ಶೂರ್ಪನಖಿ, ಆಹಾ! ಎಂಥಾ ಸುಖಿ!

ಶೂರ್ಪನಖಿ, ಆಹಾ! ಎಂಥಾ ಸುಖಿ!

________________________________________________________________________
ನಮ್ಮ ಟೀವಿ ಸೀರಿಯಲ್ಗಳಲ್ಲಿ ಬರುವ ಹೆಣ್ಣು ವಿಲನ್ ಪಾತ್ರಗಳಿಗೆಲ್ಲ ಈ ಶೂರ್ಪನಖಿ ಪಾತ್ರವೂ ಸ್ಪೂರ್ತಿಯಿರಬಹುದೆ?
________________________________________________________________________

ಬಹುಶಃ ರಾಮಾಯಣದ ಪಾತ್ರಗಳನ್ನು ವಿಶ್ಲೇಷಣೆಗೆ ಪರಿಗಣಿಸಿದಾಗ, ಅದರಲ್ಲೂ ಮಹಿಳೆಯ ಪಾತ್ರದ ವಿಷಯಕ್ಕೆ ಬಂದರೆ ಸೀತೆ, ಕೈಕೆ, ಮಂಡೋದರಿ, ಮಂಥರೆ ಹೀಗೆ ಎಷ್ಟೊ ಪಾತ್ರಗಳು ಕಣ್ಮುಂದೆ ನಿಲ್ಲುತ್ತವೆ. ಆದರೆ ಅವುಗಳ ನಡುವೆ ಸಾಮಾನ್ಯವಾಗಿ ಯಾರೂ ಪರಿಗಣಿಸದ ಒಂದು ವಿಶೇಷ ಪಾತ್ರವೆಂದರೆ ಶೂರ್ಪನಖಿಯದು. ತೀರಾ ಪ್ರಖರವಾಗಿ ಎದ್ದು ಕಾಣದೆ,  ತೆಳುವಾದ ಮೇಲುಸ್ತರದಲ್ಲೆ ಮುಲುಗಾಡುವ ಈ ಪಾತ್ರ ಇಡಿ ರಾಮಾಯಣದಲ್ಲಿ ಬಂದು ಹೋಗುವ ಆವರ್ತಗಳ ಗಣನೆಯಲ್ಲಿ ಕೆಲವೆ ಕೆಲವಾದರೂ, ಆ ಪಾತ್ರ ಇಡಿ ರಾಮಾಯಣ ಕಥನದಲ್ಲುಂಟುಮಾಡುವ ಪರಿಣಾಮ ನೋಡಿದರೆ, ಈ ಪಾತ್ರದ ಕುರಿತು ಅಷ್ಟಾಗಿ ಪರಿಶೀಲನೆ, ವಿಶ್ಲೇಷಣೆ ನಡೆದಿಲ್ಲವೆಂದೆ ಕಾಣುತ್ತದೆ. ಅಂತಹ ಒಂದು ಒಳನೋಟದ ಪ್ರಯತ್ನ ಈ ಕಾವ್ಯ ಕಥನ. 

ಆ ಕಾಲದಲೆ ಕಾರ್ಯತಂತ್ರಜ್ಞೆ, ಕುಶಾಗ್ರಮತಿ ಸುಖಿ
ರಾವಣನೆಂಬೊಬ್ಬ ರಾಕ್ಷಸರಾಜನ ತಂಗಿ ಶೂರ್ಪನಖಿ
ಅಬ್ಬಬ್ಬಾ ಏನು ಜಾಣೆ, ಬಂಗಾರವನೆ ನುಂಗುವ ಮಣಿ
ಗಂಡಸರೆಲ್ಲರನಾಡಿಸಿದಳೆ ಬುಗುರಿ, ಬರಿಮಾತಲೇಣಿ || 01 ||

ಮೇಲ್ನೋಟಕ್ಕೆ ರಾವಣೇಶ್ವರನ ತಂಗಿಯಾಗಿ ಸಾಧಾರಣ ಉಂಡಾಡಿ ಗುಂಡಳ ತರದ ಸಾಮಾನ್ಯ ಹೆಣ್ಣಾಗಿ ಕಾಣುವ ಈಕೆ, ತುಸು ಆಳಕಿಳಿದರೆ ಅಷ್ಟು ಸರಳ ಹೆಣ್ಣೆಂದೇನು ಅನಿಸುವುದಿಲ್ಲ. ಮೊದಲಿಗೆ ಕಂಡುಬರುವ ವಿಶೇಷತೆಯೆಂದರೆ ಅವಳ ಚಾತುರ್ಯಪೂರ್ಣ ಕಾರ್ಯತಂತ್ರ (ಸ್ಟ್ರಾಟೆಜಿಕ್ ಅಪ್ರೋಚ್). ತನ್ನ ಸ್ವಂತ ಬಯಕೆಯ ಈಡೇರಿಕೆಗಾಗಿ ಅವಳ್ಹಿಡಿದ ಈ ಹಾದಿಯಲ್ಲಿ ಬರಿ ಚತುರ ಮಾತಷ್ಟೆ ಬಂಡವಾಳ. ಅಷ್ಟೊಂದು ಸರಾಗವಾಗಿ ರಾವಣೇಶ್ವರನನ್ನು ಮಾತಿನ ಮೂಲಕ ಸೇಡಿನ ಬಲೆಗೆ ಕೆಡವಿದಳೆಂದರೆ ಒಂದೊ ಅವಳ ನಟನಾ ಚಾತುರ್ಯ ಅಪರಿಮಿತವಿರಬೇಕು, ಇಲ್ಲವೆ ರಾವಣನಿಗವಳ ಮೇಲಿದ್ದ ಕುರುಡು ಸೋದರ ಪ್ರೇಮ ಅಮಿತವಿರಬೇಕು. ರಾವಣನಿಗೆಷ್ಟೆ ಅಕ್ಕರೆಯಿದ್ದರೂ ಅದು ಕುರುಡು ಪ್ರೇಮದ ಮಟ್ಟಕ್ಕಿರಲಾರದಾದ್ದರಿಂದ, ಮೊದಲನೆಯ ಅನಿಸಿಕೆಯೆ ಹೆಚ್ಚು ಸಮಂಜಸವಿರಬೇಕೆನಿಸುತ್ತದೆ. ಆ ಸಾಮರ್ಥ್ಯವನ್ನು ಬಳಸಿಕೊಂಡೆ ಮಾತಲೆ ಬಂಗಾರದ ಮುಸುಕೊದಿಸಿ, ಮೊದಲು ರಾವಣನ ಮೇಲೆ, ನಂತರ ಮಡಿವಾಳ ಪತಿಯ ಮೇಲೆ ಅದೆಂತದೊ ವಶೀಕರಣ ಪ್ರಭಾವ ಬೀರಿ ಅವರಿಬ್ಬರನ್ನು ತನ್ನ ತಾಳಕ್ಕೆ ತಕ್ಕ ಹಾಗೆ ಕುಣಿಸುವಲ್ಲಿ ಯಶಸ್ವಿಯಾದಳು. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ - ಆ ಕಾರ್ಯತಂತ್ರದ ಹಿಂದಿದ್ದ ಮೆದುಳಿನ ಚಾಣಾಕ್ಷತೆ.

ಮಾತೆ ಬಂಡವಾಳ, ಮಾತಾಳಿ ಉಂಡಾಡಿಕೊಂಡವಳ
ದಂಡಕಾರಣ್ಯದಲಿ ಸುತ್ತುತ, ರಾಮಚಂದ್ರನ ಕಂಡಳಾ
ಸುರ ಸುಂದರನ ಕಂಡಾಗ, ಬರದಿದ್ದೀತೆ ಮೋಹದುರಿ
ನಾಚಿಕೆಯಿಲ್ಲದ ಹೆಣ್ಣಿನ, ನಿವೇದನೆ ಬಯಕೆಯ ಭೂರಿ || 02 ||

ಮದಿಸಿದ ಹೆಣ್ಣಾಗಿ ಗರ್ವದಿಂದ, ಅಂಕೆ ಶಂಕೆಯಿಲ್ಲದೆ ಸಿಕ್ಕಿದ ಕಡೆ ಸುತ್ತಿಕೊಂಡು ಉಂಡಾಡಿಯಾಗಿ ಅಲೆದಾಡಿಕೊಂಡಿದ್ದ ಹೆಣ್ಣಿವಳು. ಹಾಗೆ ಕಾಡಿನಲ್ಲಲೆಯುವಾಗ ಪಿತೃವಾಕ್ಯ ಪರಿಪಾಲನೆಗಾಗಿ ವನವಾಸಕ್ಕೆ ತೆರಳಿದ್ದ ಶ್ರೀರಾಮನೆ ಇವಳ ಕಣ್ಣಿಗೆ ಬೀಳಬೇಕೆ? ಸರಿ, ಮೊದಲೆ ಎಡಬಿಡಂಗಿ ರಕ್ಕಸಿ ಮನೋಭಾವದ ಧೂರ್ತ ವನಿತೆ. ಶ್ರೀರಾಮನ ಮಂಗಳ ಮೂರ್ತಿ ಕಣ್ಣಿಗೆ ಬಿದ್ದದ್ದೆ ತಡ, ಅವಳ ಮನದಲುಂಟಾದ ಕಾಮ ವಿಕಾರ ಮನೋವೇದನೆಯಾಗಿ ಪರಿಣಮಿಸಿ ಅವನಾಗಲೆ ಗೃಹಸ್ಥಾಶ್ರಮದ ಮೆಟ್ಟಿಲೇರಿದವನು ಎಂಬುದನ್ನು ಪರಿಗಣಿಸದೆ, ಅವನ ಮುಂದಿನ ಪ್ರೇಮ ನಿವೇದನೆಯಾಗಿಬಿಡುತ್ತದೆ. ಬಯಕೆ, ಆಸೆ, ಕಲ್ಪನೆಗಳ ಭೂರಿ ಭೋಜನವನ್ನು ಮನದಲೆ ಮೆದ್ದು ಅವನ ಮುಂದೆ ನಾಚಿಕೆ, ಸಂಕೋಚಗಳ ಲವಲೇಶದಿನಿತೂ ಇಲ್ಲದೆ ತನ್ನ ಕಾಮ ಪ್ರೇರಿತ ಪ್ರೇಮ ಪ್ರಸ್ತಾಪವನ್ನಿಡುತ್ತಾಳೆ. 

ಏಕಪತ್ನಿವ್ರತಸ್ತ ರಾಮ, ಏಕಾದಾನು ವಿಚಲಿತ ಧೂಮ
ಅತಿಶಯದಪರೂಪ, ಸೌಂದರ್ಯ ರಾಶಿ ಸೀತಾಮಯ 
ಪಶುವಿನುದ್ದದ ಕರ್ಣ ನಖಗಳಾಭರಣ ಆರಾವಣ ಕೇಶಿ
ನಸುನಕ್ಕು ತೋರಿಸೆ ಸೀತೆ, ಲಕ್ಷ್ಮಣನತ್ತ ಗಮನ ಹರಿಸಿ || 03 ||

ಆದರೆ ಆ ಮದನ ಬಾಣ ರಾಮನನ್ನು ಸೋಕೀತೆ? ಮೊದಲೆ ಏಕಪತ್ನಿ ವ್ರತಸ್ತ.  ಜತೆಗೆ ಜಗನ್ಮೋಹಿನಿಯಂತಹ ಅತಿಶಯದ ಸುಗುಣವಂತೆ, ಸೌಂದರ್ಯವತಿ ಸೀತೆಯನ್ನಾಗಲೆ ಪತ್ನಿಯನ್ನಾಗಿ ಸ್ವೀಕರಿಸಿದಾತ. ಅಂತಹ ತಂಪಾದ ಪೌರ್ಣಿಮೆ ಚಂದ್ರಮನೆ ಕೈಯಲಿರುವಾಗ, ಬೆಂಕಿಯುಗುಳುವ ತಾರಕೆ ಧೂಮಕೇತುಗಳತ್ತ ಮನ ಹರಿದೀತೆ? ಶೂರ್ಪನಖಿಯ ಇಂಗಿತಾಹ್ವಾನಗಳಿಂದ ವಿಚಲಿತನಾಗದ ರಾಮಚಂದ್ರ, ದೂರದಲಿ ಆಶ್ರಮ ಕುಟೀರದಲಿ ಗೃಹಕೃತ್ಯ ನಿರತಳಾಗಿದ್ದ ಮತ್ತು ತಾನು ಪಾಣಿಗ್ರಹಣಗೈದ ಸೀತೆಯತ್ತ ಬೊಟ್ಟು ಮಾಡಿ ತೋರಿಸುತ್ತಾನೆ, ತಾನಾಗಲೆ ವಿವಾಹಿತನೆಂದು. ಹಾಗೂ ಒಂದು ವೇಳೆ ವಿವಾಹಿತನೆ ಅಲ್ಲದಿದ್ದ ಪಕ್ಷದಲ್ಲೂ ಆ ರಾಕ್ಷಸಿ ಕಿವಿ, ಮೂಗು, ನಖಗಳ ಬಿಚ್ಚುಗೂದಲ ಗಂಡುಭೀರಿಯನ್ನು ಗ್ರಹಣ ಮಾಡಲು ಒಪ್ಪುತ್ತಿದ್ದನೆ ಎಂಬುದು ಬೇರೆಯ ವಿಷಯ. ಆ ಗಳಿಗೆಯಲ್ಲಿ ಸಭ್ಯತೆಯಳತೆಯಡಿಯಲ್ಲೆ  ನಯವಾಗಿ ನಿರಾಕರಿಸಲು ಸೀತೆಯನ್ನು ತೋರುವ ಸುಲಭೋಪಾಯದ ಮಾರ್ಗ ಹಿಡಿದನೇನೊ. ಅದೆ ಹೊತ್ತಿನಲ್ಲಿ, ಕಾಡಿನ ಏಕತಾನತೆಯಿಂದ ಬೇಸತ್ತ ಮನ ತುಸು ಕುಚೇಷ್ಟೆಗಿಳಿಯಲೆಣೆಸಿ ದೂರದಲ್ಲಿ ಶಸ್ತ್ರಾಭ್ಯಾಸ ಮಾಡುತ್ತಿದ್ದ ಅನುಜ ಲಕ್ಷ್ಮಣನನ್ನು ತೋರಿಸಿ, ಸೌಮಿತ್ರಿ ಸತಿ ಜತೆಯಿರದ ಬ್ರಹ್ಮಚಾರಿಯೆಂದು ಹೇಳುತ್ತಾನೆ. ಸಾಲದೆಂಬಂತೆ ಅವನ ಗೌರವರ್ಣ, ಸುಂದರ ರೂಪಗಳು ತನಗಿಂತಲೂ ಉತ್ತಮ ಮಟ್ಟದ್ದು ಎಂದು ಹುರಿದುಂಬಿಸಿ ಅವನತ್ತ ಅಟ್ಟುತ್ತಾನೆ. ಬಹುಶಃ, ಅವಳಿಂದ ಮುಂದಾಗುವ ಅನಾಹುತದ ಅರಿವಿದ್ದಿದ್ದರೆ ತುಸು ಎಚ್ಚೆತ್ತುಕೊಳ್ಳುತ್ತಿದ್ದನೊ ಏನೊ? ಅದರೆ ವಿಧಿ ಸಂಕಲ್ಪವೆ ಬೇರೆಯಿತ್ತಲ್ಲ..ಅಥವಾ ಅದೆ ಶೂರ್ಪಿಣಿಗೆ ಬರೆದ ಪಾತ್ರವಾಗಿತ್ತೊ ಏನೊ, ಈ ರಾಮಾಯಣದ ಬೃಹತ್ಕಾಂಡದಲ್ಲಿ! ಒಟ್ಟಾರೆ ಅವಳು ರಾಮನ ಮಾತಿಗೆ ತಲೆದೂಗಿ ಲಕ್ಷ್ಮಣನತ್ತ ಓಡುತ್ತಾಳೆ.

ರಕ್ಕಸಿ ಜಾಣೆ ಹೇಗೂ ಲಕ್ಷ್ಮಣ ಕಾಡ ಬ್ರಹ್ಮಚಾರಿ ತಾನೆ
ಅಂದದಲೇನು ಕಮ್ಮಿ, ರಾಮನಿಗೂ ಮೀರಿಸಿದ ಬಣ್ಣನೆ
ಇರದು ಸೀತೆಯ ಕಾಟ, ಸೌಮಿತ್ರಿಯೆ ಸರಿ ಸಹವಾಸ
ಹಲ್ಕಿರಿದೆ ಬಣ್ಣಿಸಿ ಮೋಹ, ಲಕ್ಷಣದವನಾಗಿಸೆ ದಾಸ || 04 ||

ಮುಂಗೋಪೀ ಲಕ್ಷ್ಮಣ, ಹೆಸರಲಷ್ಟೆ ಲಕ್ಷಣ ಗುರಿ ತೀಕ್ಷ್ಣ
ಕಳುಹಿದವರಾರೆಂದು ಅರಿತವನೆ, ತಿಳಿದನೆಲ್ಲ ಸೂಕ್ಷ್ಮ
ಒಳ್ಳೆಯ ಮಾತಲ್ಹೇಳಿದರೆಲ್ಲಿ, ಕೇಳುವಳಾ ರಕ್ಕಸಮಳ್ಳಿ
ಸಿಟ್ಟಲಿ ಕೊಯ್ದ ಶೂರ್ಪನಖಿಯ ಕಿವಿಮೂಗನೆ ಶರದಲಿ || 05 ||

ಕಾನನದಲಿ ಮಡದಿಯಿಂದ ದೂರವಾಗಿ ಬ್ರಹ್ಮಚರ್ಯವನ್ನಾಚರಿಸುತಿದ್ದ ಸೌಮಿತ್ರಿ ಶಸ್ತ್ರಾಭ್ಯಾಸದಲ್ಲಿ ನಿರತನಾಗಿದ್ದ ಹೊತ್ತು. ಅವನನ್ನೆ ದಿಟ್ಟಿಸಿ ನೋಡಿದಾಗ ಶೂರ್ಪನಖಿಗನಿಸುತ್ತದೆ - ' ಎಲಾ! ಇವನೆ ರಾಮನಿಗಿಂತಲೂ ಬಣ್ಣ ಬಣ್ಣವಾಗಿ ಚೆನ್ನಿರುವನಲ್ಲ? ವಯಸಲೂ ಕಿರಿಯ ಯುವಕ; ನೋಡಲು ರಾಮನಷ್ಟೆ ಮನೋಹರನಿರುವನಲ್ಲ..ಇವನೆ ಸಿಕ್ಕಿದರೂ ಸಾಕು!' ಆ ಭಾವ ತೀವ್ರತೆಯಲ್ಲೆ, ಸಾಧಕನ ಅಭ್ಯಾಸವನಡ್ಡಗಟ್ಟಿ ಅವನನ್ನು ಬಲೆಯಲ್ಲಿ ಕೆಡವಲು ಹವಣಿಸುತ್ತಾಳೆ. ಆದರೆ, ಸೌಮಿತ್ರಿಯ ಮನೋಧಾರ್ಡ್ಯ, ಮನೋಸ್ಥೈರ್ಯ ಅವಳಿಗೆ ತಿಳಿಯದು. ಮೊದಮೊದಲು ನಯವಾಗೆ ತಿರಸ್ಕರಿಸಿ ಅವಳನಟ್ಟುವ ಯತ್ನ ಸಫಲವಾಗುವುದಿಲ್ಲ. ಮೇಲೆ ಮೇಲೆ ಬಿದ್ದು ಮತ್ತವನನ್ನು ಆಪೋಶಿಸುವ ಅವಳ ಬಿಂಕ, ಬಿನ್ನಾಟಕೆ ಸೊಪ್ಪು ಹಾಕದೆ, ಅವಳನ್ನು ಕಳಿಸಿದ್ದಾದರೂ ಯಾರು ಎಂದು ವಿಚಾರಿಸುತ್ತಾನೆ. ಆಗ ರಾಮನ ತುಂಟ ಚೇಷ್ಟೆಯ ಅರಿವಾಗುತ್ತದೆ. ಅವಳ ಉಪಟಳ ಇನ್ನೂ ಅಧಿಕವಾಗಿ, ರೇಗಿಸುವ ಮಟ್ಟಕ್ಕೆ ತಲುಪಿದಾಗ ಮಾತಿನಲೆ ಎಚ್ಚರಿಕೆ ಕೊಡುತ್ತಾನೆ. ಕೇಳುವಳೆ ರಕ್ಕಸ ದೈತ್ಯೆ? ತಾಳ್ಮೆಯ ಮಿತಿ ಮೀರಿದಾಗ, ಸಹನೆಯ ಎಲ್ಲೆ ದಾಟಿದಾಗ ಮೊದಲೆ ಮುಂಗೋಪಿ ಲಕ್ಷ್ಮಣ - ಕೈಯಲ್ಲಿದ್ದ ಅಭ್ಯಾಸ ಮಾಡುತ್ತಿದ್ದ ಬಾಣದಿಂದಲೆ, ಒಂದು ಕೈಯಲ್ಲವಳನಿಡಿದು ಮತ್ತೊಂದರಿಂದ ಕಿವಿ, ಮೂಗುಗಳನ್ನು ತರಿದು ಹಾಕಿಬಿಡುತ್ತಾನೆ.

ಸುರಿದ ರಕ್ತದ ಗೋಳೆ ಬೊಬ್ಬಿರಿದಳೆ ದಶಕಂಠನ ತಂಗಿ
ಉಕ್ಕೇರಿತು ಕೋಪ ರಾಮ ಲಕ್ಷ್ಮಣ ಮಾಡಿದರೆ ಕಮಂಗಿ
ತಿರುಗವಳ ರೋಷವೆಲ್ಲ, ನಾರಿ ಸುಂದರಿ ಜಾನಕಿಯತ್ತ 
ಅವಳಿಂದಲೆ ತಾನೆ ಸಿಗ ರಾಮ, ಸೇಡಿಗೆ ಹಾತೊರೆದಿತ್ತ || 06 ||

ಲಕ್ಷ್ಮಣನೇನೊ ಹಿಂದೆ ಮುಂದೆ ಆಲೋಚಿಸದೆ ಕಿವಿ, ಮೂಗು ತರಿದುಬಿಟ್ಟ. ಮೊದಲೆ ತಿಮಿರಿನ ತರಳೆ ; ಜತೆಗೆ ಅವಮಾನ, ಅಂಗಛ್ಚೇಧನದ ನೋವು ಬೇರೆ. ಪ್ರಾಯಶಃ ಸೌಮಿತ್ರಿಯ ಪ್ರತಿಕ್ರಿಯೆಯೂ ತುಸು ಅತಿಯಾಗಿಯೆ ಇತ್ತೊ ಏನೊ? ಹಾಗಿರದಿದ್ದಲ್ಲಿ ರಾಮಾಯಣದ ಹಲವಾರು ಕುತೂಹಲಭರಿತ ಕಾಂಡಗಳು ಇರುತ್ತಿರಲಿಲ್ಲವೆಂಬುದು ಅದರ ಮತ್ತೊಂದು ಕುಚೋದ್ಯ ಸಹ. ಆ ಪಾತ್ರಗಳೆಲ್ಲ ಕೇವಲ ನಿಮಿತ್ತ ಮಾತ್ರರಾಗಿ, ತಮ್ಮ ತಮ್ಮ ಪಾಲಿನನುಸಾರ ಅವಕ್ಕೆ ನ್ಯಾಯ ಒದಗಿಸುತ್ತಿದ್ದವೆಂಬ ದೃಷ್ಟಿಕೋನದಿಂದ ನೋಡಿದರೆ ಮಾತ್ರ, ಈ ರೀತಿಯ ಅನವಶ್ಯಕ ತಾರ್ಕಿಕ ಪ್ರಶ್ನೆಗಳೇಳುವುದಿಲ್ಲ. ಆಗ ಅದು ಪೂರ್ವ ನಿಯೋಜಿತ ಜಗನ್ನಾಟಕದ ಒಂದಂಕವಾಗಷ್ಟೆ ಕಂಡುಬಂದು, ಎಲ್ಲವು ಸಮಯೋಚಿತವೆನಿಸುತ್ತದೆ - ತಾರ್ಕಿಕವಿರಲಿ, ಬಿಡಲಿ. 

