೧೫೨. ಲಲಿತಾ ಸಹಸ್ರನಾಮ ೬೬೩ರಿಂದ ೬೬೭ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೬೬೩-೬೬೭
Ajā-jaitrī अजा-जैत्री (663)
೬೬೩. ಅಜಾ-ಜೈತ್ರೀ
ಅಜಾ ಎಂದರೆ ಅಜ್ಞಾನ ಮತ್ತು ಜೇತ್ರೀ ಎಂದರೆ ವಿಜಯ. ದೇವಿಯು ಅಜ್ಞಾನವನ್ನು ಜಯಿಸಿದ್ದಾಳೆ. ಎಷ್ಟೇ ಆದರೂ ದೇವಿಯು ಜ್ಞಾನದ ಮೂರ್ತರೂಪಳು, ಹಾಗಿರುವಾಗ ಅವಳಲ್ಲಿ ಅಜ್ಞಾನದ ಮಾತೆಲ್ಲಿ?
ಶ್ವೇತಾಶ್ವತರ ಉಪನಿಷತ್ತು (೪.೫) ಅಜಾ ಎನ್ನುವ ಶಬ್ದವನ್ನು ಪದೇ ಪದೇ ಉಪಯೋಗಿಸುತ್ತದೆ. ಅದು ಹೇಳುತ್ತದೆ, "ಪ್ರಕೃತಿಯು ದೇವಿಯನ್ನು ಹೋಲುವ ಪ್ರಾಣಿಗಳನ್ನು ಸೃಷ್ಟಿಸುತ್ತದೆ (ಇದರ ಅರ್ಥ ಎಲ್ಲಾ ಜೀವಿಗಳನ್ನು ದೇವಿಯು ಪ್ರತಿನಿಧಿಸುತ್ತಾಳೆ). ಆ ಜೀವಿಗಳು ಅಗ್ನಿ, ನೀರು ಮತ್ತು ಭೂಮಿ ಇವುಗಳಿಂದ ಮಾಡಲ್ಪಟ್ಟಿದ್ದಾರೆ. ಅಜ್ಞಾನಿಗಳು ಇಂದ್ರಿಯ ಪ್ರಪಂಚದೆಡೆಗೆ ಆಕರ್ಷಿಸಲ್ಪಟ್ಟು ಅವರು ಅಲ್ಲಿಯೇ ಸಂತೋಷದಿಂದ ಇರುತ್ತಾರೆ. ಆದರೆ ಜ್ಞಾನಿಯಾದವನು ತನ್ನ ಪೂರ್ವಾನುಭವದಿಂದ ಈ ಇಂದ್ರಿಯ ಪ್ರಪಂಚವನ್ನು ತಿರಸ್ಕರಿಸುತ್ತಾನೆ".
ಆದ್ದರಿಂದ ಜ್ಞಾನವೆಂದರೆ ಒಳ್ಳೆಯದು ಮತ್ತು ಕೆಟ್ಟದ್ದನ್ನು ನಿಷ್ಕರ್ಷಿಸುವ ಸಾಮರ್ಥ್ಯ. ಈ ವಿವೇಚಿಸುವ ಸಾಮರ್ಥ್ಯವನ್ನೇ ಜ್ಞಾನವೆಂದಿದ್ದಾರೆ. ಈ ನಾಮವು ದೇವಿಯು ತನ್ನ ಭಕ್ತರಿಗೆ ಈ ವಿಧವಾದ ಜ್ಞಾನವನ್ನು ಹೊಂದಲು ಸಹಾಯ ಮಾಡುತ್ತಾಳೆ ಎಂದು ಹೇಳುತ್ತದೆ.
ಮೇಲಿನ ಉಪನಿಷತ್ತು ಹೀಗೂ ಹೇಳುತ್ತದೆ, ಅದೇನೆಂದರೆ ಅಜಾ ಎನ್ನುವುದು ಯಾವುದೇ ವಿಧವಾದ ರೂಪಾಂತರ ಹೊಂದದೇ ಇರುವುದು, ಬಹುಶಃ ಇದು ಅವ್ಯಕ್ತ (ನಾಮ ೩೯೮) ಸ್ಥಿತಿಯನ್ನು ಸೂಚಿಸುತ್ತದೆ.
Loga-yātrā-vidhāyinī लोग-यात्रा-विधायिनी (664)
೬೬೪. ಲೋಕ-ಯಾತ್ರಾ-ವಿದಾಯಿನೀ
ದೇವರ ಮೂರು ವಿಧವಾದ ಕ್ರಿಯೆಗಳನ್ನು ಲೋಕ-ಯಾತ್ರಾ ಎಂದು ಉಲ್ಲೇಖಿಸಲಾಗುತ್ತದೆ ಅದರರ್ಥ ಪ್ರಪಂಚ ಪರ್ಯಟನೆ ಎಂದಾಗುತ್ತದೆ. ಭೌತಿಕ ದೇಹವು ಈ ಪ್ರಪಂಚದೊಳಕ್ಕೆ ತನ್ನ ಯಾತ್ರೆಯನ್ನು ಪ್ರಾರಂಭಿಸಿ, ಸ್ಥಿತಿ ಕ್ರಿಯೆಯಿಂದ ಪೋಷಿಸಲ್ಪಟ್ಟು ಮರಣದಿಂದ ನಾಶವಾಗುತ್ತದೆ. ಈ ಕ್ರಿಯೆಯು ನಿರಂತರವಾಗಿ ನಡೆಯುತ್ತದೆ. ಆತ್ಮವು ಒಂದು ರೂಪದಲ್ಲಿ ಇಂದು ಜನಿಸಿದ್ದು ತನ್ನ ಮರಣದ ನಂತರ ಇನ್ನೊಂದು ವಿಧವಾದ ಭೌತಿಕ ದೇಹದೊಳಗೆ ಸೇರಿಕೊಂಡು ಮತ್ತೊಂದು ವಿಧದ ರೂಪದಲ್ಲಿ ಜನಿಸುತ್ತದೆ. ಈ ಪ್ರಕ್ರಿಯೆಯು ಸಹ ನಿರಂತರವಾಗಿ ಜರುಗುತ್ತದೆ. ಕೆಲವೊಂದು ವಿಶೇಷ ಆತ್ಮಗಳು ಪುನರ್ಜನ್ಮವನ್ನು ತಾಳುವುದಿಲ್ಲ. ಈ ನಾಮವು ದೇವಿಯು ‘ಜನನ-ಮರಣ-ಜನನ ಚಕ್ರ’ಕ್ಕೆ ಕಾರಣಳೆಂದು ಹೇಳುತ್ತದೆ.
Ekākinī एकाकिनी (665)
೬೬೫. ಏಕಾಕಿನೀ
ದೇವಿಯು ಏಕಾಂಗಿಯಾಗಿದ್ದಾಳೆ. ಮೂರು ದೈವೀ ಕ್ರಿಯೆಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯಗಳೆಲ್ಲವನ್ನೂ ದೇವಿಯೊಬ್ಬಳೇ ಕೈಗೊಳ್ಳುತ್ತಾಳೆ. ಬೃಹದಾರಣ್ಯಕ ಉಪನಿಷತ್ತು (೧.೪.೨) ಹೇಳುತ್ತದೆ, "ನನ್ನ ಹೊರತು ಮತ್ತೇನೂ ಇಲ್ಲದಿದ್ದರೆ, ನಾನು ಹೆದರಬೇಕಾದದ್ದಾದರೂ ಯಾವುದಕ್ಕೆ?” ಇದು ಒಬ್ಬರೇ ಇರುವುದರಿಂದ ಉಂಟಾಗುವ ಪ್ರಯೋಜನ. ಭಯವು ಆಧ್ಯಾತ್ಮಿಕ ಸಾಧನೆಯಲ್ಲಿ ಬಹುದೊಡ್ಡ ಅಡಚಣೆಯಾಗಿದೆ.
ಛಾಂದೋಗ್ಯ ಉಪನಿಷತ್ತು (೬.೨.೧) ಹೇಳುತ್ತದೆ, "ಏಕಂ ಏವ ಅದ್ವಿತೀಯಂ" ಅಂದರೆ ಒಂದರ ಹೊರತು ಮತ್ತೊಂದಿಲ್ಲ. ಈ ಪ್ರಪಂಚದ ವಿಕಸನಕ್ಕೆ ಮುಂಚೆ, ಸೃಷ್ಟಿಯು ಅದ್ವಿತೀಯವಾದ ಅವ್ಯಕ್ತದ ರೂಪದಲ್ಲಿತ್ತು. ದೇವಿಯು ಯಾರೂ ಜೊತೆಯಲ್ಲಿಲ್ಲದೇ ಆಕೆಯು ಒಬ್ಬಂಟಿಯಾಗಿಯೇ ಇರುತ್ತಾಳೆ. ಇದನ್ನು ಇನ್ನೊಂದು ದೃಷ್ಟಿಕೋನದಿಂದಲೂ ನೋಡಬಹುದು. ಈ ಪ್ರಪಂಚದಲ್ಲಿ ಇರುವ ಜೀವಿಗಳೆಲ್ಲಾ ಏಕಾಂಗಿಯಾಗಿರುವ ಬ್ರಹ್ಮದ ಪ್ರತಿಬಿಂಬಗಳಷ್ಟೇ. ಬ್ರಹ್ಮನು ಏಕಾಂಗಿಯಾಗಿದ್ದು ಯಾವುದೇ ಜೊತೆಗಾರರಿಲ್ಲ ಎನ್ನುವ ವಾಸ್ತವ ಸಂಗತಿಯನ್ನು ಎಲ್ಲಾ ಉಪನಿಷತ್ತುಗಳು ಚರ್ಚಿಸುತ್ತವೆ.
ಕಠೋಪನಿಷತ್ತು (೨.೨.೯) ಹೀಗೆ ಹೇಳುತ್ತದೆ, "ಆ ಒಂದು ಆತ್ಮವೇ ವಿವಿಧವೆಂದು ತೋರುವ ಎಲ್ಲಾ ಜೀವಿಗಳಲ್ಲಿ ಇದೆ. ನಮ್ಮ ಅಜ್ಞಾನದಿಂದಾಗಿ ನಾವು ಎಲ್ಲಾ ಜೀವಿಗಳನ್ನು ಬೇರೆ ಬೇರೆ ಎಂದು ತಿಳಿಯುತ್ತೇವೆ".
ಋಗ್ವೇದವು (೧.೧೬೪.೪೬) ಹೀಗೆ ಹೇಳುತ್ತದೆ, "ಏಕಂ ಸತ್ ವಿಪ್ರಾ ಬಹುದಾ ವದಂತಿ" ಅಂದರೆ ಜ್ಞಾನಿಗಳು ಒಂದನ್ನು ಅನೇಕ ಹೆಸರಿನಿಂದ ಕರೆಯುತ್ತಾರೆ.
ವಿಷ್ಣು ಸಹಸ್ರನಾಮಾವಳಿಯ ೭೨೫ನೇ ನಾಮವು ಏಕಃ ಆಗಿದ್ದು ಅದೂ ಸಹ ಇದೇ ಅರ್ಥವನ್ನು ಕೊಡುತ್ತದೆ.
ಈ ನಾಮವು ಈ ಸಮಸ್ತ ಪ್ರಪಂಚದ ನಿರ್ವಹಣೆಯನ್ನು ದೇವಿಯೊಬ್ಬಳೇ ಪ್ರತ್ಯೇಕವಾಗಿ ಕೈಗೊಳ್ಳುತ್ತಾಳೆಂದು ಹೇಳುತ್ತದೆ. ಆಕೆಯು ಬೇರೆ ಯಾರಿಂದಲೂ ತನ್ನ ಕ್ರಿಯೆಗಳ ಕುರಿತಾಗಿ ಸಲಹೆಯನ್ನು ಪಡೆಯಬೇಕಾಗಿಲ್ಲ. ಒಂದು ಪ್ರಶ್ನೆ ಏಳುತ್ತದೆ, ಅದೇನೆಂದರೆ ಈ ಸಹಸ್ರನಾಮದಲ್ಲಿ ಹೆಸರಿಸಿರುವ ಉಳಿದ ದೇವತೆಗಳ ಸಂಗತಿ ಏನು ಎನ್ನುವುದಾಗಿ. ಅವರುಗಳು ದೇವಿಯಿಂದ ವಹಿಸಲ್ಪಟ್ಟ ಕಾರ್ಯಗಳನ್ನು ಆಕೆಯ ಆದೇಶದಂತೆ ನಿರ್ವಹಿಸುತ್ತಾರಷ್ಟೇ. ನಿರ್ಧಾರವನ್ನು ಕೈಗೊಳ್ಳುವುದಕ್ಕೂ ಕಾರ್ಯನಿರ್ವಹಿಸುವುದಕ್ಕೂ ವ್ಯತ್ಯಾಸವಿದೆ. ದೇವಿಯು ನಿರ್ಣಯಿಸುತ್ತಾಳೆ ಉಳಿದ ದೇವತೆಗಳು ಅದನ್ನು ಅನುಷ್ಠಾನಗೊಳಿಸುತ್ತಾರೆ.
Bhūmarūpā भूमरूपा (666)
೬೬೬. ಭೂಮರೂಪಾ
ಭೂಮಾ ಎಂದರೆ ಬ್ರಹ್ಮವಾಗಿದೆ. ದೇವಿಯು ಬ್ರಹ್ಮದ ರೂಪದಲ್ಲಿದ್ದಾಳೆ. ಹಿಂದಿನ ನಾಮಗಳಲ್ಲಿ ಬ್ರಹ್ಮದ ಲಕ್ಷಣಗಳನ್ನು ಚರ್ಚಿಸಿದ ವಾಗ್ದೇವಿಗಳು ಮತ್ತೊಮ್ಮೆ ಆಕೆಯನ್ನು ಬ್ರಹ್ಮವೆಂದು ದೃಢಪಡಿಸುತ್ತಾರೆ.
ಬ್ರಹ್ಮ ಸೂತ್ರ (೧.೩.೮) ಹೇಳುತ್ತದೆ, "ಭೂಮಾನ್" ಅಂದರೆ ಅನಂತವಾದದ್ದು. ಬ್ರಹ್ಮಕ್ಕೂ ಭೂಮಕ್ಕೂ ವ್ಯತ್ಯಾಸವಿಲ್ಲ.
ಛಾಂದೋಗ್ಯ ಉಪನಿಷತ್ತು (೭.೨೩) ಹೇಳುತ್ತದೆ, "ಯೋ ವೈ ಭೂಮಃ ತತ್ ಸುಖಮ್" ಅಂದರೆ ಯಾವುದು ಅನಂತವಾಗಿದೆಯೋ ಅದುವೇ ಆನಂದವಾಗಿದೆ. ಈ ಉಪನಿಷತ್ತು ಮತ್ತೆ ಹೇಳುತ್ತದೆ, "ಪರಿಮಿತವಾದುದರಲ್ಲಿ ಸಂತೋಷವೆನ್ನುವುದು ಇಲ್ಲ ಮತ್ತು ಸಂತೋಷವೆನ್ನುವುದು ಕೇವಲ ಅಪರಿಮಿತವಾದುದರಲ್ಲಿದೆ. ಆದರೆ ಒಬ್ಬನು ಆ ಅನಂತವಾದುದರ ಸ್ವಭಾವವನ್ನು ತಿಳಿದುಕೊಳ್ಳಬೇಕು". ಆ ಅನಂತವನ್ನು ಅರಿಯಲು ಧ್ಯಾನ ಮತ್ತು ಆತ್ಮ ಜಿಜ್ಞಾಸೆಯು ಸಹಾಯಕವಾಗಿವೆ.
ಕೂರ್ಮ ಪುರಾಣವು, ಆ ಒಂದು ಶಕ್ತಿಯಾದ ಶಿವನ ಅರ್ಧಾಂಗಿಯು ಪರಿಮಿತಗೊಳಪಟ್ಟು ಅನೇಕವಾಗುತ್ತಾಳೆ ಮತ್ತು ಆಕೆಯು ಸಮಸ್ತ ಕಾರ್ಯಗಳನ್ನು ಅವನ ಉಪಸ್ಥಿತಿಯಲ್ಲಿ ಲೀಲಾಜಾಲವಾಗಿ ಮಾಡುತ್ತಾಳೆ. ಇಲ್ಲಿ ಪರಿಮಿತಿ ಎಂದರೆ ಎಲ್ಲಾ ಜೀವಿಗಳಿಗೂ ಅನ್ವಯವಾಗುವ ಪರಿಮಿತಗೊಳಿಸುವ ಗಾತ್ರ, ಆಕಾರ, ರೂಪ, ಗುಣ ಮೊದಲಾದವುಗಳು. ಯಾವುದೇ ಜೀವ ಪ್ರಭೇದವು ತನಗೆ ನಿಗದಿತವಾಗಿರುವ ಪರಿಮಿತಿಗಳನ್ನು ದಾಟಿ ಹೋಗಲಾರದು. ಪರಿಮಿತಿ ಇಲ್ಲದಿರುವುದು ಅಥವಾ ಅನಂತತೆಯು ಬ್ರಹ್ಮದ ಲಕ್ಷಣವಾಗಿದೆ.
Nirdvaitā निर्द्वैता (667)
೬೬೭. ನಿರ್ದ್ವೈತಾ
ದೇವಿಯು ದ್ವಂದ್ವವಿಲ್ಲದವಳು. ದ್ವೈತ ಎಂದರೆ ಎರಡು ಅಂದರೆ ದ್ವಂದ್ವತೆ. ಮೂರು ವಿಧವಾದ ಪ್ರಧಾನ ವೇದಾಂತ ಶಾಖೆಗಳಿವೆ. ಅದರಲ್ಲಿ ಮೊದಲನೆಯದು ದ್ವೈತ, ಎರಡನೆಯದು ವಿಶಿಷ್ಠಾದ್ವೈತ ಮತ್ತು ಮೂರನೆಯದು ಅದ್ವೈತ. ವಿಶಾಲವಾಗಿ ಹೇಳಬೇಕೆಂದರೆ ಈ ಮೂರು ವಿಧಾನಗಳು ಪರಮಾತ್ಮನನ್ನು ಅರಿಯುವ ಮಾರ್ಗಗಳಾಗಿವೆ. ದ್ವೈತದಲ್ಲಿ ದೇವರು, ಜೀವಿ ಮತ್ತು ಬ್ರಹ್ಮಾಂಡವು ಬೇರೆ ಎಂದು ಪರಿಗಣಿಸಲಾಗುತ್ತದೆ. ನಿರ್-ದ್ವೈತ ಅಥವಾ ಅದ್ವೈತದಲ್ಲಿ ದೇವರು, ಜೀವಿ ಮತ್ತು ಬ್ರಹ್ಮಾಂಡ ಎಲ್ಲವೂ ಒಂದೇ ಮತ್ತು ಜೀವಿಯು ಭಗವಂತನಿಗಿಂತ ಬೇರೆಯಲ್ಲ ಎಂದು ಹೇಳುತ್ತದೆ. ಜೀವಿಯು ಮಾಯೆಯ ಪ್ರಭಾವದಿಂದಾಗಿ ಪ್ರತ್ಯೇಕವಾಗಿ ಕಾಣಿಸುತ್ತದೆ ಎನ್ನುತ್ತದೆ. ವಿಶಿಷ್ಠಾದ್ವೈತದಲ್ಲಿ ಅದು ದೇವರು, ಜೀವಿ ಮತ್ತು ಬ್ರಹ್ಮಾಂಡ ಇವುಗಳನ್ನು ಒಪ್ಪುತ್ತದೆ ಮತ್ತು ಕಡೆಯ ಎರಡು ತಮ್ಮ ಅಸ್ತಿತ್ವಕ್ಕಾಗಿ ದೇವರ ಮೇಲೆ ಅವಲಂಭಿಸಿವೆ ಎಂದು ಹೇಳುತ್ತದೆ. ಒಂದು ವೇಳೆ ದೇವರು ಇಲ್ಲದೇ ಇದ್ದರೆ ಜೀವಿ ಮತ್ತು ಬ್ರಹ್ಮಾಂಡಗಳು ಇರುತ್ತಿರಲಿಲ್ಲ.
ಈ ನಾಮವು ದೇವಿಯು ಅದ್ವೈತ ಬ್ರಹ್ಮಳೆಂದು ಹೇಳುತ್ತದೆ, ಇದನ್ನು ಈ ಮೊದಲು ನಾಮ ೬೬೫ರಲ್ಲಿ ದೃಢಪಡಿಸಲಾಗಿತ್ತು. ಬ್ರಹ್ಮವು ಅದ್ವೈತದಲ್ಲಿ ಏಕಾಂಗಿ ಅಂಶವಾಗಿದೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 663 - 667 http://www.manblunder.com/2010/03/lalitha-sahasranamam-663-667.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೧೫೨. ಲಲಿತಾ ಸಹಸ್ರನಾಮ ೬೬೩ರಿಂದ ೬೬೭ನೇ ನಾಮಗಳ ವಿವರಣೆ
ಶ್ರೀಧರರೆ, "೧೫೨. ಶ್ರೀ ಲಲಿತಾ ಸಹಸ್ರನಾಮದ ವಿವರಣೆ" ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೬೬೩-೬೬೭
______________________________________
.
೬೬೩. ಅಜಾ-ಜೈತ್ರೀ
ವಿವೇಚನಾ ಸಾಮರ್ಥ್ಯವೆ ಜ್ಞಾನ, ಹೊಂದಲದ ದೇವಿಯ ಕರುಣ
ಅಜ್ಞಾನವೆ ಅಜಾ, ಇಂದ್ರಿಯ ಬಂಧನದಲಿ ಸಿಕ್ಕೆ ಅಜ್ಞಾನಿ ಲಕ್ಷಣ
ಜ್ಞಾನಿ ವಿವೇಚನೆಯಿಂದ ಇಂದ್ರಿಯ ಬಂಧನ ಗೆಲ್ಲಲ್ಹವಣಿಸೆ ಖಾತ್ರಿ
ರೂಪಾಂತರವಿರದ ಅವ್ಯಕ್ತಾ ಸ್ಥಿತಿ ಲಲಿತೆ, ಕರುಣಿಸಿ ಅಜಾ-ಜೈತ್ರೀ ||
.
೬೬೪. ಲೋಕ-ಯಾತ್ರಾ-ವಿದಾಯಿನೀ
ಮೂರು ವಿಧ ಕ್ರಿಯೆ ಲೋಕಯಾತ್ರಾ, ನಿರಂತರ ಪ್ರಪಂಚ ಪರ್ಯಟನೆ
ಭೌತಿಕ ದೇಹ ಜನನ-ಜೀವನ-ಮರಣ ಪ್ರಕ್ರಿಯೆ ನಡೆವಂತೆ ಸಂಘಟನೆ
ಮರಣೋತ್ತರ ಮರುಜನ್ಮ, ಆತ್ಮ ತೊಟ್ಟಿನ್ನೊಂದು ದೇಹವನೆ ನಿರಂತರ
ವಿಶೇಷಾತ್ಮಕೆ ಮುಕ್ತಿ, ಚಕ್ರ ಲೋಕ-ಯಾತ್ರಾ-ವಿದಾಯಿನೀಯನುಸಾರ ||
.
೬೬೫. ಏಕಾಕಿನೀ
ಆಧ್ಯಾತ್ಮಿಕ ಸಾಧನೆ ಹಾದಿಗಡಚಣೆ ಭಯ, ಭೀತಿಯಿಲ್ಲದ ಏಕಾಕಿನೀ
ಅದ್ವಿತೀಯ ಏಕಾಕಿ ಅವ್ಯಕ್ತರೂಪ, ಸೃಷ್ಟಿಯಲಿ ಬಿಂಬಿಸಿ ಅನೇಕ ದನಿ
ಏಕವೆ ಅನೇಕ ಅನೇಕದಲಿಹ ಏಕ, ಸಮಸ್ತ ಜಗ ನಿಭಾವಣೆ ಏಕಾಂಗ
ನಿರ್ಧರಿಸುತೆಲ್ಲ ಲಲಿತೆ, ಅನುಷ್ಠಾನಕೆ ದೇವಾನುದೇವತೆ ಕಾರ್ಯಾಂಗ ||
.
೬೬೬. ಭೂಮರೂಪಾ
ಭೂಮವೆ ಬ್ರಹ್ಮ ಅನಂತ, ದೇವಿ ಲಲಿತೆಯ ಬ್ರಹ್ಮರೂಪ
ಅನಂತವೆ ಆನಂದ, ಸಂತಸವಿರಲೆ ಪರಿಮಿತದಲಿ ಮಿತ
ಅಪರಿಮಿತವರಸೆ ಧ್ಯಾನ ಜಿಜ್ಞಾಸೆ ಭೂಮರೂಪಾ ಬ್ರಹ್ಮಾ
ಪರಿಮಿತ ಜೀವಿಯಾಗಿ ಅಪರಿಮಿತ, ಅನಂತ ಗುಣಧರ್ಮ ||
.
೬೬೭. ನಿರ್ದ್ವೈತಾ
ದ್ವಂದ್ವವಿಲ್ಲದ ದೇವಿ ಅದ್ವೈತ ಬ್ರಹ್ಮ, ದ್ವೈತವಿಲ್ಲದ ಲಲಿತೆ ನಿರ್ದ್ವೈತಾ
ವೇದಾಂತ ಪರಮಾತ್ಮನನರಿವ ಮಾರ್ಗ, ದ್ವೈತದೆ ಬೇರೆಯಾಗೆಲ್ಲ ಇತ್ತ
ದೇವ-ಜೀವಿ-ಬ್ರಹ್ಮಾಂಡ ಏಕವಿಹ ಅದ್ವೈತ, ಒಪ್ಪುತದನೆ ವಿಶಿಷ್ಟಾದ್ವೈತ
ದೇವರಿಲ್ಲದೆ ಮಿಕ್ಕೆರಡಿಲ್ಲ ಎನ್ನುತ, ಪ್ರತಿ ಸಿದ್ದಾಂತ ಮಾರ್ಗ ದೇವಿಯತ್ತ ||
.
-ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು