ನಿಜವ ತಿಳಿಯೋಣ ಭಾಗ-1

ನಿಜವ ತಿಳಿಯೋಣ ಭಾಗ-1

ನಿಜವ ತಿಳಿಯೋಣ

[ವೇದಾಧ್ಯಾಯೀ ಶ್ರೀಸುಧಾಕರಶರ್ಮರ ಉಪನ್ಯಾಸದ ಭರಹ ರೂಪ]

 

[ಕಳೆದ 47ಭಾನುವಾರಗಳಿಂದ ನಿರಂತರವಾಗಿ ಹಾಸನದ ಸ್ಥಳೀಯ ಪತ್ರಿಕೆ ಜನಮಿತ್ರದಲ್ಲಿ ಬರೆಯುತ್ತಿರುವ “ಎಲ್ಲರಿಗಾಗಿ ವೇದ” ಸರಣಿಯನ್ನು ಕೆಲವು ದಿನ ಸಂಪದದಲ್ಲಿ ಹಂಚಿಕೊಳ್ಳಲಾಗಿತ್ತು. ಇನ್ನು ಮುಂದೆ ಪ್ರತೀ ಭಾನುವಾರ ಮುಂದಿನ ಬರಹಗಳನ್ನು ಪ್ರಕಟಿಸಲಾಗುವುದು]

 

ಅಥರ್ವವೇದದ ಒಂದು ಮಂತ್ರದ ಬಗ್ಗೆ ಇಂದು ವಿಚಾರ ಮಾಡೋಣ.

 

ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತ ವಾ ಕುಮಾರೀ|

 ತ್ವಂ ಜೀರ್ಣೋ ದಂಡೇನ ವಂಚಸಿ ತ್ವಂ ಜಾತೋ ಭವಸಿ ವಿಶ್ವತೋ ಮುಖ: ||

[ಅಥರ್ವ ವೇದ ೧೦ನೇ ಕಾಂಡ, ೮ನೇ ಸೂಕ್ತ,೨೭ ನೇ ಮಂತ್ರ]

 

ಆತ್ಮನ  ವಿಚಾರವನ್ನು ಮೇಲಿನ ಮಂತ್ರದಲ್ಲಿ ವಿವರಿಸಲಾಗಿದೆ.

ತ್ವಂ ಸ್ತ್ರೀ = ನೀನು ಹೆಣ್ಣಾಗಿದ್ದೀಯೆ

ತ್ವಂ ಪುಮಾನಸಿ = ನೀನು ಗಂಡೂ ಕೂಡ ಆಗಿದ್ದೀಯೆ

ಅಂದರೆ ಆತ್ಮಕ್ಕೆ ಲಿಂಗವಿಲ್ಲ. ಅದು ಗಂಡೂ ಹೌದು, ಹೆಣ್ಣೂ ಹೌದು.ಅಂದರೆ ಅದು ಗಂಡು ಶರೀರದಲ್ಲಿದ್ದಾಗ ಗಂಡು, ಹೆಣ್ಣುಶರೀರದಲ್ಲಿದ್ದಾಗ ಹೆಣ್ಣು ಎಂದು ಕರೆಸಿಕೊಳ್ಳುತ್ತದೆ. ತ್ವಂ ಕುಮಾರ ಉತ ವಾ ಕುಮಾರೀನೀನು ಕುಮಾರನೂ ಹೌದು ಅಂತೆಯೇ ಕುಮಾರಿಯೂ ಹೌದು. ಅಣುಚೇತನಕ್ಕೆ [ಆತ್ಮಕ್ಕೆ] ಅದರದೇ ಆದ  ಲಿಂಗವ್ಯವಸ್ಥೆ ಇಲ್ಲದಿರುವುದರಿಂದ ಅದು ಗಂಡೂ ಹೌದು, ಹೆಣ್ಣೂ ಹೌದು, ಕುಮಾರನೂ ಹೌದು, ಕುಮಾರಿಯೂ ಹೌದು. ಅಂದರೆ ಅದು ಯಾವ ಶರೀರದಲ್ಲಿ, ಯಾವ ಸ್ಥಿತಿಯಲ್ಲಿರುತ್ತದೋ ಅದರಂತೆ  ಗಂಡು/ಹೆಣ್ಣು/ಕುಮಾರ/ಕುಮಾರೀ ಎಂದು ಕರೆಯಲ್ಪಡುತ್ತದೆ.

