ಆಗಾಗ ನೆನಪಾಗುವ ನನ್ನ ಬಾಲ್ಯದ ಸೈಕಲ್ ಸವಾರಿಗಳು!

ಆಗಾಗ ನೆನಪಾಗುವ ನನ್ನ ಬಾಲ್ಯದ ಸೈಕಲ್ ಸವಾರಿಗಳು!

ಚಿತ್ರ

ಎರಡನೆಯ ಮಹಡಿಯಲ್ಲಿರುವ ನನ್ನ ಮನೆಯ ಜಗುಲಿಯಲ್ಲಿ ನಿಂತು, ಪಕ್ಕದ ಮನೆಯ ಬಾಲಕ ಮನೆಯಿಂದ ಸ್ವಲ್ಪ ಹೊರಗೆ ಸೈಕಲ್ ಹೊಡೆಯುತ್ತಾ ಹೋಗಿ ಮತ್ತೆ ಮನೆಗೆ ಬಂದು, ಮತ್ತೆ ಹೋಗಿ ಬರುವುದನ್ನು ಮಾಡುತಿದ್ದ. ಸುಮಾರು ಒಂದು ಗಂಟೆಯಿಂದ ಅದನ್ನೇ ನೋಡುತಿದ್ದ ನನಗೂ ನನ್ನ ಬಾಲ್ಯದ ದಿನಗಳಲ್ಲಿ ನಾನು ನಡೆಸಿದ ಸೈಕಲ್ ಸವಾರಿಗಳು ನೆನಪಿಗೆ ಬರತೊಡಗಿದವು. ಮನುಷ್ಯ ಎಷ್ಟೇ ದೊಡ್ಡವನಾದರೂ, ಹಣಗಳಿಸಿ ಶ್ರೀಮಂತನಾದರೂ, ಇಂದು ಬೈಕು ಕಾರುಗಳಲ್ಲಿ ಓಡಾಡುತಿದ್ದರೂ ಆತನಿಗೆ ತಾನು ಬಾಲ್ಯದಲ್ಲಿ ನಡೆಸಿದ ಸೈಕಲ್ ಸವಾರಿಯನ್ನು ಮಾತ್ರ ಮರೆಯಲಾರ ಅನ್ನಿಸುತ್ತದೆ. ಆ ಸೈಕಲ್ ನೀಡಿದಷ್ಟು ಸುಖ-ಸಂತೋಷ ಇಂದಿನ ಐಷಾರಾಮಿ ಕಾರುಗಳು ನೀಡಲಾರವು ಎನ್ನುವುದು ನನ್ನ ಅನಿಸಿಕೆ. ಬಹುಷಃ ಹಲವರ ಅನಿಸಿಕೆನೂ ಇರಬಹುದೇನೋ ಏನೋ? ನಾನು ಕೂಡ ಅದಕ್ಕೇನು ಹೊರತಾಗಿಲ್ಲ. ನನ್ನ ಬಾಲ್ಯದ ನೆನಪುಗಳಲ್ಲಿ ಈ ಸೈಕಲ್ ಸವಾರಿಯೂ ಒಂದು. ಅಂತಹ ಕೆಲವು ಘಟನೆಗಳೇ ಇಲ್ಲಿಯ ಲೇಖನ.

ಬೆಲ್ಟಿನ ರುಚಿ ತೋರಿಸಿದ ಮಾವ:

