ ಶಿವನೇ ಆಗಿವೆ" ಎಂದು ಹೇಳುತ್ತದೆ.

Parā-niṣṭhā परा-निष्ठा (573)

೫೭೩. ಪರಾ-ನಿಷ್ಠಾ

         ನಿಷ್ಠೆ ಎಂದರೆ ಒಂದು ವಸ್ತುವಿಗೆ ಎಡಬಿಡದೆ ನಿರಂತರವಾಗಿ ಅಂಟಿಕೊಂಡಿರುವುದು. ಆತ್ಮಸಾಕ್ಷಾತ್ಕಾರ ಹೊಂದಿದ ವ್ಯಕ್ತಿಯ ಮನಸ್ಸು ನಿರಂತರವಾಗಿ ಬ್ರಹ್ಮದೊಂದಿಗೆ ತಾದಾತ್ಮ್ಯ ಹೊಂದಿರುತ್ತದೆ. ಈ ಹಂತವನ್ನು ತಲುಪಲು ಅತ್ಯುನ್ನತ ಮಟ್ಟದ ಜ್ಞಾನವು ಅವಶ್ಯಕ. ಶ್ರೀ ಕೃಷ್ಣನು ಇದನ್ನು ಭಗವದ್ಗೀತೆಯಲ್ಲಿ (೪.೩೩) ವಿವರಿಸುತ್ತಾನೆ, "ಜ್ಞಾನದಿಂದ ಕೈಗೊಂಡ ಯಜ್ಞವು ವಸ್ತುಗಳ ಮೂಲಕ ಕೈಗೊಳ್ಳುವ ಯಜ್ಞಕ್ಕಿಂತ ಶ್ರೇಷ್ಠವಾದದ್ದು. ಎಲ್ಲಾ ಕ್ರಿಯೆಗಳು (ಕಾರಣ ಮತ್ತು ಪರಿಣಾಮ ಹಾಗೂ ಕರ್ಮಗಳು) ಜ್ಞಾನದಿಂದ ಪರಿಪೂರ್ಣತೆಯನ್ನು ಪಡೆಯುತ್ತವೆ." ಒಬ್ಬನು ಬಾಹ್ಯ ಆಚರಣೆಗಳಿಂದ ಬದಲಾವಣೆ ಹೊಂದಿ ಅಂತರಂಗ ಶೋಧನೆಯನ್ನು ಕೈಗೊಳ್ಳಬೇಕಾದರೆ ಜ್ಞಾನವು ಮುಖ್ಯವಾಗುತ್ತದೆ. ಅಂತಹ ಪರಮ ಜ್ಞಾನವನ್ನು ಹೊಂದದೆ, ಅಂತರಂಗದಲ್ಲಿರುವ ಪರಬ್ರಹ್ಮವನ್ನು ಅರಿಯಲು ವಿಫಲನಾಗಿ ಒಬ್ಬನು ಬಾಹ್ಯ ಆಚರಣೆಗಳಿಗೆ ಅಥವಾ ವಸ್ತುಗಳಿಂದೊಡಗೂಡಿದ ಆಚರಣೆಗಳಿಗೆ ಜೋತು ಬಿದ್ದಿರುತ್ತಾನೆ. ಬಾಹ್ಯ ಯಜ್ಞ ಕ್ರಿಯೆಗಳು ಬಹಳ ನಿಧಾನವಾಗಿ ಫಲಗಳನ್ನು ಕೊಡುತ್ತವೆ, ಅವಕ್ಕೆ ಹೋಲಿಸಿದರೆ ಅಂತರಂಗ ಯಜ್ಞವು ಶೀಘ್ರವಾಗಿ ಮುಕ್ತಿಯನ್ನು ಕೊಡಬಲ್ಲುದು. ಅಂತರಂಗದ ಶೋಧನೆಗೆ ಕೇವಲ ನಿಷ್ಠೆಯಿಂದ ಕೂಡಿದ ಮನಸ್ಸಿನ ಹೊರತಾಗಿ ಬೇರೇನೂ ಬೇಕಾಗಿಲ್ಲ ಆದರೆ ಬಾಹ್ಯ ಆಚರಣೆಗಳಿಗೆ ಸಮಯ, ಸ್ಥಳ ಮತ್ತು ಸಂಪದಗಳು ಅವಶ್ಯ ವಸ್ತುಗಳಾಗುತ್ತವೆ. ಅಂತರಂಗ ಯಜ್ಞಕ್ಕೆ ಬೇಕಾಗುವ ಜ್ಞಾನವು ಪ್ರಾಚೀನ ಧರ್ಮ ಗ್ರಂಥಗಳಿಂದಷ್ಟೇ ನಮಗೆ ಲಭ್ಯವಾಗುತ್ತದೆ. ಪ್ರತ್ಯೇಕವಾಗಿ ಉಪನಿಷತ್ತುಗಳು ಬ್ರಹ್ಮವನ್ನು ತಿಳಿದುಕೊಳ್ಳಲು ಮತ್ತು ಅದನ್ನು ಅಂತರಂಗದಲ್ಲಿ ಅರಿಯಲು ವಿಶೇಷವಾದ ಸಾಧನಗಳನ್ನು ನಮಗೆ ಕೊಡುತ್ತವೆ. ಜ್ಞಾನವನ್ನು ಹೊಂದಿದ ನಂತರ ಅದು ನಮ್ಮನ್ನು ಅನುಭವದೆಡೆಗೆ ಕರೆದೊಯ್ಯುತ್ತದೆ. ಯಾವಾಗ ಈ ಜ್ಞಾನ ಮತ್ತು ಅನುಭವಗಳು ನಿಷ್ಠೆಯಾಗಿ ಬದಲಾಗುತ್ತವೆಯೋ, ಅದನ್ನೇ ಪರಾ-ನಿಷ್ಠಾ ಎಂದು ಕರೆಯಲಾಗುತ್ತದೆ. ದೇವಿಯು ಈ ಪರಾ-ನಿಷ್ಠೆಯ ರೂಪದಲ್ಲಿದ್ದಾಳೆ. ಆಕೆಯ ಸಹಾಯವಿಲ್ಲದೆ ಈ ಹಂತವನ್ನು ತಲುಪಲು ಸಾಧ್ಯವಿಲ್ಲ. ದೇವಿಯು ಶಕ್ತಿ (ಪರಾ-ಶಕ್ತಿ) ಮತ್ತು ಜ್ಞಾನ (ಪರಾ-ನಿಷ್ಠಾ)ಗಳ ಮೂರ್ತರೂಪವಾಗಿದ್ದಾಳೆ.

