೧೩೭. ಲಲಿತಾ ಸಹಸ್ರನಾಮ ೫೮೬ರಿಂದ ೫೮೭ನೇ ನಾಮಗಳ ವಿವರಣೆ
ಷೋಡಶೀ ದೇವಿ, ಚಿತ್ರಕೃಪೆ: Manblunder.com
ಲಲಿತಾ ಸಹಸ್ರನಾಮ ೫೮೬-೫೮೭
Kāmasevitā कामसेविता (586)
೫೮೬. ಕಾಮಸೇವಿತಾ
ಕಾಮನೆಂದರೆ ಪ್ರೇಮದ ಅಧಿದೇವತೆಯಾದ ಮನ್ಮಥ. ದೇವಿಯು ಮನ್ಮಥನಿಂದ ಪೂಜಿಸಲ್ಪಡುತ್ತಾಳೆ. ಪಂಚದಶೀ ಮಂತ್ರವು ಅವಳ ಹನ್ನೆರಡು ಮಹಾನ್ ಭಕ್ತರಿಂದ ರಚಿಸಲ್ಪಟ್ಟಿತು ಮತ್ತು ಅವರಲ್ಲಿ ಮನ್ಮಥನೂ ಒಬ್ಬನು. ಈ ಎಲ್ಲಾ ಮಹಾನ್ ಭಕ್ತರ ಹೆಸರುಗಳನ್ನು ನಾಮ ೨೩೮ರ ಚರ್ಚೆಯಲ್ಲಿ ಕೊಡಲಾಗಿದೆ.
ಕಾಮಃ (कामः) ಎಂದರೆ ಅದು ಮಹಾ ಕಾಮೇಶ್ವರ (ಶಿವನ ಪರಮೋನ್ನತ ರೂಪ) ಎನ್ನುವ ಅರ್ಥವನ್ನು ಕೊಡುತ್ತದೆ ಮತ್ತು ಅವನೂ ಸಹ ದೇವಿಯ ಮಹಾನ್ ಭಕ್ತನಾಗಿದ್ದಾನೆ. ಬಹುಶಃ ಈ ನಾಮವು ಮಹಾ ಕಾಮೇಶ್ವರನ ಪೂಜೆಯ ಕುರಿತಾಗಿ ಉಲ್ಲೇಖಿಸಬಹುದು, ಏಕೆಂದರೆ ಶಕ್ತಿಯಿಲ್ಲದಿದ್ದರೆ ಶಿವನೊಬ್ಬನೇ ಕಾರ್ಯನಿರ್ವಹಿಸಲಾರ. ಶಿವ ಮತ್ತು ಶಕ್ತಿಯರು ಪರ್ಯಾಯವಾಗಿ ಗುರು ಮತ್ತು ಶಿಷ್ಯರ ಪಾತ್ರಗಳನ್ನು ವಹಿಸಿದರು. ಅನೇಕ ಸಂದರ್ಭಗಳಲ್ಲಿ ಶಿವನು ಶಕ್ತಿಗೆ ಮಂತ್ರ ಹಾಗೂ ಶಾಸ್ತ್ರಗಳ ವಿಷಯವಾಗಿ ಉಪದೇಶಿಸಿದರೆ ಮತ್ತೆ ಕೆಲವೊಂದು ಸಂದರ್ಭಗಳಲ್ಲಿ ಶಕ್ತಿಯು ಶಿವನಿಗೆ ಉಪದೇಶಿಸಿದಳು. ಲಲಿತಾ ತ್ರಿಶತಿಯ ಪೂರ್ವ ಭಾಗದಲ್ಲಿ (೯ನೇ ಸ್ತುತಿ), ಲಲಿತಾ ತ್ರಿಶತಿಯು ಹಯಗ್ರೀವನಿಗೆ ಕಾಮೇಶ್ವರ ಮತ್ತು ಕಾಮೇಶ್ವರಿಯರೀರ್ವರಿಂದ ಸಂಯುಕ್ತವಾಗಿ ಉಪದೇಶಿಸಲ್ಪಟ್ಟಿತು ಎಂದು ಹೇಳಲಾಗಿದೆ. ಲಲಿತಾ ತ್ರಿಶತಿಯು ಅತ್ಯಂತ ಶ್ರೇಷ್ಠವಾಗಿದ್ದು ಅದು ಮುನ್ನೂರು ನಾಮಗಳನ್ನು ಒಳಗೊಂಡಿದೆ.