ನಾನಾಗ ಏಳೆಂಟು ವರ್ಷದ ಬಾಲಕ, ಶಾಲೆಗೆ ರಜಾ ಬಿತ್ತು ಎಂದರೆ ನಮ್ಮ ತಾಯಿಯ ತವರು ಮನೆಗೆ ಹೊರಟುಬಿಡುವುದು ವಾಡಿಕೆ. ಒಮ್ಮೆ ಹೀಗೆ ಅಜ್ಜಿ ಮನೆಯಲ್ಲಿದ್ದಾಗ, ನಮ್ಮ ಸಂಬಂಧಿಕರಾರೋ ಅವರ ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಮಂತ್ರಿಸಲು ಬಂದಿದ್ದರು. ಅವರ ಊರು ಅದೇ ಊರಿನಿಂದ ಮೂರು ನಾಲ್ಕು ಕಿಲೋ ಮೀಟರ್ ದೂರದಲ್ಲಿತ್ತು. ಆಗೆಲ್ಲಾ ಈಗಿನಷ್ಟು ಬೈಕುಗಳಾಗಲೀ, ಕಾರುಗಳಾಗಲೀಇರಲಿಲ್ಲ. ಹೆಚ್ಚಿನ ಜನ ಬೈಕ್, ಕಾರುಗಳ ಬದಲು ಸೈಕಲ್ಗಳನ್ನೇ ಉಪಯೋಗಿಸುತ್ತಿದ್ದ ಕಾಲ ಅದು. ಅಂದು ಹಾಗೆ ಸೈಕಲ್ ಮೇಲೆ ಮನೆಗೆ ಬಂದವರು ಅದು ಇದು ಮಾತನಾಡುತ್ತಾ ಕುಳಿತಿದ್ದರು. ಹೊರಗೆ ಆಡುತಿದ್ದ ನಮಗೆ ಅಲ್ಲಿ ಸೈಕಲ್ ನಿಲ್ಲಿಸಿರುವುದು ನಮ್ಮ ಗಮನಕ್ಕೆ ಬಂತು. ನನಗಾಗ ಸೈಕಲ್ ಹೊಡೆಯಲು ಬರುತ್ತಿರಲಿಲ್ಲ, ನಮ್ಮ ಮಾವನ ಮಗ ಆಗ ತಾನೇ ಸೈಕಲ್ ಚಲಾಯಿಸಲು ಕಲಿತಿದ್ದರಿಂದ. ನನಗೂ ಆಗ ಸೈಕಲ್ ಕಲಿಯುವ ಆಸೆ ಇದ್ದುದರಿಂದ ಇಬ್ಬರು ಸೈಕಲ್ ತೆಗೆದುಕೊಂಡು ಸಮುದ್ರ ತೀರದತ್ತ ಹೊರಟೆವು. ನಾವು ಹೊರಟಾಗ ಸಾಯಂಕಾಲ್ ೩-೪ ಗಂಟೆಯಿರಬಹುದೇನೋ. ನನಗೂ ಅಷ್ಟು ಇಷ್ಟು ಸೈಕಲ್ ಹೇಳಿ ಕೊಟ್ಟು, ತಾನು ಹೊಡೆಯುತ್ತಾ ಇದ್ದ. ಹೀಗೆ ಸೈಕಲ್ ಹೊಡೆಯುವುದರಲ್ಲಿ ಮಗ್ನವಾಗಿದ್ದ ನಮಗೆ ಹೊತ್ತು ಕಳೆದದ್ದೇ ಗೊತ್ತಾಗಲಿಲ್ಲ. ಇಬ್ಬರಿಗೂ ಮನೆಯ ನೆನಪಾಗಿ ಸೈಕಲ್ ತೆಗೆದುಕೊಂಡು ಮನೆಗೆ ಬಂದೆವು.

