೧೫೩. ಲಲಿತಾ ಸಹಸ್ರನಾಮ ೬೬೮ರಿಂದ ೬೭೬ನೇ ನಾಮಗಳ ವಿವರಣೆ

೧೫೩. ಲಲಿತಾ ಸಹಸ್ರನಾಮ ೬೬೮ರಿಂದ ೬೭೬ನೇ ನಾಮಗಳ ವಿವರಣೆ

                                                                                                  ಲಲಿತಾ ಸಹಸ್ರನಾಮ ೬೬೮ - ೬೭೬

Dvaita-varjitā द्वैत-वर्जिता (668)

೬೬೮. ದ್ವೈತ-ವರ್ಜಿತಾ

           ದೇವಿಯು ದ್ವೈತದಿಂದ ಹೊರತಾಗಿದ್ದಾಳೆ. ದ್ವೈತ ಸಿದ್ಧಾಂತವು ಬ್ರಹ್ಮ ಮತ್ತು ಜೀವಿಯು ಬೇರೆ ಎಂದು ಪ್ರತಿಪಾದಿಸುತ್ತದೆ. ಈ ನಾಮವು ಹಿಂದಿನ ನಾಮದ ಮುಂದುವರಿದ ಭಾಗವಾಗಿದ್ದು ಇದು ದೇವಿಯ ಪರಬ್ರಹ್ಮ ಸ್ವರೂಪವನ್ನು ಮತ್ತೊಮ್ಮೆ ದೃಢಪಡಿಸುತ್ತದೆ. ಬ್ರಹ್ಮವು ದ್ವಂದ್ವ ರಹಿತವಾಗಿದೆ, ಏಕೆಂದರೆ ಎಲ್ಲಾ ಜೀವಿಗಳು ಕೇವಲ ಅವಳ ಛಾಯೆಯಾಗಿದ್ದಾರೆ. ದ್ವೈತವು ಆತ್ಮಸಾಕ್ಷಾತ್ಕಾರಕ್ಕೆ ದಾರಿ ಮಾಡಿ ಕೊಡುವುದಿಲ್ಲ.

Annadā अन्नदा (669)

೬೬೯. ಅನ್ನದಾ

           ಅನ್ನಮ್ ಎಂದರೆ ಆಹಾರ. ದೇವಿಯು ಈ ವಿಶ್ವಕ್ಕೆ ಅವುಗಳ ಅಸ್ತಿತ್ವಕ್ಕಾಗಿ ಆಹಾರವನ್ನು ಒದಗಿಸುವವಳಾಗಿದ್ದಾಳೆ. ಅನ್ನಮ್ ಎನ್ನುವುದು ’ಅದ್’ ಎಂದರೆ ತಿನ್ನುವುದು ಎನ್ನುವ ಮೂಲ ಶಬ್ದದಿಂದ ಉತ್ಪನ್ನವಾಗಿದೆ. ಈ ಪ್ರಪಂಚದಲ್ಲಿ ಇರುವ ಯಾವುದೇ ಜೀವಿಯಾಗಿರಲಿ ಅದು ಆಹಾರದ ಉತ್ಪನ್ನವಾಗಿದೆ. ಆ ಜೀವಿಗಳೆಲ್ಲವೂ ಆಹಾರದಿಂದ ಸುಸ್ಥಿತಿಯಲ್ಲಿವೆ ಮತ್ತು ಅಂತಿಮವಾಗಿ ಅವು ಆಹಾರದಲ್ಲಿ ಲೀನವಾಗುತ್ತವೆ. "ಆಹಾರವು ಜೀವಿಗಳ ಎಲ್ಲಾ ರೋಗಗಳಿಗೆ ಪರಿಹಾರವೆಂದು ಕರೆಯಲ್ಪಟ್ಟಿದೆ", ಹೀಗೆಂದು ತೈತ್ತರೀಯ ಉಪನಿಷತ್ತು (೨.೨) ಹೇಳುತ್ತದೆ. ದೇವಿಯ ಸ್ಥಿತಿ ಕ್ರಿಯೆಯನ್ನು ಈ ನಾಮದ ಮೂಲಕ ದೃಢಪಡಿಸಲಾಗಿದೆ.

Vasudā वसुदा (670)

೬೭೦. ವಸುಧಾ

           ವಸುಧಾ ಎಂದರೆ ಭೂಮಿ, ಆದ್ದರಿಂದ ದೇವಿಯು ಭೂಮಿಯ ರೂಪದಲ್ಲಿ ಇದ್ದಾಳೆಂದು ಅರ್ಥೈಸಬಹುದು. (ಬಹುರತ್ನ ಗರ್ಭಾ ವಸುಂಧರಾ ಅಂದರೆ ಭೂಮಿಯು ತನ್ನ ಗರ್ಭದಲ್ಲಿ ಅನೇಕ ರತ್ನಗಳನ್ನು ಹುದುಗಿಸಿಕೊಂಡಿದೆ ಎಂದರ್ಥ).  