ತ್ವಂ ಜೀರ್ಣೋ ದಂಡೇನ ವಂಚಸಿ  ನೀನು ಒಂದು ಕಾಲದಲ್ಲಿ ಆಶರೀರವು ಜೀರ್ಣವಾದಾಗ ಕೋಲನ್ನು ಹಿಡಿದುಕೊಂಡು ತಡವರಿಸಿಕೊಂಡು ನಡೆಯುತ್ತೀಯೆ  ಅಂದರೆ ಇಲ್ಲಿ ಕುಮಾರ,ಕುಮಾರಿ, ಹೆಣ್ಣು, ಗಂಡು, ವೃದ್ಧ, ಈ ಎಲ್ಲಾ ಸ್ಥಿತಿಯುಂಟಾಗುವುದು ಈ ಅಣುಚೇತನವು ಯಾವ ಶರೀರದಲ್ಲಿದೆಯೋ ಆ ಶರೀರಕ್ಕೆ ಆದ್ದರಿಂದ ಶರೀರಕ್ಕೆ ವೃದ್ಧಾಪ್ಯ ಬಂದಾಗ  ಕೋಲನ್ನು ಹಿಡಿದುಕೊಂಡು ತಡವರಿಸಿಕೊಂಡು ನಡೆಯುತ್ತೀಯೆ ಎಂದು ವಿವರಿಸಲಾಗಿದೆ.ಅಣುಚೇತನಕ್ಕೆ ಮಾತ್ರ ಅದರದೇ ಆದ ಬಾಲ್ಯ-ಯೌವ್ವನ, ವೃದ್ಧಾಪ್ಯದ ಸ್ಥಿತಿಯಾಗಲೀ, ಲಿಂಗವಾಗಲೀ ಇರುವುದಿಲ್ಲ. ಶರೀರದಲ್ಲಿರುವವರೆಗೂ ಆ ಶರೀರಕ್ಕನುಗುಣವಾಗಿ ಗುರುತಿಸಲ್ಪಡುತ್ತದೆ. ಶರೀರವು ಜೀರ್ಣವಾಗಿ ಈ ಶರೀರ,ಇಂದ್ರಿಯ ಮನಸ್ಸುಗಳನ್ನು ಸಾಧನವಾಗಿ ಬಳಸಲು ಅಣುಚೇತನಕ್ಕೆ  ಅಸಾಧ್ಯವಾದಾಗ ಅಂದರೆ ಆ ಶರೀರವು ಅಂತ್ಯವಾದಮೇಲೆ ಅಣುಚೇತನ ಎಲ್ಲಿ ಹೋಗುತ್ತದೆ? ಎಂಬುದನ್ನು ಮಂತ್ರದ ಮುಂದಿನಭಾಗವು ಸ್ಪಷ್ಟಪಡಿಸುತ್ತದೆ.

ತ್ವಂ ಜಾತೋ ಭವಸಿ ವಿಶ್ವತೋ ಮುಖ:

ಈವರಗೆ ಇದ್ದ ಶರೀರದಲ್ಲಿ ಶರೀರ ಇಂದ್ರಿಯ ಮತ್ತು ಮನಸ್ಸನ್ನು ಸಾಧನವಾಗಿ ಇನ್ನು ಉಪಯೋಗಿಸಲು ಸಾಧ್ಯವಿಲ್ಲವೆಂದಾಗ  ಮುಂದೇನಾಗುತ್ತದೆ?  ಎಂಬುದಕ್ಕೆ  ಅಣುಚೇತನವನ್ನು ಕುರಿತು ಮಂತ್ರದ ಈ ಭಾಗ ಹೇಳುತ್ತದೆ ಈ ಶರೀರವನ್ನು ಬಿಟ್ಟು ಬೇರೆ ಶರೀರದಲ್ಲಿ ವಿಶ್ವದಲ್ಲಿ ಎಲ್ಲಿ ಬೇಕಾದರೂ  ಪ್ರಕಟವಾಗುತ್ತೀಯೆ ಒಂದು ಶರೀರವನ್ನು ಬಿಟ್ಟ ಅಣುಚೇತನವು ಮತ್ತೊಂದು ಶರೀರವನ್ನು ಸೇರಬೇಕಾದರೆ ಹಿಂದಿನ ಜನ್ಮದಲ್ಲಿ[ಹಿಂದಿನ ಶರೀರಗಳಲ್ಲಿ] ಮಾಡಿರುವ ಕರ್ಮಗಳ ಆಧಾರದ ಮೇಲೆ  ಯಾವ ಶರೀರವನ್ನು ಸೇರಬೇಕೆಂಬುದು ನಿರ್ಧರಿಸಲ್ಪಡುತ್ತದೆ. ತಾನು ಮಾಡಿದ ಹಿಂದಿನ ಕರ್ಮಾನುಸಾರ ಹೊಸ  ಶರೀರವು ಈ ಅಣುಚೇತನಕ್ಕೆ ಲಭ್ಯವಾಗುತ್ತದೆ.

