ಕುಂಟು ಕುದುರೆಯೇರಿ ಹೊರಟಿವೆ ಕುರುಡು ಯೋಜನೆಗಳು

ಕುಂಟು ಕುದುರೆಯೇರಿ ಹೊರಟಿವೆ ಕುರುಡು ಯೋಜನೆಗಳು

      ಕುಂಟು ಕುದುರೆಯೇರಿ ಹೊರಟಿವೆ ಕುರುಡು ಯೋಜನೆಗಳು

     ಇಂದಿನ ‘ಘನ ಸರ್ಕಾರ’ ಕೈಗೊಂಡಿರುವ ‘ಬಡವರ ಉದ್ಧಾರದ’ ಯೋಜನೆಗಳು ಸಮಾಜವನ್ನು ಎತ್ತ ಕೊಂಡೊಯ್ಯುತ್ತಿದೆ? ಕ್ಷಣಕಾಲ ಯೋಚಿಸಿದರೆ ನಡುಕ ಹುಟ್ಟುತ್ತದೆ.ಕರ್ಮಯೋಗಿ ಬಸವಣ್ಣನ ಕರ್ಮ ಭೂಮಿ ಕರ್ನಾಟಕದಲ್ಲೀಗ ಅವರ ಜೀವನ ತತ್ವವಾದ ‘ಕಾಯಕವೇ ಕೈಲಾಸ’ ಈಗ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ.ಅಲ್ಲ ಸ್ವಾಮಿ ದುಡಿಯುವ ಕೈಗಳಿಗೆ ದುಡಿಯದೇ ಸುಲಭವಾಗಿ ಅನ್ನ ಸಿಗುತ್ತಿರುವಾಗ, ಅರ್ಥಾತ್ ಕುಳಿತಲ್ಲೇ ಕೈಲಾಸ ಕೈಗೆಟಕುವಾಗ ಯಾರಿಗೆ ಬೇಕು ಈ ಮೈಮುರಿಯುವ ಕಾಯಕ ಎನ್ನುತ್ತಿದೆ ದುಡಿಯುವ ವರ್ಗ.ಇದು ಒಂದು ತರಹ ಹರೆಯದ ಮಗನನ್ನು ತಾಯಿ ‘ದುಡಿದುತಾ’ ಬೇಕಾದ್ದು ಮಾಡಿ ಬಡಿಸುವೆ  ಎನ್ನುವ ಬದಲು ತಾನೇ ದುಡಿದು ಹಣ್ಣಾಗಿ ಮಗನಿಗೆ ಕೂತಲ್ಲಿ ತಿನ್ನಿಸಿದಂತಾಗಿದೆ.ಆದರೆ ಅವಳಿಗೇಕೆ ಅನ್ನಿಸುತ್ತಿಲ್ಲ ತನ್ನ ನಂತರ ಅವನ ಪಾಡೇನು ಎಂದು? ಮುಂದೆ ಕಳ್ಳನೋ ಕೊಲೆಗೆಡುಕನೋ ಆಗಿ ಹಾದಿಯ ಹೆಣವಾಗುತ್ತಾನೆ ಅಷ್ಟೆ.ಇದು ಸಮಾಜದಲ್ಲಿ ಒಂದು ತರಹದ ಅನಾರೋಗ್ಯಕರವಾದ ಬೆಳವಣಿಗೆ ಸೃಷ್ಟಿಸುತ್ತಿದೆ.
     ಮೊನ್ನೆ ತಾನೆ ನಮ್ಮ ಹಳ್ಳಿಗೆ ಹೋದಾಗ ಈ ಯೋಜನೆಗಳ ಇನ್ನೊಂದು ಮುಖದ ಅರಿವಾಗಿ ನಿಜಕ್ಕೂ ಖೇದವಾಯಿತು.ಅಲ್ಲೆಲ್ಲಾ ಕೆಳವರ್ಗದ ಜನರಿಗೆ ಸರ್ಕಾರದಿಂದ ಮನೆ ಕಟ್ಟಿಕೊಳ್ಳಲು ಹಣ ಮಂಜೂರಾಗಿದೆ.ಇದೇನೊ ಇರಲಿ ಒಳ್ಳೆಯದೇ ಅಂದು ಕೊಳ್ಳೋಣ.ಆದರೆ ಅವರಿಗೆಲ್ಲಾ ವಿದ್ಯುತ್ ಶಕ್ತಿ ಉಚಿತವಂತೆ. ದುರಾದೃಷ್ಟ ಸಂಗತಿಯೆಂದರೆ, ಈ ಉಚಿತ ವಿದ್ಯುತ್ ಸೌಲಭ್ಯ ಪಡೆದ ‘ಬಡವರು’ ಎನ್ನಿಸಿಕೊಂಡವರ ಮನೆಯಲ್ಲೆಲ್ಲಾ ಟಿ.