ಕಾಮ ಎನ್ನುವುದು ಶರೀರ ರಹಿತ ಮನ್ಮಥನ ಪ್ರತ್ಯೇಕತೆಯನ್ನು ಹೇಳುತ್ತದೆ (ಮನ್ ಎಂದರೆ ಮನಸ್ಸು ಮತ್ತು ಮಥ ಎಂದರೆ ಮಥನವನ್ನು ಕೈಗೊಳ್ಳುವುದು/ ಕಡೆಯುವುದು. ಆದ್ದರಿಂದ ಮನ್ಮಥ ಎಂದರೆ ಆಸೆಗಳಿಂದ ಕೂಡಿರುವ ಮನಸ್ಸಿನ ಮಥನವನ್ನು ಮಾಡುವುದು). ಲಿಂಗ ಪುರಾಣದ ೧೦೧ನೇ ಅಧ್ಯಾಯದಲ್ಲಿ ಶರೀರವಿಲ್ಲದ ಮನ್ಮಥನ ಕುರಿತಾದ ಒಂದು ಕಥೆಯಿದೆ. ಶಿವನು ತನ್ನ ಹೆಂಡತಿಯಾದ ಉಮೆಯನ್ನು ಮರೆತು ತಪೋನಿರತನಾಗಿದ್ದ. ಬ್ರಹ್ಮ ಮತ್ತು ಇಂದ್ರರು ಮನ್ಮಥ ಹಾಗೂ ಅವನ ಹೆಂಡತಿಯಾದ ರತಿಯನ್ನು ಬರಹೇಳಿ ಶಿವನ ತಪೋಭಂಗ ಮಾಡಿ ಉಮೆ ಮತ್ತು ಶಿವರನ್ನು ಒಂದುಗೂಡಿಸುವಂತೆ ಆದೇಶಿಸಿದರು. ಮನ್ಮಥ ಹಾಗೂ ರತಿಯರು ಶಿವನು ತಪವನ್ನು ಕೈಗೊಳ್ಳುತ್ತಿದ್ದ ಗುಹೆಯನ್ನು ಸೇರಿಕೊಂಡರು. ಶಿವನಿಗೆ ಮನ್ಮಥನ ಭೇಟಿಯ ಉದ್ಧೇಶವು ತಿಳಿದಿತ್ತು. ಆಗ ಶಿವನ ಮೂರನೆಯ ಕಣ್ಣಿನಿಂದ ಜ್ವಾಲೆಯು ಉದ್ಭವವಾಗಿ ಅದು ಮನ್ಮಥನನ್ನು ಸುಟ್ಟು ಹಾಕಿತು. ಮನ್ಮಥನ ಬಳಿಯಲ್ಲಿ ನಿಂತಿದ್ದ ರತಿಯು ಸಮಾಧಾನಗೊಳಿಸಲಾಗದಂತಹ ರೋಧನವನ್ನು ಮಾಡಿದಳು. ಆಗ ಶಿವನು ಅವಳ ಮೇಲೆ ಕರುಣೆಗೊಂಡು ಅವಳೊಂದಿಗೆ ಸಲ್ಲಾಪ ಮಾಡಲು ಮನ್ಮಥನಿಗೆ ಶರೀರ ರಹಿತ ರೂಪವನ್ನು ಕೊಟ್ಟ. ಈ ನಾಮದ ಹಿಂದಿರುವ ಉದ್ದೇಶವೇನೆಂದರೆ ಮಾನಸಿಕ ಪೂಜೆಗೆ ಮೂರ್ತರೂಪದ ಅವಶ್ಯಕತೆಯಿಲ್ಲವೆಂದು. ಮಾನಸಿಕ ಪೂಜೆಗೆ (ಧ್ಯಾನಕ್ಕೆ) ಹೋಲಿಸಿದಾಗ ಎರಡನೇ ದರ್ಜೆಯ ಪೂಜೆಯಿನಿಸುಕೊಳ್ಳುವ ಪೂಜಾಚರಣೆಗಳಿಗೆ ಮಾತ್ರವೇ ಮೂರ್ತರೂಪದ ಅವಶ್ಯಕತೆಯಿರುತ್ತದೆ. ಶಿವ ಮತ್ತು ಶಕ್ತಿಯರ (ಪ್ರಕಾಶ ಮತ್ತು ವಿಮರ್ಶ ರೂಪಗಳು) ಮೂಲಭೂತ ಲಕ್ಷಣಗಳನ್ನು ಅರಿಯದೇ ಮಾಡುವ ಪೂಜೆಯು ಫಲಪ್ರದವಾಗಿರಲಾರದು ಎನ್ನುವುದನ್ನು ಪರೋಕ್ಷವಾಗಿ ಈ ನಾಮವು ಹೇಳುತ್ತದೆ. ಮನ್ಮಥನ ಕುರಿತಾಗಿ ಹೆಚ್ಚಿನ ವಿವರಗಳಿಗೆ ನಾಮ ೮೪ ಹಾಗೂ ೩೭೫ನೇ ನಾಮಗಳನ್ನು ನೋಡಿ.
ಸೌಂದರ್ಯ ಲಹರಿಯು (ಶ್ಲೋಕ ೫) ಹೀಗೆ ಹೇಳುತ್ತದೆ, “ಮನ್ಮಥನು ಶಕ್ತಿಯ ಪೂಜೆಯನ್ನು ಮಾಡುವುದರ ಮೂಲಕ ಕಾಮನೆಗಳನ್ನು ಕೆರಳಿಸುವ ತನ್ನ ಶಕ್ತಿಯನ್ನು ಪಡೆದ”. ಪಂಚದಶೀ ಮಂತ್ರವು ಹದಿನೈದು ಬೀಜಾಕ್ಷರಗಳನ್ನು ಒಳಗೊಂಡಿದೆ. ಅದರಲ್ಲಿ ಪುನಾರಾವೃತವಾವಾಗಿರುವ ಬೀಜಾಕ್ಷರಗಳನ್ನು ತೆಗೆದು ಹಾಕಿದರೆ ಅದರಲ್ಲಿ ಒಂಬತ್ತು ಬೀಜಾಕ್ಷರಗಳು ಉಳಿಯುತ್ತವೆ. ವಿಷ್ಣುವಿನ ಸಂಗಾತಿಯಾದ ಮಹಾಲಕ್ಷ್ಮಿಯು ಮನ್ಮಥನಿಗೆ ಲಲಿತಾಂಬಿಕೆಯ ಕುರಿತಾದ ೧೦೮ ನಾಮಗಳನ್ನು (ಒಂಬತ್ತನ್ನು ಹನ್ನೆರಡರಿಂದ ಗುಣಿಸಿದಾಗ ಬರುವ ೧೦೮ ಸಂಖ್ಯೆ) ಹೇಳಿಕೊಟ್ಟಳು, ಅವೆಲ್ಲವೂ ಪಂಚದಶೀ ಮಂತ್ರದ ಒಂಬತ್ತು ಬೀಜಾಕ್ಷರಗಳಿಂದ ಮೊದಲಾಗುತ್ತವೆ.