ಅಂದರೆ ನಾವು ನಮ್ಮ ನಮ್ಮ ಹಿಂದಿನ ಜನ್ಮದ ಕರ್ಮಾನುಸಾರ ಇಂದಿನ ಜನ್ಮದಲ್ಲಿ ಯಾವ ಗರ್ಭದಲ್ಲಿ ಜನ್ಮವೆತ್ತಬೇಕೋ ಅದರಂತೆ ಜನ್ಮವೆತ್ತಿದ್ದೇವೆ. ಕರ್ಮದ ಫಲವನ್ನು ಮುಂದಿನ ಮಂತ್ರದಲ್ಲಿ ಇನ್ನೂ ಸ್ಪಷ್ಟವಾಗಿ ತಿಳಿಸಲಾಗಿದೆ.

 

ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈ: ಸಮಮಮಾನ ಏತಿ|

ಅನೂನಂ ಪಾತ್ರಂ ನಿಹಿತಂ ನ ಏತತ್ ಪಕ್ತಾರಂ ಪಕ್ವ: ಪುನರಾ ವಿಶಾತಿ||

[ಅಥರ್ವ ವೇದದ ೧೨ ನೇ ಕಾಂಡ,೩ನೇ ಸೂಕ್ತದ ೪೮ ನೇ ಮಂತ್ರ]

 ಮೇಲಿನ ಮಂತ್ರಕ್ಕೆ ಪೂರಕವಾಗಿರುವ ಇನ್ನೂ ಹಲವು ವೇದಮಂತ್ರಗಳ ಆಧಾವಾಗಿಟ್ಟುಕೊಂಡು ಈ ಮಂತ್ರವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಅತ್ರ ಕಿಲ್ಬಿಷಮ್ ನ   ಇಲ್ಲಿ ಕಿಲುಬು[ದೋಷ] ಇಲ್ಲ. ಅಂದರೆ ಭಗವಂತನ ವ್ಯವಸ್ಥೆಯಲ್ಲಿ ಯಾವ ದೋಷವೂ ಇಲ್ಲ. ಭಗವಂತನ  ವ್ಯವಸ್ಥೆಗಳೆಲ್ಲವೂ ದೋಷಮುಕ್ತವಾಗೇ ಇವೆ. ಅಂದರೆ ಈಗ್ಗೆ ಹತ್ತು ಸಾವಿರವರ್ಷಗಳ ಹಿಂದೆ ಯಾವ ವ್ಯವಸ್ಥೆ ಇತ್ತೋ ಅದೇ ವ್ಯವಸ್ಥೆ ಇಂದೂ ಇದೆ. ಅಂದೂ ಸರಿಯಾಗಿತ್ತು.ಇಂದೂ ಸರಿಯಾಗಿಯೇ ಇದೆ.ಆದರೆ ನಾವು ಮಾಡುವ ವ್ಯವಸ್ಥೆ ಹೇಗಿರುತ್ತದೆ, ಒಂದು ಉಧಾಹರಣೆ ನೋಡೋಣ. ಸ್ವಾತಂತ್ರ್ಯ  ಬಂದಮೇಲೆ ನಮ್ಮ ದೇಶದ ಸಂವಿಧಾನ ರಚಿಸಿದರು.ಕೇವಲ ಅರವತ್ತು ವರ್ಷಗಳಲ್ಲಿ ನೂರಕ್ಕೂ ಹೆಚ್ಚು ತಿದ್ದುಪಡಿಯನ್ನು ನಾವೇ ಮಾಡಿದ್ದೇವೆ. ಇನ್ನೂ ಎಷ್ಟು ಮಾಡುತ್ತೀವೋ ಗೊತ್ತಿಲ್ಲ. ಆದರೆ ಭಗವಂತನ ವ್ಯವಸ್ಥೆಯು ಎಲ್ಲಾ ಕಾಲಕ್ಕೂ ಒಂದೇ ಆಗಿರುತ್ತದೆ.