Prajñāna-ghana-rūpiṇī प्रज्ञान-घन-रूपिणी (574)

೫೭೪. ಪ್ರಜ್ಞಾನ-ಘನ-ರೂಪಿಣೀ

          ಈ ನಾಮವು, ಆತ್ಮಸಾಕ್ಷಾತ್ಕಾರಕ್ಕೆ ಅವಶ್ಯವಾಗಿ ಬೇಕಾಗಿರುವುದು ಜ್ಞಾನ ಮತ್ತು ಅನುಭವ ಎಂದು ಹೇಳುವ ಹಿಂದಿನ ನಾಮದ ಮುಂದುವರಿದ ಭಾಗವಾಗಿದೆ. ಈ ನಾಮವು ಹಿಂದಿನ ನಾಮದಲ್ಲಿ ಹೇಳಿದ ಜ್ಞಾನದ ವಿಧವನ್ನು ವಿವರಿಸುತ್ತದೆ. ಪ್ರಜ್ಞಾನ-ಘನ-ರೂಪಿಣೀ ಎಂದರೆ ಪರಮ ಶ್ರೇಷ್ಠವಾದ ಜ್ಞಾನದ ಮೂರ್ತರೂಪ (ಘನರೂಪ). ಪರಮ ಶ್ರೇಷ್ಠವಾದ ಜ್ಞಾನದ ಮೂರ್ತರೂಪವೆಂದರೆ ಅವಿದ್ಯೆಯಿಂದ ಕಲುಷಿತಗೊಳ್ಳದ ಜ್ಞಾನವೆಂದರ್ಥ. ಜ್ಞಾನವು ಇಂದ್ರಿಯಗಳಿಂದ ಕಲುಷಿತವಾಗುತ್ತದೆ.

         ಬೃಹದಾರಣ್ಯಕ ಉಪನಿಷತ್ತು (೪.೫.೧೩) ಹೀಗೆ ಹೇಳುತ್ತದೆ,"ಹೇಗೆ ಉಪ್ಪಿನ ಗಟ್ಟಿಯು ಒಳಗಿಲ್ಲದೆ ಹೊರಗಿಲ್ಲದೆ ಪೂರ್ಣವಾಗಿ ಸಮರಸವಾಗಿರುವುದೋ ಹಾಗೆ ಆತ್ಮನು ಒಳಗಿಲ್ಲದೆ ಹೊರಗಿಲ್ಲದವನು. ಅದು ಪರಿಪೂರ್ಣವಾದದ್ದು ಮತ್ತು ಪರಿಶುದ್ಧವಾದ ಜ್ಞಾನ ಮಾತ್ರವೇ ಆಗಿದೆ". ಯಾವಾಗ ಎಲ್ಲವೂ ಈ ಪರಿಶುದ್ಧ ಜ್ಞಾನದೊಳಗೆ ಲೀನವಾಗಯತ್ತದೆಯೋ, ಆಗ ಆತ್ಮಸಾಕ್ಷಾತ್ಕಾರವು ಉಂಟಾಗಲು ಪ್ರಾರಂಭವಾಗುತ್ತದೆ. ದೇವಿಯು ಅಂತಹ ಪರಿಶುದ್ಧವಾದ ಮತ್ತು ಸಾಂದ್ರಗೊಂಡ ಜ್ಞಾನದ ರೂಪದಲ್ಲಿದ್ದಾಳೆ. 