ಇಲ್ಲಾದುದ್ದು ಅಷ್ಟೆ - ರಾಮ ಶೂರ್ಪನಖಿಯನ್ನು ಛೇಡಿಕೆಗಾಗಿ ಲಕ್ಷ್ಮಣನತ್ತ ದೂಡಿದ. ಲಕ್ಷ್ಮಣ ವಿವೇಚನಾರಹಿತ, ಸಂಧರ್ಭ ಮತ್ತು ಮುಂಗೋಪ ಪ್ರೇರೆಪಿತ ಸಿಟ್ಟಿಗೆ ವಶನಾಗಿ ಅವಳಿಗೆ ಕ್ರೂರ ಶಿಕ್ಷೆ ವಿಧಿಸಿಬಿಟ್ಟ. ಅವಳೊ ಮೊದಲೆ ಕಾಮತೃಷೆ ತೀಡಿ ಬುದ್ದಿಗೆ ಮಂಕಿಡಿದು ಕೂತ ಹೆಣ್ಣು; ಲಂಕಾಧೀಶನ ಸೋದರಿಕೆಯ ಹಮ್ಮು ಬೇರೆ. ಆದರಿ ವೈಚಿತ್ರ ನೋಡಿ - ಛೇಡಿಸಿದ್ದು ರಾಮ, ಕತ್ತರಿಸಿದ್ದು ಲಕ್ಷ್ಮಣ - ಆದರೆ ಅವಳ ಮೋಹಪೀಡಿತ ವಿವಶ ಮನಸ್ಸು ಅದಕ್ಕೆ ಅವರಿಬ್ಬರನ್ನೆ ದೂಷಿಸದೆ, ಬಡಪಾಯಿ ಸೀತೆಯತ್ತ ತಿರುಗುತ್ತದೆ - ಇದಕ್ಕೆಲ್ಲ ಅವಳ ಇರುವಿಕೆಯೆ ಮೂಲಕಾರಣ ಎಂದೇನೊ...

ಇಲ್ಲೊಂದು ತಂತ್ರ ಸೂಕ್ಷ್ಮತೆಯನ್ನು ಗಮನಿಸಬೇಕು. ಅವಳೊಡನೆ ಅನುಚಿತವಾಗಿ ವರ್ತಿಸಿದವರ ಬದಲಿಗೆ, ಅದರರಿವೆ ಇರದ ಏನೂ ಮಾಡಿರದ ಸೀತೆಯ ಮೇಲಿನ ಶೂರ್ಪನಖಿಯ ಆಕ್ರೋಶ ಕೇವಲ ಹೆಣ್ಣೊಂದರ ಸಾಮಾನ್ಯ, ಸಹಜ ಗುಣವೆ ಅಥವಾ ಅದರಲ್ಲೂ ಆಕೆಯ ಚಾಣಾಕ್ಷ್ಯ ಮುತ್ಸದ್ದಿತನ ಕೆಲಸ ಮಾಡಿತ್ತೆ ಎಂದು. ಲಕ್ಷ್ಮಣನಿತ್ತ ಶಿಕ್ಷೆಯೇನು ಸಾಮಾನ್ಯದ್ದಾಗಿರಲಿಲ್ಲ. ಅಂದಮೇಲೆ ರಾಮನ ಮೇಲಲ್ಲದಿದ್ದರೂ ಲಕ್ಷ್ಮಣನ ಮೇಲೆ ಅವಳಿಗೆ ಖಂಡಿತ ಅಸಾಧಾರಣ ಸಿಟ್ಟು, ಸೆಡವು ಇರಲೆಬೇಕಿತ್ತು. ಅದರಲ್ಲು ಆ ನೋವಿನ ಹೊತ್ತಿನಲ್ಲಿ ಸಿಟ್ಟಿನ ಕೈಗೆ ಬುದ್ದಿ ಕೊಟ್ಟು ಅನಾಹುತ ಮಾಡುವ ಸಾಧ್ಯತೆಗಳೆ ಹೆಚ್ಚು. ಆದರಿಲ್ಲಿ ಹಾಗಾಗಲಿಲ್ಲ - ಆ ನೋವಿನಲ್ಲೂ ಅವಳ ಆಲೋಚನಾಲಹರಿ ನೋಡಿ. ಶಿಕ್ಷೆ ಕೊಟ್ಟವನ ಮೇಲೂ ಎದುರುಬೀಳಲಿಲ್ಲ ಆ ಮನಸು; ಅದಕ್ಕೆ ಛೇಡನೆಯ ರೂಪದಲ್ಲಿ ಪ್ರೇರೇಪಿಸಿದವನತ್ತಲೂ ಹೊರಳಲಿಲ್ಲ ಆ ಮುನಿಸು. ಅಲ್ಲಿಂದಾಚೆಗೂ ಜಿಗಿದು ಇಷ್ಟೆಲ್ಲಾ ಆಗಲಿಕ್ಕೆ ಮೂಲ ಕಾರಣರಾರು ಎಂದು ಆಲೋಚಿಸಿತು. ಸೀತೆಯಿಂದ ತಾನೆ ರಾಮನ ಮನ ವಿಚಲಿತವಾಗದೆ ಉಳಿದಿದ್ದು?

ಸೀತೆಯಿರದಿದ್ದರೆ ರಾಮ ಶೂರ್ಪನಖಿಯನ್ನು ತಿರಸ್ಕರಿಸದೆ ಒಪ್ಪಿಕ್ಕೊಳ್ಳುತ್ತಿದ್ದನೊ ಏನೊ..? ಅವಳ ಇರುವಿಕೆಯೆ ಅವನನ್ನು ಲಕ್ಷ್ಮಣನತ್ತ ಕಳಿಸುವಂತೆ ಮಾಡಿದ್ದು -  ಅದರಿಂದಲ್ಲವೆ ತಾನು ಮೂಗು, ಕಿವಿ ಕತ್ತರಿಸಿಕೊಳ್ಳಬೇಕಾದದ್ದು? ಅಂದಮೇಲೆ ಇದೆಲ್ಲದರ ಮೂಲಕಾರಣ ಸೀತೆ; ಅವಳ ಮೋಡಿ ಪ್ರಭಾವದಡಿಯಲಿ ಸಿಲುಕಿಯೆ ತನ್ನನ್ನಿವರಿಬ್ಬರೂ ಕಡೆಗಣಿಸಿದ್ದು, ಹೀಗೆ ರಕ್ತ ಹರಿಸುವಂತ ಸ್ಥಿತಿಗೆ ತಂದದ್ದು. ಅದಕ್ಕೆ ಅವಳನ್ನೆ ಗುರಿಯಿಟ್ಟು ಉಡಾಯಿಸಿದರೆ ರಾಮನ ಜಂಘಾಬಲವನ್ನೆ ಉಡುಗಿಸಿದಂತೆ. ರಾಮ ಬಲಹೀನನಾದರೆ ಲಕ್ಷ್ಮಣನೇನು ಲೆಕ್ಕ? ಹೀಗಾಗಿ ಇವರಿಬ್ಬರ ಶಕ್ತಿಯ ಮೂಲ ಸೀತೆ, ಅವಳಿಗೆ ಹಾಕಬೇಕು ಏಟು! ಹೀಗೆ ಯೋಚಿಸಿಯೆ ಇರಬೇಕು ಶೂರ್ಪನಖಿ ಅವರಿಬ್ಬರ ಮೇಲಿನ ಸೇಡಿಗ್ಹವಣಿಸದೆ ಸೀತೆಯಪಹರಣದ ಗುಟುಕನ್ನು ರಾವಣನ ತಲೆಗೆ ತುಂಬಿ ಅವನನ್ನು ಪೂರ್ತಿಯಾಗಿ ತಲೆಕೆಡೆಸಿಕೊಳ್ಳುವಂತೆ ಮಾಡಿ, ಒಂದು ವಿಧದಲ್ಲಿ ಅವಳದಾಗಿದ್ದ ಯುದ್ದವನ್ನು ಅವನದಾಗಿಸಿಬಿಟ್ಟಳು (ಅರ್ಥಾತ್ ರಾಮ - ಶೂರ್ಪನಖಿಯರ ನಡುವಿನ ತಿಕ್ಕಾಟ, ರಾಮ-ರಾವಣರ ನಡುವಿನ ತಿಕ್ಕಾಟವಾಗಿ ಹೋಯ್ತು)

ಬಿದ್ದೊದ್ದಾಡಿದ ತಂಗಿಯ ಗತಿಗೆ ಕರಗದಿಹನೆ ದಶಾನನ
ಕಥೆ ಕಟ್ಟಿದ ಹೆಣ್ಣಿನ ನೆತ್ತರಲೆ, ಕುದಿದು ಕರಗಿಸಿತೆ ಮನ
ಉರಿಯಿತು ಕೋಪಜ್ವಾಲೆ, ಅರ್ಜ್ಯ ಸುರಿದಳೆ ಪರಿಪರಿಯೆ
ಅಪರಿಮಿತ ಸುಂದರಿಯಾ ಸೀತೆ ನಿನಗಿಲ್ಲವೇಕೊ ಅರಿಯೆ || 07 ||

ವಿಚಲಿತ ಮನ ಬಣ್ಣನೆಯೆ, ಬಾಯಲಿ ನೀರೂರಿಸುತಿರಲು
ಕೊಟ್ಟಳೆ ಸಲಹೆ ಸೇಡಿಗಪಹರಿಸೆ, ರಾಮನದನ್ನೆಯೆ ಕೀಲು
ಕಾಡಿನಲೊಣಗೊ ಹೂವ್ವಾಗಿರಬಾರದೇಕೆ ನಿನ್ನರಮನೆರಾಣಿ
ರಾಮಹೃದಯ ಕದ್ದವಳ ಮಾಡಿಕೊ, ನಿನ್ನಂತರಂಗದರಗಿಣಿ || 08 ||