          ದೇವಿಯು ಸಂಪದವನ್ನು ಕರುಣಿಸುವವಳಾಗಿದ್ದಾಳೆ. ವಸು ಎಂದರೆ ಅಮೂಲ್ಯವಾದ ಲೋಹಗಳು, ರತ್ನಗಳು ಮತ್ತು ಎಲ್ಲಾ ವಿಧವಾದ ಸಂಪತ್ತು. ಬೃಹದಾರಣ್ಯಕ ಉಪನಿಷತ್ತು (೪.೪.೨೪), "ಆ ಮಹಾನ್, ಜನ್ಮರಹಿತನಾದ ಆತ್ಮನು ಸರ್ವ ಪ್ರಾಣಿಗಳಲ್ಲಿಯೂ ವಾಸಮಾಡುತ್ತ ಎಲ್ಲ ಅನ್ನವನ್ನು ಸೇವಿಸುವವನು ಮತ್ತು ಸಂಪದವನ್ನು (ಫಲಗಳನ್ನು) ಕೊಡುವವನಾಗಿದ್ದಾನೆ. ಯಾರು ಇದನ್ನು ಆ ವಿಧವಾಗಿ ಅರಿಯುತ್ತಾರೆಯೋ ಅವನು ಸಂಪದಗಳನ್ನು ಪಡೆಯುತ್ತಾನೆ". ಆ ಉಪನಿಷತ್ತು ಮುಂದುವರೆಯುತ್ತಾ "ಆ ಜನ್ಮವಿಲ್ಲದ ಆತ್ಮದ ಮೇಲೆ ಧ್ಯಾನಿಸುಬೇಕು; ಫಲಗಳನ್ನು (ಸಂಪದಗಳನ್ನು) ಹೊಂದಬೇಕಾದರೆ" ಎಂದು ಹೇಳುತ್ತದೆ.

         ವಸು ಎನ್ನುವುದಕ್ಕೆ ಇತರೇ ಅರ್ಥಗಳೂ ಸಹ ಇವೆ, ಉದಾಹರಣೆಗೆ ಉತ್ಕೃಷ್ಟವಾದದ್ದು, ಒಳ್ಳೆಯದು, ಪರೋಪಕಾರಿ ಮೊದಲಾದವು. ವಸು ಎನ್ನುವುದು ಇಂದ್ರನು ಅಧಿನಾಯಕನಾಗಿರುವ ಎಂಟು ವೈದಿಕ ದೇವತೆಗಳನ್ನು ಸಹ ಉಲ್ಲೇಖಿಸುತ್ತದೆ. ವೈದಿಕ ದೇವತೆಗಳು ಪ್ರತಿಯೊಬ್ಬರೂ ಒಂದೊಂದು ಪ್ರಕೃತಿ ತತ್ವಗಳನ್ನು ಪ್ರತಿನಿಧಿಸುತ್ತವೆ. ಉದಾಹರಣೆಗೆ, ವರುಣನು ನೀರನ್ನು ಪ್ರತಿನಿಧಿಸಿ ಆಪ ಎಂದೂ ಕರೆಯಲ್ಪಟ್ಟಿದ್ದಾನೆ. ವಿಷ್ಣು ಪುರಾಣದ ಪ್ರಕಾರ ಎಂಟು ವಸುಗಳೆಂದರೆ, ೧) ಆಪ (ನೀರು), ೨) ಧ್ರುವ (ಧ್ರುವ ನಕ್ಷತ್ರ), ೩) ಸೋಮ (ಚಂದ್ರ), ೪) ಧವಾ ಅಥವಾ ಧರಾ (ಭೂಮಿ), ೫) ಅನಿಲ (ವಾಯು ಅಥವಾ ಗಾಳಿ), ೬) ಅನಲ (ಪಾವಕ ಅಥವಾ ಅಗ್ನಿ), ೭) ಪ್ರತ್ಯೂಷ (ಸೂರ್ಯೋದಯ) ಮತ್ತು ೮) ಪ್ರಭಾಸ (ಬೆಳಕು).

Vṛddhā वृद्धा (671)

೬೭೧. ವೃದ್ಧಾ

           ಶ್ವೇತಾಶ್ವತರ ಉಪನಿಷತ್ತು (೪.೩) ಹೀಗೆ ಹೇಳುತ್ತದೆ, "ನೀನು ಒಬ್ಬ ಸ್ತ್ರೀ, ನೀನು ಒಬ್ಬ ಪುರುಷ, ನೀನು ಒಬ್ಬ ಹುಡುಗ, ನೀನು ಒಬ್ಬ ಹುಡುಗಿ. ನೀನು ಕೋಲಿನ ಸಹಾಯದಿಂದ ನಡೆದಾಡುವ ಒಬ್ಬ ವಯಸ್ಸಾದ ವ್ಯಕ್ತಿ. ನೀನು ಎಲ್ಲಾ ರೀತಿಯ ಸಾಧ್ಯವಾದ ರೂಪಗಳಿಂದ ಜನ್ಮತಾಳುತ್ತೀಯ". ಇದು ನಾನು ಅದೇ (ಅಹಂ ಬ್ರಹ್ಮಾಸ್ಮಿ) ಎನ್ನುವುದಕ್ಕೆ ಒಂದು ಅತ್ಯುತ್ತಮವಾದ ವ್ಯಾಖ್ಯಾನ.

