ಲೈಂಗಿಕ ವಸ್ತುಗಳ ನಿಷೇಧ ಯಾಕೆ ?
ಮೊದಲಿಗೆ ಈ ಲೈಂಗಿಕ ವಸ್ತುಗಳು ಎಂದರೆ ಏನು ಅಂತ ಸ್ವಲ್ಪ ಹೇಳಿ ಬಿಡ್ತೀನಿ. ಏಕೆಂದರೆ ನಮ್ಮ ದೇಶದಲ್ಲಿ ಲೈಂಗಿಕತೆಯ ಬಗ್ಗೆ ಮಾತಾಡಲಿಕ್ಕೇ ಹಿಂಜರಿಯುವ ಮಾನಸಿಕತೆಯಿರುವಾಗ ಎಷ್ಟೋ ಜನರಿಗೆ ಇದೆಂತಾ ವಸ್ತುಗಳು? ಎಂಬ ಅನುಮಾನವೂ ಮೂಡಬಹುದು.
ಲೈಂಗಿಕ ವಸ್ತುಗಳು ಅಥವಾ ಸಾಮಗ್ರಿಗಳು
ಇವುಗಳನ್ನು ಇಂಗ್ಲೀಷಿನಲ್ಲಿ ಸೆಕ್ಸ್ ಟಾಯ್ಸ್ ಎಂದು ಕರೆಯುತ್ತಾರೆ. ಲೈಂಗಿಕತೆಗೆ ಸಂಬಂಧ ಪಟ್ಟಂತೆ ಉಪಯೋಗಿಸುವ ವಸ್ತುಗಳೆಲ್ಲಾ ಈ ಸಾಲಿಗೆ ಬರುತ್ತವೆ. ಬಹಳಷ್ಟು ಜನರು ಲೈಂಗಿಕ ವಿಷಯವೆಂದರೆ ಒಂದು ಕೋಣೆ, ಹಾಸಿಗೆ ಮತ್ತು ಸಂಗಾತಿ ಅಷ್ಟೇ ಎಂದುಕೊಂಡಿರಬಹುದು. ಆದರೆ ಅದನ್ನೂ ಮೀರಿದ ವಿಷಯಗಳು ನೂರಾರಿವೆ. ಅವುಗಳನ್ನು ಚರ್ಚಿಸುವುದೇ ಈ ಲೇಖನದ ಉದ್ದೇಶ.
ಲೈಂಗಿಕ ಪರಿಕರಗಳ ಬಗ್ಗೆ ಸರಳವಾಗಿ ಹೇಳಬೇಕೆಂದರೆ ಬಹಳಷ್ಟು ಬಳಕೆಯಲ್ಲಿರುವ ಕಾಂಡೋಮ್ ಸಹ ಒಂದು ಲೈಂಗಿಕ ಪರಿಕರವೇ ಆಗಿದೆ. ಕಾಂಡೋಮ್ ಮೊದಲಿಗೆ ಗರ್ಭನಿರೋಧಕವಾಗಿ ಉಪಯೋಗಕ್ಕೆ ಬಂದಿತು. ನಂತರದ ದಿನಗಳಲ್ಲಿ ರೋಗ ನಿರೋಧಕವಾಗಿ ಹೆಚ್ಚು ಪ್ರಚಾರ ಹಾಗೂ ಉಪಯೋಗಕ್ಕೆ ಬಂತು. ಅದರ ತಯಾರಕರು ಕೂಡಾ ಸುಮ್ಮನಿರದೇ ಅದರ ಮೇಲೆ ಗೆರೆ, ಗುಳ್ಳೆ ಮುಂತಾದವುಗಳನ್ನು ಸೇರಿಸಿ ಲೈಂಗಿಕ ಸಂತೃಪ್ತಿಯನ್ನೂ ನೀಡುವ ವಸ್ತುವನ್ನಾಗಿ ರೂಪಿಸತೊಡಗಿದರು.
ಕಾಂಡೋಮ್ ಎಲ್ಲರಿಗೂ ಪರಿಚಯವಿರುವ ಒಂದು ಲೈಂಗಿಕ ಪರಿಕರ. ಅದಲ್ಲದೇ ಇನ್ನೂ ನೂರಾರು ಲೈಂಗಿಕ ಪರಿಕರಗಳು ಚಾಲ್ತಿಯಲ್ಲಿ ಇವೆ. ಇವುಗಳಲ್ಲಿ ಬಹಳಷ್ಟು ವಸ್ತುಗಳನ್ನು ಅಭಿವೃದ್ದಿ ಪಡಿಸಿರುವುದೇ ಏಕಾಂಗಿಗಳ ಕಾಮವನ್ನು ತಣಿಸಲಿಕ್ಕಾಗಿ. ಅಂದರೆ ಕಾಮೋತ್ತೇಜನಗೊಂಡಾಗ ಸಂಗಾತಿ ಸಿಗದೇ ಹೋದರೆ ಈ ಪರಿಕರಗಳ ಮೂಲಕ ಕಾಮವನ್ನು ತಣಿಸಿಕೊಳ್ಳುವ ಅವಕಾಶವಿದೆ. [ ಅವುಗಳನ್ನು ವಿವರವಾಗಿ ಇಲ್ಲಿ ಚರ್ಚಿಸಲು ಸಾಧ್ಯವಿಲ್ಲವಾದರೂ ಉದಾ : ಸ್ತ್ರೀಯರಿಗಾಗಿ ಕೃತಕ ಶಿಶ್ನ, ಪುರುಷರಿಗಾಗಿ ಸುಂದರವಾದ ಹುಡುಗಿಯ ಗೊಂಬೆ ಮುಂತಾದವು ] ಇವುಗಳನ್ನು ಸೆಕ್ಸ್ ಟಾಯ್ಸ್ ಮತ್ತು ಸೆಕ್ಸ್ ಡಾಲ್ಸ್ ಎಂದು ಕರೆಯುತ್ತಾರೆ.