ಸರಿ ಅಲ್ಲಿಂದೆದ್ದು ಬಿದ್ದು ಓಡೋಡಿ ಬಂದ ತಂಗಿಯ ಗೋಳಿಗೆ ಕರಗದಿರುವನೆ ದಶಾನನ? ನಿಜಕ್ಕೊಂದಷ್ಟು ಉತ್ಪ್ರೇಕ್ಷೆ, ಬಣ್ಣನೆಗಳನ್ನೆಲ್ಲ ಸೇರಿಸಿ, ತನಗಾದ ವಿರೂಪ, ಕುರೂಪತೆಯನೆಲ್ಲ ಅಡವಿಟ್ಟು ಅವನ ಮನಕರಗಿಸಿ, ಮನಗೆಲ್ಲುತ್ತಾಳೆ. ತನ್ನ ಮಡಿಲಿನ ಬೆಂಕಿಯಲ್ಲಿ ಅವನ ಹೃದಯದಲಿ ಕ್ರೋಧದ ಭುಗಿಲೆಬ್ಬಿಸಿ ಪರಿಪರಿಯಾಗಿ ಅರ್ಜ್ಯ ಸುರಿದು ಅವನಿಗೆ ರಾಮನ ಮೇಲಣ ಸಿಟ್ಟು ಹಲವು ಪಟ್ಟು ಅಧಿಕವಾಗುವಂತೆ ಮಾಡಿಕೊಳ್ಳುತ್ತಾಳೆ. ಇಷ್ಟಕ್ಕೆ ನಿಂತಳೆ ಚಾಲಾಕಿ ಹೆಣ್ಣು? ಹೇಳಿ, ಕೇಳಿ ಅಣ್ಣನಾದರೂ ರಾವಣ ಗಂಡು. ಈಗ ಕೋಪದಲ್ಲಿ ವೀರಾವೇಶದ ಮಾತನಾಡಿದರೂ, ಎಲ್ಲಾ ಬಿರುಸು ತಗ್ಗಿದ ಮೇಲೆ ಶಾಂತನಾಗಿ ರಾಮನ ಕುರಿತು ಮೃದುವಾಗಿಬಿಟ್ಟರೆ? ಅವಳು ಪಟ್ಟ ಶ್ರಮವೆಲ್ಲ ನೀರಲ್ಲಿ ಹೋಮ ಮಾಡಿದಂತಾಗಬಾರದಲ್ಲಾ...ಗಂಡಿನ ಬಲಹೀನತೆಯೆ ಹೆಣ್ಣಿನ ಸೌಂದರ್ಯವೆಂದು, ಅದರಲ್ಲು ಪರನಾರಿಯಾದರೆ ಇನ್ನೂ ಅಧಿಕವೆಂದು ಬಲ್ಲ ಘಟವಾಣಿ ಕೊನೆಗು ಮೆಲ್ಲನೆ ಆ ದಾಳವನ್ನು ಎಸೆಯುತ್ತಾಳೆ. ಮೊದಲು ಸೀತೆಯ ಅಪರಿಮಿತ, ಎಣೆಯಿಲ್ಲದ ಸೌಂದರ್ಯದ ಕುರಿತು ವರ್ಣನೆ ಮಾಡುತ್ತಾಳೆ. ಇದು ಅವನಲ್ಲಿ ಕುತೂಹಲ ಕೆರಳಿಸುವ ಮೊದಲಂಕ. ನಂತರ ಅರಮನೆಯ ಕುಸುಮದಂತಿರಬೇಕಾದವಳು ಕಾಡಿನಲ್ಲಿ ಒಣಗುತ್ತಿದ್ದಾಳೆ, ಆ ರಾಮನ ಕಟ್ಟಿಕೊಂಡ ಕರ್ಮಕ್ಕೆ ಎಂದು ಅವನಲ್ಲಿ ಅನುಕಂಪದ ತೆರೆಯನ್ಹುಟ್ಟು ಹಾಕುತ್ತಾಳೆ. ನಂತರ ಮೆಲ್ಲಗೆ ಅವನ ಆತ್ಮಾಭಿಮಾನವನ್ನು ಚುಚ್ಚುವಂತೆ, ಅವಳಂತ ಸುಂದರ ನಾರಿ ರಾವಣನಿಗೇಕಿಲ್ಲ ಎಂದು ಹೇಳುತ್ತ ಅವನಲ್ಲಿ ಕೀಳರಿಮೆಯ ಹುಳು ಬಿಡುತ್ತಾಳೆ. ಕೊನೆಗೆ, ಅವಳಿರಬೇಕಾದ್ದು ರಾವಣೇಶ್ವರನಂತಹ ಚಕ್ರಾಧಿಪತಿಯ ಅರಮನೆಯಲ್ಲಿ ಮಹಾರಾಣಿಯಾಗಿಯೆ ಹೊರತು, ಬಡ ಜೋಗಿಯ ಅಶ್ರಮದಂತಿರುವ ರಾಮನ ಕುಟೀರದಲ್ಲಲ್ಲವೆಂದುಬಿಡುತ್ತಾಳೆ. ಹಾಗಾಗಿಸಲೆಂದೆ, ಅವಳನ್ನಪಹರಿಸಿ ತಂದು ಬಲವಂತದಿಂದ ರಾಣಿಯಾಗಿಸಿಕೊಂಡರೂ ಅದು ರಾವಣನಂತ ಚಕ್ರವರ್ತಿಗೆ ಶೋಭೆಯೆ, ಅಂತಹ ಸುಗುಣ, ಸೌಂದರ್ಯಗಳ ಖನಿ ಆ ಸೀತೆಯೆಂದು ವರ್ಣಿಸುತ್ತಾ ತನ್ನ ಸಮಸ್ಯೆಯ ಬಲೆಗೆ ಅವನನ್ನೂ ಸಿಲುಕಿಸಿ, ತನ್ನ ಗಮ್ಯದಲ್ಲಿ ಅವನಿಗರಿವಿಲ್ಲದಂತೆಯೆ ಅವನೂ ಪಾಲುದಾರನಾಗಿಬಿಡುವಂತೆ ಚಕ್ರವ್ಯೂಹ ರಚಿಸಿ ಸಿಲುಕಿಸಿಬಿಡುತ್ತಾಳೆ. ಆ ಬಣ್ಣನೆ, ಆಮಿಷ ರಾವಣನ ಮನಸನ್ನು ಹಾಗೆ ಹೀಗೆ ಡೋಲಾಯಮಾನವಾಗಿಸಿದರೂ, ಅವನಿಗಿನ್ನು ಅಳುಕು. ಪರಸ್ತ್ರಿಯನ್ನು ಅದರಲ್ಲೂ ಮದುವೆಯಾಗಿ ಪತಿಯ ನೆರಳಲ್ಲಿ ಬಾಳುತ್ತಿರುವವಳನ್ನು ವಿನಾಃಕಾರಣ ಹೊತ್ತು ತಂದರೆ ಜನರೇನೆಂದಾರು? ತನ್ನ ವೀರತ್ವದ ಘನತೆಯೇನಾದೀತು? ನೈತಿಕತೆ, ನಿಜಾಯತಿಗಳನ್ನು ಬದಿಗಿಟ್ಟರೂ, ಎಲ್ಲಕ್ಕೂ ಮಿಗಿಲಾಗಿ ಹಾಗೆ ಮಾಡಲೊಂದು ಸರಿಯಾದ ಕಾರಣವಾದರೂ ಇರಬೇಕಲ್ಲವೆ?

ಹೀಗಣ್ಣನ ಮನಸನು ಕಾದ ಕಬ್ಬಿಣವಾಗಿಸಿ, ಹದಕ್ಕೆ ತಂದು ಆಶೆಯ ಬೇರೊಡೆಸಿ, ನೀರುಣಿಸುವ ಹಂತಕ್ಕೆ ತಂದವಳಿಗೆ, ಬೇಲಿಯ ಮೇಲಿನ ಹಕ್ಕಿಯಾದಂತವನ ಸ್ಥಿತಿಯನ್ನು ನಿಭಾಯಿಸಲು ಕಷ್ಟವೆ? ಸೀತೆಯೊಪ್ಪಬೇಡವೆ ರಾವಣನ ಸಖ್ಯಕೆ - ಎಂದರೆ, ತಂದು ಬಂಧನದಲಿಟ್ಟು ಪಳಗಿಸಿದರಾಯ್ತು, ಎಷ್ಟು ದಿನ ಹಠ ಹಿಡಿದಾಳು ಅನ್ನುತ್ತಾಳೆ. ಒಂದಲ್ಲ ಒಂದುದಿನ ಅವನ ಅಂತಸ್ತು, ಐಶ್ವರ್ಯ, ಧೈರ್ಯ, ಶೌರ್ಯಗಳನ್ನು ನೋಡಿ, ಮೆಚ್ಚಿ ಒಲಿಯದಿರುವಳೆ? ಹತ್ತಿರವಿದ್ದರೆ ಹೇಗಾದರೂ, ಏನಾದರೂ ಮಾಡಿ ಒಲಿಸಿ ನಿನ್ನಂತರಂಗದರಗಿಣಿ ಮಾಡಿಕೊಳ್ಳಬಹುದಲ್ಲವೆ ಎನ್ನುತ್ತಾ ಹುರಿದುಂಬಿಸುತ್ತಾಳೆ. ರಾಮನೇನು ತನಗೆ ಶತ್ರುವಲ್ಲ, ವಿನಾಕಾರಣ ಶತ್ರುತ್ವ ಬೆಳೆಸುವುದು ರಾಜನೀತಿಯು, ಅಲ್ಲ, ಉಚಿತವೂ ಅಲ್ಲ, ನ್ಯಾಯವೂ ಆಗದು ಎಂದವನ ಶಂಕೆ, ಸಂಶಯಕ್ಕೆ ತೆರೆಹಾಕುವಂತೆ - ಸ್ವಂತ ತಂಗಿಗಿ ವಿರೂಪದ ಗತಿ ತಂದಿಕ್ಕಿದ್ದಕ್ಕಿಂತ ಅಪರಾಧ ಬೇಕೆ? ಆ ಕುಂಟುನೆವಕ್ಕಿಂತಲು ಹೆಚ್ಚಿನ ನೆಪ ಬೇರೇನಿದ್ದೀತು? ಕಾಡಿನ ನ್ಯಾಯದಂತೆ ಕಣ್ಣಿಗೆ ಕಣ್ಣು, ಕಿವಿಗೆ ಕಿವಿ, ಕೈಗೆ ಕೈ ಕಡಿಯುವುದೆ ಯುದ್ಧ ಧರ್ಮವಾಗಿರುವಾಗ, ಅದೂ ರಕ್ಕಸ ನೀತಿಯ ಪಾಲಿಸುವ ತಮ್ಮಂತವರಿಗೆ ತಂಗಿಯನ್ನಿ ಸ್ಥಿತಿಗೆ ತಂದವರ ಮೇಲಿನ ಸೇಡು ತಾನೆ ಮುಖ್ಯ? ಅವರು ಹೆಣ್ಣಿನ ಮೇಲೆ ಕೈಹಾಕಿದಾಗ, ವಿರೂಪಗೊಳಿಸುವಾಗ, ಧರ್ಮಕರ್ಮ ನೋಡುತ್ತಾ ಕುಳಿತರೆ? ಹಾಗೆಯೆ ರಾವಣನ ಲೆಕ್ಕಾಚಾರ ಸಹ - ಅವರು ಹೆಣ್ಣಿನ ಮೇಲೆ ಕೈ ಮಾಡಿ, ಅಪಮಾನಿಸಿದರೆ, ನಾವು ಅವರ ಹೆಣ್ಣಿನ ಮೇಲೆ ಕೈ ಹಾಕಿ ಅವಮಾನಿಸುವುದೆ ಸರಿ - ಎನ್ನುವಂತಿರಬೇಕಲ್ಲವೆ? ಕೊನೆಗೆ ರಾಮ ವೀರನೆ ಆಗಿದ್ದರು ಅವನೊಬ್ಬ ಹುಲುಮಾನವ - ಅವನ ಪರಾಕ್ರಮಕ್ಕೆ ರಾವಣನಂತಹ ವೀರಾಗ್ರೇಸರ ಅಂಜಬೇಕೆ? ಅಲ್ಲದೆ, ಜಾನಕಿಯ ಅಪಹರಣ ಎಂದಾಗುವುದೊ ಅಂದೆ, ಅವಳ ಮೇಲಿಟ್ಟ ಅಪರಿಮಿತ ಪ್ರೀತಿಯಿಂದ ರಾಮ ಅಸು ನೀಗದಿರುವನೆ?ಅವನನ್ನನುಕರಿಸಿ ಸೌಮಿತ್ರಿಯೂ ತೆರಳದಿಹನೆ? ಹೀಗೆ, ಏನೆಲ್ಲ ಮೊಂಡುವಾದ ಹೂಡಿ ಅವನ ಬಾಯಿಂದ 'ಹೂಂ' ಅನಿಸಿಬಿಟ್ಟಳು. ರಾವಣನಲ್ಲು ಆಶೆ, ಮೋಹವಂತೂ ಆಗಲೆ ಹುಟ್ಟಿಯಾಗಿತ್ತಲ್ಲ.ತಂಗಿಯ ಬಾಯಿಂದ ಪದೆ ಪದೆ ಅದೆ ಮಾತು ಕೇಳುತ್ತ, ಕೇಳುತ್ತಾ ಅವನು ಮನಸೋತ. ಅಲ್ಲಿಂದಾಚೆಗೆ ಅದು ಶೂರ್ಪನಖಿಯ ಕಥೆಯಾಗುಳಿಯಲಿಲ್ಲ, ರಾವಣನ ಕಥೆಯೇ ಆಗಿಹೋಯ್ತು. ಅದಕ್ಕೆ ಮೂಲ ಕಾರಣಳಾದ ಶೂರ್ಪನಖಿ ಮಾತ್ರ ಸಂಪೂರ್ಣ ರಂಗದಿಂದಲೆ ಮಾಯವಾಗಿ ಹೋದಳು - ಮತ್ತೆ ಅಗಸಗಿತ್ತಿಯ ಪ್ರಕರಣದೊಂದಿಗೆ ಹಿಂದಿರುಗುವ ತನಕ!