           ಈ ನಾಮವು ದೇವಿಯು ಅತ್ಯಂತ ವೃದ್ಧಳೆಂದು ಹೇಳುತ್ತದೆ, ಏಕೆಂದರೆ ಆಕೆಯು ಮೂಲಪ್ರಕೃತಿಃ (ನಾಮ ೩೯೭) ಮತ್ತು ಆದಿ ಶಕ್ತಿ (ನಾಮ ೬೧೫) ಆಗಿದ್ದಾಳೆ. ಅವಳು ಪ್ರಪ್ರಥಮವಾಗಿ ಜನಿಸಿರುವುದರಿಂದ ಆಕೆಯು ಅತ್ಯಂತ ವಯಸ್ಸಾದವಳು ಎಂದು ಹೇಳಲಾಗಿದೆ. ಶಿವನು ಆಕೆಯನ್ನು ಸೃಷ್ಟಿಸಿದನು ಮತ್ತು ಆಕೆಯು ಇತರರನ್ನು ಸೃಷ್ಟಿಸಿದಳು. ಆದರೆ ಆಕೆಯು ಎಲ್ಲಾ ನಶ್ವರ ಜೀವಿಗಳಿಗೆ ಅನ್ವಯಿಸುವ ಮುದಿತನಕ್ಕೆ ಅತೀತಳಾದವಳು. ಅವಳು ಎಲ್ಲಾ ಬಗೆಯ ರೂಪಾಂತರಗಳಿಗೆ ಅತೀತಳಾದವಳು. ಈ ನಾಮವು ದೇವಿಯ ಮೂಲ ಪ್ರಕೃತಿಯನ್ನು ತಿಳಿಸುತ್ತದೆ.

Brahmātmaikya-svarūpiṇī ब्रह्मात्मैक्य-स्वरूपिणी (672)

೬೭೨. ಬ್ರಹ್ಮಾತ್ಮೈಕ್ಯ-ಸ್ವರೂಪಿಣೀ

           ಈ ಸಹಸ್ರನಾಮದ ಸೌಂದರ್ಯವನ್ನು ನಾವು ನೋಡಬೇಕು. ವಾಗ್ದೇವಿಗಳು ಬ್ರಹ್ಮದ ಗುಣಲಕ್ಷಣಗಳನ್ನು ಚರ್ಚಿಸಿದ ಮೇಲೆ, ಈಗ ಆಕೆಯು ಬ್ರಹ್ಮ-ಆತ್ಮದ ಐಕ್ಯ ರೂಪದಲ್ಲಿದ್ದಾಳೆ ಎಂದು ಹೇಳುತ್ತಾರೆ. ’ಅಹಂ ಬ್ರಹ್ಮಾಸ್ಮಿ" ಅಂದರೆ ನಾನೇ ಬ್ರಹ್ಮವಾಗಿದ್ದೇನೆ ಎಂದು ಅರಿತುಕೊಳ್ಳುವುದು ಎಲ್ಲಾ ಆಧ್ಯಾತ್ಮಿಕ ಸಾಧನೆಗಳ ಅಂತ್ಯವಾಗಿದೆ.

            ಈ ನಾಮವು ಈ ವಿಧವಾಗಿ ಜೋಡಿಸಲ್ಪಟ್ಟಿದೆ. ಬ್ರಹ್ಮನ್+ಆತ್ಮನ್+ಐಕ್ಯ+ಸ್ವ+ರೂಪಿಣೀ. ಬ್ರಹ್ಮನ್ ಎಂದರೆ ಶಿವ, ಆತ್ಮನ್ ಎಂದರೆ ಜೀವ ಅಥವಾ ವ್ಯಕ್ತಿಗತ ಆತ್ಮ, ಐಕ್ಯ ಎಂದರೆ ಒಂದುಗೂಡಿದ, ಸ್ವ ಎಂದರೆ ಹಂಸ ಮಂತ್ರ ಮತ್ತು ರೂಪಿಣೀ ಎಂದರೆ ಆಕೆಯ ಸ್ವರೂಪ. ಇದರ ಒಟ್ಟಾರೆ ಅರ್ಥವು, ಆತ್ಮವು ಪರಮಾತ್ಮದೊಂದಿಗೆ ಒಂದುಗೂಡುವ (ಜೀವಿಯು ಪರಬ್ರಹ್ಮದೊಂದಿಗೆ ಸೇರುವ) ಪ್ರಕ್ರಿಯೆಯನ್ನು ಉಂಟುಮಾಡುವ ’ಹಂಸ ಮಂತ್ರ’ದ ಸಾರ ರೂಪದಲ್ಲಿ ದೇವಿಯು ಇದ್ದಾಳೆನ್ನುವುದೇ ಆಗಿದೆ. ಈ ಅಂಶವನ್ನು ಲಲಿತಾ ತ್ರಿಶತಿಯ ೧೭೩ನೇ ನಾಮವಾದ ’ಹಂಸ-ಮಂತ್ರ-ಅರ್ಥ-ರೂಪಿಣೀ’ ಅಂದರೆ ದೇವಿಯು ಹಂಸ ಮಂತ್ರದ ಸಾರವಾಗಿದ್ದಾಳೆ ಎನ್ನುವುದರಲ್ಲಿ ಉಲ್ಲೇಖಿಸಲಾಗಿದೆ, ಇಲ್ಲಿ ಹ ಎಂದರೆ ಶಕ್ತಿ ಮತ್ತು ಸ ಎಂದರೆ ಶಿವ. ಈ ನಾಮದ ಮಾನಸಿಕ ಪಠಣವು ಉಚ್ಛ್ವಾಸ, ನಿಶ್ವಾಸಗಳಿಗೆ ಸಂಭಂದಿಸಿದೆ. ಯಾವಾಗ ಒಬ್ಬನು ಈ ಮಂತ್ರವನ್ನು ದಿನಕ್ಕೆ ೨೧,೬೦೦ ಬಾರಿ ತನ್ನ ಉಚ್ಛ್ವಾಸ, ನಿಶ್ವಾಸಗಳೊಂದಿಗೆ ಸಮೀಕರಸುತ್ತಾನೆಯೋ (Synchronize) ಆಗ ಅವನು ಆತ್ಮನನ್ನು ಅರಿಯುತ್ತಾನೆ. ಒಂದು ಉಚ್ಛ್ವಾಸ ಮತ್ತು ನಿಶ್ವಾಸಕ್ಕೆ ಸಾಮಾನ್ಯ ಸಂದರ್ಭಗಳಲ್ಲಿ ನಾಲ್ಕು ಸೆಕೆಂಡುಗಳು ಹಿಡಿಯುತ್ತವೆ. ಒಂದು ನಿಮಿಷದಲ್ಲಿ ಇಂತಹ ೧೫ ಉಚ್ಛ್ವಾಸ, ನಿಶ್ವಾಸಗಳು ಇರುತ್ತವೆ. ಇದೇ ಲೆಕ್ಕದಲ್ಲಿ ಒಂದು ಘಂಟೆಗೆ ೯೦೦ ಉಚ್ಛ್ವಾಸ, ನಿಶ್ವಾಸಗಳು ಇರುತ್ತವಾದ್ದರಿಂದ ೨೪ಘಂಟೆಗಳಿಂದ ಕೂಡಿದ ಒಂದು ದಿನದಲ್ಲಿ ೯೦೦ x ೨೪ =೨೧,೬೦೦ ಉಚ್ಛ್ವಾಸ, ನಿಶ್ವಾಸಗಳು ಇರುತ್ತವೆ. ಯಾವಾಗ ಹಂಸ ಮಂತ್ರವನ್ನು ನಮ್ಮ ಉಸಿರಿನೊಂದಿಗೆ ಸಮೀಕರಿಸುತ್ತೇವೆಯೋ ಆಗ ಸಹಜವಾಗಿ ನಾವು ಆ ಮಂತ್ರವನ್ನು ದಿನವೊಂದಕ್ಕೆ ೨೧, ೬೦೦ ಬಾರಿ ಜಪಿಸುತ್ತೇವೆ. ಇದನ್ನು ಅಜಪ ಎನ್ನುತ್ತಾರೆ ಏಕೆಂದರೆ ಅಜಪವು ಸಹಜವಾಗಿ ಆಗುವಂತಹದ್ದು.