Śrī-ṣoḍaśākṣarī-vidyā श्री-षोडशाक्षरी-विद्या (587)
೫೮೭. ಶ್ರೀ-ಷೋಡಶಾಕ್ಷರೀ-ವಿದ್ಯಾ
ಷೋಡಶೀ ಮಂತ್ರವು ಪಂಚದಶೀ ಮಂತ್ರಕ್ಕಿಂತ ಶ್ರೇಷ್ಠವಾದದ್ದು. ಷೋಡಶಾನ್ ಎಂದರೆ ಹದಿನಾರು ಮತ್ತು ಷೋಡಶಃ ಎಂದರೆ ಹದಿನಾರನೇ ಎಂದರ್ಥ. ಷೋಡಶೀ ಮಂತ್ರವನ್ನು ಪಂಚದಶೀ ಮಂತ್ರಕ್ಕೆ ಮತ್ತೊಂದು ಬೀಜಾಕ್ಷರವನ್ನು ಸೇರಿಸುವುದರ ಮೂಲಕ ಪಡೆಯಲಾಗಿದೆ. ವಾಸ್ತವವಾಗಿ ಷೋಡಶೀ ಮಂತ್ರವು ಇಪ್ಪತ್ತೆಂಟು ಅಕ್ಷರಗಳನ್ನು ಒಳಗೊಂಡಿದ್ದು ಅವನ್ನು ಈ ವಿಧವಾಗಿ ರಚಿಸಲಾಗಿದೆ. ಮೊದಲನೇ ಓಂ (ॐ) ಅಕ್ಷರವನ್ನು ಗಣೆನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಏಕೆಂದರೆ ಎಲ್ಲಾ ಮಂತ್ರಗಳೂ ॐನಿಂದ ಪ್ರಾರಂಭವಾಗುತ್ತವೆಯಾದ್ದರಿಂದ.
೧. ಓಂ ॐ
೨. ಶ್ರೀಂ ಹ್ರೀಂ ಕ್ಲೀಂ ಐಂ ಸೌಃ: श्रीं ह्रीं क्लीं ऐं सौः (೫ ಬೀಜಾಕ್ಷರಗಳು)
೩. ಓಂ ಹ್ರೀಂ ಶ್ರೀಂ ॐ ह्रीं श्रीं (೩ ಬೀಜಾಕ್ಷರಗಳು)
೪. ಕ ಏ ಈ ಲ ಹ್ರೀಂ क ए ई ल ह्रीं (೫ ಬೀಜಾಕ್ಷರಗಳು)
೫. ಹ ಸ ಕ ಹ ಲ ಹ್ರೀಂ ह स क ह ल ह्रीं (೬ ಬೀಜಾಕ್ಷರಗಳು)
೬. ಸ ಕ ಲ ಹ್ರೀಂ स क ल ह्रीं (೪ ಬೀಜಾಕ್ಷರಗಳು)
೭. ಸೌಃ ಐಂ ಕ್ಲೀಂ ಹ್ರೀಂ ಶ್ರೀಂ सौः ऐं क्लीं ह्रीं श्रीं (೫ ಬೀಜಾಕ್ಷರಗಳು)
ಈ ಮಂತ್ರವನ್ನು ಗಮನಿಸಿದರೆ, ೪,೫ ಮತ್ತು ೬ನೇ ಸಾಲುಗಳು ಪಂಚದಶೀ ಮಂತ್ರವಾಗಿದ್ದು ಪ್ರತಿಯೊಂದು ಸಾಲೂ ಸಹ ಪಂಚದಶೀ ಮಂತ್ರದ ಒಂದೊಂದು ಕೂಟವನ್ನು ಪ್ರತಿನಿಧಿಸುತ್ತವೆ ಎನ್ನುವುದು ವೇದ್ಯವಾಗುತ್ತದೆ. ೨ನೇ ಮತ್ತು ೭ನೇ ಸಾಲುಗಳನ್ನು ಗಮನಿಸಿದರೆ, ೨ನೇ ಸಾಲಿನ ಬೀಜಾಕ್ಷರಗಳನ್ನು ೭ನೇ ಸಾಲಿನಲ್ಲಿ ಹಿಮ್ಮುಖವಾಗಿ ಇರಿಸಲ್ಪಟ್ಟಿವೆ. ಉದಾಹರಣೆಗೆ, ಎರಡನೇ ಸಾಲಿನಲ್ಲಿರುವ ಕಡೆಯ ಅಕ್ಷರವು ಸೌಃ ಆಗಿದ್ದರೆ, ಇದೇ ಅಕ್ಷರವನ್ನು ಏಳನೇ ಸಾಲಿನಲ್ಲಿ ಪ್ರಥಮ ಅಕ್ಷರವಾಗಿ ಇರಿಸಲಾಗಿದೆ.