ಮುಂದಿನ ಮಂತ್ರಭಾಗ  ನಾಧಾರೋ ಅಸ್ತಿ ಇದಕ್ಕೆ ಯಾವ ಆಧಾರವೂ ಇಲ್ಲ.ಇದೇನಿದು? ಆಧಾರವಿಲ್ಲದ ಯಾವ ಮಾತನ್ನೂ ಒಪ್ಪಿಕೊಳ್ಳಬಾರದು ಎಂದು ವೇದವೇ ಹೇಳುತ್ತದೆ. ಆದರೆ ಭಗವಚ್ಛಕ್ತಿಯ ವಿಚಾರದಲ್ಲಿ ಯಾವ ಆಧಾರವೂ ಇಲ್ಲ, ಎಂದರೆ ಏನು?

ಇಲ್ಲಿ ಸೂಕ್ಷ್ಮವನ್ನು ಅರ್ಥಮಾಡಿಕೊಳ್ಳ ಬೇಕಾಗುತ್ತದೆ. ಆಧಾರವೆಂಬುದು ಯಾವಾಗ ಬೇಕಾಗುತ್ತದೆ?

ಯಾವುದು ಸ್ವಯಂ ಸಿದ್ಧವಾಗಿದೆಯೋ ಅದಕ್ಕೆ ಆಧಾರ ಬೇಕಾಗಿಲ್ಲ. ಉಧಾಹರಣೆಗೆ ಸೂರ್ಯನಿಂದ ಶಾಖ ಮತ್ತು ಬೆಳಕು ಹೊರಹೊಮ್ಮುತ್ತದೆ, ಎಂಬುದಕ್ಕೆ ಯಾವ ಆಧಾರದ ಅಗತ್ಯವಿದೆ? ಯಾವ ಆಧಾರವೂ ಬೇಕಾಗಿಲ್ಲ, ತಾನೇ? ಅದು ಸ್ವಯಂ ಸಿದ್ಧ. ಆದರೆ ಯಾವುದಕ್ಕೆ ಆಧಾರಬೇಕಾಗುತ್ತದೆಂದರೆ ಎರಡು ವಿಚಾರಗಳಿದ್ದು,ಇದು ಸರಿಯೇ? ಅಥವಾ ಅದು ಸರಿಯೇ? ಎಂಬ ಗೊಂದಲ ಬಂದಾಗ ಯಾವುದು ಸರಿ ಎಂಬುದಕ್ಕೆ ಆಧಾರಬೇಕಾಗುತ್ತದೆ.ಯಾವುದಾದರೂ ಪ್ರಮಾಣ ಬೇಕಾಗುತ್ತದೆ.ಆದರೆ ಭಗವಚ್ಛಕ್ತಿಯ ವಿಚಾರಕ್ಕೆ ಯಾವ ಆಧಾರದ ಅಗತ್ಯವೂ ಇಲ್ಲ.

ಆಧಾರದ ಬಗ್ಗೆ ಚರ್ಚಿಸುವಾಗ ಮತ್ತೊಂದು ವಿಚಾರವನ್ನೂ  ಕೂಡ ಗಮನಿಸಬೇಕು.  ಯಾವುದಾದರೂ ವಿಚಾರವನ್ನು ಸರಿ ಎಂದು ಹೇಳಬೇಕಾದರೆ ಅದಕ್ಕಿಂತ ಪ್ರಾಚೀನವಾದ ಸತ್ಯಕ್ಕೆ ಅದನ್ನು ಹೋಲಿಸಿ ನೋಡಿ ಅದು ಸರಿಯೇ ತಪ್ಪೇ ಎಂದು ನಿರ್ಧರಿಸಬೇಕಾಗುತ್ತದೆ. ಆದರೆ ಪ್ರಪಂಚದ ಅತ್ಯಂತ ಪ್ರಾಚೀನ ಸಾಹಿತ್ಯವು ವೇದವೇ ಆಗಿರುವಾಗ ವೇದವನ್ನು ಯಾವುದಕ್ಕೆ ಹೋಲಿಕೆ ಮಾಡಿ ನೋಡಲು ಸಾಧ್ಯ? ಆದ್ದರಿಂದ ವೇದವು ವಿವರಿಸುವ ಭಗವಚ್ಛಕ್ತಿಯ ವಿಚಾರವನ್ನೂ ಯಾವುದಕ್ಕಾದರೂ ಹೋಲಿಸಲು ಅದಕ್ಕಿಂತ ಪ್ರಾಚೀನ ಸಾಹಿತ್ಯ ಇಲ್ಲವಾದ್ದರಿಂದ ಯಾವ ಆಧಾರವು ಇಲ್ಲ ಎಂದು ವಿವರಿಸಲಾಗಿದೆ, ಎಂದು ಅರ್ಥಮಾಡಿಕೊಳ್ಳಬಹುದು.

 ಯನ್ಮಿತ್ರೈ: ಸಮಮಮಾನ ಏತಿ ನಾವು ನಮ್ಮ ಬಂಧು ಬಾಂಧವರೊಡಗೂಡಿ ಇದ್ದೇವೆ. ಆದ್ದರಿಂದ ನಾವು ಸುರಕ್ಷಿತ ಎಂದು ಕೊಂಡರೆ ವೇದವು ಹೇಳುತ್ತದೆ ಇಲ್ಲ ಭಗವಂತನ ವ್ಯವಸ್ಥೆ ಏನಿದೆ, ಅದನ್ನು ಮುರಿಯಲಾಗುವುದಿಲ್ಲ.

ಒಂದು ಉಧಾಹರಣೆ ನೋಡೋಣ. ಒಬ್ಬ ವ್ಯಕ್ತಿಯು ಯಾವುದೋ ರೋಗಕ್ಕೆ ತುತ್ತಾಗಿದ್ದಾನೆ. ಸಾಕಷ್ಟು ಜನ ಬಂಧು ಬಳಗ ಇದ್ದಾರೆ. ಶ್ರೀಮಂತಿಕೆ ಇದೆ. ಹೈಟೆಕ್ ಆಸ್ಪತ್ರೆಯಲ್ಲಿ ಹತ್ತಾರು ಜನ ಸ್ಪೆಶಲಿಸ್ಟ್ ಗಳು ಚಿಕಿತ್ಸೆ ಕೊಡುತ್ತಿದ್ದಾರೆ. ಆದರೆ ಪ್ರಾಣ ಹೋಗುವ ಸಮಯ ಬಂದರೆ ಯಾರೂ ಅದನ್ನು ತಡೆಯಲಾರರು. ಭಗವಂತನ ನಿಯಮವನ್ನು ಯಾರೂ ಮುರಿಯಲಾರರು. ಅದೇ ಅಂತಿಮ. ಕೊನೆಯಲ್ಲಿ ವೈದ್ಯರು ಹೇಳುವುದೂ ಇದನ್ನೇ ನಾವು ಮಾಡುವ ಎಲ್ಲಾ ಪ್ರಯತ್ನ ಮಾಡಿದೆವು. ಇನ್ನು ಭಗವಂತನ ಇಚ್ಛೆ.

ಅಂದರೆ ನಾವು ಏನು ಕೆಲಸ ಮಾಡಬೇಕಾದರೂ ಭಗವಂತನ ನಿಯಮವನ್ನರಿತು ಕೆಲಸಮಾಡಿದರೆ ಯಶಸ್ವಿಯಾಗುತ್ತೇವೆ, ಹೊರತು ಅದಕ್ಕೆ ವಿರುದ್ಧವಾಗಿ ಕೆಲಸ ಮಾಡಿದರೆ ಯಾವ ಬಂಧು ಬಳಗವೂ ನಮ್ಮನ್ನು ರಕ್ಷಿ   ಸಲಾಗದು.ಅದ್ದರಿಂದ ಭಗವಂತನ ನಿಯಮವನ್ನು ಅರಿತುಬಾಳಿದರೆ ಜೀವನದಲ್ಲಿ ಸುಖ, ನೆಮ್ಮದಿ, ಶಾಂತಿ ಸಿಗಲು ಸಾಧ್ಯ. ಭಗವಂತನ ನಿಯಮಗಳ ಬಗ್ಗೆ ಈಗಾಗಲೇ ಚರ್ಚಿಸಿದ್ದೇವೆ. ಸರಳವಾಗಿ ಹೇಳಬೇಕೆಂದರೆ ಸತ್ಯವನ್ನೇ ಹೇಳು,ಕಳ್ಳತನ ಮಾಡಬೇಡ,ಹಿಂಸೆ ಮಾಡಬೇಡ ಎಂಬುದು ನಿಯಮಗಳು. ಸತ್ಯವನ್ನು ಹೇಳುವ ಅಥವ ಹೇಳದಿರುವ ಸ್ವಾತಂತ್ರ್ಯ ನಮಗೇ ತಾನೇ ಇರುವುದು? ಕಳ್ಳತಾನ ಮಾಡುವ ಅಥವಾ ಮಾಡದಿರುವ ನಿರ್ಧಾರವನ್ನು ಮಾಡಬೇಕಾಗಿರುವವರು ನಾವೇ ತಾನೇ? ಹಿಂಸೆ ಮಾಡುವ ಅಥವಾ ಮಾಡದಿರುವ ನಿರ್ಧಾರವನ್ನು ನಾವೇ ತಾನೇ ಮಾಡಬೇಕು. ಸರಿಯಾದ ನಿರ್ಧಾರ ತೆಗೆದುಕೊಂಡರೆ ಭಗವಂತನ ನಿಯಮದಂತೆ ಬದುಕು ಸಾಗುತ್ತದೆ, ಬದುಕು ಉಜ್ವಲವಾಗುತ್ತದೆ,ಇಲ್ಲವಾದರೆ ಬದುಕಿನಲ್ಲಿ ಸುಖ, ಸಂತೋಷ ನೆಮ್ಮದಿ ಸಿಗಲು ಸಾಧ್ಯವೇ ಇಲ್ಲ. ಅದಕ್ಕಾಗಿಯೇ

ಇನ್ನೊಂದು ವೇದ ಮಂತ್ರವು ಹೇಳುತ್ತದೆ  ನಾ  ಅನ್ಯಪಂಥಾ ವಿದ್ಯತೇ ಅಯನಾಯ  ಬೇರೆ ದಾರಿಯೇ ಇಲ್ಲ. ಭಗವಂತನ ನಿಯಮದಂತೆ ಕ್ರಮಿಸುವಿರಾ? ನಿಮಗೆ ಯಶಸ್ಸು ಇದೆ,ಇಲ್ಲದಿದ್ದರೆ ಇಲ್ಲ. ನಮಗೆ ಬದಲೀ ಮಾರ್ಗ ವಿಲ್ಲ.

ಒಟ್ಟಿನಲ್ಲಿ ಈ ಒಂದು ವೇದಮಂತ್ರದ ಮೊದಲಭಾಗದಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದ್ದು ಏನೆಂದರೆ. . ೧] ಭಗವಂತನ ವ್ಯವಸ್ಥೆಯಲ್ಲಿ ದೋಷವಿಲ್ಲ

೨] ಭಗವಂತನವಿಚಾರವು ಸ್ವಯಂ ಸಿದ್ಧವಾದ್ದರಿಂದ ಯಾವ ಆಧಾರದ ಅಗತ್ಯವಿಲ್ಲ.

೩] ಭಗವಂತನ ನಿಯಮಕ್ಕೆ ವಿರುದ್ಧವಾಗಿ ನಮ್ಮ ಬಂಧುಬಳಗವೂ ಕೂಡ ನಮ್ಮನ್ನು ರಕ್ಷಿಸಲಾರದು

            ಈ ಮಂತ್ರ ಭಾಗದ ಒಟ್ಟು ಸಾರವೆಂದರೆ ಭಗವಂತನನ್ನು ನಂಬಿ ಅವನ ನಿಯಮದಂತೆ ಸತ್ಯದ ಪಥದಲ್ಲಿ ಸಾಗಿದರೆ ನಮ್ಮ ಜೀವನದಲ್ಲಿ ಸುಖ, ನೆಮ್ಮದಿ ಶಾಂತಿ ದೊರಕಬಲ್ಲದು. ಭಗವಂತನ ನಿಯಮ ಮೀರಿ ಜೀವನ ಸಾಗಿಸಿದ್ದೇ ಆದರೆ ಜೀವನದಲ್ಲಿ ಸುಖ, ನೆಮ್ಮದಿ,ಶಾಂತಿ ಸಿಗಲು ಸಾಧ್ಯವಿಲ್ಲ. ಇದೇ ಮಂತ್ರದ ಮುಂದಿನ ಭಾಗವು ಇನ್ನೂ ಅದ್ಭುತವಾಗಿದ್ದು ಅದರ ಅರ್ಥವನ್ನು ಮುಂದಿನವಾರ ನೋಡೋಣ.

-ಹರಿಹರಪುರಶ್ರೀಧರ್

Rating
No votes yet