ಒಂದೇ ಕಲ್ಲಲ್ಹೊಡೆದೆರಡೆರಡು ಹಕ್ಕಿ ಚಾಣಾಕ್ಷೆ ಶೂರ್ಪನಖಿ
ಸೀತೆಯಿಲ್ಲದ ರಾಮನನೊಪ್ಪಿಸಬಹುದೆಂಬ ನೀತಿಗ್ಹುಡುಕಿ
ಸಿಗದಿದ್ದರೂ ಕನಿಷ್ಟ ವಿಯೋಗದೆ ರಾಮ ಜೀವವ ತೊರೆವ
ತನಗೆ ಸಿಕ್ಕದಿರೆ ಸೀತೆಗಿಲ್ಲದಂತೆ ಮಾಡೆ ಕುಟಿಲೋಪಾಯ || 09 ||

ಕಡೆಗೂ ಸಾಧಿಸಿಬಿಟ್ಟಳೆ ಸೇಡು ಬಿದ್ದಾ ರಾವಣನೂ ಬಲೆಗೆ
ಕದ್ದು ಸೀತೆಯನ್ಹೊಯ್ದು ಲಂಕೆಗೆ ಕಾಡಿದ ರಾಮ ಲಕ್ಷ್ಮಣಗೆ
ಕೋಪದಲಿ ಕೊಯ್ದ ಕಿವಿ ಮೂಗಿಗೆ ಸೀತಾ ವಿಯೋಗ ಶಿಕ್ಷೆ
ಅರೆಕ್ಷಣದ ಲಕ್ಷ್ಮಣ ಮುಂಗೋಪಕೆ ಕಪಿಸಖ್ಯ ಯುದ್ಧಾವಸ್ತೆ || 10 ||

ಅಲ್ಲೆಷ್ಟೊಂದು ಒಳಸಂಚುಗಳ ಸುಳಿಯನ್ನವಳು ಹೆಣೆದಿರಬಹುದಾದ ಸಾಧ್ಯತೆಯಿದೆ ನೋಡಿ. ಯಾವ ತರದಿಂದ ನೋಡಿದರು, ಫಲಿತವೇನೆ ಆದರೂ ಅವಳಿಗೆ ಮಾತ್ರ ಒಂದಲ್ಲ ಒಂದು ತರಹ ಲಾಭಾನುಕೂಲವೆ ಹೊರತು ನಷ್ಟವೇನಿಲ್ಲ. ಸೀತೆಯಿರದ ರಾಮ ತನಗೆ ಸಿಕ್ಕರೂ ಸಿಗಬಹುದೆಂಬ ದೂರದಾಸೆ; ದಕ್ಕದಿದ್ದರೂ, ಸೀತೆಗೂ ಇಲ್ಲದಂತೆ ಮಾಡಿದ ಸಮಾಧಾನ. ಒಂದು ವೇಳೆ, ಅವಳಿಲ್ಲದ ವಿರಹಕ್ಕವನು ಅಸು ನೀಗಿದರೂ ಸೇಡು ತೀರಿಸಿಕೊಂಡ ತೃಪ್ತಿ; ಅಥವಾ ರಾವಣನೊಡನೆ ಯುದ್ಧಕ್ಕಿಳಿದರೂ ತನಗುಂಟು ಮಾಡಿದ ಪರಿಸ್ಥಿತಿಗೆ ಆ ಯುದ್ಧವೆ ಒಂದು ಶಿಕ್ಷೆಯಾಗಿ, ಪಾಠವಾಗಿ ಅವನನ್ನು ಕಾಡೀತೂ. ಒಟ್ಟಾರೆ ತನಗಿಲ್ಲದ ಸುಖ ಪರರಿಗೂ ಸಿಗಬಾರದು. ತನಗಿತ್ತ ಶಿಕ್ಷೆಗೆ ಸೇಡು ತೀರಿಸಿಕೊಂಡಂತೆಯೂ ಆಗಬೇಕು. ಇದ್ದೆಲ್ಲವನ್ನು ಒಗ್ಗೂಡಿಸಿ, ಕಾರ್ಯತಂತ್ರದ ಬಲೆಯೊಳಗ್ಹೆಣೆದ ಶೂರ್ಪನಖಿಯನ್ನು ಸಾಧಾರಣ ಸೇಡು ತೀರಿಸಿಕೊಳ್ಳುವ ಹೆಣ್ಣೆನ್ನುತ್ತೀರಾ ಅಥವ ಚತುರ ಮುತ್ಸದ್ದಿಯೆನ್ನುತ್ತೀರಾ? ನನಗೇನೊ ಎರಡನೆಯದೆ ಹೆಚ್ಚು ಸೂಕ್ತ ಎಂಬ ಅಭಿಪ್ರಾಯ! ಅದು ಹೇಗಾದರೂ ಇರಲಿ, ಒಟ್ಟಾರೆ ಅವಳಂತು ತನ್ನ ಗುರಿ ಸಾಧಿಸಿಕೊಂಡುಬಿಟ್ಟಳಲ್ಲಾ! ರಾವಣ ಜಾನಕಿಯನ್ಹೊತ್ತೊಯ್ದು ರಾಮಲಕ್ಷಣರಿಗೆ ಕಾಡಿದ ಪ್ರಸಂಗವೆ ಕಿವಿ, ಮೂಗು ಕೊಯ್ದ ಪ್ರಸಂಗಕೆ ಶಿಕ್ಷೆಯಾಗಿ ಹೋಯ್ತು - ಸೀತಾ ವಿಯೋಗದ ರೂಪದಲ್ಲಿ; ಅರೆಗಳಿಗೆಯ ಲಕ್ಷ್ಮಣ ಮುಂಗೋಪ ಇಡೀ ರಾಮಾಯಣ ಯುದ್ಧಕ್ಕೆ ನಾಂದಿಯಾಗಿಹೋಯ್ತು!

ಛಲದಂಕಮಲ್ಲರು ಬಿಡದೆ ಕಾದಿದರೂ ಯುದ್ದಾರಣರಂಗ
ಕಾಣಳೆಲ್ಲೂ ಮೂಲಾ ಶೂರ್ಪನಖಿ ಮಾಯವಾದ ಪ್ರಸಂಗ
ತಂತ್ರ ಪ್ರತಿತಂತ್ರ ಅಸ್ತ್ರ ಶಸ್ತ್ರಾಸ್ತ್ರ ಖಂಡುಗ ಯೋಧ ಬಲಿ
ವಿಪರ್ಯಾಸವೆ ಯುದ್ಧದ ಕೊನೆಗೆ ತಂಗಿಯಾದಳೆ ತಬ್ಬಲಿ || 11 ||

ಮುಗಿದ ಯುದ್ಧದಿ ಗೆಲುವು ಸೀತಾರಾಮರ ಮಿಲನದಂತ್ಯ
ಉರಿದೆಬ್ಬಿಸಿ ಮತ್ಸರ ಬೆಂಕಿ ರಕ್ಕಸಿ ಬೇರ್ಪಡಿಸಲೆ ಕುತಂತ್ರ
ಬೇರಾದರೂ ದಂಪತಿ ಸಾಗದ ಕಾಳಗ ಹಾದಿ ಕೊನೆತನಕ
ಹೊಸ ತಂತ್ರವನೆ ಬಳಸಿ ಬೇರಾಗಿಸುವ ತಿರಸ್ಕೃತೆ ತವಕ || 12 ||

ಅವಳಷ್ಟು ಪಾಡುಪಟ್ಟು ಕಾರ್ಯತಂತ್ರ ರೂಪಿಸಿದರೂ, ರಾಮಲಕ್ಷ್ಮಣರು ಛಲ ಬಿಡದೆ ಕಪಿ ಸೈನ್ಯ ಕಟ್ಟಿ, ಸೀತೆಯನ್ನವರಿಂದಲೆ ಹುಡುಕಿಸಿ, ದಾಟಲಸಾಧ್ಯವೆಂಬಂತಿದ್ದ ಶರಧಿಯನ್ನೂ ಸೇತುವೆ ಕಟ್ಟಿ ದಾಟಿ ಲಂಕೆಯ ಹೊಸಿಲಿಗೆ ಬಂದು ರಣ ವೀಳ್ಯ ನೀಡಿದಾಗ, ಸತ್ಯಯುಗದ ಘನಘೋರ ಕದನಕ್ಕದೆ ನಾಂದಿಯಾಗಿ ಹೋಯ್ತು. ರಾವಣನಂತೂ ತನ್ನ ಬಂಧು, ಬಳಗ, ಸೈನ್ಯದ ಜತೆಗೆ ತಾನು ಜೀವ ತೊರೆದು ನೆಲಕ್ಕೊರಗಬೇಕಾಯ್ತು - ಆ ಯುದ್ಧದ ಮೂಲ ಕತೃವಾದ ಶೂರ್ಪನಖಿಯನ್ನು ತಬ್ಬಲಿಯಾಗಿಸಿ! ಹೀಗೆ ಯುದ್ಧದ ಮುಕ್ತಾಯ ಸೀತಾರಾಮರ ಮಿಲನವಾಗುವ ಅಂತ್ಯದೊಡನೆ ಅವಳಿಗೆ ಕೊಂಚ ನಿರಾಶೆಯನ್ನು ತಂದಿರಬೇಕು - ತನ್ನ ಕುತಂತ್ರ ಜೀವಮಾನವಿಡಿ ಕಾಡುವ ಬದಲು ಮತ್ತೆ ರಾಮಾಸೀತರ ಮಿಲನದಲ್ಲಂತ್ಯವಾಯ್ತಲ್ಲ ಎಂದು ನರಳಿತು. ಸರಿ, ಈ ಬಾರಿ ಮತ್ತೆ ದಾರಿಗಾಗಿ ಹುಡುಕಾಟ - ಹೇಗಾದರೂ ಅವರನ್ನು ಬೇರ್ಪಡಿಸುವ ಹುನ್ನಾರ. ಈಗ ಸಹಾಯಹಸ್ತ ನೀಡಲು ಅಣ್ಣನಿಲ್ಲ, ಸೈನ್ಯವಿಲ್ಲ, ಐಶ್ವರ್ಯವೂ ಇಲ್ಲ; ವಿಭೀಷಣನಂತೂ ಅಪ್ಪಟ ರಾಮಭಕ್ತ. ಆದರೂ ಅದನ್ನು ಸಾಧಿಸುವಲ್ಲಿ ಯಶಸ್ವಿಯಾಗುವ ಹೆಣ್ಣಿನ ಹಠಮಾರಿತನ, ಮನೋಬಲ ಮತ್ತು ಸಾಧಿಸುವ ವಿಧಾನ ನಿಜಕ್ಕೂ ರಾಮಾಯಣದಲ್ಲಿ ಅಷ್ಟಾಗಿ ಚರ್ಚಿತವಾಗದ, ಎದ್ದುಕಾಣಿಸದ ಬಲು ದೊಡ್ಡ ಸೋಜಿಗ!

ಹುಡುಕಿದಳೆ ಹೊಸಹಾದಿ ಅಗಸನ ಜತೆಯಾಗುವ ಸರದಿ
ಅರಿತು ರಾಜ ಸೂಕ್ಷ್ಮ ಲೋಕಾಪವಾದ ಬಲಹೀನತೆ ತೆರದಿ
ಮಡಿವಾಳರ ಬೀದಿ ಜಗಳ ಕೇಳದಿಹರೆ ಗೂಢಚಾರರ ಬಲ
ಸತಿಯನೊಪ್ಪಲು ನಾ ರಾಮನೆ ತೊಲಗೆಂದ ಅಗಸ ಖೂಳ || 13 ||

ತಲುಪಿ ಸುದ್ದಿಗೆ ರಾಮ ಮನಕಿರುವುದೆ ಆರಾಮಾವಿಶ್ರಾಮ
ರಾಜಧರ್ಮ ಜನಹಿತ ಕಾಯುವ, ಸಮಷ್ಟಿ ಪ್ರಜ್ಞೆ ಸಂಗ್ರಾಮ
ತುಂಬು ಹುಣ್ಣಿಮೆ ಚಂದಿರನಂತೆ, ಬಿರಿಯುವ ಗರ್ಭಿಣಿ ಸೀತೆ
ಲೋಕಾಪವಾದಕೆ ಹೆದರಿ, ಕಾಡಿಗಟ್ಟುವುದೆ ಸುಲಭ ಮಾತೆ || 14 ||
  
ಸರಿಯೊ ತಪ್ಪೊ ಸ್ವಂತಕೆ, ಜನರೊಪ್ಪುವ ನಡುವಳಿಕೆ ತತ್ವ
ಆ ಕಾಲದಲೊಬ್ಬರ ಅಸಮ್ಮತ, ದನಿಯೂ ಪ್ರ ಜಾಪ್ರಭುತ್ವ
ಹೇಗುಳಿದಳಿಯುವಳೊ ಬಸುರಿ ಹೆಣ್ಣ ಪಾಡಿಗೆ ಎಳ್ಳುನೀರು
ಸುದ್ದಿಯೂ ಹೇಳದೆ ರಥವೋಡಿರೆ, ಕಾಡಲಿ ಕಾಯ್ವವರಾರು || 15 ||

ಅವಳೀಬಾರಿ ಹುಡುಕಿದ್ದಾದರೂ ಎಂತಹ ದಾರಿ? ನೇರ ಶ್ರೀರಾಮನ ಬಲಹೀನತೆಯನ್ನೆ ಹುಡುಕಿ ಹೊಡೆಯುವ ಹಾದಿ. ಪ್ರಜೆಗಳ ಹಿತವನ್ನೆ ನೋಡುವ ದೊರೆ, ಲೋಕಾಪವಾದಕ್ಕೆ, ಲೋಕನಿಂದನೆಗೆ ಹೆದರುತ್ತಾನೆಂಬ ಸೂಕ್ಷ್ಮವನ್ನರಿತು, ಅಗಸನೊಬ್ಬನ ಜತೆಗೂಡಿ ದೊಡ್ಡ ನಾಟಕವನ್ನೆ ಆಡಿಬಿಡುತ್ತಾಳೆ. ಮನೆ ಜಗಳವನ್ನು ಬೇಕೆಂದೆ ಬೀದಿಗೆ ತಂದಿರಿಸಿ, ಎಲ್ಲರ ಕಿವಿ, ಬಾಯಿಗೂ ಬೀಳುವಂತೆ ಮಾಡಿಬಿಡುತ್ತಾಳೆ. ಇನ್ನದೆ ಮಾತು ಗೂಢಚಾರರ ಕಿವಿಗೂ ಬಿದ್ದು ಶ್ರೀರಾಮನ ತನಕ ತಲುಪದಿರುವುದೆ?