ನಾವು ಮನೆಗೆ ಬರುವಷ್ಟರಲ್ಲಿ, ಮನೆಗೆ ಬಂದ ಅತಿಥಿಗಳು ಮನೆಯಲ್ಲಿ ಇರಲಿಲ್ಲ. ಅವರು ನಮಗಾಗಿ ಕಾದು ಕಾದು ಸುಸ್ತಾಗಿ ಮನೆಗೆ ಹೊದರೆಂದು ತಿಳಿಯಿತು. ಮನೆಗೆ ಬಂದು ಇನ್ನೇನು ಮನೆಯ ಒಳಗೆ ಕಾಲಿಡಬೇಕು ಎನ್ನುವಷ್ಟರಲ್ಲಿ ನಮ್ಮನ್ನು ನೋಡಿದ ನಮ್ಮ ಮಾವ ಒಳ ಹೋಗಿ ಹೊರಬಂದು ಒಂದೇ ಸಮನೇ ಬೆಲ್ಟನ ಸೇವೆ ನೀಡಲಾರಂಭಿಸಿದರು. ಅವರಿಗೆ ನಾವು ಹೇಳದೇ ಕೇಳದೇ ಸೈಕಲ್ ತೆಗೆದುಕೊಂಡು ಹೋಗಿ, ಮನೆಗೆ ಬಂದ ಅತಿಥಿಗಳನ್ನು ಕಾಯಿಸಿ, ಮನೆಗೆ ಬಂದ ಅತಿಥಿಗಳನ್ನು ಕಾಯಿಸಿ, ಅವರು ಸೈಕಲ್ ಇಲ್ಲದೇ ನಡೆದು ಹೊರಡುವಂತೆ ಮಾಡಿ, ನಾವೂ ರಾತ್ರಿ ತಡ ಮಾಡಿ ಮನೆಗೆ ಬಂದುದ್ದು ಅವರಿಗೆ ಸಹಜವಾಗಿ ಕೋಪ ತರಿಸಿತ್ತು. ಈಗಲು ಆ ಬೆಲ್ಟನ ರುಚಿ ಆಗಾಗ ಕಣ್ಣ ಮುಂದೆ ಬರುತ್ತಿರುತ್ತದೆ.

ಸಾವಿನ ದವಡೆಯಿಂದ ಪಾರಾಗಿದ್ದು:

ನಾವು ಚಿಕ್ಕವರಿರುವಾಗ, ರಸ್ತೆಯಲ್ಲಿ ಯಾವುದೇ ಸೈಕಲ್ಗಳು ನಿಂತಿರಲಿ, ಅದಕ್ಕೆ ಕೀಲಿ ಹಾಕಿದ್ದಾರೋ, ಇಲ್ಲವೋ ಎಂದು ಪರೀಕ್ಷಿಸಿ, ಕೀಲಿ ಹಾಕಿಲ್ಲ ಎಂದರೆ ಮುಗಿಯಿತು. ಆ ಸೈಕಲ್ ತೆಗೆದುಕೊಂಡು ಹೋಗಿ ಮನಸ್ಸು ಖುಸಿ ಎನ್ನಿಸುವವರೆಗೆ ಅಲ್ಲದಿದ್ದರೂ, ಮನೆಯ ನೆನಪು ಬರುವವರೆಗೆ ಓಡಿಸಿ ತಂದಿಡುತಿದ್ದೆವು. ಅದರಲ್ಲೂ ನಮ್ಮೂರಿಗೆ ದಿನಾ ಬರುವ ಮೇಸ್ತ್ರಿ ಗಣಪತಿಯ ಸೈಕಲ್ಗಳೆಂದರೆ ನಮಗೆ ಎಲ್ಲಿಲ್ಲದ ಪ್ರೀತಿ. ಆತನ ಸೈಕಲ್ಗೆ ಕೀಲಿ ಹಾಕುವ ವ್ಯವಸ್ತೆಯಿಲ್ಲದ ಕಾರಣ, ಆ ಸೈಕಲ್ ನಮಗೆ ಸಿಗಬಾರದು ಎಂದು, ಯಾರದೋ ಮನೆಯಲ್ಲಿ ಬಚ್ಚಿಟ್ಟು, ಯಾರದೋ ಮನೆ ಕೆಲಸಕ್ಕೆ ಹೋಗುತ್ತಿದ್ದ. ಅದರಲ್ಲೂ ನಮಗೆ ಬಿಚ್ಚಿಟ್ಟಿದ್ದಕ್ಕಿಂತ ಬಚ್ಚಿಟ್ಟಿದ್ದರಲ್ಲಿ ಪ್ರೀತಿ ಜಾಸ್ತಿ ಅಲ್ಲವೇ, ಹಾಗಾಗಿ ಆತ ಎಲ್ಲೇ ಸೈಕಲ್ ಬಚ್ಚಿಡಲಿ, ಅದನ್ನು ಹುಡುಕಿ ತೆಗೆಯುವುದನ್ನು ಮಾತ್ರ ಬಿಡುತ್ತಿರಲಿಲ್ಲ. ಒಮ್ಮೆ ನಾನು ಮತ್ತು ನನ್ನ ಸ್ನೇಹಿತ ಇಬ್ಬರು ಸೇರಿ, ಅವನ ಸೈಕಲ್ ಹುಡುಕುತ್ತಾ ಹೊರಟಾಗ, ಯಾರದೋ ಮನೆಯ ದನದ ಕೊಟ್ಟುಗೆಯಲ್ಲಿ ಆತ ಸೈಕಲ್ ಬಚ್ಚಿಟ್ಟಿರುವುದು ನಮ್ಮ ಕಣ್ಣಿಗೆ ಬಿತ್ತು. ನಮ್ಮ ಕಣ್ಣಿಗೆ ಬಿದ್ದ ಮೇಲೆ ಮುಗಿಯಿತು, ಅದನ್ನು ತೆಗೆದುಕೊಂಡು ಹೋಗಿ ಹೊಡೆಯಲೇ ಬೇಕು. ತಡ ಏನು ಎಂದು ಇಬ್ಬರು ಸೈಕಲ್ ತೆಗೆದುಕೊಂಡು ಹೊರಟೆವು.

ಸೈಕಲ್ ತೆಗೆದುಕೊಂಡು ಬಂದು, ಅಲ್ಲಿಂದ ಬೆಳಸೆ, ಚಂದು ಮಠ ಎಲ್ಲಾ ಊರುಗಳನ್ನು ಸುತ್ತಿ, ವಾಪಸ್ ಬರುತ್ತಿದ್ದೆವು, ಬೆಳಸೆಯ ಏರಿನಲ್ಲಿ ನನ್ನ ಗೆಳೆಯ ನನ್ನನ್ನು ಸೈಕಲ್ ಮುಂದೆ ಕುಳ್ಳಿಸಿಕೊಂಡು ತಾನು ಸೈಕಲ್ ಹೊಡೆಯುತಿದ್ದ. ಆ ಬೆಳಸೆ ಏರು ಎಂದರೆ, ಅದೊಂದು ಯಮನ ಅಚ್ಚು ಮೆಚ್ಚಿನ ಸ್ಥಳ, ವರ್ಷಕ್ಕೆ ಕನಿಷ್ಟ ಹತ್ತಾರು ಅಪಘಾತಗಳಾದರೂ ಸಂಭವಿಸುತ್ತಿದ್ದವು ಅಲ್ಲಿ. ನನ್ನ ಗೆಳೆಯ ಆಕಡೆ, ಈ ಕಡೆ ಸೈಕಲ್ ಚಲಿಸುತ್ತಾ ಬೆಳಸೆಯ ಏರು ಹತ್ತಿಸುತಿದ್ದ. ಇನ್ನೇನು ಅರ್ಧ ಏರು ಹತ್ತಿರಬಹುದು, ನಮ್ಮ ಎದುರುಗಡೆಯಿಂದ ಒಂದು ಕಾರು, ಹಿಂದುಗಡೆಯಿಂದ ಒಂದು ಲಾರಿ ಬರುತ್ತಿತ್ತು. ಲಾರಿಯಾತ ನಮ್ಮ ಸಮೀಪಕ್ಕೆ ಬರುತ್ತಿದ್ದಂತೆ, ಜೋರಾಗಿ ಶಬ್ಧ ಮಾಡತೊಡಗಿದ. ಸೈಕಲ್ ಓಡಿಸುತ್ತಿದ್ದ ನನ್ನ ಗೆಳೆಯ ಹೆದರಿದ್ದರಿಂದ, ಸೈಕಲ್ ನಿಯಂತ್ರಿಸಲು ಆಗದೆ ಬಿಳಿಸಿಬಿಟ್ಟ. ನಮಗೆ ಒಂದು ಕ್ಷಣ ಏನಾಯ್ತು ಅಂತಾ ತಿಳಿಯುವ ಹೊತ್ತಿಗೆ, ನಮ್ಮ ಅರ್ಧ ದೇಹ ರಸ್ತೆಯಲ್ಲೂ, ಇನ್ನರ್ಧ ದೇಹ ರಸ್ತೆಯ ಹೊರಗೂ ಇತ್ತು. ಇಬ್ಬರೂ ಒಬ್ಬರಿಗೊಬ್ಬರು ನೋಡಿಕೊಂಡೆವು, ಅಂತೂ ಬದುಕಿದೆವಲ್ಲ ಎನಿಸಿತು. ನಮ್ಮ ಅದ್ರಷ್ಟಕ್ಕೆ ಲಾರಿ ಅಷ್ಟೋಂದು ವೇಗವಾಗಿರದ ಕಾರಣ, ಆ ಲಾರಿಯವನ ಕೃಪೆಯಿಂದ ಆಗುತಿದ್ದ ಅವಘಡದಿಂದ ತಪ್ಪಿಸಿಕೊಂದಿದ್ದೆವು. ನಮಗೆ ಏನು ಆಗದ ರೀತಿಯಲ್ಲಿ, ನಮ್ಮನ್ನು ತಪ್ಪಿಸಿ ಪಕ್ಕದಿಂದಲೇ ಲಾರಿ ಓಡಿಸಿಕೊಂಡು ಹೋಗಿದ್ದರಿಂದ ನಾವು ಕುದಲೂ ಎಳೆಯಷ್ಟು ಅಂತರದಿಂದ ಪಾರಾದೆವು. ಸ್ವಲ್ಪ ಹೆಚ್ಚು ಕಡಿಮೆಯಾದರೂ ನಾವು ಸಾಯದಿದ್ದರೂ, ಬದುಕಿ ಸತ್ತಂತಿರುತಿದ್ದೆವೋ ಏನೋ?

ಸೈಕಲ್ ನಾರಾಯಣನ ಹೃದಯವಂತಿಕೆ:

ನಮ್ಮ ಮನೆಯ ಹತ್ತಿರದ ಮನೆಯಲ್ಲಿ ಓರ್ವ ಬಾಲಕನಿದ್ದ, ನನಗಿಂತ ಐದಾರು ವರ್ಷ ಚಿಕ್ಕವನು, ಆತನ ಬಳಿ ಒಂದು ಚಿಕ್ಕ ಸೈಕಲ್ ಇತ್ತು. ನನಗೆ ಆ ಸೈಕಲ್ ಮೇಲೆ ಏನೋ ಒಂದು ತರಹ ಆಸಕ್ತಿ, ಒಮ್ಮೆಯಾದರೂ ಅದನ್ನು ಓಡಿಸಬೇಕು ಎನ್ನುವ ತವಕ. ಒಮ್ಮೆ ಆ ಹುಡುಗನ ಮನೆಗೆ ಹೋಗಿ ಆತನ ತಾಯಿಯನ್ನು ಕಾಡಿ ಬೇಡಿ ಸೈಕಲ್ ತೆಗೆದುಕೊಂಡು ಹೋದೆ. ಸೈಕಲ್ ಏರಿ ನಮ್ಮೂರ ಏರಿಯನ್ನು ಏರಿ ಮತ್ತೆ ವಾಪಸ್ ಏರಿ ಇಳಿಯುವಾಗ ಸೈಕಲ್ ಹಿಂದಿನ ಗಾಲಿಯಿಂದ 'ಟಪ್' ಎಂದು ಶಬ್ಧ ಬಂತು, ಆಗಲೇ ಗಾಲಿ ಪಂಚರ್ ಆಗಿತ್ತು, ಆ ಶಬ್ಧಕ್ಕೂ, ಗಾಲಿ ಪಂಚರ್ ಆಗಿದ್ದರಿಂದಲೂ ನಾನು ಸೈಕಲ್ ನಿಯಂತ್ರಿಸಲಾಗದೇ, ರಸ್ತೆಯ ಪಕ್ಕದಲ್ಲಿಯ ಮುಳ್ಳು ಕುಂಟೆಯ ಮೇಲೆ ಹೋಗಿ ಬಿದ್ದೆ. ಮೈ ಕೈಗೆಲ್ಲ ಗಾಯ. ಸೈಕಲ್ ನೋಡಿದೆ ಹಿಂದಿನ ಗಾಲಿಯಿಂದ ಗಾಳಿ ಸಂಪೂರ್ಣ ಹೊರ ಹೋಗಿತ್ತು, ಎರಡು ಬ್ರೆಕ್ ಗಳು ಮೇಲೆದಿದ್ದವು, ನನಗೆ ನನಗಾದ ಗಾಯಗಳಿಗಿಂತ, ಸೈಕಲ್ಗಾದ ಗಾಯ ನೋಡಿ ಇನ್ನಷ್ಟು ನೋವಾಯ್ತು. ಮನೆಗೆ ಹಾಗೇ ಹೋಗುವಂತೆಯೂ ಇರಲಿಲ್ಲ, ಅದು ಬೇರೆಯವರ ಸೈಕಲ್ ಬೇರೆ. ರಿಪೇರಿ ಮಾಡಿಸಲು ಕೈಯಲ್ಲಿ ಕಾಸೂ ಇರಲಿಲ್ಲ, ಮನೆಗೆ ಹೋಗಿ ಕೇಳುವಂತೆಯೂ ಇರಲಿಲ್ಲ. ಏನು ಮಾಡುವುದು ಅಂತಾ ಯೋಚಿಸುತಿದ್ದಾಗ ಸೈಕಲ್ ನಾರಾಯಣನ ನೆನಪಾಯಿತು. 

ಸೈಕಲ್ ನಾರಾಯಣ ಇಂದಿನ ಅಂಕೋಲಾ ರೇಲ್ವೆ ನಿಲ್ದಾಣದ ಹತ್ತೀರ, ಜುಮಗೋಡದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ತನ್ನ ಮನೆಯಲ್ಲಿಯೇ ಸೈಕಲ್ ರಿಪೇರಿ ಮಾಡುತ್ತಿದ್ದ. ಆತ ಸೈಕಲ್ ರಿಪೇರಿ ಮಾಡುತ್ತಿದ್ದರಿಂದ ಆತನಿಗೆ ಎಲ್ಲರೂ ಸೈಕಲ್ ನಾರಾಯಣ ಎಂದೇ ಕರೆಯುತ್ತಿದ್ದರು. ಆಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಸೈಕಲ್ ಸವಾರರು, ಆತನ ಬಳಿಯೇ ಸೈಕಲ್ ತಂದು ರಿಪೇರಿ ಮಾಡಿಸಿಕೊಂಡು ಹೋಗುತ್ತಿದ್ದರು. ನನಗೆ ಆತನ ನೆನಪಾದದ್ದೇ ತಡ ಸೈಕಲ್ ನಡೆಸಿಕೊಂಡು ಅವನ ಮನೆಯತ್ತ ಹೊರಟೇ ಬಿಟ್ಟೇ. ಅದೇನು ಸಮೀಪವೇನು ಇರಲಿಲ್ಲ, ನಮ್ಮ ಊರಿನಿಂದ ೩ ಕಿಲೋ ಮೀಟರ್ ಆದರೂ ಹೋಗಬೇಕು. ನನಗಾಗ ಮನಸ್ಸಲ್ಲಿ ಇದ್ದುದು ಸೈಕಲ್ ರಿಪೇರಿ ಮಾಡಿಸಬೇಕು ಎನ್ನುವುದಾದ್ದರಿಂದ, ನನಗಾಗುತ್ತಿದ್ದ ನೋವನ್ನು ಲೆಕ್ಕಿಸದೇ, ಸೈಕಲ್ ತಳ್ಳಿಕೊಂಡು ಹೊರಟೆ. ನಾನು ಹೋದಾಗ ಆತ ಮನೆಯಲ್ಲಿ ಇಲ್ಲದಿದ್ದರೂ ಒಂದರ್ಧ ಗಂಟೆಯಲ್ಲಿ ಮನೆಗೆ ಬಂದ. ನನ್ನ ಸ್ಥಿತಿಯನ್ನು ನೋಡಿ ಆತನಿಗೂ ಮರುಕ ಹುಟ್ಟಿತು. ಬಂದು ಸೈಕಲ್ ರಿಪೇರಿ ಮಾಡಿಕೊಟ್ಟ. ನಾನು "ಹಣ ಎಷ್ಟಾಯ್ತು" ಎಂದು ಕೇಳಿದೆ. ಆತ ನಗುತ್ತಾ, "ನಿನಗಿಂತ, ನೀನು ಸೈಕಲ್ ಮೇಲೆ ಕಾಳಜಿ ತೋರಿಸುವುದನ್ನು ನೋಡಿ ನನಗೆ ಹೆಮ್ಮೆ ಎನಿಸುತ್ತಿದೆ" ಎಂದು, ಎಷ್ಟು ಕೇಳಿದರೂ ರೊಕ್ಕ ಎಷ್ಟೆಂದು ಹೇಳಲಿಲ್ಲ. ನಾನು ನಾಳೆ ಬಂದು ಕೊಡುತ್ತೇನೆ, ರೊಕ್ಕ ಎಷ್ಟಾಯ್ತು ಎಂದರೂ, ಬೇಡ ಹೋಗು ಎಂದು ಹೇಳಿ ಕಳಿಸಿಬಿಟ್ಟ. ನಾನು ರಿಪೇರಿಯಾದ ಸೈಕಲ್ ಅನ್ನು ಸಾವಕಾಸವಾಗಿ ತೆಗೆದುಕೊಂಡು ಬಂದು, ಸೈಕಲನ್ನು ಆ ಮೆನೆಯವರಿಗೆ ತಲುಪಿಸಿ, ನಡೆದ ವಿಷಯವನ್ನು ಅವರ ಮನೆಯಲ್ಲೂ, ನಮ್ಮ ಮನೆಯಲ್ಲೂ ಮುಚ್ಚಿಟ್ಟು ಬಿಟ್ಟೆ. ಇಂದು ಸೈಕಲ್ ನಾರಾಯಣ ಇಲ್ಲ ಆದರೆ ಆತನ ನೆನಪು ಮಾತ್ರ ಹಾಗೆ ಅಚ್ಚಳಿಯದೇ ನನ್ನ ಮನಸ್ಸಲ್ಲಿ ಇದೆ.

--ಮಂಜು ಹಿಚ್ಕಡ್

ಚಿತ್ರ ಕೃಪೆ: nevervoid

Rating
No votes yet

Comments

Submitted by venkatb83 Fri, 11/01/2013 - 16:04

In reply to by manju.hichkad

ಮೊದಲಿಗೆ ಸರ್ವ ಸಂಪದಿಗರಿಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಶಯಗಳು ..
ಅಂದ ಹಾಗೆ
ಕೆಲ ತಿಂಗಳುಗಳ ಹಿಂದೆ ಇಲ್ಲಿ ರಾಮನ ಸೈಕಲ್ಲು ಸವಾರಿ ಎಂದು ಸಂಪದ ಹಿರಿಯ ಬರಹಗಾರರಾದ ಶ್ರೀಯುತ ಎಚ್ ಎ ಪಟೇಲರು ಬರೆದ ನೆನಪು ..http://bit.ly/1aNXrGT (ನಮ್ ನೆಚ್ಹ್ಹಿನ‌ ಸಂಪದದಲ್ಲಿ ಈಗ‌ ಲೇಖಕರ‌ ಹೆಸರಲ್ಲಿ ‍ಬರಹಗಳ‌ ಶ್ಹೀರ್ಷಿಕೆ ಹೆಸರು ಮೂಲಕ‌ ಯಾವುದೇ ಬರಹ‌ ಹುಡುಕಬಹುದು‍,ಇದು
ಹಾಗೆಯೇ ಹುಡ್ಕಿದ್ದು)
ಹಾಗೆಯೇ ನಮ್ಮೆಲ್ಲರ ಸೈಕಲ್ಲು ಸವಾರಿ ನೆನಪು ಅಲ್ಲಿ ಹಂಚಿಕೊಂಡಿರುವೆವು .. ಹಾಗೆಯೇ ನೆನಪಾಗೋದು ಮಲೆಗಳಲ್ಲಿ ಮದುಮಗಳು ಕಾದಂಬರಿಯ ಬಿಸೇಕಲ್ಲು (ಬೈಸಿಕಲ್ಲು ) ಸವಾರಿ -ಮತ್ತು ಕೆಳಗೆ ಬಿದ್ದು ಸೊಂಟ ಮುರಿದ... ಸನ್ನಿವೇಶ ...!!
ಆ ಸನ್ನಿವೇಶ ಮಲೆಗಳಲ್ಲಿ ಮದುಮಗಳು ನಾಟಕದಲ್ಲಿ ಹೇಗಿತ್ತೋ ಗೊತ್ತಿಲ್ಲ -ಕೊನೆಗೂ ನಾ ಆ ನಾಟಕ ನೋಡಲು ಆಗಲಿಲ್ಲ .>!! ಯುಟುಬ್ನಲ್ಲಿ ಇದೆ ನೋಡಬೇಕು ...!!
ನಿಮ್ಮ ಅನುಭವ ಸಖತ್ ,,
ಬೈಸಿಕಲ್ಲು ಸವಾರಿ ಮಾಡ್ವಾಗ ಕೆಳಗೆ ಬಿದ್ದು ಮಂಡಿ ತರಚಿ ಆದ ಗಾಯ ಇನ್ನೂ ನೆನಪಿದೆ ಮತ್ತು ಅದರ ಹೆಗ್ಗುರುತು ಇದೆ ..!!
ಶುಭವಾಗಲಿ
\।/

Submitted by manju.hichkad Tue, 11/12/2013 - 12:39

In reply to by venkatb83

ವೆಂಕಟ್ ಅವರೆ, ನಿಮ್ಮ ಪ್ರತಿಕ್ರೀಯೆಗೆ ಧನ್ಯವಾದಗಳು. ನಾನು ಮಲೆಗಳಲ್ಲಿ ಮದುಮಗಳು ಕಾದಂಬರಿ ಓದಿದ್ದಿನಿ, ಆದರೆ ನಾಟಕ ನೋಡಿಲ್ಲ. ಊರಿಗೆ ಹೊಸದಾಗಿ ಬಂದ ಬಿಸೇಕಲ್ಲು ನೋಡಲು ಜನ ಸಾಯಂಕಾಲ ಅಲ್ಲಿಗೆ ಹೋಗಿ ಸೇರುತ್ತಿದ್ದುದು, ಪಾದ್ರಿ ಬಿಸೇಕಲ್ಗೆ ದೊಡ್ಡದಾದ ಎರಡು ಕಂಬಗಳನ್ನು ಕಟ್ಟಿ ಅದನ್ನು ಕಲಿಸುತ್ತಿದ್ದುದು. ಕುವೆಂಪುಅವರು ಅದನ್ನು ತುಂಭಾ ಚೆನ್ನಾಗಿ ವರ್ಣಿಸಿದ್ದಾರೆ. ವರ್ಣನೆಯ ವಿಚಾರದಲ್ಲಿ ಕುವೆಂಪು ಅವರಿಗೆ ಕುವೆಂಪು ಅವರನ್ನು ಬಿಟ್ಟರೆ ಬೇರೆ ಯಾರು ಸಾಟಿಯಾಗಲಾರರು.