          ಈ ನಾಮವು ದೇವಿಯು ಬ್ರಹ್ಮವನ್ನು ಬ್ರಹ್ಮದ ರೂಪದಲ್ಲೇ ಪ್ರತಿನಿಧಿಸುವ ’ಅದು’ (ತತ್) ಆಗಿದ್ದಾಳೆ ಮತ್ತು ಆತ್ಮವನ್ನು (ತ್ವಮ್) ಪ್ರತಿನಿಧಿಸುವ ಬ್ರಹ್ಮದ ರೂಪದಲ್ಲಿಯೂ ಇದ್ದಾಳೆ ಹಾಗಾಗಿ ಈ ಸಮಸ್ತ ವಿಶ್ವದಲ್ಲಿರುವುದೆಲ್ಲವೂ ಬ್ರಹ್ಮವೇ ಆಗಿದೆ ಎನ್ನುವುದನ್ನು ಪ್ರತಿಪಾದಿಸುತ್ತಾಳೆ. ಇದುವೇ ಅದ್ವೈತ ಸಿದ್ಧಾಂತವಾಗಿದೆ.

Bṛhatī बृहती (673)

೬೭೩. ಬೃಹತೀ

           ದೇವಿಯು ಮಹತ್ತರವಾದವಳು. ಕಠೋಪನಿಷತ್ತು (೧.೨.೨೦) ಸಹ, "ಮಹತೋ ಮಹೀಯಾನ್" ಅಂದರೆ ದೊಡ್ಡದಕ್ಕಿಂತಲೂ ದೊಡ್ಡದಾದ ಎಂದು ಹೇಳುತ್ತದೆ.

           ಬೃಹತೀ ಎನ್ನುವುದು ೩೬ ಅಕ್ಷರಗಳುಳ್ಳ ಛಂದಸ್ಸನ್ನೂ ಸಹ ಸೂಚಿಸುತ್ತದೆ.

Brāhmaṇī ब्राह्मणी (674)

೬೭೪. ಬ್ರಾಹ್ಮಣೀ

           ಶಿವನು ಬ್ರಾಹ್ಮಣ ಜನಾಂಗಕ್ಕೆ ಸೇರಿದವನು, ಹಾಗಾಗಿ ಅವನು ಬ್ರಾಹ್ಮಣಾ ಎಂದು ಕರೆಯಲ್ಪಟ್ಟಿದ್ದರೆ ಅವನ ಪತ್ನಿಯು ಬ್ರಾಹ್ಮಣೀ ಆಗಿದ್ದಾಳೆ. ಇದು ಭೈರವ ಮತ್ತು ಭೈರವೀ ಇದ್ದಂತೆ. "ನಾನು ಬ್ರಾಹ್ಮಣನ ಯಶಸ್ಸನ್ನು ಪಡೆಯುವಂತಾಗಲಿ" ಎಂದು ಛಾಂದೋಗ್ಯ ಉಪನಿಷತ್ತು (೮.೧೪.೧) ಪ್ರಾರ್ಥಿಸುತ್ತದೆ. ಬ್ರಾಹ್ಮಣರೆಂದರೆ ಯಾರು ಬ್ರಾಹ್ಮಣಗಳಲ್ಲಿ (ವೈದಿಕ ಆಚರಣೆಗಳಲ್ಲಿ) ನುರಿತವರೋ ಅವರು ಅಥವಾ ಯಾರು ಬ್ರಹ್ಮದ ಕುರಿತಾದ ಜ್ಞಾನವನ್ನು ಹೊಂದಿದ್ದಾರೆಯೋ ಅವರನ್ನು ಬ್ರಾಹ್ಮಣರೆಂದು ಕರೆಯುತ್ತಾರೆ. ಹಿಂದೂ ಧರ್ಮದ ಆಧ್ಯಾತ್ಮಿಕ ಸಿದ್ಧಾಂತವನ್ನು ಜಾತಿಯಾಗಿ ಪರಿಗಣಿಸಿ ಅನೇಕ ಬಾರಿ ತಪ್ಪಾಗಿ ವ್ಯಾಖ್ಯಾನಿಸಲಾಗುತ್ತದೆ.