ಲೈಂಗಿಕತೆಯ ಮಹತ್ವ
ಲೈಂಗಿಕತೆಯ ಮಹತ್ವವನ್ನು ಮೊದಲಿಗೆ ಮನಗಂಡವರೇ ಭಾರತೀಯರು ಎಂಬುದಕ್ಕೆ ನೂರಾರು ಉದಾಹರಣೆಗಳು ನಮಗೆ ದೊರೆಯುತ್ತವೆ. ಆದರೆ ಗೊಡ್ಡು ಸಂಪ್ರದಾಯವಾದಿಗಳ ಹೊಡೆತಕ್ಕೆ ಸಿಕ್ಕು ಇಂದು ಅದರ ಬಗ್ಗೆ ಮಾತನಾಡಲು ಸಹ ಹಿಂಜರಿಯುವ ಪರಿಸ್ಥಿತಿ ಉಂಟಾಗಿದೆ. ಹಾಗಂತ ಲೈಂಗಿಕತೆ ಇಲ್ಲದೆ ಭಾರತೀಯರು ಬದುಕುತ್ತಿಲ್ಲ. ಅದಕ್ಕೆ ನೂರಿಪ್ಪತ್ತು ಕೋಟಿ ಮೀರಿದ ಜನಸಂಖ್ಯೆಯೇ ಸಾಕ್ಷಿ. ಜನಸಂಖ್ಯೆಯ ಏರಿಕೆಗೆ ಇಲ್ಲದ ಸಂಕೋಚ ಅದರ ಬಗ್ಗೆ ಮಾತನಾಡಲು, ತಿಳಿದುಕೊಳ್ಳಲು ಅಡ್ಡಿಯಾಗುವುದು ಮಾತ್ರ ವಿಚಿತ್ರ. ಗೆದ್ದಲು ಹಿಡಿದ ಸಂಪ್ರದಾಯಗಳನ್ನು ಪೋಷಿಸುತ್ತಾ ಬಂದುದರ ಪರಿಣಾಮವೇ ಇದು.
ಕಾಮ ಅನ್ನುವುದು ಮನುಷ್ಯನಷ್ಟೇ ಅಲ್ಲದೆ ಪ್ರತಿ ಜೀವಿಯಲ್ಲಿಯೂ ಇರುವಂತಹ ಒಂದು ಕ್ರಮ. ಬೇರೆ ಬೇರೆ ಜೀವಿಗಳು ಅದನ್ನು ಬೇರೆ ಬೇರೆ ರೀತಿಯಲ್ಲಿ ಅನುಸರಿಸುತ್ತಿರಬಹುದೇ ಹೊರತಾಗಿ ಕಾಮವಿಲ್ಲದ ಜೀವಿ ಯಾವುದೂ ಇಲ್ಲ. ಜೀವ ಸಂತತಿ ಇಲ್ಲಿಯವರೆಗೆ ಮುಂದುವರಿದುಕೊಂಡು ಬಂದಿರುವುದೇ ಈ ಕಾಮ ಹಾಗೂ ಸಂತಾನೋತ್ಪತ್ತಿಯ ತುಡಿತದಿಂದಾಗಿ. ಆದರೆ ಮಾನವ ಮಾತ್ರ ಕಾಮವನ್ನು ಸಂತಾನೋತ್ಪತ್ತಿಯ ಜೊತೆಗೆ ಸುಖಕ್ಕಾಗಿಯೂ ಉಪಯೋಗಿಸುತ್ತಾ ಬಂದಿದ್ದಾನೆ. ಈ ಕಾರಣದಿಂದ ಹುಟ್ಟಿದ್ದೇ ಕಾಮಸೂತ್ರ ಕೃತಿ.
ಕಾಮ ಎಂಬುದು ಜೀವಿಯ ಒಂದು ರೀತಿಯ ಹಸಿವು. ಕೀಟದಿಂದ ಹಿಡಿದು ಬೃಹತ್ ಪ್ರಾಣಿಗಳವರೆಗೂ ಕಾಮವನ್ನು ಪ್ರಕಟಿಸುವ ಪರಿ ಒಂದೇ ಆಗಿದೆ. ಕಾಮದ ಹಸಿವು ಉಂಟಾದಾಗ ಪ್ರತಿ ಪ್ರಾಣಿಯೂ ಕೆರಳುತ್ತದೆ. ಆ ಕ್ಷಣದಲ್ಲಿ ಅವುಗಳಿಗೆ ಸಂಗಾತಿ ಬೇಕೇ ಬೇಕು. ಆನೆ, ಸಿಂಹ, ಹುಲಿಯಂತಹ ಪ್ರಾಣಿಗಳು ಕಾಮವು ಕೆರಳಿದಾಗ ಸಂಗಾತಿಯನ್ನು ಪಡೆಯಲು ರಣ ಭಯಂಕರ ಕಾದಾಟವನ್ನೇ ಮಾಡುವುದನ್ನು ಕಾಣುತ್ತೇವೆ. ಹಾಗೆಯೆ ಮನುಷ್ಯ ಕೂಡಾ ಮೂಲತಃ ಒಂದು ಪ್ರಾಣಿ. ಆದುದರಿಂದ ಮನುಷ್ಯನೂ ಕಾಮೋತ್ತೇಜನಗೊಂಡಾಗ ಆತನ ಮನಸ್ಸು ಸ್ತಿಮಿತದಲ್ಲಿ ಇರುವುದು ಕಷ್ಟ. ಕಾಮಾತುರಣಾಂ ನ ಲಜ್ಜ, ನ ಭಯ! ಎಂದು ಹೇಳಿರುವುದು ಇದಕ್ಕೇನೆ.
ಕಾಮದ ಕಾರಣಕ್ಕೇ ಅತ್ಯಾಚಾರ !
ಕಾಮದಿಂದಾಗಿಯೇ ಅತ್ಯಾಚಾರ ನಡೆಯುವುದು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ನನಗನ್ನಿಸಿದ ಮಟ್ಟಿಗೆ ನಮ್ಮ ದೇಶದಲ್ಲಿ ನಡೆಯುವ ಶೇ. ೯೯% ಅತ್ಯಾಚಾರಗಳು ಕಾಮದ ಕಾರಣಕ್ಕೇ ನಡೆಯುತ್ತವೆ. ಉಳಿದ ಶೇ. ೧% ಮಾತ್ರ ಇತರೆ ಕಾರಣಗಳಿಗೆ (ದ್ವೇಶ ಇತ್ಯಾದಿ) ನಡೆಯಬಹುದೇನೊ. ಹಾಗೆಯೆ ಅತ್ಯಾಚಾರಿಗಳು ಮಾನಸಿಕ ಅಸ್ವಸ್ಥರೇನಲ್ಲ. ಯೋಗ್ಯ ಕುಟುಂಬದಿಂದ ಬಂದವರು, ಯುವಕರು, ವಿದ್ಯಾರ್ಥಿಗಳೂ ಸಹ ಇಂದು ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗುವುದನ್ನು ಕಾಣುತ್ತೇವೆ. ಹಾಗಿದ್ದರೆ ಸ್ವಸ್ಥ ಮನಸ್ಥಿತಿಯವರೂ ಯಾಕೆ ಅತ್ಯಾಚಾರದಂತಹ ಹೀನ ಕಾರ್ಯಕ್ಕೆ ಕೈ ಹಾಕುತ್ತಾರೆ ? ಇದಕ್ಕೆ ಸರಳ ಉತ್ತರ ಕಾಮವನ್ನು ತಣಿಸಿಕೊಳ್ಳಲು ಸಾಧ್ಯವಾಗದಿರುವುದೇ ಆಗಿದೆ.
ಅತ್ಯಾಚಾರಗಳ ಸಂಖ್ಯೆಯಂತೂ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದೆ. ಭಾರತೀಯ ಕ್ರೈಂ ದಾಖಲೆ ಬ್ಯೂರೊ ನೀಡಿರುವ ವರದಿಯ ಪ್ರಕಾರ ೨೦೦೯ ರಿಂದ ೨೦೧೧ ರವರೆಗೆ ದೇಶದಲ್ಲಿ ಸುಮಾರು ೬೮,೦೦೦ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ! ಸರಾಸರಿ ಪ್ರತಿ ನಿಮಿಷಕ್ಕೊಂದು ಅತ್ಯಾಚಾರದ ಪ್ರಯತ್ನ ನಡೆಯುತ್ತಲೇ ಇರುತ್ತದೆ ಎಂದು ಸಹ ಹೇಳಲಾಗುತ್ತಿದೆ. ಇದಕ್ಕೆಲ್ಲಾ ಕಾರಣ ಏನು ? ಹತೋಟಿ ಹೇಗೆ ?
ಇನ್ನು ವೇಶ್ಯಾವಾಟಿಕೆಯನ್ನು ತೆಗೆದುಕೊಂಡರೂ ಅಲ್ಲಿಗೆ ಹೋಗುವ ವಿಟ ಪುರುಷರ ಉದ್ದೇಶ ಕಾಮವನ್ನು ತಣಿಸಿಕೊಳ್ಳುವುದೇ ಆಗಿದೆ. ವೇಶ್ಯಾವಾಟಿಕೆಯಿಂದಲೇ ಪ್ರತಿನಿತ್ಯ ನೂರಾರು ಕೋಟಿ ರೂಪಾಯಿ ವಿನಿಮಯವಾಗುತ್ತಲೂ ಇದೆ. ಮಹಿಳೆಯರೂ ಸಹ ವಿವಿಧ ಸಂದರ್ಭಗಳಲ್ಲಿ ಸಂಗಾತಿ ದೊರೆಯದೇ ಹೋದಾಗ ತಮ್ಮ ಕಾಮವನ್ನು ತಣಿಸಿಕೊಳ್ಳಲೋಸುಗ ಅಸಂಪ್ರದಾಯಿಕ ಮಾರ್ಗಗಳನ್ನು ತುಳಿಯುತ್ತಾರೆ. ಸ್ತ್ರೀಯರ ವೇಶ್ಯಾವಾಟಿಕೆ ಇರುವಂತೆಯೆ ಪುರುಷರ ವೇಶ್ಯಾವಾಟಿಕೆ ಕೂಡಾ ಬೆಂಗಳೂರಿನಂತಹ ನಗರಗಳಲ್ಲಿ ಚಾಲ್ತಿಯಲ್ಲಿದೆ. ಇಲ್ಲಿ ಶ್ರೀಮಂತ ಮಹಿಳೆಯರು ತಮ್ಮ ಕಾಮವನ್ನು ತಣಿಸಿಕೊಳ್ಳಲು ಗಂಡು ವೇಶ್ಯೆಯರನ್ನು ಉಪಯೋಗಿಸಿಕೊಂಡು ಅವರಿಗೆ ಹಣವನ್ನೂ ನೀಡುತ್ತಾರೆ.
ಈಗಾಗಲೇ ನಡೆದಿರುವ ಅನೇಕ ಸಮೀಕ್ಷಗಳ ಪ್ರಕಾರ ಗಂಡಸರಿರಲಿ, ಹೆಂಗಸರಿರಲಿ ಸುಮಾರು ಶೇ. ೭೦%ಕ್ಕಿಂತಾ ಹೆಚ್ಚು ಜನರು ತಮ್ಮ ಪತಿ ಅಥವಾ ಪತ್ನಿಯ ಹೊರತಾಗಿ ಇನ್ನೊಬ್ಬರೊಂದಿಗೆ ದೇಹವನ್ನು ಹಂಚಿಕೊಂಡಿರುವ, ಅಥವಾ ಅದಕ್ಕೆ ಆಸಕ್ತಿ ವಹಿಸಿರುವ ಸಾಧ್ಯತೆ ಇದೆಯಂತೆ. ಅಂದರೆ ಇದಕ್ಕೆ ಪ್ರಮುಖ ಕಾರಣ ಕಾಮವೇ ಹೊರತೂ ಮತ್ತೇನಲ್ಲ.
ಕಾಮದ ನಿಗ್ರಹ ಹೇಗೆ ?
ಅಂದರೆ ಮೇಲಿನ ಎಲ್ಲಾ ಅಂಶಗಳನ್ನೂ ಗಮನಿಸಿದಾಗ ನಮಗೆ ತಿಳಿಯುವುದೇನೆಂದರೆ ಒಂದು ವೇಳೆ ಕಾಮವನ್ನು ನಿಗ್ರಹಿಸಲು ಸಾಧ್ಯವಾದಲ್ಲಿ ಅತ್ಯಾಚಾರ, ವೇಶ್ಯಾವಾಟಿಕೆ, ಅನೈತಿಕ ಸಂಬಂಧ, ಲೈಂಗಿಕ ಶೋಷಣೆ, ಲೈಂಗಿಕ ದೌರ್ಜನ್ಯ ಮುಂತಾದವುಗಳನ್ನು ತಡೆಗಟ್ಟಲು ಸಾಧ್ಯವಿದೆ. ನಿಜ ಹೇಳಬೇಕೆಂದರೆ ನಮ್ಮ ನಿಮ್ಮಂತಹ ಬಹಳಷ್ಟು ಜನರು ಕಾಮವನ್ನು ಮಾನಸಿಕ ಶಕ್ತಿಯಿಂದ ನಿಗ್ರಹಿಸಿಕೊಂಡೇ ಇರುತ್ತೇವೆ. ಆದರೆ ಇದು ಎಲ್ಲರಿಂದಲೂ ಸಾಧ್ಯವಾಗಬೇಕಲ್ಲ ? ಮಾನಸಿಕವಾಗಿ ಕಾಮವನ್ನು ನಿಗ್ರಹಿಸಲಾಗದವರಿಗಾಗಿಯೆ ಲೈಂಗಿಕ ಪರಿಕರಗಳನ್ನು ತಯಾರಿಸಲಾಗುತ್ತಿದೆ. ಆದರೆ ದುರದೃಷ್ಟವಶಾತ್ ಅವುಗಳನ್ನು ನಮ್ಮ ದೇಶದಲ್ಲಿ ನಿಷೇಧಿಸಲಾಗಿದೆ!
ನಿಷೇಧಕ್ಕೆ ಗೊಡ್ಡು ಸಂಪ್ರದಾಯವಾದಿಗಳೇ ಕಾರಣ!
ಇವರನ್ನು ನೈತಿಕ ಪೊಲೀಸರು ಎಂದಾದರೂ ಕರೆಯಿರಿ, ಅಥವಾ ಮೂರ್ಖ ತಾಲಿಬಾನಿಗಳು ಎಂದು ಬೇಕಾದರೂ ಕರೆಯಿರಿ. ವಿವೇಚನೆ ಇಲ್ಲದೇ ಅಪ್ಪ ನೆಟ್ಟ ಮರಕ್ಕೇ ನೇಣು ಹಾಕಿಕೊಳ್ಳಬೇಕು ಎಂದು ಬಯಸುವ ಮಂದಿ ಇವರು. ಪಾರ್ಕಿನಲ್ಲಿ ಯಾವ ಹುಡುಗಿ ಯಾರ ಜೊತೆ ಕೂರಬಾರದು ಎಂಬುದರಿಂದ ಹಿಡಿದು ಯಾರ್ಯಾರ ಮನೆಯ ಮಲಗುವ ಕೋಣೆಯಲ್ಲಿ ಯಾರು ಏನು ಉಪಯೋಗಿಸಬಾರದು ಎಂಬಲ್ಲಿಯ ವರೆಗೆ ಇವರು ತೀರ್ಮಾನಿಸಬಲ್ಲರು. ಇಂತಹ ಹೀನಸುಳಿಯವರೆ ರಾಜಕಾರಣಿಗಳು ಮತ್ತು ಅಧಿಕಾರಿಗಳಾದರಂತೂ ಕೇಳಬೇಕೆ ? ತಮ್ಮಿಷ್ಟದಂತೆ ಕಾನೂನು ರೂಪಿಸಿ ಅದನ್ನು ಜನರ ಮೇಲೆ ಹೇರಬಲ್ಲರು.
ಒಂದೆಡೆ ಸಂಪ್ರದಾಯಕ್ಕೆ ವಿರುದ್ದ, ಭಾರತೀಯ ಸಂಸ್ಕೃತಿಯಲ್ಲ ಎಂಬ ಕಾರಣಕ್ಕೆ ಲೈಂಗಿಕ ಪರಿಕರಗಳನ್ನು ನಿಷೇಧ ಮಾಡಿದ ಅದೇ ಸರ್ಕಾರ ನಮ್ಮ ಸಂಪ್ರದಾಯವಲ್ಲದ ಕಾಂಡೋಮ್ ಅನ್ನು ತಾನೇ ತಯಾರಿಸಿ ಜನರಿಗೆ ಉಚಿತವಾಗಿ ಹಂಚುತ್ತದೆ ! ವಿದೇಶಿ ಮಾದರಿಯ ಮುಖ ಮೈಥುನ ಮುಂತಾದವು ನಮ್ಮ ಸಂಸ್ಕೃತಿಯಲ್ಲ ಅನ್ನುವ ಸಂಸ್ಕೃತಿ ರಕ್ಷಕರು ಖುಜುರಾಹೊದ ಶಿಲ್ಪಗಳನ್ನು ನೋಡಬೇಕಾಗಿದೆ. ಅಪಾದ್ರವ್ಯ ಎಂಬ ಚಿಕ್ಕ ವಸ್ತುವನ್ನು ಉಪಯೋಗಿಸುವ ಬಗ್ಗೆ ಕಾಮಸೂತ್ರದಲ್ಲಿಯೇ ವರ್ಣನೆಯಿದೆಯೆಂದೂ ಹೇಳಲಾಗುತ್ತಿದೆ. ನಮ್ಮ ದೇಶದಲ್ಲಿ ನೂರಾರು ಲೈಂಗಿಕ ಉತ್ತೇಜಕಗಳು ಆಯುರ್ವೇದದ ಲೇಬಲ್ ಅಂಟಿಸಿಕೊಂಡು ಮಾರಾಟವಾಗುತ್ತಿವೆ. ವಯಾಗ್ರ ಬಂದ ಮೇಲೆಯೆ ಅತ್ಯಾಚಾರಗಳು ಹೆಚ್ಚಾಗಿರುವುದು ಎಂಬ ವಾದವೂ ಕೇಳಿ ಬರುತ್ತಿದೆ. ನಮ್ಮ ದೇಶದಲ್ಲಿ ಕಾಮೋತ್ತೇಜಕಗಳಿಗೆ ನಿರ್ಬಂಧವಿಲ್ಲ, ಬದಲಿಗೆ ಕಾಮವನ್ನು ತಣಿಸುವ ವಸ್ತುಗಳಿಗೇ ನಿರ್ಬಂಧ ! ಇದಕ್ಕಿಂತಾ ಕುಚೋಧ್ಯ ಬೇರೆ ಬೇಕಾ ? ಈಗ ಕಾಂಡೋಮ್‌ನ ಜೊತೆ ವಯಾಗ್ರ, ಮ್ಯಾನ್‌ಫೋರ್ಸ್‌ನಂತಹ ಕಾಮೋತ್ತೇಜಕಗಳಿಗೆ ಅನುಮತಿ ನೀಡಲಾಗಿದೆ. ಆದರೆ ಕಾಮವನ್ನು ತಣಿಸಿಕೊಳ್ಳುವ ವಸ್ತುಗಳಿಗೆ ನಿಷೇಧ ಮುಂದುವರಿದಿದೆ.
ನಿಷೇಧಕ್ಕೆ ಎಳ್ಳು ನೀರು, ವ್ಯಾಪಾರ ಬಲು ಜೋರು!
ಹಾಗಂತ ನಿಷೇಧಗೊಂಡ ವಸ್ತುಗಳೆಲ್ಲ ನಮ್ಮ ದೇಶದಲ್ಲಿ ದೊರೆಯುವುದೇ ಇಲ್ಲ ಅಂತೇನೂ ಅಲ್ಲವಲ್ಲ ? ಅದೇ ರೀತಿ ಲೈಂಗಿಕ ಸಾಮಗ್ರಿಗಳನ್ನೂ, ಗೊಂಬೆಗಳನ್ನೂ ನಿಷೇಧ ಮಾಡಿರುವುದೇನೋ ಸರಿ, ಆದರೆ ಅವು ಕಾಳಸಂತೆಯಲ್ಲಿ ಭರ್ಜರಿ ವ್ಯಾಪಾರವನ್ನೇ ಕುದುರಿಸಿವೆ. ಒಂದು ಅಂದಾಜಿನ ಪ್ರಕಾರ ನಮ್ಮ ದೇಶವೊಂದರಲ್ಲೇ ವರ್ಷಕ್ಕೆ ಐದು ನೂರು ಕೋಟಿ ರೂಪಾಯಿಗೂ ಮಿಗಿಲಾದ ವ್ಯವಹಾರ ಈ ಲೈಂಗಿಕ ಸಲಕರಣೆಗಳ ಮೂಲಕ ನಡೆಯುತ್ತಿದೆಯಂತೆ!
ಈ ವಸ್ತುಗಳ ಪ್ರಮುಖ ಉತ್ಪತ್ತಿ ತಾಣ ಚೀನ. ಇತರೆ ಕೆಲವು ಮಧ್ಯಪ್ರಾಚ್ಯ ದೇಶಗಳೂ ಸಹ ಉತ್ತಮ ಲೈಂಗಿಕ ಸಲಕರಣೆಗಳನ್ನು ತಯಾರಿಸಿದರೂ ಸಹ ಚೀನಾ ದೇಶವು ತನ್ನ ಇತರೆ ವಸ್ತುಗಳಂತೆಯೆ ಇವುಗಳನ್ನೂ ಅತಿ ಕಡಿಮೆ ಬೆಲೆಗೆ ತಯಾರಿಸಿ ವಿತರಿಸುವುದರಿಂದ ಕಾಳಸಂತೆಯಲ್ಲಿ ಬಲು ವೇಗವಾಗಿ ಮಾರಾಟವಾಗುತ್ತಿವೆ. ಪ್ರಪಂಚದಲ್ಲಿ ತಯಾರಾಗುವ ಇಂತಹ ಲೈಂಗಿಕ ಸಲಕರಣೆಗಳಲ್ಲಿ ಸುಮಾರು ಶೇ. ೭೦% ರಷ್ಟನ್ನು ಚೀನಾವೇ ತಯಾರಿಸುತ್ತಿದೆ. ನ್ಮಮ ದೇಶದಲ್ಲಿ ಇವುಗಳ ಮೂಲಕವೇ ಸುಮಾರು ೫೦೦ ಕೋಟಿಗೂ ಮಿಗಿಲಾದ ವ್ಯವಹಾರ ನಡೆಯುತ್ತಿದೆ ಎಂದು ಅಂದಾಜಿಸಲಾಗಿದೆ. ಸಂಸ್ಕೃತಿ ರಕ್ಷಕರು ತಿಪ್ಪರಲಾಗ ಹಾಕಿದರೂ ಇದನ್ನು ತಡೆಯಲು ಸಾಧ್ಯವಿಲ್ಲ, ಕಾರಣ ಕಾಳಸಂತೆಯಲ್ಲಿ ಸಿಗುವ ಇವುಗಳನ್ನು ಅವರೂ ಸಹ ಕಳ್ಳತನದಿಂದಲೇ ಉಪಯೋಗಿಸುತ್ತಲೂ ಇರಬಹುದು!
೧೫೦-೨೦೦ ರೂಪಾಯಿಯಿಂದ ಶುರುವಾಗುವ ಲೈಂಗಿಕ ಸಲಕರಣೆಗಳು ಮೂರು ನಾಲ್ಕು ಸಾವಿರದ ವರೆಗೂ ಸಿಗುತ್ತವೆ. ಸ್ತ್ರೀಯರ, ಪುರುಷರ ವಿವಿಧ ಅಂಗಗಳು, ಸ್ವಯಂ ಚಾಲಿತ ಪುರುಷರ ಗುಪ್ತಾಂಗ, ಸದೃಡ ಮೈಕಟ್ಟಿನ ಯುವಕನಂತಹ ಗೊಂಬೆ, ಸುಂದರ ಅಂಗಸೌಷ್ಟವದ ಹೆಣ್ಣು ಗೊಂಬೆ.. ಹೀಗೆ ನಾನಾ ವಿಧದ ವಸ್ತುಗಳು ಕಾಳಸಂತೆಯಲ್ಲಿ ಎಗ್ಗಿಲ್ಲದೇ ಮಾರಾಟವಾಗುತ್ತಿವೆ. ಹಾಗೆ ಮಾರುತ್ತಿದ್ದ ಒಬ್ಬ ವ್ಯಕ್ತಿಯನ್ನು ಮೊನ್ನೆ ದೆಹಲಿಯಲ್ಲಿ ಪೊಲೀಸರು ಬಂಧಿಸಿದ ಕಾರಣಕ್ಕೇ ಈ ಲೇಖನ ಬರೆಯುತ್ತಿದ್ದೇನೆ. ಆದರೆ ಆ ಬಂಧನದ ಹಿಂದೆ ಬಹುಶಃ ಪೊಲೀಸರಿಗೆ ಮಾಮೂಲು ಹೋಗದಿರುವುದು ಕಾರಣವಿರುತ್ತದೆ. ಅಥವಾ ಅವನ್ಯಾರೋ ಬಡಪಾಯಿ ಇರಬಹುದು.
ಭಾರತೀಯ ದಂಡ ಸಂಹಿತೆ - ೨೯೨ರ ಪ್ರಕಾರ ಈ ರೀತಿ ಲೈಂಗಿಕ ಸಲಕರಣೆಗಳನ್ನು ಒಯ್ಯುವುದು, ಸಂಗ್ರಹಿಸಿಡುವುದು, ಮಾರುವುದು, ಕೊಳ್ಳುವುದು ಮತ್ತು ಬಳಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದರಡಿ ಅಶ್ಲೀಲ ಪುಸ್ತಕ, ಬರವಣಿಗೆ, ಬಿತ್ತಿಪತ್ರ, ಚಿತ್ರ, ಛಾಯಾಚಿತ್ರ, ಚಲನಚಿತ್ರ, ವೀಡಿಯೋ ಮುಂತಾದುವು ಬರುತ್ತವೆ.
ಕಾಮವೆಂಬುದು ಮಾನಸಿಕ ಹಿಂಸೆ !
ಲೈಂಗಿಕ ತಜ್ಞರ ಪ್ರಕಾರ ಕಾಮವೆಂಬುದು ಒಂದು ಮಾನಸಿಕ ಹಿಂಸೆಯೇ ಸರಿ. ನಾವು ಸಾಧಾರಣವಾಗಿ ಬಳಸುವ ಕಾಮುಕ ಅಥವಾ ಕಾಮುಕಿ ಪದದ ನಿಜವಾದ ಅರ್ಥವೆಂದರೆ ಅದೊಂದು ಸ್ಥಿತಿ ಮಾತ್ರ. ಒಂದು ಸಮಯದಲ್ಲಿ ಕಾಮುಕನಾಗಿದ್ದವನು ಪ್ರತಿ ಕ್ಷಣವೂ ಹಾಗೆಯೇ ಇರಲಾರ. ತನ್ನ ಕಾಮ ತಣಿದ ಬಳಿಕ ಆತನೂ ಸಾಧಾರಣ ಮನುಷ್ಯನೇ. ಅತ್ಯಾಚಾರಗಳ ನಂತರ ಎಷ್ಟೋ ಸಂದರ್ಭದಲ್ಲಿ ಅತ್ಯಾಚಾರಿ ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಡುವುದನ್ನು ಸಹ ಕಾಣುತ್ತೇವೆ. ಎಷ್ಟೋ ಜನ ಅತ್ಯಾಚಾರಿಗಳೇ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೂ ಇವೆ. ಅಂದರೆ ಇದರರ್ಥ, ತಮ್ಮ ಹೀನ ಕಾರ್ಯಕ್ಕೆ ತಾವೇ ನೊಂದಿದ್ದಾರೆಂಬುದಾಗಿದೆ. ಹಾಗಿದ್ದೂ ಅಂತಹ ಕೆಲಸಕ್ಕೆ ಕೈ ಹಾಕಿದ್ದರು ಎಂದರೆ ಅದಕ್ಕೆ ಅವರ ಗುಣ ಕಾರಣವಾಗಿರಲಾರದು. ನಿಜವಾದ ಕಾರಣ ಉಕ್ಕಿದ ಕಾಮವನ್ನು ನಿಗ್ರಹಿಸಲಾಗದೇ ಹೋದುದೇ ಆಗಿರುತ್ತದೆ.
ವಯಸ್ಸಿಗೆ ಬಂದ ಪ್ರತಿ ಪ್ರಾಣಿಯಲ್ಲೂ ಕಾಮವು ಕೆಲವೊಂದು ಸಂದರ್ಭದಲ್ಲಿ ಉಚ್ರಾಯ ಸ್ಥಿತಿಯನ್ನು ತಲುಪುತ್ತದೆ ಎಂದು ಹೇಳುತ್ತಾರೆ ತಜ್ಞರು. ಅದನ್ನು ಹೊರ ಹಾಕುವ ವಿಷಯದಲ್ಲಿ ಪ್ರತಿ ಮನುಷ್ಯನೂ ಬೇರೆ ಬೇರೆ ವಿಧಾನವನ್ನು ಅನುಸರಿಸಬಹುದು. (ಉಳಿದೆಲ್ಲಾ ಪ್ರಾಣಿಗಳು ಸಂಗಾತಿಯನ್ನು ಸೇರುವ ಮೂಲಕ ಮಾತ್ರ ಕಾಮವನ್ನು ತಣಿಸಿಕೊಳ್ಳ ಬಲ್ಲವು). ಅದೃಷ್ಟವಶಾತ್ ಮನುಷ್ಯನಿಗೆ ಕಾಮವನ್ನು ತಣಿಸಿಕೊಳ್ಳಲು ಸಂಗಾತಿಯೊಂದೇ ಅಲ್ಲದೆ ಬೇರೆ ಅನೇಕ ಮಾರ್ಗಗಳೂ ಇವೆ. ಉದಾ : ಹಸ್ತ ಮೈಥುನ ಹಾಗೂ ಲೈಂಗಿಕ ಸಲಕರಣೆಗಳನ್ನು ಬಳಸುವುದಾಗಿದೆ. ಹಸ್ತಕ್ಕೆ ನಿರ್ಬಂಧ ಹೇರಲಾಗದ ಕಾರಣಕ್ಕೆ ಲೈಂಗಿಕ ಸಲಕರಣೆಗಳಿಗೆ ಮಾತ್ರ ನಿರ್ಬಂಧ ಹೇರಿದ್ದಾರೆ !
ಈ ಹಿಂದೆಯೆ ಹೇಳಿದಂತೆ ಕಾಮೋತ್ತೇಜನಗೊಂಡ ವ್ಯಕ್ತಿಯು ನಿಜಕ್ಕೂ ತನ್ನ ಸ್ವಾಧೀನವನ್ನು ಅಥವಾ ಯೋಚನಾ ಶಕ್ತಿಯನ್ನು ಕಳೆದುಕೊಳ್ಳುವ ಸಂಭವವಿದೆ. ಅದರಲ್ಲೂ ಮದ್ಯಪಾನ ಮಾಡಿದ್ದರಂತೂ ಮುಗಿದೇ ಹೋಯ್ತು. (ವೇಶ್ಯಾವಾಟಿಕೆಗೆ ಹೋಗುವ ಬಹುತೇಕರು ಮದ್ಯಪಾನಿಗಳಾಗಿರುತ್ತಾರೆ!). ಇಂತಹ ಸಂದರ್ಭದಲ್ಲಿ ತನ್ನದೇ ಸ್ವಂತ ಸಂಗಾತಿ ಇಲ್ಲದೇ ಹೋದಾಗ ಮನಸ್ಸು ಇತರೆ ಮಾರ್ಗಗಳತ್ತ ಹೊರಳುತ್ತದೆ. ಅದು ವೇಶ್ಯಾವಾಟಿಕೆ, ಅನೈತಿಕ ಸಂಬಂಧ ಅಥವಾ ಅತ್ಯಾಚಾರದಂತಹ ಅವಘಡವೂ ಇರಬಹುದು. ಇದನ್ನು ತಡೆಗಟ್ಟಲು ಅಸಾಧ್ಯವಾಗಿರುವ ಸಮಾಜ ಹಾಗೂ ಸರ್ಕಾರ ಅತ್ಯಾಚಾರಿಗಳನ್ನು ಗಲ್ಲಿಗೇರಿಸುತ್ತಾ ಸಾಗಿದೆ. ತಡೆಗಟ್ಟುವ ಕೆಲವೇ ಮಾರ್ಗಗಳನ್ನೂ ಸರ್ಕಾರವೇ ಮುಚ್ಚಿದರೆ ಇದಕ್ಕೆ ಹೊಣೆ ಯಾರು ?
ನಿಜ, ಲೈಂಗಿಕ ಸಲಕರಣೆಗಳನ್ನು ಮುಕ್ತವಾಗಿಸಿದ ತಕ್ಷಣ ಅತ್ಯಾಚಾರಗಳಾಗಲಿ, ಅನೈತಿಕವಾಗಲಿ, ವೇಶ್ಯಾವಾಟಿಕೆಯಾಗಲಿ ಸಂಪೂರ್ಣ ನಿಂತು ಹೋಗುತ್ತದೆಂದು ನಾನು ಹೇಳುತ್ತಿಲ್ಲ. ಅದು ಸಾಧ್ಯವೂ ಇಲ್ಲ. ಆದರೆ ಅದನ್ನು ಸ್ವಲ್ಪ ಮಟ್ಟಿಗಾದರೂ ತಡೆಯುವ ಒಂದು ದಾರಿಯನ್ನು ಯಾಕೆ ಮುಚ್ಚಬೇಕು ? ಲೈಂಗಿಕ ಸಲಕರಣೆ ಸುಲಭವಾಗಿ ದೊರಕುವುದಾದರೆ ಒಬ್ಬ ಯುವಕ ಅದರ ಮೂಲಕ ತನ್ನ ಕಾಮವನ್ನು ತೃಪ್ತಿ ಪಡಿಸಿಕೊಂಡು ಮಾನಸಿಕವಾಗಿ ಆಹ್ಲಾದದಿಂದ ಇರಬಲ್ಲನಾದರೆ ಅದಕ್ಕೆ ಕಲ್ಲು ಹಾಕಿ ಯಾಕೆ ಅವನನ್ನು ಉದ್ವೇಗದಲ್ಲೇ ಇರುವಂತೆ ಮಾಡಬೇಕು. (ಅವನು ಅತ್ಯಾಚಾರಿಯಾಗದೇ ಇರಬಹುದು, ಅವನ ಮಾನಸಿಕ ತುಮುಲದ ಬಗ್ಗೆ ನಾನು ಹೇಳುತ್ತಿರುವುದು.) ನೀವು ಯಾವುದೇ ಪತ್ರಿಕೆಯ, ಜಾಲತಾಣದ ಲೈಂಗಿಕ ಪ್ರಶ್ನೋತ್ತರ ವಿಭಾಗವನ್ನು ಗಮನಿಸಿದರೆ ಈ ವಿಷಯ ಸ್ಪಷ್ಟವಾಗುತ್ತದೆ.
ಅದರಲ್ಲೂ ಉನ್ನತ ವ್ಯಾಸಂಗಕ್ಕೆ ಬರುವ ವಯಸ್ಸಿಗೇ ಈ ಕಾಮವೂ ಹೆಡೆ ಬಿಚ್ಚುತ್ತಿರುತ್ತದೆ. ಇದರ ದೆಸೆಯಿಂದ ಓದಿನ ಕಡೆಗೆ ಗಮನ ಹರಿಸಲಾಗದೆ ಚಡಪಡಿಸುವ ಯುವಕರ ಸಂಖ್ಯಯೇನೂ ಕಡಿಮೆ ಇಲ್ಲ. ಅಂತವರು ಬೇರೆ ದಾರಿಗಾಣದೇ ಯಾವುದೋ ಹೆಣ್ಣಿನ ಸಂಗಕ್ಕೆ ಬಿದ್ದು ಹಾಳಾಗುವ ಬದಲು ಇಂತಹ ವಸ್ತುಗಳಿಂದ ತಮ್ಮ ಕಾಮವನ್ನು ತಣಿಸಿಕೊಳ್ಳುವ ವ್ಯವಸ್ಥೆ ಬಹು ಅಗತ್ಯವಾಗಿದೆ. ಹಾಗೆಯೆ ಇದು ಸಂಪೂರ್ಣ ಸುರಕ್ಷಿತವಾದುದು. ಸರ್ಕಾರ ಇದರತ್ತ ಗಮನ ಹರಿಸಿ ಲೈಂಗಿಕ ಸಲಕರಣೆಗಳ ಮೇಲಿರುವ ನಿರ್ಬಂಧವನ್ನು ತೆಗೆದು ಹಾಕಲಿ. ಈ ವಿಷಯದಲ್ಲಿ ಮಡಿವಂತಿಕೆ ಬೇಡ ಅನ್ನುವುದು ನನ್ನ ಕೋರಿಕೆ.