                                                                                                              ******

         ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM MEANING 572-574 http://www.manblunder.com/2010/01/lalitha-sahasranamam-meaning-572-574.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Tue, 10/15/2013 - 17:51

ಶ್ರೀಧರರೆ, ೧೩೪. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯಸಾರ ಪರಿಷ್ಕರಣೆಗೆ ಸಿದ್ದ :-)
ಲಲಿತಾ ಸಹಸ್ರನಾಮ ೫೭೨ - ೫೭೪
___________________________________________
೫೭೨. ಪರಾಶಕ್ತೀ
ದಶಧಾತುಗಳಲೈದು ದೇವಿ ಕೃಪೆ, ಚರ್ಮ ರಕ್ತ ಮಾಂಸ ಕೊಬ್ಬು ಮೂಳೆ
ಮಜ್ಜೆ ವೀರ್ಯಾಂಡಾಣು ಪ್ರಾಣ ಅತ್ಮ, ಶಿವನಿಂದ ಉದ್ಭವವಾಗಿ ಸೇರಲೆ
ಅತ್ಯುನ್ನತೆ ಪರಾಶಕ್ತಿಯಾಗಿ ಹತ್ತನೆ ಧಾತು, ತಾನಾಗಿ ಪರಶಿವ ಸಂಗಾತಿ
ಶಿವನ ಸ್ಪಂದನ ಆವಿರ್ಭಾವ ಜ್ಞಾನಪ್ರವೃತ್ತಿ ಬಲಕ್ರಿಯೆಯಾಗಿ ಪರಾಶಕ್ತೀ ||
ಸಮಸ್ತ ಪ್ರಪಂಚದಸ್ತಿತ್ವ ದ್ವಿಮುಖಾ, ಮೂಲವಿಶ್ವಾ ಮತ್ತದರ ಪ್ರತಿಫಲನ
ಏಕಕಾಲದೆ ಸೃಷ್ಟಿ ಸ್ಥಿತಿ ಲಯದಭಿಗಮನ, ಬ್ರಹ್ಮಾಂಡಾ ಪರಾಶಕ್ತೀ ಘನ
ಸಮಸ್ತ ಸೃಷ್ಟಿಯವಳ ವ್ಯಕ್ತ ರೂಪ, ಶಬ್ದ ಮೂಲದ ಜತೆ ಸಂಕುಚಿತ ಪ್ರಜ್ಞೆ
ವಾಸ್ತವಗಳನೇಕತೆ ಪಸರಿಸುವ ಜ್ಞಾನಶಕ್ತಿ, ದೇವೀ ಬಲವೆಲ್ಲ ಶಿವನ ಅಜ್ಞೆ ||
೫೭೩. ಪರಾ-ನಿಷ್ಠಾ 
ಬಾಹ್ಯಾಚರಣೆ ನಿಧಾನ, ಪಾಲಿಸಬೇಕು ಸೂಕ್ತ ವಿಧಿ ವಿಧಾನ
ಅಂತರಂಗ ಯಜ್ಞಕೆ ಸಾಕು ನಿಷ್ಠೆ, ಬ್ರಹ್ಮದೆ ತಾದಾತ್ಮ್ಯ ಮನ
ಮುಟ್ಟಲಾಮಟ್ಟದಾತ್ಮ ಸಾಕ್ಷಾತ್ಕಾರಾ, ಉಚ್ಛ ಉನ್ನತಾ ಜ್ಞಾನ
ಆನುಭವದಿ ನಿಷ್ಠೆ ಆಗುತೆ ಪರಾನಿಷ್ಠಾ, ತಲುಪಿಸೆ ದೇವಿಮನ ||
೫೭೪. ಪ್ರಜ್ಞಾನ-ಘನ-ರೂಪಿಣೀ 
ಆತ್ಮಸಾಕ್ಷಾತ್ಕಾರಕೆ ಅವಶ್ಯ ಜ್ಞಾನ ಅನುಭವದ ಇಂಧನ
ಅವಿದ್ಯೆಯಿಂದ ಕಲುಷಿತವಾಗದ ಶ್ರೇಷ್ಠ ಘನರೂಪಿಜ್ಞಾನ
ಇಂದ್ರಿಯಗಳ ಕಪಟ ಮೆಟ್ಟೆ, ಒಳಗ್ಹೊರಗಿಲ್ಲದ ಆತ್ಮದನಿ
ಪರಿಶುದ್ಧ ಸಾಂದ್ರ ಜ್ಞಾನ ಲಲಿತೆ, ಪ್ರಜ್ಞಾನ ಘನ ರೂಪಿಣೀ ||
 
- ಧನ್ಯವಾದಗಳೊಂದಿಗೆ
    ನಾಗೇಶ ಮೈಸೂರು