"DOCTOR"ಗಿರಿ!
"DOCTOR"ಗಿರಿ!
ಇಸವಿ ೧೯೯೫.
ಒಂದು ವರ್ಷದ ಹಿಂದಷ್ಟೇ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಪ್ರಾಜೆಕ್ಟ್ ಒಂದರಲ್ಲಿ ೫ ವರ್ಷ ಸಂಶೋಧನಾ ವಿದ್ಯಾರ್ಥಿಯಾಗಿ ಕೆಲಸ ಮಾಡಿ, ನಂತರ ಇನ್ನೂ ಒಂದೂಮುಕ್ಕಾಲು ವರ್ಷ ಮಣ್ಣು ಹೊತ್ತು ”ಡಾಕ್ಟೊರೇಟ್’ ಪದವಿ ಸಂಪಾದಿಸಿದ್ದೆ! ೭ ವರ್ಷದ ಅಧ್ಯಯನದ ಫಲವೆಂದರೆ ಸುಮ್ಮನೇ ಬಂತೇ? ಸರಿ ಎಲ್ಲೆಲ್ಲಿ ಹೆಸರು ನಮೂದಿಸುವ ಅವಕಾಶವಿತ್ತೋ ಅಲ್ಲೆಲ್ಲಾ ಡಾ. ಕೇಶವ ಪ್ರಸಾದ್ ಎಂದೇ ಬರೆಯುತ್ತಿದ್ದೆ. ಅದು ಬ್ಯಾಂಕಿನ ಚಲನ್ ಇರಬಹುದು ಅಥವಾ ರೈಲು / ಬಸ್ಸಿನ ಸೀಟು ಕಾದಿರಿಸುವಿಕೆಯ ಫಾರಂ ಆಗಿದ್ದರೂ ಸರಿಯೇ!
ಹಾಗೊಮ್ಮೆ ಬೆಂಗಳೂರು - (ಮದರಾಸು ಮಾರ್ಗವಾಗಿ) - ಜಬಲ್ಪುರಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ೨ ರಾತ್ರಿಗಳ ಪ್ರಯಾಣ! ಎರಡನೆಯ ರಾತ್ರಿ ಸೊಂಪಾಗಿ ನಿದ್ರಿಸುತ್ತಿದ್ದಾಗ ಮಧ್ಯದಲ್ಲಿ ಯಾರೋ ತಟ್ಟಿ ಎಬ್ಬಿಸಿದಂತಾಯಿತು. ಇನ್ನೂ ಬೆಳಕು ಹರಿಯದಿರುವ ಈ ಅಪರಾತ್ರಿಯಲ್ಲಿ ಸವಿನಿದ್ದೆಗೆ ಭಂಗ ತಂದವರಾರೆಂದು ಗೊಣಗಿಕೊಳ್ಳುತ್ತಲೇ ಪ್ರಯತ್ನಪೂರ್ವಕವಾಗಿ ಕಣ್ಣು ತೆಗೆದವನಿಗೆ ಕಾಣಿಸಿದ್ದು T.T.E.! ಎರಡು ಘಂಟೆಯ ಹಿಂದಷ್ಟೇ ಟಿಕೆಟ್ ಪರಿಶೀಲಿಸಿ ಆಗಿತ್ತಲ್ಲಾ ಎಂದು ಯೋಚಿಸುತ್ತಾ ’ಏನು ಸಾರ್’ ಎಂದು ಕೇಳಿದೆ. ಅದಕ್ಕೆ ಅವರು ’ನಿದ್ರೆಯಿಂದ ಎಬ್ಬಿಸಿದ್ದಕ್ಕೆ ಕ್ಷಮಿಸಿ! ನೀವು ಡಾಕ್ಟರ್ ಕೇಶವ ಪ್ರಸಾದ್ ಅಲ್ಲವೇ?’ ಎಂದು ಕೇಳಿದರು. ಹೌದೆಂದು ತಲೆಯಾಡಿಸಿದೆ. ಅದಕ್ಕೆ ಅವರು ’ದಯವಿಟ್ಟು ಸ್ವಲ್ಪ S - 10 ಬೋಗಿಗೆ ಬರುತ್ತೀರಾ? ಅಲ್ಲಿ ಪ್ರಯಾಣಿಕರೊಬ್ಬರಿಗೆ ತುರ್ತಾಗಿ ವೈದ್ಯಕೀಯ ಚಿಕಿತ್ಸೆ ಬೇಕಾಗಿದೆ. ಅದಕ್ಕೆ ನನ್ನ ಬಳಿಯಿದ್ದ ಪ್ರಯಾಣಿಕರ ಲಿಸ್ಟ್ ನಲ್ಲಿ ನಿಮ್ಮ ಹೆಸರು ನೋಡಿ ನಿಮ್ಮಲ್ಲಿಗೆ ಬಂದೆ. ಸ್ವಲ್ಪ ಬೇಗ ಬರುತ್ತೀರಾ’ ಎಂದರು. ಅದಕ್ಕೆ ನಾನು ’ನಾನು ವೈದ್ಯಕೀಯ ವೃತ್ತಿಯ ಡಾಕ್ಟರ್ ಅಲ್ಲವೆಂದೂ, ನಾನೊಬ್ಬ ಭೂವಿಜ್ಞಾನಿಯೆಂದೂ ವಿವರಿಸಿ ಹೇಳಬೇಕಾಯಿತು. ಆದರೆ ಅವರಿದ್ದ ಪರಿಸ್ಥಿತಿಯಲ್ಲಿ ಅದನ್ನು ಪೂರ್ತಿ ಕೇಳಿಸಿಕೊಳ್ಳುವ ವ್ಯವಧಾನ ಇರಲಿಲ್ಲ. ’ಸರಿ ಸರಿ, ತೊಂದರೆ ಕೊಟ್ಟಿದ್ದಕ್ಕೆ ಕ್ಷಮಿಸಿ’ ಎನ್ನುತ್ತಾ ಆತುರಾತುರವಾಗಿ, ತಮ್ಮ ಕೈಯಲ್ಲಿದ್ದ ಪ್ರಯಾಣಿಕರ ಹೆಸರಿನ ಪಟ್ಟಿಯ ಹಾಳೆಗಳನ್ನು ತಿರುವಿಹಾಕುತ್ತ ಅಲ್ಲಿಂದ ಹೊರಟು ಹೋದರು.
ಅದಾದ ಮೇಲೆ ಸುಮಾರು ಹೊತ್ತು ನಿದ್ದೆ ಬರಲಿಲ್ಲ! ಯೋಚಿಸುತ್ತಾ ಮಲಗಿದವನಿಗೆ ಹೀಗೆ ಎಲ್ಲ ಕಡೆ ಹೆಸರಿನ ಹಿಂದೆ "ಡಾಕ್ಟರ್’ ಉಪಾಧಿ ಬಳಸುವುದು ಸರಿಯಲ್ಲ, ಇನ್ನು ಮುಂದೆ ಹೀಗಾಗಬಾರದು. ಸಾಮಾನ್ಯವಾಗಿ ಯಾರಿಗೂ ತೊಂದರೆಯಾಗದಿದ್ದರೂ, ಕೆಲವೊಂದು ಸನ್ನಿವೇಶಗಳಲ್ಲಿ ಅಮೂಲ್ಯವಾದ ಸಮಯ ವ್ಯರ್ಥವಾಗಬಹುದಲ್ಲವೇ ಎನಿಸಿತು. ಅಂದಿನಿಂದ ನನ್ನ ಈ ಡಾ. ಕೇಶವ್ ಎಂದು ಬರೆಯುವ ದುರ್-ಅಭ್ಯಾಸವನ್ನು ಬಿಟ್ಟೆ! ಅದು ಏನಿದ್ದರೂ - ನನ್ನ ವೃತ್ತಿಗೆ ಸಂಬಂಧಿಸಿದಂತಹ ಸ್ಥಳ-ಸಮ್ಮೇಳನ ಇತ್ಯಾದಿಗಳಲ್ಲಿ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಾತ್ರವೇ ನಾನು ಡಾ. ಕೇಶವ್! ಇನ್ನುಳಿದ ಕಡೆಗಳಲ್ಲೆಲ್ಲಾ ನಾನು ಬರೀ ’ಕೇಶವ್’ ಅಷ್ಟೇ!
ಅದಾಗಿ ಒಂದೆರಡು ವರ್ಷಗಳ ನಂತರದಿಂದ, ಪ್ರಯಾಣದ ಸೀಟು ಕಾದಿರಿಸುವ ಫಾರಂ ಗಳಲ್ಲೆಲ್ಲಾ ’ನೀವು ವೈದ್ಯಕೀಯ ವೃತ್ತಿಯ ಡಾಕ್ಟರ್ - ಹೌದು / ಇಲ್ಲ - ನಮೂದಿಸಿ ಎನ್ನುವ ಹೊಸ ಸಾಲು ಸೇರ್ಪಡೆಯಾಯಿತು. ಆಗ, ಪರವಾಗಿಲ್ಲ, ಈ ಬದಲಾವಣೆಗೆ ನನ್ನ ತಪ್ಪೂ ಒಂದು ಕಾರಣವಾಗಿರಬಹುದಲ್ಲವೇ ಎಂದುಕೊಂಡೆ.
(ಇದು, ನನ್ನ ಲೇಖನಗಳಿಗೆ ಪ್ರತಿಕ್ರಿಯಿಸುವಾಗ ಸಂಪದಿಗ ಶ್ರೀಕರ್ ರವರು ನನ್ನನ್ನು ’ಡಾಕ್ಟರ್ ಕೇಶವ್’ ಎಂದು ಸಂಭೋದಿಸಿದ್ದರಿಂದ ಪ್ರೇರಿತವಾದ ಬರಹ. ಹಾಗಾಗಿ ಸಂಪದದಲ್ಲಿ ನಾನು ಬರೀ ’ಕೇಶವ್’ ಅಷ್ಟೇ!)
- ಕೇಶವ ಮೈಸೂರು
Comments
ಉ: "DOCTOR"ಗಿರಿ!
ತಮ್ಮ ಭಾವನೆ ಸರಿಯಾಗಿದೆ ಡಾ! ಕೇಶವ್ ಸರ್ , ಇಲ್ಲಿ ಡಾ! ಉಪಯೋಗಿಸುವದರಲ್ಲಿ ತೊಂದರೆ ಏನಿಲ್ಲ ಸರಿಯಾದ ಸ್ಥಳ!
In reply to ಉ: "DOCTOR"ಗಿರಿ! by partha1059
ಉ: "DOCTOR"ಗಿರಿ!
ಡಾ। ಕೇಶವ ಪ್ರಸಾದರೇ,
ನಿಮ್ಮ ಸಂಶೋಧನಾಶೀಲತ್ವವನ್ನು ಗೌರವಿಸಲೋಸುಗ ಡಾ। ಎಂದು ಸಂಬೋಧಿಸಿದೆ ಅಷ್ಟೇ.
.
ನಾನು ಬಳಸಿದ ಒಂದೇ ಒಂದು ಅಕ್ಷರದಿಂದ ಪ್ರೇರಿತರಾಗಿ ಒಂದು ಒಳ್ಳೆಯ ಸ್ವಾರಸ್ಯಕರವಾದ ಬರಹವನ್ನೇ ಹೆಣೆದಿರಿ ! :-)))