ವಿ ಟೇಪ್ ರೆಕಾರ್ಡರ್ ಮಿಕ್ಸರ್ ಗ್ರೈಂಡರ್ ಎಲ್ಲ ಅಧುನಿಕ ಉಪಕರಣಗಳೂ ಸಮಾನ್ಯವಾಗಿ ಇದ್ದೇ ಇದೆ. ಇವೆಲ್ಲ ಇರುವುದು ತಪ್ಪು ಅಂತ ಖಂಡಿತಾ ನಾನು ಹೇಳುತ್ತಿಲ್ಲಾ ಆದರೆ ಇದಕ್ಕೆಲ್ಲಾ ಪುಕ್ಕಟೆ ವಿದ್ಯುತ್ ಸೌಲಭ್ಯ ಕೊಡುತ್ತಿದ್ದಾರಲ್ಲಾ ಯಾವ ಪುರುಷಾರ್ಥಕ್ಕಾಗಿ?.ಇನ್ನು ಏಪಿಎಲ್ ಬಿಪಿಎಲ್ ಕಾರ್ಡಿನ ಅವಾಂತರವಂತೂ ರೊಚ್ಚೆಬ್ಬಿಸುತ್ತದೆ.ಬಿಪಿಎಲ್ ಗೆ ಪಡಿತರ ಕೊಡಲಿ ಆದರೆ ಸೀಮೆ ಎಣ್ಣೆ ಕೂಡಾ ಏಪಿಎಲ್ ಗೆ ಖೋತಾ ಮಾಡಿದ್ದಾರಲ್ಲಾ ಇದು ಯಾವ ನ್ಯಾಯ? ಹಳ್ಳಿಯಲ್ಲಿ ವಿದ್ಯುತ್ ಶಕ್ತಿಯ ಕಥೆ ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಹಗಲಲ್ಲಿ ಬೇಡ ಇರುಳಲ್ಲಿ ಕೂಡಾ ವಿದ್ಯುತ್ ಇದ್ದರೆ ಅವರ ಪುಣ್ಯ.ಮಳೆಗಾಲದಲ್ಲಂತೂ ಒಮ್ಮೆ ಹೋದ ವಿದ್ಯುತ್ ವಾರ ಹದಿನೈದು ದಿನವಾದರೂ ಪತ್ತೆ ಇರುವುದಿಲ್ಲ.ಅಂಥ ವೇಳೆ ಅವರೆಲ್ಲಾ ಕನಿಷ್ಟ ಚಿಮಣಿ ದೀಪದ ಬೆಳಕನ್ನಾದರೂ ಅಪೇಕ್ಷಿಸುತ್ತಾರಲ್ಲಾ.ಸೂರ್ಯ ಮುಳುಗಿದಾಗ ಬಡವ ಬಲ್ಲಿದರೆನ್ನದೇ ಎಲ್ಲರ ಮನೆಯೂ ಕತ್ತಲೆಯೇ ತಾನೆ?ಹಾಗೆ ವಿದ್ಯುತ್ ಕೂಡಾ ಎಲ್ಲರಿಗೂ ಒಂದೇ ಮಾರ್ಗದಲ್ಲಿ ಬರುತ್ತದೆ ತಾನೆ? ಹಾಗಾದರೆ ಸೀಮೆ ಎಣ್ಣೆ ಸಿಗಲಾರದವರು ಏನು ಮಾಡಬೇಕು?.ಸ್ಥಿತಿವಂತರು ದುಡ್ಡು ಖರ್ಚು ಮಾಡಿ ಸೋಲಾರ್ ಹಾಕಿಸಿ ಕೊಳ್ಳುತ್ತಾರೆ.ಆದರೆ ಉಳಿದವರು ಬೆಳಕಿಗಾಗಿ ಏನು ಮಾಡಬೇಕು?ಪ್ರಜಾಪ್ರತಿನಿದಿಗಳಲ್ಲಿ ಇದಕ್ಕೆ ಉತ್ತರವಿದೆಯೆ? ಕೇವಲ ಜಾತಿಯಾಧಾರವನ್ನೇ ಮೂಲೋದ್ದೇಶವನ್ನಾಗಿ ಇಟ್ಟುಕೊಂಡ ಈಕಾರ್ಡುಗಳ ವ್ಯವಸ್ಥೆ,ಆ ಜನಾಂಗದವರು ಮಾತ್ರ ಬಡವರು ಎಂದು ಬಿಂಬಿಸುತ್ತ, ಮೇಲು ವರ್ಗದವರಲ್ಲಿಯೂ ಕೆಳಮದ್ಯಮ ವರ್ಗದವರಿದ್ದಾರೆ ಎಂಬುದನ್ನು ಮರೆತಂತಿದೆ.ಬಡವರ ಉದ್ಧಾರದ ಹೆಸರಿನಲ್ಲಿ ಮಧ್ಯಮ ವರ್ಗದವರನ್ನು ಶೋಷಿಸುವುವುದು ಯಾವನ್ಯಾಯ? 