ಹದಿನಾರು ಬೀಜಾಕ್ಷರಗಳಿರುವುದರಿಂದ ಈ ಮಂತ್ರವನ್ನು ಷೋಡಶೀ ಎಂದು ಕರೆಯಲಾಗುತ್ತದೆ ಮತ್ತು ಒಂದೊಂದು ’ಕಲಾ’ವು (ಕಲಾ ಎಂದರೆ ಭಾಗ) ಚಂದ್ರನ ಒಂದೊಂದು ’ಕಲಾ’ವನ್ನು ಪ್ರತಿನಿಧಿಸುತ್ತದೆ. ಪಂಚದಶೀ ಮಂತ್ರಕ್ಕೆ ಲಕ್ಷ್ಮೀ ಬೀಜವಾದ ಶ್ರೀಂ (श्रीं) ಅನ್ನು ಸೇರಿಸುವುದರ ಮೂಲಕ ಷೋಡಶೀ ಮಂತ್ರವನ್ನು ಪಡೆಯಲಾಗಿದೆ. ಪಂಚದಶೀ ಮಂತ್ರದ ಒಂದೊಂದು ಕೂಟವನ್ನು ಒಂದೊಂದು ಬೀಜವಾಗಿ ಪರಿಗಣಿಸಿ ಈ ಹದಿನಾರು ಬೀಜಗಳನ್ನು ನಿಷ್ಪತ್ತಿಗೊಳಿಸಲಾಗಿದೆ. ಈ ವಿಧವಾಗಿ ೪,೫ ಮತ್ತು ೬ನೇ ಸಾಲುಗಳನ್ನು ಒಂದೊಂದು ಬೀಜವಾಗಿ ಪರಿಗಣಿಸಿ ಮೂರು ಬೀಜಗಳಾಗಿ ಲೆಕ್ಕಿಸಲಾಗುತ್ತದೆ. ೫+೩+೧+೧+೧+೫=೧೬; ಈ ವಿಧವಾಗಿ ೨ರಿಂದ ೭ನೇ ಸಾಲುಗಳನ್ನು ಕೂಡಿಸುವುದರಿಂದ ಹದಿನಾರು ಬೀಜಾಕ್ಷರಗಳನ್ನು ಪಡೆಯಲಾಗಿದೆ. ಈ ಮಂತ್ರದಲ್ಲಿ ಎರಡು ॐ’ಗಳಿವೆ. ಅದರಲ್ಲಿರುವ ಮೊದಲನೇ ॐ ಅನ್ನು ಬೀಜಾಕ್ಷರಗಳನ್ನು ಲೆಕ್ಕ ಮಾಡುವಾಗ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಮೂರನೇ ಸಾಲಿನಲ್ಲಿರುವ ಎರಡನೇ ॐ ಇರುವ ಜಾಗದಲ್ಲಿ ಸಾಧಕನ ಆತ್ಮ ಬೀಜವನ್ನಿರಸಲಾಗುತ್ತದೆ; ಇದನ್ನು ಅವನ ಆಧ್ಯಾತ್ಮಿಕ ಗುರುವು ನಿರ್ಣಯಿಸುತ್ತಾನೆ. ಮಂತ್ರಗಳು ಮತ್ತು ಬೀಜಾಕ್ಷರಗಳಲ್ಲಿ ಪರಿಣಿತಿ ಹೊಂದಿದ ಗುರುವು ಮಾತ್ರವೇ ಅಂತಹ ನಿರ್ಣಯಗಳನ್ನು ಮಾಡಬಲ್ಲ. ಒಂದು ತಪ್ಪು ಬೀಜಾಕ್ಷರವು ಸಾಧಕನನ್ನು ನಾಶ ಮಾಡುವ ಶಕ್ತಿಯನ್ನು ಹೊಂದಿರುತ್ತದೆ.