ತಲುಪಿತೇನೊ ಸರಿ, ಆದರೆ ಮತ್ತೆ ಸಂದಿಗ್ದ ಮಾತ್ರ ರಾಮನಿಗೆ. ಅತ್ತ ದರಿ, ಇತ್ತ ಪುಲಿ ಎಂಬಂತಹ ಪರಿಸ್ಥಿತಿ. ಕೊನೆಗೂ ಲೋಕಾಪವಾದದ ಬಿಸಿಗಿಂತ, ಸತಿಯನ್ನು ಮತ್ತೆ ಕಾಡಿಗಟ್ಟುವ ಮಾತೆ ಸುಲಭ ಸಾಧ್ಯದ್ದಾಗಿ ತೋರಿ, ಅವಳು ತುಂಬು ಗರ್ಭಿಣಿಯೆಂಬುದನ್ನೂ ಪರಿಗಣಿಸದೆ ಕಾಡಿಗಟ್ಟಿಬಿಡುತ್ತಾನೆ. ಪ್ರಜಾಪ್ರಭುತ್ವದಲಿ ಆ ಒಂದು ಒಡಕಿನ ದನಿಯು ಅಷ್ಟೆ ಮುಖ್ಯ ಎಂಬ ತತ್ವಕ್ಕೆ ಬಲಿಬಿದ್ದು, ಕಾಡಲ್ಲಿ ಗರ್ಭಿಣಿ ಸ್ತ್ರೀಯನ್ನು ಕಾಪಾಡುವವರಾದರೂ ಯಾರು ಎಂಬುದನ್ನು ಯೋಚಿಸದೆ ಅಟ್ಟಿಬಿಡುತ್ತಾನೆ. ಹೀಗೆ ಇಲ್ಲಿಯು ಶೂರ್ಪನಖಿ, ತನ್ನ ಕಾರ್ಯತಂತ್ರ ಯಶಸ್ವಿಯಾಗುವಂತೆ ನೋಡಿಕೊಂಡುಬಿಡುತ್ತಳೆ! ಈ ಬಾರಿ ಹೆಚ್ಚು ಕಡಿಮೆ ಈ ವಿದಾಯ ಜೀವನ ಪರ್ಯಂತ್ಯವೂ ಆಗಿ ಅವಳ ಗುರಿಸಾಧನೆಗೆ ಸಹಕರಿಸಿ ಬಿಡುತ್ತದೆ!

ಉಳಿದಿದ್ದೆಲ್ಲ ಪುರಾಣ, ಇತಿಹಾಸ ತಥ್ಯಾ ಮಿಥ್ಯಾ ಅನಗತ್ಯ
ಇದೆಲ್ಲ ಗಡಿಬಿಡಿ ರಾಮಾಯಣದಿ ಶೂರ್ಪನಖಿ ಗೆಲುವೆ ಸತ್ಯ
ಹೇಗೊ ಸಾಧಿಸಿಬಿಟ್ಟಳಬಲೆ ಛಲಧಿ ಸೀತಾರಾಮವಿಯೋಗ
ಎರಡನೆ ಬಾರಿಯೂ ಗೆಲುವು, ಇರದೆ ಯಾರ ಸಹಯೋಗ || 16 ||

ಅದಕವಳತಿಶಯದ ಹೆಣ್ಣು ರಾಕ್ಷಸಿ ಜಯಿಸಿದ ದೇವ ಜಾತಿ
ಕೈ ರಕ್ತಪಾತವಿರದೆ ಬರಿ, ಬುದ್ದಿಯಲೆ ನಡೆಸಿಬಿಟ್ಟಳೆ ಕ್ರಾಂತಿ
ತಾನೆ ಪಡದಿದ್ದರೂ ಸುಖ ಪಡಲೂ ಬಿಡದ ಯಶಸ್ಸಿನ ಚೊಕ್ಕ
ಯಾರವಳಂತಿಹರೊ ಕಾಣೆ ಸದ್ದಿಲ್ಲದೆ ಯಶ ಸಾಧನೆ ಕುಹಕ || 17 ||

ವಂದ್ಯಳೊ ಅವಂದ್ಯಳೊ ಶೂರ್ಪಿಣಿ ಹೆಣ್ಣಾಗವಳ ಸಾಧನೆಯೆ
ಮೆಚ್ಚಲೆಬೇಕು ಕಾರ್ಯತಂತ್ರ, ಯಶಗಳಿಸಿದವಳ ಗರಿಮೆಯೆ
ಸೈನ್ಯಾಧಿಕಾರ ಜನಧನಬಲವಿಲ್ಲದೆ, ಹೇಗುರುಳಿಸಿದ ದಾಳ
ಎಷ್ಟೊಂದು ಜಾಣ್ಮೆ ನೇಪಥ್ಯದೆ, ಯಾರೂ ಮಾತಾಡರೆ ಬಹಳ || 18 ||

ಹೀಗೆ ಒಂದು ಚೂರೂ ಸ್ವನಿಯೋಜಿತ / ಸ್ವಪ್ರಾಯೋಜಿತ ರಕ್ತಪಾತವಿರದೆ, ಸ್ವಂತಕ್ಕೆ ಎಳ್ಳಷ್ಟೂ ನೋವಿರದಂತೆ ಎರಡನೆ ಬಾರಿಯೂ ರಾಮಾಸೀತೆಯರನ್ನು ಬೇರಾಗಿಸಿಬಿಡುತ್ತಾಳೆ ಯಶಸ್ವಿಯಾಗಿ. ಅದೆಲ್ಲದರ ಸಾಧನೆಯು ಸದ್ದಿರದೆ ನಡೆದ ಮೌನ ಕ್ರಾಂತಿಯ ಹಾಗೆ. ತನಗಿರದ ಸುಖದ ನೆಲೆ, ತನ್ನ ಎದುರಾಳಿಗೂ ಇರಬಾರದೆಂದು ಬಯಸಿ ಯಶ ಸಾಧಿಸಿದ ರೀತಿಯೆ ರೋಚಕ ಕಥನ. ಅವಳು ರಾಕ್ಷಸಿಯಾಗಿ ವಂದ್ಯಳೊ, ಅವಂಧ್ಯಳೊ ಅದು ಬೇರೆ ವಿಚಾರ. ಆದರೆ ಮುತ್ಸದ್ದಿತನ, ಕಾರ್ಯತಂತ್ರ ಗಳ ವಿಷಯಕ್ಕೆ ಬಂದರೆ, ಹೆಣ್ಣಾಗಿ ಅವಳ ಜಾಣ್ಮೆಯ ಸಾದನೆ ಮಾತ್ರ ಅಸಾಧಾರಣ ಮತ್ತು ಹೋಲಿಸಲಸದಳ. ಹಾಗಿದ್ದೂ, ಬಹುಶಃ ಅವಳನುಸರಿಸಿದ ಮೌನ ಅಥವ ಗೂಢ ಧೋರಣೆಯಿಂದಲೊ ಏನೊ, ಯಾವ ಬಲ ಬೆಂಬಲವು ಇರದೆ ಅವಳು ಗಳಿಸಿದ ಗೆಲುವನ್ನು ಕುರಿತು ಯಾರೂ ಅಷ್ಟಾಗಿ ಮಾತಾಡಿದ್ದಾಗಲಿ, ಚರ್ಚಿಸಿದ್ದಾಗಲಿ ಕಾಣುವುದಿಲ್ಲ. ಪ್ರಾಯಶಃ ಅವಳಿಗೆ ಬೇಕಾಗಿದ್ದೂ ಅದೆ ಇತ್ತೊ ಏನೊ? ಗಮ್ಯ ತಲುಪಲು ಅಥವ ಅದಕ್ಕೆ ಹತ್ತಿರವಾದಾಗ ಡೋಲು, ತಮಟೆ , ಜಾಗಟೆ ಬೀಸಿ ಹುಯಿಲೆಬ್ಬಿಸುವ ಜಾಯಮಾನವಲ್ಲ ಅವಳದು. ಸದ್ದಿರದೆ ಎಲ್ಲವನ್ನೂ ಸುಸೂತ್ರವಾಗಿ ನಡೆಸಿಬಿಡುವ ಚತುರಮತಿ ಹೆಣ್ಣು. ಆ ದೃಷ್ಟಿಕೋನದಿಂದ ನೋಡಿದರೆ ರಾಮಾಯಣದಲ್ಲಿ ಅವಳದು ಅವಳದೆ ಆದ ರೀತಿಯಲ್ಲಿ ಒಂದು ವಿಶಿಷ್ಟ ಪಾತ್ರ ಎಂದು ಮಾತ್ರ ಖಂಡಿತವಾಗಿ ಹೇಳಬಹುದು.

ಒಂದು ವಿಧದಲ್ಲಿ ಶೂರ್ಪನಖಿ ಅದೃಷ್ಟವಂತೆಯೆಂದೆ ಹೇಳಬೇಕು - ಮಾಡಿದ್ದೆಲ್ಲಾ ಮಾಡಿ ಹಿನ್ನಲೆಗೆ ಸರಿದರೂ, ಅವಳತ್ತ ಬೊಟ್ಟು ಮಾಡಿ ಹಾಡಿದವರು ಕಡಿಮೆಯೆ. ಹಾಗೆಯೆ, ತಾನು ಬಯಸಿದ್ದು ಸಿಕ್ಕಿತೊ, ಇಲ್ಲವೊ - ಅವಳು ಮಾತ್ರ ಸಾಕಷ್ಟು ತೃಪ್ತಿ, ಸಂತೋಷಗಳಿಂದಲೆ ಜೀವನ ಕಳೆದಳೆನ್ನಬೇಕು, ಕನಿಷ್ಟ ಸೇಡು ತೀರಿಸಿಕೊಂಡ ದೃಷ್ಟಿಯಿಂದಲಾದರೂ! ಅವಳಿಂದ ಪಡಬಾರದ ಪಾಡು ಪಟ್ಟ ರಾವಣ, ರಾಮ, ಸೀತೆ, ಲಕ್ಷ್ಮಣರಂತವರಿಗೆ ಹೋಲಿಸಿದರೆ ಅವಳದು ಸಾಕಷ್ಟು ಸುಖಿ ಜೀವನ. ಆದ್ದರಿಂದಲೆ, ಶೂರ್ಪನಖಿ, ನೀ ತುಂಬಾ ಸುಖಿ ಎಂದು ಹೇಳಲೇನಡ್ಡಿಯಿಲ್ಲವೆನಿಸುತ್ತದೆ. 

ನೀವೇನನ್ನುತ್ತೀರಾ?

______________________________________________________________________________

ಅಡಿ ಟಿಪ್ಪಣಿ 1 : ಶೂರ್ಪನಖಿಯೆ ಅಗಸಗಿತ್ತಿಯಾಗಿ ಬಂದದ್ದನ್ನು ನಾನು ಓದಿದ್ದು ಚಂದಮಾಮ ರಾಮಾಯಣದಲ್ಲಿ. ಅದು ಮೂಲ ವಾಲ್ಮೀಕಿ ರಾಮಾಯಣದಲ್ಲಿತ್ತೊ, ಇಲ್ಲವೊ ಗೊತ್ತಿಲ್ಲ. ಆದರೂ ಶೂರ್ಪನಖಿಯ ಪಾತ್ರ ವಿಶ್ಲೇಷಣೆಗೆ ಅದು ಪೂರಕವಾಗಿರುವುದರಿಂದ ಆ ಆಧಾರವನ್ನೆ ಬಳಸಿಕೊಂಡಿದ್ದೇನೆ. 
______________________________________________________________________________

ಅಡಿ ಟಿಪ್ಪಣಿ 2: ತಡೆರಹಿತ ಓದುವಿಕೆಯ ಅನುಕೂಲಕ್ಕಾಗಿ ಇಲ್ಲಿ ಮತ್ತೆ ಒಟ್ಟಾಗಿ ಸೇರಿಸಿದ ಪದ್ಯಗಳ ಗೊಂಚಲು.

_______________________________________
ಶೂರ್ಪನಖಿ, ಆಹಾ! ಎಂಥಾ ಸುಖಿ! - 
_______________________________________

ಆ ಕಾಲದಲೆ ಕಾರ್ಯತಂತ್ರಜ್ಞೆ, ಕುಶಾಗ್ರಮತಿ ಸುಖಿ
ರಾವಣನೆಂಬೊಬ್ಬ ರಾಕ್ಷಸರಾಜನ ತಂಗಿ ಶೂರ್ಪನಖಿ
ಅಬ್ಬಬ್ಬಾ ಏನು ಜಾಣೆ, ಬಂಗಾರವನೆ ನುಂಗುವ ಮಣಿ
ಗಂಡಸರೆಲ್ಲರನಾಡಿಸಿದಳೆ ಬುಗುರಿ, ಬರಿಮಾತಲೇಣಿ || 01 ||

ಮಾತೆ ಬಂಡವಾಳ, ಮಾತಾಳಿ ಉಂಡಾಡಿಕೊಂಡವಳ
ದಂಡಕಾರಣ್ಯದಲಿ ಸುತ್ತುತ, ರಾಮಚಂದ್ರನ ಕಂಡಳಾ
ಸುರ ಸುಂದರನ ಕಂಡಾಗ, ಬರದಿದ್ದೀತೆ ಮೋಹದುರಿ
ನಾಚಿಕೆಯಿಲ್ಲದ ಹೆಣ್ಣಿನ, ನಿವೇದನೆ ಬಯಕೆಯ ಭೂರಿ || 02 ||

ಏಕಪತ್ನಿವ್ರತಸ್ತ ರಾಮ, ಏಕಾದಾನು ವಿಚಲಿತ ಧೂಮ
ಅತಿಶಯದಪರೂಪ, ಸೌಂದರ್ಯ ರಾಶಿ ಸೀತಾಮಯ 
ಪಶುವಿನುದ್ದದ ಕರ್ಣ ನಖಗಳಾಭರಣ ಆರಾವಣ ಕೇಶಿ
ನಸುನಕ್ಕು ತೋರಿಸೆ ಸೀತೆ, ಲಕ್ಷ್ಮಣನತ್ತ ಗಮನ ಹರಿಸಿ || 03 ||

ರಕ್ಕಸಿ ಜಾಣೆ ಹೇಗೂ ಲಕ್ಷ್ಮಣ ಕಾಡ ಬ್ರಹ್ಮಚಾರಿ ತಾನೆ
ಅಂದದಲೇನು ಕಮ್ಮಿ, ರಾಮನಿಗೂ ಮೀರಿಸಿದ ಬಣ್ಣನೆ
ಇರದು ಸೀತೆಯ ಕಾಟ, ಸೌಮಿತ್ರಿಯೆ ಸರಿ ಸಹವಾಸ
ಹಲ್ಕಿರಿದೆ ಬಣ್ಣಿಸಿ ಮೋಹ, ಲಕ್ಷಣದವನಾಗಿಸೆ ದಾಸ || 04 ||

ಮುಂಗೋಪೀ ಲಕ್ಷ್ಮಣ, ಹೆಸರಲಷ್ಟೆ ಲಕ್ಷಣ ಗುರಿ ತೀಕ್ಷ್ಣ
ಕಳುಹಿದವರಾರೆಂದು ಅರಿತವನೆ, ತಿಳಿದನೆಲ್ಲ ಸೂಕ್ಷ್ಮ
ಒಳ್ಳೆಯ ಮಾತಲ್ಹೇಳಿದರೆಲ್ಲಿ, ಕೇಳುವಳಾ ರಕ್ಕಸಮಳ್ಳಿ
ಸಿಟ್ಟಲಿ ಕೊಯ್ದ ಶೂರ್ಪನಖಿಯ ಕಿವಿಮೂಗನೆ ಶರದಲಿ || 05 ||

ಸುರಿದ ರಕ್ತದ ಗೋಳೆ ಬೊಬ್ಬಿರಿದಳೆ ದಶಕಂಠನ ತಂಗಿ
ಉಕ್ಕೇರಿತು ಕೋಪ ರಾಮ ಲಕ್ಷ್ಮಣ ಮಾಡಿದರೆ ಕಮಂಗಿ
ತಿರುಗವಳ ರೋಷವೆಲ್ಲ, ನಾರಿ ಸುಂದರಿ ಜಾನಕಿಯತ್ತ 
ಅವಳಿಂದಲೆ ತಾನೆ ಸಿಗ ರಾಮ, ಸೇಡಿಗೆ ಹಾತೊರೆದಿತ್ತ || 06 ||

ಬಿದ್ದೊದ್ದಾಡಿದ ತಂಗಿಯ ಗತಿಗೆ ಕರಗದಿಹನೆ ದಶಾನನ
ಕಥೆ ಕಟ್ಟಿದ ಹೆಣ್ಣಿನ ನೆತ್ತರಲೆ, ಕುದಿದು ಕರಗಿಸಿತೆ ಮನ
ಉರಿಯಿತು ಕೋಪಜ್ವಾಲೆ, ಅರ್ಜ್ಯ ಸುರಿದಳೆ ಪರಿಪರಿಯೆ
ಅಪರಿಮಿತ ಸುಂದರಿಯಾ ಸೀತೆ ನಿನಗಿಲ್ಲವೇಕೊ ಅರಿಯೆ || 07 ||

ವಿಚಲಿತ ಮನ ಬಣ್ಣನೆಯೆ, ಬಾಯಲಿ ನೀರೂರಿಸುತಿರಲು
ಕೊಟ್ಟಳೆ ಸಲಹೆ ಸೇಡಿಗಪಹರಿಸೆ, ರಾಮನದನ್ನೆಯೆ ಕೀಲು
ಕಾಡಿನಲೊಣಗೊ ಹೂವ್ವಾಗಿರಬಾರದೇಕೆ ನಿನ್ನರಮನೆರಾಣಿ
ರಾಮಹೃದಯ ಕದ್ದವಳ ಮಾಡಿಕೊ, ನಿನ್ನಂತರಂಗದರಗಿಣಿ || 08 ||

ಒಂದೇ ಕಲ್ಲಲ್ಹೊಡೆದೆರಡೆರಡು ಹಕ್ಕಿ ಚಾಣಾಕ್ಷೆ ಶೂರ್ಪನಖಿ
ಸೀತೆಯಿಲ್ಲದ ರಾಮನನೊಪ್ಪಿಸಬಹುದೆಂಬ ನೀತಿಗ್ಹುಡುಕಿ
ಸಿಗದಿದ್ದರೂ ಕನಿಷ್ಟ ವಿಯೋಗದೆ ರಾಮ ಜೀವವ ತೊರೆವ
ತನಗೆ ಸಿಕ್ಕದಿರೆ ಸೀತೆಗಿಲ್ಲದಂತೆ ಮಾಡೆ ಕುಟಿಲೋಪಾಯ || 09 ||

ಕಡೆಗೂ ಸಾಧಿಸಿಬಿಟ್ಟಳೆ ಸೇಡು ಬಿದ್ದಾ ರಾವಣನೂ ಬಲೆಗೆ
ಕದ್ದು ಸೀತೆಯನ್ಹೊಯ್ದು ಲಂಕೆಗೆ ಕಾಡಿದ ರಾಮ ಲಕ್ಷ್ಮಣಗೆ
ಕೋಪದಲಿ ಕೊಯ್ದ ಕಿವಿ ಮೂಗಿಗೆ ಸೀತಾ ವಿಯೋಗ ಶಿಕ್ಷೆ
ಅರೆಕ್ಷಣದ ಲಕ್ಷ್ಮಣ ಮುಂಗೋಪಕೆ ಕಪಿಸಖ್ಯ ಯುದ್ಧಾವಸ್ತೆ || 10 ||

ಛಲದಂಕಮಲ್ಲರು ಬಿಡದೆ ಕಾದಿದರೂ ಯುದ್ದಾರಣರಂಗ
ಕಾಣಳೆಲ್ಲೂ ಮೂಲಾ ಶೂರ್ಪನಖಿ ಮಾಯವಾದ ಪ್ರಸಂಗ
ತಂತ್ರ ಪ್ರತಿತಂತ್ರ ಅಸ್ತ್ರ ಶಸ್ತ್ರಾಸ್ತ್ರ ಖಂಡುಗ ಯೋಧ ಬಲಿ
ವಿಪರ್ಯಾಸವೆ ಯುದ್ಧದ ಕೊನೆಗೆ ತಂಗಿಯಾದಳೆ ತಬ್ಬಲಿ || 11 ||

ಮುಗಿದ ಯುದ್ಧದಿ ಗೆಲುವು ಸೀತಾರಾಮರ ಮಿಲನದಂತ್ಯ
ಉರಿದೆಬ್ಬಿಸಿ ಮತ್ಸರ ಬೆಂಕಿ ರಕ್ಕಸಿ ಬೇರ್ಪಡಿಸಲೆ ಕುತಂತ್ರ
ಬೇರಾದರೂ ದಂಪತಿ ಸಾಗದ ಕಾಳಗ ಹಾದಿ ಕೊನೆತನಕ
ಹೊಸ ತಂತ್ರವನೆ ಬಳಸಿ ಬೇರಾಗಿಸುವ ತಿರಸ್ಕೃತೆ ತವಕ || 12 ||

ಹುಡುಕಿದಳೆ ಹೊಸಹಾದಿ ಅಗಸನ ಜತೆಯಾಗುವ ಸರದಿ
ಅರಿತು ರಾಜ ಸೂಕ್ಷ್ಮ ಲೋಕಾಪವಾದ ಬಲಹೀನತೆ ತೆರದಿ
ಮಡಿವಾಳರ ಬೀದಿ ಜಗಳ ಕೇಳದಿಹರೆ ಗೂಢಚಾರರ ಬಲ
ಸತಿಯನೊಪ್ಪಲು ನಾ ರಾಮನೆ ತೊಲಗೆಂದ ಅಗಸ ಖೂಳ || 13 ||

ತಲುಪಿ ಸುದ್ದಿಗೆ ರಾಮ ಮನಕಿರುವುದೆ ಆರಾಮಾವಿಶ್ರಾಮ
ರಾಜಧರ್ಮ ಜನಹಿತ ಕಾಯುವ, ಸಮಷ್ಟಿ ಪ್ರಜ್ಞೆ ಸಂಗ್ರಾಮ
ತುಂಬು ಹುಣ್ಣಿಮೆ ಚಂದಿರನಂತೆ, ಬಿರಿಯುವ ಗರ್ಭಿಣಿ ಸೀತೆ
ಲೋಕಾಪವಾದಕೆ ಹೆದರಿ, ಕಾಡಿಗಟ್ಟುವುದೆ ಸುಲಭ ಮಾತೆ || 14 ||
  
ಸರಿಯೊ ತಪ್ಪೊ ಸ್ವಂತಕೆ, ಜನರೊಪ್ಪುವ ನಡುವಳಿಕೆ ತತ್ವ
ಆ ಕಾಲದಲೊಬ್ಬರ ಅಸಮ್ಮತ, ದನಿಯೂ ಪ್ರ ಜಾಪ್ರಭುತ್ವ
ಹೇಗುಳಿದಳಿಯುವಳೊ ಬಸುರಿ ಹೆಣ್ಣ ಪಾಡಿಗೆ ಎಳ್ಳುನೀರು
ಸುದ್ದಿಯೂ ಹೇಳದೆ ರಥವೋಡಿರೆ, ಕಾಡಲಿ ಕಾಯ್ವವರಾರು || 15 ||

ಉಳಿದಿದ್ದೆಲ್ಲ ಪುರಾಣ, ಇತಿಹಾಸ ತಥ್ಯಾ ಮಿಥ್ಯಾ ಅನಗತ್ಯ
ಇದೆಲ್ಲ ಗಡಿಬಿಡಿ ರಾಮಾಯಣದಿ ಶೂರ್ಪನಖಿ ಗೆಲುವೆ ಸತ್ಯ
ಹೇಗೊ ಸಾಧಿಸಿಬಿಟ್ಟಳಬಲೆ ಛಲಧಿ ಸೀತಾರಾಮವಿಯೋಗ
ಎರಡನೆ ಬಾರಿಯೂ ಗೆಲುವು, ಇರದೆ ಯಾರ ಸಹಯೋಗ || 16 ||

ಅದಕವಳತಿಶಯದ ಹೆಣ್ಣು ರಾಕ್ಷಸಿ ಜಯಿಸಿದ ದೇವ ಜಾತಿ
ಕೈ ರಕ್ತಪಾತವಿರದೆ ಬರಿ, ಬುದ್ದಿಯಲೆ ನಡೆಸಿಬಿಟ್ಟಳೆ ಕ್ರಾಂತಿ
ತಾನೆ ಪಡದಿದ್ದರೂ ಸುಖ ಪಡಲೂ ಬಿಡದ ಯಶಸ್ಸಿನ ಚೊಕ್ಕ
ಯಾರವಳಂತಿಹರೊ ಕಾಣೆ ಸದ್ದಿಲ್ಲದೆ ಯಶ ಸಾಧನೆ ಕುಹಕ || 17 ||

ವಂದ್ಯಳೊ ಅವಂದ್ಯಳೊ ಶೂರ್ಪಿಣಿ ಹೆಣ್ಣಾಗವಳ ಸಾಧನೆಯೆ
ಮೆಚ್ಚಲೆಬೇಕು ಕಾರ್ಯತಂತ್ರ, ಯಶಗಳಿಸಿದವಳ ಗರಿಮೆಯೆ
ಸೈನ್ಯಾಧಿಕಾರ ಜನಧನಬಲವಿಲ್ಲದೆ, ಹೇಗುರುಳಿಸಿದ ದಾಳ
ಎಷ್ಟೊಂದು ಜಾಣ್ಮೆ ನೇಪಥ್ಯದೆ, ಯಾರೂ ಮಾತಾಡರೆ ಬಹಳ || 18 ||
 
- ಧನ್ಯವಾದಗಳೊಂದಿಗೆ
   ನಾಗೇಶ ಮೈಸೂರು
 
 

Comments

Submitted by H A Patil Fri, 10/25/2013 - 19:34

ನಾಗೇಶ ಮೈಸೂರು ರವರಿಗೆ ವಂದನೆಗಳು
ರಾಮಾಯಣದಲ್ಲಿ ಶೂರ್ಪನಖಿ ಕಡೆಗಣಸಲ್ಪಟ್ಟ ಒಂದು ಸಣ್ಣ ಪಾತ್ರ, ಸಂಧರ್ಭೋಚಿತವಾಗಿ ಆಕೆಯ ಪಾತ್ರ ಬಂದು ಹೋಗುತ್ತದೆ. ಅವಳು ಕುರೂಪಿಯಾದರೂ ಅವಳಿಗೂ ಭಾವನೆಗಳಿವೆ, ಆಕೆಯನ್ನು ತನ್ನ ಕಾರ್ಯಸಾದನೆಗೆ ರಾವಣ ಆಕೆಯನ್ನು ಒಂದು ದಾಳದ ರೀತಿಯಲ್ಲಿ ಉಪಯೋಗಿಸುವುದು ವಿಷಾದ ತರಿಸುವ ಸಂಗತಿ, ಶೂರ್ಪನಖಿಯನ್ನು ಬಹಳ ಅದ್ಭುತವಾಗಿ ಚಿತ್ರಿಸಿದ್ದೀರಿ, ಶೂರ್ಪನಖಿ ಕುರಿತು ಅತ್ಯುತ್ತಮ ಬರಹ ನೀಡಿದ್ದೀರಿ ಧನ್ಯವಾದಗಳು.

Submitted by nageshamysore Sat, 10/26/2013 - 05:33

In reply to by H A Patil

ಹಿರಿಯ ಪಾಟೀಲರಿಗೆ ನಮಸ್ಕಾರ. ಶೂರ್ಪನಖಿಯ ಪಾತ್ರ ಗೌಣತೆಯದಾದರೂ, ರಾಮಾಯಣದ ಕಥಾನದಲ್ಲಿ ಅದುಂಟು ಮಾಡಿದ ಪರಿಣಾಮ ಸೀಮಾತೀತ ಮಟ್ಟದ್ದು. ಅವಳನ್ನು ಕೇವಲ ಭಾವನಾತ್ಮಕ ಹೆಣ್ಣಾಗಿ ಪರಿಗಣಿಸದೆ ಚಾಣಕ್ಷ್ಯತೆಯ ಬುದ್ಧಿವಂತಿಕೆಯ ಹೆಣ್ಣಾಗಿ ತುಲನೆ ಮಾಡಿ ನೋಡುವ ಯತ್ನ ಈ ಬರಹದ್ದು. ತುಸು ವಿಭಿನ್ನ ದೃಷ್ಟಿಕೋನದಲ್ಲಿ ನೋಡುವ ಯತ್ನ. ತಮ್ಮ ಎಂದಿನ ಮನಃಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by makara Sun, 10/27/2013 - 09:22

ನಾಗೇಶರೆ,
ಅಗಸನು ರಾಮನನ್ನು ತೆಗಳುವ ಕಾರ್ಯದಲ್ಲಿ ಶೂರ್ಪನಖಿಯ ಪಾತ್ರದ ಬಗ್ಗೆ ನನಗೂ ಅನುಮಾನವಿದೆ. ಅದನ್ನು ಬದಿಗಿರಿಸಿದರೆ, ಶೂರ್ಪನಖಿಯ ಸಮಗ್ರ ಚಿತ್ರಣವನ್ನು ಬಹಳ ಚೆನ್ನಾಗಿ ಗದ್ಯ ಮತ್ತು ಪದ್ಯ ರೂಪಗಳಲ್ಲಿ ಹಿಡಿದಿಟ್ಟಿದ್ದೀರ. ಶೂರ್ಪನಖಿಯ ಬಗೆಗೆ ನಿಮ್ಮ ಅಭಿಪ್ರಾಯವನ್ನೇ ಸ್ವಾಮಿ ಸೋಮನಾಥಾನಂದರು ರಚಿಸಿರುವ ರಾಮಾಯಣ ಶೀಲ ಸೌರಭ ಎನ್ನುವ ಕಿರುಹೊತ್ತಗೆಯು ಅನುಮೋದಿಸುತ್ತದೆ. ರಾವಣನಿಗೆ ಶೂರ್ಪನಖಿ ತನ್ನನ್ನು ರಾಮನು ಅವಮಾನಿಸಿದನೆಂದಾಗ ಅವನು ಅದನ್ನು ಕೇವಲ ಒಂದು ಸಾಮಾನ್ಯ ವಿಷಯವಾಗಿ ತೆಗೆದುಕೊಳ್ಳುತ್ತಾನೆ, ಏಕೆಂದರೆ ಶೂರ್ಪನಖಿ ರಾವಣನ ಸ್ವಂತ ತಂಗಿಯೇನೂ ಅಲ್ಲ. ಯಾವಾಗ ಅವಳು ಸೀತೆಯ ಕುರಿತಾಗಿ ಪರಿಪರಿಯಾಗಿ ಬಣ್ಣಿಸುತ್ತಾಳೋ ಆಗ ಅವನು ಅವಳನ್ನು ಅಪಹರಿಸಲು ಸಿದ್ಧನಾಗುತ್ತಾನೆ. ಏಕೆಂದರೆ ರಾಮನು ಅಸಹಾಯ ಶೂರನೆಂದು ರಾವಣನಿಗೆ ಸೀತೆಯ ಸ್ವಯಂವರದಲ್ಲೇ ಅರ್ಥವಾಗಿ ಹೋಗಿತ್ತು. ಆದ್ದರಿಂದ ಅವನು ಕುಟಿಲೋಪಾಯದಿಂದ ಮಾರೀಚನನ್ನು ಬಳಸಿಕೊಂಡು ಸೀತೆಯ ಅಪಹರಣವನ್ನು ಮಾಡುತ್ತಾನೆ.
ಎಲ್ಲಾ ವಿಷಯಗಳನ್ನೂ ಬಹಳ ಕೂಲಂಕಷವಾಗಿ ಮತ್ತು ಸೂಕ್ಷ್ಮ ಎಳೆಗಳೊಂದಿಗೆ ಚಿತ್ರಿಸಿರುವ ನಿಮ್ಮ ಬರಹದ ಶೈಲಿಗೆ ಅಭಿನಂದನೆಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

(ಒಂದು ವಿಷಯ ಸ್ವಲ್ಪ ಅಪ್ರಸ್ತುತವೆನಿಸುತ್ತದೆ. ಹಾಗೆಯೇ ಬಂದ ಆಲೋಚನೆ ಏನೆಂದರೆ ವಾನರರೆಂದರೆ ಈಗಿನ ಗೆರಿಲ್ಲಾಗಳಂತೆ ಯುದ್ಧ ನೈಪುಣ್ಯವನ್ನು ಹೊಂದಿದವರಿರಬಹುದು ಹಾಗಾಗಿ ಅವರಿಗೆ ವಾನರರೆಂಬ ಬಿರುದು ಬಂದಿರಬಹುದು. ಏಕೆಂದರೆ ಗೆರಿಲ್ಲಾಗಳು ಗುಡ್ಡಗಾಡುಗಳಲ್ಲಿ ಯುದ್ಧ ಮಾಡುವುದರಲ್ಲಿ ಪ್ರವೀಣರಲ್ಲವೇ? )

Submitted by nageshamysore Mon, 10/28/2013 - 03:27

In reply to by makara

ಶ್ರೀಧರರೆ, ಶೂರ್ಪನಖಿಯೆ ಅಗಸಗಿತ್ತಿಯಾಗಿ ಬಂದು ಸೀತೆಯನ್ನು ಕಾಡಿದ್ದು ತಾರ್ಕಿಕವಾಗಿಯಂತು ಸಮಂಜಸವಾಗಿ ಹೊಂದಿಕೆಯಾಗುತ್ತದೆ. ಏಕೆಂದರೆ, ರಾಮರಾಜ್ಯದಲ್ಲಿದ್ದ ಪ್ರಜೆಗಳಲ್ಲಿ ಅಂತಹ ಕುಟಿಲ ಮನೋಭಾವವುಳ್ಳ ಸಾಮಾನ್ಯ ಪ್ರಜೆಗಳನ್ನು ಊಹಿಸುವುದು ತುಸು ಕಷ್ಟಕರವೆ - ಅದರಲ್ಲೂ ಅವರ ವನವಾಸದ ಕಷ್ಟಗಳೆಲ್ಲ ತಿಳಿದೂ ಸಹ. ಶೂರ್ಪನಖಿಗಾದರೊ ಅದೆ ಪರಮ ಧ್ಯೇಯವಾಗಿತ್ತು ; ಮೊದಲ ಯತ್ನ ವೈಫಲ್ಯದ ಹಿನ್ನಲೆ ಬೇರೆಯಿತ್ತು. ಪ್ರಜೆಗಳ ಮಾತಿಗೆ ಬೆಲೆಕೊಡುವ ರಾಮನ ಆಳ್ವಿಕೆಯ ಗುಣಧರ್ಮದ ಅರಿವಿತ್ತು. ಹೀಗಾಗಿ ಇದನ್ನೆಲ್ಲ ಸೂಕ್ತವಾಗಿ ಬಳಸಿಕೊಂಡು ಮತ್ತೆ ಸಾಮರಸ್ಯದಲ್ಲಿ ಹುಳಿ ಹಿಂಡುವ ಕಾಯಕ ಮಾಡಲು ಶೂರ್ಪನಖಿಗೆ ಪರಿಪಕ್ವ ಸನ್ನಿವೇಶವಿತ್ತು. ಹೀಗಾಗಿ, ಅದರ ಮೂಲ ಸತ್ಯಾಸತ್ಯತೆಯ ಬಗ್ಗೆ ಖಚಿತ ಮಾಹಿತಿ ಇರದಿದ್ದರೂ, ವಿಶ್ಲೇಷಣೆಗೆ ಸೂಕ್ತವೆನಿಸಿ ಹಾಗೆಯೆ ಬಳಸಿಕೊಂಡೆ.

ವಾನರರ ಕುರಿತು ನಿಮ್ಮ ಅನಿಸಿಕೆ ಬಹುಶಃ ಸತ್ಯಕ್ಕೆ ಹತ್ತಿರವೆಂದು ಕಾಣುತ್ತದೆ. ಕಾಡಿನಲ್ಲಿ, ಗುಡ್ಡಗಾಡಿನಲ್ಲಿ ವಾಸಿಸುವ ಮೂಲ ಆದಿವಾಸಿ ಅಥವ ಕಾಡು ಜನರ ಹಾಗೆ ಕಾಡಿನ ಅಥವ ಗುಡ್ಡಗಾಡಿನ ಯುದ್ಧತಂತ್ರದಲ್ಲಿ ಪರಿಣಿತಿ ಪಡೆದ ಗುಂಪೆನ್ನಲು ಸಾಕಷ್ಟು ಪ್ರೇರಣೆಗಳಿವೆ. ಅದೊಂದು ಇಂಟರೆಸ್ಟಿಂಗ್ ಅಬ್ಸರ್ವೆಶನ್. ಮುಂದೊಮ್ಮೆ ಅದರ ಕುರಿತು ವಿವರ ವಿಶ್ಲೇಷಣೆ ನಡೆಸಲೆತ್ನಿಸಿದರೆ, ಇನ್ನೂ ಆಳದ ಕುರುಹುಗಳು ಕಾಣಿಸಬಹುದು :-)