          ಇನ್ನು ಪಟ್ಟಣದತ್ತ ನೋಡಿದರೆ,ಅಲ್ಲಿಯವರ ಪಾಡುಇನ್ನೂ ಚಿಂತಾಜನಕವಾಗಿದೆ.ನಷ್ಟದಲ್ಲಿ ಸಾಗಿಸುತ್ತಿರುವ  ಈಎಲ್ಲ ಯೋಜನೆಗಳಿಗೆ ಹಣ ಹೊಂಚುವಲ್ಲಿ ಸರ್ಕಾರ ತನ್ನದೇ ಆದ ದಾರಿ ಕಂಡುಕೊಂಡಿದೆ.ಅದಕ್ಕೆಲ್ಲಾ ಪಟ್ಟಣದ ವ್ಯಾಪಾರಿಗಳು, ಉದ್ಯಮಿಗಳು,ಮುಂತಾದವರ ಹಗಲು ದರೋಡೆ ನಡೆದಿದೆ.ಒಂದೆಡೆ ವಾಣಿಜ್ಯಕರದವರ ಕಾಟವಾದರೆ, ಇನ್ನೊಂದೆಡೆ ಆದಾಯಕರದವರ ಕಾಟ.ಮೊದಲೇ ವಿಪರೀತ ಪೈಪೋಟಿ,ಕೆಲಸಗಾರರ ಸಮಸ್ಯೆ ಮುಂತಾದವುಗಳಿಂದ ಸೊರಗುತ್ತಿದ್ದರೂ ಪ್ರಾಮಾಣಿಕವಾಗಿ ಕರ ಕಟ್ಟುವವರಲ್ಲೇ ಪದೇ ಪದೇ ಕಂದಾಯ ಅಧಿಕಾರಿಗಳು ಭೆಟ್ಟಿ ನೀಡಿ ತಪಶೀಲು ನಡೆಸುವ ನಾಟಕವಾಡಿ ಒಂದೆಕ್ಕೆರಡು ಪಟ್ಟು ಶುಲ್ಕ ವಸೂಲಿ ಜೊತೆಜೊತೆಗೇ ತಮ್ಮ ಕಿಸೆತುಂಬಿಕೊಳ್ಳುವ ಹುನ್ನಾರು ನಡೆಸಿ,ಹಲವು ಹತ್ತು ಮಂದಿಗೆ ಉದ್ಯೋಗ ಕೊಡುವ ಉದ್ದಿಮೆಗಳು ಕೂಡಾ ಆಸಕ್ತಿಕಳೆದುಕೊಂಡು ಮುಚ್ಚುವ ಸ್ಥಿತಿ ತಲುಪಿದೆ.ಯಾರಾದರೂ ನಮ್ಮ ಹುಬ್ಬಳ್ಳಿಯ ಇಂಡಸ್ಟ್ರಿಯಲ್ ಎಸ್ಟೇಟನ್ನು ಒಂದು ಸುತ್ತು ಹಾಕಿದರೆ ಸಾಕು ಅದೆಷ್ಟು ಕಾರ್ಖಾನೆಗಳು ಸಮಸ್ಯೆಗಳ ಮೂಟೆಯನ್ನು ಹೊತ್ತು ಕಣ್ಣೀರಿಡುತ್ತಿದೆಯೆಂದು ಅರ್ಥವಾಗುತ್ತದೆ. ಈ ರೀತಿ ದೀರ್ಘಕಾಲ ಫಲ ನೀಡುವ ಕಲ್ಪವೃಕ್ಷಕ್ಕೆ ನೀರು ಗೊಬ್ಬರಕೊಟ್ಟು ಪೋಷಿಸುವುದನ್ನು ಬಿಟ್ಟು ಬುಡಕ್ಕೇ ಕೊಡಲಿ ಏಟು ನೀಡಿದರೆ ಬೊಕ್ಕಸ ತುಂಬುವುದು ಹೇಗೆ?

         ಇಂತಹ ಮತಬ್ಯಾಂಕಿನ ಸೃಷ್ಟಿಯ ಗಿಮಿಕ್ ಯೋಜನೆಗಳು ಅದೆಷ್ಟು ಫಲಕಾರಿಯಾದಾವು? ಮೀಡಿಯಾಗಳು ಪ್ರಭಲವಾಗಿರುವ ಇಂಥಹ ದಿನಗಳಲ್ಲೂ ಮತದಾರಪ್ರಭುಗಳನ್ನು ಅಷ್ಟು ಮೂರ್ಖರನ್ನಾಗಿಸುವ ಪ್ರಯತ್ನ ಕೈಗೂಡೀತೆ?     

Comments

Submitted by ಗಣೇಶ Sun, 10/27/2013 - 20:58

ಕುಂಟು ಕುದುರೆ ಪಾಪ, ಒದ್ದಾಡಿಕೊಂಡು ಹಾಗೂ ಹೀಗೂ ಮುಂದೆ ಹೋಗುವುದು. ಈ ಗಿಮಿಕ್ ಯೋಜನೆಗಳು ಮರದ ರಾಕಿಂಗ್ ಹಾರ್ಸ್‌ಗಳು...
ಖಜಾನೆ ಖಾಲಿಯಾದರೂ ಚಿಂತಿಲ್ಲ, ವೋಟ್ ಬ್ಯಾಂಕ್ "ಕೈ"ಬಿಡಬಾರದು. :(

ಅನ್ ಅರ್ಥಶಾಸ್ತ್ರಜ್ಞ ಪ್ರಧಾನಮಂತ್ರಿಯವರ ಸಮ್ಮತಿ, ಬೆಂಬಲ ಈ ಯೋಜನೆಗಳಿಗೆ ಇರುವುದು ದೊಡ್ಡ ವ್ಯಂಗ್ಯ !

ಅರ್ಥಶಾಸ್ತ್ರದಲ್ಲಿ Ph.D. ಪಡೆದದ್ದು ದಂಡ !