ಷೋಡಶೀ ಮಂತ್ರವು ವಿಶೇಷವಾಗಿ ಮುಕ್ತಿಯನ್ನು ಬಯಸುವವರಿಗಾಗಿ ಉದ್ದೇಶಿಸಲ್ಪಟ್ಟಿದೆ ಹಾಗಾಗಿ ಮುಕ್ತಿಯನ್ನು ಹೊಂದ ಬಯಸುವವರಿಗೆ ಮಾತ್ರವೇ ಈ ಮಂತ್ರೋಪದೇಶವನ್ನು ಮಾಡಬೇಕು. ಷೋಡಶೀ ಮಂತ್ರವು ಎಲ್ಲಾ ಮಂತ್ರಗಳಿಗೂ ಅಂತಿಮವಾದದ್ದು ಮತ್ತು ಈ ಮಂತ್ರಕ್ಕಿಂತ ಶ್ರೇಷ್ಠವಾದ ಯಾವುದೇ ಮಂತ್ರವು ಇಲ್ಲ. ಷೋಡಶೀ ಮಂತ್ರವನ್ನು ೯,೦೦,೦೦ (ಒಂಭತ್ತು ಲಕ್ಷ ಬಾರಿ ಜಪಿಸಿದಾಗ) ಅದರ ಫಲವುಂಟಾಗುತ್ತದೆಂದು ಹೇಳಲಾಗುತ್ತದೆ. ಈ ಮಂತ್ರದ ಉಪದೇಶವನ್ನು ಪಡೆದವರು ತನ್ನ ಗುರುವಿನ ಹೊರತಾಗಿ ಬೇರೆ ಯಾರಿಗೂ ಶಿರಬಾಗಿ ಅಥವಾ ದೀರ್ಘದಂಡ ನಮಸ್ಕಾರ ಮಾಡಬಾರದೆನ್ನುವ ಪ್ರತೀತಿ ಇದೆ.
ಶಕ್ತಿ ದೇವತೆಯನ್ನು ಹತ್ತು ವಿವಿಧ ರೂಪಗಳಲ್ಲಿ ಆರಾಧಿಸುತ್ತಾರೆ ಅವುಗಳನ್ನೇ ದಶ ಮಹಾ ವಿದ್ಯಾ ಎನ್ನುತ್ತಾರೆ ಮತ್ತವುಗಳಲ್ಲಿ ಷೋಡಶೀ ಮಂತ್ರವೂ ಒಂದು. ಷೋಡಶೀ ವಿದ್ಯೆಯಲ್ಲಿ ಬಹಳಷ್ಟು ಶಾಸ್ತ್ರವಿಧಿತ ಆಚರಣೆಗಳಿವೆ.
ಸೌಃ ಬೀಜಾಕ್ಷರದ ಕುರಿತಾಗಿ ಹೆಚ್ಚಿನ ವಿವರಣೆ:
ಸೌಃ ಬೀಜಾಕ್ಷರವನ್ನು ಪ್ರಾಸಾದ ಎಂದು ಕರೆಯಲಾಗುತ್ತದೆ (ಶಿವ ಸೂತ್ರ ೨.೧) . ಇದರೊಳಗೆ ಇಡೀ ಸೃಷ್ಟಿ ಕ್ರಿಯೆಯ ಸಮಗ್ರ ನೋಟವೇ ಅಡಗಿದೆ. ಈ ಬೀಜವು ಎಲ್ಲಾ ೩೬ ತತ್ವಗಳನ್ನು ಒಳಗೊಂಡಿದೆ. ಈ ಬೀಜವನ್ನು ಹೃದ್ಯ ಬೀಜ ಅಥವಾ ಶಿವನ ಹೃದಯವೆಂದು ಕರೆಯಲಾಗುತ್ತದೆ. ಯಾರು ಈ ಬೀಜಾಕ್ಷರದ ಮೇಲೆ ಪ್ರಭುತ್ವವನ್ನು ಸಾಧಿಸುತ್ತಾರೆಯೋ ಅವರು ಪರಮೋನ್ನತವಾದ ಆತ್ಮದ (ಪರಮಾತ್ಮನ) ಚೈತನ್ಯದೊಂದಿಗೆ ಏಕವಾಗಿ (ಒಂದಾಗಿ) ಗುರುತಿಸಿಕೊಳ್ಳುತ್ತಾರೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 586-587http://www.manblunder.com/2010/02/lalitha-sahasranamam-586-587.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೧೩೭. ಲಲಿತಾ ಸಹಸ್ರನಾಮ ೫೮೬ರಿಂದ ೫೮೭ನೇ ನಾಮಗಳ ವಿವರಣೆ
ಶ್ರೀಧರರೆ, '೧೩೭. ಶ್ರೀ ಲಲಿತಾ ಸಹಸ್ರನಾಮದ ವಿವರಣೆ'ಯ ಕಾವ್ಯಸಾರ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೫೮೬-೫೮೭
__________________________________________
.