          ಭಗವದ್ಗೀತೆಯು (೧೮.೪೨) ಬ್ರಾಹ್ಮಣ ಎನ್ನುವುದರ ವಿವರಣೆಯನ್ನು ಕೊಡುತ್ತದೆ. "ಪ್ರಶಾಂತತೆ (ಪ್ರಾಪಂಚಿಕ ಸುಖವನ್ನು ಅರಸುವ ಇಂದ್ರಿಯಗಳಿಂದ ಮನಸ್ಸನ್ನು ನಿಗ್ರಹದಲ್ಲಿ ಇಟ್ಟುಕೊಳ್ಳುವುದು), ಬ್ರಹ್ಮಚರ್ಯ ಅಥವಾ ಇಂದ್ರಿಯ ನಿಗ್ರಹ (ಬಾಹ್ಯ ಪ್ರಪಂಚದ ಪ್ರಚೋದಕಗಳಿಗೆ ಸ್ಪಂದಿಸುವ ದ್ವಾರಗಳಾಗಿರುವ ಪಂಚೇಂದ್ರಿಯಗಳು ಮನೋ ಪ್ರದೇಶವನ್ನು ಹೊಕ್ಕು ಶಾಂತಿಯನ್ನು ಕದಡುತ್ತವೆಯಾದ್ದರಿಂದ ಅವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು), ತಪಸ್ಸು (ಪಂಚೇಂದ್ರಿಯಗಳನ್ನು ಉದ್ದೇಶ ಪೂರ್ವಕವಾಗಿ ನಿಯಂತ್ರಣದಲ್ಲಿಡುವುದು ಮತ್ತು ಮಾನವನ ಶಕ್ತಿಯ ವ್ಯಯವನ್ನು ಮಿತಗೊಳಿಸಿ ಅದನ್ನು ಕೆಟ್ಟ ಕಾರ್ಯಗಳಿಗೆ ಅನಾವಶ್ಯಕವಾಗಿ ಪೋಲಾಗುವುದನ್ನು ತಪ್ಪಿಸುವುದು. ಆ ಶಕ್ತಿಯನ್ನು ತನ್ನೊಳಗೇ ಹಿಡಿದಿಟ್ಟುಕೊಂಡು ಅದನ್ನು ಉನ್ನತ ಗುರಿ ಸಾಧನೆಗಾಗಿ ಉಪಯೋಗಿಸುವುದನ್ನೇ ತಪಸ್ಸು ಎನ್ನುತ್ತಾರೆ), ಶುದ್ಧತೆ (ಬಾಹ್ಯ ಮತ್ತು ಅಂತರಂಗ ಎರಡೂ ವಿಧವಾದ ಶುದ್ಧತೆ), ತಾಳ್ಮೆ (ತನಗೆ ವಿರದ್ಧವಾಗಿ ತಪ್ಪುಗಳನ್ನು ಮಾಡಿದ್ದರೂ ಸಹ ಅವನ್ನು ಕ್ಷಮಿಸಿ ಸಂಕಟಪಡದೇ ತಾಳ್ಮೆಯಿಂದ ಜೀವಿಸುವುದು), ಧರ್ಮ ಪರಿಪಾಲನೆ (ಈ ಗುಣವು ಒಬ್ಬ ವ್ಯಕ್ತಿಯನ್ನು ಎಲ್ಲಾ ವ್ಯವಹಾರಗಳಲ್ಲಿಯೂ ನೇರವಾಗಿ ನಡೆಯುವಂತೆ ಮಾಡುವುದಲ್ಲದೆ ಅವನನ್ನು ಜೀವನದಲ್ಲಿ ಭಯರಹಿತನನ್ನಾಗಿ ಮಾಡಿಸುತ್ತದೆ), ಜ್ಞಾನ (ಜೀವನದ ಅತ್ಯುನ್ನತ ಗುರಿ, ಪರಮಾತ್ಮನ ಗುಣದ ಬಗೆಗಿನ ತಿಳುವಳಿಕೆ ಅಥವಾ ಸಂಕ್ಷಿಪ್ತವಾಗಿ ಉಪನಿಷತ್ತಗಳು ಅಥವಾ ಎಲ್ಲಾ ವಿಷಯಗಳ ಬಗೆಗಿನ ಜ್ಞಾನ), ವಿವೇಕ (ಅರಿಗಿಸಿಕೊಂಡ ಜ್ಞಾನ ಮತ್ತು ಉಳಿಸಿಕೊಂಡದ್ದು ಇದು ಒಬ್ಬ ವ್ಯಕ್ತಿಗೆ ಆಂತರಿಕವಾದ ಅನುಭವವನ್ನು ಕೊಡುತ್ತದೆ ಅದರ ನಂತರ ಅವನು ತನ್ನ ಆಳವಾದ ಅನುಭವದ ಮಾರ್ಗದರ್ಶನದಿಂದ ಜೀವನವನ್ನು ನಡೆಸಲು ಆರಂಭಿಸುತ್ತಾನೆ. ಜ್ಞಾನವನ್ನು ಇನ್ನೊಬ್ಬರಿಗೆ ಕೊಡಮಾಡಬಹುದು ಆದರೆ ವಿವೇಕವೆನ್ನುವುದನ್ನು ವ್ಯಕ್ತಿಯೊಬ್ಬನು ತನ್ನಷ್ಟಕ್ಕೆ ತಾನೇ ಕಂಡುಕೊಳ್ಳಬೇಕು), ವಿಶ್ವಾಸ (ಎಲ್ಲಿಯವರೆಗೆ ಒಬ್ಬನಿಗೆ ತಾನು ಓದಿದ್ದು ಮತ್ತು ಜೀವನದಲ್ಲಿ ಕಂಡುಕೊಂಡದ್ದರ ಬಗೆಗೆ ನಂಬಿಕೆಯಿರುವುದಿಲ್ಲವೋ ಅವನ ಜೀವನವು ಉತ್ಸಾಹ ಮತ್ತು ಪರಿಪೂರ್ಣತೆಗಳಿಂದ ಕೂಡಿರುವುದಿಲ್ಲ)". ಇವು ಸ್ವಾಮಿ ಚಿನ್ಮಯಾನಂದರು "ದ ಹೋಲಿ ಗೀತಾ" (ಪವಿತ್ರ ಗೀತಾ) ಎನ್ನುವ ಆಂಗ್ಲ ಪುಸ್ತಕದಲ್ಲಿ ಹೇಳಿರುವ ಮಾತುಗಳು.

Brāhmī ब्राह्मी (675)

೬೭೫. ಬ್ರಾಹ್ಮೀ

          ಬ್ರಾಹ್ಮೀ ಎಂದರೆ ವಾಕ್ಕಿನ ಅಧಿದೇವತೆಯಾದ ಸರಸ್ವತೀ. ಬ್ರಾಹ್ಮೀ ಎನ್ನುವುದು ಬ್ರಹ್ಮನ ಸ್ತ್ರೀ ಲಿಂಗದ ರೂಪವಾಗಿದೆ. ಬ್ರಹ್ಮ-ಬ್ರಾಹ್ಮೀ, ಇದೂ ಸಹ ಭೈರವ ಮತ್ತು ಭೈರವೀ ಇದ್ದಂತೆ. ಬ್ರಾಹ್ಮೀ ದೇವಿಯು ಅಷ್ಠ ಮಾತೆಯರಲ್ಲಿ ಒಬ್ಬಳಾಗಿದ್ದಾಳೆ.

Brahmānandā ब्रह्मानन्दा (676)

೬೭೬. ಬ್ರಹ್ಮಾನಂದಾ

            ದೇವಿಯು ನಿರಂತರ ಆನಂದದ ರೂಪದಲ್ಲಿದ್ದಾಳೆ. ತೈತ್ತರೀಯ ಉಪನಿಷತ್ತು (೩.೬) ಹೀಗೆ ಹೇಳುತ್ತದೆ, "ಯಾರು ಆ ಅನಂದವನ್ನು ಬ್ರಹ್ಮವೆಂದು ಅರಿಯುತ್ತಾರೆಯೋ, ಏಕೆಂದರೆ ಈ ಆನಂದದಿಂದ ಎಲ್ಲಾ ಜೀವಿಗಳು ಜನಿಸುತ್ತಾರೆ. ಹೀಗೆ ಜನಿಸಿರುವುದರಿಂದ ಅವರಿಗೆ ಆನಂದವು ಸಹಾಯಕವಾಗಿದೆ ಮತ್ತು ಅವುಗಳು ವಿನಾಶವಾದಾಗ ಅವು ಮತ್ತೇ ಆ ಆನಂದಕ್ಕೆ ಹಿಂದಿರುಗಿ ಅದರೊಳಗೆ ಲಯವಾಗುತ್ತವೆ". ಈ ಆನಂದವನ್ನೇ ಜ್ಞಾನಮಯ ಕೋಶದಲ್ಲಿ ಅರಿತುಕೊಳ್ಳುತ್ತೇವೆ ಎಂದು ಆ ಉಪನಿಷತ್ತು ಹೇಳುತ್ತದೆ.

                                                                        ******

ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 668 - 676 http://www.manblunder.com/2010/04/lalitha-sahasranamam-668-676.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Thu, 11/07/2013 - 21:09

ಶ್ರೀಧರರೆ "೧೫೩. ಶ್ರೀ ಲಲಿತಾ ಸಹಸ್ರನಾಮದ ವಿವರಣೆ" ಯ ಕಾವ್ಯ ರೂಪ ಪರಿಷ್ಕರಣೆಗೆ ಸಿದ್ದ :-)
ಲಲಿತಾ ಸಹಸ್ರನಾಮ ೬೬೮ - ೬೭೬
_____________________________________
.
೬೬೮. ದ್ವೈತ-ವರ್ಜಿತಾ
ದ್ವೈತವಿಹ ಮನ ದೈತ್ಯ, ಆಗದು ಆತ್ಮಸಾಕ್ಷಾತ್ಕಾರ ಸನ್ನಿಹಿತ
ಜಗ ಜೀವಿಗಳೆಲ್ಲ ಲಲಿತೆಯ ಛಾಯೆ, ಬ್ರಹ್ಮವಿರೆ ದ್ವಂದ್ವರಹಿತ
ಜೀವಿ ಬ್ರಹ್ಮ ಬೇರೆ ಬೇರೆನ್ನುವ ಸಿದ್ದಾಂತ, ಪರಬ್ರಹ್ಮಕೆ ಹೊರತ
ದ್ವೈತದಿಂದ ಹೊರತಾದ ದೇವಿಯೆ ಪರಬ್ರಹ್ಮ ದ್ವೈತ ವರ್ಜಿತಾ ||
.
೬೬೯. ಅನ್ನದಾ
ಸೃಷ್ಟಿಸಿದ ಜೀವಿಗಳ ಸುಸ್ಥಿತಿಯಲಿಡೆ ವರದಾ, ಅನ್ನವಿಕ್ಕುತ ಅನ್ನದಾ
ತಿನ್ನಲಿರದಿರಲಾಹಾರ ಬದುಕಲೆಲ್ಲಿ ಜೀವ, ಅನ್ನದಿಂದುತ್ಪತ್ತಿ ಜೀವದ
ಆಹಾರ ಸುಸ್ಥಿತಿ, ಕೊನೆಗಾಹಾರದೆ ಲೀನ, ಅನ್ನ ಸರ್ವರುಜಾಪಹಾರಿ
ಸ್ಥಿತಿಕಾರಕ ಬ್ರಹ್ಮದ ಕ್ರಿಯೆಯ, ಆಹಾರವಿತ್ತು ನಡೆಸೊ ಲಲಿತಾ ಪರಿ ||
,
೬೭೦. ವಸುಧಾ
ಸಂಪದ ಫಲ ಪಡೆಯೆ, ಧ್ಯಾನಿಸಲಗತ್ಯ ಜನ್ಮವಿಲ್ಲದ ಆತ್ಮನ
ಸರ್ವಜೀವಿ ನಿವಸಿತ, ಸರ್ವರಾಹರ ಸೇವಿಸುತ ಫಲವೀವನ
ಅಮೂಲ್ಯ ಲೋಹಾದಿ ಅನರ್ಘ್ಯರತ್ನವೆಲ್ಲ ವಸುವಾಗಿ ಸಂಪದ
ಭೂಮಿರೂಪಿ ಗರ್ಭದೆಲ್ಲಾ ಸಂಪತ್ತಿಗೊಡತಿ ಲಲಿತಾ ವಸುಧಾ ||
.
ವಸುವಿಗದೆಷ್ಟೊ ಅರ್ಥ, ಉತ್ಕೃಷ್ಟ-ಸುಗುಣ-ಪರೋಪಕಾರಿ-ಅಷ್ಟವಸು
ಇಂದ್ರಾಧೀನದೆ ಅಷ್ಟ ವೈದಿಕ ದೇವತೆ ಪ್ರತಿನಿಧಿಸಿ ಪ್ರಕೃತಿತತ್ವ ವಸು
ವರುಣ ನೀರೆ ಅಪ-ನಕ್ಷತ್ರ ಧ್ರುವ-ಚಂದ್ರ ಸೋಮ-ಭೂಮಿ ಧರಾ ತತ್ವ
ವಾಯು ಅನಿಲ-ಅಗ್ನಿ ಪಾವಕ-ಅರುಣ ಪ್ರತ್ಯೂಷ-ಬೆಳಕೆ ಪ್ರಭಾಸ ಸತ್ವ ||
.
೬೭೧. ವೃದ್ಧಾ
ಮೂಲಪ್ರಕೃತಿಃ ಆದಿಶಕ್ತಿ ಹಿರಿಯಳ-ಹಿರಿಮೆ, ದೇವಿ ಲಲಿತಾ ವೃದ್ಧಾ
ಶಿವಸೃಷ್ಟಿಯ ಪ್ರಪ್ರಥಮ ಜನನ ದೇವಿ, ತಾನಾಗುತಾ ವಯೋವೃದ್ಧ
ನಶ್ವರ ಜೀವಿ ಮುದಿತನ ಕಾಡದ, ರೂಪಾಂತರಕತೀತ ಮೂಲಪ್ರಕೃತಿ
'ಅಹಂ ಬ್ರಹ್ಮಾಸ್ಮಿ' ತತ್ವ ದೇವಿ ಅಬಾಲ ವೃದ್ಧಾದಿಯಾಗೆಲ್ಲೆಡೆ ಪ್ರಸ್ತುತಿ ||
.
೬೭೨. ಬ್ರಹ್ಮಾತ್ಮೈಕ್ಯ-ಸ್ವರೂಪಿಣೀ
ಬ್ರಹ್ಮವೆ ಶಿವ ವ್ಯಕ್ತಿಗತಾತ್ಮವೆ ಜೀವ, ಐಕ್ಯಕೆ ಹಂಸ-ಮಂತ್ರರೂಪದೆ ದೇವಿ
ಹ-ಶಿವ ಸ-ಶಕ್ತಿ ಪ್ರತಿಕ್ಷಣ ಉಚ್ಛ್ವಾಸ-ನಿಶ್ವಾಸದೆ ನಾಮಪಠಣೆ ಅಜಪ ಸವಿ
ನಿಮಿಷದೆ ಹದಿನೈದು, ದಿನಕೆ ೨೧,೬೦೦ ಉಸಿರಲಿ ಸಮೀಕರಣ ಸರಣಿ
ಅತ್ಮಕಸಿ ತತ್ವಮಸೀ ಅದ್ವೈತದರಿವಾಗಿಸಿ ದೇವಿ ಬ್ರಹ್ಮಾತ್ಮೈಕ್ಯ-ಸ್ವರೂಪಿಣೀ ||
.
೬೭೩. ಬೃಹತೀ
ಚಿಕ್ಕದಕಿಂತಲು ಚಿಕ್ಕದಿರುವಂತೆ, ದೊಡ್ಡದಕಿಂತಲೂ ದೊಡ್ಡದು ಬೃಹತಿ
ಮಹತ್ತರವಿಹಳು ದೇವಿ, ಮೀರಿದ ಮಹತ್ತರ ಬೇರೆನಿಲ್ಲದ ಬ್ರಹ್ಮದಸ್ಥಿತಿ
ಮೂವತ್ತಾರಕ್ಷರ ಛಂದಸ್ಸಿನ ಬೃಹತಿಯ ಮಹತ್ತರ ರೂಪ ಲಲಿತೆಯಲಿ
ಬ್ರಹ್ಮದ ಮಹತ್ತನು ಸಾರುವ ಮಹತ್ತರ ಸಂದೇಶ ಬೃಹತೀ ಹೆಸರಿನಲಿ ||
.
೬೭೪. ಬ್ರಾಹ್ಮಣೀ
ಶಿವ ವೃತ್ತಿಯಲಿ ಬ್ರಾಹ್ಮಣ ಪ್ರವೃತ್ತಿ, ಶಕ್ತಿಯವನಾ ಸತಿ ಬ್ರಾಹ್ಮಣೀ
ಬ್ರಹ್ಮಜ್ಞಾನ ಹೊಂದುತ ವೈದಿಕಾಚರಣೆ ಪರಿಣಿತ ಬ್ರಾಹ್ಮಣತ್ವ ಗಣಿ
ಬ್ರಾಹ್ಮಣ ಯಶ ಪಡೆಯುವಂತಾಗಲೆ ಪ್ರಾರ್ಥನೆ ಹಾರೈಸಿ ಜೀವಾತ್ಮ
ಭೈರವ ಭೈರವೀ ಇದ್ದಂತೆ ಬ್ರಾಹ್ಮಣ ಬ್ರಾಹ್ಮಣೀ ಮುಕ್ತಿಯಾ ಮರ್ಮ ||
.
ಬ್ರಾಹ್ಮಣದ ಕುರಿತು
_______________________________________
.
ಇಂದ್ರಿಯ ಲೌಕಿಕಸುಖಾಕಾಂಕ್ಷಿ, ಮನನಿಗ್ರಹವಿಡೆ ಪ್ರಶಾಂತತೆ
ಬ್ರಹ್ಮಚರ್ಯ ಚಾಂಚಲ್ಯ ಮೆಟ್ಟಿ, ಪಂಚೇಂದ್ರಿಯ ನಿಯಂತ್ರಿಸುತ
ಪೋಲಾಗದೆ ಶಕ್ತಿ ಉನ್ನತಗುರಿಗೆಳೆಸಿ ತಪಸ್ಸು, ಒಳಹೊರಶುದ್ಧಿ
ತಪ್ಪುಗಳ ಕ್ಷಮಿಸಿ ಸಹನೆ ತಾಳ್ಮೆಯಲಿ ಜೀವಿಸೆ ಬ್ರಾಹ್ಮಣ ಬುದ್ಧಿ ||
.
ನೇರ ನಡೆ ನುಡಿ ವ್ಯಾಪಾರ ಭಯರಾಹಿತ್ಯತೆಯೆ ಧರ್ಮಪಾಲನೆ
ಜ್ಞಾನಮುಖೇನ ಮುಕ್ತಿಮಾರ್ಗ ಪರಮಾತ್ಮದರಿವಿನ ಗುರಿಗಮನೆ
ಅರಗುಳಿದಜ್ಞಾನ ಅಂತರಿಕ ಸ್ವಯಂ ಜೀವನಾನುಭವವೆ ವಿವೇಕ
ಜೀವನೋತ್ಸಾಹ ಪರಿಪೂರ್ಣತೆ, ನಂಬಿದ ತತ್ವಕಿರೆ ಜೀವನ ಸುಖ ||
.
೬೭೫. ಬ್ರಾಹ್ಮೀ
ಬ್ರಹ್ಮನ ಸ್ತ್ರೀಲಿಂಗ ರೂಪವೆ ಬ್ರಾಹ್ಮೀ ದೇವಿ ರೂಪ
ಮಾತಿನಧಿದೇವತೆಯೆ ಸರಸ್ವತೀ ಬ್ರಹ್ಮ ಸ್ವರೂಪ
ಭೈರವ-ಭೈರವೀ, ಬ್ರಾಹ್ಮಣ-ಬ್ರಾಹ್ಮಿಣೀ ಇದ್ದಂತೆ
ಬ್ರಹ್ಮ-ಬ್ರಾಹ್ಮೀ ದೇವಿ ಅಷ್ಟಮಾತೆಯಲೊಬ್ಬಳಂತೆ ||
.
೬೭೬. ಬ್ರಹ್ಮಾನಂದಾ
ಆನಂದವೇ ಬ್ರಹ್ಮ, ನಿರಂತರಾನಂದ ರೂಪದೆ ಲಲಿತಾಬ್ರಹ್ಮಾ
ಜ್ಞಾನಮಯ ಕೋಶದಿ ಅರಿಯುವುದೆಲ್ಲಾ, ಬ್ರಹ್ಮಾನಂದ ಸಮ
ಆನಂದದಿಂದೆಲೆ ಜೀವಿ ಜನನ, ವಿನಾಶಕೆ ಆನಂದದಲಿ ಲಯ
ಆನಂದವನೆ ಬ್ರಹ್ಮವೆಂದರಿತರೆ ದೇವಿ ಬ್ರಹ್ಮಾನಂದಾ ಅಕ್ಷಯ ||
.
ಧನ್ಯವಾದಗಳೊಂದಿಗೆ
 ನಾಗೇಶ ಮೈಸೂರು