೫೮೬. ಕಾಮಸೇವಿತಾ
ಯಾರು ಯಾರಿಗೆ ಗುರು-ಶಿಷ್ಯರು, ಶಿವಶಕ್ತಿ ಪರಸ್ಪರರಿಗೆ ಭೋಧಿಸುತ
ಕಾಮೇಶ್ವರ ಕಾಮೇಶ್ವರಿ ತ್ರಿಶತಿ, ಹಯಗ್ರೀವಗೆ ಸಂಯುಕ್ತೋಪದೇಶಿತ
ದ್ವಾದಶ ಮಹಾಭಕ್ತರಲಿ ಮನ್ಮಥ, ಪಂಚದಶೀ ಮಂತ್ರ ರಚಿಸಿದಾ ಚಿತ್ತ
ಪ್ರೇಮದಧಿದೇವತೆಯ ಅವಿರತ ಸೇವೆಯಲಿಹ ಲಲಿತೆ ಕಾಮಸೇವಿತಾ ||
.
ಮನಸಿನ ಮಥನವೆ ಮನ್ಮಥ, ಆಸೆಗಳೊಡಮೂಡಿಸೊ ಪ್ರೇಮರಥ
ತಪೋನಿರತ ಶಿವೆಗುಮೆಯನು ವರಿಸಲು, ರತಿ ಮನ್ಮಥ ಭಗೀರಥ
ಕಾಮೇಶ್ವರನುರಿಗಣ್ಣಲಿ ಭಸ್ಮ, ಪ್ರಲಾಪವಿಲಾಪ ಸತಿರತಿ ರೋಧನ
ಮಾನಸಿಕ ಪೂಜೆಗಲ್ಲ ಮೂರ್ತರೂಪ, ವರಕಾಮನಾಗಿ ತನುರಹಿತ ||
.
ಪಂಚದಶೀ ಹದಿನೈದು ಬೀಜಾಕ್ಷರ, ಪುನರಾವರ್ತನೆಯಿರದ ಒಂಭತ್ತು
ಹನ್ನೆರಡು ಗುಣಿಸೆ ನೂರೆಂಟು ನಾಮ, ಈ ನವಬೀಜಾಕ್ಷರ ಮೊದಲಿತ್ತು
ಮನ್ಮಥನಿಗೆ ಕಲಿಸೆ ವಿಷ್ಣುಸಂಗಾತಿ ಮಹಾಲಕ್ಷ್ಮಿ, ಮಾಡಿದ ಪೂಜಾ ಶಕ್ತಿ
ಕಾಮನೆ ಕೆರಳಿಸುವ ಶಕ್ತಿ ವರ ಪಡೆದ ಕಥೆ ಸೌಂದರ್ಯಲಹರಿಯಲುಕ್ತಿ ||
.
೫೮೭. ಶ್ರೀ-ಷೋಡಶಾಕ್ಷರೀ-ವಿದ್ಯಾ
ಪಂಚದಶೀ ಮೀರಿದ ಮಂತ್ರ ಷೋಡಶೀ, ಹೆಚ್ಚುವರಿ ಷೋಡಶಃ ಬೀಜಾಕ್ಷರ
ವಾಸ್ತವದಲಿ ಇಪ್ಪತ್ತೆಂಟಕ್ಷರ ಜೋಡಣೆ, ಲೆಕ್ಕವಿಡದ 'ಓಂ' ಪ್ರಾರಂಭಾಕ್ಷರ
ನಾಲ್ಕರಿಂದಾರನೆ ಸಾಲು ಪಂಚದಶೀ ಮಂತ್ರದ ಸಾಲ್ಕೂಟ ಪ್ರತಿನಿಧಿಸುತ
ಎರಡನೆ ಸಾಲಿನ ಹಿಮ್ಮುಖ ಏಳನೆ ಸಾಲಾಗಿ ವ್ಯಕ್ತ, ಸಂಪುಟೀಕರಣ ಸುತ್ತ ||
.
ಷೋಡಶೀ ನಾಮಧೇಯದ ಪ್ರತಿಭಾಗ, ಚಂದ್ರನೊಂದೊಂದು 'ಕಲಾ' ಪ್ರತಿನಿಧಿಸಿ
ಪಂಚದಶೀ ಜತೆ 'ಶ್ರೀಂ' ಲಕ್ಷ್ಮೀಬೀಜ, ಪ್ರತಿಕೂಟವಾಗೊಂದು ಬೀಜಾಕ್ಷರ ಷೋಡಶೀ
ಪಂಚದಶೀ ಮೂರು ಬೀಜದ ಲೆಕ್ಕ, ಸಾಲೆರಡರಿಂದೇಳು ಹದಿನಾರಾಗುತ ಮಂತ್ರ
ಗಣಿಸದೆ ಮೊದಲ ಪ್ರಣವ, ಮೂರನೆ ಸಾಲಲಿ ಬರುವ ಸಾಧಕನಾತ್ಮಬೀಜಸೂಕ್ತ ||
.
ಮಂತ್ರಗಳಿಗಂತಿಮ ಮಂತ್ರ, ಮುಕ್ತಿಗೆ ಸುಸೂತ್ರ ಶ್ರೇಷ್ಠಾತಿಶ್ರೇಷ್ಠ ಷೋಡಶೀ
ಶಕ್ತಿಪೂಜೆಯ ದಶಮಹಾವಿದ್ಯೆಯಲೊಂದು, ಜಪಿಸಲೊಂಭತ್ತುಲಕ್ಷ ಫಲಿಸಿ
ಸೌಃ ಬೀಜಾಕ್ಷರ ಪ್ರಾಸಾದ ಸಕಲತತ್ವ ಹೃದ್ಯ ಬೀಜ, ಸೃಷ್ಟಿಕ್ರಿಯಾ ಸಮಗ್ರ
ವ್ಯಕ್ತಾತ್ಮ ಪರಮಾತ್ಮ ಏಕತಾಭಾವ, ಗುರುಗಷ್ಟೆ ದೀರ್ಘದಂಡ ಬಾಗಿಸಿ ಶಿರ ||
.
ಪಂಚದಶೀ ಹದಿನೈದು ಬೀಜಾಕ್ಷರ, ಷೋಡಶಿಯಲಿ ನಾಲ್ಕು-ಐದು-ಆರನೆ ಸಾಲು
ಎರಡನೆ ಸಾಲಿನ ಹಿಮ್ಮುಖಾ ಏಳನೆ ಸಾಲು, ಕವಚೀಕರಣದಶಕ್ತಿ ನಷ್ಟವಾಗದೆಲ್ಲು
'ಓಂ' ಜತೆಗಿಟ್ಟಾ ಷೋಡಶೀ ಪೂರಾ - ಓಂ, ಶ್ರೀಂ-ಹ್ರೀಂ-ಕ್ಲೀಂ-ಐಂ-ಸೌಃ, ಓಂ-ಹ್ರೀಂ-ಶ್ರೀಂ
ಕ-ಏ-ಈ-ಲ-ಹ್ರೀಂ, ಹ-ಸ-ಕ-ಹ-ಲ-ಹ್ರೀಂ, ಸ-ಕ-ಲ-ಹ್ರೀಂ, ಸೌಃ-ಐಂ-ಕ್ಲೀಂ-ಹ್ರೀಂ-ಶ್ರೀಂ ||
